ಯಾವ ರಾಗ ಪಲ್ಲವಿಯ ಪದದನುಪದದನುನಯ
ಸರ ಸ್ವರದಮೃತ ಮಾನಸದನುಲಾಪದದನಾಲಯ |

ಋತು ಋತುವಿನ ಕ್ರತುವು ನೀನು,
ಬಾಳಿನೆಳೆಯ ತಂಬೆಲರವು,
ಪಥ ಪಂಥ ಪಾಂಥದ ಪಥವು ನೀನು,
ಬೆಳಗು ಬೆಳಕಿನ ಕಿರಣವು.

ನನ್ನ ಜಲಧಿಯ ತುಂಬು ಬಿಂಬವು
ನಿನ್ನ ಚಿಲುಮೆ ಬಿಂದು ಕಸವರ,
ಒಲವೊಲವಗಣ್ಣಿನ ಕನಸಬಿಂಬವು
ನಿನ್ನ ಸುಮದಧರದ ಕೇಸರ,

ನನ್ನ ಮೆತ್ತೆಯ ಮೃದು ಮೋದ ತಲ್ಪವು
ನಿನ್ನ ಕುಂಭದೆದೆಯ ತುಂಬುರ,
ಪ್ರಾಣ-ಹರಣದ ಭಾವ ಕಲ್ಪವು
ನಿನ್ನ ರತ್ನ ಗರ್ಭದ ಹಂದರ,

ಕ್ಷೀರ ದಧಿಘೃತ ಮಧು ಸವಿಯು ನೀನು
ಇಂದ್ರಿಯೊಳಿಂದ್ರಿಯದಾನಂದವು,
ಅನಂತ ತಾನನಂತದೈಸಿರಿ
ಋಷಿಗಡಣದಮರರೊಲಿಸಿದ ಶಕುತಿಯು ||
*****

ಗಿರಿಜಾಪತಿ ಎಂ ಎನ್

ಎನ್ ಎಂ ಗಿರಿಜಾಪತಿಯವರು ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ರಾಮಸಾಗರ ಗ್ರಾಮದವರು.ತಂದೆ ದಿ|| ಎನ್ ಎಂ ಸೋಮಶೇಖರಸ್ವಾಮಿ, ತಾಯಿ ಶ್ರೀಮತಿ ಎನ್ ಎಂ ವಿಶಾಲಾಕ್ಷಮ್ಮ,.ಗಿರಿಜಾಪತಿಯವರು ಎಂ. ಎ., ಬಿ. ಇಡಿ., ಪದವಿ ಪೂರೈಸಿದ್ದು, ಪಿ. ಎಚ್‌ಡಿ., ವ್ಯಾಸಂಗ ಮಾಡುತ್ತಿದ್ದಾರೆ.

ಮುಂಬೈನ ಬಿ.ಎ.ಎ.ಆರ್‍.ಸಿ. ಯವರಿಂದ ವಿಜ್ಞಾನ ಪ್ರಬಂಧಕ್ಕೆ ಗೌರವ ಪುರಸ್ಕಾರ. ‘ಮೃತ್ಯು ಸಂಝೀವಿನಿ’ ನಾಟಕ ಹಸ್ತಪ್ರತಿಗೆ ಬೆಂಗಳೂರಿನ ವಿಶ್ವೇಶ್ವರಯ್ಯ ಟೆಕ್ನಿಕಲ್ ಅಂಡ್ ಇಂಡಸ್ಟ್ರಿಯಲ್ ಮ್ಯೂಸಿಯಂನಿಂದ ಗೌರವ ಪುರಸ್ಕಾರ.ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನಿಂದ ದತ್ತಿ ಪುರಸ್ಕಾರ, ಲಲಿತ ಪ್ರಬಂಧಕ್ಕೆ ಸಂಕ್ರಮಣ ಸಾಹಿತ್ಯ ಗೌರವ ದೊರೆತಿವೆ.

ಕೃತಿಗಳ ವಿವರ:

ಕವನ ಸಂಕಲನ:
ತಾಯಿ ಭಾರತಿ ಸುತೆ ಕನ್ನಡತಿ
ಭಾವನದಿಯ ದಂಡೆಯ ಮೇಲೆ...
ಆಮ್ಲ ಮಳೆ

ಕಥಾ ಸಂಕಲನ:
ನಾವು ನಮ್ಮವರು

ಮಕ್ಕಳ ನಾಟಕ:
ಅಪಾಯದ ಗಂಡೆ

ಸದ್ಭೋದಾಮೃತ ಶತಕ
ಕನ್ನಡ ವ್ಯಾಕರಣ ಮತ್ತು ಭಾಷಾ ರಚನೆ
ವಚನ ರತ್ನತ್ರಯರು
ಕಾವ್ಯ ಪರಿಕರಗಳು
ವಚನ ಚಿಂತಾಮಣಿ
ಕನ್ನಡ ಛಂದಸ್ಸಂಪದ
ಕನ್ನಡ ಛಂದೋದರ್ಪಣ
ಕನ್ನಡ ಭಾಷಾಲೋಕ
ಅಮೃತ ತರಂಗಿಣಿ
ಬೆಳಕಿನ ಹೆಜ್ಜೆಗಳು
ಪ್ರಾಚೀನ ಭಾರತೀಯ ಕಥಾ ಸಾಹಿತ್ಯ
ನಮ್ಮೂರ ಹೋಳಿ ಹಾಡು
*****
ಗಿರಿಜಾಪತಿ ಎಂ ಎನ್

Latest posts by ಗಿರಿಜಾಪತಿ ಎಂ ಎನ್ (see all)