ಪುಂಸ್ತ್ರೀ –  ೧೩

ಪುಂಸ್ತ್ರೀ – ೧೩

ಸುಖದ ಕ್ಷಣವದು ಎಷ್ಟು ನಶ್ವರ?

ಗಿರಿನಾಯಕನ ಮನೆಯ ಮಹಡಿಯಲ್ಲೊಂದು ವಿಶಾಲ ಕೊಠಡಿಯಿತ್ತು. ಅದನ್ನೇ ಅಂಬೆಗೆಂದು ಬಿಟ್ಟುಕೊಡಲಾಯಿತು. ಅದರಲ್ಲಿ ಎದುರು ಬದುರಾದ ಎರಡು ದೊಡ್ಡ ಕಿಟಕಿಗಳಿದ್ದವು. ಪೂರ್ವದ ಕಡೆಯ ಕಿಟಕಿಯಿಂದ ನೋಡಿದರೆ ದಟ್ಟವಾದ ಕಾಡು, ಪೊದೆ, ಗಿಡ, ಬಿಳಲುಗಳಿಂದ ಹಿಡಿದು ಮುಗಿಲನ್ನು ಚುಂಬಿಸುವಷ್ಟೆತ್ತರದ ನಾನಾ ಬಗೆಯ ಮರಗಳು. ಯಾರೂ ನೆಟ್ಟದ್ದಲ್ಲ, ನೀರೆರೆದು ಬೆಳೆಸಿದ್ದಲ್ಲ. ಗಿಡ, ಮರಗಳಲ್ಲೆಲ್ಲಾ ಪಕ್ಷಿಗಳು ಮತ್ತು ಅಳಿಲುಗಳು. ಪಕ್ಷಿಗಳ ಕಲರವದೊಡನೆ ಅಳಿಲುಗಳ ಓಡಾಟ. ಆ ಬಿಳಲುಗಳನ್ನು ನೋಡಿದಾಗ ಅಳಿಲುಗಳಂತೆ ಅವುಗಳಲ್ಲಿ ಓಡಾಡಲು ಸಾಧ್ಯವಾಗಬೇಕಿತ್ತು ಎಂಬ ಹಳಹಳಿಕೆ ಅವಳಲ್ಲಿ ಮೂಡಿತು. ಪಶ್ಚಿಮದ ಕಡೆಯ ಕಿಟಕಿಯಿಂದ ನೋಡಿದರೆ ವಿಶಾಲ ಸರೋವರ. ಅದರಲ್ಲಿ ನೀರಕ್ಕಿಗಳು ಆಟವಾಡುತ್ತಿದ್ದವು. ಬಾತುಗಳು ಮತ್ತು ಹಂಸಗಳು ಈಜುತ್ತಿದ್ದವು. ಕೊಕ್ಕರೆಗಳು ಅಲ್ಲಲ್ಲಿ ಬಕಧ್ಯಾನದಲ್ಲಿ ನಿರತವಾಗಿದ್ದವು. ಮಿಂಚುಳ್ಳಿಗಳು ಪುಳಕ್ಕೆಂದು ಕೊಕ್ಕು ಕಂತಿಸಿ ಮೀನಿನ ಸಮೇತ ಮೇಲಕ್ಕೆ ಹಾರಿ ನೀಲಾಕಾಶದಲ್ಲಿ ಲೀನವಾಗಿ ಬಿಡುತ್ತಿದ್ದವು. ಎಷ್ಟು ಚೆನ್ನಾಗಿದೆ ಇದು. ಕಾಶಿಯ ಉಪವನದಲ್ಲಿರುವುದಕ್ಕಿಂತಲೂ ದೊಡ್ಡದಿದೆ. ಸರೋವರ ನೋಡುವಾಗೆಲ್ಲಾ ಅವಳಲ್ಲಿ ಹೊಸ ಉತ್ಸಾಹ ಪುಟಿಯುತ್ತಿತ್ತು. ನಾಳೆ ಅದರಲ್ಲಿ ಮನದಣಿಯೆ ಈಜಬೇಕೆಂದು ಅಂಬೆ ಲೆಕ್ಕ ಹಾಕಿಕೊಂಡಳು.

ಕೆಳಗಿನಿಂದ ‘ರಾಜಕುಮಾರೀ’ ಎಂಬ ಕರೆ ಕೇಳಿ ಅಂಬೆ ಕೆಳಗಿಳಿದು ಬಂದಳು. ಗಿರಿನಾಯಕ ನಾನಾ ಬಗೆಯ ನಾರುಡುಗೆಗಳನ್ನು ಹಿಡಿದುಕೊಂಡು ನಿಂತಿದ್ದ. ಹತ್ತಿಯಿಂದ ತಯಾರಿಸಿದ ಕೆಲವು ಬಟ್ಟೆಗಳಿದ್ದವು. ನೀವು ಉಟ್ಟ ಬಟ್ಟೆಯಲ್ಲೇ ಎಷ್ಟು ದಿನ ಪ್ರಯಾಣ ಮಾಡಿದ್ದೀರೊ? ಈಗ ಬದಲಾಯಿಸಿಕೊಳ್ಳಿ. ನಿಮಗೆ ನಾವು ತಯಾರಿಸಿದ ಬಟ್ಟೆಗಳು ಒಗ್ಗುತ್ತವೆಯೋ ಇಲ್ಲವೊ? ಬೇರೆ ಬೇರೆ ಅಳತೆಯ ಮೇಲುಡುಗೆ, ಕೆಳ ಉಡುಗೆ ಮತ್ತು ಒಳ ಉಡುಗೆಗಳು ಇಲ್ಲಿವೆ. ಇವೆಲ್ಲಾ ಹೊಚ್ಚ ಹೊಸವು. ಇಲ್ಲಿ ನಾವು ಸಿದ್ಧಪಡಿಸಿದ ಬಟ್ಟೆಗಳನ್ನು ನಗರದಲ್ಲಿ ಮಾರಾಟ ಮಾಡುತ್ತೇವೆ. ಸ್ವಲ್ಪ ದೂರದಲ್ಲಿ ಋಷ್ಯಾಶ್ರಮವೊಂದಿದೆ. ಅವರು ನಮ್ಮಮಿಂದಲೇ ಬಟ್ಟೆ ಕೊಳ್ಳುತ್ತಾರೆ. ಯುವಕಯುವತಿಯರಿಗೆಂದು ಆಕರ್ಷಕ ವಿನ್ಯಾಸದ ಬಟ್ಟೆಗಳನ್ನು ಸಿದ್ಧಪಡಿಸಬೇಕಾಗುತ್ತದೆ. ಅಂಥವುಗಳನ್ನು ನಿಮಗಾಗಿ ತಂದಿದ್ದೇನೆ. ಎಷ್ಟು ಬೇಕಾದರೂ ಆರಿಸಿಕೊಳ್ಳಿ”.

ಕಾಶಿಯಿಂದ ತಂಗಿಯರೊಡನೆ ಅವಳು ಹೊರಟಾಗ ಬಟ್ಟೆ ಬರೆಗಳ ಮೂರು ದೊಡ್ಡ ಪೆಟ್ಟಿಗೆಗಳನ್ನು ಭೀಷ್ಮಾಚಾರ್ಯರ ರಥದಲ್ಲಿ ಅಪ್ಪ ಇರಿಸಿದ್ದ. ಅವೀಗ ಹಸ್ತಿನಾವತಿಯಲ್ಲಿವೆ. ಪುರೋಹಿತ ದೇವೀಚರಣದಾಸನೊಡನೆ ಸೌಭಕ್ಕೆ ಹೊರಟಾಗ ಸಾಲ್ವಭೂಪತಿಯ ಮಧುರ ನೆನಪಲ್ಲಿ ಪೆಟ್ಟಿಗೆ ಮರೆತೇ ಹೋಗಿತ್ತು. ಉಟ್ಟ ಉಡುಗೆಯಲ್ಲೇ ಅವಳು ಹೊರಟು ಬಿಟ್ಟಿದ್ದಳು. ಸ್ನಾನವಿಲ್ಲದೆ, ಬಟ್ಟೆ ಬದಲಾಯಿಸದೆ ಮೈಯೆಲ್ಲಾ ತುರಿಸತೊಡಗಿ ಅವಳ ಬೆವರ ವಾಸನೆ ಅವಳಿಗೇ ಅಸಹ್ಯವಾಗತೊಡಗಿತ್ತು. ಬೇರೆ ಬಟ್ಟೆಗೇನು ಮಾಡುವುದು ಎಂದು ಅವಳು ಯೋಚಿಸುತ್ತಿರುವಾಗ ಗಿರಿನಾಯಕ ತಾನಾಗಿಯೇ ಬಟ್ಟೆಗಳನ್ನು ತಂದುದನ್ನು ನೋಡಿ ಅವಳ ಹೃದಯ ತುಂಬಿ ಬಂತು. ಬಟ್ಟೆ ಬದಲಾಯಿಸುವುದಕ್ಕೆ ಮೊದಲು ಒಂದು ಭರ್ಜರಿ ಅಭ್ಯಂಜನ ಮಾಡಬೇಕು. ಇಷ್ಟು ಹೊತ್ತಿಗೆ ಸರೋವರದಲ್ಲಿ ಈಜುವಂತಿಲ್ಲ.

ಅವಳ ಮನಸ್ಸನ್ನು ಓದಿಕೊಂಡವನಂತೆ ಗಿರಿನಾಯಕನೆಂದ: “ನಿಮ್ಮ ನಿತ್ಯಾಹ್ನಿಕಗಳಿಗೆ ಮತ್ತು ಮಜ್ಜನಕ್ಕೆ ನಮ್ಮಲ್ಲಿ ಪ್ರತ್ಯೇಕ ವ್ಯವಸ್ಥೆಯಿದೆ. ನಾವು ಎಲ್ಲವನ್ನೂ ಪ್ರಕೃತಿಯಲ್ಲೇ ಮುಗಿಸುತ್ತೇವೆ. ಅಲ್ಲಲ್ಲಿ ನೀರ ಝುರಿ, ತೊರೆ, ತೋಡುಗಳಿರುವುದರಿಂದ ಸಮಸ್ಯೆಯೇನಿಲ್ಲ. ಈಜಬೇಕೆಂದರೆ ಸರೋವರವಿದೆ. ಒಮ್ಮೊಮ್ಮೆ ಸರೋವರದಲ್ಲಿ ಈಜು ಪಂದ್ಯ ನಡೆಸುತ್ತೇವೆ. ನಮ್ಮ ಮನೆಗೆ ಗಣ್ಯ ಅತಿಥಿಗಳು ಬರುತ್ತಿರುತ್ತಾರೆ. ಅವರನ್ನು ಹಾಗೆಲ್ಲಾ ಸ್ನಾನಕ್ಕೆ ಕಳುಹಿಸಲಾಗುವುದಿಲ್ಲವೆಂದು ಈ ಮನೆಯ ಹಿಂಬದಿಯಲ್ಲಿ ದೊಡ್ಡದಾದ ಮಜ್ಜನ ಗೃಹ ಮತ್ತು ನಿತ್ಯಾಹ್ನಿಕ ಗೃಹ ನಿರ್ಮಿಸಿದ್ದೇವೆ. ನಗರದಿಂದ ಬರುವ ಆಡಳಿತಾಧಿಕಾರಿಗಳು ಮತ್ತು ಅರಣ್ಯಾಧಿಕಾರಿಗಳು ಇಲ್ಲಿ ಉಳಿದುಕೊಳ್ಳುತ್ತಾರೆ. ಆದರೆ ಅವನ್ನು ಅವರೂ ಬಳಸುವುದಿಲ್ಲ. ನಗರದ ಇಕ್ಕಟ್ಟಿನಿಂದ ಬೇಸತ್ತಿರುವ ಅವರು ಎಲ್ಲವನ್ನೂ ಹೊರಗೇ ಮುಗಿಸುತ್ತಾರೆ. ನಿಮಗೆ ಆಶ್ಚರ್ಯವಾಗಬಹುದು. ಹಾಗೆ ಬಂದವರು ಮನೆಯ ಜಗಲಿಯಲ್ಲೇ ಮಲಗುತ್ತಾರೆ. ನಮ್ಮ ನಿತ್ಯಾಹ್ನಿಕ ಮತ್ತು ಮಜ್ಜನಗೃಹ ಇಂದು ನಿಮ್ಮಿಂದ ಸಾರ್ಥಕತೆ ಪಡೆದುಕೊಳ್ಳುತ್ತಿದೆ.”

ಗಿರಿನಾಯಕನ ಮಾತಿಗೆ ಅವಳು ನಕ್ಕಳು. ತಾನು ಈವರೆಗೆ ಭೇಟಿಯಾದ ಗಂಡುಗಳಿಗಿಂತ ಇವನು ತೀರಾ ವಿಭಿನ್ನನಾಗಿದ್ದಾನೆಂದು ಅವಳಂದುಕೊಂಡಳು. ಯಾರಿಗೆ ಯಾವಾಗ ಏನು ಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಲು ಇವನಿಗೆ ಸಾಧ್ಯವಾಗುತ್ತಿದೆ. ಇವನಂಥವರು ನಿಜಕ್ಕೂ ನಾಯಕರಾಗಬೇಕು. ಪುಟ್ಟ ಗಿರಿಗಲ್ಲ; ದೇಶಕ್ಕೆ. ಅಥವಾ ದೇಶ ಆಳುವವರೆಲ್ಲಾ ಇವನ ಹಾಗಿರಬೇಕು. ಮೆಚ್ಚುಗೆಯ ಸ್ವರದಲ್ಲಿ ಅಂಬೆಯೆಂದಳು.

ಗಿರಿನಾಯಕಾ, ನೀನು ಬಟ್ಟೆ ಕೊಟ್ಟದ್ದು ಒಳ್ಳೆಯದಾಯ್ತು. ಆದರೆ ಆ ವಿಶಾಲ ಮಹಡಿ ಯಲ್ಲಿ ಒಬ್ಬಳೇ ಇರಲು ಇಷ್ಟವಾಗುತ್ತಿಲ್ಲ. ಒಬ್ಬಳು ಹುಡುಗಿಯನ್ನೋ, ಯುವತಿಯನ್ನೋ ನನಗೆ ಸಂಗಾತಿಯಾಗಿ ಕೊಡುತ್ತೀಯಾ? ಒಂಟಿತನ ನೀಗುತ್ತದೆ. ನಿನ್ನ ಭಾಷೆಯನ್ನೂ ಕಲಿಯಬಹುದೆಂದೆನ್ನಿಸುತ್ತದೆ. ಅರಮನೆಯದಕ್ಕಿಂತ ಭಿನ್ನವಾದ ಬದುಕನ್ನು ಒಂದೆರಡು ದಿನ ಅನುಭವಿಸಲು ಮನಸ್ಸು ಹಾತೊರೆಯುತ್ತಿದೆ. ಮುಂದಿನದನ್ನು ಮತ್ತೆ ಯೋಚಿಸಿದರಾಯ್ತು ಅಂದುಕೊಂಡಿದ್ದೇನೆ”.

ಗಿರಿನಾಯಕ ಕಳುಹಿಸಿದ ಕನ್ಯೆಯ ಹೆಸರು ಸೇವಂತಿ. ನೋಡಲು ಲಕ್ಷಣವಾಗಿದ್ದಳು. ಅನಾಫ್ರಾತ ವನಪುಷ್ಪ! ಹದಿನಾರೋ, ಹದಿನೇಳೊ? ಸಮೃದ್ಧವಾಗಿ ಅರಳಿಕೊಂಡವಳು. ಮುಖದಲ್ಲಿ ಮಾಸದ ಮುಗುಳ್ನಗು. ಗಿರಿನಾಯಕನ ಅಮ್ಮನಲ್ಲಿರುವಷ್ಟಲ್ಲದಿದ್ದರೂ ಕಿವಿ ಮತ್ತು ಎದೆಯಿರುವುದೇ ಆಭರಣಗಳಿಂದ ಅಲಂಕರಿಸಿಕೊಳ್ಳುವುದಕ್ಕೆಂದು ತಿಳಿದುಕೊಂಡವಳು. ಅಂಬೆಯ ಭಾಷೆ ಸೇವಂತಿಗೆ ಅರ್ಥವಾಗುತ್ತಿರಲಿಲ್ಲ. ಮುಗುಳ್ನಗೆಯೊಂದೇ ಅವಳ ಭಾಷೆ. ತುಂಬಾ ಎಂದರೆ ತುಂಬಾ ಚೆಲುವೆ. ಇವಳು ಯಾವನಾದರೊಬ್ಬ ಕ್ಷತ್ರಿಯನ ಕಣ್ಣಿಗೆ ಬಿದ್ದರೆ ಎಳಕೊಂಡು ಹೋಗಿ ಪಲ್ಲಂಗಕ್ಕೇರಿಸಿ ದಾಸಿಯನ್ನಾಗಿ ಮಾಡಿಬಿಡುತ್ತಾನೆ. ಇಲ್ಲದಿದ್ದರೆ ಇದೇ ಗಿರಿಯ ಯಾವನೋ ಒಬ್ಬ ಗುಗ್ಗುವಿನ ಮಡದಿಯಾಗಿ ಹೆತ್ತೂ ಹೆತ್ತೂ, ಹುಟ್ಟಿದಲ್ಲಿಯೇ ಸತ್ತು ಹೋಗುತ್ತಾಳೆ!

ಅಂಬೆ ಅವಳನ್ನೇ ದಿಟ್ಟಿಸಿ ನೋಡುತ್ತಿರುವಾಗ ಗಿರಿನಾಯಕನೆಂದ: “ಇವಳು ನನ್ನ ಹೆಂಡತಿ ಮಲ್ಲಿಗೆಯ ತಂಗಿ. ನಾಲ್ಕು ವರ್ಷ ಮಡದಿಯ ಸುಖ ಅನುಭವಿಸಿದವನು ನಾನು. ನಾವು ಒಟ್ಟಾಗಿ ಸುತ್ತದ ಕಾಡು, ಏರದ ಗುಡ್ಡ ಬೆಟ್ಟ ಸುತ್ತಮುತ್ತ ಎಲ್ಲೂ ಇಲ್ಲ. ಈ ಸರೋವರದಲ್ಲಿ ನಾವು ಅದೆಷ್ಟು ಸಲ ಈಜಿದ್ದೆವೊ? ಅವಳು ನನಗಿಂತಲೂ ಹೆಚ್ಚು ಹೊತ್ತು ನೀರಲ್ಲಿ ಮುಳುಗಬಲ್ಲವಳಾಗಿದ್ದಳು. ಒಂದು ದಿನ ಈ ಸೇವಂತಿ ಮತ್ತು ಇನ್ನೊಬ್ಬಳೊಡನೆ ಈಜುತ್ತಿದ್ದವಳು ಇದ್ದಕ್ಕಿದ್ದಂತೆ ಮುಳುಗಿಬಿಟ್ಟಳು. ಆಮೇಲೆ ಒಮ್ಮೆಲೇ ನೀರಿನಿಂದ ತಲೆಯೆತ್ತಿ ನನ್ನ ಕಾಲನ್ನು ಮೊಸಳೆ ಕಚ್ಚಿಕೊಂಡಿದೆ. ಬೇಗೆ ಬಿಡಿಸಿ’ ಎಂದು ಆರ್ತನಾದ ಮಾಡಿದಳು. ಅವಳೊಡನೆ ಈಜುತ್ತಿದ್ದವರು ಪ್ರಾಣಭಯದಿಂದ ಓಡಿ ಬಂದರು. ನಾನು ನಗರಕ್ಕೆ ಹೋಗಿದ್ದೆ. ಇಲ್ಲಿದ್ದ ತರುಣರು ಆಯುಧಧಾರಿಗಳಾಗಿ ನೀರಲ್ಲಿ ಮೊಸಳೆಯ ಬೆನ್ನಟ್ಟಿದರು. ಮೊಸಳೆಯನ್ನು ಕೊಂದು ಅವಳನ್ನು ಬಿಡಿಸಿ ತಂದರು. ಅಷ್ಟು ಹೊತ್ತಿಗೆ ಅವಳ ಶ್ವಾಸಕೋಶಗಳಲ್ಲಿ ನೀರು ತುಂಬಿ ಹೋಗಿದ್ದರಿಂದ ಅವಳನ್ನು ಉಳಿಸಿ ಕೊಳ್ಳಲಾಗಲಿಲ್ಲ. ಸರೋವರದಲ್ಲಿ ಆವರೆಗೆ ಮೊಸಳೆಯನ್ನು ನಾನು ಕಂಡವನಲ್ಲ. ಈಗಲೂ ಸರೋವರದಲ್ಲಿ ಮೊಸಳೆಗಳಿಲ್ಲ. ಅಂದು ಅದೆಲ್ಲಿಂದ ದಾರಿ ತಪ್ಪಿ ಬಂದು ಸೇರಿಕೊಂಡಿತೋ ಅವಳ ಜೀವ ತಿನ್ನಲು. ಅವಳ ನೆನಪಲ್ಲೇ ದಿನಗಳೆಯುತ್ತಿದ್ದೇನೆ. ಸೇವಂತಿಯನ್ನು ಮದುವೆ ಮಾಡಿಕೋ ಎಂದು ಇವಳಪ್ಪ ಅಮ್ಮ ಒತ್ತಾಯಿಸುತ್ತಿರುತ್ತಾರೆ. ನಾನು ಎತ್ತಿ ಆಡಿಸಿದವಳು ಇವಳು. ಇವಳನ್ನು ಇವಳಕ್ಕನ ಸ್ಥಾನದಲ್ಲಿ ಕಲ್ಪಿಸಿಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನಿಜ ಹೇಳಬೇಕೆಂದರೆ ಮದುವೆಯಾಗುವುದನ್ನು ಮತ್ತು ಮಕ್ಕಳನ್ನು ಪಡೆಯುವುದನ್ನು ಸಾಧನೆಗಳೆಂದೋ, ಅನಿವಾರ್ಯತೆಗಳೆಂದೋ ನಾನು ಭಾವಿಸುವುದಿಲ್ಲ. ಕಾಡುವ ಅವಳ ನೆನಪನ್ನು ಬಿಟ್ಟರೆ ನಾನು ಸುಖಿಯಾಗಿಯೇ ಇದ್ದೇನೆ”.

ಅಂಬೆಗೆ ಗಿರಿನಾಯಕನ ಜೀವನದಲ್ಲಿ ಅಂಥದ್ದೊಂದು ನೋವಿನ ಕತೆಯಿರಬಹುದೆಂಬ ಊಹೆಯೂ ಇರಲಿಲ್ಲ. ಆಗಿನಿಂದ ಅವನ ಮುಖದಲ್ಲಿ ನಗುವನ್ನೇ ಅವಳು ಕಂಡಿದ್ದಳು. ಇಂಥದ್ದೊಂದು ವಿಷಾದವನ್ನು ಹಂಚುವಾಗ ಅವನ ಕಣ್ಣು ಹನಿಗೂಡಿರಲಿಲ್ಲ. ಕಂಠ ಗದ್ಗದಿತವಾಗಿರಲಿಲ್ಲ. ಕಾಶಿಯಲ್ಲಿ ಅಪ್ಪನ ಆಸ್ಥಾನಕ್ಕೆ ಬಂದು ಸಾಷ್ಟಾಂಗ ವಂದಿಸಿ ಗೋಳಿನ ಕತೆ ಹೇಳುವವರನ್ನು ಅವಳು ಸಾಕಷ್ಟು ಕಂಡವಳು. ಲೋಕದ ಸಮಸ್ತ ಸಂಕಷ್ಟಗಳು ತಮಗೆ ಮಾತ್ರ ಬಂದೊದಗಿವೆಯೆಂದು ಭಾವಿಸಿದ ಮಂದಿಗಳವರು. ಹೆಚ್ಚಿನವರಿಗೆ ಸಹಜ ಸ್ವರದಲ್ಲಿ ತಮ್ಮ ನೋವನ್ನು ತೋಡಿಕೊಳ್ಳಲು ಬರುತ್ತಿರಲಿಲ್ಲ. ಮಂದ್ರದಿಂದ ತೊಡಗಿ ತಾರಸ್ಥಾಯಿಯವರೆಗೆ ವಿವಿಧ ಸ್ತರಗಳಲ್ಲಿ ಆಕ್ರಂದನ ಹೊರಡಿಸಿ ತಿರಸ್ಕಾರ ಮೂಡಿಸುತ್ತಿದ್ದವರೆಲ್ಲಿ? ಇವನೆಲ್ಲಿ? ಇವನ ಮುಖದಲ್ಲಿ ಈಗಲೂ ನಗುವಿದೆ. ಇವಳು, ಯೌವ್ವನಕ್ಕೇ ಜೀವ ಬಂದು ಓಡಾಡುವಂತಿರುವ ಈ ಸೇವಂತಿ, ಇವಳೂ ನಗುತ್ತಿದ್ದಾಳೆ. ಇವಳು ಈ ಗಿರಿನಾಯಕನನ್ನು ಮದುವೆಯಾದರೆ, ಇವಳ ಮುಖದ ನಗು ಹೀಗೆ, ಹೀಗೆಯೇ ಉಳಿಯಬಹುದೆ? ಉಳಿಯಲೂಬಹುದು. ಇವರು ಬದುಕು ಹೀಗೆಯೇ ಇರಬೇಕೆಂದು ಬಯಸುವವರಲ್ಲ. ಬಂದ ಹಾಗೆ ಸ್ವೀಕರಿಸುವವರು. ಅದಕ್ಕೇ ಇವರಿಗೆ ಯಾವಾಗಲೂ ನಗಲು ಸಾಧ್ಯವಾಗುತ್ತಿದೆ. ಮನಸ್ಸಿಗೊಪ್ಪಿಗೆಯಾಗುವವನನ್ನೇ ಪತಿಯಾಗಿ ಪಡೆಯ ಬೇಕೆಂಬ ಪ್ರಯತ್ನದಲ್ಲಿ ತಾನು ಜಯಸಿರಲಿಲ್ಲ. ಈ ಸೇವಂತಿಯ ಹಾಗೆ ಇರುತ್ತಿದ್ದರೆ ತನಗೂ ನಗಲು ಸಾಧ್ಯವಿತ್ತೇನೋ ಎಂದು ಅಂಬೆಗನ್ನಿಸಿತು. ಆದರೆ ಬದುಕನ್ನು ಪೂರ್ವ ನಿರ್ಧರಿತವೆಂದೋ, ಯೋಗವೆಂದೋ, ಹಣೆಯ ಬರಹವೆಂದೋ ಸ್ವೀಕರಿಸುವವರು ನಿಜಕ್ಕೂ ಸುಖಿಗಳಾಗಿರುತ್ತಾರಾ? ಅಂತರಂಗದೊಳಕ್ಕಿಳಿದು ಶೋಧಿಸುವುದು ಹೇಗೆ?

ಇಂತಹ ಯೋಚನೆಗಳಿಂದ ಸದ್ಯಕ್ಕೇನೂ ಪ್ರಯೋಜನವಿಲ್ಲವೆಂದುಕೊಂಡು ಅಂಬೆಯೆಂದಳು: “ಗಿರಿನಾಯಕಾ, ಸೇವಂತಿಯನ್ನು ನೋಡುವಾಗ ನಾನು ಗಂಡಾಗಬೇಕಿತ್ತು ಎನಿಸುತ್ತದೆ. ಒಳ್ಳೆಯ ಸಂಗಾತಿಯನ್ನು ಕೊಟ್ಟಿದ್ದೀಯಾ. ಬೇಗ ಸ್ನಾನ ಮುಗಿಸಿ ಬರುತ್ತೇನೆ. ರಾತ್ರಿಗೆ ತಿನ್ನಲಿಕ್ಕೇನಾದರೂ ಕೊಟ್ಟುಬಿಡು. ನನಗೆಂದು ಪ್ರತ್ಯೇಕವಾದದ್ದೇನನ್ನೂ ಮಾಡಬೇಕಾಗಿಲ್ಲ. ನೀವು ತಿನ್ನುವುದೆಲ್ಲವೂ ನನಗಾಗುತ್ತದೆ. ಮಾಂಸವೂ ಕೂಡಾ. ಮಾಂಸವಾದರೆ ಯಾವುದರ ಮಾಂಸವೆಂಬುದನ್ನು ಮಾತ್ರ ತಿಳಿಸಿಬಿಡು. ನನಗೆ ನಿಮ್ಮೆಲ್ಲರ ಹಾಗೆ ಬದುಕಬೇಕಾಗಿದೆ”.

ಗಿರಿನಾಯಕ ತಲೆಯಲುಗಿಸಿ ಅಡುಗೆ ಕೋಣೆಯತ್ತ ನಡೆದ. ಅಂಬೆ ಸೇವಂತಿಯನ್ನು ಕರಕೊಂಡು ಮನೆಯ ಹಿಂಬದಿಯ ಮಜ್ಜನಗೃಹದಲ್ಲಿ ಸ್ನಾನ ಮುಗಿಸಿದಳು. ಹಿತವಾದ ಬಿಸಿನೀರು ಅವಳ ಅಷ್ಟೂ ದಿನಗಳ ಆಯಾಸವನ್ನು ಪರಿಹರಿಸಿ ಬಿಟ್ಟಿತು. ಮಹಡಿಯಲ್ಲಿ ಅವಳ ಎದುರು ನಾರುಡೆಗಗಳ ಒಂದು ರಾಶಿಯೇ ಇತ್ತು. ಅವುಗಳಲ್ಲಿ ವಿಶಿಷ್ಟವಾದುದನ್ನು ಆಯ್ದು ಉಟ್ಟುಕೊಂಡಳು. ಕೈ ಚಪ್ಪಾಳೆ ತಟ್ಟಿ ಹರ್ಷಿಸಿದ ಸೇವಂತಿ ಚೆನ್ನಾಗಿದೆಯೆಂದು ಸಂಜ್ಞೆಯಲ್ಲಿ ತೋರಿಸಿದಳು. ಅಂಬೆ ಆವರೆಗೆ ತೊಟ್ಟುಕೊಂಡಿದ್ದುದನ್ನು ಸೇವಂತಿ ಒಂದಿನಿತೂ ಅಸಹ್ಯಪಡದೆ ತೆಗೆದಿರಿಸಿದಳು. ಅವನ್ನು ನಾಳೆ ಸೇವಂತಿಯೇ ಒಗೆದುಕೊಡುತ್ತಾಳೆಂದು ಅಂಬೆಗನ್ನಿಸಿತು.

ರಾತ್ರಿ ತುಂಬಾ ಹೊತ್ತು ಅಂಬೆ ಸೇವಂತಿಗೆ ಸಂಸ್ಕೃತ ಕಲಿಸಲು ಯತ್ನಿಸಿದಳು. ಕೈಯನ್ನು ತೋರಿಸಿ ಹಸ್ತ ಎಂದಾಗ ಸೇವಂತಿ ಅದಕ್ಕೆ ಅವಳ ಭಾಷೆಯ ಸಮನಾರ್ಥ ಪದವನ್ನು ಹೇಳಿದಳು. ದೇಹದ ಎಲ್ಲಾ ಅವಯವಗಳನ್ನು ಸೇವಂತಿಯ ಭಾಷೆಯಲ್ಲಿ ಹೇಳುವುದು ಹೇಗೆಂಬುದನ್ನು ಅಂಬೆ ಕಲಿತುಕೊಂಡಳು. ಗುಹ್ಯಾಂಗಗಳ ಸಮಾನಾರ್ಥ ಪದ ಹೇಳುವಾಗ ಸೇವಂತಿಗೆ ತುಂಬಾ ನಾಚಿಕೆಯಾಯಿತು. ಅಂಬೆಯ ಆಭರಣಗಳನ್ನು ಮುಟ್ಟಿ ಮುಟ್ಟಿ ನೋಡಿ ಸೇವಂತಿ ಸಂತೋಷಪಟ್ಟಳು. ಅಂಬೆ ತನ್ನ ಮೈಮೇಲಿನ ಆಭರಣಗಳ ಹೆಸರು ಹೇಳಿದಾಗ ಸೇವಂತಿ ತನ್ನ ದೇಹದ ಮೇಲಿರುವ ಆಭರಣಗಳ ಹೆಸರುಗಳನ್ನು ತಿಳಿಸಿದಳು. ಗಿರಿನಾಯಕನನ್ನು ಮದುವೆಯಾಗುತ್ತೀಯಾ ಎಂದು ಸಂಜ್ಞೆಯಲ್ಲಿ ಕೇಳಿದಾಗ ಇಲ್ಲವೆಂದು ತಲೆಯಲುಗಿಸಿ ಕುಲುಕುಲು ನಕ್ಕಳು.

ಅವಳು ನಕ್ಕಾಗ ಪರಿಸರಕ್ಕೆ ಹೊಸ ಜೀವ ಮೂಡುತ್ತಿದೆಯೆಂದು ಅಂಬೆಗನ್ನಿಸಿತು. ಓದು ಬರೆಹ ಬಲ್ಲ ರಸಿಕನೊಬ್ಬ ಇವಳನ್ನು ಕಂಡರೆ ಕಾವ್ಯ ರಚಿಸದಿರಲಾರ. ಅಂಬೆಗೆ ಅಪ್ಪನ ಆಸ್ಥಾನದ ಕವಿಗಳು ನೆನಪಾದರು. ಅಪ್ಪನ ಬಗ್ಗೆ, ಕಾಶಿ ವಿಶ್ವನಾಥನ ಬಗ್ಗೆ ಮತ್ತು ಗಂಗೆಯ ಬಗ್ಗೆ ಕಾವ್ಯ ರಚಿಸಿ ಅಪ್ಪನಿಂದ ಹೊನ್ನ ಕಡಗ ಮತ್ತು ಜರತಾರಿ ಸೀರೆ ಪಡಕೊಳ್ಳಲು ಅವರ ನಡುವೆ ಆಗಾಗ ಸ್ಪರ್ಧೆ ನಡೆಯುತ್ತಿತ್ತು. ಬೇರೆ ವಸ್ತುಗಳು ಅವರಿಗೆ ಕಾವ್ಯ ರಚನೆಗೆ ಯಾಕೆ ಹೊಳೆಯುತ್ತಿಲ್ಲವೋ ಎಂದು ಅಂಬೆ ಎಷ್ಟೋ ಸಲ ಯೋಚಿಸುತ್ತಿದ್ದುದುಂಟು. ಅವರ ರಚನೆಗಳು ಕಾವ್ಯಗಳೆಂದು ಅವಳಿಗೆ ಒಮ್ಮೆಯೂ ಅನ್ನಿಸಿರಲಿಲ್ಲ. ಆಸ್ಥಾನ ಕವಿಗಳಲ್ಲಿ ಇಬ್ಬರು ಹೆಣ್ಣಿನ ಬಗ್ಗೆ ರಸವತ್ತಾದ ಕಾವ್ಯ ಸೃಷ್ಟಿಸುತ್ತಿದ್ದರು. ಅವು ಅವಾಸ್ತವವೆಂದು ಅವಳಿಗನ್ನಿಸುತ್ತಿದ್ದರೂ ಅವನ್ನು ಓದಿ ಅವಳು ಸಂತೋಷಿಸುತ್ತಿದ್ದಳು. ಇಷ್ಟು ರಸವತ್ತಾದ ಕಾವ್ಯ ಸೃಷ್ಟಿಸಲು ಹೇಗೆ ಸಾಧ್ಯವಾಯಿತೆಂದು ಕವಿಗಳನ್ನು ಅವಳು ಪ್ರಶ್ನಿಸಿದ್ದಳು. ಒಬ್ಬ ತಾನು ಗಿರಿವನಗಳನ್ನು ಸಂಚರಿಸಿ ಪ್ರಕೃತಿಯಿಂದ ಮತ್ತು ಗಿರಿ ಕನ್ನಿಕೆಯರಿಂದ ಸ್ಫೂರ್ತಿ ಪಡೆಯುತ್ತೇನೆಂದ. ಇನ್ನೊಬ್ಬ ತಾನು ಗಂಗಾತಟದ ಧ್ಯಾನಮಂಟಪದಲ್ಲಿ ಕೂತು ನದಿಯಲ್ಲಿ ಪಾಪ ತೊಳೆದುಕೊಳ್ಳುವ ಹದಿಹರೆಯದ ಕನ್ನಿಕೆಯರ ಮೈಮಾಟದ ಪ್ರತ್ಯಕ್ಷ ದರ್ಶನದಿಂದ ಕಾವ್ಯ ರಚಿಸುತ್ತೇನೆಂದ. ಅವರು ಶಾಲು ಮತ್ತು ಹೊನ್ನ ಕಡಗಗಳಿಗಾಗಿ ಕಾವ್ಯ ಹೊಸೆಯುವವರಿಂದ ಉತ್ತಮರೆಂದು ಅವಳಿಗನ್ನಿಸಿತ್ತು. ಆದರೂ ಒಂದು ಸಂಶಯ ಅವಳಲ್ಲಿ ಉಳಿದಿತ್ತು. ಹೆಣ್ಣುಗಳಿಂದ ಸ್ಫೂರ್ತಿ ಪಡೆದು ಕಾವ್ಯ ರಚಿಸುವವರು ಅವಳ ದೇಹದ ಬಗ್ಗೆ ಮಾತ್ರ ಬರೆಯುತ್ತಾರೆ. ಮನಸ್ಸಿನ ಒಳ ಹೊಕ್ಕು ಯಾಕೆ ನೋಡುವುದಿಲ್ಲ? ವ್ಯವಸ್ಥೆಯ ಭಯವೆ? ಅಥವಾ ಬರೆದು ಪ್ರಯೋಜನವೇನು ಎಂಬ ಭಾವವೆ? ಕಾವ್ಯ ರಚಿಸುವವರಿಗೆ ಶಾಸನ ರಚಿಸುವ ಅಧಿಕಾರವಿಲ್ಲದುದಕ್ಕೆ ಹೀಗಾಗುತ್ತಿದೆಯೆ? ಅಥವಾ ಶಾಸನ ರಚಿಸುವವರಂತೆ ಕವಿಗಳಿಗೂ ಹೆಣ್ಣು ಒಂದು ಸಾಧನ ಮಾತ್ರವೆ? ಯೋಚಿಸುತ್ತಾ ಅವಳು ಹಾಗೇ ನಿದ್ದೆ ಹೋದಳು.

ಬೆಳಿಗ್ಗೆ ತಡವಾಗಿ ಎದ್ದ ಅಂಬೆ ತುಂಬಾ ಉಲ್ಲಸಿತಳಾಗಿದ್ದಳು. ಸೇವಂತಿ ಮನೆಯೊಳಗೆ ಕಟ್ಟಿ ಹಾಕಿದ್ದ ದನಕರುಗಳ ಮತ್ತು ಆಡುಗಳ ಹಗ್ಗ ಬಿಚ್ಚಿ ಹೊರಗಟ್ಟುತ್ತಿದ್ದಳು. ಹೊರಗೆ ದನಗಳ ಮತ್ತು ಆಡುಗಳ ಮಂದೆಗಳನ್ನು ದನಗಾಹಿಗಳು ಕಾಯುತ್ತಿದ್ದರು. ಅಂಬೆಯನ್ನು ಕಂಡು ಗಿರಿನಾಯಕನೆಂದ: “ಸರೋವರದ ಸುತ್ತ ಸಾಕಷ್ಟು ಹುಲ್ಲು ಬೆಳೆಯುತ್ತದೆ. ದನಗಾಹಿಗಳು ಮಧ್ಯಾಹ್ನದವರೆಗೆ ಇವನ್ನು ಅಲ್ಲೇ ಮೇಯಿಸುತ್ತಾರೆ. ಮತ್ತೆ ಆಯಾ ಮನೆಗಳಿಗೆ ಕ್ಷೇಮವಾಗಿ ಮುಟ್ಟಿಸುತ್ತಾರೆ. ನೀವು ಬೇಗ ಬೆಳಗಿನ ವಿಧಿಗಳನ್ನು ಪೂರೈಸಿದರೆ ದನಗಾಹಿಗಳೊಡನೆ ಹೋಗಿ ಬರಬಹುದು. ಬೆಳಗಿನ ತಿಂಡಿಯನ್ನು ಸೇವಂತಿ ಕಟ್ಟಿಕೊಂಡು ಬರುತ್ತಾಳೆ”.

ಅಂಬೆ ಹೊರಟಳು. ದನಗಾಹಿಗಳು ಸುಶ್ರಾವ್ಯವಾಗಿ ಹಾಡುತ್ತಾ ಮಂದೆಯನ್ನು ಸರೋವರದ ಸುತ್ತ ಮೇಯಿಸುತ್ತಿದ್ದಾಗ ಗಿರಿನಾಯಕ ಕೇಳಿದ: “ರಾಜಕುಮಾರಿ ತುಂಬಾ ಗೆಲುವಾಗಿದ್ದೀರಿ. ಸೇವಂತಿ ನಿಮಗೆ ಹಿಡಿಸಿರಬೇಕು. ಅವಳಲ್ಲಿ ಮಾತಾಡಲು ನಿಮಗೆ ಸಾಧ್ಯವಾಯಿತೆ?”

ತನಗೆ ತಿಂಡಿ ತೆಗೆದುಕೊಂಡು ಬರುತ್ತಿದ್ದ ಸೇವಂತಿಯ ಎಡಗೈ ಹಿಡಕೊಂಡು ಅಂಬೆ ಹೇಳಿದಳು: “ಗಿರಿನಾಯಕಾ, ನನಗೆ ಈ ಸೇವಂತಿ ಎಷ್ಟು ಶಬ್ದಗಳನ್ನು ಕಲಿಸಿಕೊಟ್ಟಳು! ನಾನೀಗ ಮಾನವ ಅಂಗಾಂಗಗಳ ಹೆಸರುಗಳನ್ನು ನಿನ್ನ ಭಾಷೆಯಲ್ಲಿ ಹೇಳಬಲ್ಲೆ. ಇವಳಿಗೆ ಒಂದಷ್ಟು ಸಂಸ್ಕೃತ ಕಲಿಸಿದ್ದೇನೆ. ನೀನು ಕಾಶಿಗೆ ಹೋಗಿ ಹೇಗೋ ಶಾಸ್ತ್ರಾಭ್ಯಾಸ ಮಾಡಿ ಬಂದೆ. ಈ ಜನಗಳಿಗೆ ಅದನ್ನು ನಿಧಾನವಾಗಿ ಕಲಿಸು. ಹೊರ ಪ್ರಪಂಚ ಹೇಗಿದೆಯೆಂಬುದು ಇವರಿಗೆ ಗೊತ್ತಾಗಲಿ”.

ಗಿರಿನಾಯಕ ತಲೆದೂಗಿದ. ಮೂವರೂ ಒಂದೆಡೆ ಕುಳಿತು ತಿಂಡಿ ತಿಂದರು. ಸರೋವರದ ನೀರನ್ನು ಕುಡಿದರು. ಅಂಬೆಗೆ ಈಜುವ ಮನಸ್ಸಾಯಿತು. ಗಿರಿನಾಯಕಾ, ನಾನು ಮತ್ತು ಸೇವಂತಿ ಸರೋವರದಲ್ಲಿ ಈಜುತ್ತೇವೆ. ನೀನು ನಿನ್ನ ಕೆಲಸವನ್ನು ನೋಡಿಕೋ”.

ಅವಳ ಮಾತಿನ ಭಾವ ಅರ್ಥವಾಗಿ ಗಿರಿನಾಯಕನೆಂದ: “ರಾಜಕುಮಾರೀ, ನಾವು ಈಜುವಾಗ ಗಂಡು ಹೆಣ್ಣು ಎಂಬ ಭೇದಭಾವ ಮಾಡುವುದಿಲ್ಲ. ಒಟ್ಟಾಗಿ ಈಜುವಾಗ ನಾವು ಯಾವುದೇ ಮನೋವಿಕಾರಕ್ಕೆ ಒಳಗಾಗುವುದಿಲ್ಲ. ಸೃಷ್ಟಿಗಾಗಿ ಮಾತ್ರ ಗಂಡು ಹೆಣ್ಣೆಂಬ ವ್ಯತ್ಯಾಸವೆಂದು ನಾವು ಭಾವಿಸುತ್ತೇವೆ. ಸಂಕೋಚ ಬೇಡ. ಗಂಡಸರು ಈಗ ಸರೋವರದಲ್ಲಿ ಈಜುವುದಿಲ್ಲ. ನೀವು ನಿಶ್ಚಿಂತೆಯಿಂದ ಎಷ್ಟು ಹೊತ್ತು ಬೇಕಾದರೂ ಈಜಿ”.

ಅಂಬೆ, ಸೇವಂತಿಯೊಡನೆ ಸರೋವರಕ್ಕಿಳಿಯುವಾಗ ಗಿರಿನಾಯಕ ಮನೆಗೆ ಹಿಂದಿರುಗಿದ. ಅಂಬೆ ಮನಸೋ ಇಚ್ಛೆ ಈಜಿದಳು. ತನಗಿಂತಲೂ ಸೇವಂತಿ ಉತ್ತಮ ಈಜುಗಾತಿ ಎನ್ನುವುದನ್ನು ಮನಗಂಡಳು. ಈಜುವಾಗ ಅವಳಿಗೆ ಗಿರಿನಾಯಕನ ಹೆಂಡತಿಯ ನೆನಪಾಯಿತು. ಅವಳು ಈ ಸೇವಂತಿಯ ಹಾಗೆ ಇದ್ದಿರಬಹುದು. ನಾಲ್ಕು ವರ್ಷ ಸಂಸಾರ ಮಾಡಿದೆ ಎಂದು ಗಿರಿನಾಯಕ ನಿನ್ನೆ ಹೇಳಿದ್ದ. ಈಗವನಿಗೆ ಹೆಣ್ಣು ಬೇಕೆನಿಸುವುದಿಲ್ಲವೆ? ನೋಡಲು ಆಕರ್ಷಕನಾಗಿಯೇ ಇದ್ದಾನೆ. ಹೆಣ್ಣು ಬೇಕೆನಿಸಿದರೂ ಈ ಸೇವಂತಿಯನ್ನು ವಿವಾಹವಾಗಲಾರ. ಒಂಟಿಯಾಗಿಯೇ ಶೇಷಾಯುಷ್ಯವನ್ನು ಕಳೆಯುತ್ತಾನೇನೊ? ಲೈಂಗಿಕ ಸುಖಕ್ಕೆ ಎರವಾಗಿ ಜೀವನ ಸಾಗಿಸುವುದು ಸುಲಭವೆ? ಆದರೆ ಭೀಷ್ಮಾಚಾರ್ಯರಿಂದ ಅದು ಸಾಧ್ಯವಾಗಿದೆ. ಮಾನವ ಒಂಟಿಯಾಗಿ ಹುಟ್ಟುತ್ತಾನೆ. ಒಂಟಿಯಾಗಿಯೇ ಸಾಯುತ್ತಾನೆ. ಒಂಟಿಯಾಗಿ ಬಾಳಲು ಯಾಕೆ ಸಾಧ್ಯವಾಗುವುದಿಲ್ಲ? ಸಾಧ್ಯ ಮಾಡಿ ತೋರಿಸಬೇಕು.

ಈಜುತ್ತಾ ಈಜುತ್ತಾ ಅವಳು ಸೇವಂತಿಯ ಬಳಿಗೆ ಹೋಗಿ ಸಂಜ್ಞೆ ಮಾಡಿ ಬೆನ್ನುಜ್ಜಲು ಹೇಳಿದಳು ಸೇವಂತಿ ಬೆನ್ನುಜ್ಜಿದಳು. ಕೈಗೆಟುಕದ ಬೆನ್ನ ಮಧ್ಯಭಾಗದಲ್ಲಿ ಶೇಖರವಾಗಿದ್ದ ಕಪ್ಪು ಕೊಳೆಯನ್ನು ಅಂಬೆಯ ಮುಖದತ್ತ ತಂದು ತೋರಿಸಿದಳು. ಚಿಕ್ಕವಳಿರುವಾಗ ಅಮ್ಮ ತನ್ನ ಬೆನ್ನುಜ್ಜುತ್ತಿದ್ದುದು ಅಂಬೆಗೆ ನೆನಪಾಯಿತು. ಯೌವ್ವನ ಬಂದ ಮೇಲೆ ದಾಸಿಯರು ಅವಳ ಬೆನ್ನುಜ್ಜುತ್ತಿದ್ದರು. ಸೇವಂತಿಯದ್ದು ನಿನ್ನೆಯಷ್ಟೇ ಆದ ಪರಿಚಯ. ಆದರೂ ಆತ್ಮೀಯ ಗೆಳತಿಯಂತೆ ಅವಳು ಬೆನ್ನುಜ್ಜಿದ್ದಳು. ಬೆನ್ನಲ್ಲಿ ಶೇಖರಗೊಂಡಿದ್ದ ಕೊಳೆಯನ್ನು ನೋಡಿ ಅಸಹ್ಯಪಟ್ಟಿರಲಿಲ್ಲ. ಪ್ರೀತಿಯಿದ್ದರೆ ಮಾತ್ರ ಅದು ಸಾಧ್ಯ!

ಅಂಬೆಗೆ ಸಾಲ್ವಭೂಪತಿಯ ನೆನಪಾಯಿತು. ಕಾಶಿಯ ಉಪವನದ ಸರೋವರದಲ್ಲಾದ ಅವನ ಪ್ರಥಮ ದರ್ಶನ ಅವಳ ಬಾಳ ಪಯಣದ ದಿಕ್ಕನ್ನೇ ಬದಲಾಯಿಸಿಬಿಟ್ಟಿತ್ತು. ಆತ ತನ್ನ ಕೈ ಹಿಡಿಯುತ್ತಿದ್ದರೆ ಸೌಭ ದೇಶದ ಅಷ್ಟೂ ಸರೋವರಗಳಲ್ಲಿ ಒಟ್ಟಾಗಿ ಈಜಬಹುದಿತ್ತೆಂದು ಅವಳಿಗನ್ನಿಸಿತು. ಅವನಿಗೆ ಭಾಗ್ಯವಿಲ್ಲ. ಹೋಗಲಿ ಅವನನ್ನು ನೆನಪಿನ ಪದರಗಳಿಂದ ಕಿತ್ತು ಹಾಕಬೇಕು. ಹೆಣ್ಣಿಗೆ ಪ್ರೀತಿಯ ಮುಂದೆ ಇನ್ಯಾವುದೂ ಇಲ್ಲ. ತನ್ನ ಜೀವನದಲ್ಲಿ ಪ್ರವೇಶಿಸಿದ ಮೊದಲ ಗಂಡನ್ನು ಅವಳು ಎಂದಿಗೂ ಮರೆಯುವುದಿಲ್ಲ. ಆದರೆ ಆ ಮೂರ್ಖ ಸಾಲ್ವನಿಗೆ ಪ್ರೀತಿಗಿಂತ ಪ್ರತಿಷ್ಠೆ ಹೆಚ್ಚಿನದಾಯಿತು!

ಈಜುತ್ತಿರುವಂತೆ ಅವಳಿಗೆ ಕಾಶಿಯಲ್ಲಿ ಪ್ರವಹಿಸುವ ಗಂಗಾನದಿಯ ನೆನಪಾಯಿತು. ಈಜು ಸರಿಯಾಗಿ ಬಾರದವರು ಅದರಲ್ಲಿ ಮುಳುಗಿ ಸತ್ತು ಹೋಗುತ್ತಿದ್ದರು. ಇನ್ನು ಕೆಲವರು ಸಾಯಲೆಂದೇ ಅಲ್ಲಿಗೆ ಬರುತ್ತಿದ್ದರು. ಕಾಶಿಯಲ್ಲಿ, ವಿಶ್ವನಾಥನ ಸನ್ನಿಧಿಯಲ್ಲಿ, ಗಂಗೆಗೆ ಹಾರಿ ಸಾಯುವವರು ಆತ್ಮಹತ್ಯೆ ಮಹಾಪಾಪವೆಂದು ಏಕೆ ಯೋಚಿಸುವುದಿಲ್ಲವೊ? ಸಾವು ಖಚಿತವೆಂದಾದಾಗ ಪ್ರಾಣಭೀತಿಯಿಂದ ಅದು ಹೇಗೋ ಕೈ ಕಾಲು ಬಡಿದು ಕೆಲವರು ಈಜಿ ಪಾರಾಗಿ ಬಿಡುತ್ತಿದ್ದರು. ಸಾಯಲೇಬೇಕೆಂಬ ಬಯಕೆಯಿಂದ ಸಾಯುವವರಿಗಿಂತ ಈಜು ಬಾರದೆ ಸಾಯುವವರ ಸಂಖ್ಯೆಯೇ ದೊಡ್ಡದಿರಬಹುದು! ಅವಳಿಗೆ ಈಜಿನ ಶಕ್ತಿ ಗೊತ್ತಿತ್ತು. ದೇಹಕ್ಕೆ, ಮನಸ್ಸಿಗೆ ಹೊಸ ಚೈತನ್ಯ ಕೊಡುವ ಶಕ್ತಿಯದು. ಈಜು ಬಾರದವರದೂ ಒಂದು ಬದುಕೆ? ಹಾಗೆಂದುಕೊಂಡು ಅಂಬೆ ಈಜಿದಳು, ದಣಿವಾಗುವವರೆಗೂ.

ಮನೆಗೆ ಬಂದಾಗ ಅವಳಿಗಾಗಿ ಬಿಸಿಯೂಟ ಕಾದಿತ್ತು. ಮಾಂಸದ ತುಣುಕಿರಲಿಲ್ಲ. ಗಿರಿನಾಯಕ ಕಾರಣ ನೀಡಿದ: “ನಿಮ್ಮ ಇಷ್ಟದ್ದು ಯಾವುದೆಂದು ಗೊತ್ತಾಗದ್ದಕ್ಕೆ ನಿಮಗೆ ಇಂದು ಮಾಂಸವಿಲ್ಲ. ನಾಳೆ ಕಾಡು ಸುತ್ತಲು ಏರ್ಪಾಡು ಮಾಡಿದ್ದೇನೆ. ಆಗ ನಿಮಗೆ ಬೇಕಾದ್ದನ್ನು ಅಡುಗೆ ಮಾಡೋಣವಂತೆ”.

ಊಟವಾದ ಬಳಿಕ ಸ್ವಲ್ಪ ಹೊತ್ತು ಅಂಬೆ ವಿಶ್ರಾಂತಿ ತೆಗೆದುಕೊಂಡಳು. ಸಂಜೆ ಮಕ್ಕಳನ್ನು ಒಟ್ಟಿಗೆ ಸೇರಿಸಿ ಹೊಸ ಆಟ ಹೇಳಿಕೊಟ್ಟಳು. ದಿನ ಹೋದದ್ದೇ ಗೊತ್ತಾಗಲಿಲ್ಲ. ರಾತ್ರಿ ಸೇವಂತಿಯಿಂದ ಭಾಷೆ ಕಲಿಯುತ್ತಾ ಕಲಿಯುತ್ತಾ ಹಾಗೇ ನಿದ್ದೆ ಹೋದಳು.

ಮರುದಿನ ಅವಳು, ಸೇವಂತಿ ಮತ್ತು ಅಲ್ಲಿನ ಮಕ್ಕಳೊಡನೆ ಪೂರ್ವದ ದಟ್ಟ ಕಾಡಿನಲ್ಲಿ ಸುತ್ತಾಡಿದಳು. ತೋಳ, ಕಿರುಬ, ಹುಲಿ, ಚಿರತೆ, ಆನೆಗಳಿಂದ ತೊಂದರೆಯಾಗದಿರಲೆಂದು ನುರಿತ ಬಿಲ್ಗಾರರಾದ ಕಟ್ಟಾಳುಗಳನ್ನು ಗಿರಿನಾಯಕ ಜತೆಯಲ್ಲಿ ಕಳಿಸಿದ್ದ. ವನ ಸಂಚಾರಕ್ಕೆ ಅವಳು ಹೊರಡುವ ಮೊದಲು ಕಾಡಿನ ಯಾವ ಪ್ರಾಣಿಯನ್ನು ತಿನ್ನಬೇಕೆಂದು ಆಸೆಯಾಗುತ್ತಿದೆ ರಾಜಕುಮಾರೀ ಎಂದು ಗಿರಿನಾಯಕ ಕೇಳಿದ್ದ. ಕಾಶಿಯಲ್ಲಿ ಅವಳು ಬೇಕೆಂದಾಗ ಮಾಂಸ ತರಿಸಿಕೊಳ್ಳುತ್ತಿದ್ದಳು. ಆದರೆ ಇಲ್ಲಿ ಮಾಂಸ ಬೇಕೆನ್ನಿಸಲಿಲ್ಲ. ಕಾಡು, ಗುಡ್ಡ, ಸರೋವರಗಳಲ್ಲಿ ಸ್ವಚ್ಛಂದ ಬದುಕನ್ನು ಕಂಡುಕೊಂಡಿರುವ ಖಗಮೃಗಗಳನ್ನು ಕೊಂದು ತಿಂದು ಸಂತೋಷ ಪಡಲು ಮನಸ್ಸು ಒಪ್ಪಲಿಲ್ಲ. ಯಾವುದೂ ಬೇಡ ಗಿರಿನಾಯಕಾ. ಅವು ನಮ್ಮ ಹಾಗೇ ಜೀವಿಗಳು. ಅವುಗಳ ಜೀವ ತೆಗೆಯುವ ಹಕ್ಕು ನಮಗಿಲ್ಲ. ಬೇಡ, ಹಿಂಸೆಗೆ ಮನಸ್ಸು ಒಡಂಬಡುತ್ತಿಲ್ಲ ಎಂದಳು. ಅವನು ಬಲವಂತ ಮಾಡಲಿಲ್ಲ. ತನಗೆ ನಗರದಲ್ಲಿ ತುರ್ತು ಕೆಲಸವಿದೆಯೆಂದೂ, ಕತ್ತಲಾಗುವುದರೊಳಗೆ ಬಂದು ಬಿಡುತ್ತೇನೆಂದೂ ಹೇಳಿ ಹೊರಟು ಹೋದ.

ಸೇವಂತಿ ಅವಳಿಗೆ ಕಾಡಿನ ಗಿಡ, ಮರ, ಬಳ್ಳಿಪ್ರತಿಯೊಂದರ ಹೆಸರನ್ನು ಹೇಳಿಕೊಡುತ್ತಿದ್ದಳು. ಅವಳ ಅರಣ್ಯಜ್ಞಾನಕ್ಕೆ ಅಂಬೆ ಮೂಕವಿಸ್ಮಿತಳಾಗಿಬಿಟ್ಟಳು. ಕಾಡಿನ ಒಳ ಹೊಕ್ಕಾಗ ಸ್ವರ್ಗವೆಂದರೆ ಇದೇ ಇರಬೇಕೆಂದು ಅವಳಂದುಕೊಂಡಳು. ಇವರ ದಂಡನ್ನು ನೋಡಿ ಠಣ್ಣನೆ ಜಿಗಿದೋಡುವ ಮೊಲಗಳು, ಭೀತನೇತ್ರಗಳಿಂದ ನೋಡಿ ಕಂಬಿ ಕೀಳುವ ಹರಿಣಗಳು, ವಿಚಿತ್ರಸ್ವರ ಎಬ್ಬಿಸಿ ರೆಕ್ಕೆ ಬಡಿಯುತ್ತಾ ಹಾರಿ ಹೋಗುವ ಕಾಡ ಕೋಳಿಗಳು ಇವುಗಳನ್ನು ಕಂಡಾಗ ಅಭ್ಯಾಸ ಬಲದಿಂದ ಬಿಲ್ಗಾರರು ಗುರಿಯಿಡುತ್ತಿದ್ದರು. ತಕ್ಷಣ ಅವಳು ತಡೆದು ಬೇಡವೆಂದು ಸಂಜ್ಞೆ ಮಾಡುತ್ತಿದ್ದಳು. ಯಾವ್ಯಾವುದೋ ಹಣ್ಣುಗಳನ್ನು ಕಿತ್ತು ಮಕ್ಕಳು ಅವಳಿಗೆ ಕೊಡುತ್ತಿದ್ದರು. ಅಂಥವುಗಳನ್ನು ಅವಳು ಆವರೆಗೆ ತಿಂದವಳಲ್ಲ. ಮರದ ಬಿಳಲುಗಳು ಸಿಕ್ಕಾಗ ಮಕ್ಕಳು ಜೋಕಾಲಿಯಾಡುತ್ತಿದ್ದವು. ಅಂಬೆ ಪ್ರಯತ್ನಿಸಿ ಆರಂಭದಲ್ಲಿ ಕೈ ತಪ್ಪಿ ಬಿದ್ದಳು. ಮಕ್ಕಳು ಹೋ ಎಂದು ಚಪ್ಪಾಳೆ ತಟ್ಟಿ ನಕ್ಕಾಗ ಸೇವಂತಿ ಅವರನ್ನು ಗದರಿಕೊಂಡಳು. ಮತ್ತೆ ಅಂಬೆ ಜೋಕಾಲಿಯಾಡುವುದನ್ನು ರೂಢಿಸಿ ಕೊಂಡಳು. ಆಗಲೂ ಮಕ್ಕಳು ನಗುತ್ತಾ ಗದ್ದಲವೆಬ್ಬಿಸಿದರು. ಸಣ್ಣ ಮರಗಳಿರುವ ತಟ್ಟು ಪ್ರದೇಶದಲ್ಲಿ ಅವರೆಲ್ಲಾ ಮರಕೋತಿಯಾಡಿದರು. ಬೇಗನೆ ಮರವೇರಲಾಗದ ಅಂಬೆ ಸುಲಭವಾಗಿ ಸಿಕ್ಕಿಬೀಳುತ್ತಿದ್ದಳು. ಮರದ ಮೇಲಿದ್ದುದಕ್ಕಿಂತ ಅವಳು ಕೆಳಗಿದ್ದದ್ದೇ ಹೆಚ್ಚು! ಅವರವರ ಮನೆಗಳಿಂದ ಕಟ್ಟಿಸಿಕೊಂಡು ತಂದಿದ್ದ ತಿಂಡಿಗಳನ್ನು ಒಟ್ಟಾಗಿ ಕೂತು ಹಂಚಿಕೊಂಡು ತಿಂದರು. ವೈವಿಧ್ಯಮಯ ತಿಂಡಿಗಳವು. ಸೇವಂತಿ ಅವುಗಳ ಹೆಸರುಗಳನ್ನು ಹೇಳಿಕೊಟ್ಟಳು. ಕೆಲವನ್ನಂತೂ ಅಂಬೆ ಈವರೆಗೆ ತಿಂದವಳಲ್ಲ. ಅವಳು ಆನಂದಿತಳಾದಳು. ಝುರಿಗಳ ತಣ್ಣನೆಯ ನೀರಿಗೆ ತಲೆಯೊಡ್ಡಿ ಕುಪ್ಪಳಿಸಿದಳು. ಇಲ್ಲಿಯವರೆಗೆ ದೊರಕದ ಅನುಭವಗಳನ್ನು ಪಡೆದುಕೊಂಡೆ, ಇಲ್ಲೇ ಇದ್ದರೇನು ಎಂದು ತನ್ನನ್ನು ಪ್ರಶ್ನಿಸಿಕೊಂಡಳು.

ಹಿಂದಿರುಗಿ ಗಿರಿನಾಯಕನ ಮನೆಗೆ ಬಂದು ಮುಟ್ಟುವಾಗ ಮಬ್ಬುಗತ್ತಲು ಕವಿಯುತ್ತಿತ್ತು. ಅವನು ಅಂಬೆಗಾಗಿ ಕಾಯುತ್ತಿದ್ದ. ಅವನ ಮುಖದಲ್ಲಿ ಬಳಲಿಕೆಗಿಂತ ಚಿಂತೆ ಹೆಚ್ಚಾಗಿದ್ದಂತೆ ಅವಳಿಗೆ ಕಂಡಿತು. ಅವನೆದುರು ಒಂದು ಪೆಟ್ಟಿಗೆಯಿತ್ತು. ಅದು ಕಾಶಿಯಿಂದ ಹಸ್ತಿನಾವತಿಯವರೆಗೆ ಅವಳೊಡನೆ ಪಯಣಿಸಿದ್ದ ಅವಳ ಪೆಟ್ಟಿಗೆ! ಅದನ್ನು ನೋಡಿ ಅಂಬೆಯ ಮುಖ ಬಿಳಿಚಿಕೊಂಡಿತು. ಪೆಟ್ಟಿಗೆಯನ್ನು ತೋರಿಸುತ್ತಾ ಗಿರಿನಾಯಕನೆಂದ: “ನಿಮ್ಮ ಉಡುಪುಗಳು ಇದರೊಳಗೆ ಭದ್ರವಾಗಿವೆ ರಾಜಕುಮಾರೀ. ನೀವು ನಮ್ಮ ಉಡುಪು ತೊಟ್ಟು ಸಂಕಟಪಡಬೇಕಾಗಿಲ್ಲ”.

ಅಂಬೆ ಮನದಲ್ಲೇ ಸಂಕಟಪಟ್ಟಳು. ನನ್ನ ಇರವನ್ನು ಭೀಷ್ಮರಿಗೆ ತಿಳಿಸಲೆಂದೇ ಬೆಳಿಗ್ಗೆ ಇವನು ಹೊರಟು ಹೋದದ್ದೆ? ನನ್ನೊಡನೆ ಇವನು ತನ್ನ ಪ್ರಯಾಣದ ಉದ್ದೇಶವನ್ನು ತಿಳಿಸುತ್ತಿದ್ದರೆ ನಾನಿವನನ್ನು ಹೋಗಗೊಡುತ್ತಿರಲಿಲ್ಲ. ಅಲ್ಲಿ, ಹಸ್ತಿನಾವತಿಯಲ್ಲಿ ಏನೇನು ಮಾತುಕತೆಗಳು ನಡೆದವೊ? ರಾಜಕುಮಾರಿ ಎಂಬುದನ್ನು ನಾನೇ ಮರೆತಿದ್ದೆ. ಇವರೆಲ್ಲರೊಡನೆ ಬೆರೆತಿದ್ದೆ. ಇವರ ಆಹಾರ ಉಂಡಿದ್ದೆ. ಇವರ ಉಡುಪು ಉಟ್ಟಿದ್ದೆ. ಇಂದು ಕಾಡಿನಲ್ಲಿ ಹೊಸ ಹೊಸ ಅನುಭವಗಳನ್ನು ನನ್ನದಾಗಿಸಿಕೊಂಡಿದ್ದೆ. ನನಗೆ ಹೊಸ ಜನ್ಮ ಬಂದಂತಾಗಿತ್ತು. ಎಲ್ಲವನ್ನೂ ಈ ಗಿರಿನಾಯಕ ಹಾಳು ಮಾಡಿಬಿಟ್ಟ! ನನಗೊಂದು ಮಾತೂ ಹೇಳದೆ ಹಸ್ತಿನಾವತಿಗೆ ಹೋಗಿ ನಾನು ಮರೆಯಲೆತ್ನಿಸುವ ನೋವಿನ ಇತಿಹಾಸವನ್ನು ಹೀಗೆ ತಂದು ನನ್ನೆದುರು ಇಟ್ಟಿದ್ದಾನೆ. ಬಹುಶಃ ನನಗೆ ಈ ನೋವಿನಿಂದ ಎಂದೆಂದಿಗೂ ಬಿಡುಗಡೆ ಎಂಬುದಿಲ್ಲ.

ಆಕ್ಷೇಪಣೆಯ ಸ್ವರದಲ್ಲಿ ಅಂಬೆಯೆಂದಳು: “ಗಿರಿನಾಯಕಾ, ನನಗವು ಬೇಕಿರಲಿಲ್ಲ. ನೀನು ಅನಗತ್ಯವಾಗಿ ಅಧಿಕ ಪ್ರಸಂಗ ಎಸಗಿರುವೆ. ನಿನ್ನ ಜನರು ಸಿದ್ಧಪಡಿಸಿದ ಉಡುಪು ಉಟ್ಟು ನಾನು ಸಂತೋಷಪಡುತ್ತಿದ್ದರೆ ನೀನು ಎಲ್ಲವನ್ನೂ ಹಾಳುಗೆಡಹಿಬಿಟ್ಟೆ. ನಿನ್ನವರು ತಯಾರಿಸಿದ ಉಡುಪುಗಳನ್ನು ಕೊಳ್ಳಲು ನನ್ನಲ್ಲಿ ಆಭರಣಗಳಿದ್ದವು. ಇದನ್ನು ನೀನು ತರಬೇಕಾದ ಅಗತ್ಯವೇ ಇರಲಿಲ್ಲ”

ಗಿರಿನಾಯಕ ಪೆಚ್ಚಾದ. ರಾಜಕುಮಾರೀ, ಇಂದು ಕಂದಾಯ ಪಾವತಿಸಬೇಕಾದ ದಿನವಾಗಿತ್ತು. ಹಸ್ತಿನಾವತಿಯ ಕಂದಾಯ ಅಧಿಕಾರಿಯನ್ನು ಭೇಟಿಯಾದಾಗ ಅವನು “ಒಬ್ಬಳು ರಾಜಕುಮಾರಿ ನಿಮ್ಮಲ್ಲಿಗೆ ಬಂದಿದ್ದಳೆ” ಎಂದು ಕೇಳಿದ. ನೀವು ಸರೋವರದ ಬಳಿ ರಥದಿಂದ ಇಳಿದುದನ್ನು ಪುರೋಹಿತ ಹಸ್ತಿನಾವತಿಯಲ್ಲಿ ಹೇಳದಿರುತ್ತಾನೆಯೆ? ಇಲ್ಲವೆಂದು ಸುಳ್ಳು ಹೇಳಲು ನನ್ನಿಂದ ಸಾಧ್ಯವಾಗಲಿಲ್ಲ. ನಾನು ಹೌದೆಂದಾಗ ಅವ ನನ್ನನ್ನು ಭೀಷ್ಮನಲ್ಲಿಗೆ ಕಳುಹಿಸಿಕೊಟ್ಟ. ನೀವು ಗಿರಿನಗರದಲ್ಲಿರುವುದನ್ನು ನಾನು ಹೇಳಲೇಬೇಕಾಯಿತು. ಅವನು ಸೇವಕರಿಂದ ಈ ಪೆಟ್ಟಿಗೆಯನ್ನು ತರಿಸಿ ಇದು ಅಂಬೆಗೆ ಸೇರಿದ್ದು. ಇದರ ಒಳಗಿರುವುದು ಅವಳಿಗೆ ತುರ್ತಾಗಿ ಬೇಕಾಗಬಹುದು. ಇದನ್ನೊಯ್ದು ಅವಳಿಗೆ ಕೊಡು. ಅವಳು ಗಿರಿನಗರಿಯಲ್ಲಿರುವುದು ಒಳ್ಳೆಯದೇ. ಗಿರಿನಗರಿ ಹಸ್ತಿನಾವತಿಗೆ ಸೇರಿದ್ದು. ಅವಳಲ್ಲಿ ಇರುವವರೆಗೆ ಅವಳ ರಕ್ಷಣೆಯ ಹೊಣೆ ಹಸ್ತಿನಾವತಿಯದ್ದು’ ಎಂದು ಹೇಳಿ ನನ್ನನ್ನು ಈ ಪೆಟ್ಟಿಗೆ ಸಹಿತ ರಥದಲ್ಲಿ ಕಳುಹಿಸಿಕೊಟ್ಟ. ಈಗ ಹೇಳಿ ರಾಜಕುಮಾರೀ, ನಾನಿದನ್ನು ತಿರಸ್ಕರಿಸಿ ಬರಲು ಸಾಧ್ಯವಿತ್ತೆ?”

ಅಂಬೆ ಮೌನವಾಗಿ, ಯೋಚಿಸತೊಡಗಿದಳು. ಈಗಲೂ ಹಸ್ತಿನಾವತಿಯ ರಕ್ಷಣೆಯಲ್ಲಿರುವುದು ಅವಳಿಗೆ ಸಂತೋಷದ ವಿಷಯವಾಗಿರಲಿಲ್ಲ. ಹಸ್ತಿನಾವತಿಯ ಸಮ್ರಾಙಿಯಾಗುವ ಭಾಗ್ಯವನ್ನು ತಿರಸ್ಕರಿಸಿ ಬಂದವಳು ಭೀಷ್ಮರ ರಕ್ಷಣೆಯಲ್ಲಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಅವಳನ್ನು ಕಾಡಕೊಡಗಿತು. ಮುಂದಿನ ಬಾಳ ಪಥವನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆಯನ್ನು ಅವಳು ಗುರುತಿಸಿದಳು. ಏನು ಮಾಡಲಿ ಎಂದು ಚಿಂತಾಕ್ರಾಂತಳಾದಳು.

ಗಿರಿನಾಯಕ ಮಾತು ಮುಂದುವರಿಸಿದ: “ರಾಜಕುಮಾರೀ, ನಾನು ನಿಮ್ಮ ಪರವಾಗಿ ಭೀಷ್ಮನಲ್ಲಿ ತುಂಬಾ ತರ್ಕ ಮಾಡಿದೆ. ಗೆದ್ದು ತಂದವನೇ ಹೆಣ್ಣನ್ನು ವರಿಸುವುದು ಧರ್ಮವೆಂದು ಶಾಸ್ತ್ರಸಮ್ಮತವಾಗಿ ವಾದಿಸಿದೆ. ಆದರೆ ಮನೋನಿಗ್ರಹದಷ್ಟು ಉನ್ನತ ಮೌಲ್ಯ ಇನ್ನೊಂದಿಲ್ಲವೆಂದು ಭೀಷ್ಮ ಆಧಾರ ಶ್ಲೋಕಗಳನ್ನು ಹೇಳಿದ. ಈ ಹಿಂದೆಯೂ ಅವನೊಡನೆ ಬೇರೆ ಬೇರೆ ವಿಷಯಗಳ ಬಗ್ಗೆ ನಾನು ವಾದಿಸಿದವನೇ. ಪ್ರತಿಬಾರಿಯೂ ಸೋತುಬಿಡುತ್ತಿದ್ದೆ. ಇಂದೂ ಹಾಗೇ ಆಯಿತು. ನಾನು ಗಳಿಸಿದ ಜ್ಞಾನ ಭೀಷ್ಮನನ್ನು ಸೋಲಿಸಲು ಸಾಕಾಗಲಿಲ್ಲ. ಕೊನೆಗೆ ಅವನೊಂದು ಮಾತು ಹೇಳಿದ. ‘ನೀನು ಮದುವೆಯಾದವ. ನಾನು ಬ್ರಹ್ಮಚಾರಿ. ಆದರೂ ಒಂದು ಮಾತು ಹೇಳುತ್ತಿದ್ದೇನೆ ಕೇಳು. ಗಂಡು ಹೆಣ್ಣು ಪರಸ್ಪರರ ಗುಣ ಮತ್ತು ಸಾಧನೆಗಳನ್ನು ಮೆಚ್ಚಿಕೊಂಡು ಒಂದಾಗುವುದೇ ನಿಜವಾದ ಮದುವೆ. ಉಳಿದೆಲ್ಲಾ ಮದುವೆಗಳು ಅರ್ಥಹೀನ ಆಚರಣೆಗಳು. ಆ ಕಾಶೀರಾಜ ಕುರು ಸಾಮ್ರಾಜ್ಯವನ್ನು ಅಪಮಾನಿಸಿದ. ರಕ್ಷಕನಾಗಿ ನಾನು ಕುರು ಸಾಮ್ರಾಜ್ಯದ ಪ್ರತಿಷ್ಠೆಗಾಗಿ ಮುನ್ನುಗ್ಗುವುದು ಅನಿವಾರ್ಯವಾಯಿತು. ಸ್ವಯಂವರಕ್ಕೆ ಶೌರ್ಯವನ್ನು ಪಣವಾಗಿಟ್ಟದ್ದೇ ತಪ್ಪು. ಅಂಬೆಯ ಪ್ರಕರಣದಲ್ಲಿ ಅವಳ ಅಪ್ಪ ಪ್ರತಾಪ ಸೇನನೇ ತಪ್ಪಿತಸ್ಥ. ಆದದ್ದು ಆಗಿ ಹೋಯಿತು. ಅಂಬೆ ಯಾರನ್ನಾದರೂ ವಿವಾಹವಾಗಿ ಸುಖವನ್ನು ಕಂಡುಕೊಳ್ಳಲಿ. ಅವಳ ವಿವಾಹವಾಗುವವರೆಗೂ ಹಸ್ತಿನಾವತಿಯ ಬೆಂಬಲ ಅವಳಿಗಿರುತ್ತದೆಂದು ಹೇಳು’ ಎಂದು. ರಾಜಕುಮಾರೀ, ಆ ಭೀಷ್ಮ ಅವನ ಪ್ರತಿಜ್ಞೆಗಾಗಿ ಪ್ರಾಣವನ್ನು ಬೇಕಾದರೂ ತೆತ್ತಾನು. ಎಂದಿಗೂ ತನ್ನ ಪ್ರತಿಜ್ಞೆಯನ್ನು ಉಲ್ಲಂಘಿಸಲಾರ್”.

ಅದು ಅವಳಿಗೆ ಗೊತ್ತಿತ್ತು. ಆದರೆ ಗಿರಿನಾಯಕನ ವರ್ತನೆಯ ಬಗ್ಗೆ ಸಂಶಯ ಮೂಡಿತು. ಇವನು ಕಂದಾಯ ಅಧಿಕಾರಿಯ ಮಾತಿಗೆ ಬೆಲೆಕೊಟ್ಟು ಭೀಷ್ಮನಲ್ಲಿಗೆ ಹೋದದ್ದೆಂದು ಹೇಳಿದ್ದು ನಿಜವಿರಬಹುದೆ? ಅಥವಾ ಭೀಷ್ಮ ಮಾಡಿದ್ದು ತಪ್ಪೆಂದು ಅವನಿಗೆ ತೋರಿಸಿಕೊಟ್ಟು ಅವನ ಪ್ರತಿಜ್ಞೆಯನ್ನು ಭಂಗ ಮಾಡಿ ಒಬ್ಬಳು ಹೆಣ್ಣಿಗೆ ನ್ಯಾಯ ದೊರಕಿಸಿಕೊಡಲೆಂದು ಹೋದನೆ? ಇವ ಇಲ್ಲೇ ಇರುತ್ತಿದ್ದರೆ ಕಾಡಿಗೆ ಎಲ್ಲರೊಡನೆ ಬಂದುಬಿಡುತ್ತಿದ್ದ. ಅಸಹಾಯಕ ಹೆಣ್ಣಿಗೊಂದು ನೆಲೆ ಕಲ್ಪಿಸುವುದು ಇವನ ಉದ್ದೇಶವಾಗಿರಬೇಕು. ಹಾಗೆಂದು ಹೇಳಿಕೊಳ್ಳಲು ಇವನಿಗೆ ಅಳುಕಿದೆ. ಭೀಷ್ಮ ತರ್ಕದಲ್ಲಿ ಸೋತಿದ್ದರೂ ಪರಿಸ್ಥತಿ ಏನೂ ಬದಲಾಗುತ್ತಿರಲಿಲ್ಲ. ಅವನೆಂದೂ ತನ್ನ ಪ್ರತಿಜ್ಞೆಯನ್ನು ಭಂಗಗೊಳಿಸುತ್ತಿರಲಿಲ್ಲ.

ಮೆತ್ತನೆಯ ಸ್ವರದಲ್ಲಿ ಅಂಬೆಯೆಂದಳು: “ಗಿರಿನಾಯಕಾ, ನನಗೆ ಆ ಪೆಟ್ಟಿಗೆಯೊಳಗಿನ ಬಟ್ಟೆಗಳು ಬೇಡ. ಅವನ್ನು ಸೇವಂತಿಗೆ ಮತ್ತು ಇಲ್ಲಿನ ಹೆಂಗಸರಿಗೆ ಹಂಚಿಬಿಡು. ನನಗೆ ನೀವು ಸಿದ್ಧಪಡಿಸಿದ ಬಟ್ಟೆಗಳು ಇಷ್ಟವಾಗಿವೆ. ಇವಕ್ಕೆ ಪ್ರತಿಯಾಗಿ ಆ ಪೆಟ್ಟಿಗೆಯಲ್ಲಿರುವ ಚಿನ್ನಾಭರಣಗಳನ್ನು ನೀನೇ ಇಟ್ಟುಕೋ”.

ಗಿರಿನಾಯಕನ ಮುಖ ಬಾಡಿತು. ಪಶ್ಚಾತ್ತಾಪದ ದನಿಯಲ್ಲಿ ಅವನೆಂದ: “ಆ ಬಟ್ಟೆಗಳನ್ನು ನಾನು ವಿನಿಮಯಕ್ಕಾಗಿ ನೀಡಿದ್ದಲ್ಲ. ನೀವು ಎಷ್ಟು ಬೇಕಾದರೂ ಬಟ್ಟೆ ತೆಗೆದುಕೊಳ್ಳಿ. ನಿಮ್ಮನ್ನು ನಮ್ಮ ಉಡುಪಲ್ಲಿ ನೋಡಿ ಇವರೆಲ್ಲಾ ಎಷ್ಟು ಆನಂದ ಪಡುತ್ತಿದ್ದಾರೆ! ನಾವು ತಯಾರಿಸಿದ ಉಡುಪು ಸದುಪಯೋಗವಾಯಿತಲ್ಲಾ ಎಂಬ ಆನಂದ ಅದು. ನಿಮಗೆ ನಮ್ಮ ಬಟ್ಟೆ, ಆಹಾರ, ಈ ಸರೋವರ, ಆ ಕಾಡು- ಎಲ್ಲವೂ ಇಷ್ಟವಾಗಿವೆ. ನೀವೇಕೆ ಇಲ್ಲೇ ಇದ್ದುಬಿಡಬಾರದು? ನಿಮ್ಮ ವಿದ್ಯೆಯನ್ನು ನಮ್ಮ ಜನರಿಗೆ ನೀಡಿ. ನಿಮಗೆ ಆಧ್ಯಾತ್ಮಿಕ ಸಾಧನೆಗೆ ಅನುಕೂಲವಾಗುವಂತೆ ಪ್ರತ್ಯೇಕ ಕುಟೀರವೊಂದನ್ನು ನಿರ್ಮಿಸಿಕೊಡುತ್ತೇನೆ. ಸೇವೆಗೆ ಸೇವಂತಿ ಇರುತ್ತಾಳೆ. ನಿಮ್ಮಿಂದಾಗಿ ಈ ಗಿರಿನಗರಿಯ ಭವಿಷ್ಯ ಬದಲಾಗಲಿ. ನಾವು ನಿಮ್ಮ ನೆಮ್ಮದಿಗೆ ಭಂಗ ತರುವುದೇನನ್ನೂ ಮಾಡುವುದಿಲ್ಲ”.

ರಾತ್ರಿ ಅಂಬೆಗೆ ತುಂಬಾ ಹೊತ್ತು ನಿದ್ದೆ ಬರಲಿಲ್ಲ. ಪಕ್ಕದಲ್ಲಿ ಸೇವಂತಿ ಮೈಮರೆತು ಮಲಗಿದ್ದಾಳೆ. ಅಂಬೆ ಯೋಚಿಸತೊಡಗಿದಳು. ಇದ್ದುಬಿಡಲೆ? ನಾನು ಇಲ್ಲೇ ಇದ್ದು ಬಿಡುವುದೆ? ಯಾಕಾಗಬಾರದು? ಇವರಿಂದ ಧರ್ಮಾರ್ಥ ಸೇವೆ ಮಾಡಿಸಿಕೊಳ್ಳಬೇಕಾಗಿಲ್ಲ. ನನ್ನಲ್ಲಿರುವ ಚಿನ್ನಾಭರಣಗಳು ನನಗೆ ಜೀವನ ಪರ್ಯಂತ ಯಾವುದೇ ಸವಲತ್ತನ್ನು ಪಡೆಯಲು ಸಾಕಾದೀತು. ಇದ್ದುಬಿಡಲೆ? ಆದರೆ ಇಲ್ಲೇ ಇರುವುದಾದರೂ ಹೇಗೆ? ಈ ಜನರಲ್ಲಿ ಒಂದಾಗಿ ಬಿಡುವುದೆ? ಇವರಿಗೆ ವಿದ್ಯಾದಾನ ಮಾಡುತ್ತಾ ಆಧ್ಯಾತ್ಮಿಕ ಸಾಧಕಳಾಗಿ ಜೀವಮಾನಪೂರ್ತಿ ಇಲ್ಲಿ ಇದ್ದು ಬಿಡಲು ನನ್ನಿಂದ ಸಾಧ್ಯವೆ?

ಇನ್ನೊಂದು ಹಾದಿಯಿದೆ. ಅದು ಗಿರಿನಾಯಕನನ್ನು ಮದುವೆಯಾಗುವುದು! ಅವನ ಮನಸ್ಸಿನಲ್ಲಿ ಈಗ ಅಂತಹ ಆಲೋಚನೆಗಳಿಲ್ಲದಿರಬಹುದು. ಪ್ರತಿದಿನ ನನ್ನನ್ನು ಕಾಣುವಾಗ, ಈಗಲ್ಲದಿದ್ದರೂ ಮುಂದೊಂದು ದಿನ, ಅಂತಹ ಆಲೋಚನೆ ಮೂಡದಿರಲಾರದು. ಈಗಲೂ ನನ್ನನ್ನು ಕಂಡಾಗ ಅವನ ಕಣ್ಣುಗಳು ಹೊಳೆಯುತ್ತವೆ! ನನಗೂ ಒಂಟಿ ಜೀವನ ನೀರಸವಾಗ ಬಹುದು. ಒಂದಲ್ಲ ಒಂದು ದಿನ ನನ್ನ ದೇಹ ಗಂಡಿನ ಸುಖವನ್ನು ಬಯಸಬಹುದು. ಗಿರಿನಾಯಕ ಒಳ್ಳೆಯವನು. ಅವನಿಗೆ ಸರಿಕಂಡ ಹಾದಿಯಲ್ಲಿ ಹೋಗಿ ಭೀಷ್ಮರೊಡನೆ ವಾದಿಸಿ ಸೋತು ಬಂದಿದ್ದಾನೆ. ಈ ಗಿರಿನಾಯಕ ಹಸ್ತಿನಾವತಿಯ ಆಶ್ರಯದಲ್ಲಿರುವವನು. ಇವನ ಕೈ ಹಿಡಿದರೆ ನಾನು ಯಾವಜ್ಜೀವ ಪರ್ಯಂತ ಹಸ್ತಿನಾವತಿಯನ್ನು ಆಶ್ರಯಿಸಿದಂತಾಗುತ್ತದೆ. ಸಮ್ರಾಜ್ಞಿ ಯಾಗುವ ಯೋಗವನ್ನು ತಿರಸ್ಕರಿಸಿ ಬಂದವಳು ಆಶ್ರಿತಳಾಗಿ ಬದುಕುವುದೆ? ಅಂಬೆ ತುಂಬಾ ಹೊತ್ತು ಯೋಚಿಸಿದಳು. ಕೊನೆಗೆ ಒಂದು ತೀರ್ಮಾನಕ್ಕೆ ಬಂದ ಮೇಲೆ ಅವಳ ಮನಸ್ಸು ನಿರಾಳವಾಯಿತು. ಗಾಢ ನಿದ್ದೆ ಆವರಿಸಿಕೊಂಡಿತು.

ಬೆಳಿಗ್ಗೆ ಬೇಗನೆ ಎದ್ದು ನಿತ್ಯಾಹ್ನಿಕಗಳನ್ನು ಮುಗಿಸಿ ಗಿರಿನಾಯಕನನ್ನು ಕರೆದು ಅಂಬೆ ಕೇಳಿದಳು: “ಗಿರಿನಾಯಕಾ, ಸುಮ್ಮನೆ ಕುತೂಹಲಕ್ಕಾಗಿ ಕೇಳುತ್ತಿದ್ದೇನೆ. ನಿಜ ಹೇಳಬೇಕು. ಎಂದಾದರೂ ಹಸ್ತಿನಾವತಿಯಿಂದ ಸ್ವತಂತ್ರವಾಗಿ ಈ ಗಿರಿನಗರಿ ತನ್ನ ಅಸ್ತಿತ್ತ್ವವನ್ನು ಕಂಡುಕೊಳ್ಳಲು ಸಾಧ್ಯವೆ?”

ಗಿರಿನಾಯಕ ನತಮಸ್ತಕನಾಗಿ ಉತ್ತರಿಸಿದ: “ಇದು ನಮ್ಮ ತಲೆತಲಾಂತರದ ವಾಸಸ್ಥಾನ ರಾಜಕುಮಾರಿ. ಹಸ್ತಿನಾವತಿಗೆ ಕಂದಾಯ ಸಲ್ಲಿಸಬೇಕಾದದ್ದು ಅನಿವಾರ್ಯ ಸ್ಥಿತಿ. ಅದನ್ನು ನಿಲ್ಲಿಸಿಬಿಟ್ಟರೆ ಹಸ್ತಿನಾವತಿಯ ದಂಡು ಬಂದು ಬಿಡುತ್ತದೆ. ನಮ್ಮ ಬಿಲ್ಗಾರರ ಸಂಖ್ಯೆ ಬಹಳ ಕಡಿಮೆ. ಯುದ್ಧ ನಡೆದರೆ ನಾವೆಲ್ಲಾ ಕೆಲ ಕ್ಷಣಗಳಲ್ಲಿ ನಿರ್ನಾಮವಾಗಿ ಹೋಗುತ್ತೇವೆ. ಹಾಗಾಗಿ ನಾವು ಹಸ್ತಿನಾವತಿಯ ಪಾರಮ್ಯವನ್ನು ಒಪ್ಪಿಕೊಂಡೇ ಬದುಕಬೇಕಾಗುತ್ತದೆ”.

ರಾತ್ರೆ ಅವಳು ಕೈಗೊಂಡಿದ್ದ ತೀರ್ಮಾನಕ್ಕೆ ಈಗ ಸ್ಪಷ್ಟ ರೂಪ ಸಿಕ್ಕಿತು. ಶಾಂತವಾದ ನಿರ್ಧಾರದ ಸ್ವರದಲ್ಲಿ ಅವಳೆಂದಳು: “ಗಿರಿನಾಯಕಾ, ನಾನು ಎಲ್ಲಾದರೂ ಯಷ್ಯಾಶ್ರಮದಲ್ಲಿ ಶೇಷಾಯುಷ್ಯವನ್ನು ಕಳೆಯಲು ತೀರ್ಮಾನಿಸಿದ್ದೇನೆ. ನನಗೆ ಶಸ್ತ್ರಶಾಸ್ತ್ರ ಎರಡರಲ್ಲೂ ಪಾರಂಗತರಾದ ಸಾಧಕ ಋಷಿವರ್ಯರೊಬ್ಬರನ್ನು ತೋರಿಸಿಕೊಡುತ್ತೀಯಾ?”
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವ್ಯತ್ಯಾಸ
Next post ಮಾಡಿದ್ದ ನೆನೆದು ಮರುಗುವುದ ನೀನಿನ್ನು ಬಿಡು

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…