ಮಾಡಿದ್ದ ನೆನೆದು ಮರುಗುವುದ ನೀನಿನ್ನು ಬಿಡು :
ಬೆಳ್ಳಿ ಚಿಲುಮೆಗೆ ಕೂಡ ಕೆಸರಿದೆ, ಗುಲಾಬಿಗೂ
ಮುಳ್ಳಿದೆ, ಗ್ರಹಣ ಮುಗಿಲು ಅಡ್ಡ ಹಾಯುವ ಕೇಡು
ಸೂರ್‍ಯ ಚಂದ್ರರಿಗು ಇದೆ, ರಸಗರೆವ ಮೊಗ್ಗಿಗೂ
ಒಡಲಿನೊಳಗೇ ಕೆಟ್ಟ ಕೀಟವಿದೆ. ಕೇಡನ್ನು
ಮಾಡದ ಮನುಷ್ಯರೇ ? ಬಿಡು ನಾನೆ ಎಡವಿರುವೆ,
ಹೋಲಿಕೆಯ ನೀಡಿ ನಿನ್ನೆಲ್ಲ ತಪ್ಪುಗಳನ್ನು
ಒಪ್ಪೆಂದು ವಾದಿಸಿದ ಅಪರಾಧಿಯಾಗಿರುವೆ.
ಆದ ತಪ್ಪಿಗು ಹೆಚ್ಚು ಪಾಲು ಕ್ಷಮಿಸಿದೆ, ನಿನ್ನ
ವಿಷಯಾಪರಾಧಕ್ಕೆ ಹೊಸ ಅರ್ಥ ನೀಡಿದೆ ;
ಪ್ರತಿಕಕ್ಷಿಯೇ ಹಿತಾಕಾಂಕ್ಷಿಯೂ ಆಗಿ ನ-
ನ್ನೆದುರು ನಾನೇ ನಿಯಮಬದ್ಧ ವಾದವ ಹಿಡಿದೆ.
ಪ್ರೀತಿ ಹಗೆಗಳ ನಡುವೆ ನಡೆವ ನನ್ನೀ ಯುದ್ಧ
ಎಂಥದೆನೆ ನನ್ನ ಪ್ರಿಯಗಳ್ಳಗೇ ನಾ ಬದ್ಧ !
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 35
No more be grieved at that which thou hast done :
















