ಆರೋಪ – ೨

ಆರೋಪ – ೨

ಚಿತ್ರ: ಜೆರಾರ್‍ಡ್ ಗೆಲ್ಲಿಂಗರ್‍

ಅಧ್ಯಾಯ ೩

ಮರುದಿನ ಪಾಠಗಳು ಸುರುವಾದುವು. ಅರವಿಂದನಿಗೆ ಮೊದಲ ಪೀರಿಯಡಿಗೆ ಹತ್ತನೆ ಕ್ಲಾಸಿನಲ್ಲಿ ಇಂಡಿಯನ್ ಹಿಸ್ಟರಿ ಇತ್ತು. ಅರವಿಂದ ಜನರು ಯಾಕ ಇತಿಹಾಸ ಓದಬೇಕು ಎಂಬುದರ ಬಗ್ಗೆ ಆರಂಭಿಕವಾಗಿ ಮಾತಾಡಿದ. ಅಷ್ಟರಲ್ಲಿ ಕ್ಲಾಸು ಮುಗಿದ ಗಂಟೆಯಾಯಿತು. ಅವನು ಕ್ಲಾಸ್‌ರೂಮಿನಿಂದ ಹೊರ ಬರುತ್ತಿರಬೇಕಾದರೆ ಹಿಂದಿನ ಬೆಂಚಿನಿಂದ ಯಾರೋ ದೊಡ್ಡದಾಗಿ ಆಕಳಿಸಿದರು. ಅದಕ್ಕೆ ಉಳಿದವರು ಜೋರಾಗಿ ನಕ್ಕರು. ಅರವಿಂದನಿಗೆ ಮುಖಕ್ಕೆ ತಣ್ಣೀರೆರಚಿದ ಹಾಗಾಯಿತು. ಆದರೆ ಅದರ ಬಗ್ಗೆ ಚಿಂತಿಸುವುದಕ್ಕೆ ಸಮಯವಿರಲಿಲ್ಲ. ಒಂದರ ಮೇಲೊಂದರಂತೆ ಇನ್ನೂ ಎರಡು ಪೀರಿಯಡುಗಳಿದ್ದುವು. ಒಂದರಲ್ಲಿ ಭೂಗೋಳ, ಆಫ್ರಿಕಾ ಖಂಡದ ಬಗ್ಗೆ ಪಾಠ ಮಾಡಿದ. ಇನ್ನೊಂದರಲ್ಲಿ ಇಂಗ್ಲಿಷು ಹೀಗೆ ಕ್ಲಾಸಿನಿಂದ ಕ್ಲಾಸಿಗೆ ವಿಷಯದಿಂದ ವಿಷಯಕ್ಕೆ ಕುಪ್ಪಳಿಸಿ ಸುಸ್ತಾಗಿ ಸ್ಟಾಫ್ ರೂಮಿಗೆ ಬಂದು ಕುಳಿತ.

“ಇದೇ ಮೊದಲ ದಿನವೆ?”
ಯಾರೋ ಕೇಳಿದರು. ಅರವಿಂದ ತಲೆಯೆತ್ತಿ ನೋಡಿದ. ಗರಿಗರಿಯಾಗಿ ಸೀರೆಯುಟ್ಟು ಲಕ್ಷಣವಾದ ಹೆಂಗಸು. ಹಿತವಾದ ಸೆಂಟಿನ ಪರಿಮಳ ತೇಲಿಬಂತು.
“ಹೌದು,” ಎಂದ ಅರವಿಂದ.
“ಹೇಗನಿಸುತ್ತದೆ?”
“ಸುಸ್ತಾಗಿದ್ದೇನೆ.”
“ಮೊದಲು ಹಾಗೆಯೇ.”
“ಈ ಕೆಲಸ ನಿಮಗೆ ಇಷ್ಟವೇ?”
“ಕಲಿಸುವುದು ನನಗೆ ಇಷ್ಟ.”
“ಮೋನಾ ಮಿಸ್ತ್ರಿಯೆಂದರೆ ನೀವೇ?”
“ಹೌದು… ಯಾರು ಹೇಳಿದರು?”
“ಯಾರೋ ಹೇಳಿದರು.”

ಮೋನಾ ಮಿಸ್ತ್ರಿ ತನ್ನ ಬಗ್ಗೆ ಹೇಳಿದಳು, ಮುಂಬಯಿಯಲ್ಲಿ ಹುಟ್ಟಿ ಬೆಳೆದು ಅಲ್ಲೇ ಓದಿದವಳು. ನಂತರ ಮಂಗಳೂರು ಕಡೆ ಬಂದಳು. ಗಂಡ ವೆಟರಿನರಿ ಡಾಕ್ಟರ್, ಪಕ್ಕದ ಊರಿನಲ್ಲಿ ಕೆಲಸ. ಅಲ್ಲೇ ಸ್ವಂತ ಮನೆ ಜಮೀನು ಮಾಡಿಕೊಂಡಿದ್ದರು.

“ಏನಾದರೂ ತೊಂದರೆಗಳಿದ್ದರೆ ಹೇಳುವುದಕ್ಕೆ ಸಂಕೋಚಪಡಬೇಡಿ, ಫೀಲ್ ಫ್ರೀ” ಎಂದಳು ಆತ್ಮೀಯತೆಯಿಂದ. ವೆಂಕಟರಮಣ ಮೂರ್ತಿ ಅವಳ ಬಗ್ಗೆ ಎಬ್ಬಿಸಿದ ವಿರೋಧ ಆ ಮಾತಿಗೆ ತೊಡೆದು ಹೋಯಿತು.

“ಥ್ಯಾಂಕ್ಯೂ!” ಎಂದು ಹೇಳಿದ.

ನಂತರದ ದಿನಗಳಲ್ಲಿ ಮೋನಾ ಮಿಸ್ತ್ರಿಯ ಪರಿಚಯ ಇನ್ನಷ್ಟು ಆಯಿತು. ಶಾಲೆಯಲ್ಲಿ ಅತ್ಯಂತ ಜನಪ್ರಿಯ ಅಧ್ಯಾಪಿಕೆಯಾಗಿದ್ದಳು ಅವಳು. ಯಾವಾಗಲೂ ನಗುನಗುತ್ತ ಇರುತ್ತಿದ್ದಳು. ಚೆನ್ನಾಗಿ ಇಂಗ್ಲಿಷ್ ಮಾತಾಡುತ್ತಿದ್ದಳು. ಇಂಥ ಹೆಣ್ಣು ಈ ಪರಿಸರಕ್ಕೆ ಹೇಗೆ ಹೊಂದಿಕೊಂಡಳು ಎಂದು ಅರವಿಂದನಿಗೆ ಆಶ್ಚರ್ಯವಾಗುತ್ತಿತ್ತು. ಇಲ್ಲಿ ಹೆಚ್ಚಿನ ಅಧ್ಯಾಪಕರಿಗೂ ಕಲಿಸುವುದೊಂದು ಉಪಕಸುಬಾಗಿತ್ತು. ಮುಖ್ಯ ಕಸುಬಾಗಿ ಹೊಲ, ತೋಟಗಳಿದ್ದುವು. ಶಾಲೆ ಗಂಟೆ ಬಾರಿಸುವಾಗ ಬಂದು ಕೆಲಸ ಮುಗಿಸಿ ಎಂಟು ದಿಕ್ಕುಗಳಲ್ಲಿ ಮಾಯವಾಗಿಬಿಡುತ್ತಿದ್ದರು. ಇದಕ್ಕೆ ತಕ್ಕ ವಿದ್ಯಾರ್ಥಿಗಳು. ಬೇಸಾಯದ ದಿನಗಳಲ್ಲಿ ಮಕ್ಕಳ ಸಂಖ್ಯೆ ಒಮ್ಮೆಲೆ ಕಡಿಮೆಯಾಗಿಬಿಡುತ್ತಿತ್ತು, ಇಂಥ ಸ್ಥಿತಿಯಲ್ಲ ಮೋನಾ ಮಿಸ್ತ್ರಿ ಮಾತ್ರ ತನ್ನ ಉಲ್ಲಾಸವನ್ನು ಕಳೆದುಕೊಂಡವಳಲ್ಲ.

ಅರವಿಂದ ಆಕೆಯೊಂದಿಗೆ ಕ್ಲಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆಗಾಗ ಚರ್ಚಿಸುತ್ತಿದ್ದ. ಒಂದು ದಿನ ಶ್ರೀನಿವಾಸ ಎಂಬ ಹುಡುಗನೊಬ್ಬನನ್ನು ಸ್ಟಾಫ್ ರೂಮಿಗೆ ಕರೆದು ಜೋರುಮಾಡಬೇಕಾಗಿ ಬಂತು. ಒಂಬತ್ತನೆ ತರಗತಿಯಲ್ಲಿ ಓದುತ್ತಿದ್ದ ಹುಡುಗ ಯಾವಾಗಲೂ ಮಂಕಾಗಿ ಇರುತ್ತಿದ್ದ. ಪ್ರಶ್ನೆ ಕೇಳಿದರೆ ಮೌನವೇ ಉತ್ತರ ಇದರಿಂದ ಕ್ಲಾಸಿನ ಒಟ್ಟಾರೆ ಶಿಸ್ತು ಕೆಡುತ್ತಿರುವಂತೆ ಅನಿಸಿತ್ತು ಅರವಿಂದನಿಗೆ.

ಮೋನಾ ಮಿಸ್ತ್ರಿ ಅಲ್ಲಿದ್ದಳು. ಹುಡುಗನನ್ನು ಕಳಿಸಿದ ಮೇಲೆ ಅವಳು ಕೇಳಿ ದಳು :

“ಯಾವಾಗಲೂ ಮಂಕಾಗಿರುತ್ತಾನೆ ಅಲ್ಲವೆ?”
“ಹೌದು.”
“ಅವನ ಅಪ್ಪ ಅಪಘಾತವೊಂದರಲ್ಲಿ ತೀರಿಹೋದ. ಅಂದಿನಿಂದ ಶ್ರೀನಿ ಹೀಗೆಯೇ ಬಹುಶಃ ಮನಸ್ಸಿಗೆ ಶಾಕ್ ಆಗಿರಬೇಕು.”
ಮೋನಾ ಮಿಸ್ಕಿ ಶ್ರೀನಿಯ ಅಪ್ಪನ ಮರಣದ ಬಗ್ಗೆ ಹೇಳಿದಳು. ಆತ ರಸ್ತೆ ಅಪಘಾತದಲ್ಲಿ ಸತ್ತಿದ್ದ. ಒಂದು ದಿನ ಬೆಳಗ್ಗೆ ನಾಗೂರಿನ ಹೆದ್ದಾರಿಯಲ್ಲಿ ಅವನ ಹೆಣ ನಜ್ಜುಗುಜ್ಜಾಗಿ ಬಿದ್ದಿತ್ತು. ಯಾವುದೋ ವಾಹನ ಹರಿದುಹೋಗಿ ಆತ ಸತ್ತಿದ್ದಿರಬೇಕು.

“ಅವನ ಹೆಸರು ಸಂಕಯ್ಯ ಎಂದು, ಸಂಕಯ್ಯ ಇಡಿಯ ಊರಿಗೇ ಗೊತ್ತು. ಕಾರಣ ಅವನು ಒಂದು ಚೂರು ಗದ್ದೆಗೋಸ್ಕರ ಕರಿಗೌಡರ ವಿರುದ್ಧ ಸೆಣಸಾಡಿದವನು. ಈ ಊರಲ್ಲಿ ಅಂಥ ಧೈರ್ಯ ಇನ್ನು ಯಾರಿಗೂ ಇಲ್ಲ” ಎಂದಳು ಮೋನಾ.

“ಕರಿಗೌಡರು ಯಾರು?”
ಅರವಿಂದ ಕೇಳಿದ.
“ನಿಮಗೆ ಕರಿಗೌಡರು ಗೊತ್ತಿಲ್ಲವೇ? ರಾಮರಾಯರಂತೆ ಈ ಊರ ಇನ್ನೊಬ್ಬ ಗಣ್ಯವ್ಯಕ್ತಿ. ಗೌಡರ ಮಗನೊಬ್ಬ ಹತ್ತನೆ ಕ್ಲಾಸಿನಲ್ಲಿ ಓದುತ್ತಿದ್ದಾನೆ.”

ಮೋನಾ ಮಿಸ್ತ್ರಿ ಈ ಊರವಳಲ್ಲ. ಆದರೂ ಎಷ್ಟು ವಿವರಗಳನ್ನು ಅರಿತು ಕೊಂಡಿದ್ದಾಳೆ ಅನಿಸಿತು, ಶ್ರೀನಿಯ ಕುರಿತು ಕನಿಕರವೆನಿಸಿತು. ಒಂದು ದಿನ ಅವನನ್ನು ಮಾತಾಡಿಸುತ್ತ ಅವನ ಮನೆಯತನಕ ಹೋದ. ಮನೆಯಲ್ಲಿ ಅವನಲ್ಲದೆ ತಾಯಿ, ಅಕ್ಕ, ಚಿಕ್ಕ ಒಬ್ಬ ತಮ್ಮ ಇದ್ದರು. ಅಕ್ಕ ಲಕ್ಷ್ಮಿಯೇ ಮನೆಯನ್ನು ನೋಡಿ ಕೊಳ್ಳುವವಳು. ದಿನ ಬದುಕಿಗೆ ಎಲ್ಲರೂ ಬೀಡಿ ಹೊಸೆಯುತ್ತಿದ್ದರು. ಶ್ರೀನಿಗೆ ಓದಲು ಸಮಯವೇ ಸಿಗುತ್ತಿರಲಿಲ್ಲ. ಕೆಲಸದಲ್ಲಿ ಅಕ್ಕನಿಗೆ ನೆರವಾಗುತ್ತಿದ್ದ.

ಗೌಡರು ತಮ್ಮ ಹೊಲವನ್ನು ಕಸಿದುಕೊಂಡಿದ್ದಾರೆ ಎಂದು ಹೇಳಿದ. ತಂದೆಯ ಮರಣದ ಬಗ್ಗೆ ವಿವರಿಸಿದ, ಯಾರೂ ಅವರ ಸಹಾಯಕ್ಕೆ ಬರುತ್ತಿರಲಿಲ್ಲ. ಗೌಡರಿಗೆ ಎಲ್ಲರೂ ಹೆದರುತ್ತಿದ್ದರು. ಗೌಡರ ವಿರೋಧ ಕಟ್ಟಿಕೊಂಡ ಮೇಲೆ ಊರವರ ವಿರೋಧ ಕಟ್ಟಿಕೊಂಡ ಹಾಗೆಯೇ ಆಗಿತ್ತು.

ಲಕ್ಷ್ಮಿ ಅವನಿಗೆ ಕಾಫಿ ತಂದು ಕೊಟ್ಟಳು. ಇಪ್ಪತ್ತರ ಹರಯದ ಹೆಣ್ಣು, ಲಕ್ಷಣವಾಗಿದ್ದಳು. “ಸಿಹಿ ಸಾಕೆ?” ಎಂದು ಕೇಳಿದಳು. ಅಷ್ಟು ಕೇಳುವುದಕ್ಕೆ ಅವಳ ಮುಖ ಕೆಂಪಾಗಿತ್ತು.

ಇದಾದ ಕೆಲವು ದಿನಗಳ ನಂತರ ಒಂದು ಸಂಜೆ ಏನೋ ಓದುತ್ತ ಕುಳಿತಿದ್ದ. ಬಾಗಿಲ ಬಳಿ ಯಾರೋ ಬಂದು ನಿಂತ ಹಾಗೆ ಅನಿಸಿ ತಲೆಯೆತ್ತಿ ನೋಡಿದ. ಲಕ್ಷ್ಮಿ ನಿಂತಿದ್ದಳು ಅಳುಕುತ್ತ, ಕೈಯಲ್ಲಿದ್ದ ಪೊಟ್ಟಣವನ್ನು ಮೇಜಿನ ಮೇಲಿರಿಸಿದಳು.
“ಏನಿದು?” ಎಂದು ಕೇಳಿದ.
ಕೇಳುವ ಅಗತ್ಯವೇ ಇರಲಿಲ್ಲ. ಹುರಿದ ಗೇರು ಬೀಜದ ಪರಿಮಳ ಗಮ್ಮನೆ ಮೂಗಿಗೆ ಬಡಿಯುತ್ತಿತ್ತು.
“ಗೇರು ಬೀಜ.” ಅಂದಳು.
“ಯಾಕೆ ಇದೆಲ್ಲ?”
“ತಗೊಳ್ಳಿ…. ಒಬ್ಬರೇ ಇದ್ದೀರಿ.”
“ಇದು ಕೊಡಲೆಂದು ಇಷ್ಟು ದೂರ ಬಂದೆಯ?”
“ಹಾಗೇನಲ್ಲ. ನಾನು ದಿನ ಎರಡು ದಿನಕ್ಕೊಮ್ಮೆ ಬೀಡಿ ಡಿಪೋಗೆ ಬರುತ್ತಿರುತ್ತೇನೆ.”
“ಅದರಲ್ಲಿ ಬದುಕು ಸಾಗುತ್ತದೆಯೆ?”
“ಸಾಗುತ್ತದೆ ಹೇಗಾದರೂ”
ನಂತರ ಕೇಳಿದಳು :
“ಗುಡಿಸಿ ಸಾರಿಸಿ ಯಾರು ಮಾಡುತ್ತಾರೆ?”
“ನಾನೇ ಮಾಡಿಕೊಳ್ಳುತ್ತೇನೆ.”
“ಊಟ?”
“ಹೋಟೆಲಿನಲ್ಲಿ ನಡೆಯುತ್ತದೆ. ಕೆಲವೊಮ್ಮೆ ಕಾಫಿ ಮಾಡಿಕೊಳ್ಳುತ್ತೇನೆ.” “ಬಟ್ಟೆ ತೊಳೆಯೋದು?”
“ನಾನೇ?”
“ನೀವೇ !”
“ಯಾಕೆ?”
“ನಾನು ಬಂದು ಮಾಡಿ ಹೋಗುತ್ತೇನೆ ಸಾರ್,” ಎಂದಳು. ಅರವಿಂದ ಅವಳ ಕಣ್ಣುಗಳಲ್ಲಿನ ಹೊಳಪನ್ನು ನೋಡಿದ.
“ಬೇಡ ಲಕ್ಷ್ಮಿ,” ಎಂದ.
“ನೀವೇನೂ ಕೊಡಬೇಕಿಲ್ಲ”
“ಅದಕ್ಕಲ್ಲ…. ಅಂಥ ಕೆಲಸವೇನೂ ಇಲ್ಲ.”

ಅವನ ಸಂಕೋಚವನ್ನವಳು ಗಮನಿಸಿರಬೇಕು. ಹೊರಟು ಹೋದಳು. ಕಿಟಕಿಯ ಮೂಲಕ ಅವಳು ಹೋಗುವುದನ್ನು ನೋಡುತ್ತ ಬಹಳ ಹೊತ್ತು ಹಾಗೆಯೇ ಕುಳಿತಿದ್ದ. ಯಾಕೆ ಅವಳನ್ನು ನಿರಾಕರಿಸಿದೆ? ನನ್ನ ಬಗ್ಗೆ ನನಗೇ ನಂಬಿಕೆಯಿಲ್ಲವೇ ಎಂದು ಆಶ್ಚರ್ಯವಾಯಿತು.
*****

ಅಧ್ಯಾಯ ೪

ನಾಗೂರಿನ ಮೇಲೆ ಕರಿಗೌಡರ ನೆರಳು ದಟ್ಟವಾದ ಮೋಡದಂತೆ ಕವಿದಿತ್ತು, ಅವರನ್ನು ಹೊರಗೆ ನೋಡಿದವರು ಕಡಿಮೆ ಶಾಮರಾಯರಂತೆ ಅವರು ಸಾರ್ವಜನಿಕ ಜೀವನದಲ್ಲಿ ಬೆರೆಯುತ್ತಿರಲಿಲ್ಲ. ಆದರೆ ನಾಗೂರ ಮಂದಿಗೆ ಶಾಮರಾಯರು ಎಷ್ಟು ನಿಜವೋ ಕರಿಗೌಡರೂ ಅಷ್ಟೇ ನಿಜ. ಗೌಡರನ್ನು ಭಯಭಕ್ತಿಯಿಂದ ಕಾಣುವವರಿದ್ದರು. ಅವರ ಸುದ್ದಿಯನ್ನೇ ಎತ್ತದವರಿದ್ದರು. ಆದರೆ ಅವರನ್ನು ಎದುರುಹಾಕಿಕೊಂಡು ಬದುಕಿದವರು ಕಡಿಮೆ.

ಅರವಿಂದನಿಗೆ ಗೌಡರ ಭೇಟಿ ವಿಚಿತ್ರವಾದ ರೀತಿಯಲ್ಲಿ ಆಯಿತು.

ಹತ್ತನೆ ತರಗತಿಯಲ್ಲಿ ನಾಗೇಶನೆಂಬ ಹುಡುಗನಿದ್ದ. ಯಾವಾಗಲೂ ಕ್ಲಾಸಿನಲ್ಲಿ ತೊಂದರೆ ಕೊಡುತ್ತಿದ್ದ, ಅರವಿಂದ ಕಪ್ಪುಹಲಗೆಯಲ್ಲಿ ಬರೆಯಲು ತಿರುಗಿದರೆ ಹಿಂದಿನಿಂದ ವಿಕಾರವಾಗಿ ಕೂಗುತ್ತಿದ್ದ. ಮೊದಲ ದಿನ ತನಗೆ ಮುಖಭಂಗ ಮಾಡಿದವನೂ ಈತನೇ ಎಂದು ಅರವಿಂದನಿಗೆ ತಿಳಿದುಬಂದಿತ್ತು. ತಾಳ್ಮೆ ತಪ್ಪಿ ಒಂದು ದಿನ ಅವನನ್ನು ಕ್ಲಾಸಿನಿಂದ ಹೊರಕ್ಕೆ ಹಾಕಿದ. ಇಡೀ ಕ್ಲಾಸು ಸ್ತಬ್ಧವಾಯಿತು.
ಸಂಜೆ ಲೈಬ್ರರಿಯಲ್ಲಿ ಅರವಿಂದ ಯಾವುದೋ ಪುಸ್ತಕ ತಿರುವಿ ಹಾಕುತ್ತಿದ್ದ. ಶರ್ಟಿನ ಕೊನೆಯನ್ನು ಜಗಿದಹಾಗನಿಸಿತು. ವೆಂಕಟರಮಣ ಮೂರ್ತಿ ನಿಂತಿದ್ದರು.

“ಒಳ್ಳೇದು ಮಾಡಿದಿರಿ!” ಎಂದು ಪಿಸುಗುಟ್ಟಿದರು. ಅರವಿಂದ ಅರ್ಥವಾಗದೆ ಅವರ ಮುಖನೋಡಿದ.

“ನಾಗೇಶನನ್ನು ಕ್ಲಾಸಿನಿಂದ ಹೊರ ಹಾಕಿದಿರಂತಲ್ಲ.”
“ಹೌದು..?”
“ಒಳ್ಳೇದಾಯಿತು.”
ಅರವಿಂದ ಮಾತಾಡಲಿಲ್ಲ.
“ನಾಗೇಶ ಯಾರು ಗೊತ್ತೆ?”
“ಯಾರು?”
“ಕರಿಗೌಡರ ಮಗ,” ಎಂದು ಹಲ್ಲು ಕಿರಿದರು ಮೂರ್ತಿ.

ಅವರಿಗೆ ಇದರಿಂದ ಯಾವುದೋ ವಿಲಕ್ಷಣ ತೃಪ್ತಿ ದೊರಕಿದಂತಾಗಿತ್ತು. ಅದರಲ್ಲಿ ವಿಪತ್ತಿನ ಮುನ್ಸೂಚನೆಯೂ ಇದ್ದ ಹಾಗೆ ಅನಿಸಿತು ಅರವಿಂದನಿಗೆ. ಒಂದೆರಡು ವಾರಗಳು ಕಳೆದುವು. ನಾಗೇಶ ಈಗ ಸುಮ್ಮನಿರುತ್ತಿದ್ದ. ಆದರೂ ಅವನ ಮುಖದಲ್ಲಿದ್ದ ಹಗೆ ಅಳಿಸಿ ಹೋಗಿರಲಿಲ್ಲ.

ಒಂದು ರಜೆಯ ದಿನ, ಬೆಳಿಗ್ಗೆ ಎಚ್ಚರವಾದರೂ ಸುಮ್ಮನೆ ಮಲಗಿದ್ದ. ಹೊರಗೊಂದು ಕಾರು ಬಂದು ನಿಂತ ಸದ್ದಾಯಿತು. ಯಾರೋ ಬಂದು ಕದ ತಟ್ಟಿದರು.

ಎದ್ದು ಕದ ತೆರೆದ.
“ಗೌಡರು ಹೇಳಿ ಕಳಿಸಿದ್ದಾರೆ ಬರಬೇಕಂತೆ.”
“ಗೌಡರೆ? ಯಾವ ಗೌಡರು?”
“ಕರಿಗೌಡರು.”

ಯಾರು ಕರೆಕಳಿಸಿದರೂ ಹೋಗುವ ಅಗತ್ಯವಿರಲಿಲ್ಲ. ಆದರೂ ಈ ಮನುಷ್ಯ ಯಾರು ಎಂದು ನೋಡುವ ಕುತೂಹಲದಿಂದ ಡ್ರೈವರನೊಂದಿಗೆ ಹೊರಟ. ಕಾರು ಕಾಡಿನ ಪಕ್ಕದಲ್ಲಿ ಒಂದೆರಡು ಮೈಲಿ ಸಾಗಿ ಮನೆಯೊಂದರ ಮುಂದೆ ನಿಂತಿತು. ಅರಮನೆಯಂಥ ಭವ್ಯವಾದ ಹಳೆ ಕಾಲದ ಮನೆ. ಈ ಮನೆಯೇ ಗೌಡರ ಮನತನದ ಪ್ರಾಚೀನತೆಯನ್ನು ಹೇಳುತ್ತಿತ್ತು. ಅರವಿಂದನನ್ನು ಹಜಾರದಲ್ಲಿ ಕುಳಿತುಕೊಳ್ಳಿಸಿ ಡ್ರೈವರ್ ಗೌಡರಿಗೆ ತಿಳಿಸಲು ಒಳಗೆ ಹೋದ.

ಹಜಾರದ ಗೋಡೆಗಳಲ್ಲಿ ಫೋಟೋಗಳು, ಬೇಟೆಗೆ ಸಂಬಂಧಿಸಿದ ವಸ್ತುಗಳು, ತೂಗು ಹಾಕಿದ ಕೋವಿ, ಹದಮಾಡಿದ ಹುಲಿಚರ್ಮ ಇತ್ಯಾದಿ. ಒಂದು ಕಡೆ ಗೋಡೆಗಡಿಯಾರದ ಮೇಲಿಂದ ಕಾಟಿಯ ತಲೆ ಇಣುಕುತ್ತಿತ್ತು,

ದೊಡ್ಡ ದೊಡ್ಡ ನಾಯಿಗಳು ಎಲ್ಲಿಂದಲೋ ಬೊಗಳಿ ಸುಮ್ಮನಾದುವು.
ಸ್ವಲ್ಪ ಹೊತ್ತಿನಲ್ಲಿ ಗೌಡರು ಮಾಳಿಗೆಯಿಂದ ಇಳಿದು ಬಂದರು. ಆರಡಿ ಎತ್ತರದ ಗಂಭೀರವಾದ ನಿಲುವಿನ ಗೌಡರು ಹೆಸರಿಗೆ ತಕ್ಕಂತೆ ಕರ್ರಗಿದ್ದರು. ಖಾಕಿ ಪ್ಯಾಂಟು, ಶರ್ಟು ತೊಟ್ಟು ಬೇಟೆಯ ಡ್ರೆಸ್ಸಿನಲ್ಲಿದ್ದಂತೆ ಕಂಡು ಬಂದರು. ಐವತಕ್ಕೆ ಮೀರಿದ ವಯಸ್ಸು. ಯಾವುದೇ ಭಾವವಿಕಾರವನ್ನು ತೋರಿಸದ ಮುಖ.

“ಅರವಿಂದ ಎಂದಲ್ಲವೇ ನಿಮ್ಮ ಹೆಸರು?” ಎಂದರು ಗೌಡರು.
“ಹೌದು.”
“ನಿಮ್ಮ ಬಗ್ಗೆ ನಾಗೇಶ ಹೇಳಿದ್ದಾನೆ…. ನಾಗೇಶ ಗೊತ್ತೆ?”
“ಗೊತ್ತು.”
“ನಾಗೇಶ ನನ್ನ ಕೊನೆ ಮಗ.”
ಸ್ವಲ್ಪ ತಡೆದು ಗೌಡರು ಹೇಳಿದರು :
“ನನ್ನ ಹಿರಿಯ ಮಗ ಇಂಟರ್ ತನಕ ಓದಿದ. ಈಗ ಪಕ್ಕದ ಊರಿನಲ್ಲಿ ನಮ್ಮ ಇನ್ನೊಂದು ಜಮೀನು ನೋಡಿಕೊಂಡು ಇದ್ದಾನೆ. ನಾಗೇಶ ಹೆಚ್ಚು ಓದ ಬೇಕೆಂದು ನನ್ನ ಆಸೆ. ಮಂಗಳೂರಲ್ಲೋ ಬೆಂಗಳೂರಲ್ಲೋ ಅವನನ್ನು ಶಾಲೆಗೆ ಹಾಕಬಹುದಾಗಿತ್ತು. ಆದರೆ ಅಷ್ಟು ದೂರ ಈಗಲೇ ಕಳಿಸುವುದಕ್ಕೆ ಅವನ ತಾಯಿಗೆ ಮನಸ್ಸಿಲ್ಲ. ಆದ್ದರಿಂದ ಈ ಶಾಲೆಗೆ ಹೋಗುತ್ತಿದ್ದಾನೆ. ಹಳ್ಳಿ ಶಾಲೆ ಎಂದ ಮೇಲೆ ನಿಮಗೆ ಗೊತ್ತಿದೆಯಲ್ಲ… ಅವನಿಗೆ ಸ್ವಲ್ಪ ಟ್ಯೂಷನ್ ಕೊಡುವುದು ಸಾಧ್ಯವೆ ನಿಮಗೆ?”

“ನಾನು ಖಾಸಗಿಯಾಗಿ ಪಾಠ ಹೇಳುವುದಿಲ್ಲ” ಎಂದ ಅರವಿಂದ.
ಸ್ವಲ್ಪ ತಡೆದು ಹೇಳಿದ:
“ಅಲ್ಲದೆ ನಾಗೇಶನಿಗೆ ಟ್ಯೂಷನಿಗಿಂತಲೂ ಶಿಸ್ತಿನ ಅಗತ್ಯ ಹೆಚ್ಚು.”
ಗೌಡರ ಕಣ್ಣಿನ ಕೆಳಗೆ ಒಂದು ಸ್ನಾಯು ತುಸು ಅಲುಗಿತು.
“ಸಿಗರೇಟು?”
“ನನ್ನ ಬಳಿ ಇದೆ,” ಎಂದ ಅರವಿಂದ.
ಗೌಡರು ಚುರೂಟೊಂದನ್ನು ತುಟಿಗೇರಿಸಿಕೊಂಡರು.
“ಶಾಮರಾಯರು ಎಷ್ಟು ಕೊಡುತ್ತಾರೆ?”
“ಯಾಕೆ?”
“ನಾಲ್ಕು ಕಾಸು ಹೆಚ್ಚು ಸಿಗಬೇಕೆಂಬ ಆಸೆಯಿಲ್ಲವೆ?”
ಅರವಿಂದನಿಗೆ ಇದೆಲ್ಲ ಯಾಕೋ ಅತಿಯಾಯಿತೆನಿಸಿತು. ಬೇರೊಂದು ಸಂದರ್ಭದಲ್ಲಾಗಿರುತ್ತಿದ್ದರೆ ಹೂಂ ಎಂದುಬಿಡುತ್ತಿದ್ದ. ಯಾಕಿಲ್ಲ? ಹಣ ಮಾಡಲೆಂದೇ ಈ ಊರಿಗೆ ಬಂದಿದ್ದ. ಮೊದಲ ತಿಂಗಳ ಸಂಬಳ ಕೈಗೆ ಬಂದೊಡನೆ ಹೋಟೆಲು, ಅಂಗಡಿಗಳ ಲೆಕ್ಕ ಸಂದಾಯಿಸಿ ಉಳಿದುದನ್ನು ಪೋಸ್ಟಾಫೀಸಿನ ಉಳಿತಾಯ ಖಾತೆಯಲ್ಲಿ ಕಟ್ಟಿದ. ಹಾಗೆ ಈತನಕ ಜಮೆಯಾದ ಹಣ ದೊಡ್ಡ ಮೊತ್ತದ್ದೇನೂ ಅಲ್ಲ. ಖಾಸಗಿ ಟ್ಯೂಷನ್ ತೆಗೆದುಕೊಂಡರೆ ಹೇಗೆ ಎಂಬ ವಿಚಾರ ಆವನ ತಲೆಯಲ್ಲಿ ಸುಳಿಯದೆಯೂ ಇರಲಿಲ್ಲ. ಟ್ಯೂಷನ್‌ನಲ್ಲಿ ತಿಂಗಳಿಗೆ ನೂರಿನ್ನೂರು ಹೆಚ್ಚು ಸಂಪಾದಿಸುವ ಸಹೋದ್ಯೋಗಿಗಳೂ ಇದ್ದರು. ಆದರೆ ಗೌಡರು ತನ್ನನ್ನು ಕರೆಸಿದುದು ಆ ಉದ್ದೇಶದಿಂದಲ್ಲ ಎಂಬುದು ಅವನಿಗೆ ತಿಳಿದಿತ್ತು. ನಾಗೇಶನಿಗೆ ಟ್ಯೂಷನ್ ಕೊಡಿಸಬೇಕಾದರೆ ಇದರಲ್ಲಿ ಪಳಗಿದವರಿದ್ದರು.

“ಈ ವಿಷಯದಲ್ಲಿ ನೀವು ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ?” ಎಂದ.
ಗೌಡರ ತುಟಿಗಳಡೆಯಲ್ಲಿ ಆಡುತ್ತಿದ್ದ ಚುರೂಟು ಒಂದು ಕ್ಷಣ ನಿಂತಿತ್ತು. ಗೌಡರು ತಮ್ಮ ದಪ್ಪ ಕೈಬೆರಳುಗಳನ್ನು ಪರೀಕ್ಷಿಸುವಂತೆ ನೋಡಿದರು. “ಅದೂ ನಿಜ” ಎಂದರು. ನಂತರ, “ಸರಿ, ನಿಮ್ಮನ್ನು ಪೇಟೆ ತನಕ ಬಿಡುತ್ತೇನೆ,” ಎಂದು ರಶೀದ್‌ ಎಂದು ತಮ್ಮ ಡ್ರೈವರನನ್ನು ಕೂಗಿದರು.

“ಬನ್ನಿ!”

ಅರವಿಂದ ಡ್ರೈವರನ ಪಕ್ಕದಲ್ಲಿ ಕುಳಿತ. ಹಿಂದೆ ಗೌಡರು, ಗೌಡರ ಬೇಟೆ ನಾಯಿ. ಗೌಡರು ತಮ್ಮ ಜತೆ ಜೋಡು ನಳಿಗೆಯ ತೆರೆಕೊವಿಯೊಂದನ್ನು ತೆಗೆದುಕೊಂಡಿದ್ದರು.

ಸ್ವಲ್ಪ ದೂರ ಸಾಗಿದ ನಂತರ ಗೌಡರು ರಶೀದಿಗೆ ಕಾರನ್ನು ನಿಲ್ಲಿಸುವಂತೆ ಹೇಳಿದರು. ಕಾರು ಕಾಡಿನ ಪಕ್ಕದಲ್ಲಿ ನಿಂತಿತು.

“ಇಳಿಯಿರಿ!” ಗೌಡರು ಅರವಿಂದನಿಗೆ ನಿರ್ದೇಶಿಸಿದರು.

ಅರವಿಂದನಿಗೆ ಒಂದೂ ಅರ್ಥವಾಗಲಿಲ್ಲ. ಇಳಿದ.

“ನಮ್ಮ ಊರಿಗೆ ಬಂದ ಮೇಲೆ ಊರಿನ ಕಾಡನ್ನು ನೋಡದಿದ್ದರೆ ಹೇಗೆ?” ಇದು ನೋಡಿಕೊಂಡು ಹೋದರಾಯಿತು. ಬನ್ನಿ!” ಎಂದರು ಗೌಡರು. ಅವರ ಮಾತಿನಲ್ಲಿ ನಿರ್ಧಾರದ ಧ್ವನಿಯಿತ್ತು. ಬೆದರಿಕೆಯೆ? ಒತ್ತಾಯವೆ? ಅರವಿಂದ ತುಸು ಗೊಂದಲದಲ್ಲಿ ಬಿದ್ದ, ಬರುವುದಿಲ್ಲವೆಂದರೆ ಯಾರೂ ತನ್ನನ್ನು ಏನೂ ಮಾಡುವಂತಿರಲಿಲ್ಲ. ಆದರೆ ‘ಬರಬೇಕಂತೆ’ ಎಂದು ಹೇಳಿದಾಗ ಡ್ರೈವರನೊಂದಿಗೆ ಹೊರಟುಬಂದ ಕುತೂಹಲವೇ ಈಗ ಅವನನ್ನು ಕಾಡಿಗೂ ಹೋಗಲು ಪ್ರೇರೇಪಿಸುತ್ತಿತ್ತು.

ನೆಲವನ್ನು ಮೂಸುತ್ತ ನಾಯಿ ಮುಂದೆ ಹೋಯಿತು. ಗೌಡರು ಚುರುಕಾಗಿ ನಡೆಯತೊಡಗಿದರು. ಅವರ ಹಿಂದೆ ಅರವಿಂದ. ಡ್ರೈವರ್ ರಶೀದ್ ಕಾರಿನಲ್ಲಿ ಉಳಿದ. ಸ್ವಲ್ಪ ದೂರದವರೆಗೆ ಕಾಲು ಹಾದಿಯಲ್ಲಿ ಸಾಗಿ ನಂತರ ಅವರು ಕಾಡನ್ನು ಪ್ರವೇಶಿಸಿದರು. ಗಿಡಗಂಟೆಗಳು, ಮುಳ್ಳು ಬಲ್ಲೆಗಳ ನಡುವೆ ದಾರಿ ಮಾಡಿಕೊಂಡು ನಡೆಯಬೇಕಾಗಿತ್ತು. ಅರವಿಂದನಿಗೆ ಇದು ಹೊಸ ಅನುಭವ. ಬೇರೆ ಸಂದರ್ಭದಲ್ಲಾಗಿರುತ್ತಿದ್ದರೆ ಅವನಿದನ್ನು ಖುಷಿಪಡುತ್ತಿದ್ದ. ಗೌಡರು ಮಾತಾಡದೆ ಸಾಗುತ್ತಿದ್ದರು. ಆಗಾಗ ನಿಂತು ಸದ್ದುಗಳನ್ನು ಆಲಿಸುತ್ತಿದ್ದರು. ಅವರು ಬೇಟೆಯನ್ನು ಹುಡುಕುತ್ತಿರುವಂತೆ ಅನಿಸಿತು. ದಾರಿಯಲ್ಲಿ ಒಬ್ಬರೂ ಮಾತಾಡಲಿಲ್ಲ.

ಅರವಿಂದನಿಗೆ ಹೊಟ್ಟೆ ಹಸಿಯತೊಡಗಿತ್ತು. ಬೆಳಗಿನಿಂದ ಏನೂ ತಿಂದಿರಲಿಲ್ಲ. ಕಾಡಿನಲ್ಲಿ ನಡೆಯುತ್ತಿರುವಂತೆ ಮೈಕೈಯೆಲ್ಲ ಮುಳ್ಳಿನಿಂದ ಪರಚಿ ನೋಯು ತೊಡಗಿದುವು, ಇನ್ನಷ್ಟು ಹೊತ್ತು ಹೀಗೆ ನಡೆಯುತ್ತಿರಬೇಕಾದರೆ ಗೌಡರಿಂದ ತಾನು ತಪ್ಪಿಸಿಕೊಂಡಂತೆ ಅನಿಸಿತು. ಗೌಡರಾಗಲಿ, ಅವರ ನಾಯಿಯಾಗಲಿ ಎಲ್ಲೂ ಕಾಣಿಸಲಿಲ್ಲ.

ಅರವಿಂದ ಸುತ್ತಲೂ ನೋಡಿದ. ಎತ್ತರವಾಗಿ ಬೆಳೆದ ಮರಗಳು ದಪ್ಪವಾದ ಮುಳ್ಳುಪೊದೆಗಳು. ಅವನೀಗ ಒಂದು ಹಳ್ಳದಲ್ಲಿ ನಿಂತಿದ್ದ. ಗೌಡರು ಎಲ್ಲಿ ಹೋದರು? ಕಿವಿಗೊಟ್ಟು ಅವರ ಸದ್ದು ಕೇಳಿಸುತ್ತದೆ ಎಂದು ಆಲಿಸಿದ. ಕಾಡಿನ ನೈಸರ್ಗಿಕ ಸದ್ದುಗಳಲ್ಲದೆ ಇನ್ನೇನೂ ಕೇಳಿಸುತ್ತಿರಲಿಲ್ಲ. ಮಳೆ ಬೇರೆ ಸಣ್ಣಕೆ ಬೀಳಲು ಸುರುವಾಯಿತು.

“ಗೌಡರೇ !” ಎಂದು ಕೂಗಿದ.
ಉತ್ತರವಿಲ್ಲ. ತಾನು ಹಿಂಬಾಲಿಸುತ್ತಿದ್ದೇನೆಂದುಕೊಂಡು ಗೌಡರು ಬಹಳ ಮುಂದುವರಿದಿರಬೇಕು. ದಾರಿ ಗೊತ್ತಿಲ್ಲದ ಈ ಪ್ರದೇಶದಿಂದ ಹಿಂದಿರುಗುವುದು ಹೇಗೆ? ಅರವಿಂದ ಸಿಗರೇಟು ಹಚ್ಚಿ ಯೋಚಿಸತೊಡಗಿದ.

ತಟ್ಟನೆ ಕಿವಿಗಡಚಿಕ್ಕುವ ಗುಂಡಿನ ಸದ್ದು ಕೇಳಿಸಿತು. ಕೈಯಿಂದ ಸಿಗರೇಟು ಕೆಳಕ್ಕೆ ಬಿತ್ತು. ಇದೇನೆಂದು ನೋಡುವ ಮೊದಲೇ ಇನ್ನೊಂದು ಗುಂಡು ಪಕ್ಕದಲ್ಲೇ ಹಾದು ಹೋಯಿತು. ಒಂದು ಕ್ಷಣ ಎರಡೂ ಕಿವಿಗಳು ಕಿವುಡಾದಂತೆನಿಸಿದುವು.

ಎದುರುಗಡೆಯಿಂದ ಗೌಡರು ತಮ್ಮ ನಾಯಿಯೊಂದಿಗೆ ಇಳಿದುಬರುತಿದ್ದರು. ಕೋವಿಯ ನಳಿಗೆಗಳಿಂದ ಹೊಗೆ ಹೋಗುತ್ತಿತ್ತು. ಗೌಡರ ತುಟಿಗಳ ಮೇಲೆ ಕೆಟ್ಟ ನಗೆಯಿತ್ತು.

“ಗಾಬರಿಯಾಯಿತೆ? ನೋಡಿ, ನನ್ನ ಈಡಿನ ಜಾಣ್ಮೆಯನ್ನು ನಿಮಗೆ ತೋರಿಸೋಣವೆಂದು ಇಲ್ಲಿ ತನಕ ಕರೆದುಕೊಂಡು ಬಂದೆ. ಆದರೆ ಬೇಟೆ ಯಾವುದೂ ಸಿಗಲಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ನಾನೆಂದೂ ಈಡು ತಪ್ಪಿದಿಲ್ಲ…. ಈದಿನ ಕೂಡ!”

ಸ್ವಲ್ಪ ತಡೆದು ಗೌಡರು ಮುಂದುವರಿಸಿದರು :
“ನಿಮಗೆ ಕಾಡಿನ ಪರಿಚಯ ಸಾಕಷ್ಟು ಇಲ್ಲ ಅಲ್ಲವೆ? ಕಾಡಿನ ಕೆಲವು ನಿಯಮಗಳನ್ನು ಹೇಳುತ್ತೇನೆ ಕೇಳಿ, ಆಯುಧವಿಲ್ಲದೆ ಕಾಡನ್ನು ಪ್ರವೇಶಿಸಬಾರದು. ಹಿಂದಿರುಗುವ ದಾರಿ ನೆನಪಿರುವ ತನಕ ಮಾತ್ರ ಮುಂದವರಿಯಬೇಕು. ಯಾರು ಮೊದಲು ಆಕ್ರಮಿಸುತ್ತಾನೋ ಅವನು ಗೆಲ್ಲುತ್ತಾನೆ.”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀವನ ಒಂದು ಪಯಣ
Next post ಒಂದೆ ಒಲವು

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…