ತೋಟದಲಿ ಬಳುಕುತಿಹ ಬಳ್ಳಿಯೊಳಗರಳುತಿಹ
ಎಳೆಮೊಗ್ಗುಗಳಿಂದ ಚಿವುಟಿ ಕೈಯಲಿ ಹಿಡಿದು
ಹಸುಗೂಸ ಹಾಲ್ಕೆನ್ನೆಯಂತೆ ಮಿದುವಾಗಿರುವ
ದನಗಳನು ಕೆನ್ನೆಗಳಿಗೊತ್ತಿಕೊಂಡೆ !

ಗಳಿಗೆಗಳು ಉರುಳಿದುವು. ಕಾವಿನಲಿ ಎಳೆಮೊಗ್ಗು
ಬಸವಳಿದು ಬಾಡುತಲಿ ನಿರ್ಜೀವ ತರಗಾಯ್ತು.
ಹೃದಯದೊಳ ಕೊರಗಿನಲಿ ಕಂಗಳಲಿ ಹನಿಯಿಳಿದು
ಬಾಡಿದರಳಿಗೆ ನೀರನೆರೆದೆನಾಗ!

ಕಂದನನು ಕಳೆದೊಲವ ತಾಯಿ ಹೆಣ್ಣಿನ ಹಾಗೆ
ಮಲ್ಲಿಗೆಯ ಬಳ್ಳಿಗಳು ಕುಗ್ಗಿ ತಲೆ ತಗ್ಗಿಸಲು
ಎಲೆಗಳೆಲ್ಲವು ಮೌನ! ಸುಳಿವಿಲ್ಲ ಗಾಳಿಯದು!
ಎಲೆಯೊಡೆದು ಸಿಡಿದಿತ್ತು ಮೊಗ್ಗಿಗಾಗಿ!

ಆಗೆನಗೆ ಅರಿವಾಯ್ತು ಬಾಳ ಬಾನಿನ ಹಿಂದೆ
ಅರಳಿರುವ ಹೂವಿನೆದೆ ! ಬಳ್ಳಿಯಲಿ ತಾಯಾಗಿ,
ಮೊಗ್ಗಿನಲಿ ಮಗುವಾಗಿ, ಎಲೆಗಳಲಿ ಕುಲವಾಗಿ,
ಎಲ್ಲವನು ಆಳುವುದು ಒಂದೆ ಒಲವು!
*****