ಸಮುದ್ರದ ಗೀತೆ ಮುಗಿಯುವದಿಲ್ಲ
ಲೆಕ್ಕ ಪುಸ್ತಕದಲಿ ಬಾಕಿ ಕೊಡಬೇಕಾಗಿದೆ
ಋತುಗಳು ಬದಲಾಗುತ್ತವೆ
ಬಿಡುಗಡೆಯ ಕನಸುಗಳು ಕಾಣಬೇಕಾಗಿದೆ.

ಮಾತನಾಡಿದ ಮಾತುಗಳು
ಹಿಂದೆ ತೆಗೆದುಕೊಳ್ಳುವದಕ್ಕೆ ಬರುವುದಿಲ್ಲ.
ನೀಲ ಗಗನದ ಹೊಳೆವ ಚಿಕ್ಕಿಗಳು
ಹೊನ್ನ ಮರಳಿನಲಿ ಅಡಗುವುದಿಲ್ಲ.

ಬಯಕೆ ಪ್ರಾರ್ಥನೆಗಳು ಉಲಿದಾಗ
ಅವನು ಎದೆಗೆ ಅಪ್ಪಿಕೊಳ್ಳುವನು
ವಸಂತ ವೈಶಾಖದಲಿ ಹುಟ್ಟುವುದು
ಶಿಶಿರದಲಿ ಬಾಡುವುದು ಅಲೆಯ ಹಾಡು.

ನದಿಯ ತೀರದ ಚೆಲುವಿನ ಮರ
ಹಸಿದವರಿಗೆ ನೀಡುತ್ತದೆ ಫಲಗಳ
ಸಂಜೆ ಬೆಳಕಿನಾಚೆಯೊಳು
ಮುಳುಗುವ ಸೂರ್ಯ ಕನಸು ಕಟ್ಟುತ್ತಾನೆ.

ಮೌನದಲಿ ಹೂವುಗಳು
ಅರಳುವುದು ಬಾಡುವುದು
ಬೆಳಕಿನ ಸೂರ್ಯ ಬಯಕೆಯಂತೆ
ಅವುಗಳನ್ನು ಚುಂಬಿಸಿಯೇ ಚುಂಬಿಸುತ್ತಾನೆ.

ಸಾಗರಕ್ಕೆ ವಿರಹದಿಂದ ನಿದ್ರೆ ಇಲ್ಲ
ಇರುವ ಜ್ವಾಲೆಗೆ ಮನ ಸಿಲುಕಿದೆ
ಸಂತೈಸುವುದು ಮೌನದಲಿ ಅಲೆಗಳು
ಸಾಗರ ಮತ್ತು ನನ್ನನ್ನು ಕತ್ತಲಲಿ.

ಪ್ರೇಮದ ಅಕ್ಷರಗಳು ಒಂದು
ಮಾಡಿದವು ನಮ್ಮೆಲ್ಲರ ಕನಸುಗಳ
ಯಾರು ತಾನೆ ಅಗಲಿಸಬಲ್ಲರು
ಗೋರಿಯಲಿ ಒಂದಾದ ನಮ್ಮಾತ್ಮಗಳ.

ಮುಳುಗುವ ಸೂರ್ಯ ಸುರಿಸಿದ
ಚಿನ್ನದ ಅಂಚುಗಳ ಮೋಡಕೆ
ಆ ದೂರದಲಿ ಆತ್ಮ ನುಡಿಯಿತು
ಓ ದೇವರೇ ನನಗೆ ಜಾಗವಿದೆ ಎಂದು.

ತುಂಬ ಪ್ರೀತಿಸುದಕೆ ಬದುಕು ಒಂದು
ಮೆರವಣಿಗೆ ನಿಧಾನವಾಗಿ ಹೆಜ್ಜೆ
ಹಾಕಲಾರದವರು ಮೆಲ್ಲಕೆ ಸರಿವರು
ಪಕ್ಷಕ್ಕೆ ಚಲಿಸುವ ಸೂರ್ಯ ಕಂತಿದ ಹಾಗೆ.

ಏಕಾಂತದ ಬಿರುಗಾಳಿ ನಮ್ಮ
ಸುತ್ತ ಎಲ್ಲ ರೆಂಬೆಗಳ ಕತ್ತರಿಸಿ
ಬೇರುಗಳು ಇಳಿದಿವೆ ಜೀವಂತವಾಗಿ
ಭೂಮಿಯೊಳಗೆ ಸೂರ್ಯ ನಗುತ್ತಾನೆ.
*****

Latest posts by ಕಸ್ತೂರಿ ಬಾಯರಿ (see all)