ಕವೀಶ್ವರ, ಸುಹೃದ್ವರ, ನಿನ್ನ ಸಿರಿಗನ್ನಡದ
ಮಾತಿನೊಳು ಮೂಡುತಿಹ ಭವ್ಯ ಸುಂದರ ಕಾವ್ಯ-
ಕೋತು, ನುಡಿಯ ಬೆಡಗು ಹಾಡಿನ ಗುಂಗು ಊಹೆಯ
ನವೋನವ್ಯತೆ ಭಾವನೆಯ ಉದಾರತೆ-ಇವಕೆ
ಮನಸೋತು ರಸಾರ್ದ್ರಸ್ವಾಂತದಿಂ ಭಾವಿಪೆನು:
ಆವ ಬೀಳಾಸೆಯಿಂದಾದಾವ ಶಾಪಕ್ಕೊ
ಆವ ದುಷ್ಕೃತಿಯ ನಿಷ್ಕೃತಿಗೊ, ನಮ್ಮ ತಾಯ್ನುಡಿ
ತನಗಾದ ನಾಡಿನೊಳೆ ತಾನಮಂಗಳೆಯೆನಿಸಿ
ಹಿರಿಮೆಯ ನೀಗಿ ಹೆಸರನಳಿದು ರೂವಿಲಿಯಾಗಿ
ಬನ್ನ ಪಡುತಿರಲು, ತಪೋವಿಪಾಕಮೊದವಿತೆನೆ,
ತನ್ನತೆಯ ಜತೆಗೆ ದಿವ್ಯತೆಯನಳವಡಿಸಿ
ತಿರೆಗೆ ಸೋಜಿಗಮೀಕೆ ಎಂದು ಜನ ಬೆರಗಾಗೆ
ರೂಪವನಿತ್ತ ರಾಮನಾದೆಯೈ ದತ್ತರಾಮ,
ಗಾಳಿಗೂ ಬಾಳೀವ ರೂವಾರಿ, ಸಿದ್ಧ ಕಾಮ!
*****