ಬಾಗಿಲು ಬಡೀತಾರೆ

ಬಾಗಿಲು ಬಡೀತಾರೆ ಯಾರಿರಬಹುದು?
ಅದೂ ಇಂಥ ಹೊತ್ತು ಬಡ ಬಡ ಸದ್ದು
ಯಾರಿರಬಹುದು?
ಬಾಗಿಲ ತೆರೆಯೋ ಧೈರ್‍ಯವಿಲ್ಲ
ಯಾರಿರಬಹುದು-ಪೊಲೀಸರಿದ್ದಾರು
ಪಾರ್‍ಟಿಯವರಿದ್ದಾರು
ಎಡಪಕ್ಷ ಬಲಪಕ್ಷ ಜಾಸೂಸಿನವರು
ಕೊಂಡು ಹೋದವರ್‍ಯಾರೂ ಹಿಂದಕ್ಕೆ ಬಂದಿಲ್ಲ
ಬಂದವನೊಬ್ಬನ ನಾಲಿಗೆ ತುಂಡು
ಇನ್ನೊಬ್ಬನ ಕೈತುಂಡು ಮತ್ತೊಬ್ಬನ ಕಾಲ್ತುಂಡು
ಹಲವರಿಗೆ ಕಣ್ಣುಗಳೆ ಇಲ್ಲ
ಅಂಗಾಂಗ ಕತ್ತರಿಸಿ ಬಿಸಾಕುತಾರಂತೆ
ಇಲ್ಲ ತೆರೆಯೋಲ್ಲ ನಾ ಬಾಗ್ಲ ತೆರೆಯೋಲ್ಲ
ದೀಪ ಹಚ್ಚಲ್ಲ ಮಾತಾಡ್ದೆ ಇರ್‍ತೀನಿ
ಸತ್ತಂತೆ ಇರ್‍ತೀನಿ ಮೌನವಾಗಿ
ಹಗಲಾದ್ರೂ ಹೀಗೇನೆ ಇರುಳಾದ್ರೂ ಹೀಗೇನೆ
ಇಲಿಯಂತೆ ಇರಬೇಕು ಯಾರಿಗೂ ಕಾಣಿಸದೆ
ಹೊದ್ದು ಮಲಕೊಳ್ತೀನಿ ಸದ್ದು ಮಾಡದೆ ನಾನು
ಆದ್ರೂ ಬಿಡವಲ್ಲರು ಬಾಗಿಲ ಬಡಿತ
ಬಡೀತಾನೇ ಇದ್ದಾರೆ ಬಡ ಬಡ ಧಡ ಬಡ
ಕೈಲಿ ಬಡೀತಾರೆ ದೊಣ್ಣೆಯಲಿ ಬಡೀತಾರೆ
ಮೊನ್ನೆಯೂ ಹೀಗಿತ್ತು ನಿನ್ನೆಯೂ ಹೀಗಿತ್ತು
ಎಷ್ಟೊತ್ತಿಗೋ ಬಂದು ಬಡೀತಾನೆ ಇರ್‍ತಾರೆ
ನಾಳೇನೂ ಬಡೀತಾರೆ ನಾಡಿದ್ದು ಬಡೀತಾರೆ
ಒಂದಲ್ಲ ಒಂದಿನ ಕೊಂಡೋಗದು ಖಂಡಿತ
ನಾಳೆ ಬರೋದು ಇಂದೇ ಬರ್‍ಲಿ
ತೆರೆದೇ ಬಿಡ್ತೀನಿ ಆಗೋದು ಆಗ್ಲಿ
ನರಕಕ್ಕಿಂತ್ಲು ಅದರ ಭಯವೇ ನರಕಾಂತಾರೆ
ನಾ ಕಾಣದ ನರಕ ಇನ್ನೇನಿದೆ?
ಏನ್ ಬೇಕೋ ಅದು ಮಾಡ್ಳಿ ಏನಾದ್ರೂ ಕಿತ್ಕಳ್ಲಿ
ಕಾಯ ನನ್ದಲ್ಲ ಮನಸು ನನ್ದಲ್ಲ
ಇಂಥ ಭಯಗ್ರಸ್ತ ಊರ್‍ನಲ್ಲಿ
ನಿಲ್ಸಯ್ಯ ನಿನ್ನ ಬಾಗಿಲ ಬಡಿತ
ನಾನಿದೊ ಬಂದೆ ಬಾಗಿಲ ತೆರೆದೆ
ಖಂಡವಿದ ಕೋ ಮಾಂಸವಿದ ಕೊ
ಚಂಡ ವ್ಯಾಘ್ರನೆ ನೀನಿದೆಲ್ಲವನುಂಡು ಸುಖದಿಂದಿರು
ನಾಳೆ ಇನ್ನೊಂದ್ಮನೆ ಹೋಗಿ ನೋಡ್ಕೊ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿ ಬೇಂದ್ರೆಯವರನ್ನು ಕುರಿತು
Next post ಉಮರನ ಒಸಗೆ – ೩೫

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…