ಉಸಿರುಗಟ್ಟಿಸುವ ನಗರಿಯಲ್ಲಿ ಉದ್ಯಾನವಾಗಿದ್ದವರು

ಬೆಂಗಳೂರಿನ ಉದ್ದಗಲಕುಕ್ಕೂ ಚೈತನ್ಯವ ಹಂಚುವ ಸಂತನಂತೆ ಕಾಣಿಸಿಕೊಳ್ಳುತ್ತಿದ್ದ ಶತಾಯುಷಿ ನಿಟ್ಟೂರು ಶ್ರೀನಿವಾಸರಾವ್ ಇನ್ನು ನೆನಪಿನ ಮೊಗಸಾಲೆಯಲ್ಲೊಂದು ಪೇಂಟಿಂಗ್. ಸಾರ್ವಜನಿಕ ವಲಯದಲ್ಲಿ ಉನ್ನತ ಹುದ್ದೆಗಳ ಅಲಂಕರಿಸಿಯೂ ಚಾರಿತ್ರ್ಯ ಉಳಿಸಿಕೊಂಡಿದ್ದ ನಿಟ್ಟೂರರ ವ್ಯಕಿತ್ವದ ಕುರಿತು ಕೆಲವು ಟಿಪ್ಪಣಿಗಳು.

ಬುದ್ಧ ಎನ್ನುವ ಮನುಷ್ಯನ ಮುಗುಳು ನಗೆಗೆ ಸಾಮ್ರಾಜ್ಯಗಳನ್ನು ಆಳುವ ಕತ್ತುಗಳು ಹಾಗೂ ಕತ್ತಿಗಳು ತಲೆ ಬಾಗುತ್ತಿದ್ದವು. ಗಾಂಧಿ ಎನ್ನುವ ನರಪೇತಲ ಮನುಷ್ಯನ ಒಂದು ಕರೆಗೆ ಲಕ್ಷಾಂತರ ಮಂದಿ ಮರು ನುಡಿಯದೆ ಓಗೊಡುತ್ತಿದ್ದರು.

ಬುದ್ಧ, ಯೇಸು, ಜಿನ, ಗಾಂಧಿ ಮುಂತಾದವರ ಬಗೆಗಿನ ಇಂಥ ಘಟನೆಗಳನ್ನು ಓದುವಾಗ ಇದೆಲ್ಲಾ ನಡೆದದ್ದು ಹೇಗೆ ಅನ್ನಿಸುತ್ತದೆ. ಆ ಜಮಾನದ ಜನಗಳೇನು `ಕುರಿಗಳು, ಸಾರ್, ಕುರಿಗಳು’ ಅನ್ನುವ ಟೈಪಾ?  ಅಭಿಮಾನ ಅನ್ನುವುದು ಇಷ್ಟೊಂದು ಆತಿರೇಕಕ್ಕೆ ಹೋಗುತ್ತದಾ?  ಅನ್ನುವ ಅನುಮಾನ ಸುಳಿಯುತ್ತದೆ. ನಮ್ಮನ್ನೇ ತೆಗೆದುಕೊಳ್ಳಿ: ಇವತ್ತು ನಾವು ತುಂಬಾ ಗೌರವ ಇಟ್ಟುಕೊಂಡಿರುವ ವ್ಯಕ್ತಿಯಾದರೂ, ಆತನ ಹೇಳಿಕೆ-ಕರೆಯನ್ನು ಅನುಮಾನಿಸುತ್ತೇವೆ. ಗಂಡ ಹೆಂಡತಿಯನ್ನ ಹೆಂಡತಿ ಗಂಡನನ್ನ, ಅಪ್ಪ ಮಕ್ಕಳು ಪರಸ್ಪರರನ್ನ ನಂಬುವ ಪರಿಸ್ಥಿತಿಯಾದರೂ ಇದೆಯಾ? ಮನೆಯವರಲ್ಲೇ ಪರಸ್ಪರ ನಂಬಿಕೆಯಿಲ್ಲ
ಎಂದಮೇಲೆ ನೆರೆಹೊರೆಯವರನ್ನು ಗೆಳೆಯರನ್ನು ನಂಬುವುದು ದೂರವೇ ಉಳಿಯಿತು. ಇಷ್ಟೇ ಅಲ್ಲ ಎಷ್ಟೋ ವೇಳೆ ನಮ್ಮ ಮೇಲೆಯೇ ಅಪನಂಬಿಕೆ ಉಂಟಾಗಂತ್ತದೆ.

ಹೀಗೇಕೆ? ನಮ್ಮ ಪೂರ್ವೀಕರು ಯಾವ ಅನುಮಾನವೂ ಇಲ್ಲದೆ ಗಾಂಧಿಯನ್ನು ಅನುಸರಿಸುವುದು ಸಾಧ್ಯವಿತ್ತಾದರೆ ನಾವೇಕೆ ಇಂಥ ಅನುಮಾನ ಪಿಶಾಚಿಗಳಾಗಿರುವುದು?

ಇದೇ ಉತ್ತರ ಎಂದು ಗುರ್ತಿಸುವುದು ಕಷ್ಟ: ನಮ್ಮ ನಡುವೆ ಗಾಂಧೀಜಿಯಿಲ್ಲ ಈ ಮನುಷ್ಯ ಗಾಂಧಿಗೆ ಹತ್ತಿರವಾಗಬಲ್ಲ ಅನ್ನುವಂಥವರೂ ಇಲ್ಲ. ಹೀಗಿರುವಾಗ ನಂಬುವುದು ಯಾರನ್ನು? ಅಂದರೆ, ನಾವು ನಂಬಬಹುದಾದಂಥವರು ಅಥವಾ ನಮಗೆ ಆದರ್ಶವಾಗಬಲ್ಲರು ಅನ್ನುವಂಥವರು ಯಾರೂ ಇಲ್ಲ. ಇದು ಒಂದು ಸಮಾಜದ ತಾತ್ವಿಕ ದಿವಾಳಿಯ ಸಂಕೇತವೇ?

ಪಳೆಯುಳಿಕೆಗಳಂತೆ ಉಳಿದಿರುವ ಸ್ಥಾತಂತ್ರ್ಯ ಹೋರಾಟಗಾರರನ್ನು ಮಾತನಾಡಿಸಿ.  ಇಂದಿನ ಯುವ ಜನಾಂಗಕ್ಕೆ ಗುರಿಯೂ ಇಲ್ಲ ಗುರುವೂ ಇಲ್ಲ ಎಂದು ವಿಷಾದಿಸುತ್ತಾರೆ.  ನಮ್ಮ ವಿದ್ಯಾರ್ಥಿಗಳಿಗೆ ಮುಂದೆ ಮಾದರಿಗಳೆಂದು ಯಾರನ್ನು ತೋರಿಸುವುದು. ಒಬ್ಬರಿಗೆ ಬೋಪೊರ್ಸ್ ಇನ್ನೊಬ್ಬರಿಗೆ ಪೆಟ್ರೋಲ್ ಪಂಪ್, ಇನ್ನೊಬ್ಬರಿಗೆ ಶವದ ಪೆಟ್ಟಿಗೆ, ಮತ್ತೊಬ್ಬರಿಗೆ ದನದ ಮೇವು, ಹೆದ್ದಾರಿಯೂ ಭ್ರಷ್ಟಾಚಾರ ಮುಕ್ತವಲ್ಲ.. ಹೀಗಾಗಿ ಸಚ್ಚಾರಿತ್ರದ ಒಬ್ಬ ರಾಜಕಾರಿಣಿಯೂ ಸಿಗಲಿಕ್ಕಿಲ್ಲ ಆದರ್ಶ ರಾಜಕಾರಣಿ ಬಿಡಿ, ರಾಜಕಾರಣ ಅನ್ನುವಂಥದ್ದೇ ಈಗ ಅಪಮೌಲ್ಯಗೊಂಡಿದೆ. ಅಂದಮೇಲೆ, ನಮಗೆ ಆದರ್ಶವಾಗಬಲ್ಲ ರಾಜಕೀಯ ನಾಯಕರಿಲ್ಲ ಅನ್ನುವ ಮಾತು ನಿಜ. ಹಾಗಾಗಿ, ಆದರ್ಶ-ಪ್ರಾಮಾಣಿಕತೆ-ಮೌಲ್ಯ ಮುಂತಾದ ಮಾತುಗಳನ್ನು ರಾಜಕಾರಣದ ಹೊರಗೇ ಹುಡುಕುವುದು ಅನಿವಾರ್ಯ. ಬಹುಶಃ ಇಂಥ ಹುಡುಕಾಟ ನಿರರ್ಥಕವಾಗುವುದಿಲ್ಲ.  ಬಹಳಷ್ಟು ಮಂದಿ ಅಲ್ಲವಾದರೂ, ಬೆಟ್ಟು ಮಾಡಿ ತೋರಿಸುವಷ್ಟಾದರೂ ಮಂದಿ ಒಳ್ಳೆಯವರು, ಬದುಕನ್ನು ಅರ್ಥಪೂರ್ಣವಾಗಿಸಿಕೊಂಡವರು, ಇತರರ ಬದುಕಿಗೆ ಮಾದರಿ ಆಗಬಲ್ಲವರು ನಮ್ಮ ನಡುವಿದ್ದಾರೆ. ಸಾಲು ಮರದ ತಿಮ್ಮಕ್ಕ, ಎಚ್.ಎಸ್.ದೊರೆಸ್ವಾಮಿ, ಕರೀಂಖಾನ್, ಡಾ.ಎಚ್.ಸುದರ್ಶನ್ ಅಂಥವರನ್ನು ಈ ಸಾಲಿನಲ್ಲಿ ನೆನೆಯಬಹುದು.

ಆಗಸ್ಟ್ ೧೨ ರ ಗುರುವಾರ ನಿಧನರಾದ ನಿಟ್ಟೂರು ಶ್ರೀನಿವಾಸರಾಯರ ಚಿತ್ರವನ್ನು ಕಣ್ಣಲ್ಲಿ, ಎದೆಯಲ್ಲಿ ತುಂಬಿಕೊಂಡಾಗ ಹೀಗೆಲ್ಲ ಆನ್ನಿಸಿತು. ಆಗಸ್ಟ್ ೨೪ ನಿಟ್ಟೂರರ ಹುಟ್ಟುಹಬ್ಬ
*
ನಿಟ್ಟೂರು ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರೂ ಅವರು ಪ್ರಚಾರ ಪ್ರಿಯರಲ್ಲ ಅವರಿಗೆ ನೂರು ತುಂಬಿದ ಸಂದರ್ಭ ಇದಕ್ಕೆ ನಿದರ್ಶನ. ನಿಟ್ಟೂರು ಶತಕ ಬಾರಿಸಿದ ಸುದ್ದಿ ಮಾಧ್ಯಮಗಳಲ್ಲಿ ಅಷ್ಟೇನೂ ಪ್ರಚಾರ ಪಡೆಯಲಿಲ್ಲ ರಾಯರಿಗೆ ಶುಭಾಶಯ ಕೋರಿದ ಒಂದಾದರೂ ಜಾಹಿರಾತು ಪತ್ರಿಕೆಯಲ್ಲಿ ಕಾಣಿಸಲಿಲ್ಲ ನಿಟ್ಟೂರರ ಬಗ್ಗೆ ಒಂದೆರಡು ಬರಹೆಗಳನ್ನು ಪ್ರಕಟಿಸುವ ಮಾಲಕ ಪತ್ರಿಕೆಗಳು ಕೈ ತೊಳೆದುಕೊಂಡವು.  ರಾಜಕಾರಣಿಗಳಿಗೆ, ಸಾಹಿತಿಗಳಿಗೆ ಅರವತ್ತು ಎಪ್ಪತ್ತು ತುಂಬುವುದೇ ಪ್ರಮಖ ಸುದ್ದಿಯಾಗುವಾಗ- ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದ ವ್ಯಕ್ತಿಗೆ, ಕೆಲಕಾಲ ಹಂಗಾಮಿ ರಾಜ್ಯಪಾಲರಾಗಿದ್ದ ಹಿರೀಕನಿಗೆ, ನಾಡಿನ ಸಾಂಸ್ಕೃತಿಕ ವಾತಾವರಣದ ಒಂದಂಗವಾಗಿದ್ದ  ನೂರು ವರ್ಷ ತುಂಬಿದ್ದು ಒಂದು ಮಾಮೂಲಿ ಘಟನೆಯಂತೆ ಸಂದು ಹೋಯಿತು.

ನಿಟ್ಟೂರರನ್ನು ಹತ್ತಿರದಿಂದ ಬಲ್ಲವರಿಗೆ ಈ ಶತಕದ ಸರಳತೆ ಅರ್ಥವಾಗುತ್ತದೆ.  ಅಭಿಮಾನಿಗಳು ಒತ್ತಾಯದಿಂದ ಆಭಿನಂದನಾ ಸನ್ಮಾನ ಏರ್ಪಡಿಸಿದ್ದರು. `ನೂರು ತುಂಬಿದ್ದಕ್ಕೆ ನೀವೆಲ್ಲ ಯಾಕೆ ಸಂಭ್ರಮಿಸುತ್ತಿದ್ದೀರೋ ಕಾಣೆ, ನನಗಂತೂ ಏನೂ ಅನ್ನಿಸಿತ್ತಿಲ್ಲ’ ಎಂದರು.

ಬೆಂಗಳೂರಿನಲ್ಲಿ ವಾಸವಾಗಿದ್ದು ಸ್ವಲ್ಪ ಮಟ್ಟಿಗಾದರೂ ಸಾಂಸ್ಕೃತಿಕ ಬದುಕನ್ನು ಉಳಿಸಿಕೊಂಡಿರುವ ಎಲ್ಲರಿಗೂ ನಿಟ್ಟೂರು ಶ್ರೀನಿವಾಸ್‍ರಾವ್ ಪರಿಚಯ ಇರಲೇಬೇಕು.  ರಾಜಧಾನಿಯ ಬಹುತೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಅವರ ಹಾಜರಿಯ ಸಾಕ್ಷಿಯಿಲ್ಲದೆ ನಡೆದಿರಲಾರವು.  ಕಾರ್ಯಕ್ರಮಗಳಿಗೆ ಹಾಜರಾಗುವ ಮಟ್ಟಿಗೆ ಅವರದು ವಿಶ್ವ ದಾಖಲೆಯಿದ್ದರೂ ಇದ್ದೀತು. ನೂರರ ಇಳಿ ವಯಸ್ಸಿನಲ್ಲೂ ಒಪ್ಪಿಕೊಂಡ ಕಾರ್ಯಕ್ರಮವನ್ನು ಅವರು ತಪ್ಪಿಸುತ್ತಿರಲಿಲ್ಲ ಸಮಯಕ್ಕೆ ಸರಿಯಾಗಿ ಶ್ವೇತ ವಸ್ತ್ರಧಾರಿ, ಊರುಗೋಲಿನ ನಿಟ್ಟೂರು ಕಾರ್ಯಕ್ರಮದ ಸ್ಥಳಕ್ಕೆ ಹಾಜರಾಗಿರುತ್ತಿದ್ದರು.  ವಯೋಭಾರದಿಂದ ತುಸು ಬಾಗಿದ ಬೆನ್ನು ತೂರಾಡುವ ಕಾಲುಗಳನ್ನು ನೋಡಿ ಯಾರಾದರು ಕೈಯಾಸರೆ ನೀಡಲು ಹೋದರೆ ನಯವಾಗಿಯೇ ನಿರಾಕರಿಸುತ್ತಿದ್ದರು.  ಈಚೆಗೆ ಒಂದೆರಡು ವರ್ಷಗಳಿಂದ ನಿಟ್ಟೂರು ನಿಶ್ಶಕ್ತರಾಗಿದ್ದರು. ಆದರೂ ಸಹಾಯಕರ ನೆರವಿನಿಂದ ಕಾರ್ಯಕ್ರಮಗಳಿಗೆ ಬರುತ್ತಿದ್ದರು. ಎಷ್ಟು ಸರಳ ಮನುಷ್ಯರೋ ಅಷ್ಟೇ ಸ್ವಾಭಿಮಾನಿ ನಿಟ್ಟೂರು.

`ಆಜಾತ ಶತ್ರು’ ಎನ್ನುವ ವಿಶೇಷಣಕ್ಕೆ ನಿಟ್ಟೂರು ಹೇಳಿ ಮಾಡಿಸಿದ ವ್ಯಕ್ತಿ. ಸರಳತೆ, ನಿರಾಡಂಬರ, ಪ್ರಾಮಾಣಿಕತೆ, ಶಿಸ್ತು ಇವುಗಳೆಲ್ಲದರ ಸಂಗಮದ ನಿಟ್ಟೂರು ಮಾಜಿ ನ್ಯಾಯಾಧೀಶರು ಮಾತ್ರವಲ್ಲ ಸಾಮಾಜಿಕ ಕಾರ್ಯಕರ್ತ, ಬರಹಗಾರ, ಸಂಘಟಕರೂ ಆಗಿದ್ದರು. ಅವರು ಮಾತನಾಡುತ್ತಿದ್ದುದು ಕಡಿಮೆ. ಆದರೆ ಆಡಿದ ಪ್ರತಿ ಮಾತನ್ನೂ ತೂಕ ಮಾಡಿಯೇ ಆಡುತ್ತಿದ್ದರು. ಪೂರ್ವ ಸಿದ್ದತೆಯಿಲ್ಲದೆ ಯಾವ ವಿಷಯದ ಕುರಿತು ಮಾತನಾಡಲು ಅವರು ಇಷ್ಟಪಡುತ್ತಿರಲಿಲ್ಲ. ಮಾತೆಂಬುದು ಜ್ಯೋತಿರ್ಲಿಂಗ!

ನಿಟ್ಟೂರು ಜನಿಸಿದ್ದು ೧೯೦೩ರ ಆಗಸ್ಟ್ ೨೪ ರಂದು, ಬೆಂಗಳೂರಿನಲ್ಲಿ.  ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಪದವಿ, ಮದ್ರಾಸ್ ವಿಶ್ವ ವಿದ್ಯಾಲಯದಿಂದ ಕಾನೂನು ಪದವಿ ಪಡೆದರು. ಆರಂಭದಲ್ಲಿ ವಕೀಲಿ ವತ್ತಿ. ರಾಜ್ಯದ ಅಡ್ವೋಕೇಟ್ ಜನರಲ್ ಆದದ್ದು ೧೯೫೩ ರಲ್ಲಿ. ೧೯೫೫ ರಲ್ಲಿ ಮೈಸೂರು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕ. ೧೯೬೧ ರಲ್ಲಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾದೀಶರಾಗಿ ನೇಮಕ. ೧೯೬೩ರಲ್ಲಿ ನಿವೃತ್ತಿ- ೧೯೬೪ರಿಂದ ೬೮ರ ತನಕ ಭಾರತ ಸರ್ಕಾರದ ಮೊದಲ ಕೇಂದ್ರ ವಿಚಕ್ಷಣಾ ಆಯೋಗದ ಆಯುಕ್ತರಾಗಿ ಕರ್ತವ್ಯ. ಇದಿಷ್ಟೂ ನಿಟ್ಟೂರರು ಸರ್ಕಾರಿ ಅಧಿಕಾರಿಯಾಗಿ ಸಲ್ಲಿಸಿದ ಸೇವೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಕಾರ್ಯಕರ್ತರಾಗಿ ದುಡಿಯುವ ಮೂಲಕ ರಾಜಕಾರಣದಲ್ಲೂ ನಿಟ್ಟೂರು ಅನುಭವ ಪಡೆದಿದ್ದರು. ಅವರದ್ದು ಗಾಂಧೀಜಿ ನೆಚ್ಚಿದ್ದ ರಾಜಕಾರಣ.  ಆ ಕಾರಣದಿಂದಲೇ ಗಾಂಧಿಬೋಧೆಯಿಂದ ಪ್ರೇರಿತರಾಗಿ, ಖಾದಿ ಮತ್ತು ಹಿಂದಿ ಪ್ರಚಾರ ಆಂದೋಲನದಲ್ಲಿ ತೊಡಗಿಸಿಕೊಂಡರು. ನಿಟ್ಟೂರು ಪುಸ್ತಕ ಪ್ರೇಮಿಯೂ ಹೌದು. ೧೯೨೧ರಲ್ಲಿ ಸತ್ಯಶೋಧನ ಪ್ರಕಾಶನ ಮಂದಿರ ಮತ್ತು ಪುಸ್ತಕ ಮಳಿಗೆ ಪ್ರಾರಂಭಿಸಿದರು. ಕನ್ನಡದ ಬಹುತೇಕ ಲೇಖಕರ ಕೃತಿಗಳು ದೊರೆಯುವ ಕರ್ನಾಟಕದ ಮೊದಲ ಪುಸ್ತಕ ಮಳಿಗೆ ಸ್ಥಾಪಿಸಿದ ಅಗ್ಗಳಿಕೆ ಅವರದು. ಅಷ್ಟೇ ಅಲ್ಲ- ಶಿವರಾಮಕಾರಂತ, ಎಂ.ಆರ್.ಶ್ರಿನಿವಾಸಮೂರ್ತಿ, ಸಂಸ, ಗೋರೂರು, ಮುಂತಾದ ಖ್ಯಾತನಾಮರ ಪ್ರಾರಂಭದ ಕೃತಿಗಳನ್ನು ಪ್ರಕಟಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ರಾಯರದು ಅರ್ಧ ಶತಕದ ಸಂಬಂಧ.  ಬರೋಡದಲ್ಲಿ ನಡೆದ ಹೊರನಾಡ ಕನ್ನಡಿಗರ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ಬೆಂಗಳೂರಿನ ಗಾಂಧಿ ಶಾಂತಿ ಪ್ರತಿಷ್ಟಾನದ ಅಧ್ಯಕ್ಷರಾಗಿ, ಕರ್ನಾಟಕ ಪ್ರಕೃತಿ ಚಿಕಿತ್ಸಾ ಪರಿಷತ್ತಿನ ಅಧ್ಯಕ್ಷರಾಗಿ, ಲೋಕ ಶಿಕ್ಷಣ ಟ್ರಸ್ಟಿನ ಅಧ್ಯಕ್ಷರಾಗಿ ಅವರು ದುಡಿದಿದ್ದಾರೆ.  ಬರಹಗಾರರಾಗಿಯೂ ನಿಟ್ಟೂರಜ್ಜ ಪ್ರಸಿದ್ದರು. ಗಾಂಧೀಜಿಯ ಆತ್ಮ ಚರಿತ್ರೆ ಹಾಗೂ ಭಗವದ್ಗೀತೆಯ ಭಾಷ್ಯಗಳನ್ನು ಕನ್ನಡಕ್ಕ ತರ್ಜುಮೆ ಮಾಡಿದರು, ಗಾಂಧೀಜಿಯನ್ನು ಮನೆ ಮನೆಗೆ ತಲುಪಿಸಿದರು.

ನಿಟ್ಟೂರರನ್ನು ನೆನೆಯುವ ಬಹುತೇಕರು ಅವರು ಕಟ್ಟಿ ಬೆಳೆಸಿದ ಗೋಖಲೆ ಸಾರ್ವಜನಿಕ ಸಂಸ್ಥೆಯನ್ನೂ ನೆನೆಯುತ್ತಾರೆ. ಸಂಸ್ಥೆಯ ಕಚೇರಿಯಲ್ಲಿ ಪ್ರತಿದಿನ ಬರುವ ಪತ್ರಗಳಿಗೆ ಅಂದೇ ಉತ್ತರ ಬರೆಯುತ್ತ ಕೂರುವ ನಿಟ್ಟೂರರ ಚಿತ್ರ ಅನೇಕರ ಮನದಲ್ಲಿ ಅಚ್ಚಾಗಿದೆ.  ಮಂಕುತಿಮ್ಮನ ಕಗ್ಗದ ಡಿ.ವಿ.ಗುಂಡಪ್ಪನವರು ಗೋಖಲೆ ಸಾರ್ವಜನಿಕ ಸಂಸ್ಥೆ ಸ್ಥಾಪಿಸಿದಾಗ (೧೯೪೫) ಅವರೊಂದಿಗಿದ್ದ ನಿಟ್ಟೂರರು, ಗುಂಡಪನವರ ನಂತರವೂ
ಸಂಸ್ಥೆಯನ್ನು ಮುನ್ನಡೆಸಿದರು.

ರಾಜಕಾರಣದಲ್ಲಿ ಮೂಲಭೂತ ಮೌಲ್ಯಗಳನ್ನು ಅಳವಡಿಸಲು ಅಗತ್ಯವಾಗುವಂತೆ ಸಾರ್ವಜನಿಕ ಜೀವನದಲ್ಲಿ ಶಿಸ್ತು,  ಶಿಕ್ಷಣವನ್ನು ರೂಢಿಸುವ ಉದ್ದೇಶದಿಂದ ಡಿ.ವಿ.ಜಿ. ಮೂಲಕ ಸ್ಥಾಪನೆಯಾದ ಗೊಖಲೆ ಸಾರ್ವಜನಿಕ ಸಂಸ್ಥೆ ನಿಟ್ಟೂರರ ಸಾರಥ್ಯದಲ್ಲಿಂದು ಬೆಂಗಳೂರಿನ ಸಾಂಸ್ಥತಿಕ ಕೇಂದ್ರವಾಗಿ ಬೆಳೆದುನಿಂತಿದೆ.

೧೯೯೭ ರಲ್ಲಿ ಕರ್ನಾಟಕ ಸರ್ಕಾರ `ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿತು. ಆದರೆ, ನಿಟ್ಟೂರರಿಗೆ ಸಂದ ಅತ್ಯುಚ್ಚ ಗೌರವವೆಂದರೆ ಜನರ ಪ್ರೀತಿ. ಆ ಪ್ರೀತಿಯೇ ನೂರರ ಸಂಜೆಯಲ್ಲೂ ಅವರ ಬದುಕನ್ನು ಆಹ್ಲಾದವಾಗಿಸಿತ್ತು.
*

ಪ್ರತಿದಿನ ಬೆಳಗ್ಗೆ ಪತ್ರಿಕೆಗಳನ್ನು ಹರವಿಕೊಂಡು ಕೂರುವುದನ್ನು ಮೊಮ್ಮಕ್ಕಳೊಂದಿಗೆ ಮಗುವಾಗುವ ಉತ್ಸಾಹವನ್ನು ನಿಟ್ಟೂರರು ಕೊನೆವರೆಗೂ ಕಳೆದುಕೊಂಡಿರಲಿಲ್ಲ. ಕಾಲ ಕೆಟ್ಟುಹೋಯ್ತು ಅಂತಾರಲ್ಲ ಅದೆಲ್ಲಾ ಸುಳ್ಳು. ಅವತ್ತಿಗೆ ಆ ಕಾಲ ಚೆನ್ನಾಗಿತ್ತು. ಈವತ್ತಿಗೆ ಈ ಕಾಲ ಚೆನ್ನಾಗಿ ಕಾಣ್ತಿದೆ. ಅಷ್ಟೇ… ಎನ್ನುವ ನಂಬಿಕೆಯ ಅವರು, `ನನಗೆ ಬೇಸರ ಅನ್ನುವುದೇ ಅಗುವುದಿಲ್ಲ ಬೇಸರ ಆಗುವಷ್ಟು ವೇಳೆಯೂ ನನ್ನಲ್ಲಿಲ್ಲ’ ಎನ್ನುವಂಥ ಜೀವನೋತ್ಸಾಹ ಹೊಂದಿದ್ದವರು.

`ಸಾಂಸ್ಕೃತಿಕ ಬದುಕಿಲ್ಲದ ಮನುಷ್ಯ ಪಶುವಿಗೆ ಸಮಾನ ಎನ್ನುವುದು ನಿಟ್ಟೂರರ ನಂಬಿಕೆಯಾಗಿತ್ತು. ಬದುಕೆನ್ನುವುದು ಪ್ಲಾಸ್ಟಿಕ್ ಹೂವಿನಂತಾಗಿ, ಬೆಂಗಳೂರೆನ್ನುವುದು ಕಾಂಕ್ರೀಟ್ ಕಾಡಿನಂತಾಗಿರುವ ಸಂದರ್ಭದಲ್ಲಿ ನಿಟ್ಟೂರು ಶ್ರೀನಿವಾಸ್ ಅಂಥವರು ಹಸಿರು ಹಣ್ಣು ತುಂಬಿದ ಉದ್ಯಾನದಂತೆ ಕಾಣುತ್ತಿದ್ದರು. ಆ ಉದ್ಯಾನದಲ್ಲಿ ಉತ್ಸಾಹ ಕಳೆದುಕೊಂಡವರು ಉತ್ಸಾಹ ತುಂಬಿಕೊಳ್ಳಬಹುದಿತ್ತು, ಉಸಿರುಕಟ್ಟಿದವರು ಜೀವವಾಯು ಹೊಂದಬಹುದಿತ್ತು. ಇಂಥ ಸಾಂಸ್ಕೃತಿಕ ಉದ್ಯಾನಗಳು ತುಂಬಾ ನಗರಗಳಲ್ಲಿ ಇರುವುದಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಯಮಂಗಳಂ ಜಯ ಜಗತ್ಯಾಳು
Next post ಗಟಾರಕ್ಕೆಸೆದ ೨೩ ಲಕ್ಷ ರೂ…ಹಾಗು ಇತಿಹಾಸ.

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys