ಗಟಾರಕ್ಕೆಸೆದ ೨೩ ಲಕ್ಷ ರೂ…ಹಾಗು ಇತಿಹಾಸ.

ಇದು ನಡೆದುದು ಬಹಳ ವರ್ಷಗಳ ಹಿಂದೆ ಎಂದಾಗಲಿ ಅಥವ ತೀರಾ ಇತ್ತೀಚೆಗೆ ಎಂದಾಗಲಿ ಹೇಳುವಂತಿಲ್ಲ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಡಾ. ಎಂ ಎಂ ಕಲಬುರ್ಗಿಯವರು ನಿವೃತ್ತರಾಗುವ ಸ್ವಲ್ಪ ಮುಂಚೆ. ಚಲನ ಚಿತ್ರಗಳ ಕುರಿತಂತೆ ಒಂದು ವಿಚಾರಸಂಕಿರಣಕ್ಕೆ ಡಾ. ವಿಜಯಾ, ಮಧುರೈ ವಿಶ್ವವಿದ್ಯಾಲಯದ ಡಾ. ಹರೀಶ್‌ಭರಣಿ, ಕುಂ ವೀರಭದ್ರಪ್ಪ ಹಾಗು ನಾನು ಉಪನ್ಯಾಸ ನೀಡಲು ಆಹ್ವಾನಿತರಾಗಿದ್ದೆವು.

ಉಪನ್ಯಾಸದನಂತರ ಕಲಬುರ್ಗಿಯವರು ಉಪಹಾರಕ್ಕೆಂದು ತಮ್ಮ ಮನೆಗೆ ಉಪನ್ಯಾಸಕರನ್ನು ಆಹ್ವಾನಿಸಿದರು. ಉಪಹಾರದನಂತರ ಸಹಜವಾಗಿಯೇ ಮಾತು ಸಿನಿಮಾ ಕುರಿತಂತೆ ಹೊರಳಿತು. ವಿಶ್ವವಿದ್ಯಾಲಯಗಳು ಸಿನಿಮಾ ಬಗೆಗೆ ತೋರುತ್ತಾ ಬಂದಿರುವ ಉಪೇಕ್ಷೆಯ ಬಗೆಗೆ ನಾನು ಮಾತನಾಡುತ್ತಾ ‘ಸುಮಾರು ೫೦ ರಿಂದ ೬೦ ಕೋಟಿ ನಿರ್ಮಾಣ ವಹಿವಾಟುಳ್ಳ ಒಂದು ಕ್ಷೇತ್ರ, ಅದರ ಸಾಮಾಜಿಕ ಪರಿಣಾಮ, ಸೃಜನಶೀಲತೆ, ವಿಮರ್ಶೆ, ಇತ್ಯಾದಿ ಒಳನೋಟವುಳ್ಳ ವಿಶ್ಲೇಷಣೆ/ಮಾಹಿತಿಯ ಕೊರತೆ ಕುರಿತಂತೆ ಕಲಬುರ್ಗಿಯವರ ಗಮನ ಸೆಳೆದಾಗ ‘ನೀವು ಯಾರಾದರೂ ಮುಂದೆ ಬಂದು ಕೆಲಸ ಮಾಡಿದರೆ ಅದನ್ನು ವಿಶ್ವವಿದ್ಯಾನಿಲಯ ಪ್ರಕಟಿಸುವ ಜವಬ್ದಾರಿ ಹೊರಲು ತಯಾರಿದೆ’ ಎಂದು ಸ್ಥಳದಲ್ಲೇ ಘೋಷಿಸಿದರು. ‘ಇದೊಂದು ಉಪಾಹಾರದ ಸಂದರ್ಭದಲ್ಲಿನ ಘೊಷಣೆ ಎಂದಂದುಕೊಂಡು ನಾನು ಸುಮ್ಮನಾದೆ. ಜೊತೆಗೆ ಕನ್ನಡ ಸಿನಿಮಾ ರಂಗದವರೊಡನೆ ಮುಂಚಿನಿಂದಲೂ ನನ್ನದು ಒಂದು ರೀತಿಯ ಅಂಟಿಯೂ ಅಂಟದಂತಹ ನಂಟು. ಸಂಘಟಿಸುವ ಚೈತನ್ಯದ ಕೊರತೆ ನನ್ನಲ್ಲಿದ್ದುದರಿಂದಲೂ ನಾನು ಸುಮ್ಮನಾಗಬೇಕಾಯಿತು.

ನಂತರದ ಕೆಲವು ದಿನಗಳಲ್ಲಿ, ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ವಿಶ್ವವಿದ್ಯಾನಿಲಯಗಳ ಸಹಯೋಗದಲ್ಲಿ ಕನ್ನಡ ಚಲನಚಿತ್ರ ಇತಿಹಾಸ ಕುರಿತಂತೆ ಸಮಗ್ರ ಮಾಹಿತಿಯುಳ್ಳ ಕೃತಿಗಳ ರಚನೆ ಹಾಗು ಪ್ರಕಟಣೆಯ ಕಾರ್ಯ ಕೈಗೊಂಡಿರುವುದರ ಬಗೆಗೆ ಅಲ್ಲಲ್ಲಿ ವರದಿಗಳನ್ನು ಓದಿದೆ.

‘ಕನ್ನಡ ಚಲನಚಿತ್ರ ಇತಿಹಾಸ’ ಇದರ ಪ್ರಧಾನ ಸಂಪಾದಕರಾದ ಡಾ. ವಿಜಯಾರವರು ಕಳೆದ ಮೂರು ದಶಕಗಳಿಂದ ಕನ್ನಡ ಚಿತ್ರೋದ್ಯಮದೊಂದಿಗೆ ನಿಕಟ ಬಾಂಧವ್ಯ ಇಟ್ಟುಕೊಂಡಿರುವವರು, ಚಲನಚಿತ್ರದ ಬಗೆಗೆ ಗಂಭೀರ ಆಸಕ್ತಿ ಉಳ್ಳವರು ಮತ್ತು ಹಿರಿಯರು. ನಿಷ್ಠುರವಾದ, ವಸ್ತುನಿಷ್ಠವಾದ ವಿಮರ್ಶೆ, ಲೇಖನ, ವರದಿಗಳನ್ನು ಪ್ರಕಟಿಸಿ ಗೌರವಾನ್ವಿತ ಸ್ಥಾನಗಳಿಸಿರುವವರು.

ಈಗ ‘ಕನ್ನಡ ಚಲನ ಚಿತ್ರ ಇತಿಹಾಸ’ ೨೩ ಲಕ್ಷ ರೂ.ಗಳ ವೆಚ್ಚದನಂತರ ಬಿಡುಗಡೆಯಾಗಿ, ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯಲಾಗಿದೆ. ಅಂದರೆ ಪರೋಕ್ಷವಾಗಿ ಹಿಂದಕ್ಕೆ ನಿಷೇಧಿಸಲಾಗಿದೆ. ವಿಶ್ವವಿದ್ಯಾಲಯದ ಸಿಂಡಿಕೇಟ್ ಈ ‘ವಾಪಸಾತಿಗೆ’ ಸೂಕ್ತ ಕಾರಣಗಳನ್ನು ನೀಡಿಲ್ಲ. ೨೩ ಲಕ್ಷ ರೂ. ಗಳನ್ನು ವ್ಯಯ ಮಾಡಿ ಪ್ರಕಟಿಸಿದ ಕೃತಿಯನ್ನು ಹಿಂದಕ್ಕೆ ಪಡೆಯುವ ಅವಶ್ಯಕತೆ ಏನಿತ್ತು? ಬರಿ ಗುಣಮಟ್ಟದ ಕೊರತೆಯೊಂದೇ ಆಗಿದ್ದರೆ ಅದನ್ನು – ಪರಿಷ್ಕರಣದಲ್ಲಿ ಸರಿ ಮಾಡುವ, ಈಗಾಗಲೇ ಖರೀದಿಸಿರುವವರಿಗೆ ‘ಹೆಚ್ಚಿನ’ ರಿಯಾಯ್ತಿ ಮಟ್ಟದಲ್ಲಿ ನೀಡುವ ಸರಳ ಪರಿಹಾರವಿತ್ತು. ಆದರೆ ಅದ್ಯಾವುದನ್ನೂ ಯೋಚಿಸದೆ ‘ತಟಕ್ಕನೆ’ ಹಿಂದಕ್ಕೆ ಪಡೆಯಲಾಗಿದೆ.

ಹಿಂದಕ್ಕೆ ಪಡೆದುದರ ಹಿನ್ನೆಲೆ:

ಚಲನಚಿತ್ರ ವಾಣಿಜ್ಯ ಮಂಡಳಿ ಹಾಗು ಕನ್ನಡ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿನ ‘ಕನ್ನಡ ಚಲನಚಿತ್ರ ಇತಿಹಾಸ’ ಕೃತಿ ಯೋಜನೆ ಅನುಷ್ಠಾನಕ್ಕೆ ತರಲು ಆಸ್ಥಿತ್ವಕ್ಕೆ ಬಂದ ಸಂಪಾದಕೀಯ ಮಂಡಲಿಯಲ್ಲಿ ಗಂಗಾಧರ್ ಮೊದಲಿಯಾರ್ ಸೇರಿದಂತೆ ಸಾಕಷ್ಟು ಜನರಿದ್ದರು. ಪ್ರಧಾನ ಸಂಪಾದಕರಾಗಿ ಡಾ.ವಿಜಯಾರವರಿದ್ದರು.

ಸಾಕಷ್ಟು ಕಾಲ ಸಭೆಗಳಾದವು. ಲೇಖಕರನ್ನು ಸಂಪರ್ಕಿಸಲಾಯಿತು. ಕೆಲಸ ಮುಂದುವರಿಯುತ್ತಿದ್ದ ರೀತಿಗೆ ಅತೃಪ್ತರಾದ ಗಂಗಾಧರ್ ಮೊದಲಿಯಾರ್ ಸಂಪಾದಕೀಯ ಮಂಡಳಿಯಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರಬಂದರು. ರಾಜಿನಾಮೆ ಸ್ವೀಕರಿಸಿದ ಚಲನಚಿತ್ರ ವಾಣಿಜ್ಯ ಮಂಡಳಿಯವರು ಗಂಗಾಧರ್‌ಮೊದಲಿಯಾರ್‌ರ ರಾಜಿನಾಮೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ಸೂಚಿಸಲಿಲ್ಲ. ಡಾ. ವಿಜಯಾ ಹಾಗು ಗಂಗಾಧರ್ ಮೊದಲಿಯಾರ್ ರ ನಡುವೆ ಅನೇಕ ಭಿನ್ನಾಭಿಪ್ರಾಯ/ವೈಮನಸ್ಯಗಳಿದ್ದು ಆ ಕಾರಣಕ್ಕೆ ‘ಇಬ್ಬರೂ ಸೂಕ್ತ ರೀತಿಯಲ್ಲಿ ಪರಸ್ಪರ ಸಹಕರಿಸುತ್ತಿಲ್ಲ’ ಎಂಬ ಒಳಕಾರಣದಿಂದಾಗಿ ಸುಮ್ಮನಾಗಿರಬೇಕು.

ಗಂಗಾಧರ್‌ಮೊದಲಿಯಾರ್ ರಾಜಿನಾಮೆ ನೀಡಿದನಂತರದ ವರ್ಷಕ್ಕೆ ಈಗ ‘ಕನ್ನಡ ಚಲನಚಿತ್ರ ಇತಿಹಾಸ’ ಬಿಡುಗಡೆಯಾದ ವೇಗದಲ್ಲೇ ನಿಷೇಧಕ್ಕೊಳಗಾಗಿದೆ. ಯಾವ ಕಾರಣಗಳಿಗಾಗಿ ಈ ನಿಷೇಧ ಎಂಬ ಬಗೆಗೆ ಆಲೋಚಿಸಿದಾಗಲೇ ‘ಈ ಎಲ್ಲರ/ಎಲ್ಲದರ’ ಬಗೆಗೆ ಅಸಹ್ಯವುಂಟಾಗುತ್ತದೆ. ಕೃತಿಯಲ್ಲಿ ಕೆಲವರಿಗೆ ‘ಅಸಮಾಧಾನ’ ವುಂಟಾಗುವ ಸಾಲುಗಳಿವೆ (ಅವು ಐತಿಹಾಸಿಕವಾಗಿ ನಿಜವಿರಬಹುದು ಅಥವ ಕೃತಿಯಲ್ಲಿ ಅತಿಶಯೋಕ್ತಿಯ ಟೀಕೆಗಳಾಗಿರಬಹುದು) ಎಂಬ ಕಾರಣಕ್ಕೆ ವಿನಾಕಾರಣ ಕೃತಿಯೊಂದನ್ನು ನಿಷೇಧಕ್ಕೊಳಪಡಿಸಿಬಿಡುವಂತಹ ‘ಇಕ್ಕಟ್ಟಿನ ಪರಿಸ್ಥಿತಿಯನ್ನು ಸರ್ಕಾರಕ್ಕೂ’ ಉಂಟು ಮಾಡಿದರೆಂಬ ಮಾತುಗಳು ಸಹ ಕೇಳಿ ಬರುತ್ತಿವೆ. ವಿಶ್ವವಿದ್ಯಾಲಯದ ಸಿಂಡಿಕೇಟ್ ಮೇಲೆ ಸರ್ಕಾರ ಪರೋಕ್ಷವಾಗಿ ಒತ್ತಡ ಹೇರಿತ್ತು ಎಂಬ ಮಾತುಗಳು ಇದ್ದರೆ ಅವು ಅತಿಶಯೋಕ್ತಿಯೇನಲ್ಲ. ಜೊತೆಗೆ ಏಕಪಕ್ಷೀಯವಾಗಿ ಸಿಂಡಿಕೇಟ್ ‘ತಾತ್ಕಾಲಿಕ ಹಿಂತೆಗೆತದ’ ನಿರ್ಣಯ ಕೈಗೊಂಡಿತು. ಪರಿಷ್ಕರಣೆಗೆ ಇನ್ನೊಂದು ಸಮಿತಿಯ ನಿರ್ಧಾರವೂ ಆಗಿದೆ. ಒಳ್ಳೆಯ ಪ್ರಯತ್ನ ಅನೇಕ ವ್ಯಕ್ತಿಪ್ರತಿಷ್ಠೆಗಳಿಂದ ಗಟಾರಕ್ಕಿಳಿದಿದ್ದು ಕರ್ನಾಟಕದ, ಕನ್ನಡದ ಬೌದ್ಧಿಕ ದಿವಾಳಿತನವನ್ನಷ್ಟೆ ತೋರುತ್ತಿದೆ. ಇದೆಲ್ಲದರ ಪರಿಣಾಮವೆಂದರೆ ಸಾರ್ವಜನಿಕ ಹಣವೂ ಸೇರಿದಂತೆ ಒಟ್ಟು ೨೩ ಲಕ್ಷ ರೂಗಳನ್ನು ಗಟಾರಕ್ಕೆ ಸುರಿದಂತಾಗಿದೆ. ಐತಿಹಾಸಿಕ ವಸ್ತುನಿಷ್ಠತೆಯಿಂದ ಯಾವುದೇ ಸಂದರ್ಭವನ್ನೂ ನೋಡಬೇಕಾದ ವೈಚಾರಿಕ ಸ್ವಾತಂತ್ರ್ಯಕ್ಕೆ ಕೆಲವೇ ಕೆಲವು ಮಂದಿ ಅಡ್ಡಿಯಾದರೆ ಸಾರ್ವಜನಿಕರೂ ಸಹ ‘ಸುಮ್ಮನಿದ್ದು’ ಒಂದು ರೀತಿಯ ಭಯಾನಕ ವಾತಾವರಣ ಸೃಷ್ಟಿಯಾಗಿರುವುದು ಯಾರಿಗೂ ಹೆಮ್ಮೆಯ ವಿಷಯವಲ್ಲ.

ಈ ಕೆಲವೇ ಕೆಲವು ಮಂದಿಯ ಒತ್ತಡಕ್ಕೆ ಸರ್ಕಾರವೂ ಮಣಿದು ‘ಹೇಳಿಕೆ’ ನೀಡಿದರೆ ಆಶ್ಚರ್ಯವಿಲ್ಲ.

೦೨-೦೫-೨೦೦೨

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಸಿರುಗಟ್ಟಿಸುವ ನಗರಿಯಲ್ಲಿ ಉದ್ಯಾನವಾಗಿದ್ದವರು
Next post ಶ್ರೀ ಫಕ್ಕೀರಸ್ವಾಮಿ ಶಿವಯೋಗಿ ಸಮರ್ಥ

ಸಣ್ಣ ಕತೆ

 • ಡಿಪೋದೊಳಗಣ ಕಿಚ್ಚು…

  ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

 • ಮೌನರಾಗ

  ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

 • ಕೂನನ ಮಗಳು ಕೆಂಚಿಯೂ….

  ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

 • ಮಲ್ಲೇಶಿಯ ನಲ್ಲೆಯರು

  ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…