ಗೋಪುರ ಗೃಹ

ಏನು ಮಾಡಲಿ ಕಟ್ಟಿಕೊಂಡು ಈ ಅಸಂಬದ್ಧವನ್ನ
– ಓ ನನ್ನ ಹೃದಯವೇ, ಅಶಾಂತ ಹೃದಯವೆ ಹೇಳು –
ನಾಯಿಬಾಲಕ್ಕೆ ಕಟ್ಟಿದ ಹಾಗೆ ಪಟ್ಟಾಗಿ ನನಗೆ ಬಿಗಿದಿರುವ ಈ
ವಿಕಟ ಚಿತ್ರವನ್ನ ಜರ್ಝರಿತವಾದ ಈ ವಾರ್‍ಧಕ್ಯವನ್ನ?
ಹಿಂದೆ ನನ್ನಲ್ಲೆಂದೂ ಇರಲೇ ಇಲ್ಲ ಇಂಥ ಭಾವದುದ್ದೀಪನೆ
ಆವೇಶದುತ್ಸುಕತೆ, ನವನವೋನ್ಮೇಷಶಾಲಿನಿಯಾದ ಕಲ್ಪನೆ,
ಅಸಾಧ್ಯವಾದದ್ದನ್ನು ನಿರೀಕ್ಷಿಸುವ ಕಿವಿ ಕಣ್ಣು, ಇಲ್ಲ, ಇರಲಿಲ್ಲ –
ಬಾಲ್ಯದಲ್ಲಿ ಗಾಳ, ಕೀಟ ಎರೆಹುಳುವೋ ಹಿಡಿದು
ಬುಲ್‌ಬೆನ್ ಬೆಟ್ಟದ ಬೆನ್ನನ್ನೇರುತ್ತಿದ್ದಾಗಲೂ,
ದಿನವಿಡೀ ಮೀನು ಹಿಡಿಯುತ್ತ ಕಳೆದಾಗಲೂ.
ಈಗಲೋ ನನ್ನ ಕಿವಿ ಕಣ್ಣು ಕಲ್ಪಕಶಕ್ತಿ
ವಾದದಲ್ಲೇ ತೃಪ್ತವಾಗಿ ಬರಿಯ ಅಮೂರ್‍ತ
ಸಂಗತಿಗಳಲ್ಲೆ ಸಂಚಾರ ಹೂಡುವವರೆಗೆ
ಕಾವ್ಯದೇವಿಯನ್ನಟ್ಟಿ ಪ್ಲಾಟಿನಸ್ ಪ್ಲೇಟೋರ
ಗೆಳೆತನವ ಬೆಳೆಸಬೇಕೇನೋ, ಇಲ್ಲವೆ ನನ್ನ
ಹಿಮ್ಮಡಿಗೆ ಒಂದು ಒಡಕಲು ಡಬ್ಬ ತೂಗಾಡಿ
ನಗೆಪಾಟಲಾಗುವನೊ ಏನೋ.


ಗೋಪುರ ಗೃಹದಲ್ಲಿ ತಿರುಗುತ್ತೇನೆ ಶತಪಥ
ದಿಟ್ಟಿಸುತ್ತೇನೆ ಮನೆಯೊಂದರ ಬುನಾದಿಯನ್ನು,
ಕರಿಬೆರಳಿನಂತೆ ಮಣ್ಣಿಂದ ಮೇಲೆದ್ದಿರುವ ಹಸಿರುಮರವನ್ನು;
ಹಗಲ ಕಿರಣದ ಕಾಟ ಕರಗಿ ಇಳಿಯುತ್ತಿರಲು
ಕಲ್ಪನೆಯ ಕರೆಕಳಿಸಿ ಕರೆಯುತ್ತೇನೆ ಬಳಿಗೆ
ಪಾಳು ಅವಶೇಷ ಪ್ರಾಚೀನ ವೃಕ್ಷಗಳಿಂದ
ಪ್ರತಿಮೆ ನೆನಪುಗಳನ್ನು,
ಪ್ರಶ್ನಿಸುವ ಆಸೆ ಅವುಗಳಲ್ಲಿ ಒಂದೊಂದನ್ನೂ,
ಆ ಗಿರಿಸಾಲಿನಾಚೆ, ಶ್ರೀಮತಿ ಫ್ರೆಂಚಳಿದ್ದದ್ದು.
ಅವಳ ಗೃಹದಲ್ಲೊಮ್ಮೆ ಮೋಂಬತ್ತಿಮಾಲೆ ಉರಿಯುತ್ತ, ಊಟದ ಹೊತ್ತು
ಕರಿಮರದ ಪೀಠ, ಹಿರಿಮೇಜು, ಮದ್ಯದ ಪಾತ್ರೆ ಎಲ್ಲ ಬೆಳಗಿತ್ತು;
ಆ ಮಹಾಮಾನ್ಯೆ ಮಹಿಳೆಯ ಮನಸ್ಸಿನೆಲ್ಲ ಇಚ್ಛೆ
ತಿಳಿಯಬಲ್ಲಂಥ ಬಡಿಸುವ ಅಡಿಗೆಯಾಳೊಬ್ಬ
ಇದ್ದಕ್ಕಿದ್ದಂತೆ ಕತ್ತರಿ ಹಿಡಿದು ಓಡೋಡಿ
ಬಲು ಕೊಬ್ಬಿದೊಬ್ಬ ರೈತನ ಕಿವಿಯ ಈಡಾಡಿ
ಪುಟ್ಟ ಬಟ್ಟಲಿನೊಳಗೆ ಮುಚ್ಚಿಟ್ಟು ಟೇಬಲ್ಲ ಮೇಲೆ ತಂದಿಟ್ಟ.

ನೆನಪಿನಲ್ಲಿದ್ದೀತು ಕೆಲವರಿಗೆ ಈಗಲೂ, ನಾನಾಗ ಚಿಕ್ಕವನು,
ಒಕ್ಕಲಿಗ ಜವ್ವನೆಯ ಉಕ್ಕೇರಿ ಬಣ್ಣಿಸಿತ್ತೊಂದು ಹಾಡು.
ಅವಳು ಇದ್ದದ್ದೆಲ್ಲೊ ಕಲ್ಲು ನೆಲ ತುಂಬಿದ್ದ ಹಳ್ಳಿಯಲ್ಲಿ;
ಮುಖದ ಬಣ್ಣವ ಹೊಗಳಿ, ಹೊಗಳಿದ್ದರಿಂದಲೇ
ಇನ್ನಷ್ಟು ಖುಷಿ ಕೆರಳಿ ಸುದ್ದಿ ಊರೂರನ್ನೂ ತಬ್ಬಿ ಹಬ್ಬಿತ್ತು.
ಆ ಹೆಣ್ಣು ಎಲ್ಲೆಲ್ಲಿ ಹೋದರೂ ಅಲ್ಲಲ್ಲಿ
ತುಂಬಿ ತುಳುಕಿದರು ಜನ ಸಂತೆ ಜಾತ್ರೆಗಳಲ್ಲಿ,
ಅಂಥದೊಂದು ಪ್ರಸಿದ್ಧಿ ಬಂತು ಹುಡುಗಿಗೆ ಒಂದು ಹಾಡಿನಿಂದ.

ಹಾಡು ಕೇಳಿದ ಕೆಲವು ಗಂಡಸರೊ ಹುಚ್ಚಾಗಿ

ಎಷ್ಟೋಸಲ ಹುಡುಗಿ ಹೆಸರಲ್ಲಿ ಶುಭ ಹಾರೈಸಿ ಕುಡಿದು ಬಲು ಮೆಚ್ಚಾಗಿ
ಪ್ರತ್ಯಕ್ಷ ಕಂಡು, ಕಲ್ಪನೆ ಎಷ್ಟು ಖರೆಯೆಂದು
ಒರೆ ಹಚ್ಚಿ ಬಿಡಲು ಹೊರಟೇ ಬಿಟ್ಟರಾಗಲೇ ಪಡಖಾನೆಯಿಂದ;
ಬೆಳುದಿಂಗಳನ್ನು ಹಗಲಿನ ಶುದ್ಧ ಬೆಳಕೆಂದು
ತಪ್ಪು ತಿಳಿದರು ಅವರು, ದಾರಿ ತಪ್ಪಿತು ಬುದ್ದಿ
ಸಂಗೀತ ಕವಿಸಿದ್ದ ಮಾಯೆಯಲ್ಲಿ. ಅವರಲ್ಲಿ
ಒಬ್ಬನಂತೂ ಮುಳುಗಿ ಹೋದ ಕ್ಲೂನಿನ ಭಾರಿ ಹುದಲಿನಲ್ಲಿ.

ಆಶ್ಚರ್‍ಯ ಎನಿಸೀತು, ಆ ಹಾಡನ್ನು ಕಟ್ಟಿದವ ಒಬ್ಬ ಕುರುಡ;
ಆದರೂ ಈಗನ್ನಿಸುವುದು ಅದರಲ್ಲೇನೂ ಇಲ್ಲ ಗೂಢ;
ದುರಂತ ಶುರುವಾದದ್ದು ಕುರುಡ ಹೋಮರನಿಂದ,
ದೋಚಿದ್ದಾಳೆ ಹಲೆನ್ ಎಲ್ಲರ ಹೃದಯವನ್ನ ಮೋಸದಿಂದ.
ರವಿಕಿರಣ ಶಶಿಕಿರಣ ಒಡೆಯಲಾಗದ ಒಂದು
ಇಡಿಕಿರಣವಾಗುವಂತಿದ್ದಿದ್ದರೆ! ಏಕೆಂದರೆ
ಹುಚ್ಚು ಹಿಡಿಸುವನೇನೋ ನಾನು ಎಲ್ಲರಿಗೂ ಕವಿತೆಯಲಿ ಗೆದ್ದರೆ.

ಹ್ಯಾನ್‌ ರಹಾನ್ ಪಾತ್ರ ನಾನೇ ಸೃಷ್ಟಿಸಿದ್ದಷ್ಟೆ.
ಕುಡಿದ ಮತ್ತಲ್ಲೊ ಎಚ್ಚರದ ಸ್ಥಿತಿಯಲ್ಲೊ, ನಸುಕು ಹೊತ್ತಲ್ಲಿ
ನೆರೆಯ ಹಟ್ಟಿಗಳಿಂದ ಅವನನ್ನು ಹೊರಗೆಳೆದು ಓಡಾಡಿಸಿದ್ದೆ.
ಯಾರೊ ಮುದುಕನ ಮೋಡಿಗೊಳಗಾಗಿ ಹ್ಯಾನ್‌ ರಹಾನ್
ಮುಗ್ಗರಿಸಿ ಬಿದ್ದು ಅಲ್ಲಿಂದಿಲ್ಲಿಗುರುಳಿ ತಡಕಾಡುತ್ತಿದ್ದ.
ಸಿಕ್ಕ ಪ್ರತಿಫಲ ಕಡೆಗೆ ಮುರಿದ ಮೊಣಕಾಲು,
ಮೋಹಗೀಳುಗಳ ಭಯಂಕರ ವೈಭವ;
ಇಪ್ಪತ್ತು ವರ್‍ಷಗಳ ಹಿಂದೆಯೇ ಇವನ್ನೆಲ್ಲ ಯೋಚಿಸಿದ್ದೆ.

ಪಾಳು ಕೋಟೆಯ ಪೌಳಿಯಲ್ಲಿ ಕೆಲ ಸಭ್ಯರು ಇಸ್ಪೀಟು ಕಲೆಸುತ್ತ ಕೂತ ಹೊತ್ತು
ಆ ಮುದುಕ ಪಾತಕಿಯ ಸರದಿ ಬಂತು,
ಏನು ಯಕ್ಷಿಣಿ ಮಾಡಿದನೊ ಕೈಯ ಎಲೆಗಳಿಗೆ
ಒಂದು ಎಲೆ ಹೊರತು ಉಳಿದವು ಅಲ್ಲೆ ಆಗಲೇ
ಓಡಿದವು ಬೇಟೆನಾಯಿಗಳಾಗಿ ಮಾರ್‍ಪಟ್ಟು
ಉಳಿದೊಂದು ಎಲೆಯ ಮೊಲವನ್ನಾಗಿ ಮಾಡಿದ.
ಹ್ಯಾನ್‌ ರಹಾನ್ ದಂಗಾಗಿ ಬೆನ್ನಟ್ಟಿ ಓಡಿದ
ಆ ಬೊಗಳು ನಾಯಿಗಳು ಜಿಗಿದ ದಿಕ್ಕಲ್ಲಿ –

ಯಾವ ದಿಕ್ಕಲ್ಲಿ? ಮರೆತೇ ಹೋಯ್ತು ಇರಲಿ, ಅಷ್ಟು ಸಾಕೀಗ!
ಇನ್ನೊಬ್ಬನನ್ನು ನೆನೆಯಲೆ ಬೇಕು ನಾನೀಗ;
ಎಷ್ಟು ಕುಸಿದಿದ್ದ ಆ ಬಡಪಾಯಿ ಎಂದರೆ
ಪ್ರೀತಿ, ಸಂಗೀತ ಶತ್ರುವಿನೆರಡು ಹರಿದ ಕಿವಿ
ಯಾವುದೂ ತಣಿಸುವಂತಿರಲಿಲ್ಲ ಅವನನ್ನು;
ಅವನ ಸುತ್ತ ಅದೆಷ್ಟು ಕಟ್ಟುಕಥೆ ಬೆಳೆದುವೋ
ಯಾವಾಗ ತೀರಿತೋ ಅವನ ವೈಭವದ ದಿನ, ಯಾರೂ ಹೇಳುವರಿಲ್ಲ
ಅವನು ಇನ್ನಾರಲ್ಲ, ದಿವಾಳಿಯೆದ್ದ ಈ ಮನೆಯ ಮುದಿಮಾಲೀಕ.

ದುರ್‍ಗ ಕುಸಿಯುವ ಮೊದಲು ಶತಮಾನಗಳ ಕಾಲ ಶಸ್ತ್ರಾಸ್ತ್ರ ಹೊತ್ತು,
ಪಾದಕ್ಕೆ ಕಬ್ಬಿಣದ ಮೆಟ್ಟು ಮಂಡಿಯತನಕ ಅಡ್ಡಡ್ಡ ಕವಚ ತೊಟ್ಟು,
ಇಕ್ಕಟ್ಟು ಮಹಡಿ ಮೆಟ್ಟಿಲ ಮೇಲೆ ಹತ್ತಿಳಿದು ಹೋದ ಸೈನಿಕರೆಷ್ಟೊ,
ಕೂಗಿ ಮಾತಾಡುತ್ತ ಏದುಸಿರು ಎಳೆಯುತ್ತ,
ಮರದ ದಾಳಗಳನ್ನು ಹಲಗೆಯ ಮೇಲೆ ಕುಟ್ಟುತ್ತ
ನಿದ್ದೆಯಲ್ಲಿದ್ದವನ ವಿಶ್ರಾಂತಿ ಕೆಡಿಸುತ್ತಿದ್ದ
ಯೋಧರೆಷ್ಟೋ ಜನ ಇದ್ದರಲ್ಲಿ. ಈಗ
ಅವರೆಲ್ಲ ಪ್ರತಿಮೆಗಳು ಆ ಮಹಾಸ್ಮೃತಿಯಲ್ಲಿ.

ಪ್ರಶ್ನೆ ಕೇಳುವೆ, ಇಲ್ಲಿ ಬನ್ನಿ ಬರಬಲ್ಲವರು:
ಮುದುಕನೂ ಬಡವನೂ ಅರ್‍ಧಮೇಲೇರಿದ್ದವನೂ ಆದ ಮನೆಮಾಲೀಕ ಬಾ,
ಕರೆದು ತಾ ಎಲ್ಲರನ್ನು :
ಸುಂದರಿಯ ಚೆಲುವನ್ನು ಕೀರ್‍ತಿಸಿದ ಅಲೆಮಾರಿ ಅಂಧನನ್ನು,
ಪಾಳು ಪೊದೆಗಳ ನಡುವೆ ಅಲೆಸಿದ್ದ ಮಾಂತ್ರಿಕ ಮುದುಕನನ್ನು,
ಅಂಥ ಸೊಗಸಾದ ಕಿವಿ ಪಡೆದಂಥ ಶ್ರೀಮತಿ ಫ್ರೆಂಚಳನ್ನು,
ಗೇಲಿ ಮಾಡುವ ಕಲಾದೇವಿಯರು ಆಯ್ದಾಗ ಹಳ್ಳಿ ಹೆಣ್ಣನ್ನು,
ಖುಷಿ ಹತ್ತಿ ಕೆಸರಿನಾಳಕ್ಕೆ ಕುಸಿದೇ ಹೋದ ಆ ಅಯ್ಯನನ್ನು.

ಈ ಬಂಡೆಗಳ ತುಳಿದ, ಈ ಕದವ ಹಾಯ್ದಿದ್ದ
ಮುದುಕ ಮದುಕಿಯರೆಲ್ಲ, ಧನಿಕ ದರಿದ್ರರೆಲ್ಲ
ಎಲ್ಲರೆದುರಲ್ಲಿ ಇಲ್ಲವೆ ತಮ್ಮ ಮನದಲ್ಲಿ
ಸಿಡಿದಿದ್ದರೇ ಹೀಗೆ ವೃದ್ಧಾಪ್ಯದ ವಿರುದ್ಧ ನಾ ಕುದಿಯುತ್ತಿರುವ ಹಾಗೆ?
ನನಗೆ ಸಿಕ್ಕಿದೆ ಒಂದು ಉತ್ತರ
ಹೊರಟು ಹೋಗಲು ತೀರ ಕಾತರಿಸಿ ನಿಂತಿರುವ ಜನದ ಕಣ್ಣಲ್ಲಿ;
ಹೋಗಿ ಬನ್ನಿರಿ ಎಲ್ಲ, ಹ್ಯಾನ್‌ರಹಾನ್ ಮಾತ್ರ ಇಲ್ಲೆ ಇರಲಿ.
ಅವನ ಎಲ್ಲ ಸತ್ವ ಸಮೃದ್ಧ ಸ್ಮರಣೆಗಳು ಬೇಕು ನನಗಿಲ್ಲಿ.

ಎಲ್ಲ ಗಾಳಿಗು ಪ್ರೀತಿಯಿಂದ ಮೈಯೊಡ್ಡಿದ್ದ ವ್ಯಭಿಚಾರಿ ಮುದುಕನೇ,
ಗಾಢ ಚಿಂತಿಸುವ ನಿನ್ನ ಮನದಾಳದಿಂದೆತ್ತಿ ತಾ
ಗೋರಿಯಲ್ಲಿದ್ದು ನೀ ಪಡೆದೆಲ್ಲ ಕಾಣ್ಕೆಗಳ;
ಕರಗಿಸುವ ಕಣ್ಣ ಸೆಳೆತಕ್ಕೊ, ಸೋಂಕಿಗೊ ಉಸಿರಿನಲೆಗೊ ಸಿಕ್ಕು,
ಇದ್ದಕ್ಕಿದ್ದಂತೆಯೇ ಹಿಂದು ಮುಂದರಿಯದೆಯೆ
ಬೇರೆ ವ್ಯಕ್ತಿತ್ವದ ಚಕ್ರವ್ಯೂಹದೊಳಗೆ ಜಿಗಿದೆಯಲ್ಲ;
ಆ ಎಲ್ಲ ಜಿಗಿತಗಳ ಪೂರ್‍ವಾಪರವನ್ನೆಲ್ಲ
ಚಿಂತಿಸಿರಬೇಕಲ್ಲ ನೀನೀಗ? ತಾ ಇಲ್ಲಿ ಆ ತಿಳಿವನ್ನೆಲ್ಲ.
ಯಾವುದರ ಸುತ್ತ ಅಲೆದೀತು ಕಲ್ಪನೆ ಹೆಚ್ಚು
ಪಡದ ಹೆಣ್ಣಿನ ಮೇಲೊ, ಸಿಗದ ಹೆಣ್ಣಿನ ಮೇಲೊ?
ಸಿಕ್ಕದಿರುವವಳು ಎಂದರೆ ಇದನ್ನೊಪ್ಪಿಕೊ,
ತಪ್ಪಿಸಿಕೊಂಡೆ ನೀನೆ ಭಾರೀ ವ್ಯೂಹವೊಂದನ್ನು ಯಾವ ಗರ್‍ವಕ್ಕೂ ಸಿಕ್ಕು,
ಪಕ್ಕಾಗಿ ಯಾವ ಹೇಡಿತನಕ್ಕೊ, ತುತ್ತಾಗಿ ಸೂಕ್ಷ್ಮ ಜಿಜ್ಞಾಸೆಗೋ,
ಆತ್ಮಸಾಕ್ಷಿ ಎಂದು ಹಿಂದೊಮ್ಮೆ ಕರೆದಿದ್ದ ಇನ್ನಾವುದಕ್ಕೋ.
ಮತ್ತೆ ಮರಳಿದವೊ ಆ ಸ್ಮರಣೆಗಳು, ಸೂರ್‍ಯನಿಗೆ
ಗ್ರಹಣ ಹಿಡಿಯುತ್ತದೆ, ಹಗಲು ಆರುತ್ತದೆ.


ಬರೆಯಲೇಬೇಕೀಗ ನನ್ನ ಉಯಿಲನ್ನು,
ನಾನು ಆಯುವೆ ನೇರ ನಡೆಯ ಜನರನ್ನು;
ಪುಟಿವ ಮೂಲದ ಚಿಲುಮೆ ಸಿಗುವವರೆಗೆ
ತೊರೆಯೇರಿ ನಡೆನಡೆದು ಕಟ್ಟಕಡೆಗೆ
ಜಿನುಗು ಕಲ್ಲಿನ ಮೇಲೆ ನಸುಕಿನಲ್ಲಿ
ಗಾಳ ಎಸೆಯುವ ಜನರು ನನಗೆ ಇರಲಿ.
ಕೂಗಿ ಹೇಳುತ್ತೇನೆ ಅಂಥ ಜನರು
ನನ್ನ ಹೆಮ್ಮೆಯ ಹಕ್ಕು ಪಡೆಯುವವರು.
ದೇಶ ಮತ ಪಂಥಕ್ಕೆ ಪಕ್ಕಾಗದ,
ಉಗಿಸಿಕೊಳ್ಳುವ ಗುಲಾಮರಿಗೆ ಅಥವಾ
ಉಗಿಯುವ ನಿರಂಕುಶರ ಪರ ನಿಲ್ಲದ
ಧೀರಜನಗಳ ಹೆಮ್ಮೆ ನನ್ನ ಹಮ್ಮೆ;
ಕೊಡದಿರುವ ಎಲ್ಲ ಸ್ವಾತಂತ್ರ್ಯ ಇದ್ದೂ,
ಕೊಟ್ಟಂಥ ಬರ್‍ಕ್, ಗ್ರಟನ್ ಜನದ ಹೆಮ್ಮೆ;
ಯಾವ ಎಡೆತಡೆಯಿರದೆ ಉಕ್ಕಿ ಬರುವ
ಅರುಣೋದಯದ ಬೆಳಕಿನಂಥದು ಅದು;
ಮೊಗೆಮೊಗೆದು ಧಾರಾಳ ಈಯಬಲ್ಲ
ಮುಗಿಯದಕ್ಷಯ ಪಾತ್ರದಂಥದು; ಅದು
ಎಲ್ಲ ಧಾರೆಗಳೊಣಗಿ ಬಿರಿವ ನೆಲಕೆ
ಧೋ ಎಂದು ಸುರಿವಂಥ ಮಳೆಯ ಹರಕೆ;
ಕರಗುತ್ತಿರುವ ಸಂಧ್ಯಾಕಾಂತಿಯ ಮೇಲೆ
ದೃಷ್ಟಿಯೂರಿ ಹೊಳೆವ ಹೊಳೆಯ ಮೇಲೆ
ಈಜಿ ಅಂತಿಮ ಗೀತೆ ಹಾಡಲಿರುವ
ಹಂಸಪಕ್ಷಿಯ ಶುಭ್ರ ಶಾಂತಗಳಿಗೆ.
ನಾ ನನ್ನ ಶ್ರದ್ಧೆಗಳ ಘೋಗುತ್ತೇನೆ
ಪ್ಲಾಟಿನಸ್ಸಿನ ಮತವ ಗೇಲಿ ಮಾಡಿ,
ಪ್ಲೇಟೋ ಮುಖಕ್ಕೇನೇ ಸಾರುತ್ತೇನೆ:
ಮನುಷ್ಯ ತಾನೇ ಆತ್ಮಸತ್ವ ಬಳಸಿ
ಅಡಿಯಿಂದ ಮುಡಿತನಕ ಕಡೆವವರೆಗೆ
ಸಾವು ಜೀವನ ಏನೂ ಇರಲೇ ಇಲ್ಲ,
ಇರಲಿಲ್ಲ ರವಿಚಂದ್ರ ನೀಹಾರಿಕೆ,
ಆ ಮಾತಿನೊಡನಿರಲಿ ಈ ಹೇಳಿಕೆ:
ಸತ್ತಮೇಲೂ ಮತ್ತೆ ಏಳುತ್ತೇವೆ,
ಕನಸು ಕಾಣುತ್ತೇವೆ, ಸೃಷ್ಟಿಸುತ್ತೇವೆ
ಚಂದ್ರಮಂಡಲದಾಚೆ ಸ್ವರ್‍ಗವನ್ನೂ,
ನನ್ನ ಶಾಂತಿಕರಾರು ಸಿದ್ಧಮಾಡಿದ್ದೇನೆ
ಇಟಲಿದೇಶದ ಕುಶಲವಸ್ತುಗಳ ಜೊತೆಗೆ
ಗ್ರೀಸ್ ದೇಶದ ಹೆಮ್ಮೆಲ್ಪಗಳ ಜೊತೆಗೆ
ಕವಿ ಕಲ್ಪನೆಗಳ ಜೊತೆಗೆ
ಪ್ರೀತಿ ನೆನಪುಗಳ ಜೊತೆಗೆ
ಹೆಣ್ಣುಗಳ ಮಾತು ಸ್ಮರಣೆಗಳ ಜೊತೆಗೆ,
ಮರ್‍ತ್ಯರಿಗೆ ಮೀರಿದ, ದರ್‍ಪಣದಂಥ ಸ್ವಪ್ನಗಳ
ಸೃಷ್ಟಿಸಲು ಏನೆಲ್ಲ ಬಳಸುವನೊ ಮಾನವ
ಆ ಎಲ್ಲದರ ಜೊತೆಗೆ.

ಓ ಅಲ್ಲಿ ಕಿಂಡಿಬಳಿ ಡೊಂಬಕಾಗೆಗಳು
ಕೂಗಿ ಕಿಚಕಿಚ ಸದ್ದು ಮಾಡುತ್ತಿವೆ,
ಟೊಂಗೆಗಳ ಹೆಕ್ಕಿ ಪೇರಿಸಿ ಪದರು ಪದರಾಗಿ
ಎತ್ತರದ ಗೂಡೊಂದ ಕಟ್ಟುತ್ತಿವೆ,
ಟೊಳ್ಳುಗೂಡಿನ ನೆತ್ತಿಮೇಲೆ ಕೂತಿದ ತಾಯಿ –
ಹಕ್ಕಿ ಕೊಡುತಿದೆ ಶಾಖ ಆ ಗೂಡಿಗೆ.
ನನ್ನ ಶ್ರದ್ದೆ, ಹೆಮ್ಮೆ ಬಿಟ್ಟುಹೋಗುತ್ತೇನೆ
ನೇರನಡೆ ನಿಲುವಿನ ಯುವಜನರಿಗೆ,
ಬೆಳಕು ಬರಿಯುವ ಮೊದಲೆ ಗಾಳವಾಡಿಸಲೆಂದು
ಗಿರಿಯ ತಪ್ಪಲನ್ನೇರಿ ನಡೆವವರಿಗೆ,
ಆ ಸತ್ವದಿಂದಲೇ ಸೃಷ್ಟಿಯಾದವ ನಾನು,
ಹಿಡಿವ ಮುಂಚೆ ಇಂಥ ಉದ್ಯೋಗವನ್ನು,
ಕೂತು ನಡೆಸುವ ಆರಾಮ ಕಸುಬನ್ನು.

ನನ್ನಾತ್ಮವನ್ನು ರಚಿಸುತ್ತೇನೆ ಅದನ್ನೊಂದು
ಜ್ಞಾನದ ಶಾಲೆಯಲ್ಲಿ ಇರಿಸಿ,
ಅಧ್ಯಯನ ಸಾಗಿಸಲು ಒತ್ತಾಯ ಹೂಡುವೆನು
ದೇಹ ಕುಸಿಯುವತನಕ ಹಳಸಿ
ರಕ್ತಬಲ ಇಷ್ಟಿಷ್ಟೆ ಕಡಮೆಯಾಗುತ್ತ
ಬುದ್ಧಿ ವಿಭ್ರಮಗೊಂಡು ಜಲ್ಪಿಸುತ್ತ,
ಸೋತು ಜಡವಾಗುತ್ತ ಮೈಯ ಗೂಡು
ಬರಬಲ್ಲ ಯಾವುದೇ ಹೀನಪಾಡು –
ಸ್ನೇಹಿತರ ಮರಣ, ಉಸಿರುಗಟ್ಟಿಸುವ
ಕಮನೀಯ ಕಣ್ಣುಗಳ ಕಾಂತಿ ಹರಣ –
ತೋರುವುವು ಮಾಸುವ ದಿಗಂತದಲ್ಲಿ
ತೇಲಿ ಸಾಗುತ್ತಿರುವ ಮುಗಿಲಿನಂತೆ; ಅಥವ
ದಟ್ಟವಾಗುತ್ತಿರುವ ನೆರಳಿನಲ್ಲಿ
ನಿದ್ದೆಗಣ್ಣಿನ ಹಕ್ಕಿಕೂಗಿನಂತೆ.
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್

ಲೇಡಿ ಗ್ರೆಗರಿಯ ವನದ ಸಮೀಪದಲ್ಲೇ ಥೂರ್ ಬ್ಯಾಲಲೀ ಎಂಬ ಒಂದು ಟವರ್ ಇತ್ತು. ಏಟ್ಸ್ ತನ್ನ ವಾಸಕ್ಕಾಗಿ ಅದನ್ನು ಕೊಂಡಿದ್ದ. ಇಲ್ಲಿ ಅದನ್ನು ಗೋಪುರಗೃಹ ಎಂದು ಕರೆದಿದೆ. ಟವರಿನಲ್ಲಿ ಮತ್ತು ಅದರ ಸುತ್ತಮುತ್ತಲಲ್ಲಿ ಇದ್ದ ಜನಗಳ, ಹಾಗೂ ನಡೆದ ಘಟನೆಗಳ ಪ್ರಸ್ತಾಪ ಮಾಡುತ್ತ ಕವನ ಬೆಳೆಯುತ್ತದೆ.

(೧೪) ಪ್ಲಾಟಿನಸ್ : ಒಬ್ಬತತ್ವಶಾಸ್ತ್ರಜ್ಞ ಮತ್ತು ಅನುಭಾವಿ.
ಪ್ಲೇಟೋ : ಗ್ರೀಕ್ ತತ್ವಶಾಸ್ತ್ರಜ್ಞ
(೫೨) ಹೋಮರ್ : ಇಲಿಯಡ್ ಎಂಬ ಮಹಾಕಾವ್ಯ ಬರೆದ ಗ್ರೀಕ್ ಕವಿ, ಕ್ರಿ.ಪೂ. ೯ನೆಯ ಶತಮಾನದಲ್ಲಿದ್ದವನು.
(೫೩) ಹೆಲೆನ್ : ಇಲಿಯಡ್ ಕಾವ್ಯದ ನಾಯಕಿ, ಅಪೂರ್‍ವ ಚೆಲುವೆ. ಟ್ರೋಜನ್ ಯುದ್ಧಕ್ಕೆ ಕಾರಣಳಾದವಳು.
(೫೭) ಹ್ಯಾನ್ ರಹಾನ್ : ಏಟ್ಸ್ ತನ್ನ ಕಾವ್ಯಗಳಲ್ಲಿ ಸೃಷ್ಟಿಸಿರುವ ಒಂದು ಪಾತ್ರ.
(೧೧೩-೧೧೪) ಏಟ್ಸ್ ಮಾಡ್‌ಗಾನಳನ್ನು ಮನಸ್ಸಿನಲ್ಲಿಟ್ಟು ಮಾತನಾಡುತ್ತಿದ್ದಾನೆ ಇಲ್ಲಿ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಡುತಾವ ನೆನಪುಗಳು – ೫
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೬೦

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…