ನನ್ನ ವಾಣಿಯ ನೀನು ವರಿಸಿದವನೇನಲ್ಲ
ನಾ ಬಲ್ಲೆ ; ಹಾಗೆಂದೆ ಕಾವ್ಯಕ್ಕೆ ಕೃಪೆ ಬಯಸಿ
ಕೃತಿಕಾರ ಬರೆದ ಅಂಕಿತದ ನುಡಿಯನ್ನೆಲ್ಲ
ಬದಿಸರಿಸಬಹುದು, ನಿನಗಿಲ್ಲ ಯಾವುದೆ ತಡೆ.
ಚೆಲುವನಿರುವಂತೆ ನೀ ಕುಶಲಮತಿಯೂ ಹೌದು,
ಹಾಗೆಂದೆ ನನ್ನ ಮೆಚ್ಚಿಕೆಯಾಚೆ ಬೆಳೆದಿರುವೆ.
ಹೊಸದೃಷ್ಟಿ ಧೋರಣೆಯ ಹೊಸಮುದ್ರೆ ತಾಳುವುದು
ಖುಷಿ ಈಗ ನಿನಗೆ, ಹಾಗೇ ಮಾಡು ನನ್ನೊಲವೆ.
ಅತಿಶಯೋಕ್ತಿಯ ಮೆರುಗು ಕೊಡುವ ಕಲ್ಪಕ ಸೊಬಗು
ಎಂಥದೆಂಬುದ ಅವರು ಚಿಂತಿಸುತಿರಲು ಅಲ್ಲಿ,
ನಿಜ ನುಡಿವ ನಿಜ ಗೆಳೆಯ ನಿನ್ನ ನಿಜ ಚೆಲುವನ್ನು
ನಿಜ ಪ್ರೀತಿಯಲಿ ಹಿಡಿವೆ ಇಲ್ಲಿ ನಿಜನುಡಿಯಲ್ಲಿ.
ರಕ್ತ ಮಾಂಸದ ಕೊರತೆಯಿರುವ ವ್ವಕ್ತಿತ್ವಕ್ಕೆ
ಬೇಕು ನಿಜ ಆ ಶೈಲಿ, ನಿನಗೆ ಅದು ಯಾತಕ್ಕೆ ?
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 82
I grant thou wert not married to my muse