ಜಗಮಗಿಸುವ ಬೆಳಕಲ್ಲಿ
ಜರಿಸೀರೆಯ ಭಾರಹೊತ್ತು
ನಿಂತಿದ್ದಳು ಮದುಮಗಳು
ಭವಿಷ್ಯದ ಕನಸುಗಳ ಹೊತ್ತು!
ಸಾಕ್ಷಿಯಾಗಿದ್ದವು
ಸಾವಿರಾರು ಕಣ್ಣುಗಳು
ಹರಸಿದ್ದವು
ನೂರಾರು ಹೃದಯಗಳು.
ಪತಿಯಾಗುವವನ ಕೈ ಹಿಡಿದು
ಸಪ್ತಪದಿಯ ತುಳಿವಾಗ
ಅರಳಿತ್ತು ಪ್ರೀತಿ. ರಂಗಾಗಿತ್ತು ಮನಸ್ಸು
ಒಲವು ಜೇನಾಗಿತ್ತು. ಸ್ವರ್ಶ ಬಿಸಿಯಾಗಿತ್ತು.
ನಿಂತಲ್ಲಿ ಕೂತಲ್ಲಿ ಅವನದ್ದೇ ನೆನಪಿತ್ತು.
ಬಾಳ ಮುಂಜಾವಿನಲ್ಲಿ ರವಿಯು ಮೂಡಿದ್ದ.
ಉಷೆಯ ಕೆಂಪಾಗಿಸಿದ್ದ.
ಆದರೆ ಕನಸುಗಳು ನನಸಾಗಲಿಲ್ಲ.
ಹರಕೆಗಳು ಸಾಕಾರವಾಗಲಿಲ್ಲ.
ಮಧ್ಯಾಹ್ನದ ಕಾದ ಉರಿಯಲಿ ಅವಳ ಸುಟ್ಟು,
ಮುಸ್ಸಂಜೆಯ ರಂಗಿನಲಿ ಅವಳ ಮರೆತು
ಅವನು ಮುನ್ನಡೆದಿದ್ದ, ಅವಳ ಹಿಂದೆಯೇ ಬಿಟ್ಟು;
ಕನಸುಗಳ ಹೊತ್ತು ಜೀವನಕೆ ಕಾಲಿಟ್ಟ
ಆ ಹುಡುಗಿ ತನ್ನಿರವ ಮರೆತು
ವರ್ತಮಾನದಲಿ ಕರಗಿ ಹೋಗಿದ್ದಳು
ಮೌನವಾಗಿದ್ದಳು
ಜೀವಿಸುವುದನ್ನೇ ಮರೆತು!
ಇದಕ್ಕಾರೂ ಸಾಕ್ಷಿಯಾಗಲಿಲ್ಲ.
*****