ಉಮರ್‌ ಖಯ್ಯಾಮ್‌

This lyre of an elder language hath me stirred
To tempt thy thrill, O equivocal bಇrd!
Whatever note in this is true, ’tis thine,
And, Omar, mine wherever I have slurred
——-
`ಉಮರ್‌ ಖಯ್ಯಾಮ್‌’
ಕ್ರಿ. ಶ ೧೨ನೆಯ ಶತಕದಲ್ಲಿದ್ದ ‘ಉಮರ್‌ ಖಯ್ಯಾಮ್‌’ (Omar Khayyam) ಎಂಬೊಬ್ಬ ಪಾರಸೀಕ ಕವಿಯ ‘ರುಬಾಯಿಯಾತ್‌’ (Rubaiyat) ಎಂಬ ಲೋಕ ಪ್ರಿಯವಾದೊಂದು ಕವಿತೆ ಇದೆ. ‘ರುಬಾಯಿಯಾತ್‌’ ಎಂಬುದು `ರುಬಾಯಿ’ (Rubai) ಎಂಬ ಅರಬೀ ಶಬ್ದದ ಬಹುವಚನವು. `ರುಬಾಯಿ’ ಎಂದರೆ “ಕ-ಕ-ಖ-ಕ” ಎಂಬಂತೆ ಅಂತ್ಯಾಕ್ಷರ ಪ್ರಾಸವುಳ್ಳ ಒಂದು ಬಗೆಯ ಚೌಪದಿಯ ಹೆಸರಷ್ಟೆ; ಈ ಕವಿತೆ ಆ ಚೌಪದಿಯಲ್ಲಿ ರಚಿಸಲ್ಪಟ್ಟಿದೆ. ಅದನ್ನು Fitzgerald ಎಂಬೊಬ್ಬ ಆಂಗ್ಲ ಕವಿ ನಾಲ್ಕು ಸಲವೇನೋ ಇಂಗ್ಲಿಷು ಭಾಷೆಯಲ್ಲಿ ಪರಿವರ್ತಿಸಿದನು. ಈ ಕನ್ನಡ ಅನುವಾದದಲ್ಲಿ ಆತನ ಆಂಗ್ಲ ಭಾಷಾಂತರದ ಪ್ರಥಮಾವೃತ್ತಿಯನ್ನು (ಕ್ರಿ. ಶ. ೧೮೫೯) ಅನುವರ್ತಿಸಿ, ಅದರಲ್ಲಿಯ
೭೫ ಪದ್ಯಗಳ ಮೊತ್ತದಿಂದ ೫೦ನ್ನಷ್ಟೆ ಆಯ್ದು ಕನ್ನಡಿಸಿದೆ.
ಈ ಮನೋಹರವಾದ ಕವಿತೆಯಲ್ಲಿಯ ಹಲ ಮಾತುಗಳು ಅಸಭ್ಯವೆಂದು ತೋರಬಹುದು; ಆದರೆ ಹಾಗಲ್ಲ, ಅವು ಲಾಕ್ಷಣಿಕ ಪದಗಳಷ್ಟೆ. ಅವು ಕವಿಸಮಯಾನುಸಾರವಾಗಿ ವ್ಯಂಗ್ಯಾರ್ಥದಲ್ಲಿ ಪ್ರಯೋಗಿಸಲ್ಪಟ್ಟಿವೆ; ಅವುಗಳ ಅರ್ಥವು ಹೀಗಿದೆ-
(೧) ಕಳ್ಳು, ಮದಿರೆ, ಮಧು, ದ್ರಾಕ್ಷೆ, ಇತ್ಯಾದಿ = ಪರಮಾತ್ಮನಲ್ಲಿ ಅನನ್ಯ ಭಕ್ತಿ, ಅಥವಾ ದಿವ್ಯಜ್ಞಾನ; (೨) ತಿಳಿ, ಬಿಂದಿಗೆ, ಕುಡಿಕೆ, ಕೊಡ, ಇತ್ಯಾದಿ=ಮನುಷ್ಯನ ಹೃದಯ; (೩) ಕಳ್ಳಂಗಡಿ= ದೇವರನ್ನು ಸಾಧಿಸಲಿಕ್ಕೆ ಬೇಕಾದ ಏಕಾಂತತೆ, ಅಥವಾ ದೇವರನ್ನು ಅನನ್ಯಭಾವದಿಂದ ಸಾಧಿಸುವವರ ಒಡನಾಟ; (೪) ಕೋಳಿ = ಮನಸ್ಸಾಕ್ಷಿ, ಅಥವಾ ಹೃದಯದ ಜಾಗೃತಿ; (೫) ಇನಿಯೆ, ಅರಸಿ, ಸಲ್ಲೆ, ಇತ್ಯಾದಿ= ಮಾರ್ಗದರ್ಶಕ, ಗುರು ಅಥವಾ ಸಹಕಾರಿ; (೬) ಮಧುಮಾಸ, ಸುಗ್ಗಿ = ಜೀವನ ಸಾರ್ಥಕ್ಯವನ್ನು ಮಾಡಿಕೊಳ್ಳತಕ್ಕ ಕಾಲ; (೭) ಕುಂಬಾರನ ಅಂಗಡಿ = ಈ ಜಗತ್ತು; (೮) ಮಣ್ಣೊಡಲು (ಮಣ್ಣಿನ ಪಾತ್ರ) = ಮನುಷ್ಯನೇ ಮೊದಲಾದ ಜೀವಿಗಳು; (೯) ಮತಿ (ಬುದ್ಧಿ) ಲೌಕಿಕ ಜ್ಞಾನವನ್ನು ಕೊಡುತ್ತದೆ, ಕಳ್ಳು (ಎಂದರೆ ಭಕ್ತಿ) ದಿವ್ಯ ಜ್ಞಾನವನ್ನು ಕೊಡುತ್ತದೆ; (೧೦) ಕಳ್ಳಂಗಡಿಗೆ ಬಂದ ಯಕ್ಷನೆಂದರೆ ದೇವರನ್ನು ಸಾಧಿಸಿದ ಯಾವನೊಬ್ಬ ಜ್ಞಾನಿ; (೧೧) ದೇಗುಲ (ದೇವಾಲಯ)ವು ಮೂಢ ಮತ್ತು ಡಾಂಭಿಕ ಆಚಾರಗಳ ಆಶ್ರಯನೆಂಬುದರಿಂದ, ದೇವರು ಅಲ್ಲಿ ದೊರೆಯನು; ಆತನನ್ನು ತನ್ನ ಹೃದಯದ ಏಕಾಂತದ (ಕಳ್ಳಂಗಡಿಯ)ಲ್ಲಿ ತಾನೆ ಕಂಡು. ಕೊಳ್ಳಬೇಕು – ಇತ್ಯಾದಿ.
೧. ಏಳು! ಮುಂಬೆಳಗಿರುಳ ಬಟ್ಟಲಲಿ ಕಲ್ಲಂ
ಬಿಸುಡೆ ಪರಿದೋಡಿದುವು ತಾರಗೆಗಳೆಲ್ಲಂ;
ಅರಸನುಪ್ಪರಿಗೆಯಂ ಕೆಂಬಿಸಿಲಿನುರುಳ
ನ್ನೊಡ್ಡಿ ಸೆರೆವಿಡಿದನಿದೊ ಮೂಡೆಂಬ ಭಿಲ್ಲಂ! ||೧||
೨. ಬಾನೊಳೆಡಗೆಯ್ಯುಷೆಯ! ಕಳ್ಳಿನಂಗಡಿಯಿಂ
೧ಕೆರಳ್ವ ದನಿಯೆನ್ನ ೨ಕನವರಿಸಿತೀ ನುಡಿಯಿಂ-
`ಏಳಿ ಮಕ್ಕಳೆ ತುಂಬಿಸೀ ೩ತಿಳಿಗೆ ತೀವೆ
ಮದಿರೆ ಬತ್ತದ ಮುನ್ನ ೪ಬಾಳ ತಿಳಿಯೆಡೆಯಿಂ’ ||೨||
೩. ಕೋಳಿ ಕೆಲೆವುದೆ, ಕಳ್ಳಿನಂಗಡಿಯ ಮುಂದು
ನಿಂದರೊದರಿದರಾಗ ತೆರೆ ಕದವನೆಂದು!
ಬಲ್ಲೆ ನೀನೆನಿತಣಂ ತಳುವೆವಾವಿಲ್ಲಿ,
ತೆರಳಲೊಮ್ಮೆಗೆ ಮರಳಿ ಬರಲಾರೆನೆಂದುಂ! ||೩||
೫. ಚಿರಚೈತ್ರಮಿಂದೆಲ್ಲಿ ೫ಅಸುಗೆಯಾ ಕಾನಂ?
ಎಲ್ಲಿ ಬಲ್ಲರೆ ೬ಕೃಷ್ಣೆಯಕ್ಷಯಾಧಾನಂ?
ದ್ರಾಕ್ಷೆಯಾದೊಡೆ ಸುರಿಗು ಮುನ್ನಿನಿನಿಗೆಂಪಂ,
ನೀರ ಕರೆಯಿಂದಿನ್ನುಮಲರ್ಗುಮುದ್ಯಾನಂ ||೪||
೬. ಸಿರಿಗನ್ನಡದಿ ೭ನಿಷಾದಸ್ವರಕೆ ಸಂದು
ಕಳ್ಳು ಕೆಂಗಳ್ಳು ಕಳ್ಳೆಂದು ಕುಕಿಲೊಂದು
ನೀಡುತಿದೆ ಮನವಿಯೆಂ ಮಾಂದಳಿರ್ಗೆ ಕೂಗಿ
ತನ್ನ ಕರಿ ಕೆನ್ನೆಯಂ ಕೆಂಪೇರಿಸೆಂದು. ||೫||
೭. ತಿಳಿಯ ತುಂಬಿಸು! ಸುಗ್ಗಿಯಲರ ಬೆಂಕಿಯಲಿ
ಹಂಬಲದ ಕಂಬಳಿಯ ನೀಂಟಶಂಕೆಯಲಿ;
ಕಾಲವಕ್ಕಿಗೆ ತುಸಮೆ ಹಾರಲಿದೆ ದಾರಿ-
ಮೇಣಿದಕೊ ಮಿಳ್ಳಿಸಿತು ಬಿಚ್ಚೆರಂಕೆಯಲಿ! ||೬||
೮. ನೋಡ, ಹಗಲೊಡನೆ ಸಾಸಿರ ಹೂಗಳೆದ್ದು,
ಸಾಸಿರಂ ಚದರಿ ಮಣ್ಣಾದುವಿಳಿಬಿದ್ದು;
ಮಾಧವಿಯ ಮಲರ್ಚುವೀ ಮೊದಲ ಮಧುಮಾಸಂ
ಕೊಂಡೊಯ್ವುದೆನಿತೊ ಸಿರಿಯಣುಗರಂ ಕದ್ದು! ||೭||
೧೧. ಇಲ್ಲಿ ರೆಂಬೆಯ ನೆಳಲಲಿನಿರೊಟ್ಟಿಯೊಂದು,
ಕಳ್ಳ ಬಿಂದಿಗೆಯೊಂದು, ಸವಿಗಬ್ಬಮೊಂದು;
ನೀನೆನ್ನ ಬಳಿಯೆ ಕಾಡಲಿ ಹಾಡುವಂದು-
ಕಾಡೆ ಗಡ ಸಗ್ಗದಿಂದೆನಗೆ ಲೇಸಂದು! ||೮||
೧೨. ಬಗೆವರಿಳೆಯಳಿಯಾಳ್ತನದಿ ಕೆಲಬರಿನಿದಂ,
ಕೆಲಬರಿನ್ನಯ್ತರುವ ಸಗ್ಗದಲಿ ಬಿನದಂ;
ಕೆಡವನೀಡಾಡು, ದಕ್ಕಿಸು ಕೆಯ್ಯ ರೊಕ್ಕಂ-
ಏಕೆ ಕಿವಿಗೆಟಕದಿಹ ಜಯಭೇರಿ ನಿನದಂ? ||೯||
೧೩. ನೋಡ ನೀನತ್ತಿತ್ತಲಲರ್ವ ತಾವರೆಯೆಂ-
‘ಜಗದಿ ನಗುತಾಂ ಬರುವೆನರಿಯೆನೇ ಪರಿಯಿಂ;
ಒಡನೆನ್ನ ಹಿಮ್ಮಣಿಯ ಹಗ್ಗಮಂ ಹರಿದು
ಕಡವರವನೆರಚಿ ತುಂಬಿಸುವೆನೀ ಕೆರೆಯಂ’ ||೧೦||
೧೬. ಹಗಲಿರುಳ ಪರಿವಿಡಿಯೆ ತೆರಬಾಗಿಲಂತೆ,
ಬಗೆಯೀ ಜಗಂ ಗಡಾ ಮುರುಕು ೮ತಳಿಯಂತೆ;
ತನ್ನ ಗಳಿಗೆಯ ಪೆಂಪನರಸನಾ ಹಿಂದೆ
ಮೆರಸುತರಸಂ ಪೋದನಿಲ್ಲಿ ಬಂದಂತೆ ||೧೧||
೧೭. ಗದರುತಿದೆ ಪುಲಿಯಂತೆ, ಲೊಚಕುತಿದೆ ಹಲ್ಲಿ
ಮುನ್ನರಸರೊಲಿದು ನಲಿದರಮನೆಗಳಲ್ಲಿ;
ಉರುಬೇಂಟಿಗನ ಮಣ್ಣಿನೊಲ್ಲಿಯಂ ಕತ್ತೆ
ಕೆರೆಯೆ, ಕನಸಿಲ್ಲದೊರಗಿಹನರಸನಲ್ಲಿ ||೧೨||
೧೮. ಎದೆನೀರ್‌ ಬಸಿದ ವೀರರೊರಗಿದೆಡೆಯಿಂದ
ಹೂತ ಕಣಿಗಿಲ ಕಿಸುವ ಕಣಿಗಿಲೆಲ್ಲಿಂದ?
ತಿಳಿಯೆ ತೋಂಟವ ನಗಿಸುವೀ ಮೊಲ್ಲೆಯಿಲ್ಲಿ
ಉದಿರ್ದುವಂದೊಮ್ಮೆ ಚೆಲುವೆತ್ತ ತುರುಬಿಂದ ||೧೩||
೧೯. ತನ್ನ ತನಿ ಹಸುರಿನೀ ತೊರೆಯುಲಿಗೆ ಗರಿಯಂ
ಬರಿಸುವಾವ್ನೆಮ್ಮಿರುವ ಹಂಬಿನೀ ನಿರಿಯೇಂ!
ಮೆಲ್ಲನಿತೆ ಮಾಲು! ಮೇಣಾರರಿವರಮಮಾ
ಯಾವೊಮ್ಮೆಯಿಂದುಟಿಯಿನಿದು ಚಿಗಿತ ಪರಿಯಂ? ||೧೪||
೨೦. ಹಿಂದಣನುತಾಪ ಮುಂದಣ ಭಯವ ಮರಸಿ
ಇಂದನೊಸೆಯಿಪ ತಿಳಿಗೆ ತುಂಬು ನನ್ನರಸಿ –
ನಾಳೆ ಎಂಬೆಯ? ಬಲ್ಲೆನೇನಾನೆ ನಾಳೆ
ನಿನ್ನೆಗಾಗೆನೆ ಸಂದ ಸಾಸಿರಂ ಬೆರಸಿ? ||೧೫||
೨೪. ಇಂದಿಗೆಂದಣಿಗೆಯ್ವ ತವಕಿಗರಿಗೆಲ್ಲ
ಮೇಣ್‌ ನಾಳೆಯಂ ನಿಲುಕಿ ನಿಟ್ಟಿಪರಿಗೆಲ್ಲ
ಕೂಗುತಿದೆ ಕತ್ತಲೆಯ ಕಾವಲಿನ ಕೋಳಿ-
‘ಮರುಳೆ ಉಡುಗೆರೆಯೆ? ಇಲ್ಲಿಲವಲ್ಲಿಲ್ಲ!’ ||೧೬||
೨೬. ಅರಿದರಾಡಲಿ; ಸೇರ ಗೆಳೆಯ ನೀ ಬಂದು
ಮುದಿಯ ಖಯ್ಯಮನೆಡೆಯ ನಿಸದಮಿನಿತೊಂದು-
ಎಗರುತಿದೆ ಬಾಳ್ವೆ, ಸವಿ ಸುಳ್ಳು ಮಿಕ್ಕೆಲಂ;
ಒಮ್ಮೆ ತಾನರಳ್ದ ಹೂನಿನ್ನರಳದೆಂದುಂ! ||೧೭||
೨೭. ಹರೆಯದಲಿ ಲವಲವಿಸಿ ನಾ ಕಲಿಯಲೆಂದೆ
ಬಲ್ಲವರ ಸಂತರೆಲ್ಲರ ಬಳಿಗೆ ಸಂದೆ;
ಸುಳಿನುಡಿಗೆ ಕಿವಿತೊಳಲಿ ಕಡೆಗೆಂದುಮಂತೆ
ಒಳಹೊಕ್ಕ ಬಾಗಿಲಿಂದಲೆ ಹೊರಗೆ ಬಂದೆ! ||೧೮||
೨೮. ಬಲ್ಲರಿಂ ಕಲ್ತರಿಮೆಯಂ ಬಿತ್ತುತಂತೆ,
ಕೆಯ್ಯಾರೆ ಗೇದೆ ನಾನದ ಬೆಳಸುವಂತೆ;
ಕೊನೆಗೆ ನಾನಳೆದ ದವಸಂ ಕಣಾ ಇನಿತೆ-
‘ನೀರಂತೆ ಬಂದೆ, ಪೋದಪೆ ಗಾಳಿಯಂತೆ’ ||೧೯||
೨೯. ಅರಿಯೆನೇಕೆಂದರಿಯೆನೆಲ್ಲಿಂದಮೆಂದು
ಜಗದಿ ಹರಿತಂದೆ ನೀರಂತೆ ನಾ ಬಂದು;
ಇಲ್ಲಿಂದ ಬಟ್ಟಬಯಲಿನ ಗಾಳಿಯಂತೆ
ಎಲ್ಲಿಗೆಂದರಿಯದಾಂ ಬೀಸುವೆನು ಮುಂದು ||೨೦||
೩೦. ಕೇಳ್ದರಾರೆನ್ನನಿಲ್ಲಿಗೆ ನೂಕುವಂದು?
ಕೇಳ್ವರಾರಿನ್ನುಮಿಲ್ಲಿಂ ದೂಡುವಂದು?
ಈ ದಿಟ್ಟತೆಯ ನೆನವ ಮುಳುಗಿಸಲು ತಾರ
ತುಂಬುತಿಳಿಯೊಂದು, ಮೇಣ್ತಾರ ಇನ್ನೊಂದು! ||೨೧||
೩೧. ನದುಬುವಿಯಿನೆದ್ದು ಗೋಪುರವನೇಳನೆಯಾ
ದಾಂಟಿ ನಾ ಮಂಡಿಸಿದೆ ಗದ್ದುಗೆಯ ಶನಿಯಾ;
ಬಿಗುಗಂಟನೆನಿತೊ ಬಿಚ್ಚಿದೆನು ಹಾದಿಯಲಿ,
ನರರ ನಿಯತಿಯ ಗಂಟನೊಂದುಳಿದು ಕೊನೆಯಾ ||೨೨||
೩೨. ಮುಚ್ಚು ಕದವಿದೆ, ಬೀಗ ತೆಗೆಯೆ ಗೊತ್ತಿಲ್ಲ;
ಬಿಟ್ಟ ತೆರೆಯಾಚೆ ನನ್ನಿಣಕಲಳವಲ್ಲ;
ನನ್ನ ನಿನ್ನೆಂಬ ಕಿರುಕುಳದಿ ಲವಕಾಲಂ,
ಬಳಿಕ ನೀನಾನೆಂಬ ಸುದ್ದಿಯಣಮಿಲ್ಲ ||೨೩||
೩೩. ಆಗಳಾನುರುಳ್ವ ಬಾಂಗಿಟ್ಟೆನೀ ಮೊರೆಯಂ-
‘ಎ ಸೊಡರನೆತ್ತಿ ವಿಧಿ ಬಳಿವಿಡಿಸಿತರಿಯೆಂ
ಕತ್ತಲೆಯೊಳೆಡಹುತಿಹ ತನ್ನ ಹಸುಳೆಗಳಂ?’-
‘ಅಂಧಮತಿ’ ಎಂದು ಕೇಳಿಸಿತು ಪಡಿಯೊರೆಯಿಂ ||೨೪||
೩೪. ಬಳಿಕ ಬಾಳ್ವೆಯ ಬುಗ್ಗೆಯೊಳಗುಟ್ಟ ಹೀರೆ,
ಈ ಮಣ್ಣ ದೊನ್ನೆಗೆನ್ನಯ ತುಟಿಯನೂರೆ,
ತುಟಿಗೆ ತುಟಿಯೊತ್ತಿ ಮಿನುಕಿತು-‘ಬದುಕಿಹನ್ನಂ
ಕುಡಿ! ಮಡಿಯಲೊಮ್ಮೆಗೆಂದುಂ ಮರಳಲಾರೆ!’ ||೨೫||
೩೫. ತೋಚುತಿದೆ ನನಗಿಂತು ೯ಕದಿದು ತೊದಲುತ್ತಂ
ಮರುನುಡಿದ ದೊನ್ನೆ ಮುನ್ನೊಮ್ಮೆ ಸುಖಿಸುತ್ತಂ
ಬಾಳ್ದುದೆಂದಾನೊತ್ತಿದದರ ತಣ್ದುಟಿಯಿಂ
ದೆನಿತೊ ಕೊಡಲೆನಿತೊ ಕೊಳಲಾರ್ತುದದು ಮುತ್ತಂ! ||೨೬||
೩೬. ಒಂದಿನಂ ಮುಚ್ಚಂಜೆ ಹಸಿಮಣ್ಣಿನುಂಡೆ
ಯಂ ಗುದ್ದುವೊಡ್ಡನಂ ಸಂತೆಯಲಿ ಕಂಡೆ,
ನಾಲಗೆಯ ಸಾಲದುಲಿಯಿಂ ಗೊಜಗಿತಿಂತು-
‘ಮೆಲ್ಲನೆಲೆ ತಟ್ಟಣ್ಣ! ನನ್ನೊಳೀ ದಿಂಡೇ?’ ||೨೭||
೩೭. ತಿಳಿಯ ತುಂಬಿಸು! ಎಂತು ನಮ್ಮಡಿಯ ಹಿಂದು
ಹೊತ್ತು ನುಣ್ಚುತಿದೆಂದು ಮರುಗಲೇಕಿಂದು?
ಇನ್ನುಮಾಗದ ನಾಳೆ, ಅಳಿವೋದ ನಿನ್ನೆ
ಯನ್ನೇಕೆ ಹಲುಬುವೈ, ಸವಿದೋರಲಿಂದು? ||೨೮||
೩೮. ಒಗ್ಗಳಿಗೆಯನಿತೆ ಪ್ರಳಯದ ಪಾಳಿನಲ್ಲಿ,
ಒಗ್ಗಳಿಗೆ ಬಾಳ್ವೆಯೊರತೆಯಿನೀಂಟುವಲ್ಲಿ;
ಕಂತುತಿವೆ ತಾರೆ, ಹೊರವಟ್ಟುದಿದೊ ಪರಿಸೆ
ನಾಸ್ತಿಯರುಣೋದಯಕೆ; ತಳುವೆ ಎಕಿಲ್ಲಿ? ||೨೯||
೪೦. ಬಲ್ಲಿರೈ, ಗೆಳೆಯರಿರ, ನಾನೆನಿತೊ ಹಿಂದೆ
ಮನೆಯೊಳವುತಣವಿತ್ತು ಹೊಸಬಳಂ ತಂದೆ!
ಮುದಿಯ ಗೊಡ್ಡಿಯ ಮತಿಯ ಬಾಗಿಲಿಂದಟ್ಟಿ,
ದ್ರಾಕ್ಷೆಯಣಾಗಿಗೆ ಮೆಚ್ಚಿ ೧೦ಮರುವಾಳ ನಿಂದೆ ||೩೦||
೪೨. ಕಳ್ಳಂಗಡಿಯ ಕಿಸಕದದಿ ಕೊಂಚ ಮುನ್ನಂ
ಮಬ್ಬಿನಲಿ ಮರಸಿ ಯಕ್ಷನೊಲೊಬ್ಬ ಚೆನ್ನಂ
ಹೆಗಲ ಮೇಲ್‌ ಕೊಡವೆತ್ತಿ ಬಂದನಾ ಕೊಡದಿಂ
ಸವಿಯಲೆನಗಿತ್ತನೇಂ ದ್ರಾಕ್ಷೆಯಿನಿಗೆನ್ನಂ11! ||೩೧||
೪೬. ಕೆಳಗೆ ಮೇಲೊಳಗೆ ಹೊರಗರಿ ಸುತ್ತು ಮುತ್ತು
ಮೋಡಿಯಾ ನೆಳಲ ನಾಟಕಮಿದಂ ಗೆತ್ತು;
ಮಂಕು ಗೊಂಬೆಗಳಂತೆ ಬಳಸಿ ತಿರುಗುವೆವು
ಗೂಡ ನಡುಬತ್ತಿಯಾ ನೇಸರಿನ ಸುತ್ತು ||೩೨||
೪೭. ನೀಂ ಕುಡಿವ ಮದಿರೆ ನೀನೊತ್ತುತಿರುವಧರಂ
ಮುಗಿವೊಲೆಲ್ಲಂ ಮುಗಿಯೆ ನಾಸ್ತಿಯಲಿ, ಬೆದರಂ
ಮಾಣ್ದಿದಂ ನಂಬು- ನೀನಿರುವನ್ನಮೆಂದುಂ
ನಾಸ್ತಿ ನೀಂ ಗಡ, ಕಡಿಮೆಯಾಗೆ ನೀನದರಿಂ ||೩೩||
೪೮. ತೆರೆದ ತಾವರೆ ತೀವೆ ತೊರೆತೊರೆಯ ತಡಿಯಾ,
ಮುದಿಯ ಖಯ್ಯಮನೊಡನೆ ಮಿರುಮಧುವ ಕುಡಿಯಾ!
ಕಾಲಕೂಟವ ನಿನ್ನ ತುಟಿಗೊತ್ತೆ ಕಾಲಂ,
೧೨ಜುಜುಗದಲೆ ಹೀರದಂ, ಕೇಳೆನ್ನ ನುಡಿಯಾ ||೩೪||
೪೯. ಹಗಲಿರುಳ ಹಾಸಂಗಿಯೊಡ್ಡಿ ಮಾನವರಂ
ಕಾಯನಾಗಿಸಿ ವಿಧಿಯದಾಡಿಸುವುದವರಂ,
ಸುತ್ತಿಸುತಲತ್ತಿತ್ತ ಹೊಯ್ದು ತಡೆಗಟ್ಟಿ,
ಒಂದೊಂದನೊಂದಿಸುಗು ೧೩ಕಂಟಲೆಯ ತವರಂ ||೩೫||
೫೦. ಕೇಳ್ವುದೇನಹುದಲ್ಲವೆಂದು ಪುಟಚೆಂಡು?-
ನೆಗೆವುದೆಡಬಲಕೆಸುಗನೆಸೆಯ ಕೆಯ್ಕೊಂಡು!
ಮೇಗಣಿಂ ನಿನ್ನ ಕೆಳರಂಗಕೆಸೆದವನೇ
ಬಲ್ಲನವ, ಬಲ್ಲನದನೆಲ್ಲ ಮುಂಗಂಡು! ||೩೬||
೫೧. ಸರಿಸರಿದು ಬರೆಯುತಿದೆ ಬೆರಳು, ಬರೆಬರೆದು
ಸರಿಯುತಿದೆ! ನಿನ್ನ ಸಯ್ಪಕಟ ನಿನ್ನರಿದು
ಹಿಂಗಿಸದದನ್ನೊರಸಲರೆ ಬಂತಿಯನಿತಂ!
ತೊಳಸೆಯೊಂದಕ್ಷರನ ೧೪ಕಣ್ಣಾರೆ ಕರೆದು! ||೩೭||
೫೨. ಕವಿಚಿದೀ ದೊನ್ನೆಯಂ ಬಾನೆಂಬರರಿಯೆ,
ಅಳಿದುಳಿದು ೧೫ಹುಳಿದಾಡುತಿಹೆವಿದರ ಮರೆಯೆ,
ಬರಿದೇತಕಿದಕೆ ಕಯ್ಮುಗಿವೆ ಕಾಯೆಂದು?-
ನಮ್ಮೊಲಿದುಮಕ್ಷಮಂ ತಿರಿವುದೀ ಪರಿಯೇ! ||೩೮||
೫೬. ಸತ್ಯದೀಧಿತಿ ಎನ್ನನಕ್ಕರೆಯ ಜ್ಯೋತಿ
ಗೆಯ್ಯಲಲ್ಲವೆ ಕಿನಿಸಿನೆನ್ನನು ವಿಭೂತಿ;
ಕಳ್ಳಂಗಡಿಯೊಳದರ ಕಂಡ ಸುಳಿವೆ ವರಂ,
ಕಳಕೊಳ್ವುದರಿನದಂ ದೇಗುಲದಿ ಪೂರ್ತಿ ||೩೯||
೫೯. ಮುಂದೆ ಕೇಳ್‌, ೧೬ಕಾತಿಕೆಯ ಮಳೆ ಮುಗಿದು ಬಂದು
೧೭ಸಿಂಗವೆರೆ ಇನ್ನುಮೊಗೆಯದ ಸಂಜೆಯೊಂದು
ಆ ೧೮ಕೆಳವ ೧೯ಕೋವನಂಗಡಿಯಲ್ಲಿ ನಿಂದೆ,
ಮಣ್ಣ ಮಂದಿಗಳೋರಣಂ ಹಿಂದು ಮುಂದು ||೪೦||
೬೦. ಚೋದ್ಯಮೇನೆಂಬೆನಾ ಮಣ್ಣೊಡಲರಲ್ಲಿ
ತೊದಲಲಮ್ಮನಿಬರನಿಬರು ಮೂಗರಲ್ಲಿ;
ಅನ್ಯರಿಂ ಸಡಿಲುಲಿಯ ತಟ್ಟನಿಂತೊಂದು-
`ಕುಂಬವಾರ್‌? ಕುಂಬಾರನಾರ್‌? ಭೇದವೆಲ್ಲಿ?’ ||೪೧||
೬೧. ಬರಿದಲ್ತು ನನ್ನೊಡಲನೆಂದುದಿನ್ನೊಂದು
ಮಹಿಯ ಮಣ್ಣಿಂ ಮೆತ್ತಿದುದು, ನನ್ನನಿಂಡು |
ಸೂಕ್ಷ್ಮದಿಂದೀ ರೂಪನೊಡರ್ಚಿದವನಿಳೆಯಾ
ಮಣ್ಣೊಳಗೆ ಮಗುಳೆ ಕಲಸುವನೇಕೆ ಮುಂದು? ||೪೨||
೬೨. ‘ಹಟಮಾರಿಯಕ್ಕೆ ತಾನಾದೊಡಂ ಬಾಲಂ
ಪಾಲ್ಕುಡಿದ ೨೦ಕುಡಿಕೆಯನ್ನೆಸಗನಿಪ್ಪಾಲಂ,’
ಎಂದುದಿನ್ನೊಂದು,  ‘ತಾನಕ್ಕರೆಯಿನೊಪ್ಪಿ
ಬಾಂದೊಡವೆಯೊಡೆವನೇ ಹಿಂಗಿನಿಸ ಕಾಲಂ?’ ||೪೩||
೬೩. ಮರುನುಡಿದರಿಲ್ಲ, ಮೋನಂ, ಬಳಿಕದೊಂದು
ಸೊಟ್ಟ ಮಣ್ಣೊಡಲು ಮೆಲ್ಲುಲಿಯಿನಿಂತೆಂದು-
‘ಕೊರಳ ಕೊಂಕಿಗೆ ನನ್ನನೆಲ್ಲರಣಕಿಪರು-
ಕೆಯ್ನಡುಗಿದನೆ ಕೋವನೆನ್ನ ಬಾಂಬಂದು?’ ||೪೪||
೬೫. ಬಳಿಕೊಂದು ನಿಡುಸುಯ್ದುದಿಂತೆನ್ನ ಮಣ್ಣಂ
೨೧ನಿಡುಮರವೆಯೊಣಗಿಸೆನಗಾದುದೀ ಬಣ್ಣಂ,
ಹಳೆಯ ಬಳಕೆಯ ಕಳ್ಳಿನಿಂದೆನ್ನ ತೀವೆ,
ನನಗಂತರಿಂ೨೨ ಮರಳಿ ಸೇರ್ಗುಮಾ ತಿಣ್ಣಂ ||೪೫||
೬೬. ಒಂದೊಂದರಂತೆಯಾ ೨೩ಭಾಜನಗಳುಲಿಯೆ,
ಕಂಡುದೊಂದೆಲ್ಲರರಸುವ ಹೆರೆಯ ಕಲೆಯ;
ಒಡನೆ ಒಬ್ಬರನೊಬ್ಬರಡಚಿ ಕರೆದಣ್ಣಾ,
ಕಿರಿಚುತಿದೆ ಕಳ್ಳ ಕಾವಡಿ, ಕೇಳ, ಬಳಿಯೆ! ||೪೬||
೬೭. ದ್ರಾಕ್ಷೆಯಂ ಹುಯ್ಯೆನ್ನ ಕಂದು ಜೀವನಕೆ,
ಮೀಸೆನ್ನ ಕಳ್ಳೆರೆದು ೨೪ತಣ್ತ ಭಾಜನಕೆ,
ದ್ರಾಕ್ಷೆಯೆಲೆಯಿಂ ಹೆಣೆದ ಹೆಣದುಡೆಯ ಹೊದಿಸಿ,
ಮಡಗೆನ್ನನೊಯ್ದು ಮೇಣ್‌ ಮಧುರ ಮಧುವನಕೆ ||೪೭||
೭೨. ಅಕಟ ಮಾಧವಿಯೊಡನೆ ಮಧುಮಾಸ ಸಂತು!
ಹರೆಯದೀ ನರುವಾಲೆಯೋದದೇ ಮುಂತು?
ಯಾರರಿವರೀ ಮರದಿ ಬಗ್ಗಿಸಿದ ಕುಕಿಲು
ಎಲ್ಲಿಂದ ಬಂತು? ಪಾರಿದುದೆಲ್ಲಿಗಂತು? ||೪೮||
೭೪. ಬಡವಾಗದೆನ್ನ ಮುದ್ದಿನ ತುಂಬುವೆರೆಯೇ,
ಮರಳಿ ಬಾಂಬೆರೆ, ನೋಡ, ಮೂಡುತಿದೆ ನೆರೆಯೆ!
ಎನಿತೊ ಸೂಳಿನ್ನುಮೀ ಶಶಿ ನಿಲುಕುತಕಟಾ,
ಹೊಂಚುವುದು ನನ್ನನೀ ತೋಂಟದಲಿ- ಬರಿಯೆ! ||೪೯||
೭೫. ಮಿರುವಜ್ಜೆಯಿಂದ ನೀ ಹಸಲೆಯಲಿ ಕೆಳೆಯಿಂ
ತಾರೆಯೊಲು ಚದರಿರುವ ಬಿದ್ದಿನರ ಬಳಿಯಿಂ
ಸುರಿದು ಸರಿವಂದೆನ್ನ ಕುಳಿತಿದ್ದ ಕಡೆಗೆ
ಮುಟ್ಟುವುದೆ, ಮಗಚಿನಿಯೆ ಬರಿದೊಂದು ತಿಳಿಯಂ! ||೫೦||
*****
೧ ಅರಚುವ
೨ ಕನಸಿಂದ ಎಚ್ಚರಿಸು
೩ ತಿಳಿ=ಪಾನಪಾತ್ರ
೪ ಬಾಳ=ಜೀವನದ.
೫ ಅಶೋಕಕವನ
೬ ದ್ರೌಪದಿಯ ಅಕ್ಷಯ ಪಾತ್ರೆ
೭ ಸಪ್ತ ಸ್ವರಗಳಲ್ಲಿ ತೀವ್ರತಮವಾದ ‘ನಿ’ ಎಂಬ ಕೊನೆಯ ಸ್ವರ
೮ ತಳಿ = ಸತ್ರ, ಧರ್ಮಶಾಲೆ
೯ ಕದಿದು=ಮರೆಯಾಗಿ
೧೦ ಎರಡನೆಯ ಮದುವೆ
೧೧ ಇನಿಗೆನ್ನಂ=ಸವಿಯಾದ ಕೆಂಬಣ್ಣ
೧೨ ಹಿಂಜರಿಯದೆ
೧೩ ಚೀಲ
೧೪ ಕಣ್ಣು ಬತ್ತುವ ವರೆಗೆ
೧೫ ಹುಳುವಿನಂತೆ ತೆವಳು
೧೬ ಅಷಾಢ ಮಾಸ
೧೭ ಸಿಂಹಮಾಸದ ಚಂದ್ರ
೧೮ ಮುದುಕ
೧೯ ಕುಂಬಾರ
೨೦ ಪಾನ ಪಾತ್ರ
೨೧ ದೀರ್ಫ ವಿಸ್ಮೃತಿ
೨೨ ಅಂತರಿಂ=ಕ್ರಮೇಣ
೨೩ ಭಾಜನ=ಪಾತ್ರ
೨೪ ಸತ್ತು ತಣ್ಣಗಾದ ದೇಹ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೂಡದ ಕವಿತೆ

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…