ಶತಮಾನದ ಪ್ರಾಮಾಣಿಕ ವ್ಯಕ್ತಿ ಡಾ||ಲೋಹಿಯಾ

“The only man who has got BRAIN all over the body is LOHIA”
-MAHATMA GANDHI

ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ಮಾನವೀಯತೆ ಇರುವವರ ಮನಸ್ಸನ್ನು ಸರ್ರನೆ ಸೂರೆಗೊಳ್ಳುವ ಒಂದು ಪದವೆಂದರೆ ಡಾ|| ಲೋಹಿಯಾ. ಅದು ನಾವು ಪ್ರಾಮಾಣಿಕತೆಗೆ ನಿಘಂಟಿನಲ್ಲಿ ಸೇರಿಸಬಹುದಾವ ಮತ್ತೊಂದು ಹೆಸರು. ಡಾ|| ಲೋಹಿಯಾ ಬಡವರ ಪರವಾಗಿ ಬದುಕಿನ ಉದ್ದಕ್ಕೂ ಹೋರಾಟ ಮಾಡುತ್ತ ಸಮಾನತೆಗಾಗಿ ಅನೇಕ ಕಷ್ಟಗಳನ್ನು ಎದುರಿಸಿ, ಸ್ವಜನರಿಂದಲೂ ಜೈಲು ವಾಸವನ್ನನುಭವಿಸಿ, ನೋವನ್ನು ನುಂಗಿಕೊಂಡು ಮುನ್ನಡೆದವರು. ಇಂದು ಭಾರತದ ರಾಜಕೀಯ, ವಿದ್ಯಾಭ್ಯಾಸ ಕ್ರಮ, ಸಾಮಾಜಿಕ ಅಸಮಾನತೆ. ಆರ್ಥಿಕ ಅಸ್ತವ್ಯಸ್ತತೆ, ನಿರುದ್ಯೋಗ, ಒಳ ಜಗಳ. ಗುಂಪುಗಾರಿಕೆ, ಜಾತಿ, ವರ್ಗ ಇತ್ಯಾದಿ ಸಮಸ್ಯೆಗಳಿಂದಾಗಿ ಉಂಟಾಗಿರುವ ಅನಾರೋಗ್ಯ  ವಾತಾವರಣಕ್ಕೆ ಉಳಿದಿರುವ ಏಕೈಕ ಚಿಕಿತ್ಸೆ ಎಂದರೆ ಡಾ|| ಲೋಹಿಯಾ ಅವರ ತತ್ವ ಚಿಂತನೆಯ ಸ್ವೀಕಾರ.

ಪರಿಚಯ:
ಡಾ|| ಲೋಹಿಯಾ ಅಕ್ಬರ್ ಪೂರ್ ನಲ್ಲಿ ೨೩-೩-೧೯೧೦ ವ್ಶೆಶ್ಯಮನೆತನವಲ್ಲಿ ಹುಟ್ಟಿದರು. ತಂದೆ ಹಿರಾಲಾಲ್, ತಾಯಿ ಚಂದ್ರಿ. ಹುಟ್ಟು ಹೆಸರು ರಾಮಮನೋಹರ. ಲೋಹಗಳ ವ್ಯಾಪಾರ ಮನೆತನದ ಕಸುಬಾಗಿತ್ತು. ಅದರಿಂದಾಗಿ ಬಂದ ಮನೆತನದ ಹೆಸರು ಲೋಹಿಯಾ. ಹುಟ್ಟಿದ ಎರಡೂವರೆ ವರ್ಷಕ್ಕೆ ತಾಯಿಯನ್ನು ಕಳಕೊಂಡು ಅಜ್ಜಿಯ ಆರೈಕೆಯಲ್ಲಿ ಬೆಳೆದರು. ಬಾಲ್ಯದ ದಿನಗಳನ್ನು ಕಳೆದದ್ದು ಬಾಂಬೆಯಲ್ಲಿ. ೧-೮-೧೯೨೦ ರಲ್ಲಿ ಲೋಕಮಾನ್ಯ ತಿಲಕರು ತೀರಿಕೊಂಡಾಗ ಹತ್ತು ವರ್ಷದ ಲೋಹಿಯಾ ನಾಯಕತ್ವದಲ್ಲಿ ವಿದ್ಯಾರ್ಥಿಸಮೂಹ ತನ್ನ ಗೌರವ ಅರ್ಪಿಸಿತು. ಆಗಲೇ ಗಾಂಧಿಯ ಕರೆಗೆ ಓಗೊಟ್ಟು ಸ್ವಾತಂತ್ರದ ಕೂಗು ಬಾಲಕನ ಕಂಠದಿಂದ ಚಿಮ್ಮಿ ಬಂತು. ೧೯೨೪ ರಲ್ಲಿ ಹದಿನಾಲ್ಕು ವರ್ಷದ ಲೋಹಿಯಾ ಕಾಂಗ್ರೆಸ್ ಅಧಿವೇಶನದ ಪ್ರತಿನಿಧಿಯಾಗಿ ಭಾಗವಹಿಸಿದರು, ೧೯೨೫ ರಲ್ಲಿ ೬೧೧ ಅಂಕಪಡೆದು ಎಸ್. ಎಸ್. ಎಲ್. ಸಿ.ಯಲ್ಲಿ ಉತ್ತೀರ್ಣರಾಗಿ ಬಾಂಬೆ ಬಿಟ್ಟು ಬನಾರಸ್ ಹಿಂದೂ ಯೂನಿವರ್ಸಿಟಿಯಲ್ಲಿ ೧೯೨೭ ರಲ್ಲಿಇಂಟರ್ ಮೀಡಿಯಟ್ ಮುಗಿಸಿದರು. ಇತಿಹಾಸ ಅವರ ಆಂತರಿಕ ವಿಷಯವಾಗಿತ್ತು. ಹಗಲು ರಾತ್ರಿಗಳೆನ್ನದೆ ಇತಿಹಾಸದ ಪುಸ್ತಕಗಳ ಪ್ರತಿ ಪುಟವನ್ನು ಅಧ್ಯಯನ ಮಾಡಿದರು. ೧೯೨೯ ರಲ್ಲಿ ಎರಡನೇ ಶ್ರೇಣಿಯಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ತಮ್ಮ ಬಿ. ಎ. ಮುಗಿಸಿದರು. ಅದೇ ವರ್ಷ ಅಗರವಾಲ್ ನಿಧಿಯಿಂದ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೊರದೇಶಕ್ಕೆ ಹೋಗುವುದೆಂದು ತೀರ್ಮಾನಿಸಿದಾಗ ಅವರ ಮುಂದೆ ಬಂದ ಸಮಸ್ಯೆ ಲಂಡನ್‌ಗೆ ಅಥವಾ ಬರ್ಲಿನ್‌ಗೆ ಎಂಬುದು. ಲಂಡನ್ ತಲುಪಿ ಒಂದು ವಾರ ಕೂಡ ಅಲ್ಲಿರಲಾಗಲಿಲ್ಲ. ಅವರ ಹೃದಯ ಕೊತ ಕೊತನೆ ಕುದಿಯತೊಡಗಿತು. ಕಾರಣ ನಮ್ಮ ದೇಶವನ್ನು ಗುಲಾಮದೇಶವನ್ನಾಗಿ ಮಾಡಿಕೊಂಡ ಬ್ರಿಟೀಷರಿಂದ ಕಲಿಯುವುದೆ! ಎಂದು.

ಅವರ ಹೃದಯಕ್ಕೆ ಈಟಿಯಿಂದ ಮೀಟಿದಂತಾಯ್ತು. ಅಲ್ಲಿಂದ ಸೀದ ಬರ್ಲಿನ್‌ಗೆ ವಿಮಾನ ಹತ್ತಿದರು.

ಜರ್ಮನಿಯ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಆರ್ಥಿಕ ವಿಷಯವನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಆರಂಭಿಸಿದರು. ಅದಕ್ಕೆ ಮೊದಲು ಅಲ್ಲಿಯ ನಿಯಮದಂತೆ ಪ್ರತಿ ವಿದ್ಯಾರ್ಥಿಯೂ ಅವನ ಪ್ರಾಧ್ಯಾಪಕರನ್ನು ಆರಿಸಿಕೊಳೃಬೇಕು. ಅದರಂತೆ ಲೋಹಿಯಾರವರು ವಿಶ್ವದ ಹೆಸರಾಂತ ಅರ್ಥ ಜರ್ಮನಿಯ ಪ್ರೊ|| ಬರ್ನಾಡರನ್ನು ಭೇಟಿಯಾದಾಗ ಒಂದು ಆಶ್ಚರ್ಯಕಾದಿತ್ತು. ಅದೇನೆಂದರೆ ಲೋಹಿಯಾ ಇಂಗ್ಲೀಷಿನಲ್ಲಿ ಮಾತನಾಡಿದಾಗ ವಿಶ್ವವಿಖ್ಯಾತ ಅರ್ಥಶಾಸ್ತ್ರಜ್ಞ “ನನಗೆ ಜರ್ಮನ್ ಬಿಟ್ಟು ಇಂಗ್ಲೀಷ್‌ ಬಾರದು” ಎಂದರು. ಲೋಹಿಯು ಮೂರು ತಿಂಗಳ ಕಾಲಾವಕಾಶ ಪಡೆದು ಜರ್ಮನ್ ಭಾಷೆ ಕಲಿತು ವ್ಯಾಸಂಗ ಮುಂದುವರೆಸಿ ೧೯೩೨ ರಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಂಡರು.

ಸ್ಥಾನಮಾನ:

೧೯೩೪ ರಲ್ಲಿ ಕಾಂಗ್ರೆಸ್ ಸಮಾಜವಾದಿಪಕ್ಷ ಸ್ಥಾಪನೆಗೆ ನೆರವಾಗಿ, ೧೯೩೬-೩೮ – ಕಾಂಗ್ರೆಸ್‌ನ ವಿದೇಶಾಂಗ ಖಾತೆ ಕಾರ್ಯದರ್ಶಿಯಾಗಿ, ೧೯೪೬ ರಲ್ಲಿ ಕಾಂಗ್ರೆಸ್ ಸಮಾಜವಾದಿ ಸಮ್ಮೇಳನದ ಅಧ್ಯಕ್ಷರಾಗಿ ೧೯೫೧ ರಲ್ಲಿ ಏಷ್ಯಾದ ಸೋಷಲಿಸ್ಟ್‌ ಸಮ್ಮೇಳನವನ್ನು ನಿಯೋಜಿಸಿ, ೧೯೫೪ ರಲ್ಲಿ ಪ್ರಜಾ ಸೋಷಲಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ, ೧೯೫೬ ರಲ್ಲಿ ಮ್ಯಾನ್ ಕೈಂಡ್ ಪತ್ರಿಕೆಯ ಸಂಪಾದಕ ಮಂಡಲಿಯ ಅಧ್ಯಕ್ಷ ಮತ್ತು ಸೋಷಲಿಸ್ಟ್ ಪಕ್ಷದ ಅಧ್ಯಕ್ಷರಾಗಿ, ೧೯೬೨ ರ ಮಹಾ ಚುನಾವಣೆಯಲ್ಲಿ ಪೂಲ್‌ ಪೂರ್‌ನಿಂದ ನೆಹರೂ ವಿರುದ್ಧ ಚುನಾವಣೆಯಲ್ಲಿ ಸೋತು ಪುನ: ೧೯೬೩ ರಲ್ಲಿ ಫರೂಕಾಬಾದ್ ಕ್ಷೇತ್ರದಿಂದ ೫೮ ಸಾವಿರ ಪ್ರಚಂಡ ಬಹುಮತದೊಡನೆ ಲೋಕಸಭೆಗೆ ಆಯ್ಕೆಯಾಗಿ ೧೯೬೭ ರಲ್ಲಿ ಕನೌಜ್ ಕ್ಷೇತ್ರದಿಂದ ಪುನರಾಯ್ಕೆಯಾದರು.

ಚಳವಳಿ:

೧೯೪೨ ರ ಭೂಗತ ಚಳುವಳಿಯ ನಾಯಕತ್ವ ವಹಿಸಿ ಸೆರೆಯಾಗಿ ಲಾಹೋರ್ ಕೋಟೆಯ ಸೆರೆಮನೆಯಲ್ಲಿ ಚಿತ್ರ ಹಿಂಸೆ; ೧೯೪೬ ರಲ್ಲಿ ಗೋವಾ ಮತ್ತು ನೇಪಾಳ ಹೋರಾಟ; ಅಮೆರಿಕ ಸಂಯುಕ್ತಸಂಸ್ಥಾನ, ಬ್ರಿಟನ್, ಪೋರ್ಚುಗಲ್, ನೇಪಾಳ, ಇಂಡಿಯಾ -ಈ ದೇಶಗಳಲ್ಲಿ ಇಪ್ಪತ್ತು ಸಲ ದಸ್ತಗಿರಿಯಾಗಿದ್ದರು; ಇಷ್ಟೇಕೆ, ಇಂಡಿಯಾ ಸರ್ಕಾರ ಅವರನ್ನು ಹನ್ನೊಂದು ಸಲ ದಸ್ತಗಿರಿ ಮಾಡಿತ್ತು; ೧೯೬೪ ರ ಮೇ ೨೭ ರಂದು ಪ್ರಧಾನಿ ನೆಹರೂ ಸತ್ತಾಗ ಲೋಹಿಯಾ ಮಾನವೀಯ ಹೋರಾಟಕ್ಕಾಗಿ ಮಿಸಿಸಿಪಿಯ ಜಾಕ್‌ಸನ್ ಎಂಬಲ್ಲಿ ದಸ್ತಗಿರಿಯಾಗಿದ್ದರು.

ಅನುಭವ:

ಲಕ್ನೋ ಡಿಸ್ಟ್ರಿಕ್ಟ್‌ ಜೈಲಿಂದ ೧೦-೧೨-೧೯೫೭ ರಲ್ಲಿ ಮಾನ್ಯ ಜೈಲು ಮಂತ್ರಿಗಳಿಗೆ ಬರೆದ ಪತ್ರದ ಕೆಲವು ಸಾಲು ಇಂದಿಗೂ ಜೀವಂತವಾಗಿ, ಸತ್ಯದ ಸಾಕ್ಷಿಯಾಗಿವೆ.

“ಈ ಕಾಲದ ಜೈಲಿನ ಅವಧಿ, ಯಾತನೆಯ ಬಗ್ಗೆ ನನಗೆ ಕೊಂಚ ಹೆಚ್ಚಿನ ಆಂತರ್ಯ ಪರಿಚಯವನ್ನು ಮಾಡಿಕೊಟ್ಟಿದೆ. ಯಾತನೆಗೆ ಬಲಿಯಾದವರ ಅಳಲುಗಳನ್ನು ಅರಿತುಕೊಳ್ಳುವುದಕ್ಕೆ ಸ್ವತಃ ಯಾತನೆಯನ್ನು ಅನುಭವಿಸಬೇಕಾಗುತ್ತದೆ. ಈ ತುಚ್ಛ ನರಕ ಗೃಹಗಳು ಹೆಚ್ಚು ಕಡಿಮೆ ಎಲ್ಲಾ ನಗರಗಳಲ್ಲೂ ಇದ್ದಾವೆಂಬುದನ್ನು ಯೋಚಿಸಿದರೆ ಸಾಕು, ನನ್ನ ಮೈಕಂಪಿಸುತ್ತದೆ. ಮತ್ತೆ, ಲಕ್ನೋ ಹಾಗೂ ಅಂಥ ಇತರ ಪಟ್ಟಣಗಳಲ್ಲಿರುವ, ಹಾಗೆ ಹೆಸರು ಹೇಳದಿದ್ದರೂ ಇದಕ್ಕಿಂತ ಹೆಚ್ಚಿನ ಹಿಂಸೆ ಹೆಡೆಯಾಡಿತ್ತಿರುವ ದೊಡ್ಡ ಸಣ್ಣ ಅಸಂಬದ್ಧ ಜೈಲುಗಳು ಬೇರೆ ಜೈಲಿನ ಹೊರಗಿರುವಂಥವರ ಸಂಗತಿಯಾದರೂ ಏನು? ಅವರ ಗೋಳು ಕಡಿಮೆಯೆ? ಗುಮ್‌ ತಹಿಯ ಹರಿಜನ ತಂಗ್ರಿ ನವೆಂಬರ್ ಏಳರಂದು ಹಸಿವಿನಿಂದ ಸತ್ತ ಏಳು ದಿನಗಳ ಬಳಿಕ, ಆತನ ಮಗ ಹರಿಶರಣನೂ ಹಸಿವಿನಿಂದ ಪಂಜಕ್ಕೆ ಬಲಿಯಾಗಿ ಹೋದ. ಈ ಸುದ್ದಿ ನನಗೆ ತಲಪುವಾಗ ಆತನ ವಿಧವೆ ಮಕ್ಕಳೂಕೂಡ ಸಾವಿಗೆ ತೀರ ಹತ್ತಿರವಾಗಿ ಕಾದಿದ್ದರು. ಇದೇ ರೀತಿ ಸಹಸ್ರಾರು ಜನ ಹಸಿವಿನ ದವಡೆಯಲ್ಲಿ ನರಳುತ್ತಿದ್ದಾರೆ, ಕ್ರಮೇಣ ಸಾವನ್ನಪ್ಪುತ್ತಿದ್ದಾರೆ, ಇದಲ್ಲದೆ ಅರೆಹೊಟ್ಟೆ ಕೋರೆ ಹೊಟ್ಟೆಗಳಲ್ಲಿ ಕೋಟಿಗಟ್ಟಲೆ ಜನ ಆಹುತಿಯಾಗುತ್ತಿದ್ದಾರೆ. ಇಲ್ಲಿ ಒಬ್ಬ ತಾಯಿ ತನ್ನ ಮಕ್ಕಳಿಗೆ ಬಟ್ಟೆಕೊಳ್ಳಲಾಗದೆ ನಿಸ್ಸಹಾಯಕಳಾಗಿ ಕಣ್ಣೀರು ಸುರಿಸುತ್ತಾಳೆ. ಅಲ್ಲಿ ಒಬ್ಬ ತಂದೆ ತನ್ನ ರೋಗಗ್ರಸ್ಥ ಮಗುವಿಗೆ ಔಷಧಿ ಕೊಡಿಸುವುದಕ್ಕಾಗದೆ ಉಳಿದ ಮಕ್ಕಳಿಗೆ ವಿದ್ಯಾಭ್ಯಾಸ ಕೊಡುವುದಕ್ಕಾಗದೆ ಕೈ ಹಿಸುಕಿಕೊಳ್ಳುತ್ತಿದ್ದಾನೆ. ಅವರೆಲ್ಲಾ ನೀರವವಾಗಿಯೇ ಇದ್ದಿರಬಹುದಾದರೂ ಯಾತನೆ ಪಡುತ್ತಿದ್ದಾರೆ ನಾನೂ ಯಾತನೆ ಪಡುತ್ತಿದ್ದೇನೆ. ಮತ್ತು ಆ ಕಾರಣದಿಂದಲೇ ಅವರ ಕ್ಲೇಶಗಳು ಹೆಚ್ಚು ಅನುಭವವಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ, ನಮ್ಮೆಲ್ಲರ ಯಾತನೆಯ ಮೂಲವೂ ಹೆಚ್ಚಾಗಿ ಒಂದೇ. ಈ ಜನರಲ್ಲಿ ಅನೇಕರು ನಿಮಗೆ ಶಾಪ ಹಾಕುತ್ತಿರಬೇಕು. ಹಾಕುವುದು ಹೇಗೆಂದು ನನಗೆ ಗೊತ್ತಿಲ್ಲ, ಶಾಪಹಾಕುವುದಕ್ಕೆ ನನಗೆ ಇಷ್ಟವೂ ಇಲ್ಲ. ಶಾಪ ಹಾಕುವುದು ನಿಜವಾಗಿ ದುರ್ಬಲರ ಅಸ್ತ್ರ, ಆದರೆ ಅದು, ದೌರ್ಬಲ್ಯ ಬದುಕಿನ ಒಂದು ಅಂಗವೇ ಆಗಿ ಉಳಿದು ಬಿಡುವಹಾಗೆ ಮಾಡುತ್ತದೆ. ಯಾತನೆ ಪಡುತ್ತಿರುವ ಈ ಕೋಟಿ ಕೋಟಿ ಜನ, ಶಕ್ತಿ ಕೂಡಿಸಿಕೊಂಡು ಎದ್ದು ನಿಲ್ಲುವುದನ್ನು ಕಾಣುವಂಥ ದಿನಕ್ಕೆ ಬದುಕಬೇಕೆಂಬುದು ನನ್ನ ತೀವ್ರ ಹಂಬಲ. ಅದು ಅದ್ಭುತವಾಗಿರುತ್ತದೆ.”

ಐನ್‌ಸ್ಟೈನ್ ಅವರೊಂದಿಗೆ

೧೫-೭-೧೯೫೧ ರಂದು ವಿಶ್ವ ವಿಖ್ಯಾತ ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟೈನರ ಭೇಟಿಯ ನಿಮಿತ್ತ ಅಮೇರಿಕಾದ ಪ್ರಿನ್ಸ್‌ಟನ್‌ಗೆ ಲೋಹಿಯಾ ಹೋದಾಗ ಐನ್‌ಟ್ಟೈನ್ ಅವರಿಗಾಗಿ ಕಾಯ್ದಿದ್ದರು.  ಮಾನವೀಯತೆಯ ಬಗ್ಗೆ ಅವರು ಆಡಿಕೊಂಡ ಮಾತುಗಳು ಮೊದಲಿಗೆ ಜರ್ಮನ್ ಭಾಷೆಯಲ್ಲಿ ಪ್ರಾರಂಭವಾಗಿ ನಂತರ ಇಂಗ್ಲೀಷ್‌ನಲ್ಲಿ ಮುಂದುವರೆಯಿತು.

ಭಾರತದ ರಾಜಕೀಯ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಕುರಿತು ಮಾತನಾಡುತ್ತ ಐನ್‌ಸ್ಟೈನ್ ಅವರು ಭೂಮಾಲೀಕತ್ವವನ್ನು ತೊಡೆದುಹಾಕಿ ಭೂಮಿಯ ಮರುವಿಂಗಡನೆ ಯಾಗಬೇಕೆಂದು ಹೇಳುವಾಗ ಅವರ ಹಣೆಯಲ್ಲಿ ಗೆರೆಗಳು ಮೂಡಿದ್ದವು. ಆಗ ಲೋಹಿಯಾ ಭೂಮಾಲೀಕರಿಗೆ ಪ್ರತಿಯಾಗಿ ಹಣ ಕೊಡುವುದರ ಬದಲು ಪುನರ್ವಸತಿಗಾಗಿ ಪರಿಹಾರ ನಿಧಿಯನ್ನು ಕೊಡಬೇಕು ಎಂದು ಹೇಳಿದಾಗ ಐನ್‌ಸ್ಟೈನ್‌ರು ಸಂತಸಗೊಂಡು “ಒಳ್ಳೆಯದು ಬಹಳ ಒಳ್ಳೆಯದು, ಆದರೆ ನೆಹರೂ ಏಕೆ ಇವುಗಳನ್ನು ಮಾಡುತ್ತಿಲ್ಲ?” ಎಂದರು.

“ಅದು ನನಗೆ ಗೊತ್ತಿಲ್ಲ ಕೆಲವು ಜನ ಒಳ್ಳೆಯ ಮಾತನಾಡುತ್ತಾರೆ ಆದರೆ ಅವರ ಕಾರ್ಯ ಹಾಗಿರುವುದಿಲ್ಲ” ಎಂದರು ಲೋಹಿಯಾ.

ಈ ಮಾತುಕತೆಗಳ ಮಧ್ಯೆ ಐನ್‌ಸ್ಟೈನ್‌”ನೀವು ಸ್ವತಂತ್ರ “ಮನಸ್ಸಿನ ಮನುಷ್ಯರೆಂದು ನನಗೆ ಕಾಣುತ್ತೀರ” ಎಂದಾಗ ಲೋಹಿಯಾ “ನಾನು ನಿಮಗೊಂದು ಪ್ರಶ್ನೆ ಕೇಳಲೇ ರಾಜಕೀಯವನ್ನು ಕುರಿತಲ್ಲ, ನಾನಿಲ್ಲಿಗೆ ಬಂದಿರುವುದು ನಿಮ್ಮಿಂದ ಬೇರೆಯದನ್ನು ಕಲಿಯುವುದಕ್ಕೆ, ರಾಜಕೀಯವನ್ನು ಕುರಿತು ಬಹುಶಃ ನಾನು ನಿಮಗೆ ತಿಳಿಯ ಹೇಳಬಲ್ಲೆ, ಆದರೆ ನನಗೆ ನಿಮ್ಮ ಸಹಾಯ ಬೇಕಾಗಿರುವುದು ಮಾನವನ ಸೂಕ್ಷ್ಮ ಪ್ರಜ್ಞೆಯ ವಿಷಯದಲ್ಲಿ. ಭಾರತದಲ್ಲಿ ನಾನು ಹೇಳಿದೆ, ಈ ಶತಮಾನದಲ್ಲಿ ಮೂವರು ಮಹಾನ್ ವ್ಯಕ್ತಿಗಳಿದ್ದಾರೆ -ಗಾಂಧಿ, ಬರ್ನಡ್‌ಷಾ ಮತ್ತು ನೀವು ಎಂದು. ಬರ್ಲಿನ್‌ನಲ್ಲಿ ಹೇಳಿದೆ ನಮ್ಮ ಕಾಲದಲ್ಲಿ ಎರಡು ಶಕ್ತಿಗಳು ಬಂದವು-ಗಾಂಧಿ ಮತ್ತು ಅಣುಬಾಂಬು. ಗಾಂಧಿ ಇನ್ನಿಲ್ಲ, ನಿಮ್ಮ ಸಂಶೋಧನೆ ನಿರಂತರ ಸಾವಿನ ಮೂಲವಾಗುತ್ತಿದೆ. ಹೃದಯವನ್ನು ತುಕ್ಕು ಹಿಡಿಸುತ್ತಿರುವ ಈ ಒಂದು ಬಂಧನದಿಂದ ಮಾನವನ ಮನಸ್ಸು ಬಿಡಿಸಿಕೊಳ್ಳುವುದಾದರು ಹೇಗೆ? ಇವುಗಳಿಂದ ನಮ್ಮನ್ನು ಮುಕ್ತರಾಗಿಸಬಲ್ಲ ಸಂಶೋಧನೆಗೆ ನಿಮ್ಮ ಮನಸ್ಸಿನಲ್ಲಿ ಏನಾದರೂ ಪರಿಹಾರದ ಕುರುಹು ಇದೆಯೇ?

ಬಹಳ ಹೊತ್ತಿನನಂತರ ಚಿಂತನೆಯ ಆಳದಿಂದ ಐನ್‌ಸ್ಟೈನ್ “ಮನುಷ್ಯರೊಂದಿಗೆ ಬೆರೆಯುವುದು ಅದೆಷ್ಟು ಒಳ್ಳೆಯದು! ಇಲ್ಲದಿದ್ದರೆ ವ್ಯಕ್ತಿ ಅನ್ಯನಾಗುತ್ತಾನೆ” ಎಂದರು.

ನಂತರ ಲೋಹಿಯ ಅವರಿಗೆ ತಿಳಿಯಿತು ಮಾನವತೆಯ ಬಗ್ಗೆ ಗಾಂಧಿ ಐನ್‌ಸ್ಟೈನ್‌ರ ಆಳ ಒಂದೆ ಎಂದು.

ವಿಚಾರಗಳು-:ಜಾತಿಪದ್ಧತಿ:

“ಜಾತಿ ಒಂದು ದೇಶವನ್ನು ವಿಕಾರಗೊಂಡ ಬೌದ್ಧಿಕ ಶೂನ್ಯವನ್ನಾಗಿ ಮಾಡಿರುವುದಕ್ಕೆ ಭಾರತವೇ ಉದಾಹರಣೆ.”

“ಭಾರತದ ರಾಷ್ಟ್ರಾಧ್ಯಕ್ಷನೊಬ್ಬನು ಇನ್ನೂರು ಜನ ಬ್ರಾಹ್ಮಣರ ಕಾಲುಗಳನ್ನು ಕಾಶಿ ಪುಣ್ಯ ಕ್ಷೇತ್ರದಲ್ಲಿ ತೊಳೆದನು.(ಡಾ|| ರಾಜೇಂದ್ರ ಪ್ರಸಾದ್) ಒಬ್ಬನ ಕಾಲನ್ನು ಇನ್ನೊಬ್ಬನು ಸಾರ್ವಜನಿಕವಾಗಿ ತೊಳೆಯುವುದು ನಿಜವಾಗಿ ನೀಚಕೆಲಸ”

“ಒಬ್ಬನು ಇನ್ನೊಬ್ಬನ ಕಾಲನ್ನು ಅವನು ಬ್ರಾಹ್ಮಣ ಎನ್ನುವುದರ ಆಧಾರದಮೇಲೆ ತೊಳೆಯುವುದು ಜಾತಿಪದ್ಧತಿಯ ಮುಂದುವರಿಕೆಗೆ ಆಶ್ವಾಸನೆ ಕೊಟ್ಟಂತೆ, ದಾರಿದ್ರ್ಯವನ್ನು ದುಃಖವನ್ನು ಪುನಾರಾವೃತ್ತಿ ಮಾಡಿದಂತೆ. ”

“ಈಗ ಅತ್ಯಂತ ಕರಾಳ ದುಃಖ ಕವಿದಿದೆ. ಏಕೆಂದರೆ ಒಂದು ದೇಶದ ಅಧ್ಯಕ್ಷನು ಬ್ರಾಹ್ಮಣರ ಕಾಲುಗಳನ್ನು ತೊಳೆಯುತ್ತಿರಬೇಕಾದರೆ ಆ ದೇಶದ ಚಮ್ಮಾರನ, ಪೂಜಾರಿಯ, ಉಪಾದ್ಯಾಯನ ರೈತನ ನಡುವೆ ಸಂತೋಷದ ಸಂಭಾಷಣೆಯೇ ಏರ್ಪಡಲಾರದು.”

ಭಾಷೆ

“ಆಳುವವರು ಜನಸಾಮಾನ್ಯರು ಅರಿಯದಂಥ ಯಾವುದೋ ಬಾಷೆಯಲ್ಲಿ ವ್ಯವಹರಿಸುತ್ತಾರೆ. ಆ ಮೂಲಕ ರೈತರು ಕಾರ್ಮಿಕರು, ಗುಮಾಸ್ತರು ಎಲ್ಲರು ಒಂದು ಬಗೆಯ ನೈಚ್ಯಾನುಸಂಧಾನಕ್ಕೆ ಒಳಗಾಗುತ್ತಿದ್ದಾರೆ. ಇದೇ ಭಾರತದ ಅಧೋಗತಿಗೆ ಮೂಲ ಭೂತ ಕಾರಣ?

“ಇದನ್ನು ಪ್ರಜಾಪ್ರಭುತ್ವ ಎಂದು ಕರೆಯುತ್ತಾರೆ. ಒಂದು ಸರ್ಕಾರದ ಕೆಲಸ ಕಾರ್ಯಗಳು ಆ ಜನರ ಭಾಷೆಯಲ್ಲಿ ನಡೆಯದೆ ಪರಕೀಯ ಭಾಷೆಯೊಂದರ ಮುಖಾಂತರ ನಡೆಯುವುದು ಗುಲಾಮೀಯತೆ”

“ಎಲ್ಲಿಯವರೆಗೆ ಅಧಿಕಾರ, ಹಣ, ಪ್ರತಿಷ್ಠೆ ಇವೆಲ್ಲ ಇಂಗ್ಲೀಷನ್ನು ಹಿಂಬಾಲಿಸುತ್ತವೆಯೊ ಅಲ್ಲಿಯವರೆವಿಗೆ ಯಾವ ತಂದೆಯೇ ಆಗಲಿ ಇಂಗ್ಲೀಷ್ ವಿದ್ಯಾಭ್ಯಾಸ ಕೊಡಿಸುವ ಸಾಧ್ಯತೆ ಇದ್ದವನು ತನ್ನ ಮಕ್ಕಳಿಗೆ ಕೊಡಿಸದೆ ಇರುತ್ತಾನೆಂದು ತಿಳಿಯುವುದು ಹುಂಬುತನ”

“ಈ ಭಾಷೆಗಳ ಕುರಿತ ಚರ್ಚೆಯು ತನ್ನ ಕೇಂದ್ರವಾದ ಮೂಲಭೂತ ಅಂಶವನ್ನೇ ಕಳೆದುಕೊಂಡಿದೆ. ಒಂದು ಹಿಂದುಳಿದ ಅರ್ಥವ್ಯವಸ್ಥೆಯಲ್ಲಿ ಇಂಗ್ಲೀಷಿನಂಥ ಪರಕೀಯ ಭಾಷೆಯನ್ನೇ ಬಳಸುತ್ತ ಹೋದರೆ ಅದು ಉತ್ಪಾದನೆಯನ್ನು ಕುಂಠಿತಗೊಳಿಸುತ್ತದೆ. ವಿದ್ಯಾಭ್ಯಾಸದಲ್ಲಿ ನಮ್ಮ ಕಲಿಯುವಿಕೆಯನ್ನು ಕುಂಠಿತಗೊಳಿಸುತ್ತದೆ. ಸಂಶೋಧನೆಯನ್ನು ಸಂಪೂರ್ಣ ಶೂನ್ಯಮಾಡುತ್ತದೆ.

ಸರ್ಕಾರಿ ವ್ಯವಹಾರಗಳಲ್ಲಿ ಶಿಥಿಲತೆಯನ್ನು ಉಂಟುಮಾಡಿ ವಿಚಕ್ಷಣೆಯನ್ನು ಹಾಳುಮಾಡುತ್ತದೆ. ಭಾರತೀಯರಿಗೆ ಅವರ ರಾಷ್ಟ್ರೀಯತೆಗೆ ಕುಂದು ತರುತ್ತದೆಂದು ಇಂಗ್ಲೀಷನ್ನು ತೆಗಳುವ ಕಾರಣಕ್ಕಿಂತ ನಮ್ಮ ಅರ್ಥ ವ್ಯವಸ್ಥೆಗೆ ಅದು ಉಂಟು ಮಾಡುತ್ತಿರುವ ಹಾನಿ ಹಾಗೂ ಅಸಮಾನತೆಗೆ ಮತ್ತು ಅಲ್ಪ ಸಂಖ್ಯಾಂತರ ಆಡಳಿತಕ್ಕೆ ಅದು ಕೊಡುವ ಪ್ರೋತ್ಸಾಹ ಇವುಗಳಿಗಾಗಿ ಅವನ್ನು ವಿಮರ್ಶಿಸುವುದು ಅಗತ್ಯ”

“ಹಿಂದಿ ನರಕಕ್ಕೆ ಹೋಗಲಿ, ಅದರ ಬಗ್ಗೆ ನನಗೆ ಚಿಂತೆಯಿಲ್ಲ. ಅದರೆ ಇಂಗ್ಲೀಷ್ ತೊಲಗಲೇಬೇಕು?”

ಭಾರತದ ರೈತ

“ಭಾರತೀಯ ರೈತನ ಜಡತ್ವ, ಸೋಮಾರಿತನ, ಇತ್ಯಾದಿಗಳನ್ನು ಸುಲಭವಾಗಿ ನಾವು ನಮ್ಮ ಭೂಶಾಸನ ಮತ್ತು ಸಂಪ್ರದಾಯಗಳಲ್ಲಿ ಗುರುತಿಸಬಹುದು. ಈ ಕಾನೂನು ಮತ್ತು ಸಂಪ್ರದಾಯಗಳ ಮುಳ್ಳು, ಕಾಡಿನಲ್ಲಿ ಸಿಕ್ಕಿಕೊಂಡಿರುವ ಕೃಷಿಕರಿಗೆ ತಮ್ಮ ಹೊಟ್ಟೆಪಾಡೊಂದನ್ನು ಬಿಟ್ಟರೆ ಬೇರೆ ಯಾವುದೇ ವಿರಾಮವಾಗಲೀ ಅಭಿರುಚಿಯಾಗಲೀ ಸಿದ್ಧಿಸಿಲ್ಲ”

“ರೈತ ಸಮುದಾಯ ದೇಶದಾದ್ಯಂತ ತಮಗಾದ ಅನ್ಯಾಯಗಳನ್ನು ಮತ್ತು ತಮ್ಮ ಆಶೆಗಳನ್ನು ಆರು ಗುರಿಗಳನ್ನು ಕ್ರೋಢೀಕರಿಸಿದ್ದಾರೆ”

“೧. ಉಳುವವನಿಗೇ ಭೂಮಿ. ೨. ಸಾಗುವಳಿಯಾಗದ ಭೂಮಿಗೆ ಕೃಷಿ ಸೇನೆ ೩. ಸಣ್ಣ ಪ್ರಮಾಣದ ಯಂತ್ರಗಳ ಮೂಲಕ ಕೈಗಾರಿಕೀಕರಣ. ೪. ಪ್ರತಿ ಸಂಸಾರಕ್ಕೆ ಕನಿಷ್ಟ ೩೦ ಎಕರೆಯಂತೆ ಭೂಮಿಯ ಮರು ಹಂಚಿಕೆ ಮತ್ತು ಒಂದು ಹಸು. ೫. ಕೃಷಿ ಮತ್ತು ಕೈಗಾರಿಕಾ ಬೆಲೆಗಳ ನಡುವೆ ಸಮತೋಲನ ೬. ಚತುಸ್ತಂಭ ರಾಷ್ಟ್ರ. ಈ ಗುರಿಗಳು ರೈತಭಾರತದ ಅಕಾಂಕ್ಷೆಗಳಾದರೂ ಅವು ಕೇವಲ. ಅವರ ಉದ್ಧಾರಕ್ಕಷ್ಟೇ ಅಲ್ಲದೆ, ಇಡೀ ಜನತೆಯ ಸಾರ್ವತ್ರಿಕ ಒಳಿತಿಗೆ ಸಂಬಂಧಿಸಿದಂತಹವು.”

ಸಂಘಟನೆ, ಸತ್ಯಾಗ್ರಹ, ಹೋರಾಟ:

“ಸತ್ಯಾಗ್ರಹಕ್ಕೆ ಜನ್ಮವಿತ್ತ ನಾಡು ಕಡೆಯ ಪಕ್ಷ ಅದರ ಹಿಂದಿನ ತತ್ವಗಳನ್ನು ತಿಳಿದುಕೊಳ್ಳಬೇಕು.

ಭಾರತದ ದುಡಿಮೆಗಾರ ಎಚ್ಚತ್ತಿದ್ದಾನೆ. ಅತ್ಯಂತ ಕರಾಳರಾತ್ರಿಯ ದಿನಗಳಲ್ಲಿ ನವ ಸಮಾಜದ ಅಸ್ಥಿಭಾರ ಹಾಕುವ ಕೆಲಸ ನಡೆದೇಇದೆ. ರಾಜ ಮಹಾರಾಜರುಗಳನ್ನು ಬಹಿಷ್ಕರಿಸುವ, ಬಂಡವಾಳಗಾರರನ್ನು ಹತ್ತಿಕ್ಕುವ, ಮೇಲು ಕೀಳು ಜಾತಿಯನ್ನು ತೊಡೆದು ಹಾಕುವ ಮಾನವರನ್ನು ಅಸ್ವತಂತ್ರತರನ್ನಾಗಿಯೂ ಕುಬ್ಜ ಹೃದಯಿಗಳನ್ನಾಗಿಯೂ ಮಾಡುವವರನ್ನು ನಿರ್ನಾಮ ಮಾಡುವ ಕಾರ್ಯನಿಧಾನವಾಗಿ ಸಾಗುತ್ತಲೆ ಇದೆ.

ನಮ್ಮಲ್ಲಿ ಬಹುಮಂದಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತೇವೆ. ಆದರೆ ಕ್ರಿಯೆಗೆ ತೊಡಗುವುದಿಲ್ಲ”

ಅಹಿಂಸೆ ಮತ್ತು ಹಿಂಸೆ:

“ಒಂದು ದೇಶದ ಪೋಲೀಸರು ಆಯುಧಗಳಿಲ್ಲದೆ ಉಸ್ತುವಾರಿ ನೋಡಿಕೊಳ್ಳುವುದು ಹೇಗೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಪ್ರಶ್ನೆಯೆ ಹಿಂದೆಯೇ ಈ ಆಯುಧಗಳ ಹಿಂದಿನ ಗೂಢತೆ ಮತ್ತು ಅವುಗಳ ಭವಿಷ್ಯ ಅಡಗಿದೆ”

“ನಾನು ಅಣುಬಾಂಬನ್ನು ಅದು ಸಿಗುವುದಿದ್ದರೆ ದೊರಕಿಸಿಕೊಳ್ಳಬೇಕೆಂದು ಕೇಳಿದ್ದೇನೆ. ನಾನು ಎಂದೆಂದೂ ಇನ್ನೊಬ್ಬನ ಮನೆಯನ್ನು ವಶಪಡಿಸಿಕೊಳ್ಳಲು ಆಯುಧಗಳನ್ನು ಉಪಯೋಗಿಸಲಾರೆ. ಅದರೆ ನನ್ನ ಮಾತೃಭೂಮಿಯೇ ಶತ್ರುಗಳ ಆಕ್ರಮಣಕ್ಕೆ ತುತ್ತಾದಾಗ ನಾನು ಯಾವುದೇ ಅವಶ್ಯವಿರುವ ಹಾಗೂ ದೊರಕುವ ಶಸ್ತ್ರಾಸ್ತ್ರಗಳನ್ನು ಉಪಯೋಗಿಸಲು ಹಿಂದೆಗೆಯಲಾರೆ.”

ವಿದೇಶಾಂಗ ನೀತಿ:

“ಭಾರತವು ಸುಸ್ತಾಗಿ ಅಡ್ಡ ಮಲಗಿದೆ. ಅದರ ಎಲ್ಲಾ ಧೋರಣೆಗಳೂ, ಅದರ ರಕ್ಷಣಾ ನೀತಿ, ಅದರ ವಿದೇಶಾಂಗ ನೀತಿ, ಎಲ್ಲಕ್ಕಿಂತ ಹೆಚ್ಚಾಗಿ ಅದರ ಅರ್ಥಿಕ ನೀತಿ ನುಚ್ಚುನೂರಾಗಿದೆ.”

“ತನ್ನ ಧ್ಯೇಯರಹಿತ ಮತ್ತು ಅಸಮಾನತೆಯ ಪ್ರಾತಿನಿಧ್ಯತೆಗಳಿಂದಾಗಿ ವಿಶ್ವ ಸಂಸ್ಥೆಯು ವಿಶ್ವಪ್ರಜ್ಞೆಯ ನ್ಯಾಯಾಲಯವಾಗಲು ಸಮರ್ಥವಾಗಿಲ್ಲ.”

“ನಿಶಸ್ತ್ರೀಕರಣವು ವಿಶ್ವದಾದ್ಯಂತ ಆಗಬೇಕು. ಇಲ್ಲದಿದ್ದಲ್ಲಿ ಅದು ಯಾವ ದೇಶದಲ್ಲಿಯೂ ಆಗುವುದಿಲ್ಲ”

ಕಮ್ಯೂನಿಸಂ:

“ಕಮ್ಯೂನಿಸಂ = ಸಮಾಜವಾದ+ ಸರ್ವಾಧಿಕಾರ+ ರಷ್ಯಾ+ ಯುದ್ಧ (-) ಸ್ವಾತಂತ್ರ್ಯ.

ಕಡೆಯ ಅಧ್ಯಾಯ

ಲೋಹಿಯಾ ೩೦.೯.೧೯೬೭ ರಲ್ಲಿ ದೆಹಲಿಯ ವಿಲಿಂಗ್ಡನ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾದರು. ಹಾಗೂ ರಾಜಕೀಯ ಕೈವಾಡದ ಬೇಜವಾಬ್ದಾರಿಯ ಶಸ್ತ್ರ ಚಿಕಿತ್ಸೆಯ ನಂತರ ರಕ್ತ ಸೋರಿಹೋಯ್ತು. ಅವರ ಉಸಿರಿನ ಹೋರಾಟ ಆರಂಭವಾಯ್ತು, ಪ್ರಜ್ಞಾಶೂನ್ಯರಾಗಿ ಕೆಲವು ದಿನ ಕಳೆದರು. ಮಧ್ಯೆ ಮಧ್ಯೆ ಅರೆ ಎಚ್ಚರಾದಾಗ ಹೇಳುತ್ತಿದ್ದರು: –

ಒಮ್ಮೆ ಡಾಕ್ಟರುಗಳ ಸಮೂಹವೆ ಅವರ ಸುತ್ತ ನೆರೆದಿದ್ದಾಗ “ದೇಶದ ರಾಜಕಾರಣಿಗಳ ಹಾಗೂ ವೈದ್ಯರುಗಳ ಸ್ಥಿತಿ ಒಂದೇ, ಇಬ್ಬರೂ ಬುದ್ಧಿ ಇಲ್ಲದವರು” ಎಂದರು.

ಒಮ್ಮೆ ಅರೆ ಎಚ್ಚರವಾಗಿದ್ದಾಗ; – “ಕೋಟ್ಯಾಂತರ ಜನರ ಗತಿ ಏನು? ರೈತರ ಭವಿಷ್ಯವೇನು? ಭೂ ಕಂದಾಯದ ಬಗ್ಗೆ ಏನಾಗುತ್ತದೆ? ಹಿಂದಿ ಭಾಷೆ ……

ಮತ್ತೊಮ್ಮೆ “ಒಬ್ಬ ವೈದ್ಯನ ಮುಖವನ್ನು ಕಾಣದೆ ಕೋಟ್ಯಾಂತರ ಜನ ಸಾಯುತ್ತಿರುವಾಗ ನನಗಾಗಿ ಇಷ್ಟೊಂದು ಜನ ವೈದ್ಯರುಗಳೇ” ಎಂದು ನೊಂದರು.

ಕಡೆಯಲ್ಲಿ: “ಇನ್ನೂ ಮಹತ್ಕಾರ್ಯಗಳನ್ನು ಮಾಡಬೇಕಾಗಿದೆ ಎಷ್ಟೋ ದೊಡ್ಡ ಕೆಲಸಗಳನ್ನು ಮಾಡಿ ಮುಗಿಸಬೇಕಾಗಿದೆ. ಅದಕ್ಕೆ ಒಂದು ಕೈ ಏನನ್ನು ಮಾಡಲು ಸಾಧ್ಯ”

ಎಂದು ೧೨-೧೦-೧೯೬೭ ರಂದು ತಮ್ಮ ಕಡೆಯ ಉಸಿರೆಳೆದರು.

“ಸದ್ಯದ ಭಾರತೀಯ ಸಂದರ್ಭದಲ್ಲಿ ಲೋಹಿಯಾ ಒಬ್ಬರೇ ಒರಿಜಿನಲ್ ಎನ್ನಿಸುವ ತತ್ವಮೀಮಾಂಸಕರು. ಲೋಹಿಯಾರವರ ಅಲೋಚನೆಗಳನ್ನು ವಿಶ್ವವಿದ್ಯಾಲಯದ ಒಳಕ್ಕೆ ಅವರ ಜೀವಿತ ಕಾಲದಲ್ಲಿ ಬರದಂತೆ ನೋಡಿಕೊಂಡ ನಮ್ಮ ಬುದ್ಧಿಜೀವಿಗಳ ಸಮೂಹವು ಒಂದು ನೀಚರವ್ಯೂಹ. ನಮ್ಮ ಭಾರತದಲ್ಲಿ ಬೇರೂರಿದ ಗುಲಾಮಗಿರಿಯ ಸ್ವರೂಪವನ್ನು ಇದು ಶೃತ ಪಡಿಸುತ್ತದೆ. ಲೋಹಿಯಾರವರ ಆಲೋಚನೆಗಳಿಗೆ ಪ್ರತಿಸ್ಪಂದಿಸದ ಚೇತನ ಭಾರತದ ಯಾವುದಕ್ಕೂ ಸ್ಪಂದಿಸಲಾರದು.”

ತೇಜಸ್ವಿಯವರ ಈ ಎಚ್ಚರದೊಂದಿಗೆ ನಮ್ಮ ಇಂದಿನ ಸ್ಥಿತಿಯ ತೀವ್ರ ಅಗತ್ಯವೆಂದರೆಲೋಹಿಯಾ ಅಧ್ಯಯನ.

-೧೯೭೯

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಕ್ಷಗಾನ ಪ್ರಸಂಗ ಸಾಹಿತ್ಯ
Next post ನೀನಿಲ್ಲದಾಗ-ಇದ್ದಾಗ

ಸಣ್ಣ ಕತೆ

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

cheap jordans|wholesale air max|wholesale jordans|wholesale jewelry|wholesale jerseys