ನಾನಿನ್ನ ಕರೆವೆ ನೀ ಬರದೆ ಇರುವೆ | ಏಕೆ ನೀ ಬಾರದಿರುವೆ
ನಿನಗಾಗಿ ತಪಿಸಿ ಬಿಸಿಲಲ್ಲಿ ಜಪಿಸಿ | ಸುಖವನ್ನು ಸಾರದಿರುವೆ

ಒಳಗೆಲ್ಲ ಬೆಂಕಿ ಮೇಲೆಲ್ಲ ಬೆಂಕಿ | ಉರಿ ಉರಿಯ ಬೆಂಕಿಯಾದೆ
ಆರಿಸುವ ನೀರೆ ನೀನೇಕೆ ಬಾರೆ | ಬಹು ಸಮಯ ಕಾದೆ ಕಾದೆ

ಮೋಡಗಳ ಕನಸು ಕೂಡಿಹುದು ಮನಸು | ಭಾವುಕತೆ ಆವಿಯಾಗಿ
ಕಪ್ಪಾದ ಕೇಶ ಕೆದರಿಹುದು ಪಾಶ | ಇರುಳೆಲ್ಲ ಬೇಗೆಯಾಗಿ

ಚಳಿಯಲ್ಲಿ ಹುಡುಗಿ ನಾಚಿದೊಲು ನಡುಗಿ | ಉಳಿಸಿಕೊಳೆ ಪ್ರಾಣಮಾನ
ಬಿಸಿಲೆಲ್ಲ ಸುರಿದು ವಸನವನು ಹರಿದು ಹುಚ್ಚಾದೆ ಮರೆತು ಮಾನ

ನಾ ಕಠಿಣ ಹೌದು ಕಲ್ಮಣ್ಣು ಹೌದು | ನಿನ್ನೊಡನೆ ನಾನು ನೀರ
ನೀನಿಲ್ಲದಿರಲು ಮಸಣದಲ್ಲೊರಲು | ನೀ ಹಳ್ಳ ನಾನು ತೀರ

ಎದೆಯ ನಿಟ್ಟುಸಿರು ಸುಡುತಲಿದೆ ಬಸಿರು | ಅದು ನಿನಗೆ ತಾಕದೇನೆ
ಹತ್ತಿರಕೆ ಬರದೆ ಕಾಡುತಿಹೆ ಬರಿದೆ | ತಂಗಾಳಿಗೇನೋ ಬೇನೆ
ಅರಳಿಯಾ ಮರದಿ ಕಲಕಲನೆ ಸರದಿ | ಎಲೆಯಲುಗೆ ನಿನ್ನ ಉಲುಹು

ಹುಣ್ಣಿಮೆಯ ಚಂದ್ರ ಮೂಡಿದಾನಂದ್ರ | ನಿನ್ನ ಮುಖ ಸುಳಿದು ಬಂತು
ತಣ್ಣನೆಯ ಗಾಳಿ ಮರದಲ್ಲಿ ಹೊರಳಿ | ಮೀಟಿತ್ತು ನೆನಪು ತಂತು

ಕಾಯ್ಸದಿರು ಇನ್ನು ಓ ಎನ್ನ ಹೊನ್ನು | ಓಡುತ್ತ ಬಳಿಗೆ ಬಾರೆ
ಸೃಷ್ಟಿಯಲಿ ಜನನ ಅದಕಾಗಿ ಧ್ಯಾನ | ಸವಿಫಲದ ಸುಖವ ತಾರೆ
*****