ಒಲವೇ… ಭಾಗ – ೮

ಸದಾ ಲವಲವಿಕೆಯಿಂದ ಕೂಡಿದ್ದ ಮನೆಯೊಳಗೆ ಸ್ಮಶಾನಮೌನ ಆವರಿಸಿಕೊಂಡಿತು. ಮನೆಯಲ್ಲಿ ಒಂದು ಗುಂಡು ಸೂಜಿ ಬಿದ್ದರೂ ಸದ್ದು ಕೇಳಿವಷ್ಟು ಮೌನ ಆವರಿಸಿಕೊಂಡಿತ್ತು. ಮನೆಯ ಲವಲವಿಕೆಗೆ ಕಾರಣೀಭೂತಳಾಗಿದ್ದ ಅಕ್ಷರ ತುಳಿದ ಹಾದಿಯಿಂದ ರಾಜಶೇಖರ್, ಲೀಲಾವತಿ ಕಂಗಾಲಾಗಿ ಮುಂದೇನು? ಎಂದು ಯೋಚಿಸುತ್ತಾ ಕುಳಿತುಬಿಟ್ಟರು. ಹೋಗಿ ಹೋಗಿ ಒಬ್ಬ ಬಡವನ ಪ್ರೀತಿಯ ಬಲೆಗೆ ಬಿದ್ದು ಬಿಟ್ಟಿದ್ದಾಳೆ. ಆ ಪ್ರೀತಿಯ ಬಲೆಯಿಂದ ಆಕೆಯನ್ನು ಬಿಡಿಸಿ ತರುವುದಾದರೂ ಹೇಗೆ? ಎಂಬ ಚಿಂತೆ ಕಾಡಿತು. ಮಾತಿಗೆ ಬೆಲೆ ಕೊಡದಷ್ಟು ದೂರ ಸಾಗಿಬಿಟ್ಟಿದ್ದಾಳೆ. ಇನ್ನು ಚಾಟಿಯೇಟಿಗೆ ಮಾತ್ರ ಆಕೆ ಬಗ್ಗೋದಕ್ಕೆ ಸಾಧ್ಯ. ಅದು ಬಿಟ್ಟು ಬೇರೆ ದಾರಿಯೇ ಇಲ್ಲ ಅಂದುಕೊಂಡ ರಾಜಶೇಖರ್ ಛೇ.., ಇಷ್ಟೊಂದು ಎತ್ತರಕ್ಕೆ ಬೆಳೆದ ಮಗಳಿಗೆ ಹೊಡೆಯೋದು ಸರಿಯಲ್ಲ ಅನ್ನಿಸಿ ಬಂದ ಕೋಪವನ್ನು ತಣ್ಣಗೆ ಮಾಡಿಕೊಳ್ಳುವ ಪ್ರಯತ್ನ ಮಾಡಿ ತಲೆಮೇಲೆ ಕೈ ಹೊತ್ತು ಕುಳಿತರು.

ರಾಜಶೇಖರ್ ಜೀವನದಲ್ಲಿ ಎಂದಿಗೂ ಇಂತಹ ಒಂದು ದುಃಖದ ಸ್ಥಿತಿ ಎದುರಿಸಿರಲಿಲ್ಲ. ಎದುರಿಸುವ ಕಲ್ಪನೆ ಕೂಡ ಇರಲಿಲ್ಲ. ಅವರ ಜೀವನ ಶೈಲಿಯೇ ಹಾಗೆ ಇತ್ತು. ಆಲೋಚನೆ ಮಾಡಿ ಮನಸ್ಸು ಹಾಳು ಮಾಡಿಕೊಳ್ಳುವಂತಹ ಪರಿಸ್ಥಿತಿಯೇನು ನಿರ್ಮಾಣಗೊಂಡಿರಲಿಲ್ಲ. ಅಗರ್ಭ ಶ್ರೀಮಂತಿಕೆಯಲ್ಲಿ ಮೆರೆದ ರಾಜಶೇಖರ್‌ಗೆ ಯಾತನೆ ಎಂಬ ಪದವೇ ಹೊಸತು. ಅದು ಅಕ್ಷರಳ ಮೂಲಕ ಈಗಷ್ಟೇ ಪರಿಚಯವಾಯಿತು. ಎದುರಿಗೆ ಕುಳಿತ ಮಗಳೆಡೆಗೆ ದೃಷ್ಟಿ ಹಾಯಿಸಿ ಅಕ್ಷರ, ಈಗ್ಲಾದ್ರೂ ನಿನ್ನ ನಿಲುವು ಬದಲಾಯಿಸಿಕೊಳ್ಳೋದಕ್ಕೆ ಸಾಧ್ಯ ಇಲ್ವ? ತುಂಬಾ ವಿನಯದಿಂದ ಕೇಳಿಕೊಂಡರು.

ಇಲ್ಲ ಅಪ್ಪ, ನನ್ನಿಂದ ಸಾಧ್ಯ ಇಲ್ಲ. ಮುಖ ಊದಿಸಿಕೊಂಡು ಹೇಳಿದಳು.

ಇವಳಿಗೆ ಮಾತಿನಲ್ಲಿ ಬುದ್ಧಿವಾದ ಹೇಳಿ ಸುಖವಿಲ್ಲವೆಂದು ಇದ್ದಕ್ಕಿದ್ದಂತೆ ಉಕ್ಕಿ ಬಂದ ಸಿಟ್ಟಿನಿಂದ ಮಗಳಿಗೆ ಮನಬಂದಂತೆ ಥಳಿಸಲು ಪ್ರಾರಂಭಿಸಿದರು. ರಾಜಶೇಖರ್ ಕೋಪ ಕಂಡು ಲೀಲಾವತಿ ಒಂದುಕ್ಷಣ ದಂಗಾಗಿ ಹೋದರು. ಮತ್ತೆ ಸುಧಾರಿಸಿಕೊಂಡು ಮಧ್ಯಪ್ರವೇಶಿಸಿ ಮಗಳ ರಕ್ಷಣೆಗೆ ಮುಂದಾದರು.

ನಿಮ್ಗೆ ಏನಾಗಿದೆ ಇವತ್ತು? ಬೆಳೆದಿರೋ ಮಗಳ ಮೇಲೆ ಕೈ ಮಾಡ್ತಾ ಇದ್ದೀರಲ್ಲ? ಬುದ್ಧಿವಾದ ಹೇಳೋದು ಬಿಟ್ಟು ಇಡ್ಕೊಂಡು ಹೊಡಿಯೋದು ಸರಿನಾ? ಲೀಲಾವತಿ ಗಂಡನ ವಿರುದ್ಧ ರೇಗಾಡಿದರು.

ಈಗ ಅಮ್ಮ-ಮಗಳು ಸೇಕೊಂಡು ಏನು ಮಾಡ್ಬೇಕೂಂತ ತೀರ್ಮಾನ ಮಾಡಿದ್ದೀರ? ಆ ಅಯೋಗ್ಯನ ತಂದು ಮನೆ ಅಳಿಯನನ್ನಾಗಿ ಮಾಡ್ಕೋಬೇಕೂಂತ ತೀರ್ಮಾನ ಮಾಡಿದ್ದೀರಾ…? ಮಗಳನ್ನ ದೂರಿ ಏನು ಪ್ರಯೋಜನ? ಮೊದ್ಲು ನೀನು ಸರಿ ಇದ್ದಿದ್ರೆ ಮಗಳು ಕೂಡ ಸರಿಯಾಗಿಯೇ ಇತಾ ಇದ್ಲು. ಮಗಳನ್ನ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳದೆ ಆ ಪೋಲಿ ಹುಡುಗನ ಜೊತೆ ಹಾದಿ ಬೀದಿಯಲ್ಲಿ ಸುತ್ತಾಡ್ಲಿಕ್ಕೆ ಬಿಟ್ಟೆ? ಈಗೇನಾಗಿದೆ ನೋಡು. ನಮ್ಮ ವಿರುದ್ಧವೇ ತಿರುಗಿ ಬೀಳುವಷ್ಟರ ಮಟ್ಟಿಗೆ ಬೆಳೆದು ಬಿಟ್ಟಿದ್ದಾಳೆ? ನಾಯಿನ ಯಾವತ್ತೂ ಸಿಂಹಾಸನದ ಮೇಲೆ ಕೂರಿಸೋದಕ್ಕೆ ಸಾಧ್ಯ ಇಲ್ಲ. ಸಿಂಹಾಸನದ ಮೇಲೆ ಕೂರಿಸಿದರೂ ಅದು ಅಲ್ಲಿ ಹುಚ್ಚೆ ಹುಯ್ಯುವುದನ್ನ ನಿಲ್ಲಿಸೋದಿಲ್ಲ. ನಿನ್ನ ಮಗಳ ಆತುರ ನೋಡಿದ್ರೆ ನಾಯಿಗೆ ಪಟ್ಟಾಭಿಷೇಕ ಕಟ್ಟೋ ತರ ಕಾಣ್ತಾ ಇದೆ. ನಿನ್ನ ಮುದ್ದಿನ ಮಗಳು ಮುಂದೇನು ಮಾಡ್ಬೇಕೂಂತ ತೀರ್ಮಾನ ಮಾಡಿದ್ದಾಳೋ ನೀನೇ ಕೇಳು ಮಗಳೊಂದಿಗೆ ಮಾತನಾಡಲು ಇಷ್ಟವಿಲ್ಲದೆ ಮಗಳ ಮನವೊಲಿಸುವ ಜವಾಬ್ದಾರಿಯನ್ನು ಲೀಲಾವತಿ ಹೆಗಲ ಮೇಲೆ ಹೊರಿಸುವ ಪ್ರಯತ್ನ ಮಾಡಿದರು.

ಲೀಲಾವತಿಗೆ ಮಗಳ ಬಳಿ ಕೇಳುವುದಕ್ಕೆ ಏನು ಉಳಿದಿರಲಿಲ್ಲ. ಎಲ್ಲವನ್ನು ಅವಳು ಅದಾಗಲೇ ಸ್ಪಷ್ಟವಾಗಿ ಹೇಳಿಯಾಗಿತ್ತು. ಪುನಃ ಕೇಳುವುದೇನಿದೆ? ಕೇಳಿದರೆ ಅಭಿಮನ್ಯುವಿನೊಂದಿಗೆ ಮದ್ವೆಯಾಗ್ತೇನೆ ಎಂಬ ಅದೇ ಉತ್ತರ ದೊರಕುವುದು ನಿಶ್ಚಿತ ಎಂದು ಅರಿತ ಲೀಲಾವತಿ ಮೌನಕ್ಕೆ ಶರಣಾದರು.

ಮಗಳನ್ನ ಹಾದಿ ತಪ್ಪೋ ಹಾಗೆ ಬೆಳೆಸಿದ್ದೇ ಅವರು. ಇದೀಗ ಆ ಪಾಪವನ್ನೆಲ್ಲ ನನ್ನ ಮೇಲೆ ಹೊರಿಸೋದಕ್ಕ್ಕೆ ಪ್ರಯತ್ನ ಮಾಡ್ತಾ ಇದ್ದಾರೆ. ಈ ಗಂಡಸರ ಬುದ್ಧಿನೇ ಇಷ್ಟು. ಒಳ್ಳೆಯದನ್ನೆಲ್ಲ ತಮ್ಮ ಬಳಿ ಇಟ್ಟುಕೊಂಡು ಕೆಟ್ಟದನ್ನೆಲ್ಲ ಹೆಂಗಸರ ಮೇಲೆ ಹೊರಿಸಿ ಬಿಡುವ ಜಾಯಮಾನದವರು. ಮಗಳು ಸಣ್ಣಪುಟ್ಟ ತಪ್ಪು ಮಾಡಿದಾಗಲೆಲ್ಲ ಒಂದುಷ್ಟು ಬೈದರೂ ಸಹಿಸಿಕೊಳ್ಳದೆ ಮಗಳಿಗೆ ಯಾಕೆ ಬೈದೆ ಅಂಥ ನನ್ನನ್ನೇ ಹೊಡೆಯೋದಕ್ಕೆ ಬತಾ ಇದ್ದ ಮನುಷ್ಯ ಇವತ್ತು ಮಗಳು ಹಾದಿ ತಪ್ಪೋದಕ್ಕೆ ನಾನು ಕಾರಣ ಅಂತ್ತಿದ್ದಾರಲ್ಲ!? ಅನುಭವಿಸಲಿ; ಅವರು ಅನುಭವಿಸಬೇಕಾದದ್ದೆ. ಮಗಳನ್ನ ಹಕ್ಕಿಯ ಹಾಗೆ ಹಾರೋದಕ್ಕೆ ಬಿಟ್ಟ ಪರಿಣಾಮವನ್ನ ಅವರು ಅನುಭವಿಸಿಯೇ ತೀರಬೇಕು ಎಂದು ಮನದಲ್ಲಿ ಅಂದುಕೊಂಡ ಲೀಲಾವತಿ ಕಣ್ಣೀರು ಸುರಿಸುತ್ತಾ ಕುಳಿತರು.

ಮನೆಯಲ್ಲಿ ರಾದ್ಧಾಂತ ನಡೆದರೂ ಅಕ್ಷರ ಧೃತಿಗೆಡಲಿಲ್ಲ. ಜೀವ ಹೋದರೂ ಸರಿಯೇ ಬೇರೊಬ್ಬನೊಂದಿಗೆ ತಾನು ಮದುವೆ ಯಾಗೋದಿಲ್ಲವೆಂದು ನಿರ್ಧರಿಸಿದಳು. ನಿಂದಿಸಿದಷ್ಟು, ಹೊಡೆದಷ್ಟು ಆಕೆಯ ಮನಸ್ಸು ಅಭಿಮನ್ಯುವನ್ನು ಮದುವೆ ಯಾಗುವ ವಿಷಯದಲ್ಲಿ ಮತ್ತಷ್ಟು ಗಟ್ಟಿಯಾಗುತ್ತಾ ಹೋಯಿತು. ತನ್ನಿಂದ ಆದ ತಪ್ಪಿಗೆ ಅಮ್ಮ ಅಪ್ಪನಿಂದ ನಿಂದನೆಯ ಶಿಕ್ಷೆ ಅನುಭವಿಸುತ್ತಿರುವುದನ್ನು ಕಂಡು ಆಕೆಯಿಂದ ಸುಮ್ಮನಿರಲಾಗದೆ ಮತ್ತಷ್ಟು ಆಕ್ರೋಶಗೊಂಡಳು.

ಅಪ್ಪ.., ನಾನು ಪ್ರೀತಿ ಮಾಡಿದ ವಿಚಾರದಲ್ಲಿ ಅಮ್ಮಂದೇನು ತಪ್ಪಿಲ್ಲ. ಅಮ್ಮನಿಗೆ ಸುಮ್ನೆ ಕಿರುಕುಳ ಕೊಡ್ಬೇಡಿ. ನೀವು ಹೊಡೆದರೂ, ಬಡಿದರೂ ನಾನು ಮಾತ್ರ ಮನಸ್ಸು ಬದ್ಲಾಯಿಸೋದಿಲ್ಲ. ಈ ದೇಹ, ಮನಸ್ಸು ಏನಿದ್ದರೂ ಅಭಿಮನ್ಯುವಿಗೆ ಮಾತ್ರ ಮುಡಿಪು. ನನ್ನ ಕನಸುಗಳ ಮೇಲೆ ಸಮಾಧಿ ಕಟ್ಟಿ ಅದರಿಂದ ಸಂತೋಷ ಪಡ್ಬೇಡಿ. ನಿಮ್ಮ ವರ್ತನೆ ನೋಡಿದ್ರೆ ಮಗಳು ಹಾಳಾಗಿ ಹೋದ್ರೂ ಪವಾಗಿಲ್ಲ, ನಾವು ಮಾತ್ರ ಸುಖವಾಗಿದ್ರೆ ಸಾಕು ಎಂಬಂತ್ತಿದೆ. ಯಾವುದೇ ಕಾರಣಕ್ಕೂ ನಿಮ್ಮ ಘನತೆಗೆ ಕುಂದುಂಟಾಗಬಾರದು. ಅದೊಂದೇ ನಿಮ್ಮ ಏಕೈಕ ಆಸೆ. ನಿಮ್ಮ ಆಸೆ ಈಡೇರಿಕೆಗೆ ನನ್ನ ಬದುಕನ್ನ ನಾಶ ಮಾಡ್ಕೊಳ್ಳೋದಕ್ಕೆ ನನ್ಗೆ ಇಷ್ಟ ಇಲ್ಲ. ಯಾರ ಸಹಕಾರ ಇಲ್ಲದೆ ಬದುಕು ನಡೆಸ್ತೇನೆ. ನಿಮ್ಮ ಸಹಕಾರವೇನು ನನ್ಗೆ ಬೇಕಾಗಿಲ್ಲ. ಇನ್ನು ಮುಂದೆ ನಿಮ್ಮ ಹಂಗಿನಲ್ಲಿ ಬದುಕು ನಡೆಸೋದಕ್ಕೆ ನನ್ಗೆ ಇಷ್ಟವಿಲ್ಲ. ನೀವಂದುಕೊಂಡಂತೆ ನಾನೇನು ಇನ್ನೂ ಚಿಕ್ಕವಳಲ್ಲ. ಕಾಗಕ್ಕ, ಗುಬ್ಬಕ್ಕ ಕಥೆ ಕೇಳೋದಕ್ಕೆ. ನನ್ನ ನಿರ್ಧಾರಗಳನ್ನು ನಾನೇ ಕೈಗೊಳ್ಳುವಷ್ಟು ಬೌದ್ಧಿಕವಾಗಿ ಬೆಳೆದಿದ್ದೇನೆ ಕಂಪಿಸುತ್ತಿದ್ದ ತುಟಿಗಳ ನಡುವಿನಿಂದ ಸಿಡಿಲು ಬಡಿದಂತಹ ಮಾತುಗಳು ಹೊರಬಿದ್ದವು.

ಆಕೆಯ ಮಾತಿನ ಧಾಟಿ ಭೂಗರ್ಭದಲ್ಲಿ ಅಡಗಿದ್ದ ಜ್ವಾಲಾಮುಖಿ ಒಮ್ಮಿಂದೊಮ್ಮೆಲೆ ಸ್ಫೋಟಿಸಿದ ಹಾಗೆ, ಪ್ರಶಾಂತವಾಗಿದ್ದ ಸಮುದ್ರದಲ್ಲಿ ಇದ್ದಕ್ಕಿದ್ದ ಹಾಗೆ ಸುನಾಮಿ ಉದ್ಭವಿಸಿದ ಹಾಗೆ ಇತ್ತು. ಆಕೆ ಎಂದೂ ಕೂಡ ಅಪ್ಪನ ಎದುರು ನಿಂತು ಅಷ್ಟೊಂದು ತೀಕ್ಷ್ಣವಾಗಿ ಮಾತಾಡಿರಲಿಲ್ಲ. ಆ ಮಾತಿನ ಅಲೆ ಅಪ್ಪಳಿಸಿ ಹೋದ ನಂತರ ಮನೆಯಲ್ಲಿ ಉಳಿದದ್ದು ಮೌನವೊಂದು ಮಾತ್ರ. ಆಕೆಯ ಮಾತಿನ ಧಾಟಿ ಮನೆಯವರ ಮುಂದಿನ ಮಾತುಗಳನ್ನೆಲ್ಲ ನುಂಗಿ ಹಾಕಿತು. ಅಮ್ಮನ ಮಡಿಲಲ್ಲಿ ಮಲಗಿ ಮುದ್ದು, ಮುದ್ದು ಮಾತಾಡುತ್ತಾ ಮನೆಯಲ್ಲಿ ಪಾದರಸದಂತೆ ಓಡಾಡುತ್ತಿದ್ದ ಹುಡುಗಿ ಬೆಳೆದು ದೊಡ್ಡವಳಾಗಿ ನಿಂತಿದ್ದಾಳೆಂಬುದು ಮನೆಯವರಿಗೆ ಗೊತ್ತಾಗಿದ್ದೇ ಅವಳು ಇದ್ದಕ್ಕಿದ್ದಂತೆ ಆವೇಶದಿಂದ ಮಾತಾಡಿದಾಗ!

ಪ್ರೀತಿ ಅನ್ನೋದು ಮನುಷ್ಯನನ್ನು ಎಲ್ಲಿಂದೆಲ್ಲಿಗೋ ತಂದು ನಿಲ್ಲಿಸಿ ಬಿಡುತ್ತದೆ. ಮೊನ್ನೆ ಮೊನ್ನೆ ತನಕವೂ ತನ್ನ ಪಾಲಿನ ದೇವರೆಂದು ಆರಾಧಿಸುತ್ತಿದ್ದ ಅಪ್ಪ, ಅಮ್ಮನನ್ನು ತೊರೆದು ಹೋಗುವಷ್ಟರ ಮಟ್ಟಿಗೆ ಆಕೆಯ ಮನಸ್ಸು ಗಟ್ಟಿಯಾಗಿದೆ. ಪ್ರೀತಿ ಕುರುಡು ಅನ್ನೋದು ಬಹುಶ ಇದಕ್ಕೆ ಇರಬಹುದು. ಪ್ರೀತಿಯ ಕುರುಡುತನ ಆವರಿಸಿಕೊಂಡವರಿಗೆ ಬೇರೆಯವರು ತೋರುವ ಹಾದಿ ಕಾಣುವುದಾದರೂ ಹೇಗೆ? ಪ್ರೀತಿಯ ಹಣತೆ ಹೃದಯಲ್ಲಿ ಹಚ್ಚಿಟ್ಟು ಪೂಜಿಸುವವರಿಗೆ ಅದನ್ನು ನಂದಿಸುವ ಮನಸ್ಸು, ಧೈರ್ಯ ಬರುವುದಾದರೂ ಹೇಗೆ? ಆ ಪ್ರೀತಿಯ ಹಣತೆ ಸದಾ ಬೆಳಗುತ್ತಿರಬೇಕು. ಆ ಬೆಳಕಿನಡಿಯಲ್ಲಿ ಸಾರ್ಥಕತೆ ಕಾಣಬೇಕೆಂಬುದಷ್ಟೇ ಈಗ ಆಕೆಯಲ್ಲಿರುವ ಹಂಬಲ. ಪ್ರೀತಿ ಅರಳುವಾಗ ಸುತ್ತಮುತ್ತಲಿನ ಪರಿಸರ ನಂದನವನ ಅನ್ನಿಸುತ್ತದೆ. ಪ್ರೀತಿ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದಾಗ ನಂದನವನದಿಂದ ಮರುಭೂಮಿಗೆ ಬಂದು ನಿಂತ ಅನುಭವ ಆಗಿಬಿಡುತ್ತದೆ. ಈಗ ತಾನು ನಿಂತಿರುವುದು ಮರುಭೂಮಿಯಲ್ಲಿ. ಆದಷ್ಟು ಬೇಗ ತನ್ನ ಪ್ರೀತಿಯ ನಂದನವನಕ್ಕೆ ಹಿಂತಿರುಗಬೇಕೆಂದು ನಿರ್ಧರಿಸಿದ ಅಕ್ಷರ, ದೇವರೇ ಆದಷ್ಟು ಬೇಗ ಬೆಳಕು ಹರಿಯಲಿ. ಒಂದು ದಿನ ಹೇಗೋ ಕಳೆದಾಯ್ತು. ಇನ್ನೊಂದು ದಿನ ಬೇಗ ಸರಿದು ಹೋಗಲಿ. ಆದಷ್ಟು ಬೇಗ ಮೈಸೂರು ಸೇರಿಕೊಂಡರೆ ಸಾಕು ಎಂದು ಮನದಲ್ಲಿಯೇ ಪ್ರಾರ್ಥಿಸಿದಳು.

ಮನೆಯಲ್ಲಿ ಅದಾಗಲೇ ಮಾತು ಸತ್ತುಹೋಗಿ ಮೌನ ತನ್ನ ಸಾಮ್ರಾಜ್ಯ ಸ್ಥಾಪಿಸಿಕೊಂಡಿತು. ಯಾರು ಯಾರೊಂದಿಗೂ ಮಾತಾಡುವ ಉತ್ಸಾಹ ತೋರಲಿಲ್ಲ. ಮನೆಯಂಗಳದಿಂದ ತೀಡಿ ಬರುತ್ತಿದ್ದ ತಂಗಾಳಿ ಮೈ ಸೋಕಿದರೂ ಕೂಡ ಅಕ್ಷರ ಬೆವರುತ್ತಲೇ ಇದ್ದಳು. ಮನದಲ್ಲಿ ಸಣ್ಣದೊಂದು ಭಯ ಕಾಡಲು ಪ್ರಾರಂಭಿಸಿತು. ಮತ್ತೊಂದೆಡೆ ಬಾಯಿಗೆ ಬಂದಂತೆ ಮಾತಾಡಿಬಿಟ್ಟೆನಲ್ಲ ಎಂಬ ದುಃಖ ಆಕೆಯನ್ನು ವಿಪರೀತವಾಗಿ ಕಾಡಲು ಪ್ರಾರಂಭಿಸಿತು. ಅಮ್ಮ ಒತ್ತಾಯಿಸಿದರೂ ರಾತ್ರಿ ಊಟ ಮಾಡದೆ ನೇರ ಬೆಡ್‌ರೂಂ ಕಡೆಗೆ ತೆರಳಿ ಮಲಗಿಕೊಂಡಳು.

ಛೇ…, ಅಷ್ಟೊಂದು ಕಠೋರವಾಗಿ ಮಾತಾಡುವ ಅವಶ್ಯಕತೆ ಇತ್ತಾ? ಎಲ್ಲವನ್ನೂ ಸಾವಧಾನವಾಗಿ ಹೇಳಿ ಮನದಟ್ಟು ಮಾಡಬಹುದಿತ್ತಲ್ಲ? ನಾನೇನಾದರು ಆತುರಕ್ಕೆ ಬಿದ್ದು ಬಿಟ್ಟೆನಾ? ಎಂಬ ಪ್ರಶ್ನೆಗೆ ಇಲ್ಲ ಅಂದಿತು ಒಳಮನಸ್ಸು. ನಾನು ಸರಿಯಾದ ದಿಕ್ಕಿನಲ್ಲಿಯೇ ಮುನ್ನಡೆಯ್ತಾ ಇದ್ದೇನೆ. ಸರಿಯಾದ ದಿಕ್ಕಿನಲ್ಲಿಯೇ ಆಲೋಚನೆ ಮಾಡ್ತಾ ಇದ್ದೇನೆ. ಅಷ್ಟಕ್ಕೂ ನನ್ನ ಬದುಕು ನಾಶ ಪಡಿಸುವ ಹಕ್ಕು ಯಾರಿಗಿದೆ? ನನ್ನ ಬದುಕಿನಲ್ಲಿ ಕೈಗೊಳ್ಳುವ ನಿರ್ಧಾರಕ್ಕೆ ಯಾರ ಸಹಕಾರವೂ ಬೇಕಾಗಿಲ್ಲ. ಬದುಕಿನಲ್ಲಿ ತನ್ನದೇ ಆದ ನಿರ್ಧಾರಗಳನ್ನು ಕೈಗೊಳ್ಳುವಷ್ಟು ಪ್ರಬುದ್ಧಳಾಗಿಲ್ವ ನಾನು? ಯಾಕೆ ಅಪ್ಪ, ಅಮ್ಮ ನನ್ನ ಅಷ್ಟೊಂದು ಹಗುರವಾಗಿ ಕಾಣ್ತಾ ಇದ್ದಾರೆ? ಆ ಮನುಷ್ಯನ ಚಿಂತನೆಗೆ ಸರಿಯಾದ ಮಾತನ್ನೇ ಆಡಿದ್ದೇನೆ. ಇನ್ನೆಂದಿಗೂ ನನ್ನ ತಂಟೆಗೆ ಬರಬಾರದು. ಬಂದ್ರೆ ಮತ್ತಷ್ಟೂ ತೀಕ್ಷ್ಣವಾಗಿ ಉತ್ತರ ಕೊಡ್ಬೇಕು; ಚೇತರಿಸಿಕೊಳ್ಳಲು ಆಗದಷ್ಟರ ಮಟ್ಟಿಗೆ. ಇನ್ನು ಮುಂದೆ ಸುಖ, ದುಃಖಗಳೇನಿದ್ದರೂ ಅಭಿಮನ್ಯುವಿನೊಂದಿಗೆ ಮಾತ್ರ ಹಂಚಿಕೊಳ್ತೇನೆ. ಅವನಲ್ಲದೆ ಬೇಯಾರನ್ನೂ ನನ್ನ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳೋದಕ್ಕೆ ಸಾಧ್ಯ ಇಲ್ಲ. ಅವನೊಬ್ಬನಿಗೆ ಮಾತ್ರ ನನ್ನ ಸಾಮ್ರಾಜ್ಯ ಆಳ್ವಿಕೆ ನಡೆಸುವ ಅಧಿಕಾರ ಇರೋದು.

ಆಸ್ತಿ, ಅಂತಸ್ತು ಇಲ್ಲದಿದ್ದರೇನಂತೆ. ಒಳ್ಳೆಯ ಮನಸ್ಸಿಲ್ವ? ಎಷ್ಟು ಮೊಗೆದರೂ ಬರಿದಾಗದಿರುವಷ್ಟು ಪ್ರೀತಿ ಅವನಲ್ಲಿದೆ. ದುಡಿದು ಒಂದು ಹೊತ್ತು ಗಂಜಿಯನ್ನಾದರೂ ಹಾಕುವ ಶಕ್ತಿ ಅವನ್ನಲ್ಲಿದೆ. ನನಗಷ್ಟೇ ಸಾಕು. ಇನ್ನೇನಿದ್ದರೂ ಅವನಲ್ಲಿ ಬೆರೆತು ಬಾಳಿದರೆ ಅಷ್ಟೇ ಸಾಕು ಎಂದು ನಿರ್ಧರಿಸಿದಳಾದರೂ ಆಕೆಯಲ್ಲಿ ಮತ್ತೆ ಮತ್ತೆ ಗೊಂದಲಗಳು ಕಾಡದೆ ಇರಲಿಲ್ಲ. ಹೊತ್ತು ಸರಿದು ಕೋಪ ತಹಬದಿಗೆ ಬಂದಾಗ ಪ್ರೀತಿ ಮುಖ್ಯನೋ, ಅಪ್ಪ-ಅಮ್ಮ ಮುಖ್ಯನೋ ಎಂಬ ಪ್ರಶ್ನೆ ಕಾಡಲು ಪ್ರಾರಂಭಿಸಿತು.

ಪ್ರೀತಿ ಇಂತಹ ಒಂದು ಸಂದಿಗ್ಧ ಪರಿಸ್ಥಿತಿಗೆ ತಂದು ನಿಲ್ಲಿಸುತ್ತದೆ ಎಂದು ಆಕೆ ಎಂದೂ ಎಣಿಸಿರಲಿಲ್ಲ. ಅದರೆ, ಅಭಿಮನ್ಯುವಿಗೆ ಇದೆಲ್ಲ ಸಾಮಾನ್ಯ. ಎಷ್ಟೇ ಆದರೂ ಪ್ರೀತಿಯಲ್ಲಿ ಪಳಗಿದವನಲ್ಲವೇ? ಅದರ ಸಿಹಿ, ಕಹಿ, ನೋವು, ನಲಿವುಗಳನ್ನೆಲ್ಲ ಅನುಭವಿಸಿ ಬಂದವನು. ಪ್ರೀತಿಯಲ್ಲಿ ಇಂತಹ ಒಂದು ಸಂದಿಗ್ಧ ಪರಿಸ್ಥಿತಿ ಎದುರಾಗುತ್ತದೆ ಎಂದು ನಿರ್ಧರಿಸಿಯೇ ತಾನೆ ಅಭಿಮನ್ಯು ಅಕ್ಷರಳಿಗೆ ಪ್ರೀತಿ ಪ್ರಾರಂಭವಾಗುವ ಸಂದರ್ಭ ಹೀಗಂದದ್ದು: ಅಕ್ಷರ, ನೀನು ನನ್ನ ಪ್ರೀತಿ ಮಾಡುತ್ತಿರುವುದೇನೋ ನಿಜ. ನಾನು ನಿನ್ಗೆ ಯಾವತ್ತು ಇಷ್ಟವಾಗುವುದಿಲ್ಲವೋ ಅವತ್ತೇ ನೀನು ನನ್ನಿಂದ ದೂರ ಸರಿದು ನಿನ್ನ ಬಾಳ ಪಯಣ ಮುಂದುವರೆಸಬಹುದು. ಆ ದಾರಿಯಲ್ಲಿ ಅಡ್ಡ ಬರುವ ಪ್ರಯತ್ನ ಮಾಡೋದಿಲ್ಲ. ಆದ್ರೆ ಒಂದು ಮಾತು. ನನ್ನ ಬಿಟ್ಟು ದೂರ ಹೋಗುವ ತೀರ್ಮಾನವೇನಾದರು ಕೈಗೊಳ್ಳಬೇಕೂಂತ ನಿನ್ಗೆ ಅನ್ನಿಸಿದರೆ ಅದು ಮದುವೆಗೂ ಮುಂಚೆಯೇ ಆಕ್ಬೇಕು. ಮದ್ವೆಯಾದ ನಂತರ ಬಿಟ್ಟು ಹೋದರೆ ನನ್ನೊಂದಿಗೆ ಮಕ್ಕಳು ಕೂಡ ಅನಾಥವಾಗಿ ಬಿಡ್ತಾರೆ. ಮಕ್ಕಳು ಯಾವತ್ತೂ ತಾಯಿಯ ಮಮತೆಯ ಮಡಿಲಲ್ಲಿ ಬೆಳೆಯಬೇಕು. ಎಂದು ಪ್ರೀತಿ ಅರಳುವ ಹೊತ್ತಿನಲ್ಲಿಯೇ ಅಭಿಮನ್ಯು ಆಡಿದ ಮಾತುಗಳನ್ನು ಅಕ್ಷರ ನೆನಪಿಗೆ ತಂದುಕೊಂಡಳು.

ಅಭಿಮನ್ಯು ಅಂದು ಆಡಿದ ಮಾತಿನಲ್ಲಿ ಅಳುಕಿರಲಿಲ್ಲ. ಎಲ್ಲವನ್ನೂ ನೇರವಾಗಿ ಮನಮುಟ್ಟುವಂತೆ ಹೇಳಿದ್ದ. ಅಭಿಮನ್ಯುವಿಗೆ ಪ್ರೀತಿಯ ಪ್ರತಿಯೊಂದು ಮೆಟ್ಟಿಲು ಕೂಡ ಪರಿಚಿತವೇ. ಮೊಟ್ಟ ಮೊದಲ ಬಾರಿಗೆ ಪ್ರೀತಿಯ ಹೂ ತೋಟ ತೋರಿಸಿದ ಸೌಮ್ಯ ಅಭಿಮನ್ಯುವಿನಲ್ಲಿ ಪ್ರೀತಿಯ ವಿಚಾರದಲ್ಲಿ ಅಂತಹ ಒಂದು ಪ್ರಬುದ್ಧತೆ ನಿರ್ಮಾಣಮಾಡಿ ಹೊರಟು ಹೋದಳು. ಪ್ರೀತಿಯ ಹೂ ತೋಟದಲ್ಲಿ ಅರಳಿದ ಹೂಗಳು ಒಂದಲ್ಲಾ ಒಂದು ದಿನ ಬಾಡಿ ಹೋಗಲೇಬೇಕು. ಕೊನೆಗೊಂದು ದಿನ ಮಣ್ಣಲ್ಲಿ ಮಣ್ಣಾಗಿ ಕರಗಿ ಹೋಗುತ್ತವೆ ಎಂದು ಅರಿವಿಗೆ ಬಂದದ್ದೇ ಸೌಮ್ಯ ಕೈಕೊಟ್ಟ ಸಂದರ್ಭ. ಆ ನಂತರವಲ್ಲವೇ ಅಭಿಮನ್ಯುವಿಗೆ ಪ್ರೀತಿಯ ಪ್ರತಿಯೊಂದು ಮೆಟ್ಟಿಲುಗಳು ಪರಿಚಿತವಾದದ್ದು. ಅದುವರೆಗೆ ಪ್ರೀತಿಯ ಕಡಲಲ್ಲಿ ವಿಹರಿಸುತ್ತಲೇ ಇದ್ದ. ಆದರೆ, ಪ್ರೀತಿಯ ಒಂದೊಂದು ಮೆಟ್ಟಿಲು ಕೂಡ ಅಕ್ಷರಳ ಪಾಲಿಗೆ ಹೊಸತು. ಪ್ರತಿಯೊಂದು ಮೆಟ್ಟಿಲು ಹತ್ತುವಾಗ ಕೂಡ ಮುಂದೇನು ಎಂಬ ಪ್ರಶ್ನೆ ಆಕೆಯನ್ನು ಕಾಡದೆ ಇರುತ್ತಿರಲಿಲ್ಲ. ಅದೆಷ್ಟೋ ಸುಂದರ ಕನಸುಗಳನ್ನು ಕಟ್ಟಿಕೊಂಡಿದ್ದಳು. ಸುಂದರ ಕನಸಿನಲ್ಲಿ ಇದೀಗ ಯಾತನೆ ಎಂಬ ಪಾತ್ರದಾರಿ ಬಂದು ನಟನೆಯನ್ನು ಪ್ರಾರಂಭ ಮಾಡಿದ್ದಾನೆ. ಹೊತ್ತು ಸರಿದಂತೆ ಅಕ್ಷರಳ ಮನದೊಳಗೆ ತಳಮಳ ಮತ್ತಷ್ಟು ತೀವ್ರಗೊಂಡು ಮುಂದೇನು ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡಲು ಪ್ರಾರಂಭಿಸಿತು.

ಕೆಲವೇ ಕೆಲವು ಗಂಟೆಗಳ ಹಿಂದಷ್ಟೇ ಅಪ್ಪನೊಂದಿಗೆ ಆವೇಷಭರಿತಳಾಗಿ ಮಾತಾಡಿ ಸಾಕು ಇನ್ನು ನಿಮ್ಮ ಸಹವಾಸ. ಅಭಿಮನ್ಯುವಿನೊಂದಿಗೆ ಬದುಕು ಕಂಡುಕೊಳ್ಳುತ್ತೇನೆ ಎಂದು ನಿರ್ಧರಿಸಿದ್ದಳು. ಆದರೆ, ಇದೀಗ ಆಕೆಯ ಮನದಲ್ಲಿ ಅಪ್ಪ, ಅಮ್ಮನ ನೆನಪು ಕಾಡಲು ಪ್ರಾರಂಭಿಸಿತು.

ಎಷ್ಟೊಂದು ಮುದ್ದಾಗಿ ಬೆಳೆಸಿದರಲ್ಲಾ ಅಪ್ಪ, ಅಮ್ಮ ನನ್ನ. ಒಂದಿಷ್ಟೂ ಕಷ್ಟ ಬಾರದಂತೆ. ಮನೆಯ ಹೊಸ್ತಿಲು ದಾಟುವ ಮುನ್ನ ಅಮ್ಮ ಹಣೆಗೊಂದು ತಿಲಕವನ್ನಿಟ್ಟು ಸಿಹಿ ಮುತ್ತು ನೀಡಿ ಕಳುಹಿಸೋದನ್ನ ಮರೆಯೋದಿಲ್ಲ. ಅಪ್ಪ ದೂರದಲ್ಲಿ ನಿಂತು ಭರವಸೆಯ ನೋಟ ಬೀರುತ್ತಾರೆ. ಆದರೆ, ಪ್ರೀತಿಯಲ್ಲಿ ಬಿದ್ದು ಅಪ್ಪ, ಅಮ್ಮನಿಂದಲೇ ದೂರ ಉಳಿಯುವಷ್ಟರ ಮಟ್ಟಿಗೆ ಬಂದು ನಿಂತು ಬಿಟ್ಟೆನಲ್ಲ? ತಾನು ಸಾಗುತ್ತಿರುವ ಹಾದಿ ಸರಿ ಇಲ್ವ? ಅಪ್ಪ, ಅಮ್ಮನ ಆಸೆ ಈಡೇರಿಕೆಗೆ
ಅಭಿಮನ್ಯುವನ್ನು ಬಿಟ್ಟು ಬಿಡ್ಲಾ? ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡಳು.

ಅಭಿಮನ್ಯು ಏನಾದ್ರು ಮಾಡ್ಕೊಂಡು ಬಿಟ್ರೆ? ಹೆದರಿದಳು. ಮತ್ತೆ ಸುಧಾರಿಸಿಕೊಂಡು ಅಭಿಮನ್ಯು ಅಂತಹ ವ್ಯಕ್ತಿಯಲ್ಲ. ಜೀವನದ ಪ್ರತಿಯೊಂದು ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಅವನಲ್ಲಿದೆ. ಅವನೇ ಹೇಳಿಲ್ವ: ಅಕ್ಷರ ನಿನ್ಗೆ ಯಾವತ್ತು ನನ್ನ ಹಿಡಿಸೋದಿಲ್ಲವೋ ಅವತ್ತೇ ಬಿಟ್ಟು ಹೋಗು ಅಂತ. ಅವನಿಂದ ನಾನು ದೂರವಾದ್ರೆ ಅವನೇನು ಬದುಕನ್ನ ಕೊನೆಗಾಣಿಸಿಕೊಳ್ಳೋದಿಲ್ಲ. ಮತ್ತಷ್ಟು ಸುಂದರ ಬದುಕು ನಡೆಸಬೇಕೆಂಬ ಛಲ ಅವನಲ್ಲಿ ಹುಟ್ಟಿಕೊಂಡು ಬದುಕು ನಡೆಸ್ತಾನೆ ಆಕೆಯ ಆಲೋಚನೆಯು ಎಲ್ಲಾ ದಿಕ್ಕಿನ ಕಡೆಗೆ ಹರಿಯಲು ಪ್ರಾರಂಭಿಸಿತು.

ಹೆಣ್ಣು ಚಂಚಲೆ. ಈಗಿದ್ದ ಮನಸ್ಸು ಅರೆಕ್ಷಣದಲ್ಲಿ ಬದಲಾಗಿ ಹೋಗುತ್ತದೆ. ಹುಡುಗರ ಮನಸ್ಸನ್ನು ಕಲ್ಲಿಗೆ, ಹುಡುಗಿಯರ ಮನಸ್ಸನ್ನು ಹೂವಿಗೆ ಹೋಲಿಕೆ ಮಾಡುತ್ತಾರೆ. ಒಂದು ಒರಟಾದ ಕಲ್ಲಿನ ಮೇಲೆ ಹಲವಾರು ವರ್ಷಗಳಿಂದ ಮಡಿಕೆಯನ್ನು ಇಡುತ್ತಾ, ತೆಗೆಯುತ್ತಾ ಇದ್ದರೆ ಕಾಲ ಕ್ರಮೇಣ ಆ ಒರಟು ಕಲ್ಲು ನಯವಾಗುತ್ತದೆ. ಒಂದು ಕಲ್ಲಿಗೆ ಯಾವ ರೂಪವನ್ನು ಬೇಕಾದರೂ ನೀಡಬಹುದು. ಆದರೆ, ಹೂಗಳು ಇಂದು ಹುಟ್ಟುತ್ತವೆ. ನಾಳೆ ಸಾಯುತ್ತವೆ. ಹಾಗೆಯೇ ಹುಡುಗಿಯರ ಮನಸ್ಸಿನಲ್ಲಿ ಇಂದು ನೂರಾರು ಕನಸುಗಳು ಹುಟ್ಟಿಕೊಳ್ಳುತ್ತವೆ. ದಿನ ಬೆಳಗಾವುದರೊಳಗೆ ಕನಸುಗಳೆಲ್ಲ ಸತ್ತು ಹೋಗಿರುತ್ತವೆ. ಹಾಗೆಯೇ ಅಕ್ಷರ ಕೂಡ
ಅಭಿಮನ್ಯುವಿನ ಪ್ರೀತಿಯನ್ನು ತೊರೆದು ಹೊಸ ಬದುಕು ಕಂಡುಕೊಳ್ಳುವ ದಿಕ್ಕಿನ ಕಡೆಗೂ ಕೂಡ ಆಲೋಚನೆ ಮಾಡಲು ಪ್ರಾರಂಭಿಸಿದಳು.

ಅಕ್ಷರ ಹಾಸಿಗೆಯ ಮೇಲೆ ಮಲಗಿ ಬಹಳ ಹೊತ್ತಾದರೂ ನಿದ್ರೆ ಬಳಿಗೆ ಸುಳಿಯಲಿಲ್ಲ. ಗೊಂದಲದ ಗೂಡಾದಳು. ಯಾವುದು ತಪ್ಪು? ಯಾವುದು ಸರಿ? ಎಂಬ ಆಲೋಚನೆಯಲ್ಲಿ ಮುಳುಗಿದಳು. ನಿದ್ರೆಗೆ ಜಾರಿ ಎಲ್ಲಾ ಗೊಂದಲ, ನೋವುಗಳನ್ನು ಮರೆತು ಬಿಡಬೇಕೆಂದು ಅನ್ನಿಸಲಿಲ್ಲ. ಬೆಳಗಾಗುವುದರೊಳಗೆ ಒಂದು ಸರಿಯಾದ ನಿರ್ಧಾರಕ್ಕೆ ಬಂದು ಬಿಡಬೇಕೆಂದು ಆಲೋಚನೆಯಲ್ಲಿ ಮುಳುಗಿದಳು. ಒಮೊಮ್ಮೆ ಬೆಚ್ಚಿ ಬಿದ್ದು ಎದ್ದುಕುಳಿತು ಬಿಡುತ್ತಿದ್ದಳು. ಇನ್ನೇನು ನೇಸರ ಭೂ ಸ್ಪರ್ಶ ಮಾಡಬೇಕೆನ್ನುವಷ್ಟರಲ್ಲಿ ನಿದ್ರೆಗೆ ಜಾರಿದಳು. ನೇಸರ ನೆತ್ತಿಯ ಮೇಲೆ ಬಂದು ನಿಲ್ಲುವ ಹೊತ್ತಾದರೂ ಅಕ್ಷರ ಹಾಸಿಗೆಯಿಂದ ಮೇಲೇಳಲಿಲ್ಲ. ಬೆಳಗರಿಯುವ ತನಕವೂ ಯೋಚನೆಯಲ್ಲಿ ಮುಳುಗಿದರೂ ಒಂದು ಅಂತಿಮ ನಿರ್ಧಾರಕ್ಕೆ ಬರಲು ಆಕೆಯಿಂದ ಸಾಧ್ಯವಾಗಲಿಲ್ಲ.

ಲವಲವಿಕೆಯಿಂದ ಕೂಡಿದ್ದ ಮನಸ್ಸು ಮುದುರಿ ಮೂಲೆಯಲ್ಲಿ ಕುಳಿತುಕೊಂಡಿತ್ತು. ಪ್ರೀತಿಯ ಮತ್ತೊಂದು ಮುಖ ಇದೇನಾ? ಪ್ರೀತಿಸಿದವರಿಗೆಲ್ಲ ಇಂತಹ ಪರಿಸ್ಥಿತಿ ಎದುರಾಗುತ್ತದಾ? ನನಗೆ ಆದಂತೆ? ಪ್ರೀತಿಯ ದಡ ಸೇರುವ ಶಕ್ತಿ ನನ್ನಲ್ಲಿ ಉಳಿದಿಲ್ಲವಾ? ಏತಕ್ಕಾಗಿ ಮನಸ್ಸು ಹೀಗೆ ತೊಳಲಾಡುತ್ತಿದೆ? ಒಮ್ಮೆ ಅಭಿಮನ್ಯುವಿನ ಕಡೆಗೆ ಮತ್ತೊಮ್ಮೆ ಮನೆಯವರ ಕಡೆ. ಸಾಗರದಲ್ಲಿ ಕಾಣಿಸಿಕೊಳ್ಳುವ ಅಲೆಗಳಂತೆ ಅಂದುಕೊಂಡ ಅಕ್ಷರ ಮಂಚದಿಂದ ಮೇಲೆದ್ದು ಕಣ್ಣುಜ್ಜಿಕೊಂಡು ಎದುರಿಗಿದ್ದ ಆಳೆತ್ತರದ ಕನ್ನಡಿಯನ್ನೊಮ್ಮೆ ನೋಡಿದಳು. ಮುಖ ಬಾಡಿ ಹೋಗಿತ್ತು. ಆಕೆಯ ಮುಖವನ್ನು ಆಕೆಗೇ ನೋಡುವ ಉತ್ಸಾಹ ಇರಲಿಲ್ಲ. ಕನ್ನಡಿ ಎದುರು ನಿಂತು ಗಂಟೆಗಟ್ಟಲೇ ಸಿಂಗಾರ ಮಾಡಿಕೊಳ್ಳುತ್ತಿದ್ದ ದೇಹವಲ್ಲವೇ ಇದು? ಕನ್ನಡಿಯೊಳಗೆ ಕಾಣುತ್ತಿದ್ದ ತನ್ನ ಪ್ರತಿಬಿಂಬ ಕಂಡು ಪುಳಕಿತಳಾಗಿ ಹತ್ತಾರು ಬಾರಿ ನೋಡಿ ಸವಿಯುತ್ತಿದ್ದ ಕಣ್ಗಳಲ್ಲಿ ಇಂದು ಕಣ್ಣೀರು ತುಂಬಿಕೊಂಡಿದೆ. ಏನೋ ತಪ್ಪು ಮಾಡಿದ ಭಾವ. ಕನ್ನಡಿ ಎದುರು ನಿಂತು ಸೌಂದರ್ಯವನ್ನು ಸವಿಯುವ ಮನಸ್ಸಿಲ್ಲ. ತಲೆಯೆತ್ತಿ ಕನ್ನಡಿಯನ್ನೊಮ್ಮೆ ನೋಡಿದರೆ ಏಯ್…, ಮೋಸಗಾತಿ ಅಭಿಮನ್ಯುವಿಗೆ ಮೋಸ ಮಾಡುವ ಮನಸ್ಸಾದರೂ ನಿನ್ನಲ್ಲಿ ಯಾಕೆ ಹುಟ್ಟಿಕೊಳ್ತಾ ಇದೆ? ಎಂದು ಕನ್ನಡಿಯೊಳಗಿನ ಪ್ರತಿಬಿಂಬ ಪ್ರಶ್ನಿಸಿದಂತಾಯಿತು. ಆ ಪ್ರಶ್ನೆ ತೂರಿ ಬಂದದ್ದು ಕನ್ನಡಿಯೊಳಗಿಂದಲ್ಲ. ತನ್ನ ಹೃದಯದೊಳಗಿನಿಂದ ಎಂದು ಅರಿವಾಗುತ್ತಿದ್ದಂತೆ ಅಪರಾಧಿ ಯಂತೆ ತಲೆತಗ್ಗಿಸಿ ನಿಂತುಬಿಟ್ಟಳು.

ಹಾಗಾದ್ರೆ ನಾನು ಪ್ರೀತಿಯಲ್ಲಿ ಸೋತು ಹೋದ್ನಾ? ಇಲ್ಲ. ಸೋಲೊಪ್ಪಿಕೊಳ್ಳೋದಕ್ಕೆ ನಾನು ತಯಾರಿಲ್ಲ. ಸೋಲೆಂಬುದು ಮನದ ಮನೆಯ ಹೊಸ್ತಿಲ ಹೊರಗಡೆ ಇರಬೇಕೇ ಹೊರತು ಮನದ ಮನೆಯೊಳಗಲ್ಲ. ಸೋಲನ್ನು ಸ್ವೀಕರಿಸಲು ತನಗಿಷ್ಟವಿಲ್ಲ. ಸೋಲೆಂಬುದು ನನ್ನ ಬಳಿ ಸುಳಿಯ ಕೂಡದು. ಅಭಿಮನ್ಯುವಿಗೆ ಬದುಕಿನಲ್ಲಿ ಹೊಸ ದಿಕ್ಕನ್ನು ತೋರಿಸಿಕೊಟ್ಟವಳೇ ತಾನು, ಅವನಲ್ಲಿ ಹೊಸ ಭರವಸೆಗಳನ್ನು ಹುಟ್ಟು ಹಾಕಿದವಳೇ ತಾನು, ಎಲ್ಲರನ್ನೂ ಬದಲಾಯಿಸುವ ಶಕ್ತಿ ತನ್ನಲ್ಲಿದೆ. ಹೀಗಿರುವಾಗ ತನ್ನನ್ನು ತಾನೇ ನಿಯಂತ್ರಿಸಿಕೊಳ್ಳೋದಕೆ ನನ್ನಿಂದ ಸಾಧ್ಯ ಇಲ್ವ? ನನ್ನಲ್ಲಿ ಭರವಸೆಗಳು ಬರಿದಾಗಿಲ್ಲ. ಕನಸುಗಳು ಕಮರಿ ಹೋಗಿಲ್ಲ. ಪ್ರೀತಿಸುವ ಉತ್ಸಾಹ ಕುಂದಿಹೋಗಿಲ್ಲ. ಗುರಿ ಸಾಧಿಸುವ ಉತ್ಸಾಹ ಹುದುಗಿ ಹೋಗಿಲ್ಲ. ಹಾಗಿದ್ಮೆಲೆ ಯಾಕೆ ಮನದ ಮೂಲೆಯಲೆಲ್ಲೋ ಭಯ ಆಗಿಂದಾಗೆ ಕಾಡ್ತನೇ ಇದೆ? ಅಮ್ಮ ತೋರುವ ವಾತ್ಸಲ್ಯ, ಅಪ್ಪನ ತೋರುವ ಅಕ್ಕರೆ ತನ್ನನ್ನು ಪ್ರೀತಿಯ ವಿಚಾರದಲ್ಲಿ ಕಟ್ಟಿ ಹಾಕ್ತಾ ಇದೆ. ಆ ಬಂಧನಗಳಿಂದ ಮುಕ್ತಿ ಪಡೆಯಲೇಬೇಕು. ಇಲ್ಲವಾದಲ್ಲಿ ಅಭಿಮನ್ಯು ನನ್ನ ಪಾಲಿಗೆ ಕನಸಾಗಿಯೇ ಉಳಿದು ಹೋಗುತ್ತಾನೆ. ಹೆಣ್ಣಾಗಿ ಹುಟ್ಟಿದ ಮೇಲೆ ಹುಟ್ಟಿದ ಮನೆ ಶಾಶ್ವತವಲ್ಲ. ಇಂದಲ್ಲದಿದ್ದರೂ ನಾಳೆಯಾದರೂ ಮನೆಯ ಹೊಸ್ತಿಲು ದಾಟಿ ಹೋಗಲೇ ಬೇಕು. ಅದು ಇಂದೇ ಆಗಿ ಹೋಗಲಿ ಎಂದು ನಿರ್ಧರಿಸಿದ ಅಕ್ಷರ ಮತ್ತೊಮ್ಮೆ ಕನ್ನಡಿಯತ್ತ ಕಣ್ಣಾಯಿಸಿದಳು. ಕನ್ನಡಿಯೊಳಗಿನ ಪ್ರತಿಬಿಂಬ ಆಕೆಯ ನಿರ್ಧಾರಗಳಿಗೆ ಸಮ್ಮತಿಯ ನಗೆ ಬೀರಿದಾಗ ಮನದೊಳಗೆ ಉತ್ಸಾಹದ ಚಿಲುಮೆ ಮತ್ತೆ ಚಿಮ್ಮಲು ಪ್ರಾರಂಭಿಸಿತು. ಈ ಸಂತೋಷ ಶಾಶ್ವತವಾಗಿ ಉಳಿಯಲಿ ದೇವರೇ.. ಎಂದು ಪ್ರಾರ್ಥಿಸಿ ಬಾತ್‌ರೂಂ ಕಡೆಗೆ ನಡೆದು ಬೆಚ್ಚನೆಯ ನೀರಿನಲ್ಲಿ ಸ್ನಾನ ಮುಗಿಸಿಕೊಂಡು ಸೋಫಾದಲ್ಲಿ ಕುಳಿತು ದಿನಪತ್ರಿಕೆಯ ಕಡೆಗೆ ಕಣ್ಣಾಯಿಸಿದಳು. ಓದುವ ಉತ್ಸಾಹವೇನು ಇರಲಿಲ್ಲ. ಸುಮ್ಮನೆ ಎಲ್ಲಾ ಪುಟಗಳ ಹೆಡ್‌ಲೈನ್ಸ್‌ಗಳನ್ನೊಮ್ಮೆ ನೋಡುತ್ತಾ ಪುಟಗಳನ್ನು ತಿರುವಿ ಹಾಕಿ ಟೇಬಲ್ ಮೇಲಿಟ್ಟಳು.

ಲೀಲಾವತಿ ಮಗಳ ಎದುರು ಬಿಸಿಬಿಸಿಯಾದ ಕಾಫಿ ತಂದಿಟ್ಟರು. ಅಮ್ಮನೊಂದಿಗೆ ಮಾತಾಡುವ ಉತ್ಸಾಹ ಇಲ್ಲದೆ ಮತ್ತೆ ಎಲ್ಲಿ ತನ್ನೊಂದಿಗೆ ಮಾತಿಗೆ ಇಳಿದುಬಿಡುತ್ತಾರೋ ಎಂಬ ಅಂಜಿಕೆಯಿಂದ ಟೇಬಲ್ ಮೇಲಿಟ್ಟ ಪತ್ರಿಕೆಯನ್ನು ಮತ್ತೆ ಕೈಗೆತ್ತಿಕೊಂಡು ಕಾಫಿ ಕುಡಿಯುತ್ತ್ತಾ ಪ್ರತಿ ಪುಟಗಳ ಕಡೆಗೆ ಮತ್ತೊಮ್ಮೆ ಕಣ್ಣಾಡಿಸಿದಳು.

“ಅಕ್ಷರ….” ಅಮ್ಮ ಕರೆದರೂ ಯಾವುದೇ ಪ್ರತಿಕ್ರಿಯೆ ನೀಡದೆ ಪತ್ರಿಕೆಯಲ್ಲಿ ಮುಳುಗಿ ಹೋದವಳಂತೆ ಓದುತ್ತಿದ್ದಳು. ಅಕ್ಷರ… ಮತ್ತೆ ಅಕ್ಕರೆಯಿಂದ ಕರೆದರು ಲೀಲಾವತಿ.

ಅಮ್ಮನ ಕೂಗಿಗೆ ಪ್ರತಿಯಾಗಿ ಏನೆಂದು ಕಣ್ಣಲ್ಲೇ ಪ್ರಶ್ನಿಸಿದಳು.

ಊಟ ರೆಡಿಯಾಗಿದೆ ಬೇಗ ಬಾ ಊಟ ಮಾಡ್ಕೋ. ನಿನ್ನೆ ರಾತ್ರಿ ಉಪವಾಸ ಮಲ್ಕೊಂಡೆ. ಬೆಳಗ್ಗೆನೂ ಏನು ತಿಂದಿಲ್ಲ.

ವಿಪರೀತ ಹೊಟ್ಟೆ ಹಸಿಯುತ್ತಿದ್ದರೂ ನಿನ್ನೆ ನಡೆದ ಕಲಹದಿಂದ ಬೇಸರಗೊಂಡು ಊಟ ಮಾಡಬಾರದೆಂದು ನಿರ್ಧರಿಸಿದಳು. ಹೊಟ್ಟೆ ಚುರುಗುಟ್ಟುತ್ತಿದ್ದರೂ ನನ್ಗೆ ಹಸಿವಿಲ್ಲ ಅಮ್ಮ. ಊಟ ಬೇಡ ಅಂದಳು.

ಅಡುಗೆ ಮನೆಗೆ ತೆರಳಿದ ಲೀಲಾವತಿ ತಟ್ಟೆಯಲ್ಲಿ ಸ್ವಲ್ಪ ಅನ್ನ ಹಾಕಿಕೊಂಡು ಬಂದು ಮಗಳಿಗೆ ತಾನೇ ತಿನ್ನಿಸಲು ಮುಂದಾದರು. ನನ್ಗೆ ಊಟ ಬೇಡ ಅಂದ್ರೂ ಯಾಕೆ ಬಲವಂತ ಮಾಡ್ತಾ ಇದ್ದೀರ? ಎಲ್ಲಾ ವಿಚಾರಕ್ಕೂ ಇತ್ತೀಚೆಗೆ ಬಲವಂತ ಮಾಡೋದೇ ನಿಮ್ಮ ಕೆಲಸವಾಗಿ ಬಿಟ್ಟಿದೆ ರೇಗಾಡಿದಳು.

ನೀನು ಊಟ ಮಾಡದೆ ಇದ್ರೆ ನನ್ಮೇಲಾಣೆ. ನಿನ್ಗೆ ನಮ್ಮ ಮೇಲೆ ಸಿಟ್ಟಿರಬಹುದು. ಆ ಸಿಟ್ಟನ್ನ ಅನ್ನದ ಮೇಲೆ ತೋರಿಸ್ಬೇಡ. ನಿನ್ನೆ ಆಡಿದ ಮಾತೆಲ್ಲವೂ ನಿನ್ನ ಒಳಿಗೋಸ್ಕರ. ಪುನಃ ಅದೇ ವಿಷಯ ಕೆದಕಿ ನಿನ್ನ ಮನಸ್ಸು ಕೆಡಿಸೋದಕ್ಕೆ ನನ್ಗೆ ಇಷ್ಟ ಇಲ್ಲ. ದಯವಿಟ್ಟು ಊಟ ಮಾಡು ಅಕ್ಕರೆಯಿಂದ ವಿನಂತಿಸಿಕೊಂಡರು.
ನನ್ಗೆ ಯಾರ ಮೇಲೂ ಕೋಪ ಇಲ್ಲ. ಆದ್ರೆ ಜೀವನದಲ್ಲಿ ನನ್ನದೇ ಆದ ಒಂದು ತೀರ್ಮಾನ ಕೂಡ ಕೈಗೊಳ್ಳೋದಕ್ಕೆ ಅವಕಾಶ ನೀಡ್ತಾ ಇಲ್ವಲ್ಲಾ ಅಂತ ಬೇಸರ ಆಗ್ತಾ ಇದೆ ಅಷ್ಟೆ. ನಾನೇನು ಮಹಾ ಅಪರಾಧ ಮಾಡ್ಬಿಟ್ಟೆ ಅಂತ ಅಪ್ಪ ನನ್ಗೆ ಹೊಡೆದು ಬಿಟ್ರು. ಅಂತಹ ತಪ್ಪಾದ್ರೂ ಏನು ಮಾಡ್ದೆ? ನನ್ನ ಬಾಳ ಸಂಗಾತಿಯನ್ನ ಆಯ್ಕೆ ಮಾಡಿಕೊಳ್ಳುವಷ್ಟೂ ಸ್ವಾತಂತ್ರ್ಯ ಕೂಡ ನನ್ಗಿಲ್ವ? ಈಗ್ಲೂ ಕೂಡ ಹೇಳ್ತೇನೆ, ಅಭಿಮನ್ಯುವಿನೊಂದಿಗೆ ಮಾತ್ರ ನಾನು ಮದ್ವೆಯಾಗೋದು. ಬೇಕಾದ್ರೆ ನಿಮ್ಮಿಷ್ಟದಂತೆ ಅಣ್ಣನಿಗೆ ಅಗರ್ಭ ಶ್ರೀಮಂತ ಮನೆತನದ ಹುಡುಗಿನ ತಂದು ಮದ್ವೆ ಮಾಡಿಕೊಡಿ. ನಂದೇನು ಅಭ್ಯಂತರವಿಲ್ಲ. ನಾನು ಅಭಿಮನ್ಯುವಿನೊಂದಿಗೆ ಮದ್ವೆಯಾಗೋದಕ್ಕೆ ತೀರ್ಮಾನ ಮಾಡಿಯಾಗಿದೆ. ಮದ್ವೆಗೆ ಬಂದು ಅಕ್ಷತೆಕಾಳು ಹಾಕಿ ಆರ್ಶೀವಾದ ಮಾಡಿ. ಅಷ್ಟು ಮಾತ್ರ ನಿಮ್ಮಿಂದ ಬಯಸೋದು ಅಂದ ಅಕ್ಷರ ಅಮ್ಮ ನೀಡಿದ ಊಟ ತಿಂದು ಕೈ ತೊಳೆದು ಹೆಚ್ಚು ಹೊತ್ತು ಮಾತಾಡಲು ಇಷ್ಟಪಡದೆ ಮನೆಯ ಅಂಗಳಕ್ಕೆ ತೆರಳಿದಳು.

ಮನೆಯ ಮುಂಭಾಗದಲ್ಲಿ ಅರಳಿ ನಿಂತ ಹೂಗಳನ್ನೇ ನೋಡುತ್ತಾ ನಿಂತಳು. ಸ್ವಚ್ಛಂದ ಪರಿಸರದಲ್ಲಿ ಅರಳಿ ನಿಂತ ಹೂಗಳು ಕೂಡ ಆಕೆಗೆ ರುಚಿಸಲಿಲ್ಲ. ಅವಳ ಆಸಕ್ತಿಗಳೆಲ್ಲವೂ ಅಭಿಮನ್ಯುವಿನ ಕಡೆಗೆ ಕೇಂದ್ರೀಕೃತವಾಗಿತ್ತು. ಮೈಸೂರಿಗೆ ನಾಳೆ ಬೆಳಗ್ಗೆನೇ ಹೊರಡಬೇಕು. ಇವತ್ತು ಸಂಜೆ ಅಭಿಮನ್ಯುವನ್ನು ಭೇಟಿಯಾಗಿ ಎಲ್ಲಾ ವಿಚಾರವನ್ನು ಅವನೊಂದಿಗೆ ಹಂಚಿಕೊಂಡು ಮನಸ್ಸು ಹಗುರ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದಳು. ಆದರೆ, ಅಭಿಮನ್ಯುವಿನ ಬಳಿ ಹೋಗುವುದು ಈಗ ಮೊದಲಿನಷ್ಟು ಸುಲಭದ ಮಾತಲ್ಲ. ಅಭಿಮನ್ಯು ಎಂಬ ಪದ ಕೇಳಿದರೆ ಸಾಕು ಎಲ್ಲಿಗೂ ಹೋಗಲು ಬಿಡದೆ ಮನೆಯೊಳಗೆ ಬಂಧಿಸಿ ಇಟ್ಟುಬಿಡುತ್ತಾರೆ. ಹೇಗಾದರೂ ಮಾಡಿ ಹೊರಗೆ ಹೋಗಬೇಕೆಂದು ಆಲೋಚನೆ ಮಾಡಿದಳು. ಅದಕ್ಕಾಗಿ ಒಂದು ಕುಂಟುನೆಪ ಹುಡುಕುತ್ತಾ ಇದ್ದಳು.

ಇವತ್ತು ಅಭಿಮನ್ಯುವನ್ನು ಭೇಟಿಯಾಗೋದಕ್ಕೆ ಸಾಧ್ಯವಾಗದಿದ್ದರೆ ಇನ್ನು ಕೆಲವು ತಿಂಗಳ ಕಾಲ ಭೇಟಿಯಾಗೋದಕ್ಕೆ ಸಾಧ್ಯವೇ ಆಗೋದಿಲ್ಲ. ನಾಳೆ ಬೆಳಗ್ಗೆ ಕಚೇರಿಗೆ ಹೋಗ್ಲೇ ಬೇಕು. ಅಷ್ಟರೊಳಗೆ ಅಭಿಮನ್ಯುವನ್ನು ಭೇಟಿ ಮಾಡಿಸು ದೇವರೇ ಎಂದು ಪ್ರಾರ್ಥಿಸಿಕೊಂಡಳು. ಕಚೇರಿ ಎಂಬ ಶಬ್ದ ಆಕೆಯ ಮನಸ್ಸಿನಲ್ಲಿ ತೋಚಿದ್ದೇ ತಡ ಹೊರಗೆ ತೆರಳುವುದಕ್ಕೆ ಉಪಾಯವೊಂದು ಹೊಳೆಯಿತು. ಮನೆಯೊಳಗೆ ತೆರಳಿದ ಅಕ್ಷರ. ಅಮ್ಮ ಟೌನ್ ಕಡೆಗೆ ಒಂದ್ಸಲ ಹೋಗಿ ಬತಿನಿ. ಮೈಸೂರಿಗೆ ಹೋದ ನಂತರ ಹಳೆಯ ಕಚೇರಿ ಕಡೆಗೆ ಕಾಲಿಟ್ಟಿಲ್ಲ. ಮೊನ್ನೆ ತಾನೆ ಫೋನ್‌ಮೂಲಕ ಬರೋದಕ್ಕೆ ಹೇಳಿದ್ದಾರೆ. ಒಂದ್ಸಲ ಹೋಗಿ ಹಳೆಯ ಸ್ನೇಹಿತರನ್ನೆಲ್ಲ ಭೇಟಿಯಾಗಿ ಬತೇನೆ ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆಯಿಂದ ಕಾಲ್ತೆಗೆದಳು.

ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಸುಳ್ಳಿನ ಮುತ್ತು ಪೋಣಿಸಿದಳು. ಈ ಹಿಂದೆ ಇಂತಹ ಒಂದು ಸುಳ್ಳಿನ ಮುತ್ತು ಪೋಣಿಸುವ ಅವಶ್ಯಕತೆ ಆಕೆಗೆ ಎದುರಾಗಿರಲಿಲ್ಲ. ಆದರೆ, ಇಂದು ಅದು ಅವಳಿಗೆ ಅನಿವಾರ್ಯವಾಗಿ ಬಿಟ್ಟಿದೆ. ಅಕ್ಷರ ಬಿರುಸಿನ ಹೆಜ್ಜೆ ಹಾಕುತ್ತಾ ಸಾಗಿದಳು. ಮಾರ್ಗದ ಮಧ್ಯ ಅಭಿಮನ್ಯುವಿಗೆ ಫೋನಾಯಿಸಿ ರಾಜಾಸೀಟ್‌ಗೆ ಬರೋದಕ್ಕೆ ಕೇಳಿಕೊಂಡಳು. ಮಾರ್ಗದ ಮಧ್ಯ ಸಿಕ್ಕ ಆಟೋ ಏರಿ ರಾಜಾಸೀಟ್ ತಲುಪಿಕೊಂಡಳು. ರಾಜಾಸೀಟ್‌ನ ಕಲ್ಲುಹಾಸಿನ ಬೆಂಚಿನ ಮೇಲೆ ಕುಳಿತು ನಿಸರ್ಗದ ಸವಿಯನ್ನು ಸವಿಯುತ್ತಾ ಕುಳಿತಳು. ಅಷ್ಟರೊಳಗೆ ಅಭಿಮನ್ಯು ಬಂದು ಆಕೆಯನ್ನು ಸೇರಿಕೊಂಡ. ಹಿಂಬದಿಯಿಂದ ಬಂದು ಆಕೆಯ ತೋಳ ಮೇಲೆ ಕೈಯಿರಿಸಿ ತನ್ನ ಹಾಜರಾತಿ ತೋರ್ಪಡಿಸಿದ. ಆಕೆಯ ಪಕ್ಕದಲ್ಲಿಯೇ ಅಭಿಮನ್ಯು ಅಂಟಿಕೊಂಡು ಕುಳಿತು ಕೈಯನ್ನು ಭದ್ರವಾಗಿ ಹಿಡಿದುಕೊಂಡಾಗ ಆಕೆಗೆ ಜೀವನದಲ್ಲಿ ಒಂದು ಭದ್ರತೆ ದೊರೆತಂತಾಯಿತು.

ಯಾಕೆ ಅಭಿ, ಮೌನವಾಗಿ ಕೂತುಬಿಟ್ಟಿದ್ದೀಯ? ಈ ನಿನ್ನ ಗೆಳತಿಯನ್ನು ಅಪ್ಪಿಕೊಳ್ಬೇಕು, ಮುದ್ದಾಡ್ಬೇಕು, ಬಾಯಿತುಂಬ ಮಾತಾಡಿಸ್ಬೇಕು, ಹಳೆಯ ನೆನಪುಗಳ ಬುತ್ತಿಯನ್ನೆಲ್ಲ ತೆರೆದಿಡಬೇಕೂಂತ ಅನ್ನಿಸ್ತಾ ಇಲ್ವ? ಇಷ್ಟೊಂದು ಬೇಗ ಪ್ರೀತಿ ಸಾಕೆನ್ನಿಸಿ ಬಿಡ್ತಾ? ಮನದೊಳಗೆ ಹುದುಗಿರುವ ನೋವನ್ನು ತೋರ್ಪಡಿಸಲು ಇಷ್ಟಪಡದೆ ತನ್ನ ಹಳೆಯ ಧಾಟಿಯಲ್ಲಿಯೇ ಅಭಿಮನ್ಯು ವನ್ನು ಛೇಡಿಸಿದರೂ ಮನದ ಮೂಲೆಯಲೆಲ್ಲೋ ‘ಇಂತಹ ಸುಖ ಇನ್ನೆಷ್ಟು ದಿನ ಇರುತ್ತದೋ? ಅನ್ನಿಸಿತು.

ನಾನು ಮಾತಾಡೋದಕ್ಕಿಂತ ಮೊದ್ಲು ನೀನೇ ಮಾತಿಗೊಂದು ಮುನ್ನುಡಿ ಬರೆದರೆ ಚೆಂದ. ನಂತರವಷ್ಟೇ ನನ್ನ ಮಾತು. ನಿನ್ನ ಮಾತು ಕೇಳಿ ಸಂತೋಷ ಪಡುವುದಷ್ಟೇ ನನ್ನ ಪಾಲಿನ ಕೆಲಸ. ಅದ್ಸರಿ ಕಣ್ಣೇಕೆ ಕೆಂಪಾಗಿದೆ. ರಾತ್ರಿ ಏನಾದ್ರೂ ಪೆಗ್ಗ್ ಏರಿಸಿ ಬಿಟ್ಯಾ? ಅದೂ ನನ್ನ ಬಿಟ್ಟು? ಕುಡಿದು ತೂರಾಡುವ ಹೆಂಡ್ತಿ ಜೊತೆ ಜೀವನ ನಡೆಸೋದಕ್ಕೆ ನನ್ನಿಂದ ಸಾಧ್ಯ ಇಲ್ಲ ಎಂದು ಅಭಿಮನ್ಯು ತಮಾಷೆಯ ಮಾತುಗಳ್ನಾಡಿದ.

ಎಲ್ಲಾ ನಿನ್ನ ಸಹವಾಸ ದೋಷ. ಗಂಡನ ಕುಡಿತದ ಚಟ ಬಿಡಿಸೋದಕ್ಕೆ ಹೆಂಡ್ತಿಯಾದವಳು ಇಂತಹ ಮಾರ್ಗ ತುಳಿಯಲೇಬೇಕು. ಹೆಂಡ್ತಿಯ ಕುಡಿತದ ಚಟ ನೋಡಿ ಗಂಡ ಬೆರಗಾಗಿ ತನ್ನೆಲ್ಲ ದುಶ್ಚಟಗಳನ್ನ ದೂರ ಇಟ್ಟು ಹೆಂಡ್ತಿ ಮುಂದೆ ಮಂಡಿಯೂರಿ ಕುಳಿತು ಸಾಕಿನ್ನು ನಾವಿಬ್ರು ದುಶ್ಚಟದಿಂದ ದೂರ ಇದ್ದುಬಿಡುವ ಅಂತ ವಿನಂತಿಸಿಕೊಳ್ಬೇಕು. ಅದ್ಕೋಸ್ಕರ ನಿನ್ನೆ ರಾತ್ರಿ ಮನಸ್ಸಿಗೆ ತೋಚಿದಷ್ಟು, ದೇಹಕ್ಕೆ ಅತಿಯಾಗುವಷ್ಟು ಕುಡಿದು ಬಿಟ್ಟೆ. ನಿನ್ಗೇನಾದ್ರು ಬೇಸರ ಆಯ್ತ? ಎಂದು ತಮಾಷೆಯಿಂದ ಕೇಳಿದ ಆಕೆ ಇದ್ದಕ್ಕಿದ್ದಂತೆ ಗಂಭೀರವಾಗಿ ಯಾಕೋ ಗೊತ್ತಿಲ್ಲ ಅಭಿ, ದಿನಾ ಕುಡಿಬೇಕು ಅಂತ ಅನ್ನಿಸ್ತಾ ಇದೆ ಅಂದುಬಿಟ್ಟಳು.

ಆಕೆಯ ಮಾತು ಕೇಳಿ ಮನದೊಳಗೆ ನಕ್ಕ ಅಭಿಮನ್ಯು ಆಕೆಯನ್ನು ಮತ್ತಷ್ಟೂ ಹತ್ತಿರಕ್ಕೆ ಎಳೆದು ತೋಳಲ್ಲಿ ಬಳಸಿ ಈ ನಿನ್ನ ತುಂಟತನವೇ ನನ್ಗೆ ತುಂಬಾ ಹಿಡಿಸೋದು. ಹೆಂಡ ಕುಡಿಯೋ ವಿಷಯ ಒತ್ತಟ್ಟಿಗಿಲಿ ಅದರ ವಾಸನೆ ತಗೊಂಡ್ರೆ ಸಾಕು ಫುಲ್ ಟೈಟಾಗಿ ಬಿಡ್ತಿಯ. ಆ ವಿಚಾರವೆಲ್ಲ ಸಾಯ್ಲಿ ಬಿಡು; ಮನೆ ಕಡೆ ಏನು ವಿಶೇಷ? ಅಪ್ಪ, ಅಮ್ಮ ಚೆನ್ನಾಗಿದ್ದಿರಾ? ಕೇಳಿದ.

ಅಭಿಮನ್ಯುವಿನ ಕಳಕಳಿಯ ಬಗ್ಗೆ ಮೆಚ್ಚುಗೆ ಆಯಿತಾದರೂ ಆಕೆಯಲ್ಲಿ ಆ ಪ್ರಶ್ನೆ ಕಸಿವಿಸಿ ಉಂಟು ಮಾಡಿತು. ಅಪ್ಪ, ಅಮ್ಮನ ಬಗ್ಗೆ ಕೇಳೋದಕ್ಕೇನಿದೆ? ನನ್ನ ಬಗ್ಗೆನೇ ಹೇಳೋದಕ್ಕೆ ಸಾಕಷ್ಟಿದೆ. ಅಪ್ಪ, ಅಮ್ಮ ಏನೋ ಕ್ಷೇಮವಾಗಿದ್ದಾರೆ. ಆದರೆ, ಕ್ಷೇಮ ಕಳೆದುಕೊಂಡವಳು ನಾನು. ಮನಸ್ಸಿನೊಳಗೆ ನೋವು ತುಂಬಿಕೊಂಡಿದೆ ಅಭಿ. ಅದಕ್ಕೆಲ್ಲ ನೀನೇ ಪರಿಹಾರ ಹೇಳ್ಬೇಕು. ಅದು ನಿನ್ನೊಬ್ಬನಿಂದ ಮಾತ್ರ ಸಾಧ್ಯ ಎಂದು ಎಲ್ಲವನ್ನು ಹೇಳಿಬಿಡಬೇಕೆಂದು ನಿರ್ಧರಿಸಿದ ಆಕೆ ಮತ್ತೆ ಮನಸ್ಸು ಬದಲಾಯಿಸಿಕೊಂಡಳು. ಮನದೊಳಗಿದ್ದ ಮಾತುಗಳನ್ನೆಲ್ಲ ಧ್ವನಿಯಾಗಿಸಲು ಧೈರ್ಯ ಸಾಲಲಿಲ್ಲ. ಧೈರ್ಯ ಅನ್ನೋದಕ್ಕಿಂತ ಹೆಚ್ಚಾಗಿ ಮನಸ್ಸಾಗಲಿಲ್ಲ. ಈಗಷ್ಟೇ ತಾನೇ ಅಭಿಮನ್ಯುವಿನೊಂದಿಗೆ ಕಳೆದ ನಾಲ್ಕೈದು ನಿಮಿಷಗಳೇ ಎಷ್ಟೊಂದು ಮಧುರವಾಗಿತ್ತು. ಆ ವಾತಾವರಣವನ್ನು ಹಾಳು ಮಾಡೋದಕ್ಕೆ ಮನಸ್ಸಾಗದೆ ಹೇಳಲು ಹೊರಟ ಮಾತುಗಳನ್ನೆಲ್ಲ ತನ್ನಲ್ಲೇ ನುಂಗಿಕೊಂಡು ಮೌನಿಯಾದಳು.

ಏನು ಯೋಚನೆ ಮಾಡ್ತಾ ಇದ್ದೀಯ ಅಕ್ಷರ. ಯಾಕೆ ಮಾತನ್ನ ಅರ್ಧದಲ್ಲಿಯೇ ನಿಲ್ಸಿಬಿಟ್ಟೆ? ಮನೆಯಲ್ಲೇನಾದ್ರು…!? ಅಭಿಮನ್ಯು ಮಾತು ಮುಂದುವರೆಸುತ್ತಿದ್ದಂತೆ ತಡೆದು ನಿಲ್ಲಿಸಿದ ಅಕ್ಷರ ಮನೆ ವಿಷಯ ಇಲ್ಲೇಕೆ? ಇಲ್ಲೇನಿದ್ದರೂ ನಮ್ಮಿಬ್ಬರ ವಿಷಯ ಮಾತ್ರ ಸಾಕು. ಇಲ್ಲಿ ಕಳೆಯುವ ಪ್ರತಿಯೊಂದು ನಿಮಿಷವೂ ಕೂಡ ನಮ್ಮದಾಗಿರಬೇಕು. ಬೇರೆಯವರ ವಿಷಯ ನಮಗೆ ಅವಶ್ಯಕತೆ ಇಲ್ಲ. ಮನೆಯಲ್ಲಿ ಆಗಬಾರದಂತದೇನು ಆಗಿಲ್ಲ. ನಿನ್ನ ಬಳಿ ಕೂತು ಮಾತೋಡದಕ್ಕೆ ಪ್ರಾರಂಭಮಾಡಿದಾಗ ನಮ್ಮ ಮುಂದಿನ ವೈವಾಹಿಕ ಜೀವನದ ನೆನಪಾಗಿ ಆ ಕಲ್ಪನೆಯಲ್ಲಿ ಮುಳುಗಿ ಹೋದೆ. ಎಷ್ಟೊಂದು ಸಿಹಿಯಾಗಿತ್ತು ಗೊತ್ತಾ ಆ ಕಲ್ಪನೆ. ಮಧ್ಯದಲ್ಲಿ ಬಾಯಿ ಹಾಕಿ ಎಲ್ಲಾ ಕೆಡಿಸಿ ಬಿಟ್ಟೆ ಹುಸಿ ಮುನಿಸು ತೋರಿದಳು.

ಆಕೆಗೀಗ ಮನೆಯ ವಿಷಯ ಮಾತಾಡೋ ಅವಶ್ಯಕತೆ ಇರಲಿಲ್ಲ. ಅಭಿಮನ್ಯುವಿನ ಬಳಿ ಕುಳಿತ ತಕ್ಷಣ ಎಲ್ಲಾ ನೋವುಗಳನ್ನು ಮರೆತು ಬಿಟ್ಟಳು. ಮನದೊಳಗೆ ಹುದುಗಿರುವ ನೋವನ್ನೆಲ್ಲ ತೋಡಿಕೊಳ್ಳಬೇಕೆಂದು ಅನ್ನಿಸಿದರೂ ಕ್ಷಣಾರ್ಧದಲ್ಲಿ ಮನಸ್ಸು ಬದಲಾಗಿ ಸಂತೋಷದ ವಿಚಾರ ಮಾತ್ರ ಮಾತಾಡಿದರೆ ಸಾಕು ಅನ್ನಿಸಿತು. ಮನೆಯ ವಿಷಯ ಎತ್ತಿದರೆ ಆಕೆಗೆ ವಿಷ ಕುಡಿದಂತೆ ಆಗುತಿತ್ತು. ಅಭಿಮನ್ಯುವನ್ನು ಭೇಟಿಯಾಗಿ ಮನೆಯಲ್ಲಿ ನಡೆದ ಎಲ್ಲಾ ವಿಚಾರಗಳನ್ನು ಹೇಳಿಕೊಂಡು ಮನಸ್ಸು ಹಗುರ ಮಾಡಿಕೊಳ್ಳಬೇಕೆಂದು ನಿರ್ಧರಿಸಿ ಹೊರಟ ಆಕೆಯ ನಿಲುವು ಅಭಿಮನ್ಯುವಿನೊಂದಿಗೆ ಬೆರೆತೊಡನೆ ಬದಲಾಯಿತು. ಮೊದಲಿನಂತೆ ದಿನಾ ಭೇಟಿಯಾಗೋದಕ್ಕೆ ಸಾಧ್ಯವಿಲ್ಲ. ಅಪರೂಪಕ್ಕೆ ಒಮ್ಮೆ ಭೇಟಿಯಾಗುವಾಗ ಸಂತೋಷ ಹಂಚಿಕೊಳ್ಳುವುದನ್ನು ಬಿಟ್ಟು ನೋವುಗಳನ್ನು ಯಾಕೆ ಹಂಚಿಕೊಳ್ಳಬೇಕು? ಏನಿದ್ದರೂ ಮೈಸೂರಿಗೆ ಹೋದ ನಂತರ ಫೋನಲ್ಲೇ ಎಲ್ಲಾ ವಿಚಾರ ತಿಳಿಸಿದರೆ ಸಾಕು ಎಂದು ತೀರ್ಮಾನಿಸಿದಳು.

ಪ್ರೀತಿಗೆ ಮುನ್ನುಡಿ ಬರೆದು ಅದೆಷ್ಟು ವರ್ಷಗಳು ಸರಿದು ಹೋಯಿತು? ನಮ್ಮ ಪ್ರೀತಿಯ ಕೂಸಿಗೆ ಇದೀಗ ಎರಡೂವರೆ ವರ್ಷ. ಅದೆಷ್ಟು ಬೇಗ ಕಾಲಚಕ್ರ ಉರುಳಿ ಹೋಯಿತು? ಎಲ್ಲೋ ನಿನ್ನೆ ಮೊನ್ನೆ ಪ್ರೀತಿ ಅರಳಿನಿಂತ ಅನುಭವ. ಅಷ್ಟೊಂದು ಸುಂದರವಾಗಿ, ಸುಲಲಿತವಾಗಿ ಕಳೆದು ಹೋಯಿತ್ತಲ್ಲ ದಿನಗಳು! ಎರಡೂವರೆ ವರ್ಷಗಳ ಪ್ರತಿಯೊಂದು ದಿನಗಳೂ ಈಗಷ್ಟೇ ಸರಿದು ಹೋದ ಅನುಭವ. ಒಮ್ಮೆ ತಿರುಗಿ ನೋಡಿದಾಗ ಇಷ್ಟೊಂದು ದೂರ ಸಾಗಿ ಬಂದು ಬಿಟ್ಟೆವಾ? ಈ ಪ್ರೀತಿಯ ಪಯಣವನ್ನು? ಎಂದು ಆಕೆಗೆ ಅನ್ನಿಸಿತು. ಪ್ರೀತಿಯ ಪಯಣವನ್ನು ಹೀಗೆಯೇ ಮುಂದುವರೆಸುವ ಹಂಬಲ ಇದೀಗ ಆಕೆಯಲ್ಲಿ ಮೊದಲಿಗಿಂತ ಹೆಚ್ಚಾಗುತ್ತಿದೆ, ದೃಢವಾಗುತ್ತಿದೆ. ಪ್ರೀತಿಯ ಮುಂದಿನ ಹಾದಿಯಲ್ಲಿ ಸುಖ ಕಾದು ನಿಂತಿದೆಯೋ, ದುಃಖ ಕಾದು ಕುಳಿತಿದೆಯೋ ತಿಳಿಯದು. ಆದರೆ, ನಡೆದು ಬಂದ ಹಾದಿಯಲ್ಲಿ ಮುಂದೆ ಸಾಗಿ ಕಟ್ಟಕಡೆಗೆ ತಲುಪಿದ ನಂತರ ಹಿಂತಿರುಗಿ ನೋಡಿ ಎಲ್ಲವನ್ನೂ ಮೆಲುಕು ಹಾಕುತ್ತಾ ಬದುಕು ಸವೆಸಬೇಕೆಂಬ ಆಸೆ ಮೊಳಕೆಯೊಡೆಯಿತು.

ಗೆಳೆಯ ನೀನೊಬ್ಬನಿದ್ದರೆ ಸಾಕು, ನನ್ನಲ್ಲಿ ಉತ್ಸಾಹದ ಚಿಲುಮೆ ಮತ್ತಷ್ಟು ಪುಟಿದೇಳುತ್ತದೆ. ನಿನ್ನ ಬಿಸಿಯಪ್ಪುಗೆ ಒಂದಿದ್ದರೆ ಸಾಕು, ಎಲ್ಲಾ ನೋವುಗಳು ದೂರವಾಗುತ್ತದೆ. ನಿನ್ನ ಸಾಮೀಪ್ಯವಿದ್ದರೆ ಸಾಕು, ಮನಸ್ಸಿನ ಚಂಚಲತೆಗಳೆಲ್ಲವೂ ಗಂಟುಮೂಟೆ ಕಟ್ಟಿ ಹೊರಟು ನಿಂತು ಬಿಡುತ್ತದೆ. ನಿನ್ನ ಮುದ್ದಾದ ಮಾತುಗಳು ಕೇಳಿದರೆ ಸಾಕು, ಮನಸ್ಸು ಹಗುರವಾಗಿ ಬಿಡುತ್ತದೆ. ಇನ್ನೇನು ಬೇಕು ನನಗೆ? ನೀನೊಬ್ಬನಲ್ಲದೆ? ನೀನೇ ನನ್ನ ಬಾಳ ಸಂಗಾತಿಯಾಗಬೇಕೆಂಬ ಬಯಕೆ ಸದಾ ಜಾಗೃತವಾಗಿದ್ದರೆ ಅಷ್ಟೇ ಸಾಕು ಎಂದು ಅಕ್ಷರ ಮನದಲ್ಲಿ ಅಂದುಕೊಂಡಳು.

ಆಹ್ಲಾದಕರ ವಾತಾವರಣದಲ್ಲಿ ಪ್ರಕೃತಿ ಸೌಂದರ್ಯದ ಸೊಬಗನ್ನು ಸವಿಯುತ್ತಾ ಕುಳಿತ ಅಭಿಮನ್ಯುವನ್ನು ತೋಳಲ್ಲಿ ಬಳಸಿಕೊಂಡ ಅಕ್ಷರ ಹಲೋ ಮೈ ಡಿಯರ್ ಸ್ವೀಟ್ ಹಾರ್ಟ್. ಪ್ರಕೃತಿ ಸೊಬಗಿನಲ್ಲಿ ಮೈ ಮರೆತು ಬಿಡ್ಬೇಡ. ಸ್ವಲ್ಪ ಯೋಚ್ನೆ ನನ್ನ ಕಡೆ ಕೂಡ ಇಲಿ ಅಂದಳು.

ತುಟಿಯಲ್ಲಿ ಕಿರುನಗೆ ಬೀರಿದ ಅಭಿಮನ್ಯು ಮನದೊಳಗೆ ನೀನು ನೆಲೆಸಿರುವಾಗ ಬೇರೆ ಆಲೋಚನೆಗಳು ಬರೋದಕ್ಕೆ ದಾರಿ ಎಲ್ಲಿದೆ ಹೇಳು? ನೀನು ಪಕ್ಕದಲ್ಲಿ ಕುಳಿತಾಗಲೂ ಕೂಡ ಮಾತಾಡುವುದನ್ನೇ ಮರೆತು ನಿನ್ನ ಬಗ್ಗೆನೇ ಆಲೋಚನೆ ಮಾಡ್ತಾ ಕೂತುಬಿಟ್ಟೆ. ನೀನು ನನ್ನ ಕಣ್ಣೆದುರಿಗೆ ಇಲ್ಲದ ಘಳಿಗೆಯಲ್ಲೂ ಕೂಡ ಒಮ್ಮೆ ಕಣ್ಣು ಮುಚ್ಚಿ ತೆರೆದರೆ ನೀನು ನನ್ನೆದುರಿಗೆ ಇರುತ್ತೀಯ. ಈ ಮಾತೆಲ್ಲ ಕೇಳ್ತಾ ಇದ್ರೆ ನಾನೊಬ್ಬ ಹುಚ್ಚ ಅನ್ನಿಸ್ಬೊಹುದು. ನೀನು ಏನೇ ಅಂದುಕೊಂಡರೂ ಸಹ ಸದ್ಯದ ನನ್ನ ಪರಿಸ್ಥಿತಿ ಹಾಗೆಯೇ ಇದೆ. ನಿನ್ನ ನೆನೆಸಿಕೊಳ್ಳೋದು ಬಿಟ್ಟರೆ ಬೇರೇನು ಕೆಲಸವಿಲ್ಲ ನನ್ಗೆ. ಕೆಲವೊಂದ್ಸಲ ಏನೇನೋ ಹುಚ್ಚು ಕಲ್ಪನೆಗಳು ಮನದೊಳಗೆ ಬಂದು ಕುಳಿತುಬಿಡುತ್ತದೆ. ಅಷ್ಟೆಲ್ಲ ಯಾತನೆ ತುಂಬಿದ ಕಲ್ಪನೆಗಳು ಮನಸ್ಸಿನಲ್ಲಿ ಯಾಕೆ ಹುಟ್ಟಿಕೊಳ್ಳುತ್ತಿದೆ ಎಂದು ನನ್ನ ನಾನೇ ಪ್ರಶ್ನೆ ಮಾಡಿಕೊಂಡಾಗ ನಾನು ನಿನ್ನ ಕಳೆದುಕೊಂಡುಬಿಡ್ತೇನೆ! ಅಂತ ಒಮ್ಮೊಮ್ಮೆ ಅನ್ನಿಸ್ತದೆ. ಸಾಯೋ ವ್ಯಕ್ತಿಯನ್ನ ನೋಡ್ತಾ ಇದ್ರೆ ಅವನೊಂದಿಗೆ ಒಡನಾಡಿದ ದಿನಗಳಿಂದ ಹಿಡಿದು ಸಾಯುವ ಹಂತದವರೆಗಿನ ಎಲ್ಲಾ ಘಟನೆಗಳ ನೆನಪುಗಳ ಪುಟಗಳು ಒಂದೊಂದಾಗಿ ತೆರೆದುಕೊಳ್ಳುತ್ತದೆ. ನನ್ನ ಮನಸ್ಸಿನಲ್ಲಿ ನಮ್ಮಿಬ್ಬರ ಪ್ರೀತಿಯಲ್ಲಿ ನಡೆದ ಎಲ್ಲಾ ಘಟನೆಗಳು ಒಂದೇ ಸಮಯಕ್ಕೆ ಬಂದು ಬೀಳ್ತಾ ಇದೆ. ಒಂದೊಂದು ಸಲ ನಮ್ಮ ಪ್ರೀತಿ ಮೃತ್ಯುವಿನೆಡೆಗೆ ಮುಖ ಮಾಡಿ ನಿಂತು ಬಿಟ್ಟಿದೆಯಾ? ಅದಕ್ಕಾಗಿ ಇಷ್ಟೊಂದು ನೆನಪುಗಳು ಸಾಗರದ ಅಲೆಗಳಂತೆ ಮತ್ತೆ ಮತ್ತೆ ಬಂದು ಅಪ್ಪಳಿಸ್ತಾ ಇದೆಯಾ ಅನ್ನಿಸಿ ಭಯಗೊಂಡು ನೆನಪುಗಳನ್ನೆಲ್ಲ ಒಂದಷ್ಟು ಹೊತ್ತು ಬದಿಗಿಟ್ಟು ಪ್ರೀತಿಯ ನೌಕೆಯನ್ನು ನಡು ನೀರಿನಲ್ಲಿ ಬಿಡಬೇಡ ದೇವರೇ, ದಡ ಸೇರಿಸುವ ತನಕ ಮುನ್ನಡೆಸು ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ. ಆದರೂ ತೇಲಿಬರುವ ಆ ನೆನಪುಗಳನ್ನು ತಡೆದು ನಿಲ್ಲಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಯಾಕೋ ಭಯ ಆಗ್ತಾ ಇದೆ ಅಕ್ಷರ. ನಿನ್ಗೆ ಹೀಗೆಲ್ಲ ಅನ್ನಿಸ್ತಾ ಇದೆಯಾ? ಎಂದು ಕೇಳಿ ಭಾವುಕನಾದ ಅಭಿಮನ್ಯುವಿನ ಕಣ್ಣಚ್ಚಿನಿಂದ ಕಣ್ಣೀರಹನಿ ಹೊರ ಚಿಮ್ಮಿತು.

ಅಕ್ಷರ ಏನು ಹೇಳಲು ತೋಚದೆ ಕುಳಿತುಬಿಟ್ಟಳು. ತಾನು ನೇರವಾಗಿ ಎದುರಿಸಿದ ಸಮಸ್ಯೆಯನ್ನು ಅಭಿಮನ್ಯು ಮನೊದಳಗೆ ಅನುಭವಿಸುತ್ತಿದ್ದಾನೆ ಅನ್ನಿಸಿತು. ಅಭಿಮನ್ಯುವಿನ ಮಾತು ಕೇಳಿ ಕೆಲವು ನಿಮಿಷಗಳ ಹಿಂದೆ ಇದ್ದ ಉತ್ಸಾಹವೆಲ್ಲ ದೂರವಾಯಿತು. ಪ್ರೀತಿಯ ವಿಚಾರದಲ್ಲಿ ಮನೆಯಲ್ಲಿ ದೊಡ್ಡ ರಾದ್ಧಾಂತವೇ ನಡೆದು ಹೋಯಿತು. ಈ ವಿಚಾರ ಅಭಿಮನ್ಯುವಿಗೆ ತಿಳಿದಲ್ಲವಾದರೂ ಅದರ ಮುನ್ಸೂಚನೆಯನ್ನು ದೇವರೇ ಅವನಿಗೆ ಕೊಟ್ಟಂತೆ ಕಾಣುತ್ತಿದೆ. ಕೇವಲ ಮನದಲ್ಲಿ ಉದಯಿಸಿದ ಕಲ್ಪನೆಗಳನ್ನು ನೆನೆಸಿಕೊಂಡು ಕಣ್ಣೀರು ಸುರಿಸುವ ಅಭಿಮನ್ಯುವಿಗೆ ಎಲ್ಲಾ ವಿಚಾರ ಹೇಳಿಬಿಟ್ಟರೆ ಎಷ್ಟೊಂದು ನೊಂದು ಕೊಳ್ಳೋದಿಲ್ಲ? ಹೇಳದಿರುವುದೇ ವಾಸಿ. ನಿಧಾನವಾಗಿ ಎಲ್ಲವನ್ನು ಮನದಟ್ಟು ಮಾಡಿದರಾಯಿತು. ಅಲ್ಲಿ ತನಕ ಅಭಿಮನ್ಯು ವನ್ನು ಸಂತೋಷವಾಗಿರುವಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ ಅಂದುಕೊಂಡಳು.

ನನ್ನ ಪ್ರಶ್ನೆಗಳಿಗೆ ಕೇವಲ ಮೌನವೇ ಉತ್ತರವಾ? ಅಥವಾ ಉತ್ತರ ಹೇಳಬೇಕೂಂತ ಅನ್ನಿಸ್ತಾ ಇಲ್ವ? ಉತ್ತರ ಬೇಕೇ ಬೇಕೆಂದು ಹಟ ಹಿಡಿದು ಕೂರುವ ಮಗುವಿನಂತೆ ಆಕೆಯನ್ನು ಕೇಳಿದ.

ಮನದಲ್ಲಿ ನೋವಿನ ಮೂಟೆ ಕಟ್ಟಿಕೊಂಡವನ ಎದುರು ತನ್ನೆಲ್ಲ ನೋವಿನ ಮೂಟೆ ಬಿಚ್ಚಿಡಲು ಆಕೆಗೆ ಇಷ್ಟವಾಗಲಿಲ್ಲ. ಮನದಲ್ಲಿ ಹುದುಗಿರುವ ನೋವನ್ನೆಲ್ಲ ಹೊರಚೆಲ್ಲಿ ಮನಸ್ಸು ಹಗುರ ಮಾಡಿಕೊಳ್ಳಬೇಕೆಂದು ಬಂದವಳಿಗೀಗ ಅಭಿಮನ್ಯುವನ್ನೇ ಸಂತೈಸುವ ಪರಿಸ್ಥಿತಿ ನಿರ್ಮಾಣವಾಯಿತು. ಅಭಿಮನ್ಯು ಎಂದೂ ಕೂಡ ಈ ರೀತಿ ಮಾತಾಡಿದವನಲ್ಲ. ಅವನ ಮುಖವನ್ನೊಮ್ಮೆ ನೋಡಿದಾಗ ಅವನಲ್ಲಿ ಲವಲವಿಕೆ ನಿದ್ರಾವಸ್ತೆಗೆ ಜಾರಿದಂತೆ ಗೋಚರಿಸಿತು.

ಅಭಿ, ಏನಾಗಿದೆ ನಿನ್ಗೆ? ನಾನೇನಾದ್ರು ನಿನ್ನ ಬಿಟ್ಟೋಗ್ತಿನಿ ಅಂತ ಹೇಳಿದ್ನಾ? ಇಲ್ವಲ್ಲ? ಅನಗತ್ಯವಾಗಿ ಏನೇನೋ ಕಲ್ಪನೆ ಮಾಡ್ಕೊಂಡು ಯಾಕೆ ಮನಸ್ಸು ಹಾಳು ಮಾಡ್ಕೊತ್ತಾ ಇದ್ದೀಯ? ನಾನು ಎಂದೆಂದಿಗೂ ನಿನ್ನವಳೇ ಕಣೋ. ಕೇವಲ ನಿನ್ನವಳು. ನಿನಗೋಸ್ಕರನೇ ಹುಟ್ಟಿದವಳು ಸಂತೈಸಿದಳು.

ಹುಚ್ಚು ಕಲ್ಪನೆಗಳಿಗೆ ಮಿತಿಯೇ ಇಲ್ಲವೇ? ಏಕಾಗಿ ಹೀಗಿ ಮನದೊಳಗೆ ನೂರಾರು ಪ್ರಶ್ನೆಗಳು ಒಮ್ಮಿಂದೊಮ್ಮೆಲೆ ಉದಯಿಸುತ್ತಿದೆ. ಆ ಪ್ರಶ್ನೆಗಳಿಗೆಲ್ಲ ಉತ್ತರ ದೊರೆಯದೆ ಕೇವಲ ಪ್ರಶ್ನೆಗಳಾಗಿಯೇ ಉಳಿದಿವೆ. ಅಷ್ಟಕ್ಕೂ ನನಗೇನಾಗಿದೆ? ಅಕ್ಷರಳ ನಿಷ್ಕಲ್ಮಷ ಹೃದಯ ತನಗಾಗಿ ತುಡಿಯುತ್ತಿದೆ. ಆದರೂ ಕೂಡ ಮನದಲ್ಲೇನೋ ತಳಮಳ. ಏನೋ ಕಳೆದುಕೊಂಡ ಭಾವ. ನನ್ನಲ್ಲಿ ಉದಯಿಸುತ್ತಿರುವ ಆತಂಕವನ್ನು ಎದುರಿಸಲು ಸಾಧ್ಯವಾಗದೆ ಅದರ ಹೊರೆಯನ್ನೆಲ್ಲ ಅಕ್ಷರಳ ಮೇಲೆ ಹೊರಿಸಲು ಮುಂದಾಗುತ್ತಾ ಇದ್ದೇನಾ? ಛೇ, ನಾನೆಂತ ಪಾಪಿ. ಆಕೆಯ ನೆಮ್ಮದಿಯ ಬದುಕಿಗೆ ಕೊಳ್ಳಿ ಇಡುವ ಪ್ರಯತ್ನ ನನ್ನಿಂದೇಕೆ ಆಗುತ್ತಿದೆ? ಇನ್ನು ಮುಂದೆ ಹಾಗೆ ಆಗದಂತೆ ನೋಡಿಕೊಳ್ಳಬೇಕು. ನೋವನ್ನೆಲ್ಲ ನುಂಗಿಕೊಳ್ಳುವ ಶಕ್ತಿ ಕೊಡು ದೇವರೇ ಎಂದು ಮನದಲ್ಲಿ ಪ್ರಾರ್ಥಿಸಿಕೊಂಡು ನಿಟ್ಟುಸಿರು ಬಿಟ್ಟು ಆಕೆಯನ್ನು ನೋಡಿ ಮುಗುಳ್ನಗೆ ಬೀರಿದ. ಅಕ್ಷರ ಕೂಡ ನಕ್ಕಳು. ಮತ್ತೆ ಇಬ್ಬರು ಒಬ್ಬರನ್ನೊಬ್ಬರು ಆಲಂಗಿಸಿಕೊಂಡರು.

ಅಭಿ, ನೀನು ಹೀಗೆ ಇದ್ರೆನೇ ಚೆಂದ. ಸದಾ ನಿನ್ನ ಮೊಗದಲ್ಲಿ ಮುಗುಳ್ನಗೆ ತುಂಬಿರಬೇಕು. ಜೀವನ ತುಂಬಾ ಸಣ್ಣದು ಕಣೋ. ಇರುವಷ್ಟು ದಿನ ಸಂತೋಷವಾಗಿ ಇಬೇಕು. ಸಣ್ಣಪುಟ್ಟ ವಿಷಯಗಳಿಗೇಕೆ ತಲೆ ಕೆಡಿಸಿಕೊಳ್ಬೇಕು? ಇನ್ನು ಜೀವನದಲ್ಲಿ ಏನೇನೋ ದೊಡ್ಡ ಘಟನೆಗಳು ನಡೆಯುವುದಕ್ಕೆ ಬಾಕಿ ಇದೆ. ಆವಾಗ ಒಂದಷ್ಟು ತಲೆ ಕೆಡಿಸಿಕೊಂಡ್ರೆ ಸಾಕು. ಅಲ್ಲಿ ತನ್ಕ ಬಿ ಹ್ಯಾಪಿ ಅಂದ ಆಕೆಯ ಮಾತಿನಲ್ಲಿ ಮುಂದೆ ನಡೆಯಲಿರುವ ಪ್ರೇಮಯುದ್ಧದ ಮುನ್ಸೂಚನೆ ಇತ್ತು. ಅದನ್ನು ತುಂಬ ಸೂಕ್ಷ್ಮವಾಗಿ ತನ್ನ ಮಾತಿನ ಮೂಲಕ ತೋರ್ಪಡಿಸಿದಳು. ಆದರೆ, ಅದೆಲ್ಲ ಅಭಿಮನ್ಯುವಿಗೆ ಎಲ್ಲಿಂದ ಅರ್ಥವಾಗಬೇಕು? ಅವನಿಗೇನಿದ್ದರೂ ಬಿಡಿಸಿ ಹೇಳಿದರಷ್ಟೇ ಮನದಟ್ಟಾಗುವುದು. ಆದರೆ, ಅದೆಲ್ಲವನ್ನೂ ಬಿಡಿಸಿ ಹೇಳೋದಕ್ಕೆ ಇದು ಸೂಕ್ತ ಸಮಯವಲ್ಲ ಅಂದುಕೊಂಡಳು.

ಜೀವನದಲ್ಲಿ ಪ್ರೀತಿ ಅರಳೋದು ಬಹಳ ಸುಲಭ. ಆದರೆ, ಅರಳಿ ನಿಂತ ಪ್ರೀತಿಯ ಮೇಲೆ ನೂರಾರು ದುಂಬಿಗಳು ದಾಳಿ ಇಡಲು ಪ್ರಾರಂಭಿಸಿಬಿಡುತ್ತವೆ. ಆ ಸಂದರ್ಭವೇ ಎಲ್ಲಾ ಸಮಸ್ಯೆಗಳು ಹುಟ್ಟಿಕೊಳ್ಳೋದು. ಇಬ್ಬರ ಪ್ರೀತಿ ಈಗ ಅರಳಿ ನಿಂತ ಹೂವಿನಂತಿದೆ. ಈ ಸಂದರ್ಭ ದುಂಬಿಗಳ ದಾಳಿ ಸಾಮಾನ್ಯ. ಇನ್ನು ಸಾಗಬೇಕಾಗಿರುವ ಹಾದಿ ತುಂಬಾ ದೂರ ಇದೆ. ಈಗೇನಿದ್ದರೂ ಅರ್ಧ ದಾರಿಯನ್ನಷ್ಟೇ ಕ್ರಮಿಸಿಯಾಗಿದೆ. ಇನ್ನರ್ಧ ದಾರಿಯಲ್ಲಿಯೇ ಎದುರಾಗುವುದು ನಿಜವಾದ ಬಳಲಿಕೆ. ಸಾಗಬೇಕಾದ ಹಾದಿಯ ಬಗ್ಗೆ ಇಬ್ಬರಲ್ಲೂ ನಿರ್ದಿಷ್ಟತೆ ಇಲ್ಲ. ಅವರಿಬ್ಬರಲ್ಲಿ ಪ್ರಸ್ತುತ ವಿಚಾರಗಳ ಬಗ್ಗೆ ಮಾತ್ರ ಚರ್ಚೆ. ಒಂದೊಂದು ಸಲ ಧೈರ್ಯ ಮಾಡಿ ಮುಂದೇನು ಎಂದು ಆಲೋಚಿಸಿದ್ದು ಉಂಟು. ಆದರೆ, ಕ್ಷಣಾರ್ಧದಲ್ಲಿಯೇ ಇಬ್ಬರ ನಿಲುವು ಬದಲು. ಇಲ್ಲಿ ಯಾರೊಬ್ಬರ ಮನಸ್ಸನ್ನು ಯಾರಿಗೂ ನೋಯಿಸಲು ಇಷ್ಟವಿಲ್ಲ. ಮುಂದೇನು ಎಂಬ ಪ್ರಶ್ನೆ ಮುಂದಿಟ್ಟುಕೊಂಡು ಯಾಕೆ ತಲೆ ಹಾಳು ಮಾಡಿಕೊಳ್ಳಬೇಕು? ಪರಿಸ್ಥಿತಿ ಬಂದಾಗ ಎಲ್ಲವನ್ನು ಎದುರಿಸುವ ಎಂಬ ನಿರ್ಧಾರ ಇಬ್ಬರದ್ದು. ಸಾಕಷ್ಟು ಹೊತ್ತು ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡು ಮನಬಿಚ್ಚಿ ಮಾತಾಡಿದರೂ ಅಂತಿಮವಾಗಿ ಚರ್ಚೆ ಬಂದು ನಿಲ್ಲುತ್ತಿದ್ದದ್ದು ಪ್ರೀತಿಯ ವಿಷಯದಲ್ಲೇ. ಸಂಜೆಯ ಕುಳಿರ್ಗಾಳಿ ಮೈ ಸೋಕಲು ಪ್ರಾರಂಭಿಸುತ್ತಿದ್ದಂತೆ ವಾಸ್ತವ ಸ್ಥಿತಿಗೆ ಬಂದ ಅಕ್ಷರ, ಬಂದು ಸಾಕಷ್ಟು ಹೊತ್ತಾಯ್ತು, ಹೊರಡುವ, ನಾಳೆ ಬೆಳಗ್ಗೆ ಬೇಗ ಮೈಸೂರಿಗೆ ಹೊರಡ್ಬೇಕು. ಮನೆಯಲ್ಲಿ ಅಪ್ಪ, ಅಮ್ಮ ಕಾಯ್ತಾ ಇಬೊಹುದು. ಎಂದು ಅಭಿಮನ್ಯುವಿನೊಂದಿಗೆ ರಾಜಾಸೀಟ್‌ನಿಂದ ಕಾಲ್ತೆಗೆದಳು.

ಅಕ್ಷರ ಮನೆ ಸೇರಿಕೊಳ್ಳುವುದಕ್ಕಿಂತ ಮುಂಚಿತವಾಗಿ ಕಾಫಿ ಎಸ್ಟೇಟ್‌ಗೆ ತೆರಳಿದ್ದ ರಾಜಶೇಖರ್ ಹಿಂತಿರುಗಿದ್ದರು. ಮನೆಯಲ್ಲಿ ಮಗಳ ಅನುಪಸ್ಥಿತಿ ಕಂಡು ಕೆಂಡಮಂಡಲವಾದರು. ಅಕ್ಷರ ಮನೆಯಂಗಳ ಪ್ರವೇಶ ಮಾಡುತ್ತಿದ್ದಂತೆ ರಾಜಶೇಖರ್ ಆವೇಶಭರಿತರಾಗಿ ಆಡುತ್ತಿದ್ದ ಮಾತುಗಳು ಆಕೆಯ ಕಿವಿಗೆ ಬಿದ್ದಿತು. ಮುಂದೆ ಹೆಜ್ಜೆ ಇಡಲು ಸಾಧ್ಯವಾಗದೆ ನಿಂತ ಜಾಗದಲ್ಲಿಯೇ ನಿಂತು ಬಿಟ್ಟಳು.

ಯಾರನ್ನ ಕೇಳಿ ಮಗಳನ್ನ ಟೌನಿಗೆ ಕಳಿಸಿದ್ದೀಯ? ಟೌನ್‌ತುಂಬ ಅಭಿಮನ್ಯು ಜೊತೆ ಸುತ್ತಾಡ್ಕೊಂಡು ನಮ್ಮ ಮಾನ, ಮರ್ಯಾದೆಯನ್ನೆಲ್ಲಾ ಹರಾಜು ಹಾಕಿಬಿಡ್ತಾಳೆ. ನಮ್ಮ ಆಸೆ, ಆಕಾಂಕ್ಷೆಗಳನ್ನೆಲ್ಲ ಮಣ್ಣುಪಾಲು ಮಾಡದೆ ಅವಳಿಗೆ ನೆಮ್ಮದಿ ಇಲ್ಲ.

ಅದೇ ಅವಳಿಗೆ ಸಂತೃಪ್ತಿಯ ವಿಷಯ ರಾಜಶೇಖರ್ ರೇಗಾಡುತ್ತಲೇ ಇದ್ದರು.

ಮುಂದೇನು ಗ್ರಹಚಾರ ಕಾದಿದೆಯೋ? ದೇವರೇ ನೀನೇ ನನ್ನ ಕಾಪಾಡ್ಬೇಕು. ಎಂದು ಮನದೊಳಗೆ ದೇವರನ್ನು ಪ್ರಾರ್ಥಿಸಿಕೊಂಡು ಧೈರ್ಯಮಾಡಿ ಮನೆಯೊಳಗೆ ಕಾಲಿರಿಸಿದಳು. ಅಕ್ಷರಳನ್ನು ಕಂಡು ಕೆಂಡಮಂಡಲವಾದ ರಾಜಶೇಖರ್ ಎಲ್ಲಿ ಬೀದಿ ಸುತ್ಲಿಕ್ಕೆ ಹೋಗಿದ್ದೆ? ಸಂಶಯದೊಂದಿಗೆ ಕೋಪದಿಂದ ಕೇಳಿದರು.

ಎಲ್ಲಿಗೂ ಇಲ್ಲ ಅಪ್ಪ, ಮೈಸೂರಿಗೆ ಹೋದ ನಂತರ ಹಳೆಯ ಕಚೇರಿಗೆ ಹೋಗಿಲಿಲ್ಲ. ಅದಕ್ಕೆ ಎಲ್ಲರನ್ನ ಕಂಡು ಮಾತಾಡಿ ಬರೋಣ ಅಂತ ಹೋಗಿದ್ದೆ ಸುಳ್ಳಿನ ಮುತ್ತನ್ನು ಪೋಣಿಸಿ ಕೊರಳಿಗೊಡ್ಡಿ ಅಪ್ಪನ ಮನದಲ್ಲಿ ಉದಯಿಸಿದ ಸಂಶಯ ದೂರ ಮಾಡಲು ಪ್ರಯತ್ನಿಸಿದಳು.

ಭೇಷ್ ಮಗಳೆ, ತುಂಬಾ ಬೆಳೆದು ಬಿಟ್ಟಿದ್ದೀಯ. ನಿನ್ನ ಮುಂದೆ ನಾನು ತೀರಾ ಸಣ್ಣವನಾಗಿಬಿಟ್ಟೆ. ಇತ್ತೀಚೆಗೆ ಸುಳ್ಳು ಹೇಳೋದನ್ನ ಚೆನ್ನಾಗಿಯೇ ಕಲ್ತುಕೊಂಡಿದ್ದೀಯ! ಪ್ರೀತಿ ಕಲಿಸಿಕೊಡೋದು ಅದೊಂದನ್ನೇ ತಾನೆ? ಸುಳ್ಳು ಹೇಳುವ ಕಲೆಯನ್ನ. ಕಲಿಯಲು ಇಷ್ಟವಿಲ್ಲದಿದ್ದರೂ ಪ್ರೀತಿ ಅದನ್ನೆಲ್ಲ ಕಲಿಸಿಕೊಡುತ್ತದೆ. ನಿನ್ನ ಪ್ರತಿಯೊಂದು ಹೆಜ್ಜೆಯೂ ಕೂಡ ನನ್ಗೆ ಅರ್ಥವಾಗುತ್ತೆ.

ಯಾಕೆಂದ್ರೆ ನಾನು ಕೂಡ ಪ್ರೀತಿಯಲ್ಲಿ ಮುಳುಗೆದ್ದು ಬಂದವನು. ನೀನು ಹೇಳ್ತಾ ಇರೋದೆಲ್ಲ ಸುಳ್ಳು ಅಂತ ನಿನ್ಗೂ ಗೊತ್ತಿದೆ. ನನ್ಗೂ ಗೊತ್ತಿದೆ. ನಿನ್ನ ಬಾಯಿ ಸುಳ್ಳು ಹೇಳ್ಬೊಹುದು. ಆದ್ರೆ, ನಿನ್ನ ಕಣ್ಗಳು ಸತ್ಯವನ್ನೇ ಹೇಳ್ತಾ ಇದೆ. ನಿನ್ನ ಕಣ್ಗಳನ್ನ ನೋಡಿದ್ರೆ ಗೊತ್ತಾಗುವುದಿಲ್ವ? ನೀನು ಸುಳ್ಳು ಹೇಳ್ತಿದ್ದೀಯ ಅಂತ ಮಗಳು ತನ್ನಿಂದ ಕೈ ಜಾರಿ ಹೋಗುತ್ತಿದ್ದಾಳೆಂಬ ಭಯ ರಾಜಶೇಖರ್ ಮನದಲ್ಲಿ ಕಾಡತೊಡಗಿತು.

ಪ್ರಶ್ನೆಗಳಿಗೆ ಉತ್ತರ ನೀಡಬೇಕೆಂದು ಆಕೆಗೆ ಅನ್ನಿಸಲಿಲ್ಲ. ಸತ್ಯ ಹೇಳಿದರೂ ಕೂಡ ಅಪ್ಪ ನನ್ನ ನಂಬುವ ಸ್ಥಿತಿಯಲಿಲ್ಲ. ಮನಸ್ಸಲ್ಲಿ ಸಂಶಯ ತುಂಬಿಕೊಡಿರುವ ಮನುಷ್ಯನಲ್ಲಿ ಮಾತಾಡಿ ಏನು ಉಪಯೋಗ? ಒಂದ್ವೇಳೆ ಅಭಿಮನ್ಯುವನ್ನು ಭೇಟಿಯಾಗದೆ ಇದ್ರೂ ಕೂಡ ಅಪ್ಪ ಇದೇ ಪ್ರಶ್ನೆಯನ್ನ ಕೇಳ್ತಾ ಇಲಿಲ್ವ? ಇನ್ನು ಸತ್ಯ ಹೇಳಿ ಪ್ರಯೋಜನವಾದ್ರೂ ಏನು? ಸತ್ಯ ಹೇಳಿದ್ರೆ ನಷ್ಟವೇ ಹೊರತು ಲಾಭ ಅಂತು ಇಲ್ಲ. ಸತ್ಯ ಹೇಳಿದರೆ ಅಪ್ಪ ಪರಿಸ್ಥಿತಿಯ ಲಾಭ ಪಡ್ಕೊಳ್ಬೊಹುದು. ಅಂತಹ ಪರಿಸ್ಥಿತಿ ನಿರ್ಮಾಣವಾಗೋದಕ್ಕೆ ನಾನೇಕೆ ಅವಕಾಶ ಮಾಡಿಕೊಡ್ಬೇಕು? ಸತ್ತರೂ ಸರಿಯೇ ಸುಳ್ಳೇ ಹೇಳ್ತಿನಿ. ಸತ್ಯವನ್ನಂತೂ ಹೇಳೋದಿಲ್ಲ ಎಂದು ನಿರ್ಧರಿಸಿದಳು.

ಮಗಳು ಪ್ರಶ್ನೆಗೆ ಉತ್ತರ ನೀಡದೆ ಮೌನವಾಗಿರುವುದನ್ನು ಕಂಡು ಮತ್ತಷ್ಟು ಸಂಶಯಗೊಂಡ ರಾಜಶೇಖರ್ ಕೋಪ ನೆತ್ತಿಗೇರಿತು. ಮತ್ತಷ್ಟು ಏರು ಧ್ವನಿಯಲ್ಲಿ ಮಾತಾಡಲು ಪ್ರಾರಂಭಿಸಿದರು. ಯಾಕೆ ಹೀಗೆ ಬಂಡೆಕಲ್ಲು ತರ ನಿಂತಿದ್ದೀಯ? ಪ್ರಶ್ನೆಗೆ ಏನಾದ್ರು ಉತ್ತರ ಹೇಳಿ ಸಾಯಿ ಗದರಿಸಿದರು.

ನಿಮ್ಮ ಪ್ರಶ್ನೆಗೆ ಮನೆಗೆ ಕಾಲಿಡುವಾಗ್ಲೇ ಉತ್ತರ ಕೊಟ್ಟಾಗಿದೆ. ಅದನ್ನೇ ಎಷ್ಟೊಂದು ಸಲ ಹೇಳೋದು. ನನ್ಮೇಲೆ ಅಷ್ಟೊಂದು ಸಂಶಯ ಇದ್ರೆ ನಾಳೆ ಒಂದ್ಸಲ ಕಚೇರಿಗೆ ಹೋಗಿ ವಿಚಾರಿಸ್ಕೊಂಡು ಬನ್ನಿ. ‘ಅಕ್ಷರ ಬಂದಿದ್ದಳೋ ಅಥವಾ ಇಲ್ವೋ ಅಂತ. ಆಗ ನಿಮ್ಗೆ ಗೊತ್ತಾಗುತ್ತೆ ನಾನು ಹೇಳ್ತಾ ಇರೋದು ಸುಳ್ಳೋ ಅಥವಾ ಸತ್ಯವೋ ಅಂತ. ನನ್ನ ಪ್ರತಿಯೊಂದು ಹೆಜ್ಜೆಯನ್ನ ಸಂಶಯದಿಂದ ನೋಡ್ಬೇಡಿ.

ಆಕೆ ನೀಡಿದ ಉತ್ತರ ಕೇಳಿ ರಾಜಶೇಖರ್ ಒಂದು ಕ್ಷಣ ತಬ್ಬಿಗಾಗಿ ಹೋದರು. ಹೌದು, ಕಚೇರಿಗೆ ಹೋಗಿ ವಿಚಾರಿಸಿದರೆ ಎಲ್ಲಾ ಸತ್ಯಾಂಶ ಹೊರಗೆ ಬರುತ್ತದೆ. ನಾಳೆ ಹೋಗಿ ವಿಚಾರಿಸಿ ಬರುವುದೇ ಒಳ್ಳೆಯದ್ದು. ಮನದೊಳಗೆ ಸಂಶಯ ಇಟ್ಟುಕೊಂಡು ನೋವು ಅನುಭವಿಸುವುದಕ್ಕಿಂತ ಅದೇ ಒಳ್ಳೆಯದ್ದು ಅನ್ನಿಸಿತು. ಸ್ವಲ್ಪ ಹೊತ್ತು ಕುಳಿತು ಆಲೋಚಿಸಿದಾಗ ಅದು ಸರಿಯಾದ ಮಾರ್ಗ ಅಲ್ಲ ಅನ್ನಿಸಿತು. ಕಚೇರಿಗೆ ತೆರಳಿ ಎಲ್ಲಾ ಮಾಹಿತಿ ಪಡ್ಕೋಬಹುದು. ಅದು ದೊಡ್ಡ ವಿಷಯವಲ್ಲ. ಒಂದ್ವೇಳೆ ಮಗಳು ಕಚೇರಿಗೆ ಹೋಗಿ ಹಳೆಯ ಸಹೋದ್ಯೋಗಿಗಳನ್ನ ಭೇಟಿ ಮಾಡಿದ್ದು ನಿಜವಾಗಿದ್ದರೆ? ಕಚೇರಿಯಲ್ಲಿ ಆಕೆಯ ಸಹದ್ಯೋಗಿಗಳು ನನ್ನ ಬಗ್ಗೆ ಏನಂದುಕೊಳ್ಳೋದಿಲ್ಲ? ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮ ಮನೆಯಲ್ಲಿ ಎಲ್ಲವೂ ಸರಿಯಿಲ್ಲ ಅಂದು ಕೊಳ್ಳೋದು ನಿಶ್ಚಿತ. ಒಟ್ಟಿನಲ್ಲಿ ಮನೆಯ ವಿಷಯವನ್ನ ಬೀದಿಗೆ ತಂದು ನಿಲ್ಲಿಸಿದಂತಾಗುತ್ತದೆ ಎಂದು ತಿಳಿದು ಏನು ಮಾತನಾಡದೆ ಸುಮ್ಮನಾದರು.

ಮನೆಯಲ್ಲಿ ಪ್ರೇಮ ಕದನದ ಕಂಪನ ಆಗಿಂದಾಗೆ ಕೇಳಿಸತೊಡಗಿತು. ಅಕ್ಷರ ಮನೆಯಲ್ಲಿ ಪ್ರೀತಿಯ ವಿಚಾರ ತೆರೆದಿಟ್ಟ ಕ್ಷಣದಿಂದ ನೆಮ್ಮದಿ ಎಂಬುದು ಮಾಯವಾಯಿತು. ಪ್ರೀತಿ, ಸಂತೋಷದ ಜಾಗದಲ್ಲಿ ನೋವು, ಆಕ್ರೋಶ ಮನೆ ಮಾಡಿಕೊಂಡಿ ತು. ಅಪ್ಪ-ಮಗಳ ವಾಗ್ವಾದದ ನಡುವೆ ಸಿಲುಕಿ ಲೀಲಾವತಿ ನಲುಗಿ ಹೋದರು.

ಕಲಹಕ್ಕೆ ದೇವರು ಯಾವಾಗ ಮಂಗಳ ಹಾಡ್ತಾನೋ? ಮನಸ್ಸಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಎಲ್ಲಾ ವಿಚಾರದಲ್ಲೂ ಅಂತಿಮ ಹೊಣೆ ಹೊರಬೇಕಾಗಿರುವುದು ನಾನೆ. ಮಗಳು ಪ್ರೀತಿಸಿದವನೊಂದಿಗೆ ಓಡೋದ್ರೆ ಆ ಅಪವಾದವೂ ಕೂಡ ನನ್ಮೇಲೆ ಬರೋದರಲ್ಲಿ ಸಂಶಯವೇ ಇಲ್ಲ. ಮಗಳನ್ನು ಸರಿಯಾಗಿ ಬೆಳೆಸ್ಲಿಲ್ಲ, ಸರಿದಾರಿಯಲ್ಲಿ ಕೊಂಡೊಯ್ಯಲಿಲ್ಲ ಎಂಬ ಅಪವಾದಗಳ ನ್ನೆಲ್ಲ ನಾನೇ ಹೊತ್ತುಕೊಳ್ಬೇಕು. ಇಂತಹ ಮಾತುಗಳನ್ನ ಕೇಳಿಸಿಕೊಂಡು ಜೀವನ ನಡೆಸೋದಕ್ಕಿಂತ ಸಾಯೋದೇ ಮೇಲು ಅಂದುಕೊಂಡರು ಲೀಲಾವತಿ. ಪ್ರೀತಿ ಇಷ್ಟೊಂದು ಕಹಿಯಾಗಿರುತ್ತೆ ಅಂತ ಅಕ್ಷರ ಕನಸು ಮನಸ್ಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಆ ಕಹಿಯನ್ನೂ ಕೂಡ ಪ್ರೀತಿಯಿಂದ ಸೇವಿಸುವ ಅನಿವಾರ್ಯತೆ ನಿರ್ಮಾಣಗೊಂಡಿತು. ಅಭಿಮನ್ಯುವಿನೊಂದಿಗೆ ಕಳೆದ ಪ್ರತಿಯೊಂದು ಕ್ಷಣವೂ ಕೂಡ ಎಷ್ಟೊಂದು ಮಧುರವಾಗಿತ್ತು. ತಂಗಾಳಿ ಮೈ ಸೋಕಿದ ಹಾಗೆ. ಆದರೆ, ಇದೀಗ ಮನೆಯಲ್ಲಿ ತಂಗಾಳಿಯ ಬದಲು ಬಿರುಗಾಳಿ ಬೀಸಲು ಪ್ರಾರಂಭಿಸಿದೆ. ನನ್ನ ಜೀವನದಲ್ಲಿ ಬಿರುಗಾಳಿ ಬೀಸಿದರೂ ಪವಾಗಿಲ್ಲ. ಅಭಿಮನ್ಯುವಿಗೆ ಮಾತ್ರ ಮೋಸ ಮಾಡಬಾರದು, ಘಳಿಗೆಗೊಂದು ಯೋಚನೆ ಮಾಡುವಷ್ಟು ಬಲಹೀನಳಾಗಬಾರದು, ಎಲ್ಲಾ ಸಮಸ್ಯೆಗಳನ್ನೊಮ್ಮೆ ಮೆಟ್ಟಿನಿಲ್ಲಬೇಕು. ಅಭಿಮನ್ಯು ಅಪರೂಪದಲ್ಲಿ ಅಪರೂಪದ ಹುಡುಗ. ಅವನನ್ನ ದೂರ ಮಾಡಿದರೆ ಇನ್ನೆಂದಿಗೂ ಅವನಂತಹ ಒಳ್ಳೆಯ ಹುಡುಗ ನನ್ನ ಬಳಿ ಸುಳಿದಾಡಲು ಸಹ ದೇವರು ಅವಕಾಶ ನೀಡೋದಿಲ್ಲ. ಅವನಿಗೆ ಮೋಸ ಮಾಡಿದರೆ ಆ ದೇವರಿಗೆ ಮೋಸ ಮಾಡಿದಂತೆ. ಅಭಿಮನ್ಯು ನನ್ಮೇಲೆ ಅದೆಷ್ಟೊಂದು ಪ್ರೀತಿ ಇಟ್ಟಿಲ್ಲ? ಪ್ರತಿಯೊಂದು ಬಾರಿ ಕಣ್ಣರೆಪ್ಪೆ ಮಿಟುಕಿಸುವಾಗಲೂ ಕೂಡ ಅವನ ರೂಪ ಕಾಣುತ್ತದೆ. ಆದಷ್ಟು ಬೇಗ ಅಭಿಮನ್ಯುವನ್ನು ತನ್ನ ಸೊತ್ತಾಗಿಸಿಕೊಳ್ಳಬೇಕು ಎಂದು ನಿರ್ಧರಿಸಿದಳು.

ಬೆಳಗ್ಗೆ ಬೇಗ ಮೈಸೂರಿಗೆ ಹೊರಡುವುದಕ್ಕೆ ಅಕ್ಷರ ಬೆಡ್‌ರೂಂನಲ್ಲಿ ಸಿದ್ಧತೆಗಳನ್ನ ಕೈಗೊಳ್ಳುವುದರಲ್ಲಿ ತಲ್ಲೀನಳಾಗಿದ್ದಾಗ ಲೀಲಾವತಿಯ ಆಗಮನವಾಯಿತು. ಅಕ್ಷರ, ಬಾ ಊಟ ಮಾಡ್ಕೊಂಡು ಮಲ್ಕೊ. ಬೆಳಗ್ಗೆ ಬೇಗ ಎದ್ದು ಹೋಗ್ಬೇಕಲ್ಲ? ಅಪ್ಪ, ನಿನ್ಗೋಸ್ಕರ ಊಟ ಮಾಡದೆ ಕಾಯ್ತಾ ಇದ್ದಾರೆ; ಬಾ ಬೇಗ. ಎಲ್ಲರೂ ಒಟ್ಟಿಗೆ ಕೂತು ಊಟ ಮಾಡುವ ಅಂದರು.

ನನ್ಗೇನು ಬೇಡ ಅಮ್ಮ. ನನ್ಗೆ ಹೊಟ್ಟೆ ಹಸಿವು ಇಲ್ಲ. ಬರುವಾಗ ಹೋಟೆಲ್‌ನಲ್ಲಿ ತಿಂಡಿ ತಿನ್ಕೊಂಡು ಬಂದೆ. ಬೆಳಗ್ಗೆ ಏನಾದರು ತಿನ್ಕೊಂಡು ಹೊರಡ್ತಿನಿ. ನೀನೇನು ಬೇಸರ ಮಾಡ್ಕೋ ಬೇಡ. ಅಪ್ಪನ ಜೊತೆ ಊಟ ಮಾಡೋದಕ್ಕೆ ನನ್ಗೆ ಇಷ್ಟ ಇಲ್ಲ. ಅವರ ಜೊತೆ ಯಾಕಾದ್ರೂ ಊಟ ಮಾಡ್ಬೇಕು? ಊಟ ಮಾಡುವಾಗಲೂ ಕೂಡ ಮನಸ್ಸು ಹಾಳು ಮಾಡದೆ ಬಿಡೋದಿಲ್ಲ. ಮನೆಗೆ ಬಂದು ಎರಡು ದಿನ ಆಯ್ತು. ಒಂದು ಪ್ರೀತಿ ಮಾತು ಕೂಡ ಆಡ್ಲಿಲ್ಲ. ಈ ಹಾಳಾದ ಮನೆಗೆ ಯಾಕಾದ್ರೂ ಬಬೇಕು? ಇನ್ನೇನಿದ್ದರೂ ನಿನ್ನ ನೋಡ್ಬೇಕೂಂತ ಅನ್ನಿಸಿದಾಗ ಮಾತ್ರ ಮನೆಗೆ ಕಾಲಿಡ್ತೇನೆ. ನನ್ಗೆ ಈ ಮನೆಯ ಸಹವಾಸವೇ ಸಾಕು ಅನ್ನಿಸ್ತಾ ಇದೆ ಎಂದು ಹೇಳಿ ಮನದೊಳಗಿನಿಂದ ಉಕ್ಕಿಬಂದ ದುಃಖ ಕಣ್ಣೀರ ಧಾರೆಯಾಗಿ ಹರಿಯ ತೊಡಗಿತು. ಅಮ್ಮನನ್ನು ತಬ್ಬಿಕೊಂಡು ಬಿಕ್ಕಳಿಸಿ ಅತ್ತುಬಿಟ್ಟಳು.

ಯಾಕೆ ಸುಮ್ನೆ ಏನೇನೋ ಕಲ್ಪನೆ ಮಾಡ್ಕೊಂಡು ಅಳ್ತಾ ಇದ್ದಿಯ? ಹೀಗೇನು ನಡೆಯಬಾರದ್ದು ನಡೆದಿದೇ ಅಂತ ಅಳ್ತಾ ಇದ್ದೀಯ? ಎಷ್ಟೇ ಆದ್ರೂ ಅವರು ನಿನ್ನ ಅಪ್ಪ ಅಲ್ವ? ಅಪ್ಪ ಬೈಯದೆ ನಿನ್ಗೆ ಇನ್ಯಾರು ಬೈಯೋದಕ್ಕೆ ಸಾಧ್ಯ ಹೇಳು? ಅಪ್ಪ ನಿನ್ನ ತುಂಬಾ ಮುದ್ದಾಗಿ ಬೆಳೆಸಿಬಿಟ್ರು ನೋಡು; ಅದ್ಕೆ ನಿನ್ಗೆ ಹೀಗೆಲ್ಲ ಅನ್ನಿಸ್ತಾ ಇದೆ. ಎಲ್ಲಾ ವಿಚಾರ ತಲೆಗೆ ಹಾಕ್ಕೊಳ್ಬೇಡ. ಬಾ, ಕೈ ತೊಳ್ಕೊಂಡು ಊಟ ಮಾಡು ಎಂದು ಮಗಳನ್ನು ಕೈ ಹಿಡಿದು ಕರೆದೊಯ್ದರು.

ಡೈನಿಂಗ್‌ಹಾಲ್‌ನಲ್ಲಿ ಕೆಲವು ನಿಮಿಷಗಳ ಕಾಲ ರಾಜಶೇಖರ್ ಮಗಳ ಮುಖವನ್ನೇ ನೋಡುತ್ತಾ ಕುಳಿತರು. ಸಿಟ್ಟು ಸಂಪೂರ್ಣ ಇಳಿದು ನೋವು ಮನೆಮಾಡಿಕೊಂಡಿತು. ಮಾತಾಡುವ ಉತ್ಸಾಹ ಉಳಿದಿರಲಿಲ್ಲ. ಏನೋ ಕಳೆದುಕೊಳ್ಳುತ್ತಿದ್ದೇನೆ ಎಂದು ಆಗಿಂದಾಗೆ ಅನ್ನಿಸತೊಡಗಿತು. ಎಂತಾ ಮುಗ್ದ ಹುಡುಗಿ ಇಂತಹ ಒಂದು ಕಠಿಣ ಹಾದಿ ತುಳಿದು ಬಿಟ್ಟಳಲ್ಲ? ಪಾಪ, ಆಕೆಯ ತಪ್ಪಾದರೂ ಏನು? ವಯಸ್ಸಿಗೆ ಬಂದ ಹುಡುಗಿಯರ ತಲೆಯೊಳಗೆ ಮೊದ್ಲು ಲಗ್ಗೆ ಇಡುವುದೇ ಈ ಹಾಳಾದ ಪ್ರೀತಿ. ಪ್ರೀತಿಸದೆ ಇದ್ರೆ ಜೀವನವೇ ವ್ಯರ್ಥ ಅಂದುಕೊಳ್ಳುವ ಹುಚ್ಚು ವಯಸ್ಸು ಅದು. ಎಲ್ಲರಂತೆ ಆಕೆಯ ಹೃದಯದಲ್ಲಿಯೂ ಪ್ರೀತಿ ಚಿಗುರೊಡೆದಿದೆ. ಚಿಗುರೊಡೆದ ಪ್ರಿತಿ ನಿಷ್ಕಲ್ಮಷದ್ದೇ ಆಗಿರಬಹುದು. ಆದರೆ, ಮಗಳು ಹುಡುಗನ ಆಯ್ಕೆಯಲ್ಲಿ ನಿಜವಾದ ಸೋಲನ್ನ ಅನುಭವಿಸಿದ್ದಾಳೆ. ಆ ಸೋಲಿನ ಅರಿವು ಅವಳಿಗೆ ಬರುವುದಾದರೂ ಯಾವಾಗ? ನಮ್ಮ ಸ್ಥಾನಮಾನಕ್ಕೆ ನಿಲ್ಲುವ ತಾಕತ್ತಿರುವ ಹುಡುಗನನ್ನ ಪ್ರೀತಿಸಿದ್ದರೆ ಅಥವಾ ಅಭಿಮನ್ಯುವಿನಲ್ಲಿ ಅಂತಹ ಅರ್ಹತೆ ಇದ್ದಿದ್ದರೆ ನಾನೇ ಮುಂದೆ ನಿಂತು ಮದ್ವೆ ಮಾಡಿಸಿ ಬಿಡ್ತಾ ಇದ್ದೆ. ನಮ್ಮ ಮನೆಯ ಹೊಸ್ತಿಲು ತುಳಿಯಲು ಕೂಡ ಯೋಗ್ಯತೆ ಇಲ್ಲದವನಿಗೆ ಮಗಳನ್ನ ಕೊಟ್ಟು ಮದ್ವೆ ಮಾಡೋದಾದ್ರೂ ಹೇಗೆ? ಈ ವಿಚಾರ ಮಗಳಿಗೆ ಎಷ್ಟು ಹೇಳಿದ್ರೂ ತಲೆಗೆ ಹೋಗ್ತಾ ಇಲ್ವಲ್ಲ ಮಗಳ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸಿ ಮನದೊಳಗೆ ತುಂಬಾ ಮರುಕಪಟ್ಟರು.

ಲೀಲಾವತಿ ಇಬ್ಬರಿಗೂ ಊಟ ಬಡಿಸಿದರು. ರಾಜಶೇಖರ್ ಮಗಳೊಂದಿಗೆ ಒಂದೇ ಒಂದು ಮಾತುಕೂಡ ಆಡದೆ ದುಃಖದಲ್ಲಿ ಊಟ ಮಾಡಲು ಪ್ರಾರಂಭಿಸಿದರು. ಅಪ್ಪನ ಮೊಗದಲ್ಲಿ ಮಡುಗಟ್ಟಿರುವ ದುಃಖ ಕಂಡು ಅಕ್ಷರಳಿಗೆ ಸಹಿಸಿಕೊಳ್ಳೋದಕ್ಕೆ ಸಾಧ್ಯವಾಗಲಿಲ್ಲ. ಊಟ ಮಾಡುವುದನ್ನು ನಿಲ್ಲಿಸಿ ಅಪ್ಪ, ತಪ್ಪಾಗಿದ್ರೆ ಕ್ಷಮಿಸಿ ಬಿಡಿ. ನೀವು ಈ ರೀತಿ ಮೌನವಾಗಿರುವುದು ನನ್ನಿಂದ ನೋಡೋದಕ್ಕೆ ಸಾಧ್ಯ ಇಲ್ಲ. ಜೀವನದಲ್ಲಿ ಎಂದಿಗೂ ಕೂಡ ನಿಮ್ಗೆ ದುಃಖವಾಗುವ ತರ ನಡ್ಕೊಂಡಿಲಿಲ್ಲ. ಆದ್ರೆ ಅಭಿಮನ್ಯುವನ್ನು ಪ್ರೀತಿಸಿ ನಿಮ್ಗೆ ನೋವು ಮಾಡಿಬಿಟ್ಟೆ. ಅದು ನಿಮ್ಮ ಪಾಲಿಗೆ ಮರೆಯಲಾಗದ ದುಃಖ. ಆ ದುಃಖ ನಿಮ್ಮ ಮನದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಅಂತ ನನ್ಗೆ ಗೊತ್ತು. ಆದ್ರೆ ನಾನೇನು ಮಾಡ್ಲಿ…? ಏನು ಮಾಡಲಾಗದ ಅಸಹಾಯಕತೆಯಲ್ಲಿ ತೊಳಲಾಡ್ತಾ ಇದ್ದೇನೆ. ಒಂದು ಕಡೆ ನಿಮ್ಮನ್ನ ಸಂತೃಪ್ತಿ ಪಡಿಸ್ಬೇಕು. ಮತ್ತೊಂದು ಕಡೆ ಅಭಿಮನ್ಯುವಿಗೆ ಮೋಸ ಆಗದ ಹಾಗೆ ನೋಡ್ಕೋ ಬೇಕು. ಇಲ್ಲಿ ಒಂದನ್ನ ಪಡ್ಕೋಬೇಕಾದ್ರೆ ಮತ್ತೊಂದನ್ನ ಕಳೆದುಕೊಳ್ಳಲೇ ಬೇಕು. ಯಾವುದನ್ನ ಪಡೆದುಕೊಳ್ಳಲಿ? ಯಾವುದನ್ನ ಕಳೆದುಕೊಳ್ಳಲಿ? ಎರಡು ಕಣ್ಣುಗಳಲ್ಲಿ ಯಾವ ಕಣ್ಣು ಶ್ರೇಷ್ಠ? ಎಂಬ ಪ್ರಶ್ನೆ ಎದುರಾದರೆ ಏನೂಂತ ಉತ್ತರ ಕೊಡೋದಕ್ಕೆ ಸಾಧ್ಯ? ಎರಡು ಕಣ್ಣುಗಳಲ್ಲಿ ಒಂದು ಕಣ್ಣನ್ನು ಮಾತ್ರ ಆಯ್ಕೆ ಮಾಡಿಕೊಳ್ಳೋ ದಕ್ಕೆ ಸಾಧ್ಯ ಇಲ್ಲ. ಅವರೆಡೂ ಕೂಡ ಶ್ರೇಷ್ಠವೇ. ಅದರಲ್ಲಿ ಒಂದು ಕಣ್ಣನ್ನೂ ಸಹ ಕಳೆದುಕೊಳ್ಳಲು ನನ್ಗೆ ಇಷ್ಟ ಇಲ್ಲ. ಇದಕ್ಕೆಲ್ಲ ನೀವೆ ಉತ್ತರ ನೀಡ್ಬೇಕು ಅಪ್ಪ. ದುಃಖಿತಳಾದ ಅಕ್ಷರಳ ಕಣ್ಗಳಿಂದ ಕಣ್ಣೀರ ಹನಿ ತೊಟ್ಟಿಕ್ಕಲು ಪ್ರಾರಂಭಿಸಿತು.

ಮಗಳ ಮನಸ್ಸು ಸಂಪೂರ್ಣವಾಗಿ ಬದಲಾಗಿಲ್ಲ, ಈಗಷ್ಟೇ ಅವಳು ಆಡಿದ ಮಾತುಗಳೇ ಅದಕ್ಕೆ ಸಾಕ್ಷಿ. ಅಪ್ಪ, ಅಮ್ಮನ ಮೇಲೆ ಅವಳು ಇಟ್ಟಿರೋ ಪ್ರೀತಿ ಕಡಿಮೆಯಾಗಿಲ್ಲ ಎಂಬುದು ಅವಳ ಮಾತು ಕೇಳಿದ್ರೆ ಗೊತ್ತಾಗುತ್ತೆ. ಒಂದಷ್ಟು ಬುದ್ಧಿಮಾತು ಹೇಳಿದ್ರೆ ಸರಿದಾರಿಗೆ ಬತಾಳೆ ಎಂಬ ಆಶಾಭಾವನೆ ರಾಜಶೇಖರ್ ಅವರಲ್ಲಿ ಜಾಗೃತವಾಯಿತು. ಜೀವನದಲ್ಲಿ ನಿರಾಶವಾದಿ ಯಾಗಬಾರದು. ಅದರಿಂದ ಯಾವುದೇ ಪ್ರಯೋಜನವಿಲ್ಲ. ಬದುಕಿನುದ್ದಕ್ಕೂ ಆಶಾವಾದಿಯಾಗಿ ಬದುಕಬೇಕೆಂದು ನಿರ್ಧರಿಸಿದರು.

ಆ ಒಂದು ಆಶಾವಾದವೇ ಅವರನ್ನು ಮತ್ತೆ ಮತ್ತೆ ಮಗಳ ಮನಪರಿವರ್ತಿಸುವ ಕಾಯಕಕ್ಕೆ ಕೈ ಹಾಕುವಂತೆ ಪ್ರೇರೇಪಿಸುತಿತ್ತು. ಊಟ ಮುಗಿಸಿಕೊಂಡ ರಾಜಶೇಖರ್ ಜೇಬಿನೊಳಗೆ ತಡಕಾಡಿ ಸಿಗರೇಟ್ ಹೊರ ತೆಗೆದು ಹಚ್ಚಿಕೊಂಡರು. ತುಂಬಾ ಹಿತ ಅನ್ನಿಸಿತು. ರಾಜಶೇಖರ್ ಮನೆಯೊಳಗೆ ಸಿಗರೇಟ್ ಸೇದಿದ್ದು ಇದೇ ಮೊದಲ ಬಾರಿ. ಕಾಫಿ ಎಸ್ಟೇಟ್‌ಗೆ ಕಾಲಿಟ್ಟಾಗಲೆಲ್ಲ ಸಿಗರೇಟ್ ಜೊತೆಗಿರಲೇ ಬೇಕು. ಆ ಚಟವನ್ನು ಮನೆಯೊಳಗೆ ಇಟ್ಟುಕೊಂಡಿರಲಿಲ್ಲ. ಸಿಗರೇಟ್ ಸೇದುವುದು ಅವರ ಏಕೈಕ ಚಟ. ಆ ಚಟವೊಂದನ್ನು ಹೊರತು ಪಡಿಸಿ ಉಳಿದ ಯಾವುದೇ ಚಟಗಳಿಗೆ ದಾಸನಾದ ವ್ಯಕ್ತಿಯಲ್ಲ. ಸಿಗರೇಟ್ ಚಟ ಮನೆಯಂಗಳದಿಂದ ಹೊರಗೆ ಮಾತ್ರ ಇತ್ತು. ಆದರೆ, ಮಗಳ ವಿಷಯದಲ್ಲಿ ದುಃಖಿತರಾಗಿ ಮನೆಯೊಳಗೆ ಸಿಗರೇಟ್ ಹಚ್ಚಿಕೊಂಡಾಗ ಸಿಗರೇಟ್ ತನ್ನ ನೋವಿಗೆ ನೆಮ್ಮದಿ ನೀಡುತ್ತಿದೆ, ಸಾಂತ್ವನ ಹೇಳುತ್ತಿದೆ ಅನ್ನಿಸಿ ಸಿಗರೇಟ್ ಸೇದುತ್ತಾ ಮಗಳೊಂದಿಗೆ ಮಾತು ಶುರು ಹಚ್ಚಿಕೊಂಡರು.

ನೋಡು ಅಕ್ಷರ, ಮನುಷ್ಯುನ ಬದುಕಿನುದ್ದಕ್ಕೂ ನೂರಾರು ಅನಿವಾರ್ಯತೆಗಳು ಎದುರಾಗುತ್ತವೆ. ಅವುಗಳನ್ನೆಲ್ಲ ನಿಭಾಯಿಸಿಕೊಂಡು ಹೋಗುವ ದಿಟ್ಟತನ ತೋಬೇಕು. ಯಾವುದೋ ಅನಿರ್ವಾಯತೆಗೆ ಕಟ್ಟು ಬಿದ್ದು ಸುಂದರ ಬದುಕಿಗೆ ಕೊಳ್ಳಿ ಇಡುವಂತಹ ಪ್ರಯತ್ನ ಯಾಕೆ ಮಾಡ್ಬೇಕು ಹೇಳು? ನೀನು ಅಭಿಮನ್ಯುವನ್ನು ಪ್ರಾಮಾಣಿಕವಾಗಿ ಪ್ರೀತಿ ಮಾಡ್ತಾ ಇರೋದು ನಿಜ, ಆ ಪ್ರೀತಿ ನಿನ್ನನ್ನು ಅಭಿಮನ್ಯುವಿನೊಂದಿಗೆ ವಿವಾಹವಾಗುವ ಅನಿವಾರ್ಯತೆಗೆ ಸಿಲುಕಿಸಿರುವುದೂ ನಿಜ. ಅವನೊಂದಿಗೆ ಮದ್ವೆ ಮಾಡ್ಕೊಂಡು ನಾಲ್ಕೈದು ವರ್ಷ ಕಳೆದ ನಂತರ ನಿನ್ಗೆ ಎಲ್ಲಾ ವಿಷಯ ಅರ್ಥವಾಗುತ್ತೆ. ಅಪ್ಪ, ಅಮ್ಮ ಯಾಕಾಗಿ ನಮ್ಮ ವಿವಾಹಕ್ಕೆ ವಿರೋಧ ಮಾಡಿದರೆಂಬ ಸತ್ಯಾಂಶ ಆಗ ನಿನ್ಗೆ ಮನವರಿಕೆಯಾಗುತ್ತೆ. ಅಲ್ಲಿ ತನ್ಕ ನಿನ್ಗೆ ಏನೇ ಹೇಳಿದ್ರೂ ಅದು ವ್ಯರ್ಥ. ಆದ್ರೂ ಕೂಡ ಅಪ್ಪನ ಸ್ಥಾನದಲ್ಲಿ ನಿಂತ್ಕೊಂಡು ನಿನ್ಗೊಂದು ಉತ್ತಮ ಹಾದಿ ತೋರಿಸಿಕೊಡ್ಬೇಕಾಗಿ ರೋದು ನನ್ನ ಪಾಲಿನ ಕರ್ತವ್ಯ ಅಂತ ತಿಳ್ಕೊಂಡಿದ್ದೇನೆ. ಈ ಪ್ರೀತಿ ಅನ್ನೋದು ಇದೆಯಲ್ಲ. ಅದು ಎಲ್ಲಾ ಕಾಲದಲ್ಲಿಯೂ ಒಂದೇ ತರ ಇರೋದಿಲ್ಲ. ಕಾಲ ಬದಲಾದಂತೆ ಪ್ರೀತಿಯ ಸ್ವರೂಪ ಕೂಡ ಬದಲಾಗುತ್ತಾ ಹೋಗುತ್ತೆ. ಇಂದು ನೋಡಿ ಮೆಚ್ಚಿದ ಹುಡುಗ ಬೆಳಗಾಗುವಷ್ಟರೊಳಗೆ ನಾಲಾಯಕ್ ಅನ್ನಿಸೋದಕ್ಕೆ ಶುರುವಾಗುತ್ತೆ. ಇಷ್ಟು ವರ್ಷ ಯಾವುದೇ ಕಷ್ಟ ಕೊಡದೆ ಮುದ್ದಾಗಿ ಸಾಕಿ ಬೆಳೆಸಿದ ಅಪ್ಪ, ಅಮ್ಮನ ಬಗ್ಗೆ ನಿನ್ಗೆ ನಿನ್ನೆ ಇದ್ದ ಭಾವನೆ ಇಂದು ಬದಲಾಗಿ ಹೋಗಿದೆ. ಪ್ರೀತಿ ಕೂಡ ಹಾಗೆ. ಇಂದು ನಮ್ಮ ಮಾತು ಧಿಕ್ಕರಿಸಿ ಅಭಿಮನ್ಯುವನ್ನ ಮದ್ವೆಯಾಗಿ ಬಿಡ್ಬೊಹುದು. ಅದು ದೊಡ್ಡ ಸಾಧನೆಯಲ್ಲ, ದೊಡ್ಡ ವಿಶೇಷವಲ್ಲ. ಆದ್ರೆ ನಾಳೆ ಎದುರಾಗುವ ಸಮಸ್ಯೆಗಳನ್ನ ಮೆಟ್ಟಿ ನಿಲ್ಲುವ ತಾಕತ್ತು ಅಭಿಮನ್ಯುವಿಗೆಲ್ಲಿದೆ? ಎಂಬುದೇ ಅತ್ಯಂತ ಮುಖ್ಯವಾದ ಪ್ರಶ್ನೆ. ಅವನೇ ಸಂಕಷ್ಟದ ಜೀವನ ನಡೆಸ್ತಾ ಇದ್ದಾನೆ. ನೆಚ್ಚಿಕೊಂಡಿರುವ ವ್ಯಾಪಾರ ಕೈ ಜಾರಿಹೋದ್ರೆ ಅವನ ಬದುಕಿನಲ್ಲಿ ಇನ್ನೇನಿದೆ? ನೀನ್ಗೆ ಅಂತಹ ಒಂದು ಬದುಕಿನೊಂದಿಗೆ ಹೊಂದಿಕೊಂಡು ಬದುಕೋದಕ್ಕೆ ಸಾಧ್ಯವಿದೆಯಾ? ಸಮಸ್ಯೆಗಳು ಒಂದಾದ ಮೇಲೊಂದರಂತೆ ಎರಗಿ ಬಂದಾಗ ಪ್ರೀತಿ ಮೆಲ್ಲನೆ ಬರಿದಾಗೋದಕ್ಕೆ ಪ್ರಾರಂಭವಾಗುತ್ತೆ. ಆ ಸಂದರ್ಭ ನಿನ್ಗೆ ನಮ್ಮ ನೆನಪಾಗುತ್ತೆ. ನಮ್ಮ ಮಾತಿನ ಮೌಲ್ಯ ಅರ್ಥವಾಗುತ್ತೆ. ಆದ್ರೆ ಆಗ ಕಾಲ ಮಿಂಚಿ ಹೋಗಿರುತ್ತೆ ಅಕ್ಷರ. ಆ ಸಂದರ್ಭ ಆಲೋಚನೆ ಮಾಡಿ ಏನು ಪ್ರಯೋಜನವಿಲ್ಲ. ಆದ್ರೆ ಇಂದು ಸೂಕ್ತ ನಿರ್ಧಾರ ಕೈಗೊಳೋದಕ್ಕೆ ಸಾಕಷ್ಟು ಕಾಲಾವಕಾಶ ಇದೆ. ನಾಳಿನ ಸುಂದರ ಬದುಕಿಗೆ ಒಳ್ಳೆಯ ತೀರ್ಮಾನ ತೆಗೆದುಕೋ ಅಂದ ರಾಜಶೇಖರ್ ತಮ್ಮ ಮಾತು ಮುಗಿಸಿ ಕೊನೆಯ ದಮ್ ಸೇದಿ ಸಿಗರೇಟಿನ ಬೆಂಕಿಯನ್ನು ತುಳಿದು ಕೆಡಿಸಿ ಮಗಳ ಉತ್ತರಕ್ಕೂ ಕಾಯದೆ ಸರಸರನೆ ಎದ್ದು ಬೆಡ್‌ರೂಂ ಕಡೆಗೆ ನಡೆದರು.

ಅಕ್ಷರ ಬೆಳಗ್ಗೆ ಬೇಗನೆ ಎದ್ದು ಶುಚಿಯಾಗಿ ಮೈಸೂರಿಗೆ ಹೊರಡಲು ಸಿದ್ಧವಾದಳು. ಲೀಲಾವತಿ ತರಾತುರಿಯಲ್ಲಿ ತಿಂಡಿ ತಯಾರಿಸಿ ಮಗಳಿಗೆ ಉಣ ಬಡಿಸಿದರು. ಮನೆಯಿಂದ ಕಾಲ್ತೆಗೆಯುವುದಕ್ಕಿಂತ ಮುಂಚೆ ಆಕೆಯ ಹಣೆಗೆ ಕುಂಕುಮದ ತಿಲಕವಿಟ್ಟು, ಹಣೆಗೊಂದು ಸಿಹಿಮುತ್ತು ನೀಡಿ ಕಳುಹಿಸಲು ಲೀಲಾವತಿ ಮರೆಯಲಿಲ್ಲ. ರಾಜಶೇಖರ್ ಮಗಳನ್ನು ಬಸ್ ನಿಲ್ದಾಣದವರೆಗೆ ಕರೆದೊಯ್ದು ಬಸ್ ಹತ್ತಿಸಿ ಬಂದರು.
* * *
ರಾಜಶೇಖರ್ ಮನೆಯಂಗಳದಲ್ಲಿ ಬೆತ್ತದ ಕುರ್ಚಿಯಲ್ಲಿ ಕುಳಿತು ಕಾಫಿ ಹೀರುತ್ತಾ ಬೆಳಗ್ಗಿನ ಆಹ್ಲಾದಕರ ವಾತಾವರಣದ ಸವಿಯನ್ನು ಸವಿಯುತ್ತಿದ್ದರು. ದೂರದಲ್ಲಿರುವ ಮನೆಯ ಗೇಟ್ ತೆರೆದುಕೊಂಡ ಸದ್ದು ಕೇಳಿಸಿದಂತಾಯಿತು. ಯಾವುದೋ ಕಾರು ಮನೆಯ ಕಡೆ ಬರುತ್ತಿರುವ ಸದ್ದು ಕಿವಿಗೆ ಹತ್ತಿರವಾಗತೊಡಗಿತು. ದಾರಿಯ ಕಡಗೆ ಸ್ವಲ್ಪ ತಲೆ‌ಎತ್ತಿ ನೋಡುತ್ತಿದ್ದಂತೆ ಬಾಲ್ಯದ ಗೆಳೆಯ ನಂದಕುಮಾರ್ ಮನೆಯಂಗಳದಲ್ಲಿ ಕಾರು ತಂದು ನಿಲ್ಲಿಸಿ ಕೆಳಗಿಳಿದ. ನಂದಕುಮಾರ್ ಜೊತೆಗೆ ಅವರ ಧರ್ಮಪತ್ನಿ ಭಾಗ್ಯವತಿ, ಪುತ್ರ ನಿಖಿಲ್ ಕೂಡ ಆಗಮಿಸಿದರು. ನಿಖಿಲ್ ಕಾರಿನಿಂದ ಇಳಿದು ಬಂದವನೇ ನೇರವಾಗಿ ರಾಜಶೇಖರ್ ಅವರ ಪಾದಮುಟ್ಟಿ ನಮಸ್ಕರಿಸಿ ಆಶೀರ್ವದಿಸುವಂತೆ ಕೋರಿಕೊಂಡ.

ಮನೆಯ ಹೊರಗಡೆ ಕೇಳಿದ ಕಾರಿನ ಶಬ್ದದಿಂದ ಮನೆಗೆ ಯಾರೋ ಅತಿಥಿಗಳು ಬಂದಿದ್ದಾರೆಂದು ತಿಳಿದು ತರಾತುರಿಯಲ್ಲಿ ಹೊಸ ಸೀರೆ ಉಟ್ಟುಕೊಂಡು ಹೊರಬಂದ ಲೀಲಾವತಿ ನಂದಕುಮಾರ್ ಕುಟುಂಬವನ್ನು ಕಂಡು ಕಸಿವಿಸಿಗೊಂಡರು. ನಂದಕುಮಾರ್ ಮನೆಗೆ ಬಂದದ್ದೇನೋ ಸರಿ. ಆದರೆ ಮಗಳ ವಿವಾಹದ ವಿಚಾರವೇನಾದರು ಎತ್ತಿದರೆ ಏನೂಂತ ಉತ್ತರ ಕೊಡೋದು? ಅಕ್ಷರ ಇನ್ನೂ ಅಭಿಮನ್ಯುವನ್ನು ಮನಸ್ಸಿನಿಂದ ಕಿತ್ತೊಗೆದಿಲ್ಲ. ಈಗಲೇ ಮದುವೆ ಮಾತುಕತೆ ಮುಗಿಸಿದರೆ ಮಗಳು ಖಂಡಿತ ಮದುವೆಗೆ ಒಪ್ಪಿಕೊಳ್ಳೋದಿಲ್ಲ. ಹಾಗೊಂದ್ವೇಳೆ ಏನಾದರು ಆದರೆ ಮನೆಯ ಗೌರವ ಹರಾಜಾಗುವುದರಲ್ಲಿ ಸಂಶಯವಿಲ್ಲ ಅಂದುಕೊಂಡ ಲೀಲಾವತಿಯ ಹಣೆಯಲ್ಲಿ ಆತಂಕದಿಂದ ಬೆವರ ಹನಿಗಳು ಮೂಡಿತು. ಮುಖವನ್ನು ಸೆರಗಿನಿಂದ ಒರೆಸಿಕೊಂಡು ಮನೆಗೆ ಬಂದ ಅತಿಥಿಗಳನ್ನು ಪ್ರೀತಿ ಪೂರ್ವಕವಾಗಿ ಮನೆಯೊಳಗೆ ಬರ ಮಾಡಿಕೊಂಡರು.

ರಾಜಶೇಖರ್-ನಂದಕುಮಾರ್ ಬಾಲ್ಯ ಸ್ನೇಹಿತರು. ಅಂದಿನಿಂದ ಇಂದಿನವರೆಗೂ ಸಂಬಂಧ ಎಲ್ಲೂ ಹಳಸಿ ಹೋಗಿಲ್ಲ. ಹೋಗಲು ಅವಕಾಶ ಕೂಡ ನೀಡಿದವರಲ್ಲ. ಮಕ್ಕಳಿಬ್ಬರ ವಿವಾಹ ಮಾಡಿಸಿ ಸಂಬಂಧವನ್ನು ಮತ್ತಷ್ಟು ಹತ್ತಿರ ತರೋದಕ್ಕೆ ನಿರ್ಧರಿಸಿದ್ದಾರೆ. ಆದರೆ, ಮಗಳು ಪ್ರೀತಿಯ ಹಾದಿ ತುಳಿದಿರುವ ವಿಚಾರ ತಿಳಿದು ರಾಜಶೇಖರ್-ಲೀಲಾವತಿ ದಂಪತಿ ಚಿಂತೆಗೆ ಒಳಗಾದರು. ಈ ವಿಚಾರ ನಂದಕುಮಾರ್‌ಗೆ ತಿಳಿಸುವುದಾದರೂ ಹೇಗೆ? ಎಂದು ಚಿಂತೆಗೆ ಬಿದ್ದರು.

ಅಂತೂ ಸಾಕಷ್ಟು ವರ್ಷಗಳ ನಂತರ ಈ ನಿನ್ನ ಗೆಳೆಯನ ನೆನಪಾದಂಗಾಯ್ತು. ನಮ್ಮನ್ನಂತೂ ಮರೆತೇ ಬಿಟ್ಟಿದ್ದೀಯ ಅಂದುಕೊಂಡಿದ್ದೆ ಎಂದು ರಾಜಶೇಖರ್ ಮನೆಗೆ ಬಂದವರೊಂದಿಗೆ ಮಾತಾಡಬೇಕಲ್ಲವೆಂದು ಒಂದೆರಡು ಮಾತು ಆಡಿ ಮುಗಿಸಿದರು. ರಾಜಶೇಖರ್‌ಗೆ ನಂದಕುಮಾರ್ ಎದುರು ಮಾತಾಡುವ ಉತ್ಸಾಹ ಹುದುಗಿ ಹೋಯಿತು. ಅಕ್ಷರ ಅಂತಹ ಒಂದು ಪರಿಸ್ಥಿತಿ ನಿರ್ಮಾಣ ಮಾಡಿ ಹೊರಟು ಹೋಗಿದ್ದಾಳೆ. ಹೀಗಾಗಿ ಏನು ಮಾತಾಡಬೇಕೆಂದೇ ತೋಚದಾಯಿತು.

ಯಾಕೋ ರಾಜು ಹಿಂಗತೀಯ!? ನಿನ್ನ ಮರೆಯೋದಕ್ಕೆ ಸಾಧ್ಯನಾ ಹೇಳು? ಇರೋ ಒಬ್ಬ ಮಗ ಅಮೆರಿಕ ಅಂತ ಹೋಗಿ ಕೂತ್ಕೊಂಡಿದ್ದಾನೆ. ಹೀಗಾಗಿ ಕಾಫಿ ಎಸ್ಟೇಟ್‌ನ ಜವಾಬ್ದಾರಿ ಎಲ್ಲ ನನ್ನ ತಲೆಮೇಲೆ ಬಿದ್ದಿದೆ. ಇನ್ನು ನಿನ್ನ ನೋಡ್ಲಿಕ್ಕೆ ಸಮಯವಾದ್ರೂ ಎಲ್ಲಿಂದ ಹೇಳು? ನಿಖಿಲ್ ಕಳೆದವಾರ ಅಮೆರಿಕದಿಂದ ಬಂದ. ಅವನೊಂದಿಗೆ ಬಿಡುವ ಮಾಡ್ಕೊಂಡು ನಿನ್ನ ಮನೆಯ ಕಡೆ ಪಯಣ ಬೆಳೆಸಿದ್ವಿ. ಅಂದಹಾಗೆ ನಾನು ಹೇಳಿದ ವಿಚಾರ ಏನಾಯ್ತು? ಯಾವುದೇ ಉತ್ತರ ನಿನ್ನ ಕಡೆಯಿಂದ ಬಲಿಲ್ಲ. ಎಲ್ಲಿ ಅಕ್ಷರ ಕಾಣ್ತಾ ಇಲ್ಲ. ಅವಳನ್ನ ನೋಡೋದಕೋಸ್ಕರನೇ ನಿಖಿಲ್ ಅಮೆರಿಕದಿಂದ ಬಂದಿದ್ದಾನೆ ನಂದಕುಮಾರ್ ವಿವಾಹದ ವಿಚಾರವನ್ನು ಮೆಲ್ಲನೆ ತೆರೆದಿಟ್ಟರು.

ಒಮ್ಮೆ ದೀರ್ಘವಾಗಿ ಉಸಿರೆಳೆದುಕೊಂಡ ರಾಜಶೇಖರ್ ಕಳೆಗುಂದಿದ ಮುಖದೊಂದಿಗೆ ನೀನು ಹೇಳಿದ ಯಾವುದೇ ವಿಚಾರ ಮರೆತ್ತಿಲ್ಲ ನಂದ. ಮಗಳು ಎರಡು ದಿನ ರಜೆಯಲ್ಲಿ ಮನೆಗೆ ಬಂದು ಈಗ ತಾನೇ ಹೋದ್ಲು. ಒಂದು ದಿನ ಮುಂಚಿತವಾಗಿ ಬಂದಿದ್ರೆ ಅವಳನ್ನ ನೋಡ್ಕೊಂಡು ಹೋಗ್ಬೊಹುದಿತ್ತು. ಅವಳೊಂದಿಗೆ ಮದುವೆ ವಿಚಾರ ಪ್ರಸ್ತಾಪ ಮಾಡಿದಾಗ ಮದ್ವೆ ಬೇಡಂತ ಹಟ ಹಿಡ್ಕೊಂಡು ಕೂತಿದ್ದಾಳೆ. ಒಂದೆರಡು ವರ್ಷ ಮದ್ವೆನೇ ಬೇಡ ಅಂತ ಹಟ ಮಾಡ್ತಾ ಇದ್ದಾಳೆ. ಅವಳಿಗೆ ಈಗ್ಲೇ ಮದ್ವೆ ಮಾಡ್ಕೊಳ್ಳೋದಕ್ಕೆ ಇಷ್ಟ ಇಲ್ಲ ಅಂದಮೇಲೆ ನಾವು ಬಲವಂತ ಮಾಡೋದು ಸರಿಯಲ್ವಲ್ಲ. ಈಗಿನ ಕಾಲದ ಮಕ್ಕಳು ಅಪ್ಪ, ಅಮ್ಮನ ಮಾತೆಲ್ಲಿ ಕೇಳ್ತವೆ ಹೇಳು? ನಾವಿಬ್ರು ಅವಳಿಗೆ ಹೇಳಿ ಹೇಳಿ ಸಾಕಾಗಿ ಹೋಯ್ತು. ಇನ್ನೇನಿದ್ದರೂ ಅವಳೇ ಮನಸ್ಸು ಮಾಡ್ಬೇಕಷ್ಟೆ. ವಿವಾಹ ನಡೆಯೋ ಸಾಧ್ಯತೆ ಇಲ್ಲ ಎಂದು ನೇರವಾಗಿ ಹೇಳುವ ಸಾಹಸ ತೋರದೆ ವಿವಾಹ ಪ್ರಸ್ತಾಪವನ್ನು ನಯವಾಗಿ ತಿರಸ್ಕರಿಸುವ ಪ್ರಯತ್ನ ಮಾಡಿದರು.

ನಿನ್ಗೇನಾದ್ರು ಹುಚ್ಚುಗಿಚ್ಚು ಹಿಡ್ಕೊಂಡುಂಟಾ? ನಿನ್ನ ಮಗಳಿನ್ನೂ ಸಣ್ಣವಳೂಂತ ತಿಳ್ಕೊಂಡಿದ್ದೀಯ? ಇಪ್ಪತ್ತನಾಲ್ಕು ವರ್ಷ ತುಂಬಿದ್ರೂ ಕೂಡ ಇನ್ನೂ ಮಗಳನ್ನ ಮನೆಯಲ್ಲಿ ಇಟ್ಕೋಬೇಕು ಅಂತಿದ್ದಿಯಲ್ಲ. ಇನ್ನೊಂದೈದು ವರ್ಷ ಕಳೆದೋದರೆ ಮಗಳು ಮುದ್ಕಿ ಆಗೋಗುತ್ತಾಳೆ. ನಿನ್ನ ಮಗಳಿಗೆ ನನ್ನ ಮಗ ಸರಿಯಾದ ಜೋಡಿ. ಆದಷ್ಟು ಬೇಗ ಒಂದು ಶುಭ ಮುಹೂರ್ತದಲ್ಲಿ ಮದ್ವೆ ಮಾಡಿಸಿಬಿಡುವ. ಮೊದ್ಲೇ ಹೇಳಿದಂಗೆ ಮುಂದಿನ ವಾರ ನಿಶ್ಚಿತಾರ್ಥ ಇಟ್ಕೊಳ್ಳುವ. ನೀನೇನು ಭಯ ಪಡೋ ಅವಶ್ಯಕತೆ ಇಲ್ಲ. ನಿನ್ನ ಮಗಳನ್ನ ನನ್ನ ಮನೆಗೆ ಸೊಸೆಯಾಗಿ ಕಕೊಂಡು ಹೋಗೋದಿಲ್ಲ. ಮನೆ ಮಗಳಂತೆ ಕಕೊಂಡೋಗ್ತೇವೆ. ಅವಳಿಗೆ ಯಾವುದೇ ಕೊರತೆ ಆಗದಂತೆ ನೋಡ್ಕೋತ್ತಿವಿ. ಸಂಬಂಧ ಮಾತ್ರ ಇಲ್ಲ ಅನ್ಬೇಡ ನಂದುಕುಮಾರ್ ಆದಷ್ಟು ಬೇಗ ಮದುವೆ ಮಾಡಿ ಮುಗಿಸುವ ಆತುರದಲ್ಲಿದ್ದರು.

ನಂದಕುಮಾರ್ ಮಾತಿನಲ್ಲಿ ಸತ್ಯಾಂಶ ಇದೆ. ಅಕ್ಷರಳಿಗೆ ಇಲ್ಲಿ ದೊರೆಯುವಷ್ಟೇ ಪ್ರೀತಿ, ವಿಶ್ವಾಸ ಅಲ್ಲಿಯೂ ಕೂಡ ದೊರೆಯೋದರಲ್ಲಿ ಸಂಶಯವಿಲ್ಲ. ಅಕ್ಷರ ನಿಖಿಲ್‌ನ ಕೈ ಹಿಡಿದರೆ ಆಕೆಗೆ ಸ್ವರ್ಗದ ಬಾಗಿಲು ತೆರೆದಂತೆ. ಅಲ್ಲಿ ಯಾವುದೇ ಕೊರತೆ ಇರೋದಿಲ್ಲ. ಅಪ್ಪ, ಅಮ್ಮನ ಸ್ಥಾನ ತುಂಬಲು, ಪ್ರೀತಿ-ವಿಶ್ವಾಸ ತೋರಿಸಲು ನಂದಕುಮಾರ್, ಭಾಗ್ಯವತಿ ಇದ್ದೇ ಇರುತ್ತಾರೆ. ಜೊತೆಗೆ ನಿಖಿಲ್ ಅಕ್ಕರೆಯಿಂದ ಅವಳ ಪ್ರತಿಯೊಂದು ಹೆಜ್ಜೆಯ ಮೇಲೂ ಕಣ್ಣಿಟ್ಟು ಜೋಪಾನವಾಗಿ ನೋಡಿಕೊಳ್ಳುತ್ತಾನೆ. ಎಲ್ಲದಕ್ಕಿಂತ ಹೆಚ್ಚಾಗಿ ಬರಿದಾಗದಷ್ಟು ಸಂಪತ್ತು ಇದೆ. ಇನ್ನೇನು ಬೇಕು ಅವಳಿಗೆ? ಅವೆಲ್ಲವನ್ನು ಪಡೆಯೋ ಭಾಗ್ಯ ಅವಳಿಗಿದೆಯೋ ಏನೋ? ಅವಳು ನೋಡಿದರೆ ಯಾವುದಕ್ಕೂ ಬೇಡದ ಅಭಿಮನ್ಯುವಿಗೆ ಮನಸ್ಸುಕೊಟ್ಟಿದ್ದಾಳೆ ಅಂದುಕೊಂಡ ರಾಜಶೇಖರ್ ತಲೆಮೇಲೆ ಕೈಹೊತ್ತು ಕುಳಿತುಕೊಂಡರು.

ಮಗಳ ವಿಚಾರದಲ್ಲಿ ನೀವು ಭಯ ಪಡುವ ಅವಶ್ಯಕತೆನೇ ಇಲ್ಲ. ವಿವಾಹವಾಗುವುದಕ್ಕಿಂತ ಮುಂಚಿತವಾಗಿಯೇ ನಿಖಿಲ್ ಕೆಲಸಕ್ಕೆ ರಾಜೀನಾಮೆ ಕೊಟ್ಟು ಅಮೆರಿಕ ತೊರೆದು ಮಡಿಕೇರಿಗೆ ಬಂದು ನೆಲೆಸ್ತಾನೆ. ಇನ್ನೇನಿದ್ದರೂ ಅಕ್ಷರಳ ಜೊತೆ ಇಲ್ಲಿಯೇ ಸುಂದರ ಬದುಕು ಕಂಡುಕೊಳ್ಳಬೇಕೂಂತ ನಿರ್ಧಾರ ಮಾಡಿದ್ದಾನೆ. ಮಗಳನ್ನ ಮದ್ವೆಗೆ ಒಪ್ಪಿಸುವ ಜವಾಬ್ದಾರಿ ನಮ್ಗೆ ಬಿಡಿ. ನಾಳೆ ಮೈಸೂರಿಗೆ ಹೋಗೋದಿದೆ. ಹಾಗೆನೇ ಅಕ್ಷರಳನ್ನ ನೋಡ್ಕೊಂಡು ಮಾತಾಡಿ ಬತೇವೆ ಅಂದರು ಭಾಗ್ಯವತಿ.

ಮಗಳ ವಿಚಾರ ಚೆನ್ನಾಗಿ ಬಲ್ಲ ರಾಜಶೇಖರ್‌ಗೆ ಭಾಗ್ಯವತಿ ಅವರ ನಿರ್ಧಾರ ಸರಿ ಕಾಣಲಿಲ್ಲ. ಮೈಸೂರಿಗೆ ಹೋಗಿ ಭೇಟಿಯಾದರೆ ಅವರೊಂದಿಗೆ ಮಗಳು ರಾದ್ಧಾಂತ ಮಾಡುವುದು ನಿಶ್ಚಿತ. ಮಗಳನ್ನು ಭೇಟಿಯಾಗುವ ಕಾಯಕ್ರಮ ರದ್ದು ಪಡಿಸುವಂತೆ ಸ್ಪಷ್ಟವಾಗಿ ಹೇಳಿಬಿಡಲು ನಿರ್ಧರಿಸಿದರು.

ಮದ್ವೆ ವಿಚಾರದಲ್ಲಿ ನೀವು ಮಗಳನ್ನ ಮಾತಾಡಿಸೋದು ಅಷ್ಟೊಂದು ಸರಿ ಕಾಣ್ತಾ ಇಲ್ಲ. ನೀವು ಭೇಟಿಯಾದ ನಂತರ ನಮ್ಮೇಲೆ ರೇಗಾಡೋದಕ್ಕೆ ಶುರು ಮಾಡಿಬಿಡ್ತಾಳೆ. ಮಗಳು ಎಷ್ಟೊಂದು ಮುಂಗೋಪಿ ಅಂತ ನಮ್ಗೆ ಮಾತ್ರ ಗೊತ್ತು. ಅವಳಿಗೆ ಕೋಪ ಜಾಸ್ತಿ. ಮುದ್ದಾಗಿ ಬೆಳೆಸಿಬಿಟ್ಟಿದ್ವಿ ನೋಡಿ ಅದಕ್ಕೆ. ಇನ್ನೇನು ಮುಂದಿನ ತಿಂಗಳು ಮನೆಗೆ ಬತಾಳೆ. ನಾವೇ ಕೂತು ಮಾತಾಡಿ ಅಂತಿಮ ತೀರ್ಮಾನಕ್ಕೆ ಬತೇವೆ. ನಮ್ಗೂ ನಿಮ್ಮ ಮನೆಯ ಸಂಬಂಧ ಬೆಳೆಸೋ ಆಸೆ ಇದೆ. ಮಗಳಿಗೆ ನಿಖಿಲ್‌ಗಿಂತ ಒಳ್ಳೆಯ ಹುಡುಗ ಎಲ್ಲಿ ಸಿಗ್ತಾನೆ ಹೇಳಿ? ನಾವೇನು ಸಂಬಂಧ ಕಡಿದುಕೊಳ್ಬೇಕೂಂತ ಅಂದುಕೊಂಡಿಲ್ಲ. ಎಲ್ಲದಕ್ಕೂ ಮಗಳು ಒಂದು ಅಂತಿಮ ತೀರ್ಮಾನ ತೆಗೆದುಕೊಳ್ಬೇಕಲ್ಲ?

ಎಲ್ಲರು ಮಾತಿನಲ್ಲಿ ಮುಳುಗಿರುವಾಗ ಲೀಲಾವತಿ ಬಿಸಿ ಬಿಸಿ ಕಾಫಿ ತಂದು ಅತಿಥಿಗಳಿಗೆ ನೀಡಿದರು. ಕಾಫಿ ಕುಡಿದು ನಂದಕುಮಾರ್ ಹೊರಡಲು ಅಣಿಯಾದರು. ನಾವಿನ್ನು ಬರ್ತಿವಿ. ಇಲ್ಲಿ ತನ್ಕ ಬಂದು ಮಾತಾಡಿದ್ದು ತುಂಬಾ ಸಂತೋಷ ಆಯ್ತು. ಸಾಧ್ಯವಾದ್ರೆ ಮುಂದಿನ ತಿಂಗಳು ಮತ್ತೊಂದ್ಸಲ ಬಂದು ಮಗಳನ್ನ ನೋಡ್ಕೊಂಡು ಹೋಗ್ತಿವಿ. ಅಷ್ಟರೊಳಗೆ ಒಂದು ನಿರ್ಧಾರ ತೆಗೆದುಕೊಳ್ಳಿ ಎಂದು ಮನೆಯಿಂದ ಕಾಲ್ತೆಗೆದರು. ಮನೆಯಂಗಳದವರೆಗೆ ಅತಿಥಿಗಳನ್ನು ಬಿಟ್ಟು ಬಂದ ರಾಜಶೇಖರ್ ಒಮ್ಮೆ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಅಬ್ಬಾ…, ಅಂತೂ ಹೋದ್ರಲ್ಲ. ಮುಂದಿನ ತಿಂಗಳು ಯಾಕಾದ್ರೂ ಬತಾರೋ? ಎಲ್ಲಾ ವಿಚಾರವ್ನ ಬಿಡಿಸಿ ಹೇಳುವಂತೆಯೂ ಇಲ್ಲ. ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಂತಾಯಿತ್ತಲ್ಲ ನಮ್ಮ ಪರಿಸ್ಥಿತಿ. ಈ ಸಮಸ್ಯೆಗೆ ನೀನಾದ್ರೂ ಒಂದು ದಾರಿ ಹೇಳು ಎಂದು ಲೀಲಾವತಿಯ ಕಡೆಗೆ ತಿರುಗಿ ಕೇಳಿದರು ರಾಜಶೇಖರ್.

ನಾನೇನೂಂತ ಹೇಳ್ಲಿ? ನನ್ಗಂತೂ ಮಗಳ ಜೊತೆ ಹೆಣಗಾಡಿ ಸಾಕಾಗಿ ಹೋಗಿದೆ. ನೀವು ಮುದ್ದಾಗಿ ಬೆಳೆಸಿದರ ಪರಿಣಾಮ ಇದು. ಮೊದ್ಲೇ ಹದ್ದುಬಸ್ತಿನಲ್ಲಿಟ್ಟುಕೊಂಡಿದ್ರೆ ಸರಿ ಹೋಗ್ತಾ ಇತ್ತು. ಇನ್ನು ಹೇಳಿ ಏನು ಸುಖ. ಯಾವುದಕ್ಕೂ ಒಂದ್ಸಲ ಫೋನ್ ಮಾಡಿ ಅಂತಿಮ ನಿರ್ಧಾರ ಏನೆಂದು ತಿಳ್ಕೋತ್ತಿನಿ ಅಂದ ಲೀಲಾವತಿ ಮಗಳಿಗೆ ಫೋನಾಯಿಸಿದರು.

ಹಲೋ… ಅಕ್ಷರ, ನಾನು ನಿನ್ನಮ್ಮ ಮಾತಾಡ್ತಾ ಇರೋದು. ಮುಂದಿನ ತಿಂಗಳ ಮೊದಲ ವಾರ ಮನೆಗೆ ಬಂದ್ಬಿಡು. ತುಂಬಾ ವಿಷಯ ಮಾತಾಡೋದಕ್ಕಿದೆ. ಮೊನ್ನೆತಾನೆ ನಿನ್ಗೆ ಹೇಳಿದ್ದೇವಲ್ಲ, ಅಮೆರಿಕದ ಹುಡುಗ ನಿಖಿಲ್ ಇವತ್ತು ಅವನ ಅಪ್ಪ, ಅಮ್ಮನ ಜೊತೆ ನಿನ್ನ ನೋಡೋದಕ್ಕೆ ಮನೆಗೆ ಬಂದಿದ್ದ. ಈಗ ತಾನೆ ಹೋದ್ರು. ಆದಷ್ಟು ಬೇಗ ಮದ್ವೆ ಮಾಡಿ ಮುಗಿಸಬೇಕೂಂತ ಇದ್ದಾರೆ. ಮುಂದಿನ ತಿಂಗಳು ನೀನು ಬರದೆ ಹೋದ್ರೆ ನಾವೇ ನಿಖಿಲ್‌ನ ಕಕೊಂಡು ಮೈಸೂರಿಗೆ ಬಬೇಕೂಂತ ತೀರ್ಮಾನ ಮಾಡಿದ್ದೀವಿ ಲೀಲಾವತಿ ಮಾತು ಮುಂದುವರೆಸುತ್ತಿದ್ದಂತೆ ಮಧ್ಯದಲ್ಲಿ ಮಾತು ತುಂಡರಿಸಿದ ಅಕ್ಷರ ಅಮ್ಮನ ವಿರುದ್ಧ ಹರಿಹಾಯ್ದಳು.

ಸಾಕು ನಿಲ್ಸಮ್ಮ. ಮನೆಗೆ ಬಂದಾಗ ನೆಮ್ಮದಿಯಿಂದ ಇರೋದಕ್ಕೆ ಬಿಡ್ಲಿಲ್ಲ. ಮೈಸೂರಿಗೆ ಬಂದ ನಂತರ ಇಲ್ಲಿ ಕೂಡ ನೆಮ್ಮದಿ ಯಾಗಿರೋದಕ್ಕೆ ಬಿಡ್ತಾ ಇಲ್ಲ. ನಾನಂತು ಮನೆಗೆ ಇನ್ನು ಕಾಲಿಡೊದೇ ಇಲ್ಲ. ನೀವು ನಿಖಿಲ್‌ನ ಕಕೊಂಡು ಮೈಸೂರಿಗೆ ಬಂದ್ರೆ ನಂದೇನು ಅಭ್ಯಂತರ ಇಲ್ಲ. ಅವನ ಜೊತೆ ನಿಮ್ಗೂ ಕೂಡ ಇಲ್ಲಿ ಮಂಗಳಾರತಿ ಎತ್ತಿ ಕಳುಹಿಸ್ತೇನೆ. ಮದ್ವೆ ಆಗೋದಕ್ಕೆ ಪ್ರಪಂಚದಲ್ಲಿ ಎಲ್ಲಿಯೂ ಕೂಡ ಅವನಿಗೆ ಹೆಣ್ಣು ಸಿಗ್ಲಿಲ್ವ್ವ? ನನ್ನ ಹಿಂದೆ ಯಾಕೆ ಗಂಟು ಬಿದ್ದಿದ್ದಾನೆ? ನಿಮ್ಗಾದ್ರು ಸ್ವಲ್ಪ ಬುದ್ಧಿ ಬೇಡ್ವ? ನಿಖಿಲ್ ಏನೋ ಹೇಳಿದ ಅಂದ ಮಾತ್ರಕ್ಕೆ ಅವನ ಮಾತಿಗೆ ಕೋಲೆಬಸವನಂತೆ ತಲೆ ಅಲ್ಲಾಡಿಸಿ ಬಿಟ್ರಲ್ಲ? ನಾಚಿಕೆ ಆಗ್ತಾ ಇಲ್ವ ನಿಮ್ಗೆ? ಎಲ್ಲಾ ನನ್ನ ಹಣೆ ಬರಹ ಎಂದು ತಲೆ ಚಚ್ಚಿಕೊಂಡಳು.

ಮಗಳೊಂದಿಗೆ ಮಾತು ಮುಂದುವರೆಸೋದು ಲೀಲಾವತಿಗೆ ಸರಿ ಕಾಣದೆ ಫೋನ್ ಇಟ್ಟರು. ಹೆಣ್ಣು ಮಕ್ಕಳನ್ನ ಹಡೆದರೆ ಎಷ್ಟೊಂದು ಕಷ್ಟ ಅನುಭವಿಸಬೇಕೂಂತ ಈಗ ಅರ್ಥ ಆಗ್ತಾ ಇದೆ. ಗಂಡು ಮಕ್ಕಳು ಹೇಗೆ ನಡ್ಕೊಂಡ್ರೂ ಸಮಾಜ ಏನೂ ಪ್ರಶ್ನೆ ಮಾಡೋದಿಲ್ಲ. ಆದ್ರೆ ಒಂದು ಹೆಣ್ಣು ದಾರಿ ತಪ್ಪಿದಳು ಅಂದ್ರೆ ಆ ಅಪವಾದವನ್ನು ಅವಳ ಜೊತೆಗೆ ಹೆತ್ತವರ ಮೇಲೂ ಸಮಾಜ ಹೊರಿಸಿ ಬಿಡುತ್ತದೆ. ಅಂತಹ ಒಂದು ಅಪವಾದ ನಮ್ಮ ಮೇಲೆ ಹೊರಿಸದಿದ್ರೆ ಅವಳಿಗೆ ನೆಮ್ಮದಿ ಸಿಗೋ ಹಾಗೆ ಕಾಣ್ತಾ ಇಲ್ಲ ಎಂದು ಗೊಣಗಿಕೊಂಡು ಮನೆಯಂಗಳದಲ್ಲಿ ನಿಂತಿದ್ದ ಗಂಡನ ಕಡೆಗೆ ತೆರಳಿ ರೀ…, ಮಗಳ ವಿಷಯ ಬಿಟ್ಟಾಕಿ. ಅವಳು ಸರಿದಾರಿಗೆ ಬರೋ ಲಕ್ಷಣ ಕಾಣ್ತಾ ಇಲ್ಲ. ನಮ್ಮ ಪಾಲಿಗೆ ಮಗಳು ಸತ್ತು ಹೋದ್ಲು ಅಂಥ ತಿಳ್ಕೊಂಡು ಬದುಕುವ. ಇನ್ನು ಅವಳ ದಾರಿ ಅವಳಿಗೆ, ನಮ್ಮ ದಾರಿ ನಮ್ಗೆ. ಎಷ್ಟೂಂತ ಬುದ್ಧಿ ಹೇಳ್ಲಿಕ್ಕೆ ಸಾಧ್ಯ? ಒಂದು ಮಾತಿಗೂ ಕೂಡ ಬೆಲೆ ಕೊಡ್ತಾ ಇಲ್ಲ. ಒಂದು ಹೇಳಿದ್ರೆ ಅದಕ್ಕೆ ಎರಡು ಸೇರಿಸಿಕೊಂಡು ಹೇಳ್ತಾಳೆ. ಪ್ರತಿಯೊಂದು ಮತಿಗೂ ಎದುರು ಮಾತಾಡದಿದ್ರೆ ಅವಳಿಗೆ ನೆಮ್ಮದಿ ಇಲ್ಲ. ಅವಳು ನಮ್ಮ ನಿರೀಕ್ಷೆಗೂ ಮೀರಿ ಬೆಳೆದು ಬಿಟ್ಟಿದ್ದಾಳೆ. ನಾಳೆ ದಿನ ನಂದಕುಮಾರ್‌ಗೆ ಏನೋ ಸುಳ್ಳು ಹೇಳಿ ಮದ್ವೆ ಆಗದಂತೆ ಮಾಡ್ಬೊಹುದು. ಆದ್ರೆ ಅದೇ ಕೊನೆ ಅಲ್ವಲ್ಲ? ಅವಳು ಇರೋ ತನಕ ಸಂಬಂಧ ಬೆಳೆಸೋದಕ್ಕೆ ಇನ್ನೊಂದಷ್ಟು ಜನ ಬತಾರೆ. ಅವರಿಗೆಲ್ಲ ಏನೂಂತ
ಉತ್ತರ ಕೊಡೋದು? ಮಗಳು ತಳೆದಿರುವ ನಿಲುವಿನ ಬಗ್ಗೆ ಯೋಚಿಸಿ ಕಣ್ಣೀರು ಸುರಿಸಿದರು.

ಸಮಾಧಾನ ಮಾಡ್ಕೋ. ಏನ್ಮಾಡ್ಲಿಕ್ಕೆ ಆಗುತ್ತೆ ಹೇಳು? ಮುಂದಿನ ತಿಂಗಳು ಮನೆಗೆ ಬರೋದಕ್ಕೆ ಹೇಳಿದ್ಯಲ್ಲ. ಅವಳು ಬಂದೇ ಬತಾಳೆ. ಬರದೆ ಇದ್ರೆ ನಾನೇ ಹೋಗಿ ಎಳ್ಕೊಂಡು ಬತಿನಿ. ಸಾಕು ಇನ್ನು ಅವಳು ನೌಕರಿ ಮಾಡಿದ್ದು. ಅವಳಿಗೆ ಇಷ್ಟ ಇಲ್ದೆ ಇದ್ರೂ ನಾವು ಇಷ್ಟಪಡೋ ಹುಡುಗನೊಂದಿಗೆ ಮದ್ವೆ ಮಾಡಿಸಿಬಿಡುವ. ನೀನೇನು ಚಿಂತೆ ಮಾಡ್ಕೋ ಬೇಡ. ಮದ್ವೆಗೆ ಪ್ರಾರಂಭದಲ್ಲಿ ವಿರೋಧಿಸ್ತಾಳೆ. ಒಂದೆರಡು ಸರಿಯಾಗಿ ಬಾರಿಸಿ ಮದ್ವೆ ಮಾಡಿಸಿದ್ರೆ ಆಯ್ತು. ಮದುವೆಯಾದ ನಂತರ ಪರಿಸ್ಥಿತಿಗೆ ಹೊಂದಿಕೊಂಡು ಜೀವನ ನಡೆಸ್ತಾಳೆ. ಅದು ಹೆಣ್ಣಿನ ಸಹಜ ಗುಣ. ಹೆಣ್ಣಿಗೆ ಎಲ್ಲವನ್ನೂ ಮರೆತು ಬದುಕುವ ಶಕ್ತಿ ಇದೆ. ಮಗಳ ವಿಷಯದಲ್ಲಿ ಯೋಚ್ನೆ ಮಾಡ್ಕೊಂಡು ಆರೋಗ್ಯ ಹಾಳು ಮಾಡ್ಕೋಬೇಡ. ಮಗಳ ಮದ್ವೆ ಜವಾಬ್ದಾರಿ ನನ್ಗೆ ಬಿಡು ಲೀಲಾವತಿಯನ್ನು ಸಂತೈಸಿದರು. ಮಗಳ ವಿಷಯದಲ್ಲಿ ಸಾಕಷ್ಟು ಹೊತ್ತು ಏಕಾಂತದಲ್ಲಿ ಕುಳಿತು ಆಲೋಚಿಸಿದ ಬಳಿಕ ಅಂತಿಮವಾಗಿ ‘ಅಕ್ಷರ ಒಪ್ಪಿದರೂ ಒಪ್ಪದೆ ಇದ್ರೂ ಮದ್ವೆ ನಡೆಸೋದು ನಿಶ್ಚಿತ. ಆಕೆ ಎಷ್ಟು ನೊಂದುಕೊಂಡರೂ ಚಿಂತೆ ಇಲ್ಲ ಎಂಬ ಕಠೋರ ನಿರ್ಧಾರಕ್ಕೆ ಬಂದರು.
* * *

ಅಕ್ಷರ ತೀವ್ರ ಆಂತಕಕ್ಕೆ ಸಿಲುಕಿಕೊಂಡಳು. ತಲೆನೋವು ಸಹಿಸೋದಕ್ಕೆ ಸಾಧ್ಯವಾಗುತ್ತಿಲ್ಲವೆಂದು ಹೇಳಿ ಕಚೇರಿಯಿಂದ ಮೆಲ್ಲನೆ ಕಾಲ್ತೆಗೆದು ಹಾಸ್ಟೇಲ್ ಕಡೆಗೆ ನಡೆದಳು. ಎಲ್ಲದಕ್ಕೂ ಒಂದ್ಸಲ ಅಭಿಮನ್ಯುವನ್ನು ಭೇಟಿಯಾಗಬೇಕು. ಇಲ್ಲವಾದರೆ ತಲೆಕೆಟ್ಟು ಹೋಗ್ಬೊಹುದು. ಇಷ್ಟು ದಿನ ಅಪ್ಪ ಆರಾಡ್ತಾ ಇದ್ರು, ಇದೀಗ ಅಮ್ಮ ಅಪ್ಪನೊಂದಿಗೆ ಸೇಕೊಂಡು ಹಾರಾಡೋದಕ್ಕೆ ಶುರು ಮಾಡಿದ್ದಾರೆ. ಅಮೆರಿಕದ ಹುಡುಗ ಅಂದ್ರೆ ಏನಂದ್ಕೊಂಡಿದ್ದಾರೋ ಏನೋ? ಅಮೆರಿಕದಲ್ಲಿ ಇರುವವರೆಲ್ಲ ಒಳ್ಳೆಯವರಾ? ಅವರ ಜೊತೆ ಮದುವೆಯಾದರೆ ಯಾವುದೇ ಸಮಸ್ಯೆಗಳು ಎದುರಾಗೋದೇ ಇಲ್ವ? ಅಮೆರಿಕಾದ ಹುಡುಗನ ಬಗ್ಗೆ ಹುಚ್ಚು ಕಲ್ಪನೆ ಮಾಡ್ಕೊಂಡಿದ್ದಾರೆ. ಅಂತಃಕರಣದಲ್ಲಿ ಪ್ರೀತಿ, ವಿಶ್ವಾಸ ತುಂಬಿಕೊಂಡಿರುವ ಅಭಿಮನ್ಯುವಿನ ಮುಂದೆ ಅಮೆರಿಕಾದ ಹುಡುಗ ಯಾವ ಲೆಕ್ಕ? ಅದನ್ನ ಎಷ್ಟು ಹೇಳಿದ್ರೂ ಅಪ್ಪ, ಅಮ್ಮ ಅರ್ಥ ಮಾಡ್ಕೊಳ್ತಾ ಇಲ್ವಲ್ಲ!? ಕೋಣನ ಮುಂದೆ ಕಿನ್ನಾರಿ ನುಡಿಸಿದಂಗಾಯ್ತು. ಇಂದು ಬಡವನಾದವನು ನಾಳೆ ದಿನ ಶ್ರೀಮಂತನಾಗಬಹುದು. ಕೆಲವೊಂದು ತಪ್ಪು ಹೆಜ್ಜೆಗಳನ್ನಿಟ್ಟು ಶ್ರೀಮಂತ ದಿನ ಬೆಳಗಾಗುವುದರೊಳಗೆ ಬಡವನಾಗಬಹುದು. ಅದನ್ನ ತಡೆಯೋದಕ್ಕೆ ಯಾರಿಂದ ಸಾಧ್ಯ ಇದೆ? ಅಂದುಕೊಂಡಳು.

ದೇವರೇ ಏನೇ ಆದ್ರೂ ನಮ್ಮ ಪ್ರೀತಿಯನ್ನು ನೀನೇ ಕಾಯಬೇಕು. ನನ್ನ ಹೃದಯದಲ್ಲಿ ಅನ್ಯ ಪುರುಷನ ಹೆಜ್ಜೆ ಗುರುತು ಕಾಣಲು ನನ್ಗೆ ಇಷ್ಟ ಇಲ್ಲ. ಪ್ರೀತಿಯ ಎಲ್ಲಾ ಭಾರವನ್ನು ನಿನ್ನ ಮೇಲೆ ಹೊರಿಸುತ್ತಿದ್ದೇನೆ. ಇಲ್ಲಿ ತನ್ಕ ಎಲ್ಲವನ್ನು ಸುಗಮವಾಗಿ ನಡೆಸಿಕೊಟ್ಟಿದ್ದೀಯ. ಮುಂದೆ ಕೂಡ ಯಾವುದೇ ಅಡೆತಡೆ ಇಲ್ಲದೆ ಮುನ್ನಡೆಸು ದೇವ ಎಂದು ದೇವರ ಮುಂದೆ ಬೇಡಿಕೆ ಪಟ್ಟಿ ಸಲ್ಲಿಸಿದಳು.

ಒಂದರ್ಧ ತಾಸು ದೇವರ ಫೋಟೋದ ಎದುರು ದೇವರ ನಾಮಸ್ಮರಣೆಯಲ್ಲಿ ತಲ್ಲೀನಳಾದ ಅಕ್ಷರಳ ಕಣ್ಗಳಿಂದ ಕಣ್ಣೀರು ಹರಿಯಲು ಪ್ರಾರಂಭಿಸಿತು. ನಾನೇನು ಪಾಪ ಮಾಡಿದೆ? ನಾನ್ಯಾರಿಗೆ ಕೇಡು ಬಯಸಿದೆ? ನನ್ಗೆ ಏಕಾಗಿ ಈ ಶಿಕ್ಷೆ? ಅಭಿಮನ್ಯುವನ್ನು ತೊರೆದು ಜೀವನ ನಡೆಸುವ ಶಕ್ತಿ ನನ್ನಲ್ಲಿಲ್ಲ. ಮನಸ್ಸು ಒಬ್ಬನಿಗೆ ಕೊಟ್ಟು ದೇಹ ಮತ್ತೊಬ್ಬನಿಗೆ ಒಪ್ಪಿಸುವುದಕ್ಕಿಂತ ಅಸಹ್ಯವಾದ ಬಾಳು ಮತ್ತೊಂದಿಲ್ಲ. ಖಂಡಿತ ನನ್ಗೆ ಅಂತಹ ಒಂದು ಬದುಕು ನೀಡ್ಬೇಡ. ನೀಡಿದರೆ ನಿನ್ಮೇಲಾಣೆ. ನಾನು ಖಂಡಿತ ಬದುಕಿರೋದಿಲ್ಲ. ಅಭಿಮನ್ಯುವಿನಿಂದ ನನ್ನ ದೂರ ಮಾಡಿದ್ರೆ ಇನ್ನೆಂದಿಗೂ ನನ್ನ ಕೈಗಳಿಂದ ನಿನ್ಗೆ ಪೂಜೆ ಸಲ್ಲಿಸೋದಿಲ್ಲ ಎಂದು ಶಪಥ ಮಾಡಿ ಮೇಲೆದ್ದು ಅಭಿಮನ್ಯುವಿಗೆ ದೂರವಾಣಿ ಕರೆ ಮಾಡಿದಳು.

ಅಭಿ, ನಾನು ನಿನ್ನೊಂದಿಗೆ ಮಾತಾಡೋ ಅರ್ಹತೆ ಕಳ್ಕೊಂಡ್ಬಿಟ್ಟೆ ಕಣೋ. ನಾನೆಂತ ಪಾಪಿ ಅಂತ ನನ್ಗೆ ಈಗ ಅನ್ನಿಸ್ತಾ ಇದೆ. ನಮ್ಮಿಬ್ಬರನ್ನ ಒಂದಾಗಲು ಮನೆಯಲ್ಲಿ ಬಿಡ್ತಾ ಇಲ್ಲ. ದಿನಾ ಕಿರುಕುಳನೇ ಆಗೋಯ್ತು. ಜೀವನದಲ್ಲಿ ನೆಮ್ಮದಿ ಅನ್ನೋದೇ ಹೊರಟು ಹೋಗಿದೆ. ನನ್ನ ನೋಡೋದಕ್ಕೆ ಹುಡುಗನ ಕಡೆಯವರು ಮನೆಗೆ ಬಂದಿದ್ರಂತೆ. ಆದಷ್ಟು ಬೇಗ ಮದ್ವೆ ಮಾಡಿಸಿ ಬಿಡುವ ಆತುರದಲ್ಲಿದ್ದಾರೆ. ನನ್ಗೇನು ತೋಚುತ್ತಿಲ್ಲ. ಆದಷ್ಟು ಬೇಗ ನನ್ನ ಎಲ್ಲಿಗಾದ್ರು ಕಕೊಂಡು ಹೋಗು. ನನ್ಗಂತೂ ಇಲ್ಲಿ ಇರೋದಕ್ಕೆ ಸಾಧ್ಯವಾಗ್ತಾ ಇಲ್ಲ. ಯಾರೂ ಪರಿಚಯ ಇಲ್ಲದ ಊರಿಗೆ ಹೊರಟು ಹೋಗುವ. ಅಲ್ಲಿ ಯಾವುದೇ ಭಯ, ಆತಂಕ ಇರೋದಿಲ್ಲ. ಎಷ್ಟು ದಿನಾಂತ ಭಯದ ನೆರಳಿನಲ್ಲಿ ಬದುಕು ನಡೆಸೋದಕ್ಕೆ ಸಾಧ್ಯ ಹೇಳು? ನಾಳೆನೇ ಮೈಸೂರಿಗೆ ಹೊರಟು ಬಾ. ಇಲ್ದಿದ್ರೆ ನಾನು ಖಂಡಿತ ಬದುಕಿರೋದಿಲ್ಲ

ಆತಂಕದ ಅಡವಿಯಲ್ಲಿ ಸಿಲುಕಿ ಕಣ್ಣೀರು ಸುರಿಸುತ್ತಾ ಹೊರ ಬರಲು ದಾರಿ ಕಾಣದೆ ತೊಳಲಾಡಲು ಪ್ರಾರಂಭಿಸಿದಳು. ಬೆಳದಿಂಗಳಿನಿಂದ ಬೆಳಗುತ್ತಿದ್ದ ಪ್ರೀತಿಯ ಸಾಮ್ರಾಜ್ಯದಲ್ಲಿ ಕಾರ್ಮೋಡ ಕವಿದುಕೊಳ್ಳಲು ಪ್ರಾರಂಭಿಸಿತು. ಪ್ರೀತಿಯ ಮೇಲೆ ಕವಿದ ಕಾರಿರುಳು ಸರಿಯುವುದಾರೂ ಏಂದು? ಉತ್ತರ ಇಬ್ಬರ ಬಳಿ ಇಲ್ಲ. ಅಕ್ಷರ ಆಡಿದ ಮಾತುಕೇಳಿ ಅಭಿಮನ್ಯುವಿಗೆ ದಿಕ್ಕೇ ತೋಚದಂತಾಯಿತು. ಪ್ರೀತಿ ತುಂಬಿತುಳುಕುತ್ತಿದ್ದ ಮನದಂಗಳದಲ್ಲಿ ಮೌನವೀಣೆ ಮೀಟಲಾರಂಬಿಸಿತು. ಇಂತಹ ಸಂದರ್ಭದಲ್ಲಿ ಮಾತು ಹುಟ್ಟುವುದಾದರೂ ಹೇಗೆ? ಅಭಿಮನ್ಯುವಿಗೆ ಏನು ಹೇಳಬೇಕೆಂದು ತೋಚದಾಯಿತು. ಅಭಿಮನ್ಯುವಿನ ಮೌನ ಆಕೆಯನ್ನು ಮತ್ತಷ್ಟು ಆತಂಕಕ್ಕೀಡು ಮಾಡಿತು.

….. ಮುಂದುವರೆಯುವುದು

ಕಾದಂಬರಿ ಪುಟ ೧೧೧-೧೩೦

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇಶ ಸೇವೆ
Next post ಇದು ಏನು ಆಯಿತೋ ಐಸುರ

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…