ಕುಳ್ಡು ಗಣ್ಣಿಗಿಂತ ಮೆಳ್ಳಗಣ್ಣು ಮೇಲು

ಗೌಡ ಕೊಮಾರ ಅದ್ಯಾವ ಘಳಿಗೆನಾಗೆ ಮುಖ್ಯಮಂತ್ರಿ ಕುರ್ಚಿ ಏರಿದ್ನೋ ಹತ್ತಿದ ಜಗಳ ಹರಿಯಂಗಿಲ್ಲ, ಸಮಸ್ಯೆಗಳು ಏರೋದೂ ತಪ್ಪಂಗಿಲ್ಲ ಅಂಗಾಗೇತ್ರಿ. ಮಂತ್ರಿ ಮಂಡ್ಳ ರಚಿಸಿದ್ದೇ ಗಜಪ್ರಸವ ದಂಗಾತು. ದೋಸ್ತ್ ಜಮೀರ ಪ್ರಮಾಣವಚನ ಮಾಡೋವಾಗ್ಗೆ ಯಡವಟ್ಟು ಮಾಡ್ದ. ಅಮೇಲೆ ದುಷ್ಮನ್ ಆದ. ಎಗೇನ್ ಈಗ ದೋಸ್ತ್ ಆಗವ್ನೆ! ಯಾರನ್ನ ನಂಬ್ಯಾನು ಕೊಮಾರ? ಇರೋಧ ಪಕ್ಸಕ್ಕಿಂತ ಪರಮ ಸತ್ರುಗಳಿರೋದೆ ತನ್ನ ಪಕ್ಷದಾಗೆಯಾ. ಯಾಕೆ, ಆತನ ಮಗ್ಗೆಲಾಗೆ ನಗಾಡ್ತ ಕುತ್ಕಂಡವ್ರೆ! ಈವಯ್ಯ ಅಧಿಕಾರದ ಜುಟ್ಟು ಹಿಡ್ಕೊಂಬೋ ಕಸರತ್ನಾಗಿದ್ದಾಗ್ಲೆ ನೈಸ್ ಕಂಪ್ನಿ ಖೇಣಿ ಸಿ‌ಎಂನ ಅನಾಮತ್ತು ರಸ್ತೆಗೆ ಎಳೆದು ಮಾನಮುಕ್ಕು ಮಾಡ್ಡ. ಕೋಲ್ಟು ಬ್ಯಾರೆ ಕ್ಯಾಕಸಿ ಉಗೀತಪ್ಪ. ಯಡೂರಿ ಜೊತನಾಗೆ ಸಣ್ಣಪುಟ್ಟ ವೈಮನಸ್ಸು ಇದ್ದೇ ಐತೆ. ಖೇಣಿ ತಾವ ನೆಲ ಕಸ್ಕೊಂಡು ಒಳ್ಳೆ ರೇಟಿಗೆ ಮಾರಾನ ಅಂದ್ರೆ, ಯಡೂರಿ ಪಕ್ಸ ರೈತರಿಗೇ ಗಿಫ್ಟ್ ಕೊಟ್ಟುಬಿಡೋಣ ಅಂತು. ಹೊಂಗೋ ಖೇಣೀನ ಡೀಲ್ ಮಾಡಿ ಸುಮ್ನಾಗ್ಸಿ ಅಕ್ಕಪಕ್ಕ ಅಂಗರಕ್ಷಕನ
ಇಕ್ಕಂಡಂಗೆ ಎಂ.ಪಿ.ಪ್ರಕಾಸುನ್ನ ಹಂಗೆ ಎಲ್ಡರ್ ಬ್ರದರ್ ರೇವ್ಗನ್ನ ಮಂತ್ರಿ ಮಾಡಿ ಮಗ್ಗಲದಾಗಿಟ್ಕಂಡು ನೆಮ್ಮದಿಯಾಗಿ ಉಸಿರಾಡೋವತ್ಗೆ ಮರಾಠೇರ ಗಡಿಗದ್ಲ ಸುರುವಾತು. ಬೆಳಗಾಂನಾಗ ನಾನು ಅಧಿವೇಸ್ನ ಇಕ್ಕಂಡೇ ಬಿಡ್ತೀನಿ ಅಂತ ಕೊಮಾರ ಸೆಡ್ಡು ಹೊಡದಾಗ್ಲೆ ಬಳ್ಳಾರಿ ರೆಡ್ಡಿ ಸಿಡಿ ಭೂತನ್ನ ಬಿಟ್ಟು ಮರ್ಯಾದೆ ಹರಾಜಿಗಿಕ್ಕಿದ. ಕೊಮಾನಗಿಂತ್ಲೂ, ಹಾರ್ಟ್ ಪೇಲಾಗೋದ್ದು ಬಿಜೆಪಿನೋಗೆ. ಸಿಡಿ ಗದ್ದಲ ಕೇಳಲಾದೆ ಸಿಟಿ ಬಿಟ್ಟ ಕೊಮಾರ ಹಳ್ಳಿ ಹಳ್ಳಿ
ಸುತ್ತುತಾ ಮನಿಗೊಂದು ಮುದ್ದೆ ಜಗಲಿಮ್ಯಾಲೆ ನಿದ್ದೆ ಮಾಡ್ಲಿಕತ್ತಿದ. ಮುಳುಗೋನ್ಗೆ ಹುಲ್ಲುಕಡ್ಡಿ ಸಿಕ್ಕಂಗೆ ತೆಲಗಿ ಮಂಪರು ಪರೀಕ್ಸೆಯ ಹಳೆ ಸಿಡಿಗಳು ಟಿವಿನಾಗೆ ಪ್ರತ್ಯಕ್ಷವಾದ್ವು! ಬ್ರೇಕ್‌ಡಾನ್ಸ್ ಮಾಡೋವಷ್ಟು ಖುಷಿಯಾದ ಕೊಮಾರ ಕಾಂಗ್ರೆಸ್ನೋರ ಮೇಲೆ ಮತ್ತೆ ಸೆಡ್ಡು ಹೊಡಿಲಿಕ್ಕೆ ಸುರು ಹಚ್ಕಂಡ. ಕೊಮಾರ ಅಂಡ್ ಫ್ಯಾಮ್ಲಿ ೧೫೦ ಕೋಟಿ ನುಂಗಿದ ದಾಖಲೆಗಳು ಬಯಲಾಗುತ್ಲು ಕೊಮಾರಂಗೆ ಮತ್ತೆ ಡಯೇರಿಯ ಸುರುವಾತು. ಹೊರಟ್ಟಿ ಎಂಬ ಮಂತ್ರಿ ಕನ್ನಡದ ಹೆಸರ್ನಾಗಿಪ್ಪ ಇಂಗ್ಲೀಸ್ ಸ್ಯಾಲೆಗಳ್ನಮುಚ್ಚಿಸಾಕೆ ಹೊಂಟು ಮತ್ತೋಟು ಹೊರೆಯಾದ. ಅದ್ನ ಪರಿಸೀಲಿಸ್ತೀನಿ ಅನ್ನುತ್ಲು ಕನ್ನಡ ಹೋರಾಟಗಾರರು ಕೆರಳಿ ಕೆಂಡವಾದರು. ಇದೆಲ್ಲಾ ತಲೆಬ್ಯಾನೆಯಿಂದ ಪಾರಾಗಿ ಅಮೆರಿಕಾಕ್ಕೆ ಹಾರಿ ಅಕ್ಕನ್ನ ಅವುಚ್ಕೊಂಬಾನ ಅನ್ನೋದ್ರಾಗೆ ಸೋನಿ ಮೇಡಂ ಬೆಂಗಳೂರಿಗೆ ಇಳ್ಕಂಡ್ಳು. ಸಿದ್ದು ಕಾಂಗ್ರೆಸ್ ಸೇರೋಕೆ ರೆಡಿಯಾದ. ಇದರಿಂದ ಕಕರ ಪೆಕರಾದ ಕೊಮಾರ ಯಡೂರಿನಾ ಫಾರಿನ್ನೆ ಗದುಮಿ ಬಡ್ಡಿ ನಾಗೆ ಡ್ರಾಪ್ ಬೈ ಡ್ರಾಪ್ ಯೂರಿನ್ ಮಾಡ್ಕೊಂತಾ ಸರ್ಕಾರ ಉಳಿಸ್ಕೊಂಬಾಕೆ ಸಿಟಿಲೇ ಸೆಟ್ಲಾದ. ಆತ ಸರಿಯಾಗಿ ಬ್ರೀತ್ ಮಾಡಿದ್ದು ಸೋನಿಯಾ ಮ್ಯಾಡಂ ಡೆಲ್ಲಿಗೆ ಹಾರಿದ ಮ್ಯಾಗೆಯಾ. ಬಿಜೆಪಿ ದೋಸ್ತಿಗಳು ‘ವಂದೇ ಮಾತರಂ’ಕ್ಯಾತೆ
ತೆಗೆದಿಟ್ಟರು. ಅದು ತಣ್ಣಗಾಗುತ್ಲು ದತ್ತ ಪೀಠ ಶೋಭಾಯಾತ್ರೆ ನಪದಾಗೆ ರಾಜ್ಯದ ಸ್ಯಾಂತಿ ಕದಡೋಕೆ ಹೊಸ ಚಡ್ಡಿ ಹೊಲಿಸ್ಕೊಂಡು ಸಿಟಿ ರವಿ ಅಂತೋರು ಸೀಟಿ ಹೊಡಿಲಿಕತ್ತಿದರು. ಹಿರಿ ಮನ್ಸ ಪ್ರಕಾಸು ‘ಅದೆಲಾ ಆಗಾಂಗಿಲ್ಲ ಹೋದ ವಸ ಹೆಂಗಿದ್ರೋ ಹಂಗೆ ತೆಪ್ಪಗಿರಿ’ ಅಂತ ಗದರಿಕ್ಕಂತು. ದೊಡ್ಡ ಗದ್ಲ ಎಬ್ಬಿಸೋಕೀಗ ಚೆಡ್ಡಿ ನರಿಗಳು ಲಾಠಿ ತಿರುವಿಸಲಿಕತ್ತಾವೆ. ಇವರ ತಲೆ ಸವರಿ ಸಿಯಮ್ಮು ಸಮಾಧಾನ ಹೇಳೋವಾಗ್ಲೆ ಬೆಳಗಾವಿನಾಗೆ ನೆಡೆಯೋ ಅಧಿವೇಸನಕ್ಕೆ ಎಗೆನೆಸ್ಟ್ ಆಗಿ ಎಂಇ‌ಎಸ್ ಪಟಾಲಂಗ್ಟಳು ‘ಮಹಾ ಮೇಳವಾ’ನಡೆಸಿ ಫೈಟಿಂಗ್ ಮಾಡೋ ಹಿಕಮತ್ತಿಗೆ ಬಿದ್ದಾರೆ. ಇಂಥ ಬ್ಯಾಡ್ ಟೇಂನಾಗೆ ಮೊದ್ಲು ಮುನಿಸ್ಕಂಡಿದ್ದ ರಾಜ್ಯಪಾಲ ಚತುರಬೇದಿ ತಾತ ಒಪ್ಕಂತಲ ಅಂಬೋ ಖುಸಿನಾಗಿರೋವಾಗ್ಲೆ ಮಹಾ ಸಾಚಾ ದೇಶಪಾಂಡೆ ಸಿ‌ಎಂ ಮ್ಯಾಗೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಜಡಿತೀನಿ ಅಂತ ಗೂರ್ಲು ದನಿ ತೆಗದವ್ನೆ. ಈ ಪಾಪಸ್‌ಕಳ್ಳಿಗಳ ಬೆಳವಣಿಗೆ ಕೊಮಾರನ ಅಭದ್ರತೆನಾ ನೋಡಿ ಮನನೊಂದ ಗೋಡ್ರು ಮೌನ ಮುರಿದಾರೆ. ನನ್ನ ಮಗನ್ನ ಚೆಪ್ರಾಸಿ ಅಂದೋರ ವಂಸ ಬರ್ಬಾದಾಗ್ಲಿ ಅಂತ ಹಿಡಿ ಸ್ಯಾಪ ಹಾಕ್ತಾ ಕಾಂಗ್ರೆಸ್ನೋರ ಮ್ಯಾಗೆ ಹತ್ತು ಕೊಚ್ಚನ್ ಎಸೆದವ್ರೆ. ಗೋಡ್ರು ಮಾತಿನ ವಾರ್ಗಿಳಿದೆ, ಖರ್ಗೆ ನಿನಗೇನ್ಲಾ ಗೋಡ ಆನ್ಸರ್ ಕೊಡೋದು? ಚುನಾವಣೆಗೆ ಬಾಲಾ ಅಂತ ಬ್ಯಾಲೆಟ್ ವಾರ್ ಡಿಕ್ಲೇರ್ ಮಾಡೈತೆ. ಗೋಡ್ರೀಗ ಮಗನ ಪರ ಡಿಫೆನ್ಸ್ ಲಾಯರ್‌ಗಿರಿಗೆ ನಿಂತು ಹೇಳ್ತಿರೋದಿಷ್ಟು. ನನ್ನ ಮಗ ದಲಿತರ ಮನೆಯಾಗೆ ಮಕ್ಕಂಡು ಎದ್ದು ಬಂದ್ರೂ ನೀನು ಏಕೆ ಹೊಸ ಹಾಸಿಗೆ ತರಸ್ಕಂಡೆ? ಚಾಪೆ ಮ್ಯಾಗೆ ಯಾಕೆ ಮಕ್ಕಳಿಲ್ಲ ಅಂತಾರಲ್ರಿ ಕಾಂಗೈ ಪಿಶಾಚಿಗಳು, ಟೆಂಪ್ರರಿ ಟಾಯ್ಲೆಟ್ ಯಾಕೆ ತಂದು ಇಕ್ಕಂಡೆ? ಚೆರಿಗಿ ಹಿಡ್ಕುಂಡು ಬ್ಯಾಲಿ ಸಾಲ್ನಾಗೆ ಯಾಕೆ ಕುಂದಿರಲಿಲ್ಲ? ದಲಿತರ ಮನೆ ಮುದ್ದೆ ಮುರೀದೆ ಲಿಂಗಾಯತರ ಮನೇಲಿಂದ ಅಡಿಗೆ ಎದಕ್ಕೆ ತರಿಸ್ಕಂಡೆ? ನಿನ್ನ ಜತೆನಾಗ ಬಂದೋಗೆಲ್ಲ ಊಟ ಉಪಚಾರ ಸೆಕ್ಯುರಿಟಿ. ಹಳ್ಳಿ ಹಾದಿ ದುರಸ್ತಿ ಅಂತ ಲಕ್ಷಗಟ್ಲೆ ವೇಸ್ಟ್ ಮಾಡೋ ಬದ್ಲು ದಲಿತರ ಪ್ರತಿ ಮನೆಗೂ ಟಾಯ್ಲೆಟ್ ಕಟ್ಟಿಸಿ ಕೊಡಬೋದಿತ್ತಲಲೆ ಪೆದ್ದ ಅನ್ಲಿಕತ್ತಾರಲ್ರಿ ಬದ್ಮಾಷ್ಗುಳು. ಮದರಾಸಾದಾಗೆ ಉಗ್ರರಿಗೆ ಪ್ಲೇಸ್ ಕೊಟ್ಟಾರೆ ಅಂತ ನನ್ನ ಕಂದಾ ಅಂದೇ ಇಲ್ಲ ಅಂದ್ರೂ ನೀನ್ ಸಿ‌ಎಂ ಪ್ಲೇಸ್ನಾಗೆ ಇರ್ಲಿಕ್ಕೇ ನಾಲಾಯ್ಕಕು. ನಿನ್ನ ಅಸಲಿ ನಾಲ್ಗಿ ಕಿತ್ತು ಬಿಜೆಪಿನೋರು ಸೀಟಿ ರವಿ ಅಂಬೋನ ನಾಲ್ಗಿ ಪ್ಯಾಚಪ್ ಮಾಡೋರೆ ಅಂತ ಗುಮಾನಿ ಪಡ್ಲಿಕತ್ತಾರಲ್ರಿ ಸಾಬರು ಅಂತ ಗೋಡ್ರು ಅಳ್ತಾ ಕುಂತವರೆ.
ಬಂಗಾರಪ್ಪ ಬ್ಯಾರೆ ಬಾಯಿಸೊಟ್ಟ ಮಾಡ್ಕೊಂಡು ಸೈಕಲ್ ಏರಿ ಬೆನ್ನಿಗೆ ಬಿದ್ದವ್ನೆ ಹಿಂಗಾರೆ ನನ್ನ ಕಂದನ ಆರೋಗ್ಯದ ಗತಿ ಹೇಗೆ ಅಂತ ಕಂಗಾಲಾಗವ್ರೆ. ಇಂಥ ಬ್ಯಾಡ್ ಟೇಂನಾಗೆ ಸಿ‌ಎಂನ ಆರೋಗ್ಯ ಭಾಗ್ಯ ಇಚಾರ್ಸೋದು ಕರ್ತವ್ಯ ಅನ್ಕಂಡು ಫೋನ್ ಎತ್ಕೊಂಡೆ. ಆಕಡೆ ರಿಂಗಾತು. ಹಲೋ ನಾನ್ರಿ ಸರಾ/ಯಾರ್ರಿ ಚೆನ್ನಿಗನೇನ್ರಿ?/ಅಲ್ರಿ, ಪತ್ರಿಕೆಯೋರೇನ್ರಿ …ಆರಾಮೇನ್ರಿ?/ ನಂಗೇನ್ರಿ ಧಾಡಿ. ಮನಿಗೊಂದು ಮುದ್ದೆ ಹಳ್ಳಿನಾಗೆ ನಿದ್ದೆ/ಲಿಂಗಾಯತ ಮನೆಮುದ್ದೆ ದಲಿತ್ರ ಮನೆಯಾಗೆ ನಿದ್ದೆ. ಇದು ದಲಿತರಿಗೆ ಮಾಡಿದ ಅಪ್ಮಾನ ಅಲ್ವಾ ಸರಾ/ ಷಟಪ್ ಐಸೆ. ಮೊನ್ನೆ ಚೆಲುವಯ್ಯ ಅವನ ಹೆಂಡ್ರೇ ಸಿಯಮ್ಮು ನಮ್ಮ ಮನೆಯಾಗೆ ಸೊಪ್ಪು ಸಾರು ರಾಗಿ ಬಾಲ್ಸು ನುಂಗಿ ಹರ್ಕು ಚಾಪೆ ಮ್ಯಾಗೆ ಮಕ್ಕಂಡ್ರು ಆಂತ ಸ್ಟೇಟ್ ಮೆಂಟ್ ಕೊಟ್ಟಾರೆ ಓದಿಲ್ವೇನ್ರಿ ?/ ನಿಮ್ಮ ಪಾರ್ಟಿಯೋರೇ ಹಂಗೆ ಹೇಳ್ರಿ ಅಂತ ಹೇಳಿಕೊಟ್ಟಾರೆ ಅಂತಾರಲ್ರಿ/ಅನ್ಕಳ್ಳಿ ಬಿಡ್ರಿ ಬ್ರದರ್… ಹೊಟ್ಟೆ ಉಕರು/ಕರೆಕ್ಟ್‌ ರೀ. ಪೇಜಾವರ ಮುನಿಗಳು ಹರಿಜನರ ಕೇರಿಯಾಗಿ ನುಗ್ಗಿ ತಮ್ಮ ಕೊಳಕು ಪಾದ ಕ್ಲೀನ್ ಮಾಡಿಸಿಕೊಂಡಾಗ್ಲೂ ಹೀಂಗೆ ಆಂಟಿಪ್ರಾಪಗ್ಯಾಂಡಾ ಮಾಡಿದ್ದರು ಸರಾ/ ಅಂತೂ ಒಂತರಾ ಪಬ್ಲಿಸಿಟಿ ಬಿಡಿ ಬ್ರದರ್/ಹರಿಜನರ ಮ್ಯಾಗೆ ದಿಢೀರ್ ಅಂತ ಈಪಾಟಿ ಲವ್ ಹೆಂಗೆ ಹುಟ್ಕೊಂತ್ರಿ ಸರಾ/ಎಂಥ ಲವ್ರಿ ಇದರಪ್ನ. ಸಿದ್ದು ಬಡಿದ ಬೆಣೆ ಐತಿದ್ರು ಬ್ರದರ್/ಹಂಗಾರ ಇನ್ನು ಮುಂದೆ ಪ್ರತಿ ಹಳ್ಳಿನಾಗೂ ಉಂಡು ಮಕ್ಕಣೋ ಯೋಚ್ನೆ ಹಾಕಂಡಿರೇನ್ರಿ? ಸಿದ್ರಾಮನ ಕ್ಷೇತ್ರದಾಗಳ ಹಳ್ಲಿ ಸುತ್ತಿದ್ರೇ ಸಾಕಾಗೇತ್ರಿ. ಅಷ್ಟು ಹೊತ್ತಿಗೆ ಯಲಕ್ಷನ್ ಬತ್ತದೆ. ಸಿದ್ರಾಮನ್ನ ಪಲ್ಟಿ ಹೊಡ್ಸೋಕೆ ಇಷ್ಟು ಸಾಕು ಅಂದವರೆ ನಮ್ಮ ಫಾದರ್ರು. ಅವರು ಹೇಳ್ದಂಗೆ ಕೇಳೋದು ನನ್ನ ಪಾಲಿಸಿ/ಅಲ್ರಿ ಸರಾ, ಹಿಂಗೆ ನೀವು ಹಳ್ಳಿನೇ ಹೆಡ್ಕ್ವಾರ್ಟರ್ ಮಾಡ್ಕಂಡ್, ಅಲ್ಲೇ ಬೋರ್ಡಿಂಗ್ ಲಾಡ್ಜಿಂಗ್ ಮಾಡ್ಕೊಂಡದ್ದೇ ಆದ್ರೆ ಇಧಾನ ಸೌಧದಾಗೆ ದರ್ಬಾರ ಮಾಡೋರು ಯಾರ್ರಿ?/ ಸರ್ಕಾರ ನೆಡೆಸೋರಾದ್ರೂ ಯಾರ್ರಿ?/ದಬರಿ ಧರ್ಮು ಇದ್ದಾಗ ಸರ್ಕಾರಿ, ಹಳ್ಳಿತಂಕ ಎಂದಾರ ನಡೆದಿತ್ತೇನ್ರಿ? ಒಂದು ಹೆಜ್ಜೆ ಸತ್ಕೆ ಎತ್ತಿಟ್ಟೋನಲ್ಲ ಆ ಮಾಂಸ ಪರ್ವತ ದಬರಿ ಧರ್ಮು. ಹೌದಂತಿರೋ ಅಲ್ಲ ಅಂತಿರೋ? ಆವಯ್ಯನಿಗೆ ಕಂಪೇರ್ ಮಾಡಿದ್ರೆ ನಾನೂ ನನ್ನ ಸರ್ಕಾರ ಎಷ್ಟೋ ವಾಸಿ ಅಲ್ವಾ ಬ್ರದರ್/ಕರೆಕ್ಟ್ ಸರಾ. ಕುಲ್ಡು ಗಣ್ಣಿಗಿಂತ ಮೆಳ್ಳುಗಣ್ಣು ವಾಸಿ ಅಂತಾರಲ್ಲ ಹಂಗಾ ಸರಾ?/ ಮಡಗ್ರಿ ಫೋನು…ನಾನು ಆರ್ಜೆಂಟಾಗಿ ಮದರಸಾ ಕಡೆ ಹೊಂಟೀನಿ/ಫೋನ್ ಕುಕ್ಕೋ ಮೊದ್ಲೆ ಲೈನ್ ಕಟ್ಟಾತು.
*****
( ದಿ. ೦೫-೧೦-೨೦೦೬)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾತು – ಮೌನದ ನಡುವೆ
Next post ಚೆಂದನೆಯ ಚಂದಿರನ ಚಲನದಾ ಮಾತು

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

cheap jordans|wholesale air max|wholesale jordans|wholesale jewelry|wholesale jerseys