ಕತ್ತಲೆ ಮುಸುಗು
ಮೆಲ್ಲ ಮೆಲ್ಲಗೆ ಬಿಗಿತ ಕಳೆಯುತಿತ್ತು
ಒಳಗಿಂದೊಳಗೆ
ಬೆಳಕಿನ ತೆನೆಯು ಕಾಳುಗಟ್ಟುತಿತ್ತು.

ರಾತ್ರಿ ಬೆಳಗಿದ
ಚುಕ್ಕಿ ಚಂದ್ರರ ಬೆಳ್ಳಿ ಕರಗುತಿತ್ತು
ಲೋಕಾದ ಲೋಕವೆಲ್ಲ
ಹಿತಕರ ತಂಪಿನ ಮಾಡು ಹೊದಿಯುತಿತ್ತು.

ಅಮೃತ ನಿದ್ದೆ
ತೆಕ್ಕೆಯ ಸಡಿಸಲಿಸಿ ಜೀವ ಭಾವವು ಎಚ್ಚರವಾಗುತಿತ್ತು
ನವ ಚೈತನ್ಯದಾಯಿ
ಶುದ್ಧಗಾಳಿಯು ನವಿರಾಗಿ ನರ್ತಿಸತೊಡಗಿತ್ತು.

ಹೊಸತೊಂದು ದಿನದ
ತವಕದ ಬಾಳಿಗೆ ಪಕ್ಷಿ ಸಂಕುಲ ಸಿದ್ದವಾಗುತಿತ್ತು
ಅಂತೆಯೆ ಎಲ್ಲೆಡೆ
ಜೀವ ವ್ಯವಹಾರ ನಿಧಾನವಾಗಿ ಚಾಲನೆ ಪಡಿತಿತ್ತು.

ಅರಿವಿನ ಬೆಳಗು
ಎದೆ, ಮನ ತಟ್ಟಿ ಆತ್ಮವು ಮಲ್ಲಿಗೆಯಾಗುತಿತ್ತು
ಮೂಡಣ ದಿಗಂತ
ರತ್ನ ಕೆಂಪಿನ ಸಾಗರದಲ್ಲಿ ಓಕುಳಿಯಾಡುತಿತ್ತು.

ಕಾವುಳ ಕರಗಿ
ಹೋಮ ಧೂಮವಾಗಿ ಗುಳೆ ಹೋಗುತಿತ್ತು
ಸಸ್ಯ ಸಂಪದವು
ಮಂಜು ಹನಿಗಳ ಮುತ್ತುಗಳಿಂದ ಸಿಂಗಾರಗೊಳುತಿತ್ತು

ಮೂಡುವ ರವಿಯಲಿ
ಮಾತೆಯ ನೊಸಲಿನ ಮಂಗಳ ತಿಲಕದ ಶೋಭೆ ಏರುತಿತ್ತು
ದರ್ಶಕ ಮನಸು
ಆಲೌಕಿಕ ಚೆಲುವಿನ ರಸಪಾಕವನುಂಡು
ದಿವ್ಯಾನುಭೂತಿ ಹೊಂದುತಲಿತ್ತು.
*****