ಸಂಧ್ಯಾ ರಾಣಿಯು ಸುಂದರ ಸ್ವಾಗತ
ನೀಡಿರಲದ ಕೈಕೊಳ್ಳಲು ಸರಿಯುತ
ಉರಿಗಣ್ಣಿನ ರವಿ ಪಶ್ಚಿಮವರಸುತ
ಕಾತರದಾತುರದಲಿ ಮುನ್ನಡೆದಿರೆ
ಹಗಲಿದೊ ಮುಗಿಯುತ ಬಂತು!

ಮನೆಯಲಿ ಮಡದಿಯು ಕಾದಿಹ ಕಾತರ
ತೊದಲು ಕಂದರಾಲಿಂಗನದಾತುರ
ಜನರೆದೆ ತುಂಬಿರೆ ದಾರಿಯ ಸರಸರ
ತುಳಿದಿವೆ ಕಾಲುಗಳವಸರದಿಂದಲಿ
ಹಗಲಿದೊ ಮುಗಿಯುತ ಬಂತು!

ಹಗಲೆಲ್ಲವು ಎದೆರಕ್ತವ ಬಸಿದಿಹ
ಬಾಳಿಗೆ ದುಡಿವವ, ಅದೋ ನಡೆಯುತಲಿಹ
ಒಲವಿನ ಬಿಸಿಯೂಟವ ಕನವರಿಸಿಹ
ಕಾಲಿನ ಚಟಪಟ ವೇಗವೇರುತಿದೆ
ಹಗಲಿದೊ ಮುಗಿಯುತ ಬಂತು!

ಜಗ ಜವದಲಿ ನಡೆದಿದೆ ಮನೆಯೆಡೆ
ಕಂಡ ಕನಸು ನೀಡುವ ಒಲವಿನ ಎಡೆ
ಉಂಡು ನಿದ್ರಿಸುತೆ, ಸಂತಸವನು ಪಡೆ-
ವಾಸೆಯ ಸಿಡಿತದಿ ರಾಗವೇಗದಲಿ
ಹಗಲಿದೊ ಮುಗಿಯುತ ಬಂತು!

ಹೃದಯದ ನೋವಿದೋ ಕಾಲನಡಿಗೆಯನು
ತಡೆದಿದೆ, ಏತಕೆ ಸಾಗುವೆ ನೀನು ?
ನಿನ್ನುಷೆಯಿಲ್ಲದೊಡೆಂತಿರಲೇನು ?
ಇರುಳು ಮುತ್ತಿದರು, ನಡೆ, ಮೆಲ್ಲನೆ ನಡೆ
ಎನುತಿರೆ-
ಹಗಲಿದೊ ಮುಗಿಯುತ ಬಂತು!
*****