ಇಲ್ಲಕಲ್ಲ ಜಾತ್ರ್ಯಾಗ ಕೊಂಡೇನ ಈ ಗಡಿಗಿ
ಜ್ವಾಕೆವ್ವ ತಂಗೆವ್ವ ಜಾರಿಬಿಟ್ಟಿ
ಚಂದೇನ ಚಾರೇನ ಚಕ್ರದುಂಡಿನ ಗಡಿಗಿ
ಜೋಲ್ಹೋಗಿ ಜಲ್ಲೆಂದು ಚಲ್ಲಿಬಿಟ್ಟಿ

ಹಾಡು ಹಾಡಿನ ವಳಗ ಬೋರಂಗಿ ಈ ಹುಡುಗಿ
ಹೊಕ್ಕಾಳ ಗುಂಯ್ಯಂತ ಗುನಗತಾಳ
ಗಡಗೀಯ ಮಾರ್‍ಯಾಳ ಪುರಿಭಾಜಿ ತಿಂದಾಳ
ಚಟಿಗ್ಯಾಗ ಚಾ ಹಾಕಿ ಕುಡಿಯತಾಳ

ಗೆಜ್ಜಿ ಹೆಜ್ಜಿಯ ಇಕ್ಕಿ ಗಡಿಗಿ ನೆತ್ತಿಯ ಕುಕ್ಕಿ
ಉಳ್ಳೋರ್‍ನ ಬಳ್ಳೊಳ್ಳಿ ಅರಿಯತಾಳ
ಸೆರಗು ಗಾಳಿಗೆ ಹಾಸಿ ಕಣ್ಣ ನೀರಲ ಸೂಸಿ
ಮಾರಾಯ್ರ ಹುಚಬೆರಕಿ ಮಾಡತಾಳ

ಗಡಿಗೆವ್ವ ಚಟಿಗೆವ್ವ ಮಗಿಯವ್ವ ಸವುಟವ್ವ
ಕೌವಂತ ಬೌವಂತ ಸಾಯತೀರೆ
ಮ್ಯಾಲೀನ ಉಪ್ಪರಗಿ ಮಾಂತೇಶ ಮಾರಾಯ್ರ
ಹೌವಂತ ಹಾರಿದರ ಉಳಿಯತೀರೆ

ತೇರು ಬಂತೌ ತಾಯಿ ತೂರವ್ವ ಉತ್ತತ್ತಿ
ಗಾಲ್ಯಾಗ ನಿನಗಡಿಗಿ ಒಡೆದುಹೋತ
ಕಾಯಿ ಕೊಬ್ಬರಿ ಆತ ಕಾಯ ಕಪ್ಪರವಾತ
ಗಾಲ್ಯಾಗ ಪಡ್ಡೆಂದು ಸಿಡಿದುಹೋತ
*****