ಗಾಳಿ
ಬಿರುಗಾಳಿಯಾಗಿ ಧೂಳೆಬ್ಬಿಸಿ
ಡಿಕ್ಕಿ ಹೊಡೆದರೆ ಮೋಡಗಳು
ಗುಡುಗು ಸಿಡಿಲು ಮಳೆ

ಬರಿಗಾಳಿ
ಬಿಳಿಮೋಡ
ಬೆರಗುಗೊಳಿಸುವುದಿಲ್ಲ

‘ಹನಿಗೂಡಿ ಹಳ್ಳ’
ನದಿಯಾಗಿ
ಸಮುದ್ರ ಸೇರುವ ಮುನ್ನ
ಸೇರಿಕೊಳ್ಳುವುದು ಒಡಲೊಳಗೆ
ಕಸಕಡ್ಡಿ ಕಲ್ಲುಮಣ್ಣು
ಕೊಡಲು ಬದುಕಿಗೊಂದು
ಬಣ್ಣ

ತಿಳಿನೀರು ತೆಳ್ಳಗೆ
ಬೆಳ್ಳಿಯಂತಾಗುವ ಮುನ್ನ

ಉಪ್ಪು ಕಡಲು
ಸಿಹಿ ನೀರ ಒಡಲು
ಬಿಸಿಲಿಗೆ ಬೆವೆತು
ಆವಿಯಾದರೆ
ಹಗುರಾಗಿ ಆಕಾಶಕ್ಕೇರುವುದು
ಕೊಳೆಯ ಭಾರವ
ಕಳೆದುಕೊಂಡು

ಸೂರ್ಯನಿಂದ
ಬೇಡವೆಂದರೆ ಸಂಗ
ಬದಲಾಗುವುದಿಲ್ಲ ಬದುಕು
ಸುಮ್ಮನೆ ಹಂಗ.
*****