ಈ ನಮ್ಮ ತಾಯಿನಾಡು
ನಿರುಪಮ ಲಾವಣ್ಯದ ಬೀಡು
ಈ ವನದಲಿ ನಲಿದುಲಿವ
ಕೋಗಿಲೆಗಳು ನಾವು
ಪರ್ವತಗಳಲ್ಲೆ ಹಿರಿಯ
ಆಗಸದ ನೆರೆಯ ಗೆಳೆಯ,
ರಕ್ಷೆಯವನೆ ನಮಗೆ, ಅವನೇ
ಮಾರ್ಗದರ್ಶಿ ಗುರಿಗೆ.
ಈ ತಾಯ ಮಡಿಲಿನಲ್ಲಿ-ಸಾವಿರ
ನದಿಗಳೆ ಹರಿಯುವುವು,
ಈ ಸುಂದರ ನಂದನಕೆ
ಆ ಸ್ವರ್ಗವೆ ಕರುಬುವುದು.
ಈ ನೆಲದ ಧರ್ಮವೊಂದೂ
ಕಲಿಸದು ದ್ವೇಷವನೆಂದೂ,
ಭಾರತೀಯರು ನಾವು-ನಮ್ಮೀ
ದೇಶ ಭರತನಾಡು.
*****
’ಸಾರೇ ಜಹಾಸ ಅಚ್ಚಾ’ ಗೀತೆಯ ಭಾವಾನುವಾದ
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.