ನಮ್ಮ ಕರುನಾಡ ಪಾಲಿಟ್ರಿಕ್ಸ್‌ನಗೆ ಇತ್ತೀಚೆಗೆ ಗೆಸ್ ಮಾಡಿದ್ದೆಲ್ಲಾ ಮಿಸ್ ಆಗ್ತಾ ನೆಡಿಬಾರದ್ದೆಲ್ಲಾ ನಡಿಲಿಕತ್ತದೆ ನೋಡ್ರಿ. ಕಪಿಸೇನೆ ಮುಖಂಡ ಪ್ರಮೋದ ಮುತಾಲಿಕನೆಂಬ ಗಡವ ಮುನಿಸ್ಕೊಂಡು ಬಿಜೆಪಿಗೆ ಡೈವೋರ್ಸ್ ಬರೆದೊಗೆದು ಶಿವಸೇನೆ ಮುದುಕನಿಂದ ತಾಳಿ ಕಟ್ಟಿಸಿಕೊಂಡು ಕಮಲದೋರ ಮಾರಿ ಒಣಗಂಗೆ ಮಾಡವ್ನೆ.

ಜೇಲದಾಗಿದ್ದಾಗ ನನ್ನೇ ಆಗ್ಲಿ ನಮ್ಮ ಕಪಿಸೇನೆಯನ್ನೇ ಆಗ್ಲಿ ಉಡ್ರ ಉಪಾಸಿದಿರಾ, ಜೇಲು ಮುದ್ದೆ ಸೈಜ್ ಸರಿಯಾಗೈತಾ ಅಂತ ಬಿಜೆಪಿ ಲೀಡರ್ ಒಬ್ಬನೂ ಒಂದಿನನಾರಾ ಜೈಲ್‌ತಂಕ ಬಂದು ಇಚಾರಿಸ್ಲಿಲ್ಲ. ನಮ್ಮ ಮ್ಯಾಗಿನ ಕೇಸು ಹಂಗೇ ಅವೆ. ಇವರಿಗೆ ಭಜರಂಗಿಗಳ ಬಲ ಬೇಕಾಗೋದು ಯಲಕ್ಷನ್ ಅನೌನ್ಸ್‌ ಆದಾಗ. ಇಂತೋರ್ಗೆ ಗದ್ದುಗೆ ಮ್ಯಾಗೆ ಕುಂಡ್ರಿಸಿ ಕಾಲೊತ್ತೋಬದ್ಲು ನಾವೇ ಯಾಕೆ ಗದ್ದುಗೆ ಮ್ಯಾಗೆ ಕೂರಬಾರ್ದು ಅಂತ ನನ್ನ ಆಪ್ತಮಿತ್ರ ಹುಂಡೇಕಾರ, ಗದುಗಿನ ರವಿಸಿದ್ಲಿಂಗು ತಾವ ಡಿಸ್ಕಸ್ ಮಾಡ್ದೋನೇ ನೇರವಾಗಿ ಮುಂಬೈಗೆ ಹೋಗಿ ಮುದಿಹುಲಿ ಬಾಳಠಕ್ಕರೆ ಪಾದ ಹಿಡಿದು ಶಿವಸೇನೆ ಸೇರಿದ್ದಲ್ಲದೆ ಕರ್ನಾಟಕದಾಗೆ ಶಿವಸೇನೆ ಕಟ್ತಿನಿ ಗದ್ದುಗೆ ಹಿಡಿತೀನಿ ಅಂತ ಛಾಲೆಂಜಿಗೆ ನಿಂತವ್ನೆ. ರಾಜ್ಯದೆಲ್ಲೆಡೆ ಶಿವಸೇನೆ ಕಟ್ಟಬೇಕೆಂಬ ಚಪಲ ಠಕ್ಕಗೂ ಐತೆ. ಆದರೆ ಶಿವಸೇನೆಯ ಹುಲಿ ಮುದಿಯಾಗೈತೆ. ಹಲ್ಲು, ಉಗುರುಗಳು ಉದುರಿ ಪಟ್ಟೆಗಳು ಬ್ಲರ್ ಆಗಿ ಹೇಯೂಗ್ರೇ ಆಗ್ಯವೆ. ಅಲ್ಲೂ ರಾಣೆಯಂತವರು ಎಗೆನೆಸ್ಟ್, ಅದಮ್ಯಾಗೆ ಸೇನೆ ಜವಾಬ್ದಾರಿನಾ ಮರಿ ಹುಲಿ ಉಧ್ಭವ್‌ಗೆ ಟ್ರಾನ್‌ಫರ್ ಮಾಡಲಾಗ್ಯದೆ. ಮರಿಹುಲಿ ಮೊನ್ನೆ ಖುದ್ ಬೆಳಗಾವಿಗೆ ಕಾಲಿಕ್ಕಿ ಮುತಾಲಿಕನಿಗೆ ಕರ್ನಾಟಕದ ಶಿವಸೇನೆಯ ನಾಯಕತ್ವ ವಹಿಸಿಕೊಟ್ಟವ್ನೆ. ಶಿವಸೇನೆ ಅಂದರೆ ತಿಕ ಉರಿದುಕೊಳ್ಳುವ ಕರ್ನಾಟಕದೋರ್ಗೆ ಉದ್ಭವ್ ಕಜ್ಜಾಯ ಹಂಚುವ ಮಾತುಗಳನ್ನು ಆಡವ್ನೆ. ‘ಜೈಮಹಾರಾಷ್ರ ಅನ್ನೋ ಸೂತ್ರ, ಓಗಾಯ್ಸಿ ‘ಜೈ ಹಿಂದೂರಾಷ್ಪ’ ಅಂಬೋ ಸೂತ್ರನೇ ಸುಸೂತ್ರ ಅಂತ ಮೂಗಿಗೆ ತುಪ್ಪ ಹಚ್ಚವ್ನೆ. ಗಡಿ ವಿವಾದಕ್ಕೂ ಎಳ್ಳುನೀರು ಬಿಡಲಿಕ್ಕೆ ರೆಡಿ ಆಗವ್ನೆ. ಆಲಮಟ್ಟಿ ಕದನಕ್ಕೂ ಫುಲ್‌ಸ್ಟಾಪ್ ಇಕ್ಕಿ, ಹಿಂದೂಗಳಾದ ನಾವೆಲ್ಲಾ ಒಂದು ಬಂಧು ಒಂದು ಅಂತ ಹೊಯ್ಕೋತಾ ಬೆಳಗಾವಿನಾಗೆ ಈಗಾಗಲೇ ನಮ್ಮ ಶಿವಸೇನ್ಗೆ ೫೦೦೦ಕ್ಕೂ ಹೆಚ್ಚು ಮಂದಿ ಮೆಂಬರ್ಸ್ ಆಗ್ಯವೆ. ೩೫೦೦ ಜನ ಬಂ. ದಳದೋರು ಬ್ಯಾರೆ ಜಾಯಿನ್ ಆಗ್ತಾ ಅವ್ರೆ ಅಂತ ಉದ್ಭವ್ ಉದ್ದನೆ ಮೀಸೆ ತೀಡವ್ನೆ. ಇತ್ಲಾಗೆ ಪಾಪು ತಮಟೆ ಸದ್ದು ಕೇಳುತ್ಲು ಮುತಾಲಿಕ ಗಾಬರಿಯಾಗಿ ಉಡುಪಿಗೆ ಓಡಿದವ್ನೆ ಕನಕ ಗೋಪುರ ಧ್ವಂಸ ಖ್ಯಾತಿಯ ವಿಶ್ವಪ್ರಿಯನೆಂಬ ಎಳೆನಿಂಬೆ ಪಾದಕ್ಕೆ ಉಲ್ಡು ಬಿದ್ದು, ‘ಪರಮಪಾವನರೆ ಕಾಪಾಡಿ’ ‘ಶಿವಸೇನೆ ಬೆಳೆಸಿ ಉಳಿಸಿ’ ಅಂತ ಗಳಗಳನೆ ಅಳಲಾಗಿ ಬಿಸಿಲಿಗಿಟ್ಟ ಮಂಜಿನಂತಾದ ವಿಶ್ವಪ್ರಿಯನಿಗೆ ರವಷ್ಟು ಕನ್‌ಫ್ಯೂಸ್ ಆಗ್ಯದೆ. ‘ಅಲ್ಲಯ್ಯ ಮುತಾಲಿಕ. ಬಿಜೆಪಿಯಂತಹ ಪಕ್ಷ ಬಿಟ್ಟಾದರೂ ಏಕೆ?’ ಎಂದು ಸಣ್ಣಗೆ ಮುನಿಸು ತೋರವ್ನೆ. ಏನ್ ಮಾಡ್ಲಿ ಮಾಸ್ವಾಮಿ, ನಮ್ಮೋರಾದ ೨೫೦೦ ಮಂದಿ ಕಾರ್ಯಕರ್ತರ ಮೇಲೆ ಕೇಸಿದೆ. ನಮ್ಮಿಂದಲೆ ಗೆದ್ದು ದಿಲ್ಲಿಗೆ ಹೋದ ಪಾಪಿಗಳು ಕನಿಷ್ಠ ಜಾಮೀನು ನೀಡಲೂ ಮುಂದೆ ಬರಲಿಲ್ಲ. ನಮ್ಮಲ್ಲಿ ಕೂಲಿ ಮಾಡೋರು ಅವ್ರೆ. ಅವರಿಗೊಂದಿಷ್ಟು ಕಾಸು ಕೊಟ್ಟು, ಹೆಲ್ಪ್ ಮಾಡ್ಲಿಲ್ಲ. ನಮ್ಮವರಿಗೆ ಯಲಕ್ಷನ್ಹಾಗ ನಿಲ್ಲಾಕೆ ಕನಿಷ್ಠ ಟಿಕೆಟ್ಟೂ ಕೊಡಲಿಲ್ಲ, ಅದಕ್ಕೆ ನಾವೇ ಅವರಿಗೆ ಟಿಕೆಟ್ ಕೊಟ್ಟು ಬಿಟ್ವಿ.’

‘ಆಯಿತು. ನಾವು ಅವರಿಗೆ ಹೇಳುತ್ತೇವೆ.’ ‘ಆಗಲ್ಲ ಬಿಡಿ ಗುರುವೆ, ಗುರುವರ್ಯ ಪೇಜಾವರರಿಗೇ ಉಲ್ಟಾಹೊಡೆದ ಕೃತಜ್ಞರು ನಿಮ್ಮ ಮಾತಿಗೆ ಬೆಲೆ ಕೊಟ್ಟಾರೆ? ರಾಜ್ಯದಾಗೆ ೪೭೬೦ ಹಳ್ಳಿನಾಗೆ ನಮ್ಮ ಸಂಘ ಪರಿವಾರದ ಸಂಘಟನೆ ಇದ್ದವು. ಈಗ ಅವು ಯಾವೂ ಉಳಿದಿರ್ಲಿ. ಹೆಂಗೆ ಉಳಿತಾದ್ ಹೇಳ್ರಿ? ನಾವೇನ್ ಅಡ್ವಾಣಿ ಅನಂತಿಗೇ ಆಗ್ಲಿ ನೌಕರಿ ಕೊಡ್ರಿ ಅನ್ನ ಹಾಕ್ಸಿ ಅಂತ ಕೇಳಿಲ್ಲ. ನಮ್ಮ ಮೇಲೆ ಹಾಕಿದ ಕೇಸ್ಗಳನ್ನು ನಡೆಸೋಕೆ ರವಸ್ಟು ರೊಕ್ಕ ಕೊಡಿ ಅಂದ್ವಿ. ಕಿವಿ ಮ್ಯಾಲೆ ಹಾಕಳ್ಳಿಲ್ಲ’ ಬಿಕ್ಕಿ ಬಿಕ್ಕಿ ಆತ್ತ ಮುತಾಲಿಕ. ನಾವು ಅವರಿಗೆ ಬುದ್ಧಿ ಹೇಳುತ್ತೇವೆ… ಶಾಂತರಾಗಿರಿ.’ ‘ಅವರೆಲ್ಲಾ ಪೂರಾ ಮತಿಗೆಟ್ಟವ್ರೆ ಯತಿಗಳೆ. ೪೦೦ ವರ್ಷಗಳ ಕಳಂಕವನ್ನು ತೊಡೆದು ಡಿಸೆಂಬರ್ ೬ ರಂದು ಮಸೀದಿ ಉಲ್ಡಿಸಿದ್ವಿ. ಡವಟಿದ್ರೆ ಗುರುಗಳನ್ನೇ ಕೇಳಿ. ಆ ದಿನಾನಾ ಶೌರ್ಯದಿನ ಅಂತ ಕರ್ದು ಹಬ್ಬ ಮಾಡಿ ಹಯಗ್ರೀವ ತಿಂತಾ ಇದ್ರೆ; ಈ ಅಡ್ವಾಣಿ ಅನ್ನೋ ಓಲ್ಡ್ ಮ್ಯಾನ್ ಶೋಕದಿನ ಅಂತ ಬೈಬೋದೆ? ಸಾಬಿ ಜಿನ್ನಾನ ಚಿನ್ನ ರನ್ನ ಅಂತ ಮುದ್ದಾಡೋದೆ! ನಮ್ಮ ಹೊಟ್ಟೆ ಉರಿಯೋಕಿಲ್ವೆ ದೇವ್ರು’ ಮುತಾಲಿಕ ಉರಿದುಬಿದ್ದ. ಆದರೂ ವಿಶ್ವಪ್ರಿಯನಿಗೆ ಗುರು ವಿಶ್ವೇಶ್ವತೀರ್ಥರಿಲ್ಲದೆ ಯಾವ ತಿರ್ಮಾನಕ್ಕೆ ಬರೋ ತಾಕತ್ತಾಗ್ಲಿ ಮಾಡೋ ವಿವೇಕವಾಗ್ಲಿ ಇಲ್ಲದ್ದರಿಂದ ಪಿಳಿಪಿಳಿಸುವಂತಾಯಿತು. ಅಂದ ಅವರೇ ವಿಶ್ವಪ್ರಿಯ ಹೋಗಿ ಬನ್ನಿ ಎಂಬಂತೆ ಸನ್ನೆ ಮಾಡಿದ್ದಾನೆ.

ಆದರೆ ಮಧ್ವಯತಿ ವಿಶ್ವಪ್ರಿಯನಿಗೆ ಅದೇಕೋ ಶಿವಸೇನೆಯಲ್ಲಿರುವ ‘ಶಿವ’ ಅನ್ನೋ ವರ್ಡೇ ಅಪ್ರಿಯವೆನಿಸಿ ಹೊಟ್ಟೆತೊಳೆಸಿದಂತಾಗಬೇಕೆ?
*****
( ದಿ. ೨೬-೦೯-೨೦೦೫)