ಹೆಜ್ಜೆಗಳು ಸೋತು ದಿನದ ಸೂರ್ಯ
ಕಂತಿದ್ದಾನೆ ನಾಳೆಯ ಕಾಲವ ನಡೆಸುವ
ರಾತ್ರಿಯಲಿ ಚೆಲ್ಲಿವೆ ನಕ್ಷತ್ರಗಳು ಬಾನತುಂಬ
ಮನದ ಭಾವಕೆ ವಿದಾಯವಲ್ಲ ಇದು
ಹೊಸಹುಟ್ಟು ತೆರೆದುಕೊಳ್ಳುವ ಬಸಿರು
ಬಾಹು ಬಂಧನಗಳು ಹರಡಿವೆ ಇಳೆಯಲಿ.

ಸಿದ್ಧಾರ್ಥನ ಹುಡುಕಾಟದ ಕಳವಳ
ಎತ್ತಿ ಕುಡಿದ ಬಾಹುಬಲಿ ಯಾವುದು
ಸತ್ಯ ಈ ತಿಳಿಗೇಡಿ ವಿಸ್ಮಯ ಲೋಕದಲಿ
ನಿದ್ರೆಗೆ ಅಮಲು ಬರಿಸುವ ಸಂಜೆಯಲಿ
ಹಕ್ಕಿಗಳು ಹಾರಿವೆ ಹಿಂಡು ಹಿಂಡಾಗಿ
ಗೂಡು ಅರಸುತ್ತ ಅಲೆದಿವೆ ನಿರಂತರ ಸನ್ನೆಗಳಲಿ.

ಹತ್ತಿರ ಸುಳಿದಾಡಿದ ಸ್ತರಗಳು
ಸೋಕಲಿಲ್ಲ ಹೃದಯದ ಬಾಗಿಲುಗಳಲಿ
ಕೈ ತಟ್ಟಿ ತಪ್ಪಾಳೆ ತಟ್ಟದವರು ಹೀಗೆ
ಸರಳವಾಗಿ ಒಳ ಬಂದು ನಗಲಿಲ್ಲ ಒಂದು ತಿಳಿನಗೆ,
ಜ್ಞಾಪಕವಿಲ್ಲದೆ ಹಾಡುಗಳು ಒಮ್ಮೆಲೇ
ಒಲಿದು ರಾಗಗಳಾಗುವುದಿಲ್ಲ ರೀತಿ ರಿವಾಜಗಳು.

ನದಿಯಲಿ ರಮಿಸುತ್ತ ಸಾಗಿವೆ
ಬೆಳಕಿನ ಬೀಜಗಳು ಸಂತೆಯಲಿ
ಸಂತನೊಬ್ಬ ಸರಿದ್ದಾನೆ ಯಾರಿಗೂ ತಿಳಿಯದಂತೆ,
ಕಂದೀಲು ಒರೆಸುವ ಕೈಗಳು ಅಲುಗಾಡಿವೆ
ಪಾರಿವಾಳಗಳು ಸತ್ತಿವೆ ಗೇಟವೇ ಆಫ್ ಇಂಡಿಯಾದಲಿ,
ಉಲ್ಕಾಪಾತದ ಕತ್ತಲೆಯಲಿ ಹೊಸದಾರಿಗಳು
ತೆರೆದುಕೊಂಡಿವೆ.
*****

Latest posts by ಕಸ್ತೂರಿ ಬಾಯರಿ (see all)