ಏಕೋ, ಏನೋ ತಿಳಿಯದೆನಗೆ
ತಿಳಿವು ದೋರೋಯುಷೆ ದಾರಿಯು,
ಒಂದೆ ಬೇರಿನ ರೆಂಬೆಕೊಂಬೆಗೆ
ರಂಗು-ರಂಗುದಳ ಭಿನ್ನ ಮಾಯೆಯು |

ಈ ನೆಲವು, ಜಲವು, ಗಾಳಿ ಪುಣ್ಯವು
ಸಂಭವಿಸೋ ಯುಗ-ಜುಗ ದೈವಕೆ,
ಯಾವ ಮತಿಯತಿಮತಿ ಮೌಢ್ಯ ಸರತಿಯೋ
ಜನ-ಮನಕೊಂದೊಂದು ದೈವ ಪೀಠಿಕೆ |

ಶತ ಶತಗಳ ‘ಮಾನ’ಕಳೆದರೂ
ದೇವ-ದೇವಗೆ ಸಗ್ಗದೌತಣ,
ಮೂರ್ತಿ-ಮೂರ್ತಿಯ ಸಾಲ ಭಂಜಿಕೆ
ಮಾರಿ ಮಸಣದ ಕಾರಣ |

ಮಠ, ಮಂದಿರ, ಚರ್ಚು ಸ್ತೂಪ ಮಸೀದಿಗಳಲು
ಮಾರ್ಜಾಲ, ಹೆಗ್ಗಣ, ಮೂಷಿಕ,
ಗುರು, ಸಂತ, ಬಾಬಾ, ಮಾ ಮಾತೆಯರಲು
ಸ್ವಾರ್ಥ ಸುಖದಾ ಕೌತುಕ |

ಒಂದೇ ದೈವದ ಹಲವು ನಾಮಕುಽ
ಆಕಾರಾಕಾರದ ಸಾಕಾರವು
ಇಂದುಽ ಯಾರೂಽ ತೋರಬಲ್ಲರೋ
ಅಮೂರ್ತ ದೇವನ ನಿರ್ವಿಕಾರವು

ಬಿಸಿಲಗುದುರೆ ಸವಾರಿಯಲ್ಲಿ
ಸಾಗಬಹುದೆ ಸಗ್ಗಲೋಕಕೆ
ಬಿಸಿಲ ಹೊಳೆಯ ತೀರ್ಥದಲ್ಲಿ
ಕಾಣಬಹುದೆ ನಾಕ ಸಜ್ಜಿಕೆ |
*****