ಆಕಾಶದೊಡಲೊಳಗಲ್ಲಲ್ಲಿ
ಶಾಪಿಂಗ ಸ್ಟಾಪ್‌ಗಳಿದ್ದಿದ್ದರೆ….
ಪರ್ಸ ತುಂಬಾ ಡಾಲರ್‍ಸ್
ಡ್ಯೂಟಿ ಕೊಟ್ಟರೂ ಪರವಾಗಿಲ್ಲ
ಬೇಕಾದಷ್ಟು ಸಿಲ್ಕೀ ಕಾಸ್ಮೆಟಿಕ್ಸ್
ಬಣ್ಣಬಣ್ಣದ ಬಟ್ಟೆಗಳು ಡೈಮಂಡ ಸ್ಟಾರ್‍ಸ್
ಕಾಮನಬಿಲ್ಲು ಏನೆಲ್ಲ ಪ್ಯಾಕ್ ಮಾಡಿಸಬಹುದಿತ್ತು.
ಅಲ್ಲಲ್ಲಿ ಸ್ಟಾರ್ ಹೊಟೇಲ್ ಗಳಿದ್ದು
ಒಳಗೆ ಕಾಫಿಶಾಪ್ ಕೇಕ್ ಶಾಪ್
ಇಂದ್ರ ಅಪ್ಸರೆಯರ ಚಿತ್ರಗಳಿದ್ದಿದ್ದರೆ
ಒಂದೆರಡು ದಿನಗಳು ಹಾಲ್ಟ್ ಮಾಡಬಹುದಿತ್ತು.
ಆಕಾಶದ ಹಾಸಿಗೆ; ಮೋಡಗಳ ತಲೆದಿಂಬು-
ಚುಕ್ಕಿಯ ಹೊದಿಕೆ, ಕನಸಿಗೊಬ್ಬ ಚಂದ್ರ-
ಇನ್ನೇನು ಬೇಕಿಲ್ಲ
ಮಳೆಯೊಳಗೆ ತೊಯ್ದು ತಪ್ಪಡಿಸಿ
ಬೆಚ್ಚಗಾಗಲು ಹೇಳಿ ಮಾಡಿಸಿದ ತಾಣ
ಮಧುಚಂದ್ರದವರಿಗೆ-
ಅಲ್ಲಲ್ಲಿ ನಿಲ್ದಾಣಗಳಿದ್ದಿದ್ದರೆ….
*****


















