ಹಳೆಯ ನಾಣ್ಯ

ಇನ್ನುಮೇತಕೆ ನಿನ್ನ ಮುಸುಕು ಮೌನವ ತೊರೆಯೆ?
ಮುಚ್ಚಾಲೆಯಾಡಿ ದೊಲ್ಲಯಿಸುವೇಕೆನ್ನ?
ತಳಮಳಿಪುದೆನ್ನ ಮನ ನಿನ್ನ ತೆರೆಯಂ ಹರಿಯೆ-
ನಿಲುಕದಲೆ ತಡೆವೆ; ಬುಲ್ಲಯಿಸುವೇಕೆನ್ನ? ೪
ಸೊಲ್ಲಿಲ್ಲದುಲಿಗಳಿಂದುಲಿವ ನಿನ್ನಯ ಸೊಲ್ಲ
ಸೆಲೆಯಿಂದ ಹಾಡುಲಿಯ ಬಲ್ಲುದೇನೆನ್ನ? –
ಸರಿಗೆ ಕುಕಿಲಿನ ಕೊರಳ ಕನಸನೆತ್ತಲು ಸಲ್ಲ!
ಕೊಳದ ಪಡಿವೆರೆಯಂಬರದ ಚಂದ್ರನೆನ್ನ? ೮
ಏಗಾಲಮಿಂತು ವೆಂಟಣಿಸಿ ನೀ ಮುದಿಯ
೧ಮರಿಯಂತೆ ಕಾವೆ ಪಳನನಸಿನೀ ನಿಧಿಯ?
ನಿನಗಲ್ಲದರ್‍ಥದಿಂದೇವಾಳ್ತೆ ನಿನಗೆ?-
ಹೆರರ್ಗೀರ್‍ಥಯದರ್‍ಥಮದು ದೊರೆವುದೇಂ ತನಗೆ? ೧೨

ನೀನೆನಿತೊ ಚರಿತಕಾರನಿಗೀವೆ ಸಂತಸವ!-
ಚೊಚ್ಚಲನ್ನೀಯೆ ಸನಿಹಿಸಿದ ತಾಯ್ಮೊಗಸಂ,
ದೂರದಿಂ ನಳಿನಿಯೊಳಸೋನಿನಳಿನಿಯ ಪಸವ
ನದರ ಸರಿದೂಗೆ ಮಿಗುಗುಮೆಯವನ ಸೊಗಸಂ? ೧೬
ನೋಂತಿರುವೆ ನೀ ಮೌನಮಾದೊಡಂ, ಮುಂದಾರೆ
ಭಾಸ್ಕರನ ಬಿಜಯದುಕ್ಕಡವ ತೆರೆವಂತೆ,
ನನಸು ಕನಸುಗಳ ದರ್‍ಶನವನೇಂ ತರಲಾರೆ,
ಬಿಂಗುಸುಬು ಬಂಗಾರದಿರವನೊರೆವಂತೆ? ೨೦
ಹಸುರು ಮಸಿಯಿಂ ಬರೆದುದಿದರ ಬಿನ್ನಣಮೇಂ?
ನಿನ್ನ ಕವನಕೆ ಕಾಲನಿಟ್ಟ ಟಿಪ್ಪಣಮೇಂ?
ಮುನ್ನನಿಂದಿಗೆ ಸಾಲವಿತ್ತ ಬರವಣವೂ?
ನಿಚ್ಚತೆಗೆ ನಮ್ಮನೋಲಯಿಸುವವುತಣವೊ? ೨೪

ಕಂಡ ಚೆಲುವಿನಿದು, ಕಾಣದ ಚೆಲುವು ಮಿಗಿಲೆನಲು,
ಕನಸು ಕಂಗಳಿಗೆ ಸಿಲುಕಿದ ಚೆಲುವು ಕಿರಿದೆ?
ಅದುಕತದಿ ನಿನ್ನ ಸಸಿನೆದೆಯೊಳೋರೆಮೆಯ ನಲು
ಮೆಯ ನೀಡ! ಕನಸುಕಾಂಬೆನು ನಿನ್ನನಿರದೆ! ೨೮
ಭೋರ್‍ಗರೆವ ಕಡಲ ನಿಸ್ಸೀಮ ಕೋಲಾಹಲಂ
ಶಂಖದೆಣೆಮುರಿಯ ಸುಳಿಗದ್ಗದಗಳಲ್ಲಿ,
ಉರಿದು ಪೊಡೆದಬ್ಬರಿಪ ಸಿಡಿಲ ದಾಹಾನಲಂ
ಮಿಂಚುಹುಳುವಿನ ಮಿಣುಕು ಕಿಡಿಕಿಡಿಗಳಲ್ಲಿ ೩೨
ಬಿನ್ನನೆಚ್ಚರುವಂತೆ, ಸೋಜಿಗದ ಸುಳಿವಂ
ಕಾಣದಂತೆನಿತೊ ಬಚ್ಚಿಹೆ ಬದುಕಿನೊಳವಂ
ಕಡೆಗಣ್ಣ ಕೂಡಲಿಂದರಿವಂತೆ ನಲ್ಲೆ,
ನಿನ್ನೊಳವನೇತರಿಂ ನಾನರಿಯಬಲ್ಲೆ? ೩೬

ಆವ ಮರಮಿದು? ಮರದ ಬುಡದೊಳಿಹ ನೀನಾರು?
ಸಕಲ ರಿತುವೊಳು ಪೂವ ಪಣ್ವ ಮರಮೇನು?
ಒಂಟಿ ಕುಕಿಲಿದು ಕೂಗದೇಕೆ? ಬಿರಿನನೆ ನಾರು
ಬೀರದೇಂ? ತಟಕದೀ ಎಲೆವನಿ ಇದೇನು? ೪೦
ಎಲೆ ಮರುಳೆ, ನಡುಗಟ್ಟಿ ವೀರಮಂಡಿಯನಿಕ್ಕಿ
ಬಲಗೆಯ್ಯಿನೆಳೆದು ಕಿವಿಗಾನಿಸುವೆ ಸರಳಂ!
ಬರಿದೆ ಪೇಚಾಡದಿರು, ನಿನ್ನಂಬು ಹೆದೆಮಿಕ್ಕಿ
ಮಿಸುಕದೈ! ಮೇಣಿರಿಗುಮೆಂತರಿಯ ಕೊರಳಂ? ೪೪
ಆದೊಡಂ ಮರುಗದಿರು, ನಿಕ್ಕುವಂ ಮುನ್ನೆ
ನಿನ್ನ ಪಗೆಯಳಿವೋದನಾತನಂ ನೀನೆ
ತರಿದೆಯೆಂದಣಿಯರಂ ತಣಿಯದೊಡಮಿನ್ನು
ಪೆರತಂಬನೆಸೆಯ ಬೇಕೆಂದಿಲ್ಲ ನೀನು! ೪೮

ಏನ್ನೇರಿದನೊ ಕುಡಿಯಲೀಯಲೊಂದೇ ಸಲಂ
ನಿನ್ನ ಮಿರುಮದಿರೆಯಾ ಕಿಣ್ಣದಿನಿಸಾನುಂ-
ಬೇರೊಡಲನಾಂತೊಡನೆಯಪ್ಪೆನಂಗನೆ ವಲಂ
ನಿನ್ನಚ್ಚಿನರಸನರಸತಿಯಾಗಿ ನಾನು! ೫೨
ಬಳಿಕಿಂತೊರೆವನೆರೆಯ ನಾಣ್ಯವಿದರೊಮ್ಮೊಗದಿ
ನೆದ್ದು ಬರುತಿದೆ ಕಣಾ ಪುತ್ತಳಿಗೆ ನಿನ್ನ!
ಅಕ್ಕರದ ಕರಡು ಗೀಚೇಕ ಬೆನ್ನಲಿ? ಪೊಗದಿ
ಬೆಲೆಯೇರದಿಹುದೆ ಕೆತ್ತಿಸೆ ಚಿತ್ರವೆನ್ನ? ೫೬
ನಮಗಂದಿನಿಂದಗಲ್ಕೆಯಲ್ಲರಗಳಿಲ್ಲ!
ಅಳಿವಾದೊಡಂ ನಡುವೆ ಬರಲಾರ್‍ತನಲ್ಲ!
ನಿಚ್ಚತೆಯ ಸೆಳವಿನೀ ತೇಲುದೀವಿಯಲಿ!
ಕಾಲನಂ ಮೂದಲಿಸುತಾಳ್ವ ಠೀವಿಯಲಿ! ೬೦

ಕೆಂಗರಿಗನುದಿರ್‍ಗರಿಯನೆಲರ ಸೀಗುರಿಯೆಂದು
ಮರೆತದಂ ಬರೆಯೆ ಲೆಕ್ಕಣಿ ಎಸಗುವನ್ನ,
ಕಾಲ ರೆಕ್ಕೆಯ ಕಾಲನಿಂದುದಿರ್‍ದ ಗರಿಯೆಂದು
ನಿನ್ನನರಿಯದರೆಂತು ಬಳಸಿದರೊ ನಿನ್ನ? ೬೪
ಇನ್ನೆವರಮೆಲ್ಲೆಲ್ಲಿ ತೊಳಲ್ದೆ? ಏನೇಂ ಗೇದೆ?
ನಿನ್ನ ನೀರಿಂದಾರ ಬೆಸಲಳಲ ತೊಳೆದ?
ಆವಾವ ಲಲನೆಯರ ಮುತ್ತಯ್ದೆತನಕಾದೆ?
ಕವಿಯಾರದೆಳಗೂಸಿನೊಳಗುಟ್ಟ ಸೆಳೆದೆ? ೬೮
ಆವಾವ ಹರಕೆಗಳ ಕಾಣಿಕೆಗೆ ಸಂದೆ?
ಬೇಹರವನ್ನೆಲ್ಲೆಲ್ಲಿ ಸಲುವಳಿಗೆ ತಂದೆ?
ನಿನ್ನೊಡಮೆಯಿಂದಾರಿನೇನ ಮಾಡಿಸಿದೆ?
ಆರ ತೊರೆದೆಂತು ಮನೆಮನೆಯ ಬೇಡಿಸಿದೆ? ೭೨

ನಿನ್ನ ತಾಯ್ಗನಿ ಎಲ್ಲಿ? ಅಗೆದ ಗುದ್ದಲಿ ಎಲ್ಲಿ?
ಕರಗಿಸಿದ ಕೋವೆ, ಬಡಿದದ್ದಗಣಿ ಎಲ್ಲಿ?
ಹುಯ್ದ ಪಡಿಯಚ್ಚೆಲ್ಲಿ? ತಿಕ್ಕಿದರದಲಗೆಲ್ಲಿ?
ಕೆತ್ತಿದುಗುರುಳಿಯೊಪ್ಪನಿತ್ತ ಮಣಲೆಲ್ಲಿ? ೭೬
ನಿನ್ನ ಮೋರೆಯ ಮೋರೆಯುಳ್ಳರಸನಿಂದೆಲ್ಲಿ ?
ಅವನ ನಾಡವನ ಸಿರಿ ಹೆಚ್ಚಳಗಳೆಲ್ಲಿ?
ನೀಂ ಬಳಸಿದಾವಾವ ದೇಶಕಾಲಗಳೆಲ್ಲಿ?
ಬೊಕ್ಕಸದಿ ನಿನ್ನನಿಕ್ಕಿದ ಹರದರೆಲ್ಲಿ? ೮೦
ನಿನ್ನನೊಡ್ಡುತ ದುಡಿದ ಪಲ ಬಯಕೆ ಎಲ್ಲಿ?
ನಿನ್ನ ಪದೆವಂದೆರೆದ ಬಡ ತಿರುಕರೆಲ್ಲಿ?
ನಿನ್ನ ಕಂಡವರೆಲ್ಲ? ಬಳಸಿದವರೆಲ್ಲಿ?
ಅವರನಿಬರೆಲ್ಲಿ? ನೀನೊರುವನೇನಿಲ್ಲಿ? ೮೪

ನಿನಗೆ ಸಾವಿಲ್ಲ! ಒದವಿದೆಯಲ್ತಳಿಯಲೆಂದು-
ಮೆಯ್ವಡೆದ ಮೌನ ನೀ! ಮೌನಕಳಿವುಂಟೆ?
ಗಳಹು ತಾನ್ಮೆಯಿನಿಂದನಕಟ ನಾಮ್ಮರೆವಂದು,
ನಿನ್ನ ತಿಳಿ ತಾಳ್ಮೆ ಎಂದುಂ ಮಾಸಲುಂಟೆ? ೮೮
ಎನಿತಿರವನೆನಿತರಿವನಡಸಿ ನೀನಯ್ತಂದೆ,
ನೀನುಮವರೊಂದೆಂಬ ಮರುಳ್ತನವನೊಲ್ಲೆ!
ಅಂದಂದು ಹೆರೆಕಳಚಿ ಬಿಡುವ ಹಾವ್ವೆರಮೊಂದೆ-
ಹೆರೆವಾವೆರಳ್ತನದ ನೆರವ ನೀ ಬಲ್ಲೆ! ೯೨
ತಾನ್ಮೆಯಿಂದಳಿವೆಂದು ಬಲ್ಲ ನಿನಗಳಿವೆ?
ಮೌನಕಳಲುಂಟೆ? ತಾಳಿಮೆಗುಂಟೆ ಹಳವೆ?
ಮೌನದಿಂ ಮೂಗಾಲಮಂ ತಾಳ್ದ ನಿನ್ನ
ಮುಂದೆಮ್ಮದಲ್ತೆ ಗುಳ್ಳೆಯ ಗಳಿಗೆಯನ್ನ? ೯೬

ಕವಿಯೊರೆಯೊಳಿನ್ನೆರಕೆಗೊಳದ ಭಾವನೆಯನ್ನ
ಮೇತರ ಭವಿಷ್ಯತೆಗೆ ಕಾವೆ ಮೆಯ್ದೋರೆ?
ಅಂದಂದು ಪಡೆವಡಂದಂದಿನಾ ಬೆಳಕನ್ನ,
ಇಂದಿನೆಮ್ಮಯ ಬೆಳಕೊಳೇಕೆ ಕೆಯ್ಸಾರೆ? ೧೦೦
೨ಹೊನ್ನಗಾವರದಿಂತು ಮನಕಿವುಡರೆಮಗಿಂದು
ಕೇಳಿಸುವುದೆಂಬೆಯೇಂ ತನ್ನೊಸಗೆ ಎಂತು?
ಕೇಳ ಕಿವಿಯುಳ್ಳವಂ ಕೇಳದಿರನವನೆಂದು
ಮೆಚ್ಚರಿಸು ನಿನ್ನೊಸಗೆಯಿಂದೆಮ್ಮನಿಂತು- ೧೦೪
‘ಮೌನದಿಂ ನಿನ್ನೊಳಗುನನ್ನಿಯಂ ನೋಡು,
ತಾನ್ಮೆಯಂ ಬಿರಿದು ತಾಳ್ಮೆಯಿನದಂ ಕೂಡು!-
ಚಿಪ್ಪಿನಾ ಮುಚ್ಚಿಕೆಯೊಳುಪ್ಪಹುದು ಮುತ್ತು,
ಕತ್ತಲಂ ತಾಳ್ದಿರುಳು ಮೂಡುವುದು ಹೊತ್ತು!’ ೧೦೮
*****
೧ ಸರ್‍ಪ
೨ ಹಣವನ್ನು ದುಡಿವ ಗದ್ದಲ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಈಚೀಚೆ…
Next post ಅಪಾಯಗಳಿಗೆ ಮುನ್ಸೂಚನೆ ನೀಡುವ ಪ್ರಾಣಿಲೋಕ!

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…