ಉತ್ತರಣ – ೧೩

ಉತ್ತರಣ – ೧೩

ವಿಧಿಯಾಡಿದ ಆಟ

ಎಲ್ಲಾ ನಿಶ್ಚಯಿಸಿ ಅಚಲ ರಜೆ ಮುಗಿಸಿ ಹೊರಟು ಹೋದಾಗ ಪ್ರೇರಣಾಳಿಗೆ ಕನಸಿನ ಸಾಮ್ರಾಜ್ಯ ನಿರ್‍ಮಾಣವಾಗಿತ್ತು. ಈಗ ಹೆಚ್ಚಿನ ಸಮಯವೆಲ್ಲಾ ಸುಶೀಲಮ್ಮನ ಜತೆಗೆ ಕಳೆಯುತ್ತಿತ್ತು. ಅವರಿಗೆ ಎಲ್ಲಾ ರೀತಿಯಲ್ಲೂ ಸಹಾಯಕಳಾಗಿ ನಿಲ್ಲುತ್ತಿದ್ದಳು ಪ್ರೇರಣಾ. ನಿರುಪಮಾ ಈಗ ಎಲ್ಲರಿಗೂ ಕೇಳಿಸುವಂತೆ ಅವಳನ್ನು ತಮಾಷೆ ಮಾಡುತ್ತಿದ್ದಳು. ಅಚಲ ಈ ಬಾರಿ ಬಂದಾಗ ಮನೆಗೊಂದು ಟಿವಿ ತಂದಿಟ್ಟು ಹೋಗಿದ್ದ. ಎಲ್ಲರಿಗೂ ಇದರಿಂದಾಗಿ ಆನಂದವೇ. ಸಮಯ ಕಳೆಯಲು ಒಂದು ಒಳ್ಳೆಯ ಸಾಧನ. ಜಗತ್ತಿನ ಯಾವ ಮೂಲೆಯಲ್ಲಾದರೂ ಏನಾದರೂ ವಿಶೇಷ ನಡೆದರೆ ಮನೆಯಲ್ಲಿ ಕುಳಿತು ನೋಡುವುದರಲ್ಲಿ ಯಾರಿಗೆ ಆಸಕ್ತಿಯಿಲ್ಲ? ನಿರುಪಮಾಳಿಗಂತೂ ಶನಿವಾರ ಆದಿತ್ಯವಾರದ ಸಿನಿಮಾ ನೋಡುವುದರಲ್ಲಿ ವಾರಗಳು ಉರುಳುವುದೇ ತಿಳಿಯುತ್ತಿರಲಿಲ್ಲ. ಗೆಳತಿಯರಿಬ್ಬರೂ ತಪ್ಪದೇ ಆ ಎರಡು ದಿನಗಳಲ್ಲಿ ಪ್ರಸಾರವಾಗುವ ಸಿನಿಮಾಗಳನ್ನೆಲ್ಲಾ ನೋಡುತ್ತಿದ್ದರು.

ವರುಷ ವರುಷವೂ ಡಿಲ್ಲಿಯಲ್ಲಿ ನಡೆಯುವ ಪ್ರಜಾಪ್ರಭುತ್ವದ ದಿನದ ಮೆರವಣಿಗೆಯ ಅಂದವನ್ನು ಓದಿ ತಿಳಿದಿದ್ದ ರಾಮಕೃಷ್ಣಯ್ಯನವರಿಗೆ ಈ ವರುಷದ ಪೆರೇಡ್ ಮನೆಯಲ್ಲೇ ಕೂತು ನೋಡುವಂತೆ ಆದದ್ದು ತುಂಬಾ ಸಂತಸ ತಂದಿತ್ತು. ಡಿಲ್ಲಿಗೆ ಹೋಗಿ ನೋಡುವ ಅವಕಾಶ ಸೊನ್ನೆ. ಆದರೆ ಮನೆಯಲ್ಲಿ ಕುಳಿತು ನೋಡುವುದೇನೂ ಕಡಿಮೆ ಆನಂದದಲ್ಲ. ಬೇರೆ ಬೇರೆ ದಳದವರ ಪೆರೇಡ್ ಆಗುತ್ತಿರುವಾಗ ಎಲ್ಲರೂ ಕಣ್ಣರಳಿಸಿ ಅಚಲನೆಲ್ಲಾದರೂ ಕಾಣುವನೇನೋ ಎಂದು ಇಣುಕಿದ್ದೆ ಇಣುಕಿದ್ದು, ಅವನೆಲ್ಲೂ ಕಾಣದಾಗ ಎಲ್ಲರಿಗೂ ನಿರಾಸೆಯೇ.

ರಿಪಬ್ಲಿಕ್ ಡೇ ಪೆರೇಡ್ ಆದ ಸ್ವಲ್ಪ ದಿನದಲ್ಲೇ ಒಂದು ದಿನ ವಾಯುದಳದ ಕುಶಲತಾ ಪ್ರದರ್ಶನವಿತ್ತು. ಇದನ್ನು ನೋಡಲು ಮನೆಯವರೆಲ್ಲರ ಉತ್ಸಾಹ ಹೇಳತೀರದು. ಪ್ರೇರಣಾಳೂ ಇವರ ಜತೆಗೆ ಮೈಯೆಲ್ಲಾ ಕಣ್ಣಾಗಿ ಟಿವಿಯ ಮುಂದೆ ಕುಳಿತಿದ್ದಳು.

ವಿಮಾನ ಹಾರಿಸುವುದು ಮಾತ್ರವಲ್ಲ, ಆಕಾಶದಲ್ಲಿ ಪಲ್ಟಿ ಹೊಡೆಯುವುದು. ವಿಮಾನ ಹಾರಿಸುತ್ತಾ ಬಾಂಬು ಬಿಸಾಡುವುದು, ಧ್ವಂಸ ಮಾಡುವುದು, ಎಲ್ಲಾ ತೋರಿಸುತ್ತಿದ್ದರು. ಅದೆಲ್ಲಾ ಟಿವಿ ಪರದೆಯಲ್ಲಿ ಮೂಡಿ ಬರುತ್ತಿದ್ದ ಹಾಗೆಯೇ ಹಿಂದಿಯಲ್ಲಿ ವೀಕ್ಷಕ ವಿವರಣೆಯನ್ನು ಕೊಡುತ್ತಿದ್ದರು. ಇವರೆಲ್ಲಾ ಕಣ್ಣರಳಿಸಿ ನೋಡುತ್ತಿದ್ದ ಹಾಗೆಯೇ ಒಮ್ಮೆಲೇ ವಿಮಾನಕ್ಕೆ ಹತ್ತುತ್ತಿದ್ದ ಅಚಲ ಕಾಣಿಸಿದ. ಎಲ್ಲರೂ ಒಂದು ಕ್ಷಣ ಸ್ತಬ್ಧರಾದರು. ವೀಕ್ಷಕ ವಿವರಣೆ ಹರಿದು ಬರುತ್ತಿತ್ತು.

‘ಅಬ್ ದೇಖಿಯೇ ವಿಂಗ್ ಕಮಾಂಡರ್ ಮನೋಹರ್ ಕೇ ಮಶಹೂರ್ ಫ್ಲಾಯಿಂಗ್, ಉಸ್‌ಕೇ ಸಾತ್ ಚಲನೇ ವಾಲಾ ಹೈ, ಎಕ್ ಖೂಬಾ ಸೂರತ್ ನೌಜವಾನ್, ಸಬಸೇ ಚೋಟಾ ಫೈಲಟ್. ಉಸಕಾ ನಾಮ್ ಬತಾನಾಹೀ ಹೋಗಾ. ಓ ಸೌತ್ ಇಂಡಿಯಾಕಾ ನೌಜವಾನ್ ಅಚಲ್, ವಿಂಗ್ ಕಮಂಡರ್ ಮನೋಹರ್ ಏಕ್ ಬಡಾ ಧೈರ್ಯಶಾಲೀ ಅದಮೀ ಹೈ. ಉಸ್‌ ಸಾತ್ ಟ್ರೈನಿಂಗ್ ಲೇಕರ್‌, ದಿ ಮೋಸ್ಟ್ ಎನರ್‌ಜೆಟಿಕ್ ಯಂಗ್ ಮ್ಯಾನ್ ಅಚಲ್ ಬಹುತ್ ದಿನೋಂಸೆ ಅಪನಾ ಕುಶಲತಾ ಸೇ ಸಬಕೋ ಆಶ್ಚರ್ಯ ದಿಕಾತಾ ಆ ರಹಾ ಹೈ. ಆಪ್ ಭೀ ದೇಖಿಯೇ ವಿಂಗ್ ಕಮಾಂಡರ್ ಮನೋಹರ್ ಕೊ ಇಸಕೇ ಪ್ಯಾರಾ ಅಚಲ್ ಕೇ ಸಾತ್!’

ಇಬ್ಬರೂ ವಿಮಾನದಲ್ಲಿ ಹತ್ತಿ ಕುಳಿತಾಗ ಸುಶೀಲಮ್ಮ ಸಂತಸದಿಂದ ಬಿಕ್ಕಿ ಬಿಕ್ಕಿ ಅಳಲೇ ಶುರು ಮಾಡಿದ್ದರು.

ವಿಮಾನ ಮೇಲಕ್ಕೇರಿ ಮೂರು ಬಾರಿ ತಿಪ್ಪರಲಾಗ ಹೊಡೆದು ಹಾರಿದಾಗ ಯಾರೊ ಕೆಳಕ್ಕೆ ಧುಮುಕಿದ ಹಾಗೆ ತೋರುತ್ತದೆ. ಪಾರಾಡ್ಯೂಟ್ ಬಿಡಿಸಿಕೊಂಡು ನೆಲದತ್ತ ಧಾವಿಸುತ್ತಿರುವ ಮನುಷ್ಯನನ್ನು ಎಲ್ಲರೂ ಉಸಿರು ಬಿಗಿ ಹಿಡಿದು ನೋಡುತ್ತಾರೆ. ನೆಲ ತಲಪಿದೊಡನೆ ಒಮ್ಮೆ ಉರುಳಿ ಅಷ್ಟೇ ಚಾಕಚಕ್ಯತೆಯಿಂದ ಎದ್ದು ನಿಂತ ಭವ್ಯ ನಿಲುವನ್ನು ನೋಡಿ ನಿರುಪಮಾ “ಅಚ್ಚಣ್ಣ” ಎಂದು ಕಿರುಚುತ್ತಾಳೆ. ಅದೇ ಸಮಯಕ್ಕೆ ಸರಿಯಾಗಿ ಅಚಲ ಟಿವಿ ಕೆಮೆರಾ ನೋಡಿ ನಕ್ಕಾಗ ತಮ್ಮನ್ನೇ ನೋಡಿ ನಕ್ಕಂತೆ ಎಲ್ಲರಿಗೂ ಭಾಸವಾಗುತ್ತದೆ. ಎಲ್ಲರೂ ಜಂಭದಿಂದ ಬೀಗುತ್ತಾರೆ.

ನಮ್ಮ ಅಚಲನೆಷ್ಟು ಜೋರಾಗಿದ್ದಾನೆ! ಎಷ್ಟು ಹುಷಾರಾಗಿದ್ದಾನೆ! ಆಕಾಶದಲ್ಲಿ ಹೇಗೆ ಹಾರಾಡಿ ಲಾಗ ಹಾಕಿ ಕೆಳಗಿಳಿದು ಬಂದ! ಅಚಲ ಸೇರಿ ನಾಲ್ಕು ಐದು ವರುಷ ಆಗಿದೆ ಮಾತ್ರ ಈಗಲೇ ಅವನನ್ನು ಎಷ್ಟೊಂದು ಹೊಗಳುತ್ತಾರೆ! ನಾವೇನಾದರೂ ಅವನು ವಾಯುದಳಕ್ಕೆ ಸೇರುವುದನ್ನು ತಡೆದಿದ್ದರೆ ಎಂಥಾ ಪ್ರಮಾದವಾಗುತ್ತಿತ್ತು. ಅಚಲ ಒಂದು ದಿನ ದೊಡ್ಡ ಮನುಷ್ಯನಾಗಿ ಮೆರೆಯುವುದರಲ್ಲಿ ಉತ್ಪ್ರೇಕ್ಷೆಯಿಲ್ಲ.

ತಂದೆಯ ತಾಯಿಯ ಹೃದಯ ಮಗನನ್ನು ನೋಡಿ ತೃಪ್ತಿ ಪಡೆಯುತ್ತದೆ! ಎಲ್ಲರ ಮುಖದಲ್ಲೂ ವಿಜಯದ ನಾಟ್ಯ! ಇಂಥಾ ಮಗನನ್ನು ಹೆತ್ತೆವಲ್ಲಾ ಎಂದು ಹೆತ್ತ ಹೃದಯಗಳು ಬೀಗಿದರೆ ನಿರುಪಮಾ ಅಣ್ಣನ ಶೂರತನಕ್ಕೆ ಜಂಭ ಪಡುತ್ತಾಳೆ! ಅಲ್ಲೇ ಕುಳಿತಿದ್ದ ಪ್ರೇರಣಾಳ ಹೃದಯಕ್ಕೆ ರೆಕ್ಕೆ ಪುಕ್ಕಗಳು ಹುಟ್ಟಿಕೊಂಡು ಅದಾಗಲೇ ಅಚಲನ ಬಳಿಗೋಡಿಯಾಗಿತ್ತು. ಅಚಲನ ಶೌರ್ಯ ಪ್ರದರ್ಶನ ಅವಳ ಹೃದಯವನ್ನೆಲ್ಲಾ ಸೂರೆಗೊಂಡಿತ್ತು. ಇಂಥಾ ಒಬ್ಬನ ಕೈ ಹಿಡಿಯುವ ಭಾಗ್ಯ ತನ್ನದಾಗಿದೆಯಲ್ಲಾ ಎಂಬ ಸಂತಸದಿಂದ, ಅಭಿಮಾನದಿಂದ ಅಗಲವಾದ ಅವಳ ಕಣ್ಣುಗಳು, ಕೆಂಪೇರಿದ ಕೆನ್ನೆ. ಇವನ್ನು ಅಚಲನೇನಾದರೂ ನೋಡಬಲ್ಲವನಾಗಿದ್ದಿದ್ದರೆ ಅದೇ ವಿಮಾನದಲ್ಲಿ ಸೀದಾ ಬೆಂಗಳೂರಿಗೇ ಓಡಿ ಬರುತ್ತಿದ್ದನೇನೋ!

“ಹೇಗಿದ್ದಾನೆ ನನ್ನಣ್ಣ?” ಎಂದು ನಿರುಪಮಾ ಪ್ರೇರಣಾಳ ಕೆನ್ನೆ ಹಿಂಡಿದಾಗ ಪ್ರೇರಣಾ ನಾಚಿ ನೀರಾಗಿ ತಲೆ ತಗ್ಗಿಸುತ್ತಾಳೆ! ಬಾಯಲ್ಲಿ ಹೇಳಲು ಅವಳಿಗೆ ಶಬ್ದಗಳು ಸಿಕ್ಕಿದರೆ ತಾನೇ?

ಈ ತನಕ ಮಗ ಹುಡುಕಿ ಹುಡುಕಿ ಎಂಥಾ ಕೆಲಸಕ್ಕೆ ಸೇರಿದನಪ್ಪಾ ಎನ್ನುತ್ತಿದ್ದ ಹೃದಯಗಳು ತಮ್ಮ ಇಷ್ಟು ದಿನದ ಯೋಚನೆ, ಅನುಭವಿಸಿದ ಅಪಾರ ನೋವನ್ನು ಮರೆತು ಮನಸಾರೆ ತೃಪ್ತಿ ಪಡೆಯುತ್ತವೆ. ಮಗ ಈಗ ಬರೇ ತಮಗೆ ಮಗನಾಗಿ ಉಳಿದಿಲ್ಲ; ದೇಶದ ಭದ್ರತೆಯ ರಕ್ಷಣೆಯ ನೊಗಕ್ಕೆ ಹೆಗಲು ಕೊಟ್ಟು ಧೈರ್ಯವಾಗಿ ನಿಂತಿದ್ದಾನೆ! ಅವನ ಆತ್ಮಶಕ್ತಿಯ ಒಂದಂಶವನ್ನಾದರೂ ತಮ್ಮಲ್ಲಿ ಒಡಮೂಡಿಸಿಕೊಳ್ಳಬೇಕು ಎಂದು ಇಬ್ಬರೂ ನಿರ್ಧರಿಸಿಕೊಳ್ಳುತ್ತಾರೆ. ಒಬ್ಬ ಮಗ ಜಾಡಿಸಿ ಒದೆದನಾದರೂ ಈ ಮಗ ಪ್ರೇರಕ ಶಕ್ತಿಯಾಗಿದ್ದಾನೆ, ಎಂಬ ಅರಿವು ಇಬ್ಬರಲ್ಲೂ ಧೈರ್ಯದ ಬುಗ್ಗೆಯನ್ನು ಹುಟ್ಟಿಸುತ್ತದೆ.

ಆಮೇಲೆ ಒಂದೆರಡು ದಿನಗಳಲ್ಲಿ ಮನೆಗೆ ಬಂದವರು ಅಲ್ಲಲ್ಲಿ ಭೇಟಿಯಾದವರು ಎಲ್ಲರೂ ರಾಮಕೃಷ್ಣಯ್ಯ ಸುಶೀಲಮ್ಮನನ್ನು ಅಭಿನಂದಿಸುವವರೇ. ಅಚಲನೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಟೀವಿಯಲ್ಲಿ ಅವನನ್ನು ನೋಡಿದ ಮೇಲೆ ಅವನೊಬ್ಬ ಹೀರೋವೇ ಆಗಿ ಹೋದನೆಂದರೆ ಹೆಚ್ಚಲ್ಲ.

ದಿನಗಳೋಡುತ್ತಿವೆ. ಪ್ರೇರಣಾಳ ದಿನಗಳು ಕುಂಟುತ್ತಿವೆ. ಇನ್ನೇನು ಎರಡು ತಿಂಗಳು. ಆಮೇಲೆ ಅಚಲ ಹಾರಿ ಬರುತ್ತಾನೆ. ಪ್ರೇರಣಳ ಕುತ್ತಿಗೆಗೆ ತಾಳಿ ಬಿಗಿಯುತ್ತಾನೆ. ಪುನಃ ಮನೆಯಲ್ಲಾ ಗೌಜಿ ತುಂಬುತ್ತದೆ. ಮದುವೆಯ ಸಡಗರ, ಗಲಾಟೆ, ಗಜಿಬಿಜಿ. ಎಲ್ಲರ ಮನದಲ್ಲೂ ಅದೇ ನಿರೀಕ್ಷೆ, ಅನುರಾಧ, ಪೂರ್ಣಿಮಾ ಅಚಲ ಬರುವಾಗಲೇ ಬರುವವರಿದ್ದರು, ಪ್ರೇರಣಾಳ ಮನೆಯಲ್ಲಿ ಮದುವೆಗೆ ತಯಾರಿ ಶುರುವಾಗಿತ್ತೆನ್ನಬಹುದು. ಮದುಮಗಳಿಗೆ ಒಡವೆ ವಸ್ತ್ರ ಎಂದು ಅವಳ ತಾಯಿ ಓಡಿಯಾಡುತ್ತಿದ್ದರು. ಸುಶೀಲಮ್ಮನೂ ಬೇಕಷ್ಟು ಉಪ್ಪಿನಕಾಯಿ ಹಾಕಿಟ್ಟರು. ಮನೆ ತುಂಬಾ ಜನರಾದಾಗ ಏನಿದ್ದರೂ ಕಡಿಮೆಯೇ. ಅಚಲನ ಮದುವೆಯ ಸಮಯ ಯಾವುದಕ್ಕೂ ಕೊರತೆಯಾಗಬಾರದು ಎನ್ನೋ ಆಸೆ ಅವರದ್ದು. ನಿರುಪಮಾಳಿಗೆ ಗಂಡು ನೋಡುತ್ತಿದ್ದರೂ ಯಾವುದೂ ನಿಘಂಟಾಗಿರಲಿಲ್ಲ. ಇಬ್ಬರದ್ದೂ ಒಟ್ಟಿಗೇ ಮುಗಿಸಬೇಕೆಂದು ಎಲ್ಲರಿಗೂ ಮನಸ್ಸು. ಆದರೆ ಮದುವೆ ಘಳಿಗೆ ಬಂದಾಗಲೇ ಆಗುವುದು. ಎಲ್ಲಾ ಸರಿಕಟ್ಟಾದರೆ ಒಟ್ಟಿಗೆ ಮಾಡುವುದು, ಇಲ್ಲದಿದ್ದರೆ ಸ್ವಲ್ಪ ತಡವಾದರೂ ಚಿಂತಿಲ್ಲ. ಈ ಸಲ ಹಣದ ಅಡಚಣೆಯ ಬಗ್ಗೆ ಯೋಚಿಸುತ್ತಿರಲಿಲ್ಲ ರಾಮಕೃಷ್ಣಯ್ಯನವರು. ಹಾಗೇನಾದರೂ ಕಷ್ಟವಾದರೆ ಮನೆ ಮಾರಲೂ ತಯಾರಿದ್ದರು ಅವರು. ನಿರುಪಮಾಳ ಮದುವೆಯಾದರೆ ಎಲ್ಲಾ ಜವಾಬುದಾರಿಗಳೂ ಮುಗಿದಂತೆಯೇ!

ನಿರುಪಮಾಳ ಜೀವನವೊಂದು ನಿಲುಗಡೆಗೆ ಬಂದರೆ ತಮಗೇಕೆ ಮನೆಯ ಯೋಚನೆ ಎಂದವರ ಯೋಚನೆ, ಅಚಲನಂಥಾ ಮಗನಿರುವಾಗ ತಮ್ಮ ಜೀವನಕ್ಕೇನೂ ಕೊರತೆಯಾಗಲಾರದು. ಅವನ ಆಲೋಚನೆಯೂ ಹಾಗೇ. ಪ್ರತಿ ಕಾಗದದಲ್ಲೂ ಬರೆಯುತ್ತಿದ್ದ. ನಿರುಪಮಾಳ ಮದುವೆಯನ್ನೂ ಮುಗಿಸಿದರೆ, ತಂದೆ ತಾಯಿ, ಹೆಂಡತಿ ಎಲ್ಲರನ್ನೂ ತನ್ನ ಜತೆಗೇ ಕರೆದುಕೊಂಡು ಹೋಗಬಹುದು ಎಂದು.

ಅಚಲನ ಯೋಚನೆಗಳಿಗೆ ಪ್ರೇರಣಾಳದ್ದು ಎದುರಿಲ್ಲ. ಅವಳಿಗೆ ಎಲ್ಲರೂ ತನ್ನವರೇ. ಅವಳೊಂದು ರತ್ನ, ಅಚಲನೆಷ್ಟು ಒಳ್ಳೆಯವನೋ ಅಷ್ಟೇ ತೂಕದವಳು ಪ್ರೇರಣಾ. ಇಂದಿನ ಕಾಲದಲ್ಲಿ ಅಪರೂಪಕ್ಕಷ್ಟೇ ಸಿಗುವ ಹುಡುಗಿ!

ಎಲ್ಲರಲ್ಲೂ ನಾಳಿನ ನಿರೀಕ್ಷೆ. ಅಚಲನ ಮದುವೆಯ ಕನಸು ಎಲ್ಲರ ಮನದಲ್ಲೂ ರಂಗು ರಂಗಾಗಿ ಮೂಡಿತ್ತು. ಸುಶೀಲಮ್ಮ, ರಾಮಕೃಷ್ಣಯ್ಯನವರು ತಮ್ಮ ಪ್ರಾಯವನ್ನು ಹಿಂದಕ್ಕೋಡಿಸಿ ಮದುವೆಯ ತಯಾರಿಯಲ್ಲಿ ತೊಡಗಿದ್ದರು.

ಇಂಥಾ ಒಂದು ನಿರೀಕ್ಷೆ ತುಂಬಿದ್ದ ಸಂಜೆ, ದಿನಗಳನ್ನು ಎಣಿಸುತ್ತಿದ್ದ ಸಂಜೆ, ರಾಮಕೃಷ್ಣಯ್ಯ, ಸುಶೀಲಮ್ಮರು ಆರಾಮವಾಗಿ ಕುಳಿತು ಮಾತಾಡುತ್ತಿದ್ದರು. ತಂದೆ ತಾಯಿಗೆ ಈಗ ಮಾತಾಡಲು ಸುದ್ದಿಯಾದರೂ ಅಚಲನ ಮದುವೆಯದ್ದೇ. ಜತೆಗೆ ನಿರುಪಮಾಳದ್ದು ಏನೂ ನಿಶ್ಚಯವಾಗಲಿಲ್ಲವಲ್ಲಾ ಎಂಬ ಯೋಚನೆಯೂ ಸೇರಿತ್ತು.

ಗಂಡ ಹೆಂಡತಿ ಮಾತಾಡುತ್ತಿರುವಾಗ ಕರೆಗಂಟೆಯ ಶಬ್ದವಾಗುತ್ತದೆ. ನಿರೂಪಮಾಳೇ ಬಂದಿರಬೇಕೆಂದು ಸುಶೀಲಮ್ಮ ಬಾಗಿಲು ತೆಗೆದರೆ, ಎದುರು ಅಂಚೆ ಪೇದೆ ನಿಂತಿದ್ದಾನೆ. ಅವನು ಒಂದು ಟೆಲಿಗ್ರಾಮ್ ಕೊಟ್ಟಾಗ ಸುಶೀಲಮ್ಮನ ಹೃದಯ ನಗಾರಿ ಬಾರಿಸಲು ಪ್ರಾರಂಭಿಸುತ್ತದೆ. ಸಹಿ ಮಾಡಿ ಒಳಗೆ ತಂದು ಬಿಡಿಸಿ ಕಣೋಡಿಸಬೇಕಾದರೇ ಸುಶೀಲಮ್ಮ ಒಮ್ಮೆಲೇ ಕಿರುಚಿ ಸ್ಮೃತಿ ತಪ್ಪಿ ಬಿದ್ದುಬಿಡುತ್ತಾರೆ. ಅದರ ಮೇಲೆ ಕಣೋಡಿಸಿದಾಗ ರಾಮಕೃಷ್ಣಯ್ಯನವರು ಶಿಲೆಯಾಗುತ್ತಾರೆ.

‘ಅಚಲ ತೆಗೆದುಕೊಂಡು ಹೋದ IAF Plane Crash ಆಗಿದೆ. Body ಹುಡುಕುತ್ತಿದ್ದೇವೆ’ ಎಂದು ಆ ಟೆಲಿಗ್ರಾಂ ತಿಳಿಸಿತ್ತು.

ಎರಡು ನಿಮಿಷದ ನಂತರ ನಿರುಪಮಾ ಮನೆಗೆ ಬರುವಾಗ ಮನೆಯ ವಾತಾವರಣವೇ ಅಡಿಮೇಲಾಗಿತ್ತು. ತಲೆ ಬಗ್ಗಿಸಿ ನಿಂತ ಅಂಚೆಯವನು. ಒಳಗಿನ ದೃಶ್ಯ ಅವಳ ದೃತಿಗೆಡಿಸುತ್ತದೆ. ವಿಷಯ ಅರಿವಾದಾಗ ನಿರುಪಮಾಳ ಅಳುವಿಗೆ ತಡೆಯಿಲ್ಲ. ಸುಶೀಲಮ್ಮನ ಕರುಳಿನ ನೋವು, ಅವರ ಒದ್ದಾಟ ವಿಧಿಯ ಕ್ರೂರತನಕ್ಕೊಂದು ಸಾಕ್ಷಿ. ನೆಮ್ಮದಿ ಸಿಗುತ್ತಾ ಬರುವಾಗ ಅದಕ್ಕೆ ಕೊಳ್ಳಿಯಿಟ್ಟ ಆ ವಿಧಿಗೆ ಕಣ್ಣಿದೆಯೇ? ಅಚಲನೆಂದರೆ ಆ ಇಡೀ ಕುಟುಂಬದ ಕಣ್ಣಾಗಿದ್ದ. ದೇವರು ಅದನ್ನು ಕಿತ್ತೊಯ್ದ, ಕಟುಕನಾಗಿ ಬಿಟ್ಟ, ರಾಕ್ಷಸನಾಗಿಬಿಟ್ಟ, ಕಣ್ಣಿಲ್ಲದವನಾಗಿ ಬಿಟ್ಟ.

ನಿಮಿಷದಲ್ಲಿ ನೆರೆಕರೆಗೆ ಹಬ್ಬಿದ ಸುದ್ದಿ ಪ್ರೇರಣಾಳ ಮನೆ ತಲಪಲು ತಡವಾಗಲಿಲ್ಲ. ಪ್ರೇರಣಾ ಹುಚ್ಚಿಯಂತೆ ಓಡಿ ಬಂದವಳೇ ಸುಶೀಲಮ್ಮನ ಮಡಿಲಲ್ಲಿ ಕುಸಿದುಬಿದ್ದಿದ್ದಳು. ಯಾರನ್ನು ಯಾರು ಸಂತೈಸುವುದು? ರಾಮಕೃಷ್ಣಯ್ಯನವರು ಕೂತಲ್ಲಿಂದ ಅಲ್ಲಾಡುತ್ತಿರಲಿಲ್ಲ. ದೃಷ್ಟಿ ನಿಶ್ಚಲವಾಗಿತ್ತು. ಕಣ್ಣೀರ ಧಾರೆ ಮಾತ್ರ ಬಿಡುವಿಲ್ಲದೇ ಹರಿಯುತ್ತಿತ್ತು.

ಅಚಲನ ಗೆಳೆಯ, ಅನುರಾಧ ಪೂರ್ಣಿಮಾರಿಗೂ ಇದೇ ರೀತಿ ಟೆಲಿಗ್ರಾಮ್ ಕೊಟ್ಟಿದ್ದ. ಎಲ್ಲರಿಗೂ ಸಿಡಿಲೆರಗಿದಂಥಾ ವಾರ್ತೆಯದು. ತಡೆಯಲಾಗದ ಆಘಾತ.

ಮರುದಿನದ ಪೇಪರಿನಲ್ಲೆಲ್ಲಾ ಇದೇ ಸುದ್ದಿ. ಅಚಲ ತನ್ನ ವಿಂಗ್ ಕಮಾಂಡರ್‌ನ ಜತೆಗೆ, ಅಂದರೆ ಅವರೊಂದು ವಿಮಾನದಲ್ಲಿ, ಅಚಲ ಮತ್ತೆ ಇನ್ನೆರಡು ಜನ ಇನ್ನೊಂದು ವಿಮಾನದಲ್ಲಿ, ಹೋಗುತ್ತಿರುವಾಗ ಮುಂದೆ ಹೋಗುತ್ತಿರುವ ವಿಂಗ್ ಕಮಾಂಡರ್‌ನ ವಿಮಾನ ಅನಿರೀಕ್ಷಿತವಾಗಿ ಕೆಳಗಿಳಿಯಲು ಪ್ರಾರಂಭಿಸಿದಾಗ ಅಚಲ ತಾನು ಚಲಾಯಿಸುತ್ತಿದ್ದ ವಿಮಾನ ಅದಕ್ಕೆ ಸಹಾಯ ಮಾಡಲು ಆ ಕಡೆಗೋಡಿಸಿದ್ದ. ಹಾಗೆ ಹೋಗುವಾಗ ಗುಡ್ಡೆಗಳ ಮಧ್ಯೆ ಆವರಿಸಿದ್ದ ಹಿಮದಿಂದಾಗಿ ಸುತ್ತಲೂ ಕತ್ತಲೆ ಪಸರಿಸಿದಂತಾದಾಗ ಅಚಲ ಚಲಾಯಿಸುತ್ತಿದ್ದ ವಿಮಾನ ಗುಡ್ಡೆಗೆ ಬಡಿದು ಕೆಳಗುರುಳಿತ್ತು. ಯಾವುದರ ಸಹಾಯಕ್ಕೆ ಹೋಗಿದ್ದನೋ ಆ ವಿಮಾನ ಸುರಕ್ಷಿತವಾಗಿ ಒಂದು ಬಂಡೆಯ ಮೇಲೆ ನಿಂತಿತ್ತು. ಅದರಲ್ಲಿದ್ದ ವಿಂಗ್ ಕಮಾಂಡರ್ ಮನೋಹರ್‌ಗೆ ಏನೂ ಪೆಟ್ಟಾಗಿರಲಿಲ್ಲ. ಅಚಲನೊಡನಿದ್ದ ಇನ್ನಿಬ್ಬರೂ ಚೂರುಚೂರಾಗಿ ಆ ಕಾಡಿನಲ್ಲಿ ಸಿಡಿದಿದ್ದರು. ಪೇಪರಿನಲ್ಲಿ ಅಚಲನ ಸಾಹಸವನ್ನು ಕೊಂಡಾಡಿ ಬರೆದಿದ್ದರು. ಅವನನ್ನು ಕಳೆದುಕೊಂಡುದು ವಾಯುದಳದ ದೊಡ್ಡ ನಷ್ಟವೆಂದು ಸಾರಿದ್ದರು.

ಮರುದಿನ ಇನ್ನೊಂದು ಟೆಲಿಗ್ರಾಮ್ ಬಂದಿತ್ತು. Body traced arriving by special IAF flight within 24 hours ಎಂದು

ಸುದ್ದಿ ತಿಳಿದ ಕೂಡಲೇ ಸಿಕ್ಕಿದುದರಲ್ಲಿ ಅನುರಾಧ, ಶಂಕರ್, ಪೂರ್ಣಿಮಾ, ಶ್ರೀಕಾಂತ ಧಾವಿಸಿದ್ದರು. ಯಾರಿಂದಲೂ ಭರಿಸಲಾರದ ನೋವಿದು. ಆನಂದನೂ ಬಂದಿಳಿದ.

ಅಳುವಿನ ಮಧ್ಯೆ ನಿರೀಕ್ಷೆ. ಹೇಗೆ ಹೋದ ಅಚಲ ಹೇಗೆ ವಾಪಸ್ಸಾಗುತ್ತಿದ್ದಾನೆ. ಮದುಮಗನಾಗಿ ಬರಬೇಕಾಗಿದ್ದವನು ಹೆಣವಾಗಿ ಬರುತ್ತಿದ್ದಾನೆ. ಎಂಥಾ ವಿಪರ್ಯಾಸ. ಕಾಣದ ಕೈಯ ಆಟ ಎಷ್ಟು ಕ್ರೂರ. ಬೇಸರವಿಲ್ಲದೇ ಆಟವಾಡುತ್ತಿರುವನಲ್ಲ? ಯಾವ ಗೋಳಾಟಕ್ಕೂ ಅವನ ಮನ, ಕಣ್ಣು ಕುರುಡು; ಯಾವ ಅಳುವಿಗೂ ಅವನ ಕಲ್ಲು ಹೃದಯ ಕರಗಲಾರದು.

ಸಕಲ ಮಿಲಿಟರಿ ಮರ್ಯಾದೆಯೊಂದಿಗೆ ಅಚಲನ ದೇಹವನ್ನು ಮನೆಗೆ ತರಲಾಗಿತ್ತು. ಆದರೆ ದೊಡ್ಡ ಪೆಟ್ಟಿಗೆಯಲ್ಲಿ ಮರೆಮಾಡಿದ ದೇಹ. ಅದರ ಜತೆಗೆ ಬಂದ ಮನೋಹರ್ ಆ ಪೆಟ್ಟಿಗೆ ತೆರೆಯಲೇ ಬಿಡಲಿಲ್ಲ. “ನಿಮಗಾಗಿ ಈ ದೇಹವನ್ನು ಇಲ್ಲಿ ತನಕ ತಂದಿರುವೆವಾದರೂ, ನಿಮಗೆ ಅವನ ಮುಖ ತೋರಿಸಲು ನಾವು ಒಪ್ಪುವುದಿಲ್ಲ. ಇದನ್ನು ಹೀಗೆಯೇ ಸುಟ್ಟುಬಿಡಿ, ಅದನ್ನು ತೋರಿಸಿ, ನಿಮ್ಮ ಮನದಲ್ಲಿರುವ ಅಚಲನ ರೂಪವನ್ನು ಅಳಿಸುವ ಇಚ್ಛೆ ನಮಗಿಲ್ಲ. ನಿಮ್ಮ ಮನದಲ್ಲಿ ಅದೇ ಅಚಲನೇ ಇರಲಿ ಎಂದೇ ನಮಗಾಸೆ, ಇದನ್ನು ನೀವ್ಯಾರೂ ನೋಡಲೇಬಾರದು.” ಎಂದು ಖಡಾಖಂಡಿತವಾಗಿ ನುಡಿದಾಗ ಒತ್ತಾಯಿಸುವ ಶಕ್ತಿ ಯಾರಲ್ಲೂ ಇರಲಿಲ್ಲ. ಅವರ ದನಿಯಂತೂ ಮಾತು ಮಾತಿಗೂ ಗದ್ಗದಿತವಾಗುತ್ತಿತ್ತು. ತನ್ನ ರಕ್ಷಣೆಗೆ ಬಂದ ಚಿಕ್ಕ ಹುಡುಗನ ಜೀವ ಹೀಗೆ ಹೋಗಬೇಕೇ? ಇದಕ್ಕಿಂತ ತಾನೇ ಸಾವನ್ನಪ್ಪಿದ್ದರೆ ಚೆನ್ನಾಗಿತ್ತು ಎಂದು ಹೃದಯ ಕೂಗಾಡುತ್ತಿತ್ತು.

ಯಾರೂ ಅಚಲನ ದೇಹವನ್ನು ನೋಡದೇ ಅವನ ಶವಸಂಸ್ಕಾರ ಮುಗಿಸಲಾಯಿತು. ಅಚಲ ಸತ್ತುಹೋದ. ಆದರೆ ಹಿಂದುಳಿದವರು ಜೀವಂತ ಶವವಾದರು, ಆ ತಂದೆ ತಾಯಿಗೆ ಇದಕ್ಕಿಂತ ಮೇಲಿನ ನಷ್ಟ, ನೋವು ಇದೆಯೇ? ಈ ರೀತಿಯಲ್ಲೂ ತಂದೆ ತಾಯಿಯ ಹೃದಯವನ್ನು ಗೋಳಾಡಿಸಬೇಕೇ ಆ ಭಗವಂತ?

ಎಲ್ಲಾ ಸುಖಗಳನ್ನು ಅವರು ಆಚಲನಲ್ಲಿ ಕಂಡಿದ್ದರು. ಅದು ನನಸಾಗುತ್ತಾ ಬರುವಾಗ ಅವನನ್ನೇ ಮಾಯವಾಗಿಸಿದ್ದ ವಿಧಿಯ ಆಟ ಕ್ರೂರತನದ ಪರಮಾವಧಿ.

ಅಚಲನಂಥಾ ಮಗ ಬೇರೆ ಇದ್ದಾನೆಯೇ? ಅವನನ್ನು ಕಬಳಿಸಿದ ಮೃತ್ಯು ಕೇಕೆ ಹಾಕಿದಾಗ ಮನೆಯವರೆಲ್ಲರ ಹೃದಯ ಸಿಡಿದು ಚೂರು ಚೂರಾಯಿತು.

ಅನುರಾಧಳ ಗೋಳಾಟಕ್ಕೆ ಕೊನೆಯಿಲ್ಲ. ಅವಳು ಅವನ ಪರವಾಗಿ ವಾದಿಸಿದ್ದಳಲ್ಲ. ಏನೇನೋ ಕನಸು ಕಂಡಿದ್ದಳು. ಅಚಲನ ಮೇಲ್ಮೆ ಕಂಡು ಹಿಗ್ಗಿ ಕುಣಿದಾಡಿದ್ದಳು. ಈಗ ಅಚಲನೇ ಇಲ್ಲ. ಇದೂ ಒಂದು ರೀತಿಯೇ? ಈಗ ಬರುತ್ತೇನೆಂದು ನಗುನಗುತ್ತಾ ಹೋದವನು ತನ್ನೆಲ್ಲಾ ಕಾರ್ಯಗಳನ್ನು ಅಲ್ಲಲ್ಲೇ ಬಿಟ್ಟು ಮರಳಿ ಬಾರದಲ್ಲಿಗೆ ಸೀದಾ ಹೋಗಿಯೇ ಬಿಟ್ಟನಲ್ಲ?

ಯಾರನ್ನು ಯಾರೂ ಸಮಾಧಾನಿಸುವ ಸ್ಥಿತಿಯಲ್ಲೇ ಇರಲಿಲ್ಲ. ಎಲ್ಲರಿಗೂ ಹೃದಯ ಕಿತ್ತು ಚೆಲ್ಲಾಡಿದ ಅನುಭವ. ದೊಡ್ಡ ನೋವು, ಭರಿಸಲಾರದ ನಷ್ಟ ಇದಕ್ಕಿಂತ ಕಷ್ಟ ಆ ಸಂಸಾರಕ್ಕೇನಿದೆ? ಪ್ರೇರಣಾ ಈ ಸಂಸಾರದ ಒಂದು ಭಾಗವೇ ಆಗಿದ್ದಳು. ಹಾಗಾಗಿ ಅವಳ ಗೋಳಾಟ ಕರುಳು ಕರಗಿಸುವಂಥಾದ್ದು.

ಹನ್ನೆರಡನೇ ದಿನದ ಕೆಲಸ ಮುಗಿಯುವ ತನಕವೂ ಒಬ್ಬರು ಇನ್ನೊಬ್ಬರ ಮುಖ ನೋಡಿ ಮಾತಾಡಲೂ ಹೆದರುತ್ತಿದ್ದರು. ಸುಶೀಲಮ್ಮ ರಾಮಕೃಷ್ಣಯ್ಯನವರ ಸುತ್ತಲೂ ಕುಳಿತುಕೊಂಡು ನಾಲ್ಕು ಹೆಣ್ಣು ಮಕ್ಕಳು ಕಣ್ಣೀರಿಳಿಸುವಾಗ ಯಾವ ಕಲ್ಲು ದೇವರಾದರೂ ಕರಗಬೇಕು.

ಇಂಥ ಸಂದರ್ಭಗಳಲ್ಲೇ ದೇವರಿದ್ದಾನೋ ಇಲ್ಲವೋ ಎನ್ನುವ ಜಿಜ್ಞಾಸೆ ಯುಂಟಾಗುವುದು. ಯಾವ ತಪ್ಪು ಮಾಡದ ತಂದೆ ತಾಯಿಗೆ ಈ ರೀತಿಯ ನಷ್ಟ ಲೋಕವನ್ನು ಸರಿಯಾಗಿ ಕಣ್ಣುಬಿಟ್ಟು ನೋಡದ ಪ್ರೇರಣಾಗೆ ಈ ರೀತಿಯ ನೋವು. ಯಾವ ತಪ್ಪು ಮಾಡದವರಿಗೆ ಕಠಿಣ ಶಿಕ್ಷೆ.

ಸುಶೀಲಮ್ಮನ ಕಣ್ಣೀರು ಇಂಗಿಹೋಗಿತ್ತು. ರಾಮಕೃಷ್ಣಯ್ಯನವರ ಹೃದಯವಿಡೀ ಶೂನ್ಯವಾಗಿತ್ತು. ಅನುರಾಧ, ಪೂರ್ಣಿಮಾ, ನಿರುಪಮಾ ಮೂಕರಾಗಿದ್ದರು. ಪ್ರೇರಣಾ ಜೀವಂತ ಹೆಣವಾಗಿದ್ದಳು. ಎಲ್ಲರಿಗೂ ಮಾತೇ ಮರೆತಿತ್ತು.

ಹನ್ನೆರಡನೇ ದಿನದ ಕೆಲಸ ಮುಗಿದ ಕೂಡಲೇ ಆನಂದ ಹೊರಟು ನಿಂತ. ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ನೆರವೇರಿಸಿದ್ದು, ಅವನು ಇಷ್ಟು ದಿನವೂ ಅವನೇ ತಂದೆ ತಾಯಿಯರಿಂದ ದೂರ ಸರಿದು ನಿಂತವನು, ಹತ್ತಿರವಿದ್ದ ಅಚಲ ಹೊರಟುಹೋದ. ಈ ಸಂದರ್ಭದಲ್ಲಿ ತಂದೆ ತಾಯಿಯ ಎದುರು ನಿಂತು ಸಮಾಧಾನಿಸುವ ಮುಖ ಆತ್ಮಶಕ್ತಿ ಅವನಿಗಿರಲಿಲ್ಲ. ಹೋಗುವೆನೆಂದು ಹೇಳಲು ಬಂದು ನಿಂತಾಗ ಮಾತ್ರ ಸುಶೀಲಮ್ಮನ ದುಃಖ ಉಕ್ಕಿ ಭೋರ್‍ಗರೆಯಿತು. ಸಮುದ್ರದ ಅಲೆಗಳು ಬಂದು ಅಪ್ಪಳಿಸುವಂತೆ ಅವರ ದುಃಖದ ಭೋರ್‍ಗರೆತ ಅವನ ಹೃದಯವನ್ನು ತಟ್ಟಿತು. ಆದರೆ ಅನಂದ ತನ್ನ ತಪ್ಪಿನಿಂದಾಗಿ ಏನೂ ಹೇಳಲಾರದವನಾಗಿದ್ದ. ಸುಶೀಲಮ್ಮ ಚಿನ್ನದಂಥಾ ಮಗನನ್ನು ಕಳೆದುಕೊಂಡರು. ಈ ಮಗ ಅವನ ಜಾಗಕ್ಕೆ ಬಂದಾನೇ? ಆ ಜಾಗ ಖಾಲಿಯೇ ಉಳಿಯುವುದೇ?

ಆನಂದ ಹೊರಟುಹೋದ ಮೇಲೆ ಶ್ರೀಕಾಂತ, ಶಂಕರ ಹೋಗುವ ಯೋಚನೆ ಮಾಡಿದರು. ಅನುರಾಧ, ಮಗು, ಪೂರ್ಣಿಮಾ ಸ್ವಲ್ಪ ದಿನ ಅಲ್ಲೇ ನಿಲ್ಲುವ ನಿರ್ಧಾರ ಮಾಡಿದರು. ಈ ಪರಿಸ್ಥಿತಿಯಲ್ಲಿ ತಂದೆ ತಾಯಿಯರನ್ನು ಬಿಟ್ಟು ಹೋಗುವುದು ಅಸಾಧ್ಯ. ಏನಾದರೂ ಒಂದು ವಿಲೇವಾರಿ ಮಾಡಿದ ಮೇಲಷ್ಟೇ ಹೋಗುವ ಯೋಚನೆ ಅವರದ್ದು.

ಅನುರಾಧ, ಪೂರ್ಣಿಮಾ ಒಟ್ಟುಗೂಡಿ ಒಂದು ನಿರ್ಧಾರಕ್ಕೆ ಬಂದಿದ್ದರು. ಹೇಗಾದರೂ ತಂದೆ ತಾಯಿಯರನ್ನು ಒಪ್ಪಿಸಿ ತಾವು ಹೈದರಾಬಾದಿಗೆ ಹೋಗುವಾಗ ಮೂವರನ್ನೂ ಕರೆದುಕೊಂಡು ಹೋಗಬೇಕು. ಅಲ್ಲಿ ಸ್ವಲ್ಪ ದಿನವಿದ್ದರೆ ನೋವು ಮರೆಯಬಹುದು. ಇಲ್ಲೇ ಇದ್ದರೆ ಅದು ಅಸಾಧ್ಯ. ಅಷ್ಟು ದಿನ ಮನೆಗೆ ಬೀಗ ಹಾಕಿದರಾಯಿತು. ಆದರೆ ಈ ವಿಚಾರ ಅವರಲ್ಲಿ ಪ್ರಸ್ತಾಪಿಸಲು ಅಕ್ಕ ತಂಗಿಯರಿಬ್ಬರಿಗೂ ಸಾಧ್ಯವಾಗುತ್ತಿರಲಿಲ್ಲ. ತಾಯಿಯ ಮುಖ ನೋಡಿ ಮಾತನಾಡುವ ಎದೆಗಾರಿಕೆ ಇಬ್ಬರಲ್ಲೂ ಇರಲಿಲ್ಲ. ಆ ಹೃದಯ ಚೂರು ಚೂರಾಗಿದೆ. ಅದನ್ನು ಜೋಡಿಸಿ ಅಲ್ಲಿಗಲ್ಲಿಗೇ ಸರಿಪಡಿಸದಿದ್ದರೆ ಯಾರಿಗೂ ಅಮ್ಮನಿಲ್ಲದಂತಾಗುವುದು. ಹೇಗಾದರೂ ಚೂರಾದ ಹೃದಯ ಜೋಡಿಸಲೇ ಬೇಕು. ಈ ಕಡೆ ಪ್ರೇರಣಾಳ ಗತಿ? ಯಾವ ಪಾಪವನ್ನೂ ಅರಿಯದ ಮಗುವಿಗೆ ವಿಧಿಯ ಕೊಡಲಿಯೇಟು. ತಡೆಯಲಾರದ ನೋವು ಅವಳದಾಯಿತು. ಚಿಗುರಲ್ಲೇ ಮುದುಡಿದ ಹೂವಾದಳು.

ಅವಳ ಜೀವನಕ್ಕೂ ತಿರುವು ಬೇಕು. ಅವಳು ಇದರಲ್ಲೇ ಕೊರಗಬಾರದು. ಈ ನೋವನ್ನವಳು ಮರೆಯಲೇಬೇಕು. ಅವಳೊಡನೆ ಈ ವಿಚಾರದಲ್ಲಿ ಚರ್ಚಿಸಿ ಅವಳ ಮನಸ್ಸು ವಿಮುಖವಾಗುವಂತೆ ಮಾಡುವ ಕೆಲಸಕ್ಕೂ ಕೈ ಹಾಕಲೇಬೇಕೆಂದು ಅನುರಾಧ ನಿರ್ಧರಿಸಿಕೊಂಡಳು. ಪ್ರೇರಣಾಳಂತಹ ಹುಡುಗಿಯನ್ನು ತಮ್ಮ ಹೃದಯದಿಂದ ದೂರ ಮಾಡುವುದು ಯಾರ ಮನಕ್ಕೂ ಒಗ್ಗದ ಮಾತು. ಅವರಿಗೆಲ್ಲಾ ಅಚಲನಷ್ಟೇ ಅವಳೂ ಹತ್ತಿರದವಳಾಗಿದ್ದಳು. ನಿರಪಮಾಳಿಗಂತೂ ಒಂದೇ ಜೀವ ಎರಡು ದೇಹದಂತಿದ್ದಳು. ಆದರೆ ಇನ್ನು ಪ್ರೇರಣಾಳ ಜೀವನದಿಂದ ಅಚಲನ ನೆನಪು ಹುಟ್ಟಿಸುವ ನಾವೆಲ್ಲಾ ಹಿಂದೆ ಸರಿಯಲೇಬೇಕು ಎಂಬ ದೃಢನಿಶ್ಚಯ ತಾವೆಲ್ಲಾ ಮಾಡಿಕೊಳ್ಳಲೇಬೇಕು ಎನ್ನುವ ನಿರ್ಧಾರ ಅನುರಾಧಳದ್ದು.

ಇದನ್ನೆಲ್ಲಾ ನಿಶ್ಚಯಿಸಿದ ಅನುರಾಧ ಮೆಲ್ಲನೇ ತಂದೆಯ ಬಳಿಗೆ ಬಂದು ಅವರ ಕಾಲಬಳಿ ಕುಳಿತುಕೊಂಡಳು. ಕಣ್ಣಲ್ಲಿ ದೃಷ್ಟಿಯೇ ಇಂಗಿಹೋದಂತೆ. ನೀರಸವಾಗಿ ಮೇಲಿನ ಸೂರನ್ನು ದೃಷ್ಟಿಸುತ್ತಾ ಮಲಗಿಕೊಂಡಿದ್ದರು. ರಾಮಕೃಷ್ಣಯ್ಯನವರು.

“ಅಪ್ಪಾ, ಅಪ್ಪಾ” ಎಂದು ನಾಲ್ಕಾರು ಬಾರಿ ಕರೆದ ಮೇಲಷ್ಟೇ ಅವರು ಮಗಳ ಕಡೆಗೆ ತಿರುಗಿದ್ದು.

ಹೃದಯ ಗಟ್ಟಿಮಾಡಿಕೊಂಡು ಅನುರಾಧ ಮಾತು ಹೊರಡಿಸಿದಳು. “ಅಪ್ಪಾ, ನೀವೇ ಇಷ್ಟು ಧೃತಿಗೆಟ್ಟರೆ ಅಮ್ಮನಿಗೆ ಸಮಾಧಾನ ಹೇಳುವವರು ಯಾರು?”

ಅದಕ್ಕೂ ಶೂನ್ಯನೋಟವೇ ಅವರ ಉತ್ತರವಾಯಿತು. ಆ ನೋಟದಲ್ಲಿದ್ದ ಹೃದಯದ ನೋವು ಅನುರಾಧಳ ನರನಾಡಿಗಳಲ್ಲಿ ಥಂಡಿಯನ್ನು ಹರಡಿತ್ತು. ಆದರೂ ಸಾವರಿಸಿಕೊಂಡು, ಅನುರಾಧ ಉಕ್ಕುತ್ತಿರುವ ದುಃಖದೊಂದಿಗೆ ಉಚ್ಚರಿಸುತ್ತಾಳೆ.

“ಅಪ್ಪಾ, ನಾವೆಲ್ಲಾ ಅಚಲನನ್ನು ಕಳೆದುಕೊಂಡೆವು, ಆದರೆ ನೀವಿಬ್ಬರೂ ಹೀಗೆ ಇದ್ದರೆ ಸದ್ಯಕ್ಕೆ ನಾವು ಹೆಣ್ಣು ಮಕ್ಕಳು ಅನಾಥರಾಗೋದು ಖಂಡಿತ. ದಯವಿಟ್ಟು ಹಾಗೆ ಆಗಲು ಬಿಡಬೇಡಿರಿ; ಅಪ್ಪಾ, ನಮಗಾಗಿ ನೀವು ಧೈರ್ಯ ತಂದುಕೊಳ್ಳಲೇಬೇಕು’ ಎನ್ನಬೇಕಾದರೆ ಅನುರಾಧಳ ನೋವು ಚಿಮ್ಮಿತು, ಕಣ್ಣೀರು ಹರಿಯಿತು.

ರಾಮಕೃಷ್ಣಯ್ಯನವರ ಕಣ್ಣುಗಳೂ ಕೊಳಗಳಾದವು. ಮಗಳ ಕೈಹಿಡಿದುಕೊಂಡು, ಗದ್ಗದಿತರಾಗಿ, “ಅನು, ನಾವೆಲ್ಲಾ ಏನು ತಪ್ಪು ಮಾಡಿದ್ದೇವೆಯೆಂದು ನಮಗೀರೀತಿಯ ಶಿಕ್ಷೆ? ದೇವರು ನಮ್ಮಿಂದ ನಮ್ಮ ಮಕ್ಕಳನ್ನು ಯಾಕೆ ಈ ರೀತಿ ಬೇರ್ಪಡಿಸುತ್ತಿದ್ದಾನೆ? ಹೀಗೆ ಮಾಡುವುದಾದರೆ ನಮಗೆ ಮಕ್ಕಳನ್ನು ಕೊಡುವುದು ಬೇಡವಿತ್ತು. ಎಲ್ಲಾ ನೀರಮೇಲಣ ಗುಳ್ಳೆಗಳೇ ಆಗುತ್ತಿವೆಯಲ್ಲ?”

“ನಿಮ್ಮ ನೋವು ನಾನು ಅರ್ಥಮಾಡಿಕೊಳ್ಳಬಲ್ಲೆ ಅಪ್ಪಾ. ಆದರೆ ಈ ನಷ್ಟ ತುಂಬಲಾಗುವಂಥಾದ್ದೇ? ಅದನ್ನು ನಾವು ಅನುಭವಿಸಲೇ ಬೇಕು. ಅಚಲನಿಲ್ಲದ ಬಾಳನ್ನು ಬಾಳಲೇಬೇಕು.”

ಒಂದು ಕ್ಷಣ ಇಬ್ಬರೂ ಮಾತನಾಡೋದಿಲ್ಲ. ಅನುರಾಧಳೇ ಮಾತನಾಡುತ್ತಾಳೆ.

“ಅಚಲ ಎಷ್ಟೊ ಕೆಲಸಗಳನ್ನು ಅರ್ಧದಲ್ಲಿ ಬಿಟ್ಟುಹೋದ ನಿಜ. ಆದರೆ ಅವನಿಂದಲೇ ಅದಕ್ಕೆಲ್ಲಾ ಪರಿಹಾರ ಸಿಗುವಂತೆಯೂ ಮಾಡಿ ಹೋಗಿದ್ದಾನೆ. ಅವನು ಕೊಟ್ಟ ಮಾತಿಗೆ ತಪ್ಪಲಿಲ್ಲ ಅಪ್ಪಾ! ಯಾರಿಗೂ ತೊಂದರೆ ಆಗದ ರೀತಿಯಲ್ಲಿಯೇ ನಮ್ಮನ್ನಗಲಿದ. ಮೊನ್ನೆ ಅವನ ದೇಹ ಹೊತ್ತು ತಂದವರು ಒಂದು ಲಕ್ಷದ ಒಂದು ಚೆಕ್ಕನ್ನೂ ಕೊಟ್ಟು ಹೋಗಿದ್ದಾರೆ. ಇನ್ನೂ ಎಷ್ಟೋ ಕಳುಹಿಸುವುದಾಗಿ ಹೇಳಿಯೂ ಹೋಗಿದ್ದಾರೆ. ತಾನು ಸತ್ತರೂ, ಕೊಟ್ಟ ಮಾತು ಪೂರೈಸಿದ್ದಾನೆ ಅಚಲ. ಆದರೆ ಅಚಲನನ್ನು ನಾವು ಕಳೆದುಕೊಂಡ ನಷ್ಟ ಹೇಗೆ ತುಂಬಲು ಸಾಧ್ಯ? ಅವನಂಥಾ ಮಗನಾಗಲೀ ತಮ್ಮನಾಗಲೀ ಎಲ್ಲೂ ಇರಲಿಕ್ಕಿಲ್ಲ” ಅನುರಾಧ ಬಿಕ್ಕುತ್ತಾ ನುಡಿಯುತ್ತಾಳೆ. ಹರಿಯುವ ದುಃಖದ ಆವೇಗಕ್ಕೆ ಕಟ್ಟೆ ಕಟ್ಟುವುದೇ ಅವಳಿಂದಾಗಲಿಲ್ಲ, ತೀವ್ರತೆ ಸ್ವಲ್ಪ ಇಳಿದ ಕೂಡಲೇ ಅನುರಾಧ ನುಡಿಯುತ್ತಾಳೆ.

“ಅಚಲ ಸತ್ತು ನಮಗೆ ಆಧಾರವೇ ಇಲ್ಲವೆಂಬ ಭಾವನೆ ಮಾತ್ರ ನಿಮ್ಮ ಮನದಲ್ಲಿ ಸುಳಿಯಲೇಬಾರದು. ಅಚಲನ ಸ್ಥಾನ ತುಂಬುವುದು ನಮಗಾಗದಿದ್ದರೂ ನಾವು ಮೂರು ಜನ ಹೆಣ್ಣು ಮಕ್ಕಳು ಸದಾ ನಿಮ್ಮೊಡನಿದ್ದೇವೆ ಎಂದು ಮರೆಯದಿರಿ. ನಾನು ನಿಮ್ಮ ಮಗನೆಂದೇ ಎಣಿಸಿ ನೀವು ಈಗ ನಾವು ಹೋಗುವಾಗ ನಮ್ಮ ಜತೆಗೆ ಬರಲೇಬೇಕು. ಜಾಗ ಬದಲಾವಣೆಯಿಂದ ನೋವಿನ ತೀವ್ರತೆಯಾದರೂ ತಗ್ಗೀತು!”

“ಜಾಗ ಬದಲಾದ ಮಾತ್ರಕ್ಕೆ ಹೃದಯ ಬೇರಾಗುವುದೇ ಮಗು? ಎಲ್ಲಿ ಹೋದರೂ ಈ ಹೃದಯ, ಈ ನೋವು ನಮ್ಮದೇ ಅಲ್ವೆ? ಏನೇನೋ ಆಸೆ ಹುಟ್ಟಿಸಿ, ಜೀವನದಲ್ಲಿ ಕಳೆದುಹೋದ ಆಸಕ್ತಿ ತುಂಬಿಸಿ ಅವನೀರೀತಿ ನಮ್ಮನ್ನಗಲಿ ಹೋಗುವನೆಂದು ಯಾರು ಎಣಿಸಿದ್ದರು? ಹೀಗೆಯೇ ಆಗುವುದೆಂದು ತಿಳಿದಿದ್ದರೆ, ನಾವು ಅವನ ಕೈಕಾಲು ಹಿಡಿದಾದರೂ ಕೆಲಸಕ್ಕೆ ಸೇರದಂತೆ ನಿಲ್ಲಿಸಿಕೊಳ್ಳುತ್ತಿದ್ದೆವು. ಈ ಮಗು ಪ್ರೇರಣಾ ಏನು ತಪ್ಪು ಮಾಡಿದ್ದಾಳೆಂದು ಈ ಶಿಕ್ಷೆ?”

“ಅಪ್ಪಾ, ಈಗ ಆಗಿರುವುದನ್ನು ಸರಿಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಈಗ ನಾವು ಏನು ಮಾಡಿದರೂ ನಮ್ಮನ್ನಗಲಿ ಹೋದ ಅಚಲ ಹಿಂದೆ ಬರೋದಿಲ್ಲ. ಅವನನ್ನು ಮರೆಯುವುದಂತೂ ಯಾರಿಂದಲೂ ಆಗದ ಸಂಗತಿ. ಆದರೆ ಅಪ್ಪಾ, ಈಗ ನೀವೂ ಅಮ್ಮನೂ ಧೈರ್ಯತಂದುಕೊಂಡು ಸುಧಾರಿಸಿದರೆ, ನಮಗಾದರೂ ಒಂದು ಧೈರ್ಯವಿರುತ್ತದೆ. ಇಷ್ಟು ಬೇಗ ನಿಮ್ಮನ್ನೂ ಕಳೆದುಕೊಳ್ಳಲು ನಾವ್ಯಾರೂ ತಯಾರಾಗಿಲ್ಲ. ನಮಗೆ ಬೇರೆ ಯಾರಿದ್ದಾರೆ? ನೀವಿಬ್ಬರೂ ದಯವಿಟ್ಟು ನಮ್ಮ ಜತೆಗೆ ಬರಬೇಕು. ಅಮ್ಮನಂತೂ ಇಲ್ಲೇ ಇದ್ದರೆ ಏನಾಗುತ್ತಾರೋ ಎಂದಾಗುತ್ತಿದೆ. ಅವರೆದುರು ನಿಂತು ಮಾತಾಡುವ ಧೈರ್ಯವೂ ನನಗಿಲ್ಲ. ನಿರುಪಮಾ ಪೂರ್ತಿ ಕಂಗೆಟ್ಟಿದ್ದಾಳೆ. ನೀವು ಧೈರ್ಯ ಮಾಡಿಕೊಂಡು ಅಮ್ಮನನ್ನು ಒಪ್ಪಿಸಬೇಕು. ಇಲ್ಲಿಂದ ನಾವೆಲ್ಲಾ ಸ್ವಲ್ಪ ದಿನಕ್ಕಾದರೂ ದೂರ ಹೋಗಬೇಕು. ಅಚಲ ಓಡಾಡಿ ನಕ್ಕು ನಗಿಸಿದ ಮನೆಯಿದು. ಅವನ ನಗೆ ಎಲ್ಲಾ ಗೋಡೆಗಳಲ್ಲೂ ಪ್ರತಿಧ್ವನಿಸುತ್ತಿದೆ. ಅವನು ಎಲ್ಲಾ ಕಡೆಯಿಂದಲೂ ಎದ್ದು ಬರುವ ಹಾಗೇ ಭಾಸವಾಗ್ತಿದೆ. ಈ ಮನೆಯಲ್ಲಿದ್ದುಕೊಂಡು ಅವನ ಅಗಲಿಕೆಯ ನೋವು ಸಹಿಸೋದು ಅಸಾಧ್ಯ. ಎಲ್ಲಿ ನೋಡಿದರೆ ಅಲ್ಲಿ ಅವನ ನೆನಪು ಹುಟ್ಟಿಸುವ ವಸ್ತುಗಳೇ ತುಂಬಿವೆ.”

ಸುಮಾರು ಹೊತ್ತು ರಾಮಕೃಷ್ಣಯ್ಯನವರು ಉತ್ತರಿಸೋದಿಲ್ಲ. ಕೊನೆಗೆ ಸತ್ತ ಸ್ವರದಲ್ಲಿ ಹೇಳುತ್ತಾರೆ. “ಅನು, ನೀನು ಹೇಳಿದ ಹಾಗೇ ಆಗಲಿ.”

ತಂದೆಯ ಒಪ್ಪಿಗೆ ಪಡೆದ ಮೇಲೆ ಅನುರಾಧಳಿಗೆ ಸ್ವಲ್ಪ ಧೈರ್ಯ ಮೂಡಿತು.

ಬಿರುಗಾಳಿಗೆ ಸಿಕ್ಕ ನೌಕೆಯ ಚುಕ್ಕಾಣಿ ಯಾರಾದರೂ ಹಿಡಿಯಲೇ ಬೇಕು. ಅನುರಾಧ ಅದಕ್ಕೆ ಸನ್ನದ್ಧಳಾದಳು.

ಆ ಚೆಕ್ಕನ್ನು ತಂದೆಯ ಅಕೌಂಟಿಗೆ ಹಾಕಿದಳು. ಮನೆಯ ಮೇಲಿನ ಸಾಲ ಆ ಹಣದಿಂದ ತೀರಿಸುವಂತೆ ಮಾಡಿದಳು. ಉಳಿದ ಹಣ ರಾಮಕೃಷ್ಣಯ್ಯನವರ ಅಕೌಂಟಿನಲ್ಲೇ ಉಳಿಸಿ ಹೋಗುವ ತಯಾರಿ ನಡೆಸಿದರು ಅನುರಾಧ ಮತ್ತು ಪೂರ್ಣಿಮಾ.

ಅವರು ಆ ಜಾಗ ಬಿಡುವ ಮೊದಲು ಮಾಡಬೇಕಾದ ಕೆಲಸವೊಂದಿತ್ತು. ಪ್ರೇರಣಾಳೊಡನೆ ಮಾತನಾಡುವುದು. ಅನುರಾಧ ಇದ್ದ ಆತ್ಮಶಕ್ತಿಯನ್ನೆಲ್ಲಾ ಒಟ್ಟು ಸೇರಿಸಿ ಅವಳ ಮನೆಗೆ ಹೋದಾಗ ಅಲ್ಲಿಯೂ ಮರಣಕಳೆಯೇ ತುಂಬಿತ್ತು. ಅವಳ ತಂದೆ ತಾಯಿ ಇಬ್ಬರೂ ತಲೆಗೆ ಕೈಕೊಟ್ಟು ಕುಳಿತಿದ್ದರು. ಪ್ರೇರಣಾ ಹೊರಗೆಲ್ಲೂ ಕಾಣಿಸಲಿಲ್ಲ. ಅವಳು ಕೋಣೆಯಲ್ಲಿರುವಳೆಂದು ತಿಳಿದಾಗ ಅಲ್ಲಿಗೇ ಹೋದಳು.

ಅರ್ಧಕ್ಕರ್ಧ ಜೀರ್ಣವಾಗಿದ್ದ ಪ್ರೇರಣಾಳನ್ನು ನೋಡುತ್ತಲೇ ಅನುರಾಧ ತಡೆಹಿಡಿದಿದ್ದ ದುಃಖದ ಕಟ್ಟೆಯೊಡೆಯಿತು, ಎಲ್ಲರಿಗೂ ಪ್ರೇರಣೆಯಾಗಿರಬೇಕಾಗಿದ್ದ ಹುಡುಗಿ ಜೀವಸತ್ವವನ್ನೆಲ್ಲಾ ಕಳೆದುಕೊಂಡು ಕುಳಿತಿರುವುದನ್ನು ನೋಡುವುದೇ ಕಷ್ಟವೆನಿಸಿತು.

ಪ್ರೇರಣಾ ಬಗ್ಗಿ ಮೇಜಿನ ಮೇಲೆ ತಲೆಯಿರಿಸಿ ಕುಳಿತಿದ್ದಳು. ಅನುರಾಧ ಅವಳ ತಲೆ ಸವರಿದಾಗ ಎತ್ತಿದ ಮುಖವನ್ನು ತನ್ನ ಹೃದಯಕ್ಕೆ ಹತ್ತಿರವಾಗಿ ಹಿಡಿದುಕೊಂಡು.

“ತಂಗೀ, ನಿನ್ನ ನೋವು ನಾನು ಬಲ್ಲೆ. ನಿನ್ನ ಹೃದಯ ಚೂರಾಗಿದೆಯೆಂದೂ ತಿಳಿದಿದೆ. ಆದರೂ ಧೈರ್ಯ ತಂದುಕೊಳ್ಳಲೇಬೇಕು ನೀನು. ನಿನ್ನ ಜೀವನದ ಮುಂದೆ ಇನ್ನೂ ಉದ್ದವಾದ ದಾರಿಯಿದೆ. ಭವಿಷ್ಯ ಬಹಳ ವಿಸ್ತಾರವಾಗಿದೆ. ಅದನ್ನು ಆಕ್ರಮಿಸಿ ನೀನು ಬದುಕಬೇಕು. ವಿಸ್ತಾರವಾದ ಭವಿಷ್ಯದಲ್ಲಿ ಒಂದು ಶೂನ್ಯವಾಗಿ ನೀನು ಕರಗಿಹೋಗಬಾರದು. ನೀನು ಅಚಲನನ್ನು ಮರೆಯಲೇಬೇಕು. ಈ ನೋವನ್ನೇ ಹೊತ್ತು ಸಾಗುವ ಪಣತೊಡುವಷ್ಟು ದೊಡ್ಡ ಪ್ರಾಯ ನಿನ್ನದಲ್ಲ.”

ಪ್ರೇರಣಾ ಅನುರಾಧಳ ಎದೆಯಲ್ಲಿ ಮುಖ ಹುದುಗಿಸಿ ಬಿಕ್ಕುವುದಲ್ಲದೇ ಬೇರೇನೂ ಮಾಡೋದಿಲ್ಲ. ಅನುರಾಧಳೇ ನುಡಿಯುತ್ತಾಳೆ. “ನಿನಗೀಗ ಈ ದುಃಖ ತಡೆಯಲಾರದ್ದು ಎಂದು ತೋರಬಹುದು. ಆದರೆ ಹೃದಯ ಗಟ್ಟಿ ಮಾಡಿಕೋಮ್ಮ. ನಿನ್ನ ಎಳೆ ಹೃದಯ ಬೇಗನೇ ಸರಿಯಾಗಬೇಕು. ನಿನ್ನ ಭವಿಷ್ಯ ನೆಟ್ಟಗಾಗದಿದ್ದರೆ ನಮಗಾರಿಗೂ ನೆಮ್ಮದಿ ಸಿಗೋದಿಲ್ಲ. ಅಪ್ಪ, ಅಮ್ಮ ನಿನ್ನ ಯೋಚನೆಯಲ್ಲೇ ಅರ್ಧ ಧೃತಿಗೆಟ್ಟಿದ್ದಾರೆ. ಪ್ರೇರಣಾ, ನಿನ್ನ ಅಚಲನಿಗಾಗಿ ನೀನು ನಿರ್ಧಾರ ಮಾಡಬೇಕು. ಅಚಲನನ್ನು ಮರೆತು ನಿನ್ನ ಭವಿಷ್ಯ ರೂಪಿಸಿಕೊಳ್ಳಬೇಕು. ನಾವೆಲ್ಲಾ ನಿನ್ನನ್ನು ನಮ್ಮವಳೇ ಎಂದು ಈಗಲೂ ಪ್ರೀತಿಸುತ್ತೇವೆ. ನಮ್ಮ ತಂಗಿಯ ಜೀವನ ಹೀಗಾದರೆ ನಾವು ಬಿಡುತ್ತೇವೆಯೇ? ನೀನು ನಮಗೆ ಭಾಷೆ ಕೊಡಬೇಕು. ನಿನ್ನ ಜೀವನ ತುಂಬು ಜೀವನವಾಗಬೇಕು. ಮರುಭೂಮಿಯಾಗಬಾರದು.”

ಪ್ರೇರಣಾಳ ಹೊಟ್ಟೆಯಲ್ಲಿ ಬೆಂಕಿಯೇಳುತ್ತದೆ. ಅಳು ಜೋರಾಗುತ್ತದೆ. ಅವಳ ಬಿಕ್ಕುವಿಕೆ ಕೇಳಿದ ತಂದೆ ತಾಯಿ ಒಳಗೆ ಬರುತ್ತಾರೆ. “ಪ್ರೇರಣಾ, ನಿನ್ನ ತಂದೆ ತಾಯಿಯರ ಕಡೆಗಾದರೂ ನೋಡಿ ನೀನು ಬದಲಾಗಬೇಕು. ಜೀವನವೇ ವಿಚಿತ್ರ ತಂಗೀ, ಕ್ರೂರಿಯಾಗಿ ಕಿತ್ತುಕೊಳ್ಳುವ ದೇವರು ಕೊಡುವುದರಲ್ಲೂ ಉದಾರಿಯಾಗಿದ್ದಾನೆ. ಇದನ್ನು ನೀನು ನೆನಪಿಟ್ಟುಕೋ. ನಾಳೆ ಮನೆಗೆ ಬಾಮ್ಮ. ನಿರ್ಧರಿಸಿಯೇ ಬರಬೇಕು. ಅಚಲನ ಅಮ್ಮ, ಅಪ್ಪ ನಿನ್ನದೂ ಎಂದು ಭಾವಿಸು. ನಾಲ್ಕು ಹಿರಿಯ ಹೃದಯಗಳ ಶಾಂತಿಗೆ ನಿನ್ನ ಹೃದಯ ಕಲ್ಲು ಮಾಡಿಕೋ.”

ಅನುರಾಧಳ ಮಾತಿಗೆ ಒಂದೂ ಮಾತನಾಡದೇ ಪ್ರೇರಣಾ ಮೂಕ ಪ್ರಾಣಿಯಂತೆ ಕಣ್ಣು ತುಂಬಿ ಹೃದಯ ಕಿತ್ತು ಬಿಸಾಡಿದಾಗಿನ ನೋವಿನಿಂದ ಒದ್ದಾಡುತ್ತಾಳೆ. ಪ್ರೇರಣಾಳನ್ನು ನೋಡುವಾಗ ಅನುರಾಧಳು ಒಗ್ಗೂಡಿಸಿಕೊಂಡ ಗಟ್ಟಿಗತನವೂ ಸೋಲುತ್ತದೆ. ನೋವು ನುಗ್ಗಿ ಬರುತ್ತದೆ.

ಬದುಕಿನ ಹೊಸಲಿನಲ್ಲೇ ಮನೆ ಮುರಿದು ಬಿದ್ದ ಹಾಗಿನ ಸ್ಥಿತಿ ಈ ಹುಡುಗಿಯದ್ದು. ಅವಳು ಆ ಮನೆಯ ಒಳಗೂ ಹೋಗಿಲ್ಲ. ಸುಂದರವಾದ ಬದುಕು ತನ್ನದಾಗುವುದು ಎಂಬ ಕಲ್ಪನೆಯಲ್ಲಿರುವಾಗಲೇ ಈ ಭೂಕಂಪ! ಎಲ್ಲಾ ಅಲ್ಲೋಲ ಕಲ್ಲೋಲ! ಆ ಎಳಸು ಮನಸ್ಸಿಗಾದ ಆಘಾತ ಸಹಿಸಲಸಾಧ್ಯವಾದುದ್ದು. ಇದನ್ನರಿತ ಅನುರಾಧಳೇ ನುಡಿಯುತ್ತಾಳೆ.

“ಪ್ರೇರಣಾ, ನಾವು ಈ ವಾರದ ಕೊನೆಯೊಳಗೆ ಹೈದರಾಬಾದಿಗೆ ಹೋಗುತ್ತೇವೆ. ಎಲ್ಲರೂ ಹೋಗುತ್ತೇವೆ. ಅದರ ಮೊದಲು ನಿನ್ನ ನಿರ್ಧಾರವಾಗಬೇಕು. ನಿನ್ನ ನಿರ್ಧಾರವನ್ನು ನೀನೇ ನಮ್ಮಲ್ಲಿ ಬಂದು ತಿಳಿಸಬೇಕು. ಇಲ್ಲದಿದ್ದರೆ ಆ ಕೊರಗೇ ನಮ್ಮ ತಂದೆ ತಾಯಿಯನ್ನೂ ದಹಿಸುತ್ತದೆ. ಅವರಿಗೆ ನಿನ್ನ ವಿಚಾರದಲ್ಲಿ ತುಂಬಾ ನೋವಿದೆ. ಅಚಲ ನಮ್ಮನ್ನೆಲ್ಲ ಬಿಟ್ಟು ಹೋದ, ಆದರೆ ನಿನ್ನ ಜೀವನ ಬರಡಾಗುವುದನ್ನು ನಾವ್ಯಾರೂ ಸಹಿಸೋದಿಲ್ಲ. ಇದಕ್ಕಾಗಿ ನೀನೆಲ್ಲಾ ಮರೆಯಬೇಕು. ಸುಂದರ ಕನಸೊಂದು ಒಡೆಯಿತೆಂದು ತಿಳಿ. ನಿನ್ನಷ್ಟೇ ನಾವೂ ನಿರ್‍ಭಾಗ್ಯರು ಇದರಲ್ಲಿ.”

ಅನುರಾಧ ಹೋಗುವಾಗ ಪ್ರೇರಣಾಳ ತಂದೆ ತಾಯಿಯೊಡನೆಯೂ ಅದೇ ಮಾತು ಹೇಳಿ, ತಾವು ಬೆಂಗಳೂರು ಬಿಡುವ ಮುಂಚೆ ಖಂಡಿತಾ ಮನೆಗೊಮ್ಮೆ ಬರಬೇಕೆಂದು ಹೇಳಿ ಮನೆಗೆ ಹೋಗುತ್ತಾಳೆ.

ಅವಳಿಗಾದರೂ ತನ್ನ ನೋವು ಮರೆತು ಹೀಗೆಲ್ಲಾ ಮಾಡಲು ಎಲ್ಲರನ್ನೂ ಒತ್ತಾಯಿಸುವುದೇನೂ ಸುಲಭದ ಕೆಲಸವಾಗಿರಲಿಲ್ಲ. ಅಂಥ ತಮ್ಮನನ್ನು ಕಳೆದುಕೊಂಡು, ಅವನನ್ನು ಮರೆಯುವಂತೆ ಎಲ್ಲರ ಹತ್ತಿರ ಹೇಳುತ್ತಿರುವಳಾದರೂ ಸ್ವತಃ ಅವಳಿಂದ ಆ ಕೆಲಸ ಸಾಧ್ಯವಿದೆಯೇ? ಮುಳುಗುತ್ತಿರುವ ದೋಣಿಯನ್ನು ಉಳಿಸಲು ಅವಳು ಒದ್ದಾಡುತ್ತಿರುವುದಷ್ಟೇ.

ನಿರುಪಮಾ ಮೂಕಳಾಗಿ ಅಕ್ಕಂದಿರು ಹೇಳಿದಂತೆ ಸಾಮಾನೆಲ್ಲಾ ತುಂಬಿಸಿದಳು. ಸುಶೀಲಮ್ಮ ಕಣ್ಣೀರಿಳಿಸುತ್ತಲೇ ಹೊರಟರು. ಆ ತಾಯಿಯ ಹೃದಯದ ನೋವಿಗೆ ಸೀಮೆಯಿಲ್ಲ. ಹೆತ್ತ ತಾಯಿಗೆ ಇದಕ್ಕಿಂತ ಹೆಚ್ಚಿನ ನೋವು ಬೇರಿಲ್ಲ. ಅದೂ ಅಚಲನಂಥಾ ಮಗನನ್ನು ಕಳೆದುಕೊಂಡ ಆ ತಾಯಿ ಎಷ್ಟು ನತದೃಷ್ಟೆ!
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂಗರಕ್ಷಕ
Next post ಲೋಕದ ಕಣ್ಣು ತಿಳಿವ ನಿನ್ನ ವ್ಯಕ್ತಿತ್ವದಲಿ

ಸಣ್ಣ ಕತೆ

 • ಧರ್ಮಸಂಸ್ಥಾಪನಾರ್ಥಾಯ

  ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

 • ಕಳಕೊಂಡವನು

  ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

 • ಆವರ್ತನೆ

  ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

 • ವರ್ಗಿನೋರು

  ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

 • ಸ್ವಯಂಪ್ರಕಾಶ

  ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…