ತಿದ್ದಬೇಕಾದ ಕೊರತೆಯೆ ಇಲ್ಲ, ಈ ಮಾತೆ
ಶತ್ರುಗಳು ಕೂಡ ಮೆಚ್ಚುವ ಸತ್ಯವಾಗಿರುತ
ಜನದ ಮನದಿಂದೆದ್ದ ನುಡಿಯೊಳೂ ಮೂಡಿದೆ.
ನಿನ್ನ ಹೊರ ಚೆಲುವು ಮೆಚ್ಚಿಗೆ ಮಕುಟ ಗಳಿಸಿದೆ,
ಮೆಚ್ಚಿ ನುಡಿಯುವ ನಾಲಿಗೆಗಳೆ ಕಣ್ಣಿಗೆ ಸಿಗುವ
ನೋಟದಾಚೆಗು ಸಾಗಿ ಮತ್ತೇನೊ ಗ್ರಹಿಸಿವೆ
ಸ್ತುತಿಗೆ ಬೆರೆಸಿವೆ ಬೇರೆಯೇನೋ ಅಪಸ್ವರವ.
ನಿನ್ನ ಚಿತ್ತದ ಚೆಲುವನ್ನವರು ಕಾಣುವರು,
ನಿನ್ನ ಕೃತಿ ನೋಡಿ ಆ ಚೆಲುವ ತರ್ಕಿಸುವರು;
ಕಣ್ಣೊಳಗೆ ಪ್ರೀತಿಯಿದ್ದರು ಕೂಡ ಗಾಂಪರು
ಹೂವ ಚೆಲುವಿಗೆ ಕಸದ ನಾತವನು ಬೆರಸುವರು.
ನಿನ್ನ ರೂಪಕ್ಕೆ ಜೊತೆಗೊಡುವ ಕಂಪೇಕಿಲ್ಲ ?
ಇಷ್ಟೆ ಕಾರಣ, ನೀ ಅಸಾಮಾನ್ಯನಾಗಿಲ್ಲ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 69
Those parts of thee that the world’s eye doth view