ಕುವೆಂಪು ವಿಮರ್ಶೆಯ ವಿಶಿಷ್ಟತೆ

ಕುವೆಂಪು ವಿಮರ್ಶೆಯ ವಿಶಿಷ್ಟತೆ

ನವೋದಯದ ಬರಹಗಾರರು ಕೇವಲ ಸಾಹಿತ್ಯ ಚಿಂತಕರಲ್ಲ, ಸಂಸ್ಕೃತಿ ಚಿಂತಕರೂ ಆಗಿದ್ದಾರೆ. ಆದ್ದರಿಂದಲೇ ನವೋದಯ ಬರಹಕ್ಕೆ ವಿಶಿಷ್ಟವಾದ ಸಾಂಸ್ಕೃತಿಕ ಆಯಾಮ ಪ್ರಾಪ್ತವಾಗಿರುವುದು.

ನವೋದಯ ಚಿಂತಕರು ಸಂಸ್ಕೃತಿಮುಖಿಯಾದ ಚಿಂತನೆಗಳನ್ನು ಸಾಹಿತ್ಯಕ ನೆಲೆಯಲ್ಲಿ ಪ್ರಕಟಿಸಿದ್ದಾರೆ. ಸಮುದಾಯದ ಆಶೋತ್ತರಗಳನ್ನು ಇಲ್ಲಿ ಬಿಂಬಿಸಿದ್ದಾರೆ. ಹೀಗೆ ಜನಮುಖಿಯಾದ ನವೋದಯದ ಚಿಂತಕರು ವಸಾಹತು ಪೂರ್ವ ಸಂದರ್ಭದಲ್ಲಿ ಕರ್ನಾಟಕ ಸಂಸ್ಕೃತಿಯನ್ನು ವಸಾಹತುಶಾಹಿಯ ಎದುರಿನಲ್ಲಿ ಬಹಳ ವಿಶಿಷ್ಟವಾಗಿ ಕಟ್ಟಲು ಯತ್ನಿಸಿದರು. ಇದಕ್ಕಾಗಿ ಅವರು ಸಾಹಿತ್ಯವನ್ನು ಬಳಸಿದರು. ಆದ್ದರಿಂದ ನವೋದಯದ ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲಿ ಬದುಕಿನ ಬಗೆಗೆ ಪ್ರೀತಿ, ಆಶಾವಾದ, ಪ್ರಾಚೀನ ಸಾಹಿತ್ಯ ಪರಂಪರೆಗಳ ಬಗೆಗೆ ಆದರ ಕಾಣುವುದು. ಈ ನಿಟ್ಟಿನಲ್ಲಿ ಕುವೆಂಪು ಅವರ ಸಾಹಿತ್ಯವೂ ಕನ್ನಡ ಸಂಸ್ಕೃತಿಯ ಕಟ್ಟುವಿಕೆಯಲ್ಲಿ ಕ್ರಿಯಾತ್ಮಕವಾಗಿರುವುದನ್ನು ಗುರುತಿಸಬೇಕು.

ಕುವೆಂಪು ಅವರ ವಿಮರ್ಶೆ ಸಾಹಿತ್ಯೇತರ ನೆಲೆಯಲ್ಲಿಯೂ ತುಡಿಯುತ್ತದೆ. ಪಂಡಿತರನ್ನು ಮಾತ್ರ ಲಕ್ಷಿಸದೆ ಜನಸಾಮಾನ್ಯರಲ್ಲಿಯೂ ಸಾಹಿತ್ಯದ ಬಗೆಗೆ ಆದರವನ್ನು ಉಂಟುಮಾಡುವಂತೆ ಪ್ರೇರೇಪಿಸುತ್ತದೆ. ಅದಕ್ಕಾಗಿ ಅವರು ಸೂಕ್ತ ಮತ್ತು ರಸನಿಷ್ಟವಾದ ಭಾಷೆಯನ್ನು ದುಡಿಸಿಕೊಳ್ಳುತ್ತಾರೆ. ಇಂತಹ ಭಾಷೆಯು ಕಾವ್ಯವೊಂದನ್ನು ಕುರಿತು ಮಾತನಾಡುವಾಗ ತನಗೆ ತಾನೇ ಪ್ರತ್ಯೇಕವಾದ ಕಾವ್ಯವೂ ಆಗಿ ಬಿಡುತ್ತದೆ. ಇಂತಹ ಲಹರಿಯನ್ನು ಕುವೆಂಪು ವಿಮರ್ಶೆಯಲ್ಲಿನ ಸಹೃದಯರಲ್ಲಿ ಕಾಣಬಹುದು. ಇದಕ್ಕೆ ನಿದರ್ಶನವಾಗಿ ಅವರ ಯಾವುದೇ ವಿಮರ್ಶೆಯನ್ನು ತೆಗೆದುಕೊಳ್ಳಬಹುದು. ಅದರ ಭಾಗವಾಗಿ ‘ಮಹಾಶ್ವೇತೆಯ ತಪಸ್ಸು’, ‘ಸರೋವರದ ಸಿರಿಗನ್ನಡಿಯಲ್ಲಿ’ ಮೊದಲಾದ ಲೇಖನಗಳನ್ನು ಪ್ರಾತಿನಿಧಿಕವಾಗಿ ಲಕ್ಷಿಸಬಹುದು.

ಕುವೆಂಪು ಅವರ ರಸನಿಷ್ಠ ವಿಮರ್ಶೆ ನಿರ್ಣಯಾತ್ಮಕವಾದುದಲ್ಲ, ವಿವರಣಾತ್ಮಕವಾದುದು. ಆದ್ದರಿಂದ ಇದರ ಹರಹು ದೊಡ್ಡದು. ಹೀಗೆ ಸುದೀರ್ಘವಾಗಿ ಹರಿಯುವ ಈ ರಸನಿಷ್ಠ ಭಾಷೆಯು ಕಾವ್ಯದ ಅನೇಕ ಸೂಕ್ಷ್ಮಗಳನ್ನು, ಸಂವೇದನೆಗಳನ್ನು, ಕಡೆಗೆ ಕವಿಯೂ ಕಾಣದಿದ್ದ ಹಲವು ದರ್ಶನಗಳನ್ನು ಕಟ್ಟಿಕೊಡುತ್ತದೆ. ಇದರಿಂದ ಕಾವ್ಯಕ್ಕೆ ನ್ಯಾಯ ದೊರೆಯುವುದಲ್ಲದೆ, ಅದರ ಮಿತಿಯನ್ನು ಸಹ ಮೀರಿ ಬಿಡುತ್ತದೆ ಎನಿಸುತ್ತದೆ. ಈ ಹಿನ್ನೆಲೆಯಲ್ಲಿ ‘ಕವಿ ಕಾಣದ್ದನ್ನು ವಿಮರ್ಶಕ ಕಂಡ’ ಎಂಬ ಮಾತು ನೆನಪಾಗುತ್ತದೆ.

ಹೀಗೆ ಕವಿ ಕೃತಿಯ ಅನೇಕ ಭಾಗಗಳಲ್ಲಿ ಬಹಳ ಆರಾಮವಾಗಿ ವಿಹರಿಸುವ ವಿಮರ್ಶಕ ಕುವೆಂಪು ಅವರು ಎಲ್ಲಿಯೂ ಹಾದಿ ತಪುವುದಿಲ್ಲ. ಇಂತಹ ಚಲನೆ ಕಾವ್ಯದ ಸೂಕ್ಷ್ಮ ಭಾಗಗಳ ಎಡೆಗೂ ಸಾಗಿ ಹೊಸ ದರ್ಶನಗಳನ್ನು ಎತ್ತಿಕೊಡುತ್ತದೆ. ಈ ಕಾರ್ಯದಲ್ಲಿ ತ್ವರಿತತೆಯನ್ನು ತೋರದಿರುವುದು ಇವರ ಪ್ರಧಾನ ಲಕ್ಷಣವಾಗಿ ಕಂಡುಬರುತ್ತದೆ.

ಇಂತಹ ರಸನಿಷ್ಠ ಪ್ರಜ್ಞೆಯುಳ್ಳ ಕುವೆಂಪು ಅವರ ವಿಮರ್ಶಾ ಬರವಣಿಗೆಯಲ್ಲಿ ಕಾಣುವ ಮುಖ್ಯ ಗುಣವೆಂದರೆ, ಪ್ರಾಚೀನ ಸಾಹಿತ್ಯದೊಂದಿಗೆ ಸ್ಥಾಪಿಸುವ ಆದರ. (ಪ್ರಾಚೀನ ಎಂದಾಗ ವಸಾಹತುಪೂರ್ವ ಎಂದು ಇಲ್ಲಿ ಭಾವಿಸಲಾಗಿದೆ.) ವಸಾಹತುಶಾಹಿಗೆ ಪ್ರತಿರೋಧವನ್ನು ಒಡ್ಡುವ ನಿಟ್ಟಿನಲ್ಲಿ ಜಾಗೃತವಾದ ಉಪರಾಷ್ಟ್ರೀಯತೆಗೆ ರಕ್ತ-ಮಾಂಸವನ್ನು ತುಂಬುವ ರೀತಿಯಲ್ಲಿ ಪ್ರಾಚೀನ ಸಾಹಿತ್ಯ-ಸಂಸ್ಕೃತಿಗಳು ಇಲ್ಲಿ ಪುನರ್ ಪ್ರತಿಷ್ಠಾಪನೆಗೊಳ್ಳುತ್ತವೆ. ಇಂತಹ ಸಾಂಸ್ಕೃತಿಕ ಸಂದರ್ಭದಲ್ಲಿ ಸಹಜವಾಗಿಯೇ ಪ್ರಾಚೀನ ಪರಂಪರೆಯ ಬಗೆಗೆ ಜನರಲ್ಲಿ ಒಲವನ್ನು ಮೂಡಿಸುವ ಪ್ರಯತ್ನ ಮಾಡಬೇಕಾದುದು ಈ ಕಾಲದ ಚಿಂತಕರ ಹೊಣೆಗಾರಿಕೆಯಾಗಿತ್ತು. ಆದ್ದರಿಂದ ಪ್ರಾಚೀನ ಸಾಹಿತ್ಯದಲ್ಲಿ ನೇತ್ಯಾತ್ಮಕ ಸಂಗತಿಗಳನ್ನು ಗೌಣ ಮಾಡಿ, ಅದರ ಗುಣಾತ್ಮಕ ಸಂಗತಿಗಳನ್ನೇ ಎತ್ತಿಹಿಡಿಯುವುದು ಇವರಿಗೆ ಮುಖ್ಯವಾಯಿತು. ಇಂತಹ ಸಾಹಿತ್ಯಕ-ಸಾಂಸ್ಕೃತಿಕ ಕ್ರಿಯಾಶೀಲತೆಯಿಂದ ಪ್ರಾಚೀನ ಸಾಹಿತ್ಯ ಮತ್ತು ವರ್ತಮಾನದ ಬದುಕು-ಈ ಎರಡರ ನಡುವೆ ಅನುಸಂಧಾನವೊಂದು ಏರ್ಪಡುತ್ತದೆ. ಆದ್ದರಿಂದಲೇ ಪ್ರಾಚೀನ ಕವಿಗಳು ಮತ್ತೆ ಮತ್ತೆ ಅನೇಕ ನವೋದಯ ವಿಮರ್ಶಕರ ಲೇಖನಿಗಳಿಗೆ ತುತ್ತಾಗುವುದು ಮತ್ತು ಭಾಷಣಗಳಿಗೆ ಬಾಯಾಗುವುದು.

ಹೀಗೆ ಪ್ರಾಚೀನ ಕಾಲದ ಕಾವ್ಯ, ಪುರಾಣ, ಚರಿತ್ರೆ ಮತ್ತು ಇತರೆ ಪರಂಪರೆಗಳು ನವೋದಯದವರೊಂದಿಗೆ ಆಪ್ತತೆಯನ್ನು ಸಾಧಿಸಿ, ಕರ್ನಾಟಕದ ಮನೋಲೋಕದಲ್ಲಿ ವಿಜೃಂಭಿಸಿಬಿಡುತ್ತವೆ. ಒಂದು ರೀತಿಯಲ್ಲಿ ಭಾವುಕತೆಯೂ ಇಲ್ಲಿ ಬೆರೆತು ಸಾಹಿತ್ಯಾಸಕ್ತರ ಆರಾಧನೆಗೂ ಈಡಾಗುತ್ತವೆ. ಈ ಹಿನ್ನೆಲೆಯಲ್ಲಿ ಕುವೆಂಪು ಅವರ ವಿಮರ್ಶೆ ಹೆಚ್ಚಾಗಿ ಪ್ರಾಚೀನ ಸಾಹಿತ್ಯ ಮುಖಿಯಾಗಿರುವುದನ್ನು ಗುರುತಿಸಬಹುದು.

ಕುವೆಂಪು ಅವರ ವಿಮರ್ಶೆ ಹೆಚ್ಚಾಗಿ ಪ್ರಾಚೀನ ಸಾಹಿತ್ಯವನ್ನು ಕುರಿತು ಮಾತನಾಡಿದ್ದು ನಿಜ. ಆದರೆ ಸೂಕ್ಷ್ಮ ಸತ್ಯವೇನೆಂದರೆ, ಅದರಲ್ಲೂ ಮಾರ್ಗ ಸಾಹಿತ್ಯವನ್ನು ಕುರಿತೇ ಹೆಚ್ಚು ಮಾತನಾಡಿದ್ದು. ಇದಕ್ಕೆ ತಮ್ಮ ವೈಯಕ್ತಿಕ ಕಾರಣಗಳು ಇವೆ. ಏಕಕಾಲಕ್ಕೆ ಇದು ಈ ದೇಶದ ಸಾಂಸ್ಕೃತಿಕ, ಸಾಮಾಜಿಕ ಮತ್ತು ಚಾರಿತ್ರಿಕ ಹಿನ್ನೆಲೆಯನ್ನು ಪಡೆದು ಬಿಡುತ್ತದೆ.

ಕುವೆಂಪು ಅವರು ಶೂದ್ರ ನೆಲೆಯಿಂದ ಬಂದವರು. ಈ ಕುರಿತ ಕೀಳರಿಮೆ ಸಂಸ್ಕೃತದ ಪಾಂಡಿತ್ಯವನ್ನು ಅಪೇಕ್ಷಿಸಿತು. ಅದು ದಕ್ಕಿತು. ಇಂಗ್ಲೀಷ್ ಶಿಕ್ಷಣದ ಮೂಲಕ ಪಾಶ್ಚಾತ್ಯ ಸಾಹಿತ್ಯವನ್ನು ದರ್ಶಿಸಿದ್ದರಿಂದ ಅಲ್ಲಿಯ ಮಾರ್ಗ ಕಾವ್ಯವೂ ತಮ್ಮ ಮೂಲವನ್ನು ಕೆಣಕಿತು. ಆದ್ದರಿಂದಲೇ ಕನ್ನಡ, ಸಂಸ್ಕೃತ ಮತ್ತು ಪಾಶ್ಚಾತ್ಯ ಜಗತ್ತಿನಲ್ಲಿಯ ಮಾರ್ಗ ಕಾವ್ಯಗಳ ಬಗೆಗೆ ಮತ್ತೆ ಮತ್ತೆ ಉದ್ಗಾರಗಳನ್ನು ಎತ್ತುತ್ತಾರೆ. ಈ ಉದ್ಗಾರ ವಿಮರ್ಶೆಯಾಗಿ ನಿಂತಿದೆ ಎಂಬುದು ಇಲ್ಲಿಯ ವಿವಕ್ಷೆ.

ಹೀಗೆ ಶೂದ್ರಮೂಲ ಪ್ರಜ್ಞೆ ಮತ್ತು ಸಂಸ್ಕೃತ-ಪಾಶ್ಚಾತ್ಯ ಶಿಕ್ಷಣಗಳೇ ಮುಖ್ಯವಾಗಿ ಕುವೆಂಪು ಅವರ ವಿಮರ್ಶೆಯ ಬೇರುಗಳನ್ನು ಮಾರ್ಗ ಕಾವ್ಯದಲ್ಲಿ ಇರಿಸುವಂತೆ ಮಾಡಿದ್ದು. ಈ ನಿಟ್ಟಿನಲ್ಲಿ ಪಂಪ, ರನ್ನ, ನಾರಣಪ್ಪ ಮೊದಲಾದ ಕನ್ನಡ ಕವಿಗಳೂ ವ್ಯಾಸ, ವಾಲ್ಮೀಕಿ, ಕಾಳಿದಾಸನಂತಹ ಸಂಸ್ಕೃತ ಕವಿಗಳೂ ಹೋಮರ್, ಡಾಂಟೆಯಂತಹ ಪಾಶ್ಚಾತ್ಯ ಕವಿಗಳೂ ಇಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಾರೆ. ಇವರಿಗೆ ಪರ್ಯಾಯವಾಗಿ ನಿಲ್ಲುವ ದೇಸೀ ವಕ್ತಾರರಾದ ವಚನಕಾರರು, ಕೀರ್ತನೆಕಾರರು, ತತ್ವಪದಕಾರರು ಇವರಲ್ಲಿ ಹೆಚ್ಚು ಗೌಣವಾಗುತ್ತಾರೆ. ಇವರ ವಿಷಯದಲ್ಲಿ ಬೇಂದ್ರೆ ವಿಮರ್ಶೆ ಹೆಚ್ಚು ಗರಿಗೆದರುತ್ತದೆ ಎಂಬುದು ಇಲ್ಲಿಯೇ ಮುಖ್ಯವಾಗುವ ಸಂಗತಿಯಾಗುತ್ತದೆ.

ಹೀಗೆ ಮಾರ್ಗ ಸಾಹಿತ್ಯದಲ್ಲಿ ಬೇರು ಬಿಟ್ಟಿರುವ ಕುವೆಂಪು ಅವರ ವಿಮರ್ಶೆಯು ಸಮುದ್ರ ಗಾಂಭಿರ್ಯವನ್ನು ಪ್ರಕಟಪಡಿಸುತ್ತದೆ. ಈ ಭಾಷಾ ಶೈಲಿಯಲ್ಲಿ ಸಂಸ್ಕೃತ ಭೂಯಿಷ್ಟತೆ ಮತ್ತು ಕಾವ್ಯಾತ್ಮಕತೆಗಳು ಏಕತ್ರವಾಗಿ ಬೆರೆಯುತ್ತ ‘ಕುವೆಂಪು ಶೈಲಿ’ಯನ್ನು ಪ್ರತಿಷ್ಠಾಪಿಸುತ್ತವೆ. ಈ ನಿಟ್ಟಿನಲ್ಲಿ ‘ತಪೋನಂದನ’ದ ಎಂಟು ವಿಮರ್ಶಾ ಲೇಖನಗಳಲ್ಲಿ ಆರು ಲೇಖನಗಳು ಮಾರ್ಗ ಕಾವ್ಯವನ್ನೇ ಕುರಿತದ್ದಾಗಿವೆ ಎಂಬುದು ಗಮನಾರ್ಹ. ಉಳಿದವು ದೇಸೀ ಸಾಹಿತ್ಯವನ್ನು ಕುರಿತದ್ದಲ್ಲ; ಕಾವ್ಯ ಮೀಮಾಂಸೆಯನ್ನು ಕುರಿತದ್ದು.

ಕುವೆಂಪು ಅವರು ವಿಮರ್ಶೆಯನ್ನು ಬರೆಯುವಾಗ ಕನ್ನಡದಲ್ಲಿ ಕಾವ್ಯ ಮೀಮಾಂಸೆ ಬೆಳೆದಿರಲಿಲ್ಲ. ಆಗ ಮೀಮಾಂಸೆಯ ಪರಿಕರಗಳನ್ನು ಕಾವ್ಯಕ್ಕೆ ಆರೋಪಿಸಿಯೋ ಅಥವಾ ಆ ಕಾವ್ಯದಲ್ಲಿ ಗುರುತಿಸಿಯೋ ನಿರ್ವಚಿಸುವಾಗ ಅವನ್ನು ಕುರಿತ ವಿವರಣೆಯೂ ಅಗತ್ಯವಾಗುತ್ತಿತ್ತು. ಆದ್ದರಿಂದ ಮೊದಲು ಮೀಮಾಂಸೆಯ ಪರಿಕರಗಳ ಸ್ವರೂಪದ ಬಗೆಗೆ ಮಾತನಾಡಿ, ಅನಂತರ ಅವನ್ನು ಕಾವ್ಯಕ್ಕೆ ಆರೋಪಿಸಿ ನೋಡುವ ಕ್ರಮ ಅನಿವಾರ್ಯವಾಗುತ್ತಿತ್ತು. ಹಾಗಾಗಿ ನವೋದಯದ ಚಿಂತಕರು ಕಾವ್ಯದ ವಿಮರ್ಶೆ ಬರೆಯುವಾಗ ಮೀಮಾಂಸೆಯನ್ನು ಬರೆಯುವುದು ಸಹ ಅನಿವಾರ್ಯವಾಗಿತ್ತು. ಈ ಕೆಲಸ ಕೆಲವೊಮ್ಮೆ ಪ್ರತ್ಯೇಕ ಲೇಖನಗಳಲ್ಲಿ ಮೂಡಿದರೆ, ಮತ್ತೂ ಕೆಲವೊಮ್ಮೆ ಇವೆರಡೂ ಒಂದೇ ಲೇಖನದಲ್ಲಿ ಮೂಡಿರುವುದು ಉಂಟು. ಉದಾಹರಣೆಗೆ ‘ಪ್ರತಿಮಾ ಮತ್ತು ಪ್ರತಿಕೃತಿ’, ‘ಮಹೋಪಮೆ’ ಎಂಬವು ಅಂತಹ ಲೇಖನಗಳು. ಉಳಿದಂತೆ ‘ಪಂಪನಲ್ಲಿ ಭವ್ಯತೆ ಮತ್ತು ಕಾವ್ಯ ವಿಮರ್ಶೆಯಲ್ಲಿ ಪೂರ್ಣದೃಷ್ಟಿ’ ಅಂತಹ ಲೇಖನಗಳು ಏಕಕಾಲಕ್ಕೆ ಮೀಮಾಂಸೆ ಮತ್ತು ವಿಮರ್ಶೆ ಎರಡನ್ನೂ ಏಕಕಾಲಕ್ಕೆ ಒಳಗೊಂಡಿರುವಂತಹವಾಗಿವೆ.

ಹೀಗೆ ‘ಮಹೋಪಮೆ’ಯಂತಹ ಕಲ್ಪನೆ ಲಕ್ಷ್ಯ ಸಾಹಿತ್ಯದಲ್ಲಿ ಇರುವುದನ್ನು ಗುರುತಿಸುತ್ತಲೇ, ಅದಕ್ಕೆ ಅದುವರೆವಿಗೂ ಲಭ್ಯವಾಗದಿದ್ದ ಶಾಸ್ತ್ರದ ಚೌಕಟ್ಟನ್ನು ದೊರಕಿಸಿ, ಆ ಮೂಲಕ ಕಾವ್ಯ ಮೀಮಾಂಸೆಯ ಕ್ಷಿತಿಜವನ್ನು ವಿಸ್ತರಿಸುತ್ತಾರೆ. ಹೀಗೆ ಕಾವ್ಯ ಮೀಮಾಂಸೆ ಮತ್ತು ಕಾವ್ಯ ವಿಮರ್ಶೆ- ಈ ಎರಡೂ ಕೆಲಸಗಳು ಅವರಲ್ಲಿ ಒಟ್ಟೊಟ್ಟಿಗೆ ಸಾಗುವುದು ಅಂದಿನ ಸಾಹಿತ್ಯಕ-ಸಾಂಸ್ಕೃತಿಕ ಸಂದರ್ಭದ ಅನಿವಾರ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕುವೆಂಪು ಅಂತಹ ಚಿಂತಕರು, ಕಾವ್ಯ ಮೀಮಾಂಸಕರಾಗಿ, ವಿಮರ್ಶಕರಾಗಿ, ಅಂತಿಮವಾಗಿ ಸಂಸ್ಕೃತಿ ನಿರ್ಮಾಪಕರಾಗಿ ಕ್ರಿಯಾಶೀಲಗೊಳ್ಳುತ್ತಾರೆ. ಆದ್ದರಿಂದಲೇ ಸಾಹಿತ್ಯದ ಬಹುತೇಕ ಪ್ರಕಾರಗಳಲ್ಲಿ ತಾವು ಪ್ರಕಟವಾಗುವುದು.

ಸಂಸ್ಕೃತ ಮತ್ತು ಪಾಶ್ಚಾತ್ಯ ಕಾವ್ಯ ಮೀಮಾಂಸೆಯ ಪ್ರಭಾವಕ್ಕೆ ಕುವೆಂಪುರವರು ಒಳಗಾಗಿದ್ದಾರೆ. ಆದ್ದರಿಂದಲೇ ಇಲ್ಲಿಯ ಅಲಂಕಾರಗಳು, ಧ್ವನಿ, ರಸ ಮೊದಲಾದ ಅದರ ಪರಿಕರಗಳು ಹಾಗೂ ಪಾಶ್ಚಾತ್ಯ ಜಗತ್ತಿನ ದುರಂತ ಪ್ರಜ್ಞೆ…ಮೊದಲಾದವು ಇವರ ವಿಮರ್ಶೆಯನ್ನು ಮತ್ತೆ ಮತ್ತೆ ಉದ್ದೀಪನಗೊಳಿಸುತ್ತವೆ. ಆದ್ದರಿಂದಲೇ ‘ರಸೋವೈಸಃ’ದಂತಹ ಕೃತಿಗಳು ಹುಟ್ಟಿಕೊಳ್ಳುವುದು. ಇವುಗಳಿಗೆ ಹೊರತಾದ ಕನ್ನಡ ಕಾವ್ಯ ಮೀಮಾಂಸೆಯೇನಾದರೂ ಇವರನ್ನು ಕಾಡಿಬಿಟ್ಟಿದ್ದರೆ, ಇವರ ವಿಮರ್ಶೆ ವಚನ, ಕೀರ್ತನೆ, ರಗಳೆ, ತತ್ವಪದ, ಜಾನಪದ ಸಾಹಿತ್ಯ-ಇವುಗಳಿಗೆ ಮುಖಾಮುಖಿಯಾಗಿಯೂ ಚಲಿಸಿಬಿಡುತ್ತಿತ್ತು. ಆದರೆ ಹಾಗಾಗಲಿಲ್ಲ.

ಹೀಗೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದ ಕುವೆಂಪು ಅವರು ಉನ್ನತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವಾಗ ಸಹಜವಾಗಿಯೇ ಮಾರ್ಗ ಕಾವ್ಯದ ಬಗೆಗೆ ಹೆಚ್ಚು ಅಧ್ಯಯನ ಮತ್ತು ಚಿಂತನೆ ನಡೆಸಿದ್ದಾರೆ. ಇಲ್ಲಿ ಸಂಸ್ಕೃತ ಮತ್ತು ಪಾಶ್ಚಾತ್ಯ ಕಾವ್ಯಗಳೊಂದಿಗಿನ ತೌಲನಿಕ ಪ್ರಜ್ಞೆಯನ್ನು ಸಹ ಇರಿಸಿಕೊಂಡಿದ್ದಾರೆ. ಆದ್ದರಿಂದ ವೃತ್ತಿ ಮೂಲದ ಒತ್ತಾಸೆಯೂ ಮಾರ್ಗ ಕಾವ್ಯಮುಖಿಯಾದ ದೊಡ್ಡ ವಿಮರ್ಶೆಗೆ ದಾರಿಯಾಗಿದೆ ಎಂಬುದು ಇಲ್ಲಿ ಗಮನಾರ್ಹ ವೆನಿಸುತ್ತದೆ.

ಒಟ್ಟಾರೆ ನವೋದಯ ಸಂದರ್ಭದ ಅನೇಕ ವಿಮರ್ಶಕರಲ್ಲಿ ಮುಖ್ಯರಾದ ಎ.ಆರ್.ಕೃ., ಟಿ.ಎಸ್. ವೆಂಕಣ್ಣಯ್ಯ, ಎಸ್.ವಿ. ರಂಗಣ್ಣ, ಬಿ.ಎಂ.ಶ್ರೀ., ಮಾಸ್ತಿ, ಬೇಂದ್ರೆ, ಡಿ.ವಿ.ಜಿ., ತೀನಂಶ್ರೀ, ಡಿ.ಎಲ್.ಎನ್.ರವರ ಸಾಲಿನಲ್ಲಿ ಕುವೆಂಪು ಅವರು ಸಹ ನಿಲ್ಲುತ್ತಾರೆ. ಅದಕ್ಕೆ ಅನೇಕ ಸಾಮ್ಯಾಂಶಗಳು ಕಾರಣವಾಗಿವೆ. ಅವುಗಳಲ್ಲಿ ರಸನಿಷ್ಠತೆ, ಪ್ರಾಚೀನ ಸಾಹಿತ್ಯದೊಂದಿಗಿನ ಆದರ, ಭಾಷೆಯಲ್ಲಿ ವಿವರಣಾತ್ಮಕತೆ ಮೊದಲಾದ ತಾತ್ವಿಕ ನೆಲೆಗಳು ಇಲ್ಲಿ ಮುಖ್ಯವಾಗುತ್ತವೆ. ಇವನ್ನು ಹೊರತುಪಡಿಸಿದರೆ, ಇವರೆಲ್ಲರಿಗೂ ಒಂದೇ ಸಾಂಸ್ಕೃತಿಕ ಸಂದರ್ಭ ಹಿನ್ನೆಲೆಯಾಗಿತ್ತು ಎಂಬುದು ಸಾಮಾನ್ಯ ಸಂಗತಿ. ಆದರೂ ಕುವೆಂಪು ಅವರಿಗೆ ಅನೇಕ ಮೂಲಗಳ ಸಂಸ್ಕಾರಗಳು ಹಿನ್ನೆಲೆ-ಮುನ್ನೆಲೆಗಳಾಗಿದ್ದರಿಂದ ಸಹಜವಾಗಿಯೇ ಅವರ ವಿಮರ್ಶೆ ಭಿನ್ನವಾಯಿತು, ವಿಶಿಷ್ಟವಾಯಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎದೆಯಾಳದುಲುಹು
Next post ಶಕುನಿ

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

cheap jordans|wholesale air max|wholesale jordans|wholesale jewelry|wholesale jerseys