ಸೃಷ್ಟಿ ನಿರ್‍ಮಾಣದೊಳಗಿರುವ ದೇವನ ಗುಟ್ಟು
ಹೊಳೆಯಬಹುದೆಂದೆಣಿಸಿದಾ ಕನ್ನೆ ಮಿಡುಕಿದಳು
ಅದರ ಸುಳಿವಿಲ್ಲೆಂದು. ಸಂಭ್ರಮಿಸಿ ಹುಡುಕಿದಳು
ಮುಕುಲನಿಕರನ, ಪುಷ್ಪಮಂಜರಿಯ ಮುತ್ತಿಟ್ಟು.
ಪ್ರಕೃತಿಯಾಚೆಗೆ ಪುರುಷ; ನೋಡಿದಳು ಮನವಿಟ್ಟು :
ಚೆಲುವ ಚೈತನ್ಯವನ್ನು ಪಡೆಯಲತಿ ದುಡುಕಿದಳು.
ಪರಮ ಪುರುಷನ ಕಾಣಲಿಂತವಳು ಮೊರೆಯಿಡಲು,-
ಅವನು ಮರೆಯಾಗುವನು ರೂಪವನು ಬಚ್ಚಿಟ್ಟು !
ಕೊನೆಗೊಮ್ಮೆ ನೋಡಿದಳು ಕಣ್ಣೆತ್ತಿ ಮುಗಿಲೊಳಗೆ.
ಧೀರ ಗಂಭೀರವಿಹ ರಜನಿ ಮೇಳವಿಸಿತ್ತು.
ಎಣ್ದೆಸೆಗಳಲಿ ಭೋಂಕನೆದ್ದ ಸೆಳೆಮಿಂಚಲ್ಲಿ
ಮುಗಿಲೊಡ್ಡಣದ ಮೇಲೆ ನಿಡಿದೋಳ್ಗಳನು ಚೆಲ್ಲಿ
ನಿಂತು ತಕ್ಕೈಸಿತ್ತು. ನಿನದಿಸಿರೆ ನಭದೊಳಗೆ
ಓಂಕಾರವೆಂಬಂತೆ,- ಮೊಳಗೊಂದು ಮೊಳಗಿತ್ತು.
*****



















