ಗುರುಲಿಂಗ ಜಂಗಮದ ತುದಿಹೆಂಗ ಮೊದಲ್ಹೆಂಗ
ಹೂವು ಬೇಕಽ ನನಗ ಹೂವು ಬೇಕ
ನೀರಿಲ್ಲ ನೆಲವಿಲ್ಲ ಮುಗಿಲಿಲ್ಲ ಮಾಡಿಲ್ಲ
ಹಣ್ಣು ಬೇಕಽ ನನಗ ಹಣ್ಣು ಬೇಕ
ಆರುತತ್ವದ ಭೂಮಿ ಐದು ತತ್ವದ ಸೀಮಿ
ಮಳೆ ಮಾಡ ಬಿಸಿಲೀನ ಕಂಪ ನೋಡ
ತಾಯಿಯೆಂದರು ಗುರುವು ತಂದಿಯೆಂದರು ಗುರುವು
ತೇರು ನೋಡಽ ಶೂರ ತೇರು ನೋಡ
ಇತ್ತ ಗುರುವಿನ ಬೆತ್ತ ಅತ್ತ ಲಿಂಗದ ಚಿತ್ತ
ಹಣ್ಣು ತೂರಽ ನೀ ಹೂವ ತೂರ
ಮೂರು ಭಿನ್ನಾಭಿನ್ನ ಮೂರು ಬಣ್ಣಾಬಣ್ಣ
ಆಟ ನೋಡ ಶಿವನ ಮಾಟ ನೋಡ
ಮೊಗ್ಗಾಗು ಮಿಡಿಯಾಗು ಹೂವಾಗು ಹಣ್ಣಾಗು
ಹಕ್ಕಿಯಾಗಽ ನೀ ಮುಗುಲ ಚುಕ್ಕಿಯಾಗ
ಗುರುವಯ್ಯ ಲಿಂಗಯ್ಯ ಜಂಗಮಯ್ಯರ ಆಟ
ಕ೦ಡು ನೋಡಽ ನೀ ಉಂಡು ನೋಡ
*****
(ರಂಭಾಪುರಿ ಬೆಳಗು ಆಗಸ್ಟ್ : ೨೦೦೨)



















