ಒಂದು ಸಮಾಜದ ಕೇಂದ್ರ ಬಿಂದು ಕುಟುಂಬ. ಹಲವಾರು ಕುಟುಂಬಗಳು ಒಂದಕ್ಕೊಂದು ಬೆಸೆಯುತ್ತಾ ಸಮಾಜವಾಗುತ್ತದೆ. ಕೌಟುಂಬಿಕ ನೆಮ್ಮದಿ ಸಾಮಾಜಿಕ ನೆಮ್ಮದಿಗೆ ಪೂರಕ. ಕುಟುಂಬಗಳಲ್ಲಿ ನೆಮ್ಮದಿಯಿದ್ದರೆ ಸಮಾಜದಲ್ಲಿ ನೆಮ್ಮದಿ ಇರುತ್ತದೆ.
ಕೂಡುಕುಟುಂಬಗಳು ಒಡೆದು ನ್ಯೂಕ್ಲಿಯರ್ ಕುಟುಂಬ ಎನ್ನುವ ಹೊಸ ವ್ಯವಸ್ಥೆ ರೂಪ ತಳೆದಾಗಲೇ ಕೌಟುಂಬಿಕ ನೆಮ್ಮದಿಗೆ ಧಕ್ಕೆಯಾಯಿತು. ಪತಿ-ಪತ್ನಿ, ಒಂದೋ, ಎರಡೋ ಮಕ್ಕಳು ಎನ್ನುವ ಸುಮಾರು ನಿರ್ಬಂಧನೆಯಿಂದ ಆಚೆಯಿಂದ ಹಿರಿಯರ ಜೀವನ ಬರಡಾಯಿತು. ಈಚೆಯಿಂದ ಕುಟುಂಬದ ನೆಮ್ಮದಿಗೆ ಪೂರಕವಾಗುವ ಹಿರಿಯರ ಸಹಾಯಹಸ್ತ ದೂರವಾಯಿತು. ಪತಿ-ಪತ್ನಿ ಇಬ್ಬರೂ ಸಮಾನ ವಿದ್ಯಾವಂತರಾಗಿ ದುಡಿಮೆಗೆ ಇಳಿದುದರಿಂದ ಅಂಗೀಕೃತ ಕೌಟುಂಬಿಕ ಮೌಲ್ಯಗಳು ಬದಲಾಗುತ್ತಾ ಅಹಂಗಳ ಘರ್‍ಷಣೆ ಹೆಚ್ಚಿತು. ಇವತ್ತು ಮಕ್ಕಳಿಂದ ದೂರವಾಗಿ ಒಂಟಿತನವನ್ನು ಅನುಭವಿಸುತ್ತಾ ಜೀವಿಸುವ ಹಿರಿಯರು ನೆಮ್ಮದಿಯಿಂದಿಲ್ಲ. ಹಿರಿಯರ ಸಹಾಯವಿಲ್ಲದೆ ಕೌಟುಂಬಿಕ ಒತ್ತಡಗಳನ್ನು ನಿರ್ವಹಿಸಲಾಗದೆ ಒದ್ದಾಡುವ ಮಕ್ಕಳು ನೆಮ್ಮದಿಯಿಂದಿಲ್ಲ. ಈ ಎಲ್ಲಾ ಒತ್ತಡಗಳಿಗೆ ಬಲಿಯಾಗುತ್ತಾ ಬೆಳೆಯುತ್ತಿರುವ ಮೊಮ್ಮಕ್ಕಳಿಗೆ ನೆಮ್ಮದಿಯ ಜೀವನವಿಲ್ಲ.
ಪತಿ-ಪತ್ನಿಯರಲ್ಲಿ ಹೊಂದಾಣಿಕೆ ಇಲ್ಲದಿರುವುದೇ ಇವತ್ತಿನ ಕೌಟುಂಬಿಕ ವಿಘಟಣೆಗಳಿಗೆ ಮುಖ್ಯ ಕಾರಣ. ಕೌಟುಂಬಿಕ ನೆಮ್ಮದಿಗೆ ಅಗತ್ಯವಾಗಿ ಬೇಕಾಗಿರುವ ಹೊಂದಿಕೊಂಡು ಬಾಳುವ ತಾಳ್ಮೆ, ವಿವೇಚನೆ ಎರಡೂ ಇವತ್ತು ಮಾಯವಾಗುತ್ತಿದೆ. ಏನಾದರೂ ಒಂದು ಚಿಕ್ಕ ಕಾರಣ ಸಿಕ್ಕಿದರೆ ಸಾಕು ತಾವು ಒಟ್ಟಿಗಿರಲು ಸಾಧ್ಯವೇ ಇಲ್ಲ ಎನ್ನುವ ನಿರ್‍ಧಾರಕ್ಕೆ ಪತಿ-ಪತ್ನಿಯರು ಬರುವುದು ಹೆಚ್ಚುತ್ತಿದೆ. ಹೆಣ್ಣು ಮಕ್ಕಳಿಗೆ ಆರ್ಥಿಕ ಸ್ವಾವಲಂಬನೆ ಇರುವುದು ದಿಢೀರ್ ನಿರ್ಧಾರಕ್ಕೆ ಕಾರಣವಾಗುತ್ತಿದೆ ಎನ್ನುವುದರಲ್ಲಿ ಉತ್ಪ್ರೇಕ್ಷೆ ಇಲ್ಲ. ತಂದೆ-ತಾಯಿ ದೂರವಾದಾಗ ಮಕ್ಕಳ ಮೇಲಾಗುವ ದುಷ್ಪರಿಣಾಮದ ಗೊಡವೆಯೂ ಅವರಿಗೆ ಇರುವುದಿಲ್ಲ ಎನ್ನುವುದು ಬಹಳ ನೋವು ಕೊಡುವ ಸಂಗತಿ. ತಂದೆಯಾಗಲೀ, ತಾಯಿಯಾಗಲೀ ಒಂಟಿಯಾಗಿ ಮಕ್ಕಳನ್ನು ಸಾಕುವುದು ಸುಲಭದ ಸಂಗತಿಯಲ್ಲ. ಇತ್ತೀಚೆಗೆ ಪೇಪರಿನಲ್ಲಿ ಒಂದು ಸಮೀಕ್ಷೆಯ ಬಗ್ಗೆ ಓದಿದ್ದೆ. ಅಲ್ಲಿ ಈಗ ತಾಯಿಗಿಂತ ತಂದೆಗೇ ಮಕ್ಕಳು ಬೇಕಾಗಿರೋದು. ವಿಚ್ಛೇದನ ಆದಾಗ ಮಕ್ಕಳು ತನಗೆ ಬೇಕೆಂದು ಕೇಳುವುದು ತಂದೆಯೇ ಎನ್ನುವ ವರದಿ ಓದಿದಾಗ ‘ತಾಯಿ’ ಎನ್ನುವ ಮಹತ್ವದ ನಂಬಿಕೆಯೇ ಕುಸಿಯುತ್ತಿದೆ, ತಾಯಿ ಎನ್ನುವ ಪದದ ಡೆಫಿನಿಶನ್ ಬದಲಾಗುತ್ತಿರುವ ಕಾಲಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ ಎಂದು ಅನಿಸುತ್ತದೆ.
ಒಡೆಯುತ್ತಿರುವ ಸಂಬಂಧಗಳು, ಕ್ಷುಲ್ಲಕ ಕಾರಣಗಳಿಗೆ ಬೇರೆ ಬೇರೆಯಾಗುತ್ತಿರುವ ಪತಿ-ಪತ್ನಿಯರು, ಹೀಗೆ ಒಡೆದು ಹೋದ ಸಂಸಾರಗಳಲ್ಲಿ ಅಪ್ಪ-ಅಮ್ಮನ ಪ್ರೀತಿಯಿಂದ ವಂಚಿತರಾಗಿ ಬೆಳೆಯುತ್ತಿರುವ ಮಕ್ಕಳು ಆರೋಗ್ಯಕರ ಸಮಾಜ ನಿರ್‍ಮಾಣಕ್ಕೆ ಎಷ್ಟು ಬದ್ಧರಾಗಬಹುದು? ಈ ರೀತಿಯ ಕೌಟುಂಬಿಕ ವಿಘಟನೆಗಳಿಂದ ಯಾರಿಗಾದರೂ ನೆಮ್ಮದಿ ಇದೆಯೇ? ವಿಪ್ಲವಕ್ಕೆ ಒಳಗಾದ ಮಕ್ಕಳಿಗೆ ಇದರಿಂದ ಸುಖವಿದೆಯೇ? ಅವರು ಸಮಾಜಕ್ಕೊಂದು ಸಮಸ್ಯೆಯಾಗುತ್ತಿರುವುದನ್ನು ಸುತ್ತಲೂ ಕಾಣುತ್ತೇವೆ. ಮಕ್ಕಳ ಜೀವನ ವಿಪ್ಲವಕ್ಕೆ ಸಾಕ್ಷಿಯಾಗುತ್ತಾ ಇರುವ ಹಿರಿಯರಿಗೆ ನೆಮ್ಮದಿಯ ವೃದ್ಧಾಪ್ಯ ಜೀವನವಿದೆಯೇ? ಕೌಟುಂಬಿಕ ಕಲಹಗಳು, ವಿಫಲಗೊಂಡ ಹೊಂದಾಣಿಕೆಗಳು, ಹೆಚ್ಚುತ್ತಿರುವ ಕೌಟುಂಬಿಕ ಕ್ರೌರ್‍ಯಗಳು, ಸಮಾಜವನ್ನು ಯಾವ ದಿಕ್ಕಿಗೆ ಕೊಂಡೊಯ್ಯುತ್ತವೆ ಎನ್ನುವುದನ್ನು ನೋಡುವ ಎದೆಗಾರಿಕೆ ಯಾವ ಹಿರಿಯರಲ್ಲೂ ಇಲ್ಲ. ಅದರಿಂದಾಗುವ ಒತ್ತಡಗಳು ಸಾಯುವ ಕಾಲಕ್ಕೂ ಅವರನ್ನು ನೆಮ್ಮದಿಯಿಂದ ಇರಲು ಬಿಡುವುದಿಲ್ಲ. ಕೌಟುಂಬಿಕ ನೆಮ್ಮದಿ ಕೆಡುತ್ತಿರುವುದರಿಂದ ಹಿರಿಯ ಕಿರಿಯರೆಲ್ಲರನ್ನು ಕಾಡುತ್ತಿರುವ ಮಾನಸಿಕ ಒತ್ತಡಗಳು ಇವತ್ತಿನ ಬಹಳ ದೊಡ್ಡ ಸಮಸ್ಯೆಯಾಗುತ್ತಿದೆ.
ಹೆಣ್ಣು ಕುಟುಂಬದ ಕಣ್ಣು ಎನ್ನುತ್ತಾರೆ. ಕೌಟುಂಬಿಕ ನೆಮ್ಮದಿ ಉಳಿಯಬೇಕಾದರೆ ಗಂಡು ಹೆಣ್ಣು ಇಬ್ಬರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎನ್ನುವುದು ಸತ್ಯವಾದರೂ ಕೌಟುಂಬಿಕ ನೆಮ್ಮದಿ ಉಳಿಯಲು ಮುಖ್ಯವಾಗಿ ಬೇಕಾಗಿರುವುದು ಹೆಣ್ಣಿನ ತಾಳ್ಮೆ ಮತ್ತು ವಿವೇಚನೆ. ಯಾವುದೇ ಕುಟುಂಬ ಉಳಿಯುವುದೂ ಅಳಿಯುವುದೂ ಹೆಣ್ಣಿನಿಂದ. ಹೆಣ್ಣಿಗೂ ಸ್ವಾತಂತ್ರವಿದೆ, ಸಮಾನತೆ ಇದೆ ಎನ್ನುವುದನ್ನು ಒಪ್ಪಿಕೊಳ್ಳುವುದು ಅವಶ್ಯವಾದರೂ ಆಕೆ ಸ್ವಾತಂತ್ರ್ಯವನ್ನು ಸಮಾನತೆಯನ್ನು ಸ್ವಲ್ಪ ವಿವೇಚನೆಯಿಂದ, ಕುಟುಂಬ ಉಳಿಯಬೇಕು, ಮಕ್ಕಳ ಮಾನಸಿಕ ಆರೋಗ್ಯ ಸರಿಯಾಗಿರಬೇಕು, ಸಾಮಾಜಿಕ ಸ್ವಾಸ್ಥ್ಯ ಉಳಿಯಬೇಕು ಎನ್ನುವ ಕಾಳಜಿಯನ್ನು ಇಟ್ಟುಕೊಂಡು ಉಪಯೋಗಿಸಿದರೆ ಕೌಟುಂಬಿಕ ನೆಮ್ಮದಿಯನ್ನು ಕಾದುಕೊಳ್ಳಬಹುದು. ಬದಲಾಗುತ್ತಿರುವ ಸಮಾಜದಲ್ಲಿ ಆಗುತ್ತಿರುವ ಎಲ್ಲ ಅನಾಹುತಗಳಿಗೂ ಪರಿಹಾರ ಸಿಗಬಹುದು. ಇದರಿಂದ ಬದಲಾಗುತ್ತಿರುವ ಸಮಾಜದಲ್ಲಿ ಆಗುತ್ತಿರುವ ಎಲ್ಲ ರೀತಿಯ
ಅನಾಹುತಗಳಿಗೂ ಪರಿಹಾರ ಸಿಗಬಹುದು.
*****