ದುರ್‍ಯೋದನಂಗ್ ಒಬ್ಬ ಸಕನಿ ಸೇರ್‍ಕಂಡಿ
ಎಕ್ಕ ವುಟ್ಟೋಯ್ತ್ ಅಣ್ಣ ಕೌರೋನ ಮಂಡಿ !
ಅದಿನೆಂಟ್ ಅಕ್ಸೋಯಿನೀ ಸೇನೆ ಸಿಬ್ಬಂದಿ
ಒಂದೆ ಯಿಡಿ ಬೂದಿಯಾಯ್ತ್ ಯುದ್ದದಲಿ ಬೆಂದಿ! ೧
ಆಯಾಗಿ ಮಲಗಿದ್ದೋನ್ ಆಸ್ಗೇಗೆ ತಗಣಿ
ಬಂದು ಸೇರ್‍ಕಂಡಂಗೆ ಸೇರ್‍ಕಂಡ ಸಕನಿ!
ಸಕನಿ ತಾನೂ ಸತ್ತು ಜತೆಯೋರ್‍ನು ಸಾಯ್ಸಿ
sಬಾಳ ತಕಲೀಫ್ ಮಾಡ್ದ ಸುಂಕೇ ಸತಾಯ್ಸಿ! ೨
ಯೆಂಡಾನ ಬುಂಡೇನೆ ಸಟ್ಟಾಗ್ ಒಡದಂಗೆ
ನಂಬಿದೋರ್‍ನ್ ಎತ್ತಾಕ್ದ-ಸಕನಿ ಅಂದ್ರ್ ಅಂಗೆ!
ಒಬ್ಬ ಸಕನೀ ದೆಸೆನಿಂದ್ ಏನೇನ್ ಆಗೋಯ್ತು !
ಪರ್‍ಪಂಚದ್ ಜೀವಾನೆ ಝಲ್ಲ್ ಅಂತ್ ಅಂದೋಯ್ತು ! ೩
ಈಗ ಲೋಕ್ದಾಗ್ ಒಂದು ಉಲ್ಗ್ ಒಂದು ಸಕನಿ !
ಅದ್ ನೆಪ್ಗೆ ತರ್‍ತೈತೆ-ಆಳ್ ಮನೇಲ್ ಉಗನಿ!
ಬಾರ್‍ತಾನೆ ಮಾಡಿಸ್ತು ಯಿಂದ್ ಒಬ್ಬೊನ್ ನೀತಿ !
ಈಗ ಏನ್ ಆಗತೈತೊ ದೇವರ್‍ಗೆ ಪ್ರೀತಿ! ೪
*****