ದೆಸೆ ತಿರುಗಿ ಮೇಲೆದ್ದ ಜನ ತಮಗೆ ಗಿಟ್ಚಿರುವ
ಬಿರುದು ಬಾವಲಿಯನ್ನು ಕೊಚ್ಚಿಕೊಳ್ಳಲಿ ಬೀಗಿ,
ನನಗಿಲ್ಲ ಅಂಥ ಅದೃಷ್ಟ, ನನ್ನೆಲ್ಲ ಸುಖ
ಬಲು ಹಿರಿಯದೆಂದು ನಾ ಗೌರವಿಸಿದುದರಲ್ಲಿ.
ರಾಜಕೃಪೆ ದಕ್ಕಿ ವೀರರ ಕೀರ್ತಿ ಹಬ್ಬುವುದು
ರವಿಕಿರಣ ತಾಗಿ ಹೂ ಹೊನ್ನಂತೆ ಹೊಳೆವಂತೆ;
ಗೆದ್ದೆಲ್ಲ ಹೆಮ್ಮೆ ಇದ್ದಲ್ಲೆ ಪುಡಿ ಪುಡಿ, ಮುಳಿದು
ಹುಬ್ಬುಗಂಟಿಕ್ಕಲದು ಎಲ್ಲ ಕಥೆ ಮುಗಿದಂತೆ.
ದಿಟ್ಟ ಹೋರಾಟಗಳ ಸಾರಿ ಸಾವಿರ ಬಾರಿ
ಗೆದ್ದು ಯಾವಾಗಲೋ ಒಮ್ಮೆ ಬಿದ್ದರೆ ಮಲ್ಲ,
ಗೌರವದ ಶಿಖರದಿಂದುರುಳಿ ಗೋರಿಗೆ ದಾರಿ
ಹೊಳೆಯಲ್ಲಿ ಹುಣಿಸೆ ತೊಳೆದಂತೆ ಹಿಂದಿನದೆಲ್ಲ.
ನಾನೆ ಸುಖಿ ಕೊಟ್ಟು ಪಡೆದಿರುವೆ ಪ್ರೀತಿಯನೆಲ್ಲ,
ತೊರೆಯುವವನಲ್ಲ, ತೊರೆಯುವರೆಂಬ ಭಯವಿಲ್ಲ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 25
Let those who are in favour with their stars