ಕೋಮುವಾದ : ರಾಷ್ಟ್ರದ ಗಂಭೀರ ಸಮಸ್ಯೆ

ಕೋಮುವಾದ : ರಾಷ್ಟ್ರದ ಗಂಭೀರ ಸಮಸ್ಯೆ

(ದಿನಾಂಕ ೧೫-೩-೮೩ರಂದು ಜಮಾತೆ-ಇಸ್ಲಾಮಿ-ಹಿಂದ್‌ನವರು ಹಾಸನ ಜಿಲ್ಲಾ ಸಮ್ಮೇಳನ ನಡೆಸಿದ ಸಂದರ್ಭದಲ್ಲಿ ಮಾಡಿದ ಭಾಷಣ.)

ಇಲ್ಲಿಯ ನನ್ನ ಮಾತುಗಳು ನೇರವಾಗಿರುವುದರಿಂದ ಖಾರವಾಗುವುದು ಸಹಜ. ಆದ್ದರಿಂದ ನೆರೆದಿರುವ ಸಹೃದಯ ಮನಸ್ಸುಗಳು ಮುನಿದು ಮುದುಡಿಕೊಳ್ಳದೆ ಅದರ ಸಾರ ಹೀರುವ ಧೀರತೆಯನ್ನು ತೋರುತ್ತವೆ ಎಂದು ಭಾವಿಸುತ್ತೇನೆ.

ನಿಜ, ಕೋಮುವಾದ ಯಾವುದೇ ರಾಷ್ಟ್ರದ ಗಂಭೀರ ಸಮಸ್ಯೆ. ಈ ಸಮಸ್ಯೆಯನ್ನು ನಾವಿಂದು ಹೆಚ್ಚಿನ ಜವಾಬ್ದಾರಿಯಿಂದ ಚಿಂತಿಸಬೇಕಾಗಿದೆ; ಅಷ್ಟೇ ಅಲ್ಲ, ಆ ಚಿಂತನೆ ಸಮಸ್ಯೆಗೆ ಸೂಕ್ತ ಪರಿಹಾರಕೊಡುವ ಹಾದಿಯಲ್ಲಿ ಹರಿಯಬೇಕಾಗಿದೆ. ಹಾಗೆ ಕಂಡುಕೊಂಡ ಪರಿಹಾರವನ್ನು ತೆರೆದ ಮನಸ್ಸಿನಿಂದ, ಯಾವುದಕ್ಕೂ ಬೆಚ್ಚದೆ ಬೆದರದೆ, ಬದುಕಿನಲ್ಲಿ ಅಳವಡಿಸಿ ಅನುಷ್ಠಾನಕ್ಕೆ ತರಬೇಕಾದ ಅತ್ಯಂತ ಹೆಚ್ಚಿನ ಗುರುತರ ಜವಾಬ್ದಾರಿ ಇಂದು ನಮ್ಮ ಮೇಲಿದೆ. ಇಲ್ಲದೆ ಹೋದರೆ ಗೂಟ ಕಿತ್ತು ಸಿಕ್ಕಿಸಿಕೊಂಡ ಕೋತಿಯಂತೆ ನಾವು ನಮ್ಮ ಅರಿವಿಗೇ ಬಾರದೆ ಸೃಷ್ಟಿಸಿರುವ ಮತೀಯ ಲಾವಾಸ್ಫೋಟಕ್ಕೆ ಮುದುಕ ಮೋಟರೆನ್ನದೆ ಇಡೀ ಮಾನವ ಕುಲವೇ ಬಲಿಯಾಗಬೇಕಾಗುತ್ತದೆ.

ದೇವದೂತ, ಪವಾಡಪುರುಷರು ಎಂದು ಜನಸಾಮಾನ್ಯರು ಕರೆದ ಶಂಕರ, ಮಧ್ವ, ರಾಮಾನುಜ, ಬಸವ, ಬುದ್ಧರಾಗಲೀ, ಏಸುಕ್ರಿಸ್ತನಾಗಲೀ ಇಲ್ಲ ಮಹಮದ್ ಪೈಗಂಬರನಾಗಲೀ ಅಥವಾ ಮತ್ತಾರೇ ಆಗಿರಲಿ ಸೃಷ್ಟಿಯ ಅನಂತ ಕಾಲಗರ್ಭದಲ್ಲಿ ಮಿನುಗಿದ ಮಿಣುಕು ಹುಳುಗಳು ಮಾತ್ರ ಎಂಬುದನ್ನು ಮರೆಯಬಾರದು. ಸೃಷ್ಟಿಸಿಕೊಂಡಿರುವ ಯಾವುದೇ ದೇವರಿಗಿಂತ ಕಾಲ ಮಹತ್ತರವಾದುದು. ಸೃಷ್ಟಿಸಿಕೊಂಡಿರುವ ದೇವರೂ ಸಹ ಕಾಲಾತೀತನಲ್ಲ; ಆತನೂ ಈ ಅನಂತ ಕಾಲಕ್ಕೆ ಬಂಧಿ. ರಾತ್ರಿ ಆಕಾಶವನ್ನು ನೋಡಿದರೆ ಕಣ್ಣಿಗೆಟುಕುವ ಕೋಟಿಕೋಟಿ ಇದ್ದರೆ ಕಣ್ಣಿಗೆಟುಕದ ಕೋಟ್ಯಾಂತರ ನಕ್ಷತ್ರಗಳಿವೆ. ಅದರಲ್ಲಿ ಮಾನವನ ಅರಿವಿಗೊದಗಿದ ಒಂಬತ್ತು ಗ್ರಹಗಳಲ್ಲಿ ಒಂದು ನಾವಿರುವ ಈ ಭೂಮಿ. ಈ ಭೂಮಿಯ ನೀರಿನಿಂದ ಎದ್ದಿರುವ ಮೂರನೇ ಒಂದು ಭಾಗ ನೆಲವನ್ನು ಖಂಡಗಳಾಗಿ ವಿಂಗಡಿಸಿ ಭಾರತದೇಶ, ಅದರಲ್ಲಿ ಕರ್ನಾಟಕ, ಅದರಲ್ಲಿ ಹಾಸನದ ಈ ಜಾಗದಲ್ಲಿ ಈ ಇಷ್ಟು ಚೇತನಗಳು ಒಂದೆಡೆ ಸೇರಿವೆ. ಈ ಒಂದೊಂದು ಚೇತನವೂ ತನ್ನ ಮನೆ, ತನ್ನ ಊರು, ತನ್ನ ರಾಜ್ಯ, ತನ್ನ ರಾಷ್ಟ್ರ ಎನ್ನುವ ಕೋಶವಸ್ಥೆಗಳಿಗೆ ಒಳಗಾಗಿವೆ. ಅದನ್ನು ಮತ್ತಷ್ಟು ಕತ್ತರಿಸಿ ಕತ್ತಲಾಗಿಸಿರುವ ಮತೀಯ ಮೌಢ್ಯದ ಗುಂಡಿಗಳು, ಆ ಗುಂಡಿಗಳಿಂದ ಹರಡಿರುವ ಜಾತಿ, ಕುಲ, ಗೋತ್ರಗಳ, ಕೋಮುವಾದಗಳ ಕಾಯಿಲೆ ಎಲ್ಲರನ್ನೂ ತಬ್ಬಿಹಿಡಿದಿದೆ.

ಇದು ಮಾನವನ ಅಜ್ಞಾನದ ಘಲವೆ? ಇಲ್ಲ ಅನಿವಾರ್ಯದ ಆಲಿಂಗನವೆ? ಪ್ರಪಂಚವನ್ನ ಅನೇಕ ರಾಷ್ಟ್ರಗಳಾಗಿ ಸಿಗಿದು ಆ ಚೂರುಚೂರುಗಳಲ್ಲಿ ವಾಸಿಸುತ್ತಿರುವ ಅಲ್ಲಿಯ ಮನುಷ್ಯರ ಸ್ವಭಾವದಂತೆ ಆ ರಾಷ್ಟ್ರ ನಿರ್ಮಾಣಗೊಂಡಿದೆ. ಆಕಾಶದ ಅನಂತತೆಯನ್ನಾಗಲೀ, ಭೂಮಿಯ ಭವ್ಯತೆಯನ್ನಾಗಲೀ ಇಲ್ಲಾ ವೈವಿಧ್ಯತೆಯನ್ನಾಗಲೀ ಅರಿಯುವತ್ತ ಮನುಷ್ಯನ ಮನಸ್ಸು ತೊಡಗಲಿಲ್ಲ. ದೇವದೂತ, ಪವಾಡಪುರುಷ ಇತ್ಯಾದಿಗಳೆಲ್ಲ ನಿಶ್ಶಕ್ತ ಮನಸ್ಸಿನ ಪಾಪದ ಕೂಸುಗಳು; ನಿಗೂಢವನ್ನು ಅರಿಯುವಲ್ಲಿ ಸೋತ ಸತ್ತ ಮನಸ್ಸಿನ ವಿಕೃತ ರೂಪಗಳು. ಪ್ರತಿಕ್ಷಣವೂ ವಿಕಾಸದತ್ತ ತುಡಿಯುತ್ತಿರುವ ಜೀವ ಜಗತ್ತುಗಳು ಯಾವ ಒಂದು ಮನಸ್ಸಿನ – ಅದು ಪೈಗಂಬರನಾಗಿರಲಿ, ಏಸು ಕ್ರಿಸ್ತನಾಗಿರಲಿ, ರಾಮಕೃಷ್ಣನಾಗಿರಲಿ ಅಥವ ವಿಶ್ವದ ಮತ್ತಾವ ಮತದ ಆಚಾರ್ಯ ಪುರುಷನೇ ಆಗಿರಲಿ – ಹಿಡಿತಕ್ಕೂ ದಕ್ಕುವಂತಹುದಲ್ಲ. ಅದರ ಅಂತರಂಗದಲ್ಲಿ ಅರಿತಷ್ಟೂ ಆಳವಾಗುತ್ತಾ ಹೋಗುವ ನಿಗೂಢತೆಯ ಸೋಜಿಗದ ಶಕ್ತಿ ಅಡಗಿದೆ. ಇದನ್ನು ಮನವರಿಕೆ ಮಾಡಿಕೊಳ್ಳುವಲ್ಲಿ ಸೋಲನ್ನಪ್ಪಿದ ಅಪ್ರಬುದ್ಧ ಮನಸ್ಸುಗಳು ಪೈಗಂಬರರನ್ನ, ಏಸುವನ್ನ, ರಾಮನನ್ನ, ಕೃಷ್ಣರನ್ನ ಇತ್ಯಾದಿ ಸೂಕ್ಷ್ಮ ಬುದ್ಧಿಯ ಚತುರರನ್ನು ದೇವದೂತ, ಪವಾಡ ಪುರುಷ, ಅವತಾರ ಎಂಬಿತ್ಯಾದಿಯಾಗಿ ಕರೆದು ಮತಗಳನ್ನ ಹುಟ್ಟುಹಾಕಿ ಅವರುಗಳ ಅಡಿನೆರಳಿನಲ್ಲಿ ಬೇಳೆ ಬೇಯಿಸಿಕೊಳ್ಳುತ್ತ ಇಡೀ ಮಾನವ ಕುಲವನ್ನ ನಿರ್ವೀರ್ಯಗೊಳಿಸುತ್ತಿರುವುದು ಒಂದು ಕಡೆಯಾದರೆ, ಅನಾದಿಕಾಲದಿಂದಲೂ ಇದರ ವಿರುದ್ಧ ಬಂಡೆದ್ದ ಭೌತವಾದಿಗಳು ಬದುಕಿಗೆ, ನಿಜಕ್ಕೆ ಹತ್ತಿರವಾಗಿ ಶೋಷಿತ ಜನರ ಬೆನ್ನಲುಬಾಗಿ ತುಡಿದದ್ದು ಇಂದಲ್ಲದಿದ್ದರೆ ಮುಂದಾದರೂ ಮಾನವ ಮಾನವನಾಗಿಯೇ ಉಳಿಯುವ ಸಾಧ್ಯತೆಯ ಕುರುಹಾಗಿದೆ. ಅಲ್ಲದೆ ವೈಜ್ಞಾನಿಕವಾಗಿ, ತಾತ್ವಿಕವಾಗಿ ಈ ಸೃಷ್ಟಿಯ ನಿಗೂಢತೆಯ ಬಗ್ಗೆ ಚಿಂತಿಸಿದ ಪ್ರಾಚೀನ ಗ್ರೀಸ್ ದೇಶದ ಡೆಮಾಕ್ರಿಟಸ್, ಅತ್ಯಂತ ಶ್ರೇಷ್ಟ ಭೌತವಿಜ್ಞಾನಿ. ಕಾಲ ಕ್ರಿಸ್ತ ಪೂರ್ವ ಸುಮಾರು ೪೬೦-೩೭೦. ಪಾಶ್ಚಾತ್ಯ ಜಗತ್ತಿನಲ್ಲಿ ಅಣು ಸಿದ್ಧಾಂತದ ಪ್ರಥಮ ಪ್ರತಿಪಾದಕ. ಇವನ ಸಿದ್ಧಾಂತದ ಪ್ರಕಾರ ನಿರಂತರ ಚಲನೆಯಲ್ಲಿರುವ ಅಣುಗಳ ಸಂಯೋಜನೆಯೇ ಜಗತ್ತಿಗೆ ಕಾರಣ. ಅಣುಗಳು ಮತ್ತು ಶೂನ್ಯದ ಹೊರತು ಬೇರೆ ತೃತೀಯ ಶಕ್ತಿಯಾಗಲೀ, ವಸ್ತುವಾಗಲೀ ಯಾವುದೂ ಇಲ್ಲ. ಇತರ ವಸ್ತುಗಳಂತೆ ಆತ್ಮವೂ ಕೂಡ ಅಣುಗಳ ಸಂಯೋಜನೆಯಿಂದಲೇ ನಿರ್ಮಿತವಾದ ಒಂದು ಭೌತವಸ್ತು.

ಆಯೋನಿಯಾದ ಮೀಮಾಂಸಕರು ಥೇಲ್ಸ್‌. ಅನಾಕ್ಸಿಮೆನೆಸ್, ಹೆರಾಕ್ಲಿಟಸ್ ಮೊದಲಾದ ಏಷ್ಯಾಮೈನರ್‌ನ ಗ್ರೀಕ್ ತತ್ವಜ್ಞಾನಿಗಳು. ಕಾಲ: ಕ್ತಿಸ್ತಪೂರ್ವ ೬ನೇ ಶತಮಾನ. ಇವರೆಲ್ಲ ಪ್ರಾಕೃತ ಭೌತವಾದಿಗಳಾಗಿದ್ದು, ಒಂದಲ್ಲ ಒಂದು ಭೌತ ವಸ್ತುವೇ ಜಗತ್ತಿನ ಮೂಲವೆಂದು ಭಾವಿಸಿದ್ದರು. ಥೇಲ್ಸ್‌ನ ಅಭಿಪ್ರಾಯದಂತೆ ಈ ಮೂಲವಸ್ತು ನೀರು; ಹೆರಾಕ್ಲಿಟಸ್‌ನ ಅಭಿಪ್ರಾಯದಂತೆ ಬೆಂಕಿ : ಅನಾಕ್ಸಿಮನೆಸ್‌ನ ಪ್ರಕಾರ ಗಾಳಿ. ಪ್ರಕೃತಿಯ ವಿವಿಧ ರೂಪಗಳೆಲ್ಲ ಈ ಮೂಲ ವಸ್ತುವಿನ ಪರಿವರ್ತನೆಯ ಪರಿಣಾಮವೆಂಬುದು ಅವರ ಸಿದ್ಧಾಂತವಾಗಿತ್ತು.

ಮಾಡಿದ ಆಲೋಚನೆ, ಕಾರ್‍ಲ್ ಮಾರ್‍ಕ್‍ಸ್ನ ವಿಚಾರ ಪ್ರತಿಪಾದನೆ, ಲೋಕಾಯತರು ಮತ್ತು ಚಾರ್ವಾಕರ ಸಿದ್ಧಾಂತಗಳು ಈ ಶೋಷಿತ ವರ್ಗದ ಕಣ್ತೆರೆಸಲು ಕಾರಣವಾಗಿವೆ. ಅಲ್ಲದೆ ಬಹುಹಿಂದಿನಿಂದ ಇದ್ದ ದ್ರವ್ಯ ಚೇತನವಾದ (ದ್ರವ್ಯ ಚೇತನವಾದ: ಎಲ್ಲ ಭೌತವಸ್ತುಗಳಲ್ಲಿಯೂ ಒಂದು ವಿಧದ ಜೀವ ಅಥವಾ ಚೇತನವಿದೆ ಎಂದು ಪರಿಗಣಿಸುವ ತಾತ್ವಿಕ ಸಿದ್ಧಾಂತ. ಈ ಸಿದ್ಧಾಂತದಂತೆ ವಸ್ತುಗಳೆಲ್ಲಿ ಸಚೇತನ ಮತ್ತು ಅಚೇತನ ಎಂಬ ಭೇದವಿಲ್ಲ. ಭಾರತೀಯ ತತ್ವಜ್ಞಾನ ಪರಂಪರೆಯನ್ನು ತೆಗೆದುಕೊಂಡರೆ, ಛಾಂದೋಗೊಪನಿಷತ್ತಿನಲ್ಲಿ ಬರುವ ಉದ್ದಾಲಕ ಆರುಣಿಯ ಭೋಧನೆಯನ್ನು ಇಂತಹ ಒಂದು ಬಗೆಯ ದ್ರವ್ಯಚೇತನವಾದ ಎಂದು ಕರೆಯಬಹುದು. -qutd in Fundamental Problems of Marxism by G.V.Plekhanov)

ಸಹ ಸತ್ಯವನ್ನು ಸರಳವಾಗಿ ನಿರೂಪಿಸುವಂಥದ್ದಾಗಿದೆ. ಹೀಗೆ ಅರಿತು ಸುಂದರವಾಗಬೇಕಾಗಿದ್ದ ವಿಶ್ವದ ಕಲ್ಪನೆಯೆ ವಿಕಲ್ಪಗೊಂಡು ಮಾನವ ನರನಾಗಿ ಭಯ ಸ್ವಾರ್ಥಗಳ ತೆಕ್ಕೆಗೆ ಸಿಕ್ಕಿದ್ದಾನೆ. ನಾವು ಹೋಗಿ ನಾನು ಆಗಿದ್ದಾನೆ. ಈ ನಾನು ಎನ್ನುವ ಸ್ವಾರ್ಥದ, ಭಯದ ಅಂತರಂಗದಲ್ಲಿ ಗಳಿಕೆ, ಲೋಭ, ಜಗಳಗಂಟತನ ಮನೆಮಾಡಿದೆ. ಏಕೆಂದರೆ “ಸಾವಿರಾರು
ವರ್‍ಷಗಳ ಅವಧಿಯಲ್ಲಿ ನಮ್ಮ “ಪೂರ್ವಜರು ಬದುಕುವುದಕ್ಕಾಗಿ ಬೇಟೆಯಾಡಬೇಕಾಯಿತು, ಹೋರಾಡಬೇಕಾಯಿತು, ಕೊಲ್ಲಬೇಕಾಯಿತು; ಈ ಗುಣ ನಮ್ಮ ರಕ್ತದಲ್ಲಿದೆ. ಔತಣ ಇನ್ನೊಮ್ಮೆ ಬೇಗ ಆಗದೆ ಹೋಗಬಹುದೆಂಬ ಭೀತಿಯಿಂದ ಹೊಟ್ಟೆ ಬಿರಿಯುವಂತೆ ಅವರು ತಿನ್ನಬೇಕಾಗಿತ್ತು. ಈ ಗುಣ ನಮ್ಮ ರಕ್ತದ ಕಣಕಣದಲ್ಲಿ ಸೇರಿಕೊಂಡಿದೆ.” (ಇತಿಹಾಸದ ಪಾಠಗಳು – ವಿಲ್ ಮತ್ತು ಏರಿಯಲ್ ಡ್ಯುರಾಂಟ್, ಅನುವಾದ: ಭಗವಾನ್, ಪುಟ.೧೧, ಮೊದಲ ಮುದ್ರಣ ೧೯೭೮.) ಇಂದು ಆಗತ್ಯ ಆಗಬೇಕಾಗಿರುವುದು ಈ ರಕ್ತದ ಶುದ್ಧೀಕರಣ.

ರಾಷ್ಟ್ರ ಮತ್ತು ಕೋಮುವಾದ ಈ ವಿಕಲ್ಪದ ಬುದ್ಧಿಗೆ ಒದಗಿದ ಭಯ ಮತ್ತು ಸ್ವಾರ್ಥದಿಂದ ವಿಶ್ವ ಮತ್ತು ವಿಶ್ವಮಾನವತೆಯನ್ನು ಕೊಂದು ಉಂಟಾಗಿರುವ ವಿಶ್ವದ, ವಿಶ್ವಮಾನವತೆಯ ತುಣುಕು ಮಾತ್ರ. ಈ ತುಣುಕುಗಳನ್ನು ತೊಡೆದುಹಾಕಿ ರಾಷ್ಟ್ರಕವಿ ಕುವೆಂಪು ಅವರ ಕರೆಯಂತೆ ಆ ಮತ ಈ ಮತಗಳ ಗೊಡವೆಯನ್ನು ತೊಡೆದು ಮನುಜಮತವನ್ನು ಹಿಡಿದು ವಿಶ್ವಪಥದೆಡೆಗೆ ಇಂದು ನಾವು ನಮ್ಮ ಬದುಕಿನ ರಥವನ್ನು ತಿರುಗಿಸಬೇಕಾಗಿದೆ.

ಇಲ್ಲಿ ಸೇರಿರುವ ಈ ಎಲ್ಲ ಚೇತನಗಳಲ್ಲಿ ಹಾಗೂ ಕಾರಣಾಂತರವಾಗಿ ಸೇರಲಾಗದಿರುವ ಮಿಕ್ಕೆಲ್ಲ ಚೇತನಗಳಲ್ಲಿ ನನ್ನ ಕಳಕಳಿಯ ಕೋರಿಕೆ ಇಷ್ಟೆ. ನಾವು ನಮ್ಮ ಬೇರುಗಳನ್ನು ಹಿಡಿದು ಹೊರಟರೆ ಜಾತಿ, ಮತ, ಕುಲ ಗೋತ್ರಗಳ ಸೊಂಕಿಲ್ಲದ ಒಂದೇ ಮೂಲದಲ್ಲಿ ಬಂದು ನಿಲ್ಲುತ್ತೇವೆ. ಇತಿಹಾಸವನ್ನು ತೆರೆದರೆ ಇಲ್ಲಿನ ಮೂಲನಿವಾಸಿಗಳೇ ಕ್ರಿಶ್ಚಿಯನ್ನರಾಗಿ, ಮಹಮದೀಯರಾಗಿ ಮತಾಂತರವಾಗಿರುವುದನ್ನು ಕಾಣಬಹುದು. ಇಲ್ಲಿರುವ ಬಹಳಷ್ಟು ಮಂದಿ ಮುಸಲ್ಮಾನರೂ ಸಹ ಸಾಮಾಜಿಕ ಒತ್ತಡಕ್ಕೆ ಬಲಿಯಾಗಿರುವ ಈ ನಾಡಿನ ಮಣ್ಣಿನ ಮಕ್ಕಳೇ ಆಗಿದ್ದಾರೆ. ಮಣ್ಣಿನ ಮಕ್ಕಳಾದ ಮೂಲದ್ರಾವಿಡರೊಂದಿಗೆ ಬೆರೆಯದ ಕೇವಲ ಕೈಹಿಡಿಯಷ್ಟು ಬಂದ ಆರ್ಯರಾಗಲೀ, ಮುಸಲ್ಮಾನರಾಗಲೀ ಹಾಗೂ ಕ್ರಿಶ್ಚಿಯನ್ನರಾಗಲೀ ತಮ್ಮ ಚೇಷ್ಟೆಗಳನ್ನು ಬಿಟ್ಟು ಈ ಮಣ್ಣಿನ ಗುಣವನ್ನು ಕಂಡುಕೊಂಡು ಅದರಲ್ಲಿ ಒಂದಾಗಿ ಬೆರೆತು ಬಾಳುವ ವಿಶಾಲ ಹೃದಯವನ್ನು ಪಡೆದುಕೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ಇತಿಹಾಸ ಅದನ್ನು ಬಲಾತ್ಕಾರದಿಂದಲಾದರೂ ಕೊಟ್ಟೇ ತೀರುತ್ತದೆ. ಅದಕ್ಕಾಗಿ ಇವರು ಮಾಡಬೇಕಾಗಿರುವ ಮೊದಲ ಕೆಲಸವೆಂದರೆ ಎಲ್ಲ ಮತಗಳೂ ಹೆತ್ತಿರುವ ಅನಿಷ್ಟ ಕೂಸುಗಳಾದ ಕೋಮುಭಾವನೆಯನ್ನೂ, ಪ್ರತ್ಯೇಕತಾ ದೃಷ್ಟಿಯನ್ನೂ ಬೆಳೆಸುವ ಜಾತಿಮತಗಳನ್ನು ತಮ್ಮ ತಮ್ಮ ಹೃದಯದಿಂದ ಬೇರು ಸಹಿತ ಕಿತ್ತೆಸೆದು ಅಲ್ಲಿ ಮಾನವತೆಯನ್ನು, ಸಮಾನತೆಯನ್ನು, ಐಕ್ಯತೆಯನ್ನು, ಪರಸ್ಪರ ಬೆಸೆದುಕೊಳ್ಳಬಲ್ಲ ಪ್ರೀತಿ ವಿಶ್ವಾಸಗಳನ್ನು ಬಿತ್ತಿಕೊಳ್ಳಬೇಕು. ಅದಕ್ಕೆ ಮೊದಲನೆಯ ಹೆಜ್ಜೆಯಾಗಿ ಅಸಮಾನತನೆಯ ಅನಿಷ್ಟ ಸಂಕೇತವಾದ ಜನಿವಾರ, ಉಡುದಾರ, ಶಿವದಾರಗಳನ್ನ ಮೀರಿ ಬೆಳೆದು ಅವುಗಳಿಂದ ಬಿಡುಗಡೆ ಹೊಂದಬೇಕು. ಜಾತಿ ಮತ ಸೂಚಕವಾದ ಗಡ್ಡ ಬಿಡುವುದನ್ನು ಬುರ್ಕಾ ಹಾಕುವುದನ್ನು ತೊಡೆಯಬೇಕು. ಮುಸಲ್ಮಾನರು ಈ ರಾಷ್ಟ್ರದ ಮಣ್ಣಿಗೆ, ಈ ರಾಷ್ಟ್ರದ ಮಾನವರೊಂದಿಗೆ, ಬೆಸೆದುಕೊಳ್ಳುವ ಸಲುವಾಗಿ Common Civil Code (In Pursuance of goal of secularism, the state must stop administering religion based personal laws,-Dr.Tahir Mahamood in his book Muslim Personal Law, 1977 page 200-202 ಅನ್ನು ತರಬೇಕೆಂದು ಅವರೇ ಮುಂದಾಗಿ ಮೊಟ್ಟಮೊದಲಿಗೆ ಘೋಷಿಸಬೇಕು. ಹಾಗೆಯೆ ಮಿಕ್ಕವರೂ ಸಹ ಅವರವರ ಮತೀಯ ಸಂಕೇತಗಳನ್ನ ತೊಡೆದು ಹಾಕಬೇಕು. ದೇಹವನ್ನು ಇಲ್ಲಿಟ್ಟುಕೊಂಡು ಮುಸಲ್ಮಾನ ರಾಷ್ಟ್ರಗಳಿಗೆ ಮನಸ್ಸನ್ನು ಮಾರಿಕೊಂಡಿರುವವರು ಪಾಕಿಸ್ತಾನ ಬಾಂಬು ಹಾಕಿದರೆ ಇಲ್ಲಿಯ ಜನರ ಜೊತೆ ನಾವೂ ಸಾಯುತ್ತೇವೆಂಬ ಸತ್ಯವನ್ನು ಅರಿಯಬೇಕು. ಇಲ್ಲದಿದ್ದರೆ ಮುಸಲ್ಮಾನರ ಈ ಸಮ್ಮೇಳನ: ಇದೇ ಜಾಗದಲ್ಲಿ ಮಾಡುವ ಆರೆಸೆಸ್‌ನ, ವಿಶ್ವಹಿಂದೂ ಪರಿಷತ್ತಿನ ಸಂಘಸಮ್ಮೇಳನ ಮಾನವರನ್ನು ಪರಸ್ಪರ ವಂಚಿಸುವ ಕ್ರೂರ ಆತ್ಮವಂಚನೆಯಾಗಿ ಸಮಾಜಕ್ಕೆ ಘೋರ ವಿಷವಾಗಿ ಪರಿಣಮಿಸುತ್ತದೆ. ಎಡ್ಮಂಡ್ ಬರ್ಕ್ ಮಹಾಶಯ ಒಂದು ಮಾತು ಹೇಳಿದ್ದಾನೆ : ‘ಯಾವ ರಾಷ್ಟ್ರಕ್ಕೆ ಸುಧಾರಣೆ ಸಾಧ್ಯವಿಲ್ಲವೋ ಅಂತಹ ರಾಷ್ಟ್ರ ಬದುಕುಳಿಯಲೂ ಸಾಧ್ಯವಿಲ್ಲ’ ಎಂದು. ಆದ್ದರಿಂದ ರಾಷ್ಟ್ರ ಉಳಿಯಬೇಕಾದರೆ ಸುಧಾರಣೆಗೆ ಸಾಧ್ಯವಾದ ಜಾಡಿನಲ್ಲಿ ನಮ್ಮ ನಾಡಿ ಮಿಡಿಯಲು ಅವಕಾಶವಿರಬೇಕು. ಮತೀಯವಾಗಿ ಸೃಷ್ಟಿಸಿಕೊಂಡಿರುವ ಕ್ರೂರ ಕಬ್ಬಿಣದ ನಿಯಮಗಳಿಂದ, ಸಂಪ್ರದಾಯದ ನಿಯಮಗಳ ಸಂಕೋಲೆಯಿಂದ ಬಿಡಿಸಿಕೊಂಡು ಬದಲಾಗುವ, ಪರಿವರ್ತನೆಯ ದಿಕ್ಕಿನತ್ತ ನಾವು ಜಿಗಿಯಬೇಕು. ಇಲ್ಲವಾದಲ್ಲಿ ನಾವು ನಮಗರಿವಿಲ್ಲದೆಯೇ ನಿಂತ ನೀರಿನ ಸ್ಥಿತಿಗೆ ಬಂದು ತನ್ಮೂಲಕ ಎಲ್ಲತರಹದ ರೋಗರುಜಿನಗಳು ಮನಸ್ಸನ್ನಾಕ್ರಮಿಸಲು ಆಶ್ರಯಕೊಡುತ್ತೇವೆ.

“ನನ್ನ ರಾಷ್ಟ್ರಕ್ಕೆ ಉಪಯುಕ್ತವಾಗಿದ್ದು ಅದು ಮತ್ತೊಬ್ಬನಿಗೆ ಅಪಾಯಕರವಾಗಿದ್ದರೆ ಅದನ್ನು ನಾನು ನನ್ನ ರಾಜನಿಗೆ ಸೂಚಿಸುವುದಿಲ್ಲ; ಏಕೆಂದರೆ ನಾನು ಫ್ರೆಂಚ್ ಮನುಷ್ಯನೆನ್ನಿಸಿಕೊಳ್ಳುವುದಕ್ಕೆ ಮೊದಲು ನಾನು ಮನುಷ್ಯನಾಗಿರುವುದರಿಂದ ಅಥವಾ ನಾನು ಅಗತ್ಯ ಮಾನವನಾಗಿದ್ದು ಆಕಸ್ಮಿಕವಾಗಿ ಫ್ರೆಂಚ್ ಮನುಷ್ಯನಾಗಿರುವುದರಿಂದ” ಮಾಂಟಿಕ್ಯೂ (Montes Quieu) ಎನ್ನುವ ಮಹಾಶಯನ ಈ ಅಪೂರ್ವ ಮಾತುಗಳನ್ನು ಅನಂತತೆಯನ್ನು ಆಲಂಗಿಸಿಕೊಳ್ಳಬಲ್ಲ ಎಲ್ಲ ಚೈತನ್ಯಗಳೂ ಮನನ ಮಾಡಿ ಮೈಗೂಡಿಸಿಕೊಳ್ಳಬೇಕು; ಆಚರಣೆಗೆ ತಂದುಕೊಂಡು ಅರಳಬೇಕು.

ಇಲ್ಲಿ, ನಾನು ಭಾರತೀಯ ಎಂದು ಎದೆತಟ್ಟ ಹೇಳಿಕೊಳ್ಳಬಲ್ಲ ಮಂದಿ ಎಷ್ಟಿದ್ದಾರೆ. ಭಾರತದ ಮಣ್ಣಿನ ಋಣವನ್ನು ತಿಂದು ದೇಶದುದ್ದಗಲಕ್ಕೂ ಅದಕ್ಕೆ ದ್ರೋಹ ಬಗೆಯುವ ತಾಯಿಗ್ಗಂಡರ ಸಮೂಹವೆ ಸೇರಿದೆ. ಇಂತಹ ಸಂದರ್ಭದಲ್ಲಿ ಫ್ರೆಂಚ್‌ದೇಶದ ಮಾಂಟಿಕ್ಯೂ ಮಹಾಶಯನ ಮೂಲ ಮಾನವ ಪ್ರಜ್ಞೆ ತನ್ನ ಕ್ರಿಯಾತ್ಮಕ ಕೆಲಸವನ್ನು ಭಾರತದ ಎಲ್ಲರ ಹೃದಯದಲ್ಲಿ ಮೂಡಿಸಬೇಕಾಗಿದೆ. ನಾವು ಮಾನವರಾಗುವುದಕ್ಕೆ ಬದಲಾಗಿ ಹಿಂದೂಗಳಾಗಿ, ಮುಸಲ್ಮಾನರಾಗಿ, ಕ್ರಿಶ್ಚಿಯನ್ನರಾಗಿ ಇತ್ಯಾದಿ ಮತೀಯ ಮನುಷ್ಯರಾಗಿದ್ದೇವೆ. ಈ ಮತೀಯ ಮನಸ್ಸಿನಿಂದ ಆರ್ಯ ಸಮಾಜ, ಆಕಾಲಿದಳ, ಆಂಗ್ಲೋ ಇಂಡಿಯನ್ ಸಮಾಜ, ಡಿ. ಎಂ. ಕೆ, ಆರ್. ಎಸ್. ಎಸ್, ವಿಶ್ವಹಿಂದೂ ಪರಿಷತ್, ಜಮಿಯತುಲ್ ಉಲೆಮಾ, ಮುಸ್ಲಿಂಲೀಗ್, ಮುಸ್ಲಿಂ ಮಜ್ಲಿಸ್, ಜಮಾ ಅತೆ – ಇಸ್ಲಾಮಿ – ಹಿಂದ್ ಇತ್ಯಾದಿ ಕೋಮುವಾದಿ ಸಂಘಟನೆಗಳನ್ನು ಸೃಷ್ಟಿಸಿಕೊಂಡು ಅದಕ್ಕೆ ಬಂದಿಯಾಗಿ ಒದ್ದಾಡುತ್ತಿದ್ದೇವೆ, ಈ ಸಮಸ್ಯೆಯ ಪರಿಹಾರದ ನೆಪದಲ್ಲಿ ಸಮಸ್ಯೆಯನ್ನು ಮತ್ತೆ ಜಟಿಲಗೊಳಿಸಿ ನಮ್ಮ ಸ್ವಾರ್ಥದ ಬೇಳೆಯನ್ನು ಭಯದ ಬಾಂಡಲೆಯಲ್ಲಿ ಬೇಯಿಸಿಕೊಳ್ಳುತ್ತಿದ್ದೇವೆ.

ಆದ್ದರಿಂದ ನಾನಿಂದು ಇಲ್ಲಿ ಆ ಮತ ಈ ಮತಗಳೆಲ್ಲವನ್ನು ತಿರಸ್ಕರಿಸಿ ಮಾನವ ಕುಲದ ನೆಲೆಗಟ್ಟಿನ ಮೇಲೆ ನಿಂತು ಘೋಷಿಸುತ್ತೇನೆ; ಸತ್ಯಕ್ಕೆ ಸೇತುವಾಗುವ ಸಾಲಿನಲ್ಲಿ ಸ್ಪಷ್ಟವಾಗಿ ಚಿಂತಿಸುವ, ಉದಾತ್ತವಾಗಿ ಆಲೋಚಿಸುವ, ತಪ್ಪನ್ನು ತುಳಿದು, ವಂಚನೆಯನ್ನು ವಧಿಸಿ ನಿಜಕ್ಕಾಗಿ ಎದೆಕೊಡುವ ಮಾನವರ ಮೇಲೆ ನನಗೆ ನಂಬಿಕೆ ಇದೆ. ಆಂತಹ ಮಾನವರ ಹೃದಯದ ಹಂದರದಲ್ಲಿ ಸುಖ, ಶಾಂತಿ, ಸಮಾನತೆ ಸಮೃದ್ಧವಾಗಿ ಬೇರುಬಿಟ್ಟು ಅನಂತ ಆಕಾಶದಲ್ಲಿ ತನ್ನ ಕೊಂಬೆ ರೆಂಬೆಗಳನ್ನು ಹರಡಿ ಫಲ ಕೊಡಬಲ್ಲದು. ನಿಮ್ಮಗಳ ಹೃದಯ ಅಂತಹ ಫಲಕೊಡುವ ಫಲವತ್ತಾದ ತೋಟವಾಗಲಿ. ರಾಷ್ಟ್ರಕ್ಕೆ ಜನಾಂಗಕ್ಕೆ ಫಲಕೊಟ್ಟು ಫಲಪಡೆಯುವಂತಾಗಲಿ ಎಂದು ಹಾರೈಸುತ್ತೇನೆ.

ಯಾವುದೇ ರಾಷ್ಟ್ರ ಇಂಥ ಮುಕ್ತ ಮನಸ್ಸುಳ್ಳ ಮಾನವರಿಂದ ಮಾತ್ರ ಕೋಮುವಾದದ ಗಂಡಾಂತರವಿಲ್ಲದೆ ನಿರ್ಭೀತಿಯಿಂದ ಉಸಿರಾಡಿ ವಿಶ್ವದಲ್ಲಿ ಹೆಮ್ಮೆಯಿಂದ ತಲೆ ಎತ್ತಿ ನಿಲ್ಲಬಲ್ಲದು. ಸಂಕುಚಿತ ಮತೀಯ ಕೂಪಗಳಲ್ಲಿ ಹುದುಗಿರುವ ಹೃದಯ ಮನಸ್ಸುಳ್ಳ ಈ ಮಾನವತೆಗೆ ಅಂತಹ ಕಾಲ ಎಂದಿಗೆ ಬಂದೀತು ? ಇದೊಂದು ಚಿದಂಬರ ರಹಸ್ಯವಾದರೂ ಅದಕ್ಕಾಗಿ ನಿರಾಶರಾಗುವುದು ಬೇಡ. ಕಾಯೋಣ! ಏಕೆಂದರೆ ಶತಶತಮಾನಗಳಿಂದ ನಕ್ಷತ್ರಗಳು ಕಾಯುತ್ತಲೇ ಇವೆ. (ಮೊದಲಿನ ಭಾಷಣಕಾರರು ಭಾಷಣ ಮಾಡಿದ ಮೇಲೆ ಸಭಿಕರಿಂದ ಪ್ರತಿಕ್ರಿಯೆ ಇರಲಿಲ್ಲ. ಅಂದರೆ ಚಪ್ಪಾಳೆ ತಟ್ಟಿ ತಮ್ಮ ಸಂತಸವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಅವರಿಗಿರಲಿಲ್ಲ. ನನ್ನ ಭಾಷಣಕ್ಕೆ ಮುಂಚೆ ಸ್ವಾತಂತ್ರ್ಯವನ್ನು ಕಳೆದುಕೊಂಡು ನಿಯಮಗಳಲ್ಲಿ ಬಂಧಿಯಾಗುವುದಕ್ಕಿಂತ ಸಾಯುವುದು ಮೇಲು ಎಂದು ನನ್ನ ಭಾಷಣ ಪ್ರಾರಂಭಿಸಿದ್ದೆ. ಭಾಷಣ ಮುಗಿದ ಮೇಲೆ ಸಭೆಯ ಮುಕ್ಕಾಲು ಜನ ಚಪ್ಪಾಳೆಯ ಹರ್ಷೋದ್ಗಾರ ಮಾಡಿದಾಗ ಅವರ ಸ್ವಾತಂತ್ರ ಮನಸ್ಸಿನ ತುಡಿತವನ್ನು ಕಂಡು ನನಗೆ ಮಾನವತೆಯ ಬಗ್ಗೆ ಆನಂದವಾಯ್ತು.)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅನಂತಮೂರ್ತಿಗೆ
Next post ತುಟ್ಟಿ

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

cheap jordans|wholesale air max|wholesale jordans|wholesale jewelry|wholesale jerseys