ಹೋಗಿಯೇ ಬಿಟ್ಟಿದ್ದ!

ಹೋಗಿಯೇ ಬಿಟ್ಟಿದ್ದ!

ಒಮ್ಮೊಮ್ಮೆ ಕಲ್ಪನೆಗಿಂತಲೂ ನಿಜವು ಆಶ್ಚರ್ಯಕರವಾಗಿರುತ್ತದೆ. ಕೆಲವು ವೇಳೆ ಕಟ್ಟುಕತೆಯೋ ಎನ್ನುವಷ್ಟು ಸ್ವಾಭಾವಿಕವೂ ಆಗಿರುತ್ತದೆ. ಈಗ ನಾನು ಹೇಳುವ ವಿಷಯವೂ ಆ ಜಾತಿಗೆ ಸೇರಿದ್ದು. ಕೇಳಿದವರು ಇದು ಖಂಡಿತ ನನ್ನ ಕಲ್ಪನೆಯ ಪರಿಣಾಮವೆಂದು ಹೇಳದಿರಲಾರರು. ಅದಕೋಸ್ಕರವಾಗಿಯೇ ಈ ವಿಷಯಕ್ಕೆ ಸಂಬಂಧಪಟ್ಟ ಪತ್ರಿಕೆಗಳನ್ನೆಲ್ಲ ನಾನು ಜೋಪಾನವಾಗಿಟ್ಟಿರುವುದು. ಯಾರಿಗೆ ಸಂಶಯವಿದೆಯೋ ಅವರು ಬಂದು ಇವುಗಳನ್ನು ಪರೀಕ್ಷಿಸಬಹುದು. ಆಗ ನಿಜವಾಗಿಯೂ ‘ಸತ್ಯವು ಕಲ್ಪನೆಯನ್ನು ಮೀರಿಸುವುದು’ ಎಂಬುದರ ಮನವರಿಕೆಯಾಗದಿರಲಾರದು.

ಕಾಲೇಜಿನಲ್ಲಿ ಓದುತ್ತಿದ್ದ ಒಂದೇ ಊರಿನ ನಾವೈದು ಜನ ಮಿತ್ರರು ಯಾವುದೋ ಒಂದು ರಜೆಯಲ್ಲಿ ಊರಿಗೆ ಹಿಂದಿರುಗುತ್ತಿದ್ದೆವು. ನಾವು ಕುಳಿತ ಡಬ್ಬಿಯಲ್ಲಿ ನಾವೈವರಲ್ಲದೆ ಬೇರೊಬ್ಬ ಮುದುಕನೂ ಇದ್ದನು. ಆ ಮುದುಕನಿಗೆ ಅದೇಕೆ ನಮಗೆ ಆ ಕತೆ ಹೇಳಬೇಕೆಂದು ತೋರಿತೋ ತಿಳಿಯದು. ಕೆಲವು ದಿನಗಳ ಹಿಂದೆ ನಡೆದೊಂದು ಕೊಲೆಯ ವಿಷಯ ನಾವು ಮಾತಾಡುತ್ತಿದ್ದೆವು. ಅಷ್ಟು ಹೊತ್ತು ಸುಮ್ಮನಿದ್ದ ಆ ಮುದುಕ ತಾನಾಗಿಯೇ ‘ನಾನೊಂದು ಕತೆ ಹೇಳಲೆ?’ ಎಂದು ಕೇಳಿದ. ಮುದುಕ ಯೋಗ್ಯನಂತೆ ಬೇರೆ ತೋರುತ್ತಾನೆ, ನಿಷ್ಠುರವಾಗಿ ‘ನಿನ್ನ ಕತೆ ಕೇಳುವ ಇಚೆ ನಮಗಿಲ್ಲ’ ಎಂದು ಬಿಡುವುದು ಹೇಗೆ? ಇಷ್ಟವಿಲ್ಲದಿದ್ದರೂ ಸಮ್ಮತಿ ಸೂಚಿಸಿದೆವು.

ಮುದುಕ ಹೆಚ್ಚಿನ ಮುನ್ನುಡಿ ಯಾವುದನ್ನೂ ಬೆಳೆಸದೆ ಹೇಳಲು ತೊಡಗಿದ:

“ಇದು ಮೂವತ್ತು ವರ್ಷಗಳ ಹಿಂದಿನ ಮಾತು, ನಾನೀಗ ಯಾರ ವಿಷಯವಾಗಿ ಹೇಳಬೇಕೆಂದಿರುವನೋ ಅವನಾಗ ಇಪ್ಪತೈದು ವರ್ಷ ಪ್ರಾಯದ ಹೃಷ್ಟಪುಷ್ಟನಾದ ಯುವಕನಾಗಿದ್ದನು. ಬಲು ಚಿಕ್ಕ ಪ್ರಾಯದಲ್ಲೇ ತಂದೆ ತಾಯಿಗಳನ್ನು ಕಳೆದುಕೊಂಡು, ಬೇರೆಯವರ ಮನೆಯಲ್ಲಿ ಬೆಳೆದಿದ್ದ. ಎಷ್ಟಾದರೂ ಬೇರೆಯವರು ಹೊಟ್ಟೆ-ಬಟ್ಟೆಗೆ ಕೊಡುವದೇ ಅವರಿಗೆ ಕಷ್ಟ. ಇನ್ನು ಎಲ್ಲಿಂದ ಬರಬೇಕು ಹಣ! ಎನೋ ಅವನನ್ನು ಸಾಕಿದವನ ಹೆಂಡತಿ ಒಳ್ಳೆಯವಳು. ಅವಳ ದಯೆಯಿಂದ ಆತ ಸ್ವಲ್ಪ ಓದುಬರಹಗಳನ್ನು ಕಲಿತ; ಅಷ್ಟೇ ಅವನ ವಿದ್ಯಾಭ್ಯಾಸ ಎಂಟು ಹತ್ತು ವರ್ಷ ವಯಸ್ಸಾದಂದಿನಿಂದ ಅವನಿಗೆ ಆ ಮನೆಯವರ ಕೆಲಸ ಸುರುವಾಯ್ತು. ಮೊದಮೊದಲು ಕರುಗಳನ್ನು ಕಾಯುತ್ತಿದ್ದ. ದೊಡ್ಡವನಾಗುತ್ತ ಬಂದಂತೆ ಕೆಲಸಗಳೂ ಹೆಚ್ಚು ಹೆಚ್ಚಾಯ್ತು. ಆದರವನಿಗೆ ಕೆಲಸವೆಂದರೆ ಬೇಸರವಿಲ್ಲ. ಬೆಳಗಿನಿಂದ ರಾತ್ರಿಯವರೆಗೂ ದುಡಿಯುತ್ತಿದ್ದ. ಅವನಂಥ ನಂಬಿಕೆಯ ಕಷ್ಟಗಾರನಾದ ಆಳು ಮತ್ತೆಲ್ಲಿ ದೊರೆಯಬೇಕು! – ಅದೂ ಸಂಬಳವಿಲ್ಲದೆ !! ಮನೆಯವರಿಗೂ ಅವನೆಂದರೆ ವಿಶ್ವಾಸ- ಆದರ!

“ಹೀಗೆ ದಿನಗಳೊಂದೊಂದಾಗಿ ವರ್ಷಗಳು ಕಳೆದವು. ಅವನೂ ಬೆಳೆಯುತ್ತ ಬಂದ. ಕಷ್ಟದಿಂದ ಬೆಳೆದ ಆರು ಅಡಿ ಎತ್ತರದ ಗಟ್ಟಿಮುಟ್ಟು ಶರೀರ, ಆರೋಗ್ಯದಿಂದ ತುಂಬಿದ ಗಂಭೀರವಾದ ಮುಖ ಚಟುವಟಿಕೆಯಿಂದ ತುಂಬಿ ಮಿಂಚುತ್ತಿದ್ದ ಕಣ್ಣುಗಳು ಇವೆಲ್ಲಾ ಸೇರಿ, ಆ ಮನೆಯವರ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ನೂರಾರು ಆಳುಗಳ ಮಧ್ಯದಲ್ಲಿದ್ದರೂ ಅವನನ್ನು ಎತ್ತಿ ಬೇರೆಯಾಗಿ ತೋರಿಸುತ್ತಿದ್ದುವು.

“ಹೊಲದಲ್ಲಿ ಕೆಲಸ ಮಾಡುತ್ತಿದ್ದರೂ ಅವನಿರುವುದು ಮೊದಲಿನಂತೆ ಅವರ ಮನೆಯಲ್ಲೇ. ಊಟ, ತಿಂಡಿ ಎಲ್ಲಾ ಅವರಿಗಾದಂತೆ ಇವನಿಗೂ ದೊರೆಯುತ್ತಿತ್ತು. ಹೊಲದಲ್ಲಿ ಕೆಲಸ ತೀರಿಸಿ ದನಗಳನ್ನು ಹಟ್ಟಿಗೆ ಕೂಡಿಸಿ, ಹಾಲು ಕರೆದು, ಕರುಗಳನ್ನು ಬೇರೆಯಾಗಿ ಕಟ್ಟಿ, ಹುಲ್ಲುಹಾಕಿ ಮನೆಗೆ ಬರುವಾಗ ದೀಪಹತ್ತಿಸುವ ಸುಮಯವಾಗುತ್ತಿತ್ತು. ಆ ಕೆಲಸವೂ ಅವನಿಗೇ. ದೀಪ ಹತ್ತಿಸಿ ಆಯಿತು ಎಂದರೆ ಮನೆಯ ಚಿಕ್ಕಮಕ್ಕಳ ಕೈಕಾಲು ತೊಳೆಯಿಸಬೇಕು; ಇದು ಆವನ ದಿನಚರಿಯ ಕೆಲಸಗಳಲ್ಲಿ ಕೊನೆಯದು. ಇಷ್ಟಾಗುವಾಗ ಏಳುವರೆ ಗಂಟೆಯಾಗುತ್ತಿತ್ತು. ಕೈಕಾಲು ತೊಳೆಯಿಸಿಕೊಂಡು ಮಕ್ಕಳು ಓದುವುದಕ್ಕೆ ಕುಳಿತರೆಂದರೆ ಇವನೂ ಒಂದು ಮೂಲೆಯಲ್ಲಿ ಕುಳಿತು, ಆ ಮಕ್ಕಳ ಪುಸ್ತಕಗಳನ್ನು ತಿರುವಿಹಾಕುತ್ತಿದ್ದ. ಆದರಿಂದಲೇ ಚಿಕ್ಕಂದಿನಲ್ಲಿ ಕಲಿತ ಸ್ವಲ್ಪ ಓದುಬರಹ ಮರೆತಿರಲಿಲ್ಲ.

ಒಂಬತ್ತು ಗಂಟೆಗೆ ಅವನಿಗೆ ಊಟ ಸಿಕ್ಕುತ್ತಿತ್ತು. ಆಗ ಊಟ ಮಾಡಿ ಮಲಗಿದರೆ ಪುನಃ ಬೆಳಗಿನ ನಾಲ್ಕು ಗಂಟೆ ಎದ್ದು ಕೆಲಸಕ್ಕೆ ಪ್ರಾರಂಭ.

ಒಂದು ದಿನದಿಂದ ಇನ್ನೊಂದು ದಿನಕ್ಕೆ ವ್ಯತ್ಯಾಸವಿಲ್ಲದಂತೆ ಇದೇ ತರದ ಕಾರ್ಯಕ್ರಮ ಅವನ ಜೀವನದಲ್ಲಿ. ಆಗ ತನಗೀ ತರದ ಜೀವನದಲ್ಲಿ ತೃಪ್ತಿಯೋ, ಆತೃಪ್ತಿಯೋ ಎಂದು ಯೋಚಿಸಲು ಸಹ ಸಮಯವಿರಲಿಲ್ಲ. ಇದ್ದರೂ ಆ ತರದ ಯೋಚನೆ ಎಂದೂ ಅವನಲ್ಲಿ ಉಂಟಾಗಿರಲಿಲ್ಲ. ಅವನ ಈ ತರದ ಜೀವನದಲ್ಲಿ ಸ್ವಲ್ಪವಾಗಿ ಬಹುಶಃ ಅವನಿಗೆ ತಿಳಿಯದಂತೆಯೇ ಪರಿವರ್ತನವಾಗತೊಡಗಿದಾಗ ಅವನಿಗೆ ೨೪ ವರ್ಷದ ವಯಸ್ಸು ನಡೆಯುತ್ತಿತ್ತು.

“ಆ ವರ್ಷ ಅವರ ಗದ್ದೆಯ ಕೆಲಸ ಬೇಗ ತೀರಿಹೋಗಿತ್ತು. ಆದುದರಿಂದ ಅವನಿಗೆ ಹಿಂದೆ ಎಂದೂ ದೊರೆಯದಷ್ಟು ವಿರಾಮ. ಮತ್ತೆ ಅದೇ ವರ್ಷ ಆ ಮನೆಯವರ ಹಳೆಯ ಮೇಸ್ತ್ರಿಯೂ ಸತ್ತುಹೋದುದರಿಂದ ಅವನಿಗೇ ಈ ಕೆಲಸವೂ ದೊರೆಯಿತು. ಈಗವನಿಗೆ ಬೇರೆಯವರಿಂದ ಕೆಲಸ ಮಾಡಿಸುವುದಲ್ಲದೆ ತಾನೇ ಮಾಡಬೇಕಾಗಿರಲಿಲ್ಲ. ಇದರ ಜೊತೆಗೆ ಹಿಂದಿನ ಮೇಸ್ತ್ರಿಗಿದ್ದಷ್ಟಲ್ಲದಿದ್ದರೂ ಸ್ವಲ್ಪ ಸಂಬಳ ಬೇರೆ ಸಿಕ್ಕತೊಡಗಿತು.

ಜೀವನದಲ್ಲಿ ಎಂದೂ ತನ್ನದೆಂಬ ಒಂದು ಬಿಡಿ ಕಾಸೂ ಇಲ್ಲದಿದ್ದ ಅವನಿಗೆ, ಅಷ್ಟರಿಂದಲೇ ತೃಪ್ತಿ- ಆನಂದ.

ಮೊದಲೇ ಹೇಳಿದನಲ್ಲ, ಆ ವರ್ಷ ಆವನ ಕೆಲಸ ಬೇಗ ತೀರಿತ್ತೆಂದು, ತಮ್ಮ ಕೆಲಸ ತೀರಿದ ಮೇಲೆ ನೆರೆಹೊರೆಯವರ ಗದ್ದೆಗಳಿಗೆ ಹೋಗಿ ಸಹಾಯ ಮಾಡುವುದು ಹಳ್ಳಿಯ ಕಡೆಗೆ ವಾಡಿಕೆ. ಈಗವನು ಮೇಸ್ತ್ರಿಯಾದರೂ ಪದ್ಧತಿಯಂತೆ ಬೇರೆಯವರ ಗದ್ದೆಗಳಿಗೆ ಹೋಗಿ ಸಹಾಯ ಮಾಡುವ ರೂಢಿಯನ್ನು ತಪ್ಪಿಸಲಿಲ್ಲ. ಯಾವಾಗಲೂ ನಾಲ್ಕಾರು ಆಳುಗಳೊಡನೆ ನೆರೆಯವರ ಗದ್ದೆಗೆ ಹೋಗುತ್ತಿದ್ದ.

ಜೋರಾಗಿ ಮಳೆ ಸುರಿಯುತ್ತಿದ್ದರೂ ನಡುಕವನ್ನು ಹುಟ್ಟಿಸುವ ಚಳಿ ಇದ್ದರೂ ತುಂಬ ಜನರೊಂದಾಗಿ ಗದ್ದೆಗಳಲ್ಲಿ ಕೆಲಸ ಮಾಡಲು ಒಂದು ತರದ ಉತ್ಸಾಹವಿದೆ. ಪದಗಳನ್ನು ಹಾಡಿಕೊಳ್ಳುತ್ತ, ಹರಟೆ ಕಚ್ಚುತ್ತ ಕೆಲಸ ಮಾಡುವಾಗ ‘ದಣಿವೆಂದರೇನು?’ ಎಂಬುದೇ ಮರೆತು ಹೋಗುತ್ತೆ. ನಾಟಿ ಕೆಲಸ ಮತ್ತು ಕೊಯ್ಲು ಕೆಲಸಗಳ ಸಮಯದಲ್ಲಿ ಗದ್ದೆಗಳಲ್ಲಿ ಕೆಲಸಮಾಡಲು ಬೇಸರವಿಲ್ಲ. ಅವನಂತೂ ಎಂದೂ ಮೈಗಳ್ಳನಾಗಿ ಕೂತವನಲ್ಲ. ಕೆಲಸವೆಂದರೆ ಅವನಿಗೆ ಆಟ; ಅವನೊಡನೆ ಕೆಲಸ ಮಾಡುವುದೆಂದರೆ ಇತರರಿಗೂ ಉತ್ಸಾಹ, ಗದ್ದೆಗಳಲ್ಲಿ ಗಂಡುಸರೂ ಹೆಂಗುಸರೂ ಒಂದುಗೂಡಿ ಕೆಲಸ ಮಾಡುತ್ತಿರುವುದು ವಾಡಿಕೆ. ನಾಟಿ ಸಮಯದಲ್ಲಿ (ಸಸಿಗಳನ್ನು ನೆಡುವಾಗ) ಹೆಂಗುಸರು ಅಗೆ ತೆಗೆದು ಕಂತೆ ಕಟ್ಟುವರು. ಗಂಡುಸರು ಅವರು ತೆಗೆದ ಅಗೆಗಳನ್ನು ನೆಡುವರು. ಯಾರು ಹೆಚ್ಚು ಅಗೆ ತೆಗೆಯುವುದು, ಯಾರು ಹೆಚ್ಚು ನೆಡುವುದು ಎಂದು ಪೈಪೋಟಿ ಬೇರೆ. ನಾಟಿ ನೆಡುವುದರಲ್ಲಿ ಅವನನ್ನು ಮೀರಿಸುವವರಿಲ್ಲ. ಆ ದಿನ ಅವನು ನೆಡುವಷ್ಟು ಚುರುಕಾಗಿ ಅವನಿಗೆ ಆಗೆ ಒದಗಿಸಿದ ಆ ಅವಳೇ ಅವನ ಜೀವನವನ್ನು ಸಂಪೂರ್‍ಣವಾಗಿ ಪರಿವರ್ತನಗೂಳಿಸಿದಾಕೆ. ಜಾತಿಯಿಂದವಳು ಮುಸಲ್ಮಾನರವಳು.

“ಪ್ರೇಮಕ್ಕೆ ಜಾತಿ ಕುಲಗಳನ್ನು ಕಟ್ಟಿಕೊಂಡು ಮಾಡಬೇಕಾದುದೇನು? ಅದು ಕುರುಡು. ಅದರಲ್ಲೂ ನಿಜವಾದ ಪ್ರೇಮವಾದರೆ ಅದರ ಹಾದಿ ಎಂದೆಂದಿಗೂ ನಿಷ್ಕಂಟಕವಲ್ಲ.

“ಮಳೆ ಬಿಸಿಲೆನ್ನದೆ ಸದಾ ದುಡಿತದಿಂದ ಬಣ್ಣ ಸ್ವಲ್ಪ ಕಪ್ಪಾದರೂ ಸೊಗಸಾದ ಮೈಕಟ್ಟು, ತುಂಬಿದ ಅಗಲವಾದ ಮುಖ. ಆ ಮುಖದಲ್ಲಿ ಹರಿಯುವ ನಗು. ನಗುವಿನಿಂದರಳಿದ ಕಣ್ಣುಗಳು. ಮತ್ತೆ ಆ ಕೆಲಸದಲ್ಲಿಯ ಉತ್ಸಾಹ-ಇದೆಲ್ಲವನ್ನೂ ನೋಡಿದವರು, ‘ಯಾವ ಜಾತಿಯಲ್ಲಾದರೂ ಲತೀಫಾಳಂಥ ಹುಡುಗಿಯರು ಬಲು ಕಮ್ಮಿ’ ಎಂದು ಒಪ್ಪಿಕೊಳ್ಳಬೇಕಾಗುವಂತಿದ್ದಳು… ಅವನ ಮನವನ್ನು ಕದ್ದ ಆ ಮುಸಲ್ಮಾನರ ಹುಡುಗಿ ಲತೀಫಾ.

ಅದೇ ಅವರ ಮೊಟ್ಟ ಮೊದಲಿನ ಪರಿಚಯ. ಇಲ್ಲಿ ಇಷ್ಟು ಹೇಳಿದರೆ ಸಾಕು, ಅವರ ಪ್ರಣಯವು ಹೇಗೆ ಮುಂದುವರಿಯಿತು ಎನ್ನುವ ಅವಶ್ಯಕತೆಯಿಲ್ಲ.

ಅವನಿಗೆ ತನ್ನವರೆಂಬುವರು ಯಾರೂ ಇಲ್ಲ. ಅವಳಿಗೆ ತಾಯಿ ಇದ್ದರೂ ಅವಳು ಇನ್ನೂಬ್ಬನನ್ನು ಮದುವೆಯಾಗಿದ್ದಳು. ಆ ಮದುವೆಯಿಂದ ಮಕ್ಕಳೂ ಇದ್ದರು. ಚಿಕ್ಕಪ್ಪನ ಮನೆಯಲ್ಲಿ ಇವಳ ಜೀವನವೇನೂ ಸುಖಮಯವಲ್ಲ. ಮತ್ತೆ ನೆರೆಹೊರೆಯ ಹೊಲಗದ್ದೆಗಳಲ್ಲಿ ಕೆಲಸ ಮಾಡುವವರಿಗೆ ಒಬ್ಬರನೊಬ್ಬರು ನೋಡುವುದೂ ಕಷ್ಟವಾದ ಮಾತಲ್ಲ. ಅಂತೂ ಆರೇಳು ತಿಂಗಳುಗಳಾಗುವಾಗ ಅವನು ಅವಳಿಗಾಗಿ ತನ್ನ ಜಾತಿಯನ್ನು ಬಿಡಲು ಸಹ ತಯಾರಾಗಿದ್ದ. ಅವಳು! ಅವನಿಗಾಗಿ ತನ್ನ ಜೀವನವನ್ನೇ ಧಾರೆ ಎರೆಯಲು ಸಿದ್ಧಳಾಗಿದ್ದಳು.

ಆದರೆ ಈ ಲೋಕದಲ್ಲಿ ಈ ತೆರದ ಪ್ರೇಮಕ್ಕೆ ಎಡೆ ಎಲ್ಲಿ? ಅವಳ ಚಿಕ್ಕಪ್ಪ ಒಂದು ದಿನ ಇವರಿಬ್ಬರು ಮಾತನಾಡುತ್ತಿರುವುದನ್ನು ನೋಡಿದ; ಅಂದೇ ಅವನಿಗೆ ಸಂಶಯವಾಯ್ತು. ಬೇಗ ಲತೀಫಾಳ ಮದುವೆ ಮಾಡಿ ಬಿಡಬೇಕೆಂದು ಆಗಲೇ ನಿಷ್ಚಯಿಸಿದ. ಅವಳಂತಹ ಹುಡುಗಿಯರನ್ನು ಮದುವೆಯಾಗಲು ಯಾರು ತಾನೇ ಒಪ್ಪರು? ತನ್ನ ಹೆಂಡತಿಯನ್ನು ಒಂದು ತಿಂಗಳ ಹಿಂದೆ ಕಳೆದುಕೊಂಡ – ಮಕ್ಕಳೊಂದಿಗನಾದ ನೆರೆಮನೆಯ ಮುಸಾಲ್ಮಾನನೊಬ್ಬನು ತಯಾರಾಗಿಯೇ ಇದ್ದ. ಲತಿಫಾಳ ಚಿಕ್ಕಪ್ಪ ಅವನಿಂದ ನೂರು ರೂಪಾಯಿಗಳನ್ನು ಪಡೆದುಕೊಂಡು, ಅವನಿಗವಳನ್ನು ಕೊಡಲೊಪ್ಪಿದ. ಈ ಸಂಬಂಧದಲ್ಲಿ ಲತೀಫಾಳ ಇಷ್ಟಾನಿಷ್ಟಗಳನ್ನು ಕೇಳುವಂತಿರಲಿಲ್ಲ. ಅವಳಿಗೂ ಅದು ಚೆನ್ನಾಗಿಗೊತ್ತಿತ್ತು. ಅವನ ಹತ್ತಿರ ಹೋಗಿ ಹೇಳುವುದೊಂದೇ ಅವಳಿಗೆ ತೋರಿದ ಉಪಾಯ, ಆದರೆ ಅವಳು ಮನೆ ಬಿಟ್ಟು ಹೊರಗೆ ಹೋಗದಂತೆ ಎಚ್ಚರವಾಗಿದ್ದ ಅವಳ ಚಿಕ್ಕಪ್ಪ.

“ಆ ದಿನ ಅವನು ಎಂದಿನಂತೆ ಅವಳನ್ನು ಕಾದ, ಗಂಟೆ ಏಳಾದರೂ ಅವಳ ಸುಳಿವಿಲ್ಲ. ಅವಳನ್ನು ನೋಡದೆ ಅವನಿಗೆ ಸಮಾಧಾನವಿಲ್ಲದಿದ್ದರೂ, ಕತ್ತಲಾಗುತ್ತ ಬಂದುದರಿಂದ ಯಜಮಾನನ ಮನೆಗೆ ಹೋಗಿ ದೀಪ ಹತ್ತಿಸದೆ ಉಪಾಯವಿರಲಿಲ್ಲ. ಮನಸ್ಸನ್ನು ಅವಳಡೆಗೆ ಕಳುಹಿಸಿ ಅವನು ಮನೆಗೆ ಬಂದ.

ಮರುದಿನ ಎಂದಿಗಿಂತಲೂ ಒಂದು ಗಂಟೆ ಮೊದಲೇ ಎದ್ದ. ಬೆಳಗಿನ ಕೆಲಸಗಳನ್ನೆಲ್ಲಾ ಬೇಗ ಬೇಗ ತೀರಿ ಎಲ್ಲರೂ ಕಾಫಿ ಕುಡಿಯುತ್ತಿರುವ ಸಮಯ ನೋಡಿ ಅವಳ ಮನೆಗೆ ಹೊರಟ. ಅವಳು ಹಟ್ಟಿಯಲ್ಲಿ ಹಾಲು ಕರೆಯುತ್ತಿದ್ದವಳು, ಇವನು ದೂರದಲ್ಲಿ ಬರುತ್ತಿರುವುದನ್ನು ನೋಡಿ, ಹಾಲಿನ ತಂಬಿಗೆಯನ್ನು ಅಲ್ಲೇ ಇಟ್ಟು ಅವನೆಡೆಗೆ ಓಡುತ್ತ ಹೋದಳು.

ಅವಳು ತನ್ನ ದುಃಖವನ್ನೆಲ್ಲಾ ತೋಡಿಕೊಳ್ಳುತ್ತಿರುವಾಗ ಅವನು ದಿಕ್ಕುತೋರದೆ ನಿಶ್ಚಲನಾಗಿ ನಿಂತಿದ್ದ. ಅವಳಂತೂ ಒಂದೇಸಮನೆ ನಿನ್ನನ್ನು ಬಿಟ್ಟು ನಾನು ಇರಲಾರೆ; ನಿನ್ನ ಕೈಯಿಂದಲೇ ನನ್ನನ್ನು ಕೊಂದುಬಿಡು ಎಂದು ಅಳುತ್ತಿದ್ದಳು. ಆಗವನಿಗೆ ಬುದ್ದಿ ಇತ್ತೋ ಇಲ್ಲವೋ ಎಂದು ನಾನೀಗ ಹೇಳಲಾರೆ, ಆದರೆ ಅವನಂತೆ ನಾನವಳನ್ನು ಪ್ರೀತಿಸಿ ಅವಳನ್ನು ಇನ್ನೊಬ್ಬನ ಪಾಲಿಗೆ ಒಪ್ಪಿಸುವ ಪ್ರಸಂಗ ಬಂದಿದ್ದರೆ ನಾನೂ ಅವನು ಮಾಡಿದಂತೆಯೇ ಮಾಡುತ್ತಿದೇನೇನೋ ನಿಜ. ಆಗವನಿಗೆ ಹಿತಾಹಿತಗಳನ್ನು ವಿವೇಚಿಸುವ ಶಕ್ತಿಯಿರಲಿಲ್ಲ. ಅವಳನ್ನು ಕರೆದುಕೊಂಡು ಹೋಗುವುದು ಅವನಿಗೆ ಒಪ್ಪಿಗೆ ಇಲ್ಲ. ಮತ್ತೆ ಆ ಸಮಯದಲ್ಲಿ ಅಷ್ಟೊಂದು ಯೋಚಿಸುವಂತೆಯೂ ಇರಲಿಲ್ಲ ಅವನ ಮನಸ್ಸು!

ಏನು ತೋರಿತೋ! ತನ್ನ ಕಾಲುಗಳನ್ನು ಹಿಡಿದುಕೊಂಡು ‘ನನ್ನನ್ನು ಕೊಂದು ಬಿಡು’ ಎನ್ನುತ್ತಿದ್ದ ಅವಳನ್ನು ಹಿಡಿದು ಕಣ್ಣೀರಿನಿಂದ ತೋಯ್ದ ಮುಖವನ್ನು ಒರೆಸಿ, ಅವಳ ಅಗಲವಾದ ಹಣೆಗೆ ಭಕ್ತಿಯಿಂದ ಮುತ್ತಿಟ್ಟು ‘ಅಳಬೇಡ ಲತೀ, ನಾವಿಬ್ಬರೂ ಜೊತೆಯಾಗಿ ಹೋಗೋಣ, ನನ್ನೊಡನೆ ಬರಲು ನಿನಗೆ ಬೇಸರವಿಲ್ಲ ತಾನೆ?’ ಎಂದು ಕೇಳಿದ.

ತಿರುಗಿ ಅವಳವನ ಕಾಲುಗಳನ್ನು ಹಿಡಿದು – ‘ಅವನ ಕೈಹಿಡಿದು ಬಾಳುವುದಕ್ಕಿಂತ ನಿನ್ನ ಕೈಯಿಂದ ನನಗೆ ಸಾವೇ ಹಿತ. ನನ್ನನ್ನು ಕೊಂದುಬಿಡು’ ಎಂದಳು.

ಪುನಃ ಅವಳನ್ನು ಹಿಡಿದೆತ್ತಿ, ಅವಳ ಮುಖವನ್ನು ಎರಡು ಕೈಗಳಿಂದಲೂ ಹಿಡಿದು, ಅವಳ ಶಾಂತ-ಗಂಭೀರ ನಯನಗಳಲ್ಲಿ ತನ್ನ ಪ್ರತಿಬಿಂಬವನ್ನು ನೋಡಿದ. ಮತ್ತೆ- ‘ತಯಾರಾದೆಯಾ ಲತೀ?’ ಎಂದ. ಅರೆಗಳಿಗೆಯ ಹಿಂದೆ ಅಳುವಿನಿಂದ ಕಳೆಗುಂದಿದ್ದ ಮುಖ ನಗುವಿನಿಂದ ಅರಳಿತು. ಅವನನ್ನೆ ತದೇಕದೃಷ್ಟಿಯಿಂದ ನೋಡುತ್ತ ‘ಹೂಂ’ ಎಂದುವು ಅವಳ ಕಣ್ಣುಗಳು. ಅವಳ ಕಣ್ಣುಗಳಲ್ಲಿ ಆ ಮೂಕ ಅನುಮತಿಯನ್ನು ಓದಿ ಆತ ತಡೆಯಲಾರದೆ ಹೋದ; ಹತ್ತಿರ ಸೆಳೆದು ಅವಳ ಮುಖವನ್ನು ತನ್ನೆದೆಯಲ್ಲಿ ಆವಿಸಿಕೊಂಡ. ಮತ್ತೆ ಒಂದೇ ಒಂದು ಕ್ಷಣದಲ್ಲಿ ಅವನ ಸೆಳೆತವು ಸಡಿಲಾದಾಗ ಅವಳು ಶವವಾಗಿದ್ದಳು. ಅವಳ ಬೆನ್ನಿನಿಂದಾಗಿ ಎದೆಯಲ್ಲಿ ಹೊರಟ ಅವನ ಚೂರಿ ಅವಳ ಶರೀರದಲ್ಲಿತ್ತು. ಒಂದರೆಕ್ಷಣದ ಮೊದಲು ಅರಳಿ ಅವಳ ಮುಖವನ್ನು ಬೆಳಗಿಸಿದ್ದ ನಗುವೂ, ಆ ಕಣ್ಣುಗಳ ಶಾಂತ ನೋಟವೂ ಹಾಗೆಯೇ ಇದ್ದುವು.

ಆದರವನಿಗದೊಂದೂ ಕಾಣದು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶರೀರ ಅವನಿಗೆ ಕಣಿಸಲಿಲ್ಲ. ಜಾತಿಬಂಧನದ ಆಚೆ ನಿಂತು ಮುಗುಳುನಗು ನಗುತ್ತ ತನ್ನನ್ನೇ ಕೂಗುತ್ತಿದ್ದ ಅವಳೆಡೆಗೆ ಸೇರಲು ಹತ್ತಿರದಲ್ಲೇ ಇದ್ದ ಬಾವಿಗೆ ಹಾರಿದ.

ಬಾವಿಗೆ ಹಾರಿದ – ಸತ್ತು ಅವಳೆಡೆಯನ್ನು ಸೇರುವ ಸಲುವಾಗಿ; ಆದರೆ ಅವನು ಸಾಯಲಿಲ್ಲ- ಸಾಯಲಿಲ್ಲ….

ಮುದುಕ ಇಷ್ಟು ಹೇಳಿ ಸ್ವಲ್ಪ ಹೊತ್ತು ಸುಮ್ಮನಾದ, ಕತೆ ಕೇಳುವ ಮೊದಲು ಏನೋ ಎಂತಿದ್ದ ನಾವು, ಕೇಳಿ ಈಗ ಅಳುವಂತಾಗಿ ಹೋಗಿದೆವು.

ನಮ್ಮ ಕಣ್ಣೀರು ನೋಡಿ ಮುದುಕನೇನೆಂದುಕೊಳ್ಳುವನೋ ಎಂದು ಮುಖ ಮರೆಮಾಡಿ ಕಣ್ಣೊರೆಸಿಕೊಂಡೆವು. ಆದರೆ ಮುದುಕ ನಮ್ಮ ಕಡೆ ನೋಡುತ್ತಿರಲಿಲ್ಲ. ಶೂನ್ಯವನ್ನು ನಿಟ್ಟಿಸುತ್ತಿದ್ದ. ಅವನ ಕಣ್ಣುಗಳಲ್ಲಿ ವೇದನೆಯು ತುಂಬಿತ್ತು. ಬಹುಶಃ ಕತೆಯ ‘ಅವನು’ ಮುದುಕನ ಸಂಬಂಧಿಯೋ ಏನೋ ಎನ್ನಿಸಿತು – ನಮಗವನ ಮುಖ ನೋಡಿ, ‘ಅವನ’ ಅವಸ್ಥೆ ಏನಾಯಿತು?- ಎಂದು ನಮಗೆಲ್ಲಾ ಕುತೂಹಲವಿದ್ದರೂ ಮುದುಕ ತಾನಾಗಿ ಪುನಃ ಪ್ರಾರಂಭಿಸುವ ತನಕ ಸುಮ್ಮನಿದ್ದೆವು.

ತಾನಾಗಿಯೆ ಮುದುಕ ಸ್ವಲ್ಪ ಹೊತ್ತಿನ ತರುವಾಯ ಮುಂದುವರಿಸಿದ :-

ಅವಳ ಚಿಕ್ಕಪ್ಪ ‘ಅವಳೇಕೆ ಇನ್ನೂ ಬಂದಿಲ್ಲ’ ಎಂದು ನೋಡಲು ಬಂದವನು ಅವನು ಬಾವಿಗೆ ಹಾರುವುದನ್ನು ನೋಡಿ ಎತ್ತಿಹಾಕಿದ, ಕ್ರಮಪ್ರಕಾರವಾಗಿ ಕೋರ್ಟಿನಲ್ಲಿ ವ್ಯಾಜ್ಯವೂ ಆಯಿತು. ಆದರೆ ಅದೊಂದೂ ಅವನಿಗೆ ತಿಳಿಯದು. ಅವನಿಗೆ ಹುಚ್ಚೆಂದು ಜನರು ಹೇಳುತ್ತಿದ್ದರು. ಹುಚ್ಚೆಂದೇ ಅವನಿಗೆ ಫಾಸಿಯಾಗಲಿಲ್ಲ. ಆಗಿದ್ದರೆ ಒಳ್ಳೆಯದಾಗುತ್ತಿತ್ತು. ಬಾವಿಯಲ್ಲಿ ಬಿದ್ದು ಅವಳ ಹತ್ತಿರ ಹೋಗಲಾಗದಿದ್ದರೆ ಫಾಸಿಯಾದರೂ ಅವಳ ಹತ್ತಿರ ಒಯ್ಯಬಹುದೆಂದು ಅವನೆಣಿಸಿದ್ದ; ಪಾಪಿ! ಆಷ್ಟೊಂದು ಭಾಗ್ಯವು ಅವನಿಗೆಲ್ಲಿ!!

ಹುಚ್ಚನಲ್ಲದಿದ್ದರೂ ಹುಚ್ಚನೆನಿಸಿಕೊಂಡು ೩೦ ವರ್ಷ ಹುಚ್ಚರ ಆಸ್ಪತ್ರೆಯಲ್ಲಿ ಕಳೆದ. ೩೦ ವರ್ಷ ಹೇಗೆ ಕಳೆದ? ಎಂದು ಕೇಳಬೇಡಿ, ಅಂತೂ ಕಳೆದ- ಅವಳ ಹತ್ತಿರ ಹೋಗುವುದೇ ಜೀವನದ ಹಂಬಲವಾದರೂ ಹೋಗಲು ದಾರಿ ತೋರದೆ, ಹುಚ್ಚರ ಮಧ್ಯದಲ್ಲಿ ಹುಚ್ಚರಿಗಿಂತಲೂ ಹುಚ್ಚನಾಗಿ ಕಳೆದ. ೩೦ ವರ್ಷಗಳ ತರುವಾಯ ಒಂದು ದಿನ ಅವನ ಬಿಡುಗಡೆಯಾಯಿತು. ‘ಬಿಡುಗಡೆಯಾಯಿತು; ಇನ್ನೇನು ಹೋಗಬಹುದಲ್ಲ’ ಎಂದು ನೀವು ಕೇಳಬಹುದು. ಹೌದು ಹೋಗಬಹುದು. ಇದೋ ಹೊರಟೆ – ಹೋಗುತ್ತೇನೆ…..

ಇದೇನು! ಕತೆ ಹೇಳುತ್ತಾ ಇವನಿಗೇ ಹುಚ್ಚು ಹಿಡಿಯಿತೇ ಎಂದು ನಾವು ಒಬ್ಬರ ಮುಖವನ್ನೊಬ್ಬರು ನೋಡಿಕೊಂಡವು. ಮತ್ತೆ ಅವನ ಮುಖವನ್ನು ನೋಡುವುದರೊಳಗೆ, ಅವನು ಮಿಂಚಿನ ವೇಗದಿಂದ ಹೋಗುತ್ತಿದ್ದ ಆ ರೈಲ ಕಿಟಿಕಿಯಿಂದ ಕೆಳಗೆ ಹಾರಿಬಿಟ್ಟಿದ್ದ.

ದಿಙ್ಮೂಢರಾದ ನಾವು ಸರಪಳಿಯನ್ನೆಳೆದು ರೈಲನ್ನು ನಿಲ್ಲಿಸಿದೆವು.

ಆದರೆ ಈ ಸಾರಿ ೩೦ ವರ್ಷಗಳಿಂದ ದಾರಿ ಕಾಯುತ್ತಿದ್ದ ಲತೀಫಾಳೆಡೆಗೆ ಅವನು ಹೋಗಿಯೇ ಬಿಟ್ಟಿದ್ದ.
*****
ಸೆಪ್ಟೆಂಬರ್ ೧೯೨೮

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪರಿತಾಪ
Next post ನಾನು ನನ್ನ ನಾಯಿ

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

cheap jordans|wholesale air max|wholesale jordans|wholesale jewelry|wholesale jerseys