ಒಲವೇ… ಭಾಗ – ೩

ಛೇ, ನಾನೆಂತ ದ್ರೋಹಿ. ಸಹಾಯ ಹಸ್ತ ಚಾಚಿದವಳನ್ನೇ ನೆನೆಸಿಕೊಳ್ಳದಷ್ಟು ಪಾಪಿಯಾಗಿಬಿಟ್ಟೆನಲ್ಲ. ಒಂದರ್ಥದಲ್ಲಿ ಆಕೆ ಸಿಡುಕ್ಕಿದ್ದು ಸರಿಯೆ. ವ್ಯಾಪಾರ ಪ್ರಾರಂಭ ಮಾಡಿದ್ದಲ್ಲಿಂದ ಆಕೆಯನ್ನು ಭೇಟಿ ಮಾಡಿದ್ದೇ ನೆನಪಿಗೆ ಬತಾ ಇಲ್ಲ. ಅದರರ್ಥ ಅವಳನ್ನ ಮರೆತಂತೆ ಅಲ್ಲವೇ? ಸಾಧನೆಯ ಮತ್ತೊಂದು ಮೆಟ್ಟಿಲು ಹತ್ತಿ ನಿಂತಾಗ ಮಾತ್ರ ಆಕೆಯ ನೆನಪಾಯಿತು. ಅಷ್ಟೊಂದು ಸುದೀರ್ಘ ಅವಧಿಯ ನಡುವೆ ಆಕೆ ಹೇಗಿದ್ದಾಳೆಂದು ವಿಚಾರಿಸುವ ಗೋಜಿಗೂ ಹೋಗಲಿಲ್ಲ. ನಾನೆಂತ ನಿರ್ದಯಿ ತನ್ನನ್ನು ತಾನೇ ಶಪಿಸಿಕೊಂಡ.

ಇಲ್ಲ. ಇನ್ನು ಅಂತಹ ತಪ್ಪುಗಳು ನಡೆಯಕೂಡದು. ಅದಕ್ಕೆ ಆಸ್ಪದ ಕೊಡಬಾರದು. ನಾಳೆ ಸಂಜೆ ಭೇಟಿಯಾಗಿ ಆಕೆಯ ಮನವೊಲಿಸಬೇಕು ಎಂದು ನಿರ್ಧರಿಸಿ ದುಃಖದೊಂದಿಗೆ ಮನೆಯ ಕಡೆಗೆ ನಡಿಗೆ ಹಾಕಿದ. ಮನೆಯಲ್ಲಿ ನೆಮ್ಮದಿ ಇಲ್ಲದ ರಾತ್ರಿ ಕಳೆದ. ಆಕೆಯ ಮುಂದೆ ತಲೆಬಾಗಿ ಕ್ಷಮಿಸಿಬಿಡು ಅಕ್ಷರ, ಇನ್ನೆಂದು ಈ ರೀತಿ ಆಗೋದಿಲ್ಲ, ಆಗೋದಕ್ಕೆ ಬಿಡೋದಿಲ್ಲ. ಈ ಒಂದು ಬಾರಿ ಈ ಪಾಪಿಯನ್ನು ಕ್ಷಮಿಸಿ ಬಿಡು ಎಂದು ಆಕೆಯಲ್ಲಿ ಕ್ಷಮಾಪಣೆ ಕೇಳಲು ಸಂಜೆಯಾಗುವುದನ್ನೇ ಕಾಯುತ್ತಾಕುಳಿತ್ತಿದ್ದ. ಸಂಜೆಯಾಗುತ್ತಿದ್ದಂತೆ ಓಡೋಡಿ ರಾಜಾಸೀಟ್ ಉದ್ಯಾನವನ ತಲುಪಿದ. ಅದಾಗಲೇ ಅಕ್ಷರ ಬಂದು ಅಭಿಮನ್ಯುವಿನ ಹಾದಿ ಕಾಯುತ್ತಾ ಕುಳಿತ್ತಿದ್ದಳು.

ಮೇಡಂ ಅವರಿಗೆ ನನ್ನ ಹೃದಯ ತುಂಬಿದ ನಮಸ್ಕಾರಗಳು, ತಾವು ಬಂದು ತುಂಬಾ ಹೊತ್ತಾದಂತೆ ಕಾಣ್ತಾ ಇದೆ ಭಯ, ತಮಾಷಿ ಮಿಶ್ರಿತ ಮಾತುಗಳನ್ನಾಡಿದ.

ಹೌದೌದು, ನಿನ್ಗೆ ಕಾಯಿಸೋದಂದ್ರೆ ತುಂಬನೇ ಇಷ್ಟ ಅಲ್ವ? ನಿನ್ನ ದರ್ಶನಕ್ಕಾಗಿ ತಿಂಗಳುಗಟ್ಟಲೇ ತಾಳ್ಮೆಯಿಂದ ಕಾಯ್ದೆ, ಅದರ ಮುಂದೆ ಇದೇನು ದೊಡ್ಡದಲ್ಲ ಬಿಡು ಒಂದೆರಡು ಕ್ಷಣ ಮೌನಕ್ಕೆ ಮಾರುಹೋಗಿ ಮತ್ತೆ ಮಾತು ಮುಂದುವರೆಸಿದಳು. ಇನ್ನು ಮುಂದೆ ದಿನನಿತ್ಯ ನಿನ್ನ ಇಲ್ಲಿಯೇ ಭೇಟಿಯಾಗಲು ಬಯಸ್ತೇನೆ ಅಭಿಮನ್ಯು. ದಯವಿಟ್ಟು ಇಲ್ಲ ಅನ್ಬೇಡ. ಎಲ್ಲದಕ್ಕಿಂತ ಹೆಚ್ಚಾಗಿ ನೀನು ಜೀವನಪರ್ಯಂತ ನನ್ನೊಂದಿಗೆ ಇದ್ದು ಬಿಟ್ರೆ ಇನ್ನೂ ಚೆನ್ನ. ಎಲ್ಲವನ್ನೂ ನಾನು ವಿವರಿಸಿ ಹೇಳೋದಕ್ಕೆ ಹೋಗೋದಿಲ್ಲ.

ನಿನ್ಗೆ ನನ್ನ ಮಾತಿನ ಅರ್ಥ ಗೊತ್ತಾಗಿರಬಹುದೂಂತ ಅಂದ್ಕೋತ್ತಿನಿ. ನಿನ್ನ ಮನಸ್ಸು, ಹೃದಯ ಯಾವತ್ತೂ ನಗ್ಗೋಸ್ಕರ, ನನಗೊಬ್ಬಳಿಗೋಸ್ಕರ ತುಡಿತಾ ಇಬೇಕು.

ಪ್ರೀತಿಯ ಮೊದಲ ಪುಟವನ್ನು ಅತ್ಯಂತ ಸೂಕ್ಷ್ಮವಾಗಿ ತೆರೆದಿಟ್ಟು ಪಕ್ಕದಲ್ಲಿಯೇ ಕುಳಿತ ಅಭಿಮನ್ಯುವಿನ ತೋಳನ್ನು ಬಳಸಿ ಆತನ ಹೆಗಲ ಮೇಲೆ ತಲೆ ಇಟ್ಟು ಪ್ರೀತಿಯ ಕಲ್ಪನೆಯಲ್ಲಿ ವಿಹರಿಸತೊಡಗಿದಳು. ಅಭಿಮನ್ಯು ಮೂಕನಾಗಿ ಕುಳಿತುಬಿಟ್ಟ. ಆ ದಿನದ ಸಂಜೆಯ ಪ್ರತಿಯೊಂದು ಕ್ಷಣವೂ ಮೌನದಲ್ಲೇ ಕಳೆದು ಹೋಯಿತು. ಪ್ರೀತಿಯ ಮೊದಲ ಪುಟ ತೆರೆದಿಟ್ಟು ಎರಡನೇ ಪುಟವನ್ನು ಅಭಿಮನ್ಯು ತೆರೆದಿಡುತ್ತಾನೆ ಎಂಬ ಭರವಸೆಯೊಂದಿಗೆ ಉತ್ತರಕ್ಕಾಗಿ ಆಕೆ ಕಾಯುತ್ತಿದ್ದಳೋ ಏನೋ? ಆದರೆ ಅಭಿಮನ್ಯು ತನ್ನೊಂದಿಗೆ ತಾನೇ ಮಾತಾಡಿಕೊಳ್ಳಲಾಗದ ಸ್ಥಿತಿಯಲ್ಲಿದ್ದ. ಬಹಳ ಹೊತ್ತಿನವರೆಗೂ ಮೌನದಲ್ಲಿಯೇ ಕಳೆದು ಹೋದ ನಂತರ ವಾಸ್ತವಸ್ಥಿತಿಗೆ ಮರಳಿದ. ತನ್ನ ಹೆಗಲಮೇಲೆ ತಲೆ‌ಇಟ್ಟು ಕಲ್ಪನಾಲೋಕದಲ್ಲಿ ವಿಹರಿಸುತ್ತಿದ್ದ ಅಕ್ಷರಳನ್ನು ಎಬ್ಬಿಸಿ ಹೊರಡೋಣ ಅಂದ.

ಇಬ್ಬರು ದಾರಿಯುದ್ದಕ್ಕೂ ಒಂದೇ ಒಂದು ಮಾತು ಕೂಡ ಆಡಲಿಲ್ಲ. ಅಕ್ಷರ ಅಭಿಮನ್ಯುವಿನ ಕೈ ಹಿಡಿದುಕೊಂಡು ಮುಂದಿನ ವೈವಾಹಿಕ ಜೀವನದ ಬಗ್ಗೆ ಕಲ್ಪನೆ ಮಾಡಿಕೊಂಡು ಪುಳಕಿತಳಾಗುತ್ತಿದ್ದಳು. ಮನೆಯ ಹಾದಿ ಸಮೀಪಿಸುತ್ತಿದ್ದಂತೆ ಹಿಡಿದು ಕೊಂಡಿದ್ದ ಕೈಯನ್ನು ಮತ್ತಷ್ಟು ಭದ್ರವಾಗಿ ಹಿಡಿದು ಅಭಿಮನ್ಯು ನನ್ನಿಂದ ತಪ್ಪಾಗಿದ್ರೆ ಕ್ಷಮಿಸಿ ಬಿಡು. ನೀನಂದ್ರೆ ನನ್ಗೆ ತುಂಬಾ ಇಷ್ಟ. ನೀನು ನನ್ನ ಕೋರಿಕೆಗೆ ಯಾವುದೇ ಉತ್ತರ ಕೊಟ್ಟಿಲ್ಲ. ನನ್ಗೇನು ಬೇಸರವಾಗಿಲ್ಲ. ಇವತ್ತಲ್ಲದಿದ್ದರೂ ಯಾವತ್ತಾದರೊಂದು ದಿನ ನೀನು ನನ್ನ ಪ್ರೀತಿಯನ್ನು ಒಪ್ಕೋತ್ತಿಯ ಎಂಬ ಭರವಸೆ ನನ್ಗಿದೆ. ಎಂದು ಹೇಳಿ ಮನೆ ಹಾದಿ ತುಳಿದಳು. ಆ ಹಾದಿಯಲ್ಲಿ ಆಕೆ ಕಣ್ಮರೆಯಾಗುವವರೆಗೂ ಆಕೆಯನ್ನೇ ನೋಡುತ್ತಾ ನಿಂತುಬಿಟ್ಟ.

ಸಂಕಷ್ಟದಲ್ಲಿದ್ದ ಸಂದರ್ಭ ಕೈ ಹಿಡಿದು ಮುನ್ನಡೆಸಿದಾಕೆ ಇಂದು ಪ್ರೀತಿಗಾಗಿ ಹಂಬಲಿಸುತ್ತಿದ್ದ್ದಾಳೆ. ಆ ಪ್ರೀತಿಯ ಕೋರಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಲು ಅಭಿಮನ್ಯುವಿನಿಂದ ಸಾಧ್ಯವಾಗದ ಮಾತು. ಇನ್ನೇನು ಬದುಕೇ ಮುಗಿದು ಹೋಯಿತು ಎಂಬ ಪರಿಸ್ಥಿತಿಯಲ್ಲಿರುವಾಗ ಬದುಕಿಗೊಂದು ಹೊಸ ಅರ್ಥ ಕಲ್ಪಿಸಿಕೊಟ್ಟವಳೇ ಅವಳು. ಆಕೆಯ ಸಣ್ಣದೊಂದು ಕೋರಿಕೆಯನ್ನು ಈಡೇರಿಸಲಿಲ್ಲವೆಂದರೆ ಆಕೆ ಎಷ್ಟೊಂದು ನೊಂದುಕೊಳ್ಳುವುದಿಲ್ಲ? ಅಷ್ಟಕ್ಕೂ ಆಕೆ ಪ್ರೀತಿಸಲು ಅನರ್ಹಳಾದವಳಲ್ಲ. ಮೊಗೆದಷ್ಟು ತೀರದ ಪ್ರೀತಿ ಆಕೆ ನೀಡಬಲ್ಲಳು. ಆದರೆ ಸಮಸ್ಯೆ ಎದುರಾಗುತ್ತಿರುವುದೇ ತನ್ನಲ್ಲಿ. ಆಕೆಯ ಶ್ರೀಮಂತಿಕೆಯ ಎದುರು ನಾನೊಂದು ಹುಲ್ಲುಕಡ್ಡಿ ಮಾತ್ರ. ಆಕೆಯನ್ನು ಪ್ರೀತಿಸುವ ಅರ್ಹತೆ ನನ್ನಲ್ಲೆಲ್ಲಿದೆ? ಒಂದ್ವೇಳೆ ಪ್ರೀತಿಸಿದರೂ ಆಕೆಯ ಜೀವನ ಶೈಲಿಗೆ ಹೊಂದಿಕೊಂಡು ಬಾಳ್ವೆ ನಡೆಸುವ ಸಾಮರ್ಥ್ಯ ನನ್ನಲ್ಲೆಲ್ಲಿದೆ? ನನ್ನ ಜೀವನ ಶೈಲಿಗೆ ಅನಿವಾರ್ಯವಾಗಿ ಅವಳೇ ಹೊಂದಿಕೊಳ್ಳಬೇಕಷ್ಟೆ. ಇಂಥಹ ಒಂದು ಪರಿಸ್ಥಿತಿಯಲ್ಲಿ ಆಕೆಯನ್ನು ಪ್ರೀತಿಸಿ ವಿವಾಹವಾಗಿ ಆಕೆಯ ಬದುಕನ್ನೇ ಹಾಳುಗೆಡುಹುದು ಸರಿಯೇ? ಮನದಲ್ಲಿ ಒಂದರ ಮೇಲೊಂದರಂತೆ ಎದ್ದ ಪ್ರಶ್ನೆಗಳಿಂದ ಚಿಂತೆಗೆ ಬಿದ್ದ.

ಪ್ರೀತಿ ಕುರುಡು ಅನ್ನುತ್ತಾರೆ. ಬಹುಶ: ಇದಕ್ಕೆ ಇರಬಹುದು. ಯಾರಲ್ಲಿ, ಯಾವಾಗ ಪ್ರೀತಿ ಮೊಳಕೆಯೊಡೆದು ಗಿಡವಾಗಿ, ಮರವಾಗಿ ಬೆಳೆದು ನಿಲ್ಲುತ್ತದೆಯೋ ಹೇಳುವುದೇ ಕಷ್ಟ. ಅಷ್ಟಕ್ಕೂ ಅಕ್ಷರಳಿಗೆ ಅಭಿಮನ್ಯುವನ್ನು ಪ್ರೀತಿಸುವ ಅನಿವಾರ್ಯತೆ ಯೇನು ಇರಲಿಲ್ಲ. ಬಯಸಿದ್ದರೆ ನೂರಾರು ಶ್ರೀಮಂತ ಹುಡುಗರು ಆಕೆಯ ಎದುರು ಬಂದು ನಿಲ್ಲುತ್ತಿದ್ದರು. ಆದರೆ, ಅದೆಲ್ಲ ವನ್ನೂ ಬಿಟ್ಟು ಬಡತನದಲ್ಲಿ ಬಳಲುತ್ತಿರುವ ಅಭಿಮನ್ಯುವಿನ ಕೈ ಹಿಡಿಯಲು ಹೊರಟು ನಿಂತಿದ್ದಾಳೆ. ಬಹುಶಃ ಶ್ರೀಮಂತಿಕೆಯ ಸವಿಯನ್ನು ಸವಿದವರಿಗೆ ಬಡತನದ ಸವಿಯನ್ನು ಸವಿಯುವ ಮನಸ್ಸಾಗುತ್ತದೋ ಏನೋ!? ಪ್ರೀತಿ, ವಿಶ್ವಾಸ ಉಳಿದಿರುವುದು ಬಡವರಲ್ಲಿ ಮಾತ್ರ. ಆರ್ಥಿಕ ಸಮಸ್ಯೆಯೊಂದನ್ನು ಹೊರತು ಪಡಿಸಿದರೆ ಉಳಿದ ಯಾವುದೇ ಸಮಸ್ಯೆಗಳು ಅವರಿಗೆ ಕಾಡುವುದಿಲ್ಲ. ಪ್ರೀತಿ, ವಿಶ್ವಾಸ ಎಂಬುದು ಶ್ರೀಮಂತರಿಗಿಂತ ಬಡವರಲ್ಲಿಯೇ ಹೆಚ್ಚಾಗಿ ಇದೆ. ಪ್ರೀತಿ, ವಿಶ್ವಾಸಗಳಿಗೆ ಬೆಲೆ ಕಟ್ಟುವ ಶ್ರೀಮಂತರಿಗಿಂತ ನಿರ್ಮಲವಾದ ಪ್ರೀತಿಯನ್ನು ತೋರ್ಪಡಿಸುವ ಬಡವನಾದ ಅಭಿಮನ್ಯು ತನ್ನ ಪತಿಯಾಗಲು ಅತ್ಯಂತ ಸೂಕ್ತವಾದ ವ್ಯಕ್ತಿ ಎಂಬ ಮಾತು ಆಕೆಯ ಮನದಲ್ಲಿ ಪ್ರತಿಧ್ವನಿಸುತಿತ್ತು.
* * *

ತಿಂಗಳುಗಳು ಸರಿದರೂ ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಒಂದು ಸ್ಪಷ್ಟ ತೀರ್ಮಾನಕ್ಕೆ ಬರಲು ಅಭಿಮನ್ಯು ವಿನಿಂದ ಸಾಧ್ಯವಾಗಲಿಲ್ಲ. ಅಕ್ಷರ, ನಿನ್ನ ನಾನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡ್ತೇನೆ ಅಥವಾ ಒಂದೇ ಮಾತಿನಲ್ಲಿ ನಿನ್ನ ಪ್ರೀತಿ ಮಾಡೋದಕ್ಕೆ ನನ್ನಿಂದ ಸಾಧ್ಯವಿಲ್ಲ ಎಂದು ಹೇಳಲು ಅವನಿಂದ ಸಾಧ್ಯವಾಗಲಿಲ್ಲವಾದರೂ ಆಕೆಯ ಕೋರಿಕೆಯಂತೆ ದಿನನಿತ್ಯ ಸಂಜೆ ರಾಜಾಸೀಟ್‌ಗೆ ಭೇಟಿ ನೀಡುವುದನ್ನು ಒಂದು ಪರಿಪಾಠವಾಗಿ ಬೆಳೆಸಿಕೊಂಡ.

ಒಂದು ದಿನ ಇದ್ದಕ್ಕಿದ್ದಂತೆ ಬಾಲ್ಯದ ಗೆಳತಿ ಭಾಗ್ಯಳ ಮನೆಗೆ ಹೊರಟು ನಿಂತ. ಬಹುದಿನಗಳಿಂದ ಮನದೊಳಗೆ ತೊಳಲಾ ಡುತ್ತಿದ್ದ ಹಲವಾರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದರೆ ಭಾಗ್ಯಳೇ ಸೂಕ್ತವಾದ ವ್ಯಕ್ತಿ ಎಂದು ನಿರ್ಧರಿಸಿ ಆಕೆಯ ಮನೆಯ ಕಡೆಗೆ ಪಯಣ ಬೆಳೆಸಿದ. ಸುಂದರವಾದ ಪರಿಸರದ ನಡುವೆ ಅಂದವಾದ ಪುಟ್ಟದೊಂದು ಮನೆ. ಮನೆಯ ಮುಂಭಾಗದಲ್ಲೊಂದು ಸಣ್ಣದಾದ ಹೂ ತೋಟ. ಭಾಗ್ಯ ತುಂಬಾ ಪರಿಶ್ರಮದಿಂದ ಬೆಳೆಸಿದ ಗುಲಾಬಿ ಗಿಡಗಳಲ್ಲಿ ಹೂ ಅರಳಿ ನಿಂತು ಆ ಮನೆಯ ಅಂದವನ್ನು ಹೆಚ್ಚಿಸಿತು. ಮನೆಯ ಮುಂಭಾಗದಲ್ಲಿ ಬೆಳೆದು ನಿಂತಿದ್ದ್ದ ಹೂ ಗಿಡಗಳಿಗೆ ನೀರುಣಿಸುತ್ತಿದ್ದ ಭಾಗ್ಯ ಅಭಿಮನ್ಯುವನ್ನು ಕಂಡೊಡನೆ ಓ…, ಅಪರೂಪದ ಅತಿಥಿ ಬಂದ್ಬಿಟ್ಟಿದ್ದಾರೆ. ಬಬೇಕು.. ಬಬೇಕು… ಕೊನೆಗೂ ನಮ್ಮ ಮನೆ ದಾರಿ ಗೊತ್ತಾಯ್ತಲ್ಲ ಎಂದು ಹೂ ತೋಟದ ಹಾರೈಕೆಯಿಂದ ಕೊಳೆಯಾಗಿದ್ದ ಕೈಯನ್ನು ತೊಳೆದುಕೊಂಡು ಉಟ್ಟ ಬಟ್ಟೆಯಲ್ಲಿಯೇ ಕೈಯೊರೆಸಿಕೊಂಡು ಅಭಿಮನ್ಯುವಿಗೆ ಶೇಕ್‌ಹ್ಯಾಂಡ್ ಮಾಡಿ ಮನೆಗೆ ಕರೆದೊಯ್ದಳು.

ಮನೆಯೊಳಗಿದ್ದ ಭಾಗ್ಯಳ ಅಮ್ಮ ಮಂಜುಳ ಅಭಿಮನ್ಯುವಿನ ಯೋಗಕ್ಷೇಮ ವಿಚಾರಿಸಿದರು. ಭಾಗ್ಯಳ ಅಪ್ಪ ರಾಜು ಮನೆಯ ಲ್ಲಿರುವುದೇ ಅಪರೂಪ. ಗದ್ದೆ, ತೋಟ ಅಂತ ದುಡಿಯುವುದರಲ್ಲಿಯೇ ಕಾಲ ಕಳೆದು ಬಿಡುತ್ತಿದ್ದರು. ಬಂದ ಅತಿಥಿಗಳನ್ನೆಲ್ಲ ಉಪಚರಿಸುವ ಜವಾಬ್ದಾರಿಯನ್ನು ಭಾಗ್ಯಳಿಗೆ ವಹಿಸಿದ್ದರು. ಹೀಗಾಗಿ ಆಕೆಯ ಮನೆಯಲ್ಲಿ ಅಭಿಮನ್ಯುವಿಗೆ ಎಲ್ಲಾ ವಿಚಾರಗ ಳನ್ನು ಮನಬಿಚ್ಚಿ ಮಾತನಾಡುವ ಮುಕ್ತ ವಾತಾವರಣ ದೊರೆಯಿತು.

ಮಂಜುಳ ಕಾಫಿಯನ್ನು ತಂದಿರಿಸಿ ಇಬ್ಬರು ಮಾತಾಡ್ತಾ ಇರಿ ಎಂದು ಮನೆಯೊಳಗೆ ಹೋಗಿ ಸೇರಿಕೊಂಡರು. ಕಾಲೇಜು ದಿನಗಳ ನಂತರ ಭಾಗ್ಯಳನ್ನು ಅಭಿಮನ್ಯು ಭೇಟಿ ಮಾಡಿರಲೇ ಇಲ್ಲ. ಅದಾಗಲೇ ಮೂರುವರೆ ವರ್ಷಗಳು ಸರಿದು ಹೋಗಿತ್ತು.

ಮನೆ ತನ್ಕ ಬಂದ ವಿಚಾರವನ್ನ ನೇರವಾಗಿಯೇ ಹೇಳಿ ಬಿಡ್ತೇನೆ. ಒಂದು ಪ್ರೀತಿಯ ವಿಚಾರ ನನ್ನ ಇಲ್ಲಿಗೆ ಕರೆತಂದು ನಿಲ್ಲಿಸಿದೆ. ಅದರ ಬಗ್ಗೆ ಮಾತಾಡಿ ಮನಸ್ಸು ಹಗುರ ಮಾಡಿಕೊಳ್ಳೋಣಾಂತ ಬಂದೆ ವಿಷಯನ್ನು ಮೆಲ್ಲನೆ ತೆರೆದಿಟ್ಟ.

ಪ್ರೀತಿಯ ವಿಚಾರದ ಬಗ್ಗೆ ಚರ್ಚೆ ಮಾಡಲು ಇಷ್ಟೊಂದು ದೂರ ಬಂದಿದ್ದಾನೆಂದರೆ ಅಭಿಮನ್ಯುವನ್ನು ಸೆಳೆದವಳು ಯಾರಿರಬಹುದೆಂಬ ಕುತೂಹಲ ಭಾಗ್ಯಳಲ್ಲಿ ಸಹಜವಾಗಿಯೇ ಕೆರಳಿತು. ಸಾಮಾನ್ಯವಾಗಿ ಯಾವುದೇ ಹುಡುಗಿ ಪ್ರೀತಿಗಾಗಿ ಹಂಬಲಿಸಿ ದಾಗ ಹಿಂದೆ ಮುಂದೆ ಆಲೋಚಿಸದೆ ಒಪ್ಪಿಗೆ ಕೊಡುತ್ತಿದ್ದವನು ಇಂದು ಪ್ರೀತಿಯ ವಿಚಾರದ ಬಗ್ಗೆ ಚರ್ಚೆ ಮಾಡೋದಕ್ಕೆ ಬಂದಿರುವುದನ್ನು ಕಂಡು ಆಕೆಗೆ ಆಶ್ಚರ್ಯವಾಯಿತು.

ಅಂತೂ ಮತ್ತೊಂದ್ಸಲ ಪ್ರೇಮಲೋಕಕ್ಕೆ ಕಾಲಿಟ್ಟೆ ಅಂದಂಗಾಯ್ತು. ನಿನ್ನ ಮನಗೆದ್ದ ಹುಡುಗಿ ಯಾರು ಮೊದ್ಲು ಹೇಳು? ಕುತೂಹಲದಿಂದ ಕೇಳಿದಳು.

ಅಭಿಮನ್ಯು ಹುಡುಗಿಯರಂತೆ ನಾಚಿಕೆಯಿಂದ ತಲೆತಗ್ಗಿಸಿ ಅಕ್ಷರ ಅಂದ.

ಅಕ್ಷರ ಎಂಬ ಮೂರಕ್ಷರ ಕಿವಿಗೆ ಬೀಳುತ್ತಿದ್ದಂತೆ ಭಾಗ್ಯ ತುಂಬಾ ಸಂತೋಷಗೊಂಡಳು. ಭಾಗ್ಯ, ಅಕ್ಷರ ಒಂದೇ ತರಗತಿಯಲ್ಲಿ, ಒಂದೇ ಬೆಂಚಿನಲ್ಲಿ ಕೂತು ವಿದ್ಯಾಭ್ಯಾಸ ಮುಗಿಸಿದವರು. ಅಕ್ಷರ ಸಣ್ಣ ವಯಸ್ಸಿನಿಂದ ಇಲ್ಲಿಯ ತನಕ ಎಲ್ಲೆಮೀರಿ ವರ್ತಿಸಿದ ವಳಲ್ಲ, ಮುಗ್ಧ ಸ್ವಭಾವದವಳು, ಮಗುವಿನಂಥಹ ಮನಸ್ಸು. ಆಕೆಯ ಕಣ್ಗಳಲ್ಲಿ ಕಣ್ಣೀರ ಹನಿ ನೋಡಲು ಜೋರಾಗಿ ಒಮ್ಮೆ ಮಾತನಾಡಿಸಿದರೂ ಸಾಕು. ವಯಸ್ಸು ಇಪ್ಪತ್ತಮೂರು ಕಳೆದರೂ ಮಗುವಿನಲ್ಲಿರುವ ಮುಗ್ಧತೆ ಇಂದಿಗೂ ಅಳಿಸಿ ಹೋಗಿಲ್ಲ. ಅಂಥಹ ಒಂದು ಹುಡುಗಿ ಅಭಿಮನ್ಯುವಿನ ಬಾಳಸಂಗಾತಿಯಾಗಲು ಹೊರಟ್ಟಿದ್ದಾಳೆಂದರೆ ಅದು ಸಂಭ್ರಮ ಪಡುವ ವಿಷಯ ವಲ್ಲದೆ ಮತ್ತಿನ್ನೇನು?

ಏಯ್ ಅಭಿಮನ್ಯು, ನೀನು ತುಂಬನೇ ಅದೃಷ್ಟವಂತ ಕಣೋ. ಎಂಥಹ ಒಳ್ಳೆಯ ಹುಡುಗಿ ನಿನ್ಗೆ ಸಿಕ್ಕಿದ್ದಾಳೆ ನೋಡು. ನೀನು ಜೀವನದಲ್ಲಿ ತುಂಬನೇ ಪುಣ್ಯ ಮಾಡಿಬೇಕು. ಅಕ್ಷರ ಏನು, ಎತ್ತ ಅಂತ ನಿನ್ಗಿಂತ ಚೆನ್ನಾಗಿ ನನ್ಗೆ ಗೊತ್ತು. ಅವಳು ನಿನ್ಗೆ ಸೂಕ್ತವಾದ ಜೋಡಿ ಅಕ್ಷರಳ ಬಗ್ಗೆ ಭಾಗ್ಯ ಮೆಚ್ಚುಗೆಯ ಮಾತುಗಳನ್ನಾಡಿದಳು.

ಆಕೆ ಒಳ್ಳೆಯವಳು, ಮಗುವಿನಂಥಹ ಮನಸ್ಸು ಹೊಂದಿದ್ದಾಳೆಂಬ ವಿಚಾರ ಅಭಿಮನ್ಯುವಿಗೂ ಗೊತ್ತು. ಅವನನ್ನು ಕಾಡುತ್ತಿರುವ ಸಮಸ್ಯೆ ಅದಲ್ಲ. ಸಮಸ್ಯೆ ಎದುರಾಗಿರುವುದು ಅಕ್ಷರಳನ್ನು ಪ್ರೀತಿಸುವ ಅರ್ಹತೆ ತನಗಿದೆಯೇ? ಎಂಬ ವಿಚಾರದಲ್ಲಿ. ಅದೊಂದೇ ಒಂದು ವಿಚಾರದಲ್ಲಿ ಅವನು ತೀವ್ರ ತೊಳಲಾಟಕ್ಕೆ ಸಿಲುಕಿಕೊಂಡಿದ್ದ. ಬದುಕಿನಲ್ಲಿ ಕವಿದುಕೊಂಡಿದ್ದ ಬಡತನದ ಕಾರ್ಮೋಡ ಇತ್ತೀಚೆಗಷ್ಟೇ ಸರಿಯಲು ಪ್ರಾರಂಭಿಸಿದೆ. ಇಂಥಹ ಪರಿಸ್ಥಿತಿಯಲ್ಲಿ ಪ್ರೀತಿಸಿ ಮದುವೆಯಾದರೆ ಅವಳನ್ನು ಸಂತೋಷವಾಗಿಡಲು ಸಾಧ್ಯವಿಲ್ಲ. ಇಷ್ಟು ವರ್ಷಗಳ ಕಾಲ ಪ್ರೀತಿಸಿದ ಹತ್ತಾರು ಹುಡುಗಿಯರ ಬಗ್ಗೆ ಅಭಿಮನ್ಯು ಗಂಭೀರ ವಾಗಿ ಚಿಂತಿಸಲೇ ಇಲ್ಲ. ಅವರಿಗೊಂದು ಸುಂದರವಾದ ಬದುಕು ಕಟ್ಟಿಕೊಡಬೇಕೆಂಬ ಯೋಚನೆಯೇ ಅವನ ಬಳಿ ಸುಳಿಯಲಿಲ್ಲ. ಆದರೆ, ಅಕ್ಷರಳನ್ನು ಇನ್ನೂ ಪ್ರೀತಿಸಲು ಪ್ರಾರಂಭಿಸಿಯೇ ಇಲ್ಲ. ಆವಾಗಲೇ ಆಕೆಯ ಭವಿಷ್ಯದ ಬಗ್ಗೆ ಚಿಂತಿಸುವ ಗೋಜಿಗೆ ಬಿದ್ದುಬಿಟ್ಟ. ಇಷ್ಟು ವರ್ಷಗಳ ಕಾಲ ಪ್ರೀತಿಸಿದ ಯಾವುದೇ ಹುಡುಗಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದಾದರೆ ಅವೆಲ್ಲವೂ ಟೈಂಪಾಸ್‌ಲವ್ ಅಲ್ವ…!? ಹಾಗಾದರೆ ನಿಜವಾದ ಪ್ರೀತಿ ಈಗ ಪ್ರಾರಂಭವಾಗುತ್ತಿದೆಯೇ? ಅನ್ನಿಸಿತು. ಅಭಿಮನ್ಯುವಿನ ಹೃದಯದ ಮೂಲೆಯಲೆಲ್ಲೋ ಅಕ್ಷರ ಅದಾಗಲೇ ಸದ್ದಿಲ್ಲದೆ ಅಡಗಿ ಕುಳಿತುಬಿಟ್ಟಿದ್ದಳು. ಆ ವಿಚಾರ ಅರಿವಾದಾಗ ಒಂದು ಕ್ಷಣ ಸಂಭ್ರಮಗೊಂಡು ಅಕ್ಷರಳನ್ನು ಪ್ರೀತಿ ಮಾಡ್ಲಾ? ಎಂದು ಇದ್ದಕ್ಕಿದ್ದಂತೆ ಕೇಳಿಬಿಟ್ಟ.

ಕೇಳೋದಕ್ಕೇನು ಬಂತು, ಅಂಥ ಒಳ್ಳೆಯ ಹುಡುಗಿಯನ್ನ ಕಳ್ಕೊಂಡ್ರೆ ಇನ್ನೆಂದಿಗೂ ಕೂಡ ಹುಡುಕಿದರೂ ಅಂತಹ ಒಳ್ಳೆಯ ಹುಡುಗಿ ನಿನ್ಗೆ ಸಿಗೋದಿಲ್ಲ. ಪ್ರೀತಿ ಅನ್ನೋದು ಎಲ್ಲಾ ಸಂದರ್ಭದಲ್ಲಿಯೂ ಹುಟ್ಟಿಕೊಳ್ಳೋದಿಲ್ಲ. ಅಪರೂಪಕ್ಕೆ ಹುಟ್ಟಿಕೊಳ್ಳುವ ಪ್ರೀತಿಯನ್ನು ಅಕ್ಕರೆಯಿಂದ ಸ್ವೀಕರಿಸಬೇಕು. ಒಂದು ಅರ್ಥಪೂರ್ಣವಾದ ಪ್ರೀತಿಯಿಂದ ಸಿಗುವ ನೆಮ್ಮದಿ, ಸಂತೋಷ ಬೇರೆಲ್ಲೂ ಸಿಗೋದಿಲ್ಲ. ಜೀವನದಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಬೇಕು. ಅದು ಬಿಟ್ಟು ಮುಂದಿನ ಜೀವನದ ಬಗ್ಗೆ ಚಿಂತೆ ಮಾಡ್ಕೊಂಡಿದ್ರೆ ಏನು ಲಾಭ ಹೇಳು?

ಅಭಿಮನ್ಯುವಿಗೆ ಪ್ರೀತಿ ಎಂಬುದು ಹೊಸತ್ತಲ್ಲ. ಅವನ ಜೀವನದಲ್ಲಿ ಎಷ್ಟೊಂದು ಹುಡುಗಿಯರು ಬಂದು ಹೋಗಿಲ್ಲ? ಲೆಕ್ಕ ಇಡೋದಕ್ಕೂ ಅವನಿಂದ ಸಾಧ್ಯವಾಗಲಿಲ್ಲ. ಅಷ್ಟೊಂದು ಹುಡುಗಿಯರು ಮಿಂಚುಹುಳದಂತೆ ಬಂದು ಮಿಂಚಿ ಮರೆಯಾಗಿ ಹೋದರು. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದವರು ಒಬ್ಬೊಬ್ಬರಾಗಿ ಕೈ ಕೊಡುತ್ತಾ ಹೋದರು. ಒಬ್ಬಳಿಂದ ಕಳೆದುಕೊಂಡ ಪ್ರೀತಿ ಮತ್ತೊಬ್ಬಳಲ್ಲಿ ಸಿಗಬಹುದೇನೋ ಎಂಬ ನಿರೀಕ್ಷೆಯಲ್ಲಿ ಜೇಡ ನೇಯ್ದ ಬಲೆಗೆ ಬೀಳುವ ಮಿಡತೆಯಂತೆ ಪ್ರೀತಿಯ ಬಲೆಗೆ ಬೀಳುತ್ತಿದ್ದ. ಅಲ್ಲೂ ಕೂಡ ಅವನಿಗೆ ನಿರಾಸೆ ಕಾದು ಕುಳಿತಿರುತಿತ್ತು.

ಪ್ರೀತಿಸಿದ ಹುಡುಗಿಯರೆಲ್ಲ ಒಂದೆರಡು ಮಕ್ಕಳನ್ನು ಹೆತ್ತು ಅವನ ಕಣ್ಣ ಮುಂದೆಯೇ ಓಡಾಡುತ್ತಿದ್ದಾರೆ. ಆದರೆ ಒಮ್ಮೆಯೂ ಅವನ ಬಳಿ ಬಂದು ಮಾತಾಡಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಆ ನೋವು ಅವನನ್ನು ತೀವ್ರವಾಗಿ ಕಾಡುತಿತ್ತು. ನನ್ಗೆ ಮದುವೆ ಅಂತ ಆದರೆ ಅದು ನಿನ್ನೊಂದಿಗೆ ಮಾತ್ರ ಎಂದು ಪ್ರೀತಿಸಿದ ಎಲ್ಲಾ ಹುಡುಗಿಯರು ಅಭಿಮನ್ಯುವಿನ ಎದುರು ಪ್ರತಿಜ್ಞೆ ಕೈಗೊಳ್ಳುತ್ತಿದ್ದರು. ಪ್ರತಿಜ್ಞೆ ಈಡೇರಿಸಿದವರು ಯಾರೂ ಇಲ್ಲ. ಪ್ರತಿ ಹುಡುಗಿಯರು ಪ್ರೀತಿಯನ್ನು ತಿರಸ್ಕರಿಸಿ ಹೊರಟು ನಿಂತಾಗ ಅಭಿಮನ್ಯುವಿಗೆ ಒಂದಷ್ಟು ದುಃಖವನ್ನು ಉಚಿತವಾಗಿ ನೀಡಿ ಹೋಗುತ್ತಿದ್ದರು. ಆ ನೋವು ಮರೆಯಲು ಮತ್ತೊಂದು ಪ್ರೀತಿಗಾಗಿ ಹಂಬಲಿಸುತ್ತಿದ್ದ. ಜೀವನಪರ್ಯಂತ ಎಷ್ಟೇ ಹುಡುಗಿಯರನ್ನು ಪ್ರೀತಿಸಿದರೂ ನೋವು ಮರೆಯಾಗೋದಕ್ಕೆ ಸಾಧ್ಯವಿಲ್ಲವೆಂದು ಕೊನೆಗೊಂದು ದಿನ ತೀರ್ಮಾನಿಸಿ ಹುಡುಗಿಯರ ವಿಷಯದಲ್ಲಿ ತಲೆಹಾಕಿಯೂ ನೋಡಲಿಲ್ಲ. ಇದೀಗ ಅಭಿಮನ್ಯುವಿನ ಎದುರು ಮತ್ತೊಂದು ಪ್ರೀತಿ ಬಂದು ನಿಂತಿದೆ. ಆದರೆ, ಆ ಪ್ರೀತಿ ಎಲ್ಲಾ ಪ್ರೀತಿಯಂತಿಲ್ಲ. ಅಕ್ಷರ ಎಲ್ಲಾ ಹುಡುಗಿಯರಿಗಿಂತ ಭಿನ್ನ ಸ್ವಭಾವದವಳು. ಅಭಿಮನ್ಯುವಿನ ಜೀವನದಲ್ಲಿ ಹಾದು ಹೋದ ಎಲ್ಲಾ ಹುಡುಗಿಯರು ಜೀವನಕ್ಕೊಂದು ಅರ್ಥವೇ ಇಲ್ಲದಂತೆ ಮಾಡಿ ಹೋದರು. ಆದರೆ ಅಕ್ಷರ ಅವನ ಜೀವನಕ್ಕೊಂದು ಅರ್ಥ ಕಲ್ಪಿಸಿಕೊಟ್ಟು ಪ್ರೀತಿಗಾಗಿ ಹಂಬಲಿಸುತ್ತಿದ್ದಾಳೆ. ಕೊನೆಗೂ ಅವಳ ಪ್ರೀತಿಯನ್ನು ತಿರಸ್ಕರಿಸುವ ಮನಸ್ಸಾಗಲಿಲ್ಲ. ಪ್ರೀತಿಯನ್ನು ಸ್ವೀಕರಿಸುತ್ತೇನೆ, ದೇಹದಲ್ಲಿ ಕೊನೆಯುಸಿರಿರುವವರೆಗೂ ಆಕೆಯನ್ನೇ ಪ್ರೀತಿಸುತ್ತೇನೆಂದು ನಿರ್ಧರಿಸಿದ.

ಪ್ರೀತಿಸುವ ನಿರ್ಧಾರ ಕೈಗೊಂಡನಾದರೂ ಮುಂದುವರೆಯುವ ಧೈರ್ಯ ಸಾಲದಾಯಿತು. ಮತ್ತೆ ಗೊಂದಲದೊಳಗೆ ಮುಳುಗಿದ ಅಭಿಮನ್ಯು ಭಾಗ್ಯಳ ಕಡೆಗೆ ನೋಟ ಬೀರಿ ನನ್ಗೆ ಪ್ರೀತಿಸೋ ಮನಸ್ಸೇ ಇಲ್ಲ ಎಂಬ ರೀತಿಯಲ್ಲಿ ಮಾತಾಡ್ಬೇಡ. ನನ್ಗೂ ಕೂಡ ಪ್ರೀತಿ ಅಂದರೇನೆಂಬುದು ಗೊತ್ತಿದೆ. ಅದರ ಸಿಹಿ-ಕಹಿಗಳೆಷ್ಟಿರುತ್ತವೆ ಎಂಬ ಅನುಭವವೂ ಕೂಡ ಇದೆ. ನನ್ನ ಜೀವನದಲ್ಲಿ ಅದೆಷ್ಟೊಂದು ಹುಡುಗಿಯರು ಬಂದು ಹೋಗಿಲ್ಲ ಹೇಳು? ನನಗಿಂತ ಸ್ಥಿತಿವಂತ, ಸ್ಫುರದ್ರೂಪಿ ಹುಡುಗ ಸಿಕ್ಕ ನಂತರ ನನ್ನ ಮರೆತು ಅವರವರ ಹಾದಿ ತುಳಿದುಬಿಟ್ಟರು. ನಾನು ಮಾತ್ರ ಪ್ರೀತಿಯ ಕನವರಿಕೆಯಲ್ಲಿಯೇ ಕಳೆದು ಹೋದೆ ಹಳೆಯ ನೆನಪುಗಳನ್ನು ಕೆದಕಿ ನೊಂದು ನುಡಿದ.

ಅಭಿಮನ್ಯು ಪ್ರೀತಿಯ ವಿಚಾರದಲ್ಲಿ ಸಾಕಷ್ಟು ನೊಂದಿರುವ ವಿಚಾರ ಭಾಗ್ಯಳಿಗೂ ಕೂಡ ಗೊತ್ತು. ಆ ಪ್ರೀತಿ ಹೆಚ್ಚು ಕಾಲ ಬಾಳುವುದಿಲ್ಲ ಎಂಬ ಸತ್ಯ ಕೂಡ ಆಕೆಗೆ ಗೊತ್ತಿತ್ತು. ಅದೊಂದು ಹುಡುಗಾಟಿಕೆಯ ಕಾಲ. ಆ ವಯಸ್ಸು ಕೇವಲ ಪ್ರೀತಿಯನ್ನು ಬಯಸುತ್ತದೆಯೇ ಹೊರತು ಬದುಕನ್ನಲ್ಲ. ವಯಸ್ಸಾಗುತ್ತಾ ಹೋದಂತೆ ಪ್ರೀತಿಗಿಂತ ಬದುಕು ಮುಖ್ಯ ಅನ್ನಿಸತೊಡಗುತ್ತದೆ. ಹುಡುಗಾಟಿಕೆಯ ವಯಸ್ಸಿನಲ್ಲಿ ಪ್ರೀತಿಸಿದ ಹುಡುಗಿಯರೆಲ್ಲ ವಯಸ್ಸಾಗುತ್ತಿದ್ದಂತೆ ಅಭಿಮನ್ಯುವನ್ನು ತೊರೆದು ಬದುಕಿನ ಮಾರ್ಗವನ್ನು ಆಯ್ದುಕೊಂಡರು. ಬಡವ ಅಭಿಮನ್ಯುವನ್ನು ಮದುವೆಯಾಗಿ ಸುಖ ಅನುಭವಿಸೋದಕ್ಕೆ ಸಾಧ್ಯವಿಲ್ಲವೆಂಬ ಅರಿವು ಪ್ರೀತಿಸಿದ ಹುಡುಗಿಯರಿಗೆಲ್ಲ ಇತ್ತು. ಹಾಗಾಗಿಯೇ ಪ್ರೀತಿಸಿದ ಎಲ್ಲಾ ಹುಡುಗಿಯರು ಒಂದು ಮಾತು ಆಡದೆ ಅವನನ್ನು ತೊರೆದು ಹೋದರು. ಆದರೆ, ಅಕ್ಷರ ಹಾಗಲ್ಲ. ಅವಳೇನು ಸಣ್ಣವಳಲ್ಲ. ವಯಸ್ಸು ಇಪ್ಪತ್ತಮೂರು ತುಂಬಿ ಇಪ್ಪತ್ತನಾಲ್ಕರ ಕಡೆಗೆ ಓಡುತ್ತಿದೆ. ಯಾವುದೇ ವಿಚಾರವನ್ನು ಯೋಚಿಸಿ ನಿರ್ಧಾರ ಕೈಗೊಳ್ಳುವಷ್ಟು ಬೆಳೆದು ನಿಂತಿದ್ದಾಳೆ. ಅವಳಿಗೆ ಅಭಿಮನ್ಯು ವಿನ ಬಡತನದ ಬದುಕು ಗೊತ್ತಿದೆ. ಆ ವಿಚಾರ ಗೊತ್ತಿರುವುದರಿಂದಲೇ ಆಕೆ ಅವನ ಬದುಕಿನಲ್ಲಿ ಬದಲಾವಣೆ ತರಲು ಮುಂದಾಗುತ್ತಿದ್ದಾಳೆ. ಆರ್ಥಿಕ ಸಂಕಷ್ಟದಲ್ಲಿರುವ ಅಭಿಮನ್ಯುವಿಗೆ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಸುತ್ತಿದ್ದಾಳೆ. ಅಭಿಮನ್ಯು ವನ್ನು ಆರ್ಥಿಕವಾಗಿ ಸುಸ್ಥಿತಿಗೆ ತಂದ ನಂತರ ಮದುವೆಯಾಗಿ ನೆಮ್ಮದಿಯ ಬದುಕು ಕಂಡುಕೊಳ್ಳಬೇಕೆಂಬ ಕನಸು ಕಾಣುತ್ತಾ ಕುಳಿತ್ತಿದ್ದಾಳೆ. ಇಂತಹ ಒಂದು ಹುಡುಗಿಯ ಕೈ ಹಿಡಿಯುವುದು ಸೌಭಾಗ್ಯವಲ್ಲದೆ ಮತ್ತಿನ್ನೇನು ಅಂದುಕೊಂಡಳು ಭಾಗ್ಯ.

ಅಭಿಮನ್ಯು, ನೀನೇನು ಯೋಚ್ನೆ ಮಾಡ್ಬೇಡ. ಪ್ರೀತಿ ಮಾಡಿಬಿಡು ಅಷ್ಟೇ. ಕೆಲವು ಹುಡುಗಿಯರು ಮೋಸ ಮಾಡಿದರು ಅಂತ ಇಡೀ ಸ್ತ್ರೀ ಸಮುದಾಯವನ್ನೇ ಸಂಶಯದಿಂದ ನೋಡೋದು ಸರಿಯಲ್ಲ. ಒಬ್ಬಳಿಂದ ಕಳೆದುಕೊಂಡ ಪ್ರೀತಿಯನ್ನು ಮತ್ತೊಬ್ಬಳಿಂದ ಪಡೆದುಕೊಳ್ಳಬಹುದು. ಆ ಸೌಭಾಗ್ಯ ನಿನಗೊದಗಿ ಬಂದಿದೆ. ಯಾವುದೇ ಸಂಕೋಚವಿಲ್ಲದೆ ಮುಕ್ತ ಮನಸ್ಸಿನಿಂದ ಪ್ರೀತಿ ಯನ್ನು ಸ್ವೀಕಾರ ಮಾಡು. ಆಗುವುದೆಲ್ಲ ಒಳ್ಳೆಯದಕ್ಕೆಂದು ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನೇ ಹೇಳಿಲ್ವ? ಪ್ರತಿಯೊಂದು ಅಂತ್ಯಕ್ಕೂ ಒಂದು ಆರಂಭ ಇರುತ್ತೆ. ಇದುವರೆಗೆ ನೀನು ಪ್ರೀತಿಸಿದ ಹುಡುಗಿಯರ ಪ್ರೀತಿ ಅಂತ್ಯವಾಗಿದೆ. ಅದರ ಬಗ್ಗೆ ಚಿಂತಿಸಿ ಫಲವಿಲ್ಲ.

ಅಕ್ಷರ ಇದೀಗ ನಿನ್ನ ಜೀವನದಲ್ಲಿ ಪ್ರೀತಿಯ ಅಕ್ಷರ ಬರೆಯಲು ಹಂಬಲಿಸುತ್ತಿದ್ದಾಳೆ. ಅವಳಿಗೋಸ್ಕರ ನಿನ್ನ ಹೃದಯದಲ್ಲಿ ಒಂದಿಷ್ಟು ಜಾಗ ಮೀಸಲಿಟ್ಟುಬಿಡು. ದಯವಿಟ್ಟು ಅವಳ ಕೋರಿಕೆಯನ್ನು ಮಾತ್ರ ತಿರಸ್ಕರಿಸುವ ಮನಸ್ಸು ಮಾಡ್ಬೇಡ ವಿನಯ ಪೂರ್ವಕವಾಗಿ ಕೇಳಿಕೊಂಡಳು.

ಸಾಕಷ್ಟು ಹೊತ್ತು ಆಕೆಯೊಂದಿಗೆ ಮಾತಾಡಿ ಮಾತು ಮುಗಿಸುವಷ್ಟರೊಳಗೆ ಅಭಿಮನ್ಯುವಿನ ಹೃದಯ ಬಡಿತ ಹೆಚ್ಚಾಗ ತೊಡಗಿತು. ಒಮ್ಮೆ ಹೃದಯವನ್ನು ತಾಕಿ ನೋಡಿದಾಗ ಅಲ್ಲಿ ಕೇವಲ ಒಂದು ಹೃದಯವಿರಲಿಲ್ಲ. ಅಕ್ಷರ ಎಂಬ ಮುದ್ದಾದ ಹುಡುಗಿಯ ಹೃದಯವೂ ಸೇರಿಕೊಂಡು ಹೃದಯ ಬಡಿತದ ತೀವ್ರತೆ ಹೆಚ್ಚಿತು.

ಭಾಗ್ಯಳೊಂದಿಗೆ ಮಾತು ಮುಗಿಸಿ ಹೊರಡಲು ಎದ್ದು ನಿಂತ ಅಭಿಮನ್ಯುವನ್ನು ಮನೆಯ ಅಂಗಳದವರೆಗೆ ಬಂದು ಬೀಳ್ಕೊಟ್ಟ ಭಾಗ್ಯ ಆಗಿಂದಾಗೆ ಬತಾ ಇರು. ಇನ್ನೊಂದ್ಸಲ ಬರುವಾಗ ನೀನೊಬ್ಬನೇ ಬಬೇಡ. ಜೊತೆಗೆ ನಿನ್ನವಳನ್ನೂ ಕಕೊಂಡು ಬಾ ಎಂದು ಹೇಳಿ ಮುಗುಳ್ನಗೆ ಬೀರಿದಳು.
* * *

ದಿನಗಳು ಕ್ಷಣಗಳಂತೆ ಉರುಳಿ ಹೋದವು. ರಾಜಾಸೀಟ್ ಉದ್ಯಾನವನದಲ್ಲಿ ಮುಸ್ಸಂಜೆ ಹೊತ್ತಲ್ಲಿ ಇಬ್ಬರು ದಿನ ನಿತ್ಯ ತಪ್ಪದೆ ಭೇಟಿಯಾಗುತ್ತಿದ್ದರು. ಒಂದಷ್ಟು ಹೊತ್ತು ಹರಟೆ ಹೊಡೆದು ಹಿಂತಿರುಗುತ್ತಿದ್ದರು. ತಿಂಗಳುಗಳು ಸರಿದರೂ ಅಭಿಮನ್ಯು ತನ್ನ ನಿರ್ಧಾರ ಪ್ರಕಟಿಸಲು ಮುಂದಾಗಲಿಲ್ಲ. ಇಂದಲ್ಲದಿದ್ದರೂ ನಾಳೆಯಾದರೂ ಅಭಿಮನ್ಯು ತನ್ನ ಪ್ರೀತಿಯನ್ನು ಮೆಚ್ಚಿಕೊಳ್ಳುತ್ತಾನೆ. ಆ ದಿನಗಳು ಆದಷ್ಟು ಬೇಗ ಬರಲಿ ಎಂದು ಅಂಥಹ ಒಂದು ದಿನಕ್ಕಾಗಿ ಅಕ್ಷರ ದಿನನಿತ್ಯ ಕಾಯುತ್ತಿದ್ದಳು. ದಿನಗಳು ಉರುಳುತ್ತಿದ್ದಂತೆ ಇಬ್ಬರಲ್ಲೂ ಆತ್ಮೀಯತೆ ಮತ್ತಷ್ಟು ಬೆಳೆಯಿತು.

ಅಂದು ಭಾನುವಾರ. ಬೆಳಗ್ಗೆ ಸ್ವಲ್ಪ ತಡವಾಗಿಯೇ ಎದ್ದ ಅಭಿಮನ್ಯು ಅಮ್ಮನೊಂದಿಗೆ ಹರಟೆಯಲ್ಲಿ ತೊಡಗಿದ್ದ. ಬೆಡ್‌ರೂಂನಲ್ಲಿಟ್ಟಿದ್ದ ಮೊಬೈಲ್ ಅರಚಿಕೊಳ್ಳುತಿತ್ತು. ಬೆಡ್‌ರೂಂ ಕಡೆಗೆ ನಡೆದ ಅಭಿಮನ್ಯು ಮೊಬೈಲ್ ಎತ್ತಿಕೊಂಡು ಹಲೋ.. ಅಕ್ಷರ, ಏನು ವಿಶೇಷ? ಕೇಳಿದ.

ಅಭಿಮನ್ಯು, ನನ್ಗೆ ಮನೆಯಲ್ಲಿ ತುಂಬಾ ಬೋರ್ ಆಗ್ತಾ ಇದೆ ಕಣೋ. ಎಲ್ಲಿಗಾದ್ರೂ ಹೊರಗೆ ಹೋಗೋಣ ಅನ್ನಿಸ್ತಾ ಇದೆ. ದುಬಾರೆಗೆ ಹೋಗೋಣ್ವ? ಕೇಳಿದಳು.

ಮನೆಯಲ್ಲಿದ್ದು ಬೋರ್ ಅನ್ನುವುದಕ್ಕಿಂತ ಹೆಚ್ಚಾಗಿ ಆಕೆಗೆ ಅಭಿಮನ್ಯುವಿನೊಂದಿಗೆ ಕಾಲ ಕಳೆಯಬೇಕಿತ್ತು. ಮನಬಿಚ್ಚಿ ಮಾತಾಡಬೇಕಾಗಿತ್ತು. ಒಂದಷ್ಟು ದೂರ ಒಟ್ಟಿಗೆ ಪಯಣ ಬೆಳೆಸಿದರೆ ಮನಸ್ಸು ಮತ್ತಷ್ಟು ಹತ್ತಿರವಾಗುತ್ತದೆ ಎಂಬ ನಂಬಿಕೆ ಆಕೆಯದ್ದು. ಅಭಿಮನ್ಯುವಿಗೆ ಆಕೆಯೊಂದಿಗೆ ಹೊರಡುವ ಉತ್ಸಾಹ ಇದ್ದರೂ ಮನದಲ್ಲೊಂದು ಅಳುಕು ಇತ್ತು. ಎಲ್ಲಿ ಯಾರಾದರು ನೋಡಿ ಬಿಡುತ್ತಾರೋ? ಮುಂದೇನು ರಾದ್ಧಾಂತವಾಗಿ ಬಿಡುತ್ತದೆಯೋ ಎಂಬ ಭಯ ಕಾಡಲು ಪ್ರಾರಂಭಿಸಿತು. ಹಾಗಾಗಿ ಆಕೆಯ ಕೋರಿಕೆಯನ್ನು ನಯವಾಗಿ ತಿರಸ್ಕರಿಸಲು ಮುಂದಾದ.

ಅಷ್ಟೊಂದು ದೂರ ಯಾಕೆ? ದಿನಾ ಭೇಟಿಯಾಗೋ ರಾಜಾಸೀಟ್ ಸಾಲದ ಕಾಲಹರಣ ಮಾಡೋದಕ್ಕೆ?

ನೆನಸಿಕೊಂಡಾಗಲೆಲ್ಲ ರಾಜಾಸೀಟ್‌ಗೆ ಹೋಗಿ ಬರಬಹುದು. ಆದರೆ ದುಬಾರೆಗೆ ದಿನಾ ಹೋಗೋದಕ್ಕೆ ಸಾಧ್ಯವಾಗೋದಿಲ್ಲ. ಒಂದ್ಸಲ ಹೋಗಿ ಬರೋಣ. ಲೈಫಲ್ಲಿ ಸ್ವಲ್ಪನಾದ್ರೂ ಚೇಂಜಸ್ಸ್ ಬೇಡ್ವ? ನೀನು ಬಲೇ ಬೇಕು. ಇಲ್ಲದ ನೆಪ ಹೇಳ್ಬೇಡ. ನಾನಂತು ರೆಡಿಯಾಗಿ ನಿಂತಿದ್ದೇನೆ, ನೀನು ಆದಷ್ಟು ಬೇಗ ರೆಡಿಯಾಗು. ಟೌನಲ್ಲಿ ನಿನ್ಗೋಸ್ಕರ ಕಾಯ್ತಾ ಇತೇನೆ ಅಭಿಮನ್ಯುವಿಗೆ ಮರುಮಾತನಾಡಲು ಅವಕಾಶ ನೀಡದೆ ಸಂಭಾಷಣೆ ಮೊಟಕುಗೊಳಿಸಿ ಹೊರಟು ನಿಂತಳು.

ಯಾವ ಗ್ರಹಚಾರ ಕಾದಿದೆಯೋ ಎಂದು ಮನದಲ್ಲೇ ಗೊಣಗುತ್ತಾ ಅಭಿಮನ್ಯು ತರಾತುರಿಯಲ್ಲಿ ತಯಾರಾಗಿ ನಗರದ ಕಡೆಗೆ ನಡಿಗೆ ಹಾಕಿದ. ಅದಾಗಲೇ ಅಕ್ಷರ ಅಭಿಮನ್ಯುವಿನ ಹಾದಿ ಕಾಯುತ್ತಾ ಕುಳಿತ್ತಿದ್ದಳು. ಇಬ್ಬರು ಕಾರಿನಲ್ಲಿ ದುಬಾರೆ ಕಡೆಗೆ ಪಯಣ ಬೆಳೆಸಿದರು. ಅಕ್ಷರ ಡ್ರೈವ್ ಮಾಡುತ್ತಿದ್ದಳು. ಪಕ್ಕದಲ್ಲಿಯೇ ಅಭಿಮನ್ಯು ಕುಳಿತ್ತಿದ್ದ. ಒಂದು ತಾಸಿನ ಬಳಿಕ ದುಬಾರೆ ಪ್ರವಾಸಿ ತಾಣವನ್ನು ಸೇರಿಕೊಂಡರು.

ದುಬಾರೆಗೆ ಕಾಲಿಡುತ್ತಿದ್ದಂತೆ ಜುಳು.. ಜುಳು… ನಿನಾದಗೈಯುತ್ತಾ ಹರಿಯುತ್ತಿದ್ದ ಕಾವೇರಿಯ ದರ್ಶನವಾಯಿತು. ಮಳೆಗಾಲ ಕಳೆದು ನಾಲ್ಕೈದು ತಿಂಗಳು ಸರಿದ ಹಿನ್ನೆಲೆಯಲ್ಲಿ ನದಿಯಲ್ಲಿ ನೀರಿನ ಹರಿಯುವಿಕೆ ಪ್ರಮಾಣ ಸಾಕಷ್ಟು ಕಡಿಮೆಯಾಗಿತ್ತು. ಮಳೆಗಾಲದಲ್ಲಿ ನದಿಯ ಒಂದು ದಡದಿಂದ ಮತ್ತೊಂದು ದಡಕ್ಕೆ ತೆರಳಬೇಕಾದರೆ ಬೋಟ್‌ನ ಸಹಕಾರ ಪಡೆಯಲೇ ಬೇಕು. ಬೇಸಿಗೆಯಲ್ಲಿ ಆ ಸಮಸ್ಯೆ ಇಲ್ಲ. ನದಿಯಲ್ಲಿ ನೀರು ಕಡಿಮೆ ಇರುವುದರಿಂದ ಕಾಲ್ನಡಿಗೆಯಲ್ಲಿಯೇ ತೆರಳಬಹುದು. ನದಿ ನೀರಿನಲ್ಲಿ ಆಟವಾಡುತ್ತಲೇ ದುಬಾರೆ ಆನೆ ತರಬೇತಿ ಶಿಬಿರಕ್ಕೆ ಕಾಲಿಟ್ಟರು. ಆನೆ ತರಬೇತಿ ಶಿಬಿರದಲ್ಲಿ ಸಾಕಾನೆಯ ಬೆನ್ನೇರಿ ಒಂದಷ್ಟು ಹೊತ್ತು ಕಾಡಿನಲ್ಲಿ ಸಂಚರಿಸಿ ಪ್ರಕೃತಿಯ ಸೊಬಗನ್ನು ಸವಿದರು. ಆನೆಯ ಮೇಲೆ ಕುಳಿತ ಇಬ್ಬರಿಗೆ ಮದುವೆಯ ದಿಬ್ಬಣದಲ್ಲಿ ಹೊರಟ್ಟಿದ್ದೇವೇನೋ ಎಂದು ಅನ್ನಿಸಿತು. ಅಷ್ಟೂ ಹೊತ್ತು ಇಬ್ಬರು ಮಾತಾಡಿಕೊಳ್ಳದೆ ತಮ್ಮದೇ ಲೋಕದಲ್ಲಿ ಸಿಹಿಯಾದ ಕಲ್ಪನೆಯಲ್ಲಿ ವಿಹರಿಸಿದರು. ಆನೆಯ ಮೇಲಿಂದ ಇಳಿದು ಬರುವಷ್ಟರೊಳಗೆ ಸೂರ್ಯ ನೆತ್ತಿಯ ಮೇಲೆ ಬಂದು ನಿಲ್ಲೋದಕ್ಕೆ ಪ್ರಾರಂಭಿಸಿದ. ದುಬಾರೆಯಲ್ಲಿ ಹೊತ್ತು ಕಳೆದು ಹೋಗಿದ್ದೇ ಅನುಭವಕ್ಕೆ ಬರಲಿಲ್ಲ.

ಅಕ್ಷರ ಆದಷ್ಟು ಬೇಗ ಮನೆ ಸೇರಿಕೊಳ್ಳುವ ತವಕದಲ್ಲಿದ್ದಳು. ಮಧ್ಯಾಹ್ನದೊಳಗೆ ಮನೆಗೆ ಬರುತ್ತೇನೆಂದು ಮನೆಗೆ ತಿಳಿಸಿ ಹೊರಟ್ಟಿದ್ದಳು. ಸೂರ್ಯ ನೆತ್ತಿಯ ಮೇಲೆ ಬಂದು ನಿಲ್ಲುತ್ತಿದ್ದಂತೆ ಹೊರಡೋಣ, ಬಂದು ತುಂಬಾ ಹೊತ್ತಾಯ್ತು ಅಂದಳು. ಒಲ್ಲದ ಮನಸ್ಸಿನಿಂದ ದುಬಾರೆಗೆ ಆಗಮಿಸಿದ ಅಭಿಮನ್ಯು, ನಿಸರ್ಗ ಸೌಂದರ್ಯವನ್ನು ಕಂಡು ಬೆರಗಾಗಿ ಮತ್ತೊಂದಷ್ಟು ಹೊತ್ತು ಇಲ್ಲಿಯೇ ಕಾಲ ಕಾಳೆದು ಬಿಡಬೇಕು. ಇನ್ನು ದುಬಾರೆಯ ದರುಶನ ಮಾಡುವುದಕ್ಕೆ ಅವಕಾಶ ಸಿಗುತ್ತದೆಯೋ ಇಲ್ಲವೋ? ಯಾರಿಗೆ ಗೊತ್ತು? ಮಡಿಕೇರಿಗೆ ಹೋಗಿ ಮಾಡುವುದಕ್ಕೇನು ಕೆಲಸವಿಲ್ಲ. ಸಂಜೆ ತನಕ ನಿಶ್ಚಿಂತೆಯಿಂದ ನಿಸರ್ಗದ ಸೆರಗಿನಲ್ಲಿ ಆಕೆಯೊಂದಿಗೆ ಹರಟುತ್ತಾ ಕುಳಿತುಬಿಡಬೇಕೆನ್ನಿಸಿತು.

ಅಷ್ಟೊಂದು ಅರ್ಜೆಂಟಾ? ಯಾಕೋ ಇಲ್ಲಿಂದ ಹೋಗೋದಕ್ಕೇ ಮನಸ್ಸಾಗ್ತಾ ಇಲ್ಲ. ಸಂಜೆ ತನ್ಕ ಇಲ್ಲೇ ಇದ್ದು ಬಿಡುವ. ಏನಂತಿಯ? ಮನದ ಇಂಗಿತ ತೋಡಿಕೊಂಡ.

ಅಭಿಮನ್ಯುವಿನಿಂದ ಪ್ರೀತಿಯ ವಿಚಾರದ ಬಗ್ಗೆ ಬಾಯಿ ಬಿಡಿಸಲು ಇದೇ ಸೂಕ್ತವಾದ ಸಮಯ ಅಂದುಕೊಂಡಳು. ಅಭಿಮನ್ಯು ಎಂದಿಗೂ ಇಷ್ಟೊಂದು ಸಂತೋಷವಾಗಿ ತನ್ನೊಂದಿಗೆ ಕಾಲ ಕಳೆದಿಲ್ಲ. ರಾಜಾಸೀಟ್‌ನಲ್ಲಿ ಹೊರಡೋಣ ಎಂಬ ಒಂದು ಮಾತು ಕೇಳಿದೊಡನೆ ಎದ್ದು ನಿಂತು ಬಿಡುತ್ತಿದ್ದ. ಆದರೆ, ಅವನೇ ಇಂದು ಇನ್ನೊಂದಷ್ಟು ಹೊತ್ತು ಕಾಲ ಕಳೆಯೋಣ ಅನ್ನುತ್ತಿದ್ದಾನೆ. ಇದು ಪ್ರೀತಿಯನ್ನು ಪರೀಕ್ಷೆಗೊಡ್ಡಲು ಸೂಕ್ತ ಸಮಯವಲ್ಲದೆ ಮತ್ತಿನ್ನೇನು? ಇವತ್ತು ಏನೇ ಆದರೂ ಅಭಿಮನ್ಯುವಿನಿಂದ ಪ್ರೀತಿಯ ವಿಚಾರದಲ್ಲಿ ಒಂದು ಅಂತಿಮ ತೀರ್ಮಾನವನ್ನು ಹೊರ ಬೀಳಿಸಬೇಕೆಂದು ನಿರ್ಧರಿಸಿದಳು.

ನಿನ್ನೊಂದಿಗೆ ಸಂಜೆ ತನಕ ಏನು? ಇಡೀ ಜೀವನವನ್ನೇ ಕಳೆಯಬೇಕೆಂದು ತೀರ್ಮಾನಿಸಿಯಾಗಿದೆ. ಆದರೆ, ಇಂದು ಸಂಜೆಯ ತನಕ ನಿನ್ನೊಂದಿಗೆ ಕಾಲ ಕಳೆಯಬೇಕಾದರೆ ನಂದೊಂದು ಷರತ್ತು ಇದೆ. ಅದನ್ನ ನೆರವೇರಿಸುವುದಾದರೆ ಮಾತ್ರ ಇತೇನೆ

“ಆಯ್ತು, ಅದೇನೂಂತು ಮೊದ್ಲು ಹೇಳು”

“ಸದಾ ನಿನ್ನೊಂದಿಗೆ ಇಬೇಕಾದ್ರೆ ಆದಷ್ಟು ಬೇಗ ನನ್ನ ಮನೆತುಂಬಿಸ್ಕೋಬಿಡು. ಇಲ್ದಿದ್ರೆ ಹೀಗೆ ತರಾತುರಿಯಲ್ಲಿ ಹೋಗೋದು ನಿತ್ಯದ ಕಾಯಕವಾಗಿ ಬಿಡುತ್ತೆ”

ಹಲವು ತಿಂಗಳುಗಳ ಬಳಿಕ ಮತ್ತೆ ಪ್ರೀತಿಯ ವಿಷಯ ತೆರೆದಿಟ್ಟಳು. ಆದರೆ, ಇಂದು ಆಕೆ ಪ್ರೀತಿಯ ಮತ್ತೊಂದು ಮೆಟ್ಟಿಲು ಹತ್ತಿ ನಿಂತಿದ್ದಳು. ಅದು ಮದುವೆ. ಒಂದು ಬಾರಿ ಪ್ರೀತಿಗಾಗಿ ಕೋರಿಕೆ ಸಲ್ಲಿಸಿದ್ದಳು. ಅಭಿಮನ್ಯುವಿನಿಂದ ಇದುವರೆಗೂ ಯಾವುದೇ ಉತ್ತರ ಬಾರದೆ ಇದ್ದರೂ ಸಹ ಆಕೆ ಮದುವೆಯ ಪ್ರಸ್ತಾಪ ಮುಂದಿಟ್ಟಳು. ಪ್ರೀತಿಗಾಗಿ ಹಂಬಲಿಸಿದಾಗ ಅಭಿಮನ್ಯು ಆ ಕೋರಿಕೆಯನ್ನು ಸಾರಾಸಗಟಾಗಿ ತಳ್ಳಿ ಹಾಕಲಿಲ್ಲ. ಹಾಗಾದರೆ ತನ್ನ ಮೇಲೆ ಪ್ರೀತಿ ಇದೆ ಅಂದಂತಾಯಿತಲ್ಲ? ಎಂದು ಅಂದುಕೊಂಡಿದ್ದಳು. ಪ್ರೀತಿಯನ್ನು ಜೀವಂತವಾಗಿಟ್ಟುಕೊಳ್ಳೋದಕ್ಕೆ ಅದೊಂದೇ ಆಕೆಗೆ ಸಾಕಾಗಿತ್ತು. ಇಂದಲ್ಲದಿದ್ದರೂ ನಾಳೆಯಾದರೂ ಅಭಿಮನ್ಯು ತನ್ನವನಾಗುತ್ತಾನೆಂಬ ಭರವಸೆಯಲ್ಲಿ ಬದುಕು ಸಾಗಿಸುತ್ತಿದ್ದಳು. ಆದರೆ, ಆ ಭರವಸೆಯಲ್ಲಿ ಎಷ್ಟು ದಿನಾಂತ ಕಾಲ ಕಳೆಯೋದಕ್ಕೆ ಸಾಧ್ಯ? ಆದಷ್ಟು ಬೇಗ ಅಂಥಹ ಒಂದು ಸುಂದರ ಗಳಿಗೆ ಎದುರು ಬಂದು ನಿಂತು ಬಿಡಲಿ ಅನ್ನಿಸಿತು. ಅಭಿಮನ್ಯು ತನ್ನನ್ನು ಬಾಚಿ ತಬ್ಬಿಕೊಂಡು ಅಕ್ಷರ, ನಿನ್ನ ನಾನು ತುಂಬಾ ತುಂಬ ಪ್ರೀತಿ ಮಾಡ್ತೇನೆ ಕಣೆ. ಈ ಜಗತ್ತಿನಲ್ಲಿ ಯಾರೂ ಕೊಡದಷ್ಟು ಪ್ರೀತಿ ಕೊಡ್ತೇನೆ ಎಂದು ಈ ಕ್ಷಣದಲ್ಲಿಯೇ ಹೇಳಿ ಬಿಡಲಿ ದೇವರೇ ಎಂದು ಮನೊದೊಳಗೆ ದೇವರನ್ನು ಪ್ರಾರ್ಥಿಸಿದಳು. ಆಕೆಯ ಪ್ರಾರ್ಥನೆ ದೇವಲೋಕದಲ್ಲಿರುವ ದೇವಾನುದೇವತೆಗಳ ಮನ ತಟ್ಟಿತೋ ಏನೋ ಅಭಿಮನ್ಯು ಮನದೊಳಗೆ ಹುದುಗಿಟ್ಟುಕೊಂಡಿದ್ದ ಪ್ರೀತಿಯನ್ನು ತೆರೆದಿಡುವ ಮನಸ್ಸನ್ನು ಕೊನೆಗೂ ಮಾಡಿದ.

“ಅಕ್ಷರ, ನೀನಂದ್ರೆ ನನ್ಗೆ ತುಂಬಾ ಇಷ್ಟ. ನಿನ್ನನ್ನ ನನಗಿಂತ ಹೆಚ್ಚಾಗಿ ಪ್ರೀತಿ ಮಾಡ್ತೇನೆ. ಆದರೆ, ನಿನ್ನ ಪಡೆದುಕೊಳ್ಳುವಷ್ಟು ಪುಣ್ಯವಂತ ನಾನಲ್ಲ. ಜೀವನ ಪರ್ಯಂತ ನಿನ್ನ ಪ್ರೀತಿ ಮಾಡ್ತನೇ ಇತೇನೆ. ಆದರೆ, ಮದುವೆಯ ಮಾತು ಮಾತ್ರ ಆಡ್ಬೇಡ. ನಿನ್ನ ಆಸ್ತಿ, ಅಂತಸ್ತಿಗೆ ತಕ್ಕಂತಹ ಹುಡುಗನನ್ನು ನೋಡಿಕೊಳ್ಳುವುದು ನಿನ್ನ ಬಾಳಿಗೆ ಒಳ್ಳೆಯದ್ದು”.

ಹೃದಯದೊಳಗಿದ್ದ ಪ್ರೀತಿ ಮಾತಾಗಿ ಹೊರ ಹೊಮ್ಮಿತು. ಅಭಿಮನ್ಯು ಆಕೆಗೋಸ್ಕರ ಜೀವ ಕೊಡುವಷ್ಟರ ಮಟ್ಟಿಗೆ ಆಕೆಯನ್ನು ಇನ್ನಿಲ್ಲದಂತೆ ಮನದಲ್ಲಿ ಪ್ರೀತಿಸುತ್ತಿದ್ದಾನೆ, ಆಕೆಯನ್ನು ಮನದಲ್ಲಿಟ್ಟು ಪೂಜಿಸುತ್ತಿದ್ದಾನೆ. ಆಕೆಯನ್ನು ಬಾಳಸಂಗಾತಿಯನ್ನಾಗಿ ಸ್ವೀಕರಿಸಲು ಮನಸ್ಸು ತುದಿಗಾಲಲ್ಲಿ ನಿಂತಿದ್ದರೂ ಬಡತನ ಎಂಬುದು ಅಡ್ಡ ಬಂದು ನಿಂತು ಬಿಟ್ಟಿತು.

ತನಗೋಸ್ಕರ ಆಕೆ ಏನೆಲ್ಲಾ ಕಷ್ಟ ಪಟ್ಟಿಲ್ಲ? ಕೇವಲ ತನ್ನೊಬ್ಬನ ಸಂತೋಷಕೋಸ್ಕರ. ಆಕೆಯ ಸಂತೋಷವನ್ನೂ ಕೂಡ ತಾನು ಬಯಸಬೇಕು. ಆಕೆ ತನ್ನನ್ನು ಮದುವೆಯಾದರೆ ನೆಮ್ಮದಿಯಿಂದ ಬದುಕು ನಡೆಸಲು ಸಾಧ್ಯವೇ? ಬಡವರಿಗೆ ಶ್ರೀಮಂತಿಕೆ ಒಗ್ಗಿ ಹೋಗುತ್ತದೆ. ಆದರೆ, ಶ್ರೀಮಂತರು ಬಡತನಕ್ಕೆ ಒಗ್ಗಿಕೊಂಡು ಬದುಕು ನಡೆಸೋದಿದೆಯಲ್ಲ ಅದು ತುಂಬಾ ಕಷ್ಟದ ಮಾತು. ಆಕೆ ತನ್ನ ಬಾಳಸಂಗಾತಿಯಾಗಿ ಕಾಲಿಟ್ಟ ದಿನದಿಂದ ಆಕೆಯೊಡೊನೆ ಸಮಸ್ಯೆ, ನೋವು, ದುಃಖ ಹಿಂಬಾಲಿಸಿಕೊಂಡು ಬಂದು ಬಿಡುತ್ತದೆ. ಆಕೆಯ ಒಳಿತಿಗಾಗಿ ಪ್ರೀತಿಯನ್ನು ತ್ಯಾಗ ಮಾಡುವುದೇ ಒಳ್ಳೆಯದ್ದು. ಪ್ರೀತಿಯನ್ನು ಪಡೆದುಕೊಳ್ಳುವಾಗ ಸಿಗುವ ಸಂತೋಷಕ್ಕಿಂತ ತ್ಯಾಗ ಮಾಡುವಾಗ ಸಿಗುವ ಸಂತೋಷ ದುಪ್ಪಟ್ಟಾಗಿರುತ್ತದೆ. ಆ ಕ್ಷಣಕ್ಕೆ ಒಂದಿಷ್ಟು ದುಃಖ ಆವರಿಸಿಕೊಳ್ಳಬಹುದು. ಆ ದುಃಖ ಮರೆಯಾಗಲು ಹೆಚ್ಚು ಸಮಯ ಬೇಕಾಗಿಲ್ಲ. ಆಕೆಯ ಒಳಿತಿಗಾಗಿ ಪ್ರೀತಿ ತ್ಯಾಗ ಮಾಡಿ ಆಕೆಯ ಕನವರಿಕೆಯಲ್ಲಿಯೇ ಇಡೀ ಜೀವನ ಕಳೆದುಬಿಡಬೇಕೆಂದು ಆ ಕ್ಷಣಕ್ಕೆ ಅಭಿಮನ್ಯುವಿಗೆ ಅನ್ನಿಸಿತು.

ಆಕೆಯ ಆಸ್ತಿ, ಅಂತಸ್ತಿನ ಎದುರು ಅಭಿಮನ್ಯು ಒಬ್ಬ ಮಿಂಚು ಹುಳು ಮಾತ್ರ. ಆಕೆಯ ಆಸ್ತಿ, ಅಂತಸ್ತಿನ ಬೆಳಕಿನ ಮುಂದೆ ಆ ಮಿಂಚು ಹುಳುವಿನ ಬೆಳಕು ಕಾಣಲು ಸಾಧ್ಯವೇ? ಅಷ್ಟಕ್ಕೂ ಆಕೆಯನ್ನು ಪ್ರೀತಿಸಿ ಮದುವೆಯಾಗುವ ನಿರ್ಧಾರ ಕೈಗೊಂಡರೂ ಮದುವೆ ನಡೆಯುತ್ತದೆ ಎಂಬ ಭರವಸೆ ಅಭಿಮನ್ಯುವಿನಲಿಲ್ಲ. ಅಭಿಮನ್ಯುವಿಗೆ ಅವಳಪ್ಪನ ಸ್ವಭಾವ ಗೊತ್ತು. ಆಗಿಂದಾಗೆ ಅಭಿಮನ್ಯುವಿನ ಗಿಫ್ಟ್‌ಸೆಂಟರ್‌ಗೆ ಬಂದು ಏನೋದರೊಂದು ಗಿಫ್ಟ್ ಖರೀದಿ ಮಾಡಿಕೊಂಡು ಹೋಗುತ್ತಾರೆ. ಆ ಗಿಫ್ಟ್ ಸೆಂಟರ್‌ಗೆ ಬರುವ ಜೋಡಿಗಳು ಹೆಗಲಿಗೆ ಹೆಗಲು ಹಾಕಿಕೊಂಡರೂ ಅದನ್ನು ಸಹಿಸಿಕೊಳ್ಳುತ್ತಿರಲಿಲ್ಲ. ನಿಮ್ಮ ರೊಮ್ಯಾನ್ಸ್ ರೂಂವೊಳಗೆ ಇಟ್ಕೊಳ್ಳಿ, ನಾಚಿಕೆಗೆಟ್ಟವರು ಎಂದು ಹಿಂದೊಮ್ಮೆ ಯುವ ಪ್ರೇಮಿಗಳಿಬ್ಬರಿಗೆ ಬೈದ ಬೈಗುಳದ ಪ್ರತಿಯೊಂದು ಪದವೂ ಕೂಡ ಅಭಿಮನ್ಯುವಿನ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿದಿದೆ. ಯಾರು, ಏನೆಂದು ಗೊತ್ತಿಲ್ಲದ ಜೋಡಿಗಳನ್ನೇ ಕಂಡು ಕಿಡಿಕಾರುತ್ತಿದ್ದ ರಾಜಶೇಖರ್ ತನ್ನ ಮಗಳು ಹಾದಿ ತಪ್ಪುತ್ತಿದ್ದಾಳೆ ಎಂಬ ವಿಚಾರ ಕಿವಿಗೆ ಬಿದ್ದೊಡನೆ ಸುಮ್ಮನಿರುವ ವ್ಯಕ್ತಿಯಲ್ಲ ಎಂಬ ವಿಚಾರ ಅಭಿಮನ್ಯುವಿಗೆ ಎಂದೋ ಗೊತ್ತಾಗಿತ್ತು.

ಹುಚ್ಚು ಕಲ್ಪನೆ ಮಾಡ್ಕೊಂಡು ಮನಸ್ಸು ಯಾಕೆ ಹಾಳು ಮಾಡ್ಕೋತ್ತಿಯ? ನಿನ್ನ ಮಾತಿನ ಧಾಟಿ ನೋಡಿದರೆ ಬಡವಯಾರೂ ಪ್ರೀತಿನೇ ಮಾಡ್ಬಾದು ಅಂದಂಗಿದೆ. ನೋಡು ಅಭಿ, ಪ್ರೀತಿಯನ್ನು ಪಡೆದುಕೊಳ್ಳಲು ನೂರಾರು ಅರ್ಹತೆಗಳು, ಮಾನದಂಡಗಳು ಬೇಕಾಗಿಲ್ಲ. ಪ್ರೀತಿಸುವ ಮನಸ್ಸಿರುವ ನಿರ್ಮಲವಾದ ಒಂದು ಪುಟ್ಟ ಹೃದಯ ಇದ್ದರೆ ಅಷ್ಟೇ ಸಾಕು. ಬಡತನ, ಶ್ರೀಮಂತಿಕೆ ಪ್ರೀತಿಗೆ ಅಡ್ಡಬರುವುದಿಲ್ಲ. ನೀನು ಯಾವುದಕ್ಕೂ ಚಿಂತೆ ಮಾಡ್ಕೋಬೇಡ. ನಿನ್ನೊಂದಿಗೆ ಜೀವನದ ಕೊನೆಯುಸಿರಿರುವವರೆಗೂ ಇತೇನೆ ಎಂದು ಅಭಿಮನ್ಯುವಿನ ಕೈ ಹಿಡಿದು ಭಾಷೆ ನೀಡಿದಳು.

ಪ್ರೀತಿಗೆ ಅಭಿಮನ್ಯು ಅಂಕಿತ ಹಾಕಿದೊಡನೆ ಆಕೆಗೆ ಅದು ಬದುಕಿನ ಸಾರ್ಥಕತೆಯ ಕ್ಷಣ ಅನ್ನಿಸಿತು. ಸುತ್ತಲಿನ ಪರಿಸರ ಬೃಂದಾವನವಾಗಿ ಕಾಣಿಸತೊಡಗಿತು. ಮರದ ಮೇಲೆ ಕುಳಿತು ಹಾಡುತ್ತಿರುವ ಹಕ್ಕಿಗಳ ಇಂಪಾದ ದನಿಯು ತಮ್ಮ ಪ್ರೀತಿಯನ್ನು ಹಾಡಿ ಹೊಗಳುತ್ತಿವೆ, ಬೀಸುವ ತಂಗಾಳಿ ನಮ್ಮಿಬ್ಬರ ಪ್ರೀತಿಯನ್ನು ಇಡೀ ವಿಶ್ವಕ್ಕೆ ಪರಿಚಯಿಸುವ ತವಕದಲ್ಲಿದೆ, ಜುಳು ಜುಳು ನಿನಾದಗೈಯುತ್ತಾ ಹರಿಯುತ್ತಿರುವ ಕಾವೇರಿ ನದಿ ನಮ್ಮಿಬ್ಬರಲ್ಲಿ ಹುಟ್ಟಿಕೊಂಡಿರುವ ಪ್ರೀತಿಯ ವಿಷಯವನ್ನು ಹೊತ್ತು ಸಂತೋಷದಿಂದ ಸಾಗರದ ಕಡೆಗೆ ತೆರಳುತ್ತಿದೆ ಎಂದು ಆಕೆಗೆ ಅನ್ನಿಸಿತು.

ಪ್ರೀತಿಗೆ ಅಂಕಿತ ಹಾಕಿದ ಅಭಿಮನ್ಯುವನ್ನು ಮದುವೆಗೆ ಒಪ್ಪಿಸುವುದು ದೊಡ್ಡ ಕೆಲಸವೇನಲ್ಲ. ಒಂದಷ್ಟು ಸಮಯ ಉರುಳಿದ ನಂತರ ಪ್ರೀತಿ ಮತ್ತಷ್ಟು ಗಾಢವಾಗುತ್ತದೆ. ಆ ಸಂದರ್ಭ ಒಬ್ಬರನ್ನೊಬ್ಬರು ಬಿಟ್ಟಿರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣಗೊಂಡಾಗ ಅವನಾಗಿಯೇ ಮದುವೆಯ ಪ್ರಸ್ತಾಪ ಮುಂದಿಡುತ್ತಾನೆ. ಇದುವರೆಗೆ ಅಂದುಕೊಂಡದ್ದೆಲ್ಲ ಅಂದುಕೊಂಡಂತೆ ನಡೆದಿದೆ. ಮುಂದೆಯೂ ಕೂಡ ಮನದ ಆಸೆಗಳನ್ನೆಲ್ಲ ಈಡೇರಿಸಿಬಿಡು ದೇವರೇ ಎಂದು ಪ್ರಾರ್ಥಿಸತೊಡಗಿದಳು.

ಆಕೆ ನಿರ್ಭೀತಿಯಿಂದ ಇರಲು ಕಾರಣ ಇಲ್ಲದೆ ಇರಲಿಲ್ಲ. ಆಕೆಯ ಮನೆಯಲ್ಲಿ ಆಕೆಯ ಮಾತೇ ವೇದವಾಕ್ಯ. ಆಕೆಯ ಮಾತಿಗೆ ಅಪ್ಪ, ಅಮ್ಮ ಎಂದೂ ಕೂಡ ವಿರೋಧ ವ್ಯಕ್ತ ಪಡಿಸಿದವರಲ್ಲ. ಆಕೆ ಇಡುವ ಪ್ರತಿಯೊಂದು ಹೆಜ್ಜೆಗೂ ಪ್ರೋತ್ಸಾಹ ನೀಡಿ ಬೆನ್ನು ತಟ್ಟುತ್ತಿದ್ದರು. ಇನ್ನು ಜೀವನದ ಪ್ರಮುಖ ನಿರ್ಧಾರ ಕೈಗೊಳ್ಳುವಷ್ಟು ಅಧಿಕಾರ ನೀಡದೆ ಇರುವರೇ? ಆಕೆಯ ಕುಟುಂಬ ದಲ್ಲಿ ಅಂತರ್ಜಾತಿ ವಿವಾಹ ಕೂಡ ನಡೆದಿದೆ. ಪ್ರಾರಂಭದಲ್ಲಿ ಒಂದಷ್ಟು ವಿರೋಧ ಕೇಳಿ ಬಂದರೂ ಮತ್ತೆ ಒಪ್ಪಿಗೆಯ ಮುದ್ರೆ ಒತ್ತಿದ್ದಾರೆ. ಹೀಗಿರುವಾಗ ತನ್ನ ಮದುವೆಗೂ ಹಸಿರು ನಿಶಾನೆ ತೋರುವುದರಲ್ಲಿ ಸಂಶಯವೇ ಇಲ್ಲ. ಅಭಿಮನ್ಯು ಒಬ್ಬ ಒಪ್ಪಿಕೊಂಡರೆ ಅಷ್ಟೇ ಸಾಕೆಂದು ಅಂದುಕೊಂಡಳು.

ಎಲ್ಲಾ ಪರಿಸ್ಥಿತಿಗೂ ಒಗ್ಗಿಕೊಂಡು ಜೀವನ ನಡೆಸುವ ಪ್ರವೃತ್ತಿಯನ್ನು ಆಕೆ ಮೊದಲಿನಿಂದಲೂ ರೂಢಿಸಿಕೊಂಡು ಬಂದಿದ್ದಾಳೆ. ಸಾಕಷ್ಟು ಆಸ್ತಿ, ಅಂತಸ್ತು ಇದ್ದರೂ ಆಕೆ ದುಡಿಯುವುದನ್ನು ಮರೆತ್ತಿಲ್ಲ. ಸುಖದ ಸುಪ್ಪತ್ತಿಗೆಯಲ್ಲಿ ಮೆರೆದಾಡುವ ಪ್ರವೃತ್ತಿ ಆಕೆಯಲಿಲ್ಲ. ಹೀಗಾಗಿ ಅಭಿಮನ್ಯುವಿನ ಮನೆಯಲ್ಲಿ ಕಾಡುತ್ತಿರುವ ಬಡತನಕ್ಕೆ ಒಗ್ಗಿಕೊಳ್ಳುವುದಕ್ಕೆ ಆಕೆಗೆ ದೊಡ್ಡ ಕಷ್ಟವೇನು ಆಗುವುದಿಲ್ಲ. ನನ್ಗೊಂದು ಒಳ್ಳೆಯ ಸರಕಾರಿ ನೌಕರಿ ಇದೆ. ಅಭಿಮನ್ಯು ಕೂಡ ಕೈತುಂಬ ದುಡಿಯ್ತಾನೆ. ಜೀವನ ನಡೆಸಲು ಇಷ್ಟು ಸಾಲದಾ? ಈ ಸಮಾಜದಲ್ಲಿ ನಾವಿಬ್ಬರು ಆದರ್ಶಯುತ ಜೀವನ ನಡೆಸಿಯೇ ನಡೆಸುತ್ತೇವೆ. ಅದನ್ನು ನೋಡಿ ಇಡೀ ಸಮಾಜ ಹೆಮ್ಮೆ ಪಡಬೇಕು. ಆ ರೀತಿಯ ಜೀವನ ನಡೆಸಬೇಕು ಎಂಬ ತೀರ್ಮಾನಕ್ಕೆ ಬಂದಳು.

ಅಭಿ, ನನ್ನ ಆಸ್ತಿ, ಅಂತಸ್ತು, ಸೌಂದರ್ಯ ನೋಡಿ ಅದೆಷ್ಟೋ ಹುಡುಗರು ಹಿಂಬಾಲಿಸಿದರು. ಆದರೆ, ಅವರೆನ್ನೆಲ್ಲ ಬಿಟ್ಟು ನಾನು ನಿನ್ನ ಹಿಂದೆ ಬಿದ್ದದ್ದು ನಿನ್ನಲ್ಲಿರುವ ಆದರ್ಶ ಗುಣಗಳಿಗೆ ಮನಸೋತು. ಆದರೆ, ಒಂದು ಸಣ್ಣ ಬೇಸರ ಅಂದ್ರೆ ನಿನ್ನ ಕುಡಿತದ ಚಟ. ಅದೆಷ್ಟು ದಿನಾಂತ ನೀನು ಹೀಗೆ ಕುಡಿದು ಮಜಾ ಮಾಡ್ತಿಯೋ ನಾನೂ ನೋಡ್ತೇನೆ. ಮದ್ವೆಯಾದ ನಂತರ ಎಲ್ಲವನ್ನೂ ತಿದ್ದುವ ಜವಾಬ್ದಾರಿ ನಂದು. ಅಲ್ಲಿ ತನ್ಕ ಹಾಯಾಗಿರು ಅಂದ ಅಕ್ಷರ ಮದುವೆಯ ನಂತರ ಅಭಿಮನ್ಯುವಿನ ಕುಡಿತದ ಚಟಕ್ಕೆ ಅಂಕುಶ ಹಾಕುವ ನಿರ್ಧಾರ ಪ್ರಕಟಿಸಿದಳು.

“ನಾವಿಬ್ಬರು ಇಲ್ಲಿಗೆ ಬಂದಿರೋ ವಿಚಾರ ಮನೆಯವರಿಗೇನಾದ್ರು ಗೊತ್ತಾ? ಗೊತ್ತಾದ್ರೆ ಆ ದೇವರೇ ನಮ್ಮನ್ನ ಕಾಪಾಡ್ಬೇಕು” ಅಭಿಮನ್ಯು ಕಳವಳ ತೋಡಿಕೊಂಡ.

ಗೊತ್ತಾದ್ರೆ ಏನಿವಾಗ…? ಮನೆಯವರಿಗೆ ನಾವಿಬ್ಬರು ಇಲ್ಲಿಗೆ ಬಂದಿರೋ ವಿಚಾರ ಗೊತ್ತಿದೆ. ನಾನು ಎಲ್ಲವನ್ನು ತಿಳಿಸಿಯೇ ಹೊರಟ್ಟದ್ದು. ನಾವಿಬ್ಬರು ದಿನಾ ರಾಜಾಸೀಟ್‌ನಲ್ಲಿ ಭೇಟಿಯಾಗುವ ವಿಚಾರ ಕೂಡ ಮನೆಯವರಿಗೆ ಗೊತ್ತಿದೆ. ಎಲ್ಲವನ್ನೂ ನಾನೇ ಅಮ್ಮನಿಗೆ ತಿಳಿಸ್ತೇನೆ. ನಾವಿಬ್ಬರು ಇಲ್ಲಿ ಬಂದು ಗುಟ್ಟಾಗಿ ಕುಳಿತು ಮಾತಾಡಿದ್ರೂ ಕೂಡ ಅದು ಮನೆಯವರ ಕಿವಿಗೆ ಬೀಳೋದಕ್ಕೆ ಹೆಚ್ಚು ಸಮಯ ಬೇಕಾಗಿಲ್ಲ. ಇಲ್ಲಿ ನಮ್ಮನ್ನು ನೋಡುವ ಜನರು ಮನೆಗೆ ಹೋಗಿ ಅಪ್ಪ, ಅಮ್ಮನ ಹತ್ರ ಒಂದಕ್ಕೆ ಎರಡು ಸೇರಿಸಿ ಹೇಳೋದ್ರಲ್ಲಿ ನಿಸ್ಸೀಮರು. ಆ ವಿಚಾರ ಕೇಳಿ ಮನೆಯವರು ಆತಂಕ ಪಡೋದು, ನನ್ಗೊಂದಷ್ಟು ಬೈಯ್ಯೋದು…

ಈ ರಾಮಾಯಣ ಯಾಕೆ ಅಂತ ನಾನೇ ಹೊರೊಡೋದಕ್ಕಿಂತ ಮುಂಚೆ ಎಲ್ಲಿಗೆ, ಯಾರೊಂದಿಗೆ ಹೋಗ್ತಾ ಇದ್ದೇನೆ ಅಂತ ಹೇಳಿ ಬತೇನೆ. ಹಾಗಾಗಿ ಭಯ ಪಡುವ ಅಗತ್ಯನೇ ಇಲ್ಲ ಬಿಡು. ಬಂದು ಸಾಕಷ್ಟು ಹೊತ್ತಾಯ್ತು. ಸಂಜೆಯಾಗುವುದರೊಳಗೆ ಮನೆ ಸೇರಿಕೊಳ್ಳುವ ಇಲ್ದಿದ್ರೆ ಮನೆಯಿಂದ ಮೇಲಿಂದ ಮೇಲೆ ಫೋನ್ ಬರೋದಕ್ಕೆ ಶುರು ಆಗಿಬಿಡುತ್ತೆ ಅಂದ ಅಕ್ಷರ ಅಭಿಮನ್ಯುವಿನೊಂದಿಗೆ ಮಡಿಕೇರಿಕಡೆಗೆ ಪಯಣ ಬೆಳೆಸಿದಳು.

ಹಲವು ದೂರ ಕ್ರಮಿಸುವವರೆಗೂ ಇಬ್ಬರಲ್ಲೂ ಮೌನ..ಮೌನ… ಪ್ರೀತಿಗೆ ಒಪ್ಪಿಗೆ ಸೂಚಿಸಿದ ಅಭಿಮನ್ಯುವಿನ ಮನದಲ್ಲಿ ಒಂದೊಂದಾಗಿ ಆತಂಕದ ಅಲೆಗಳು ಬಂದು ಅಪ್ಪಳಿಸಲು ಪ್ರಾರಂಭಿಸಿತು. ಪ್ರೀತಿಯ ಘೋಷಣೆ ಹೊರಡಿಸಿದ್ದಲ್ಲಿಂದ ಮನದಲ್ಲಿ ತಳಮಳ ಹೆಚ್ಚಾಗತೊಡಗಿತು. ಅಕ್ಷರ ಇಲ್ಲದಿದ್ದರೆ ಸಿಗರೇಟ್ ಹಚ್ಚಿಕೊಂಡು ಒಂದು ದಮ್ಮ್ ಎಳೆದು ನೆಮ್ಮದಿಯ ನಿಟ್ಟುಸಿರು ಬಿಡಬಹುದಿತ್ತೆಂದು ಅಂದುಕೊಂಡ. ಆಕೆಯೊಂದಿಗೆ ಏನನ್ನೂ ಮಾತಾಡದೆ ಮನದಲ್ಲಿ ಮೂಡುತ್ತಿದ್ದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದ. ಯಾವುದಕ್ಕೂ ಬೇಡವಾದ ಈ ಬಡವನನ್ನು ಅಕ್ಷರ ಕೊನೆ ತನಕ ಪ್ರೀತಿಸ್ತಾಳಾ? ತನ್ನಿಂದ ಆಕೆಯನ್ನು ಜೀವನ ಪರ್ಯಂತ ಪ್ರೀತಿಸೋದಕ್ಕೆ ಸಾಧ್ಯವಿದೆಯಾ? ಒಂದಲ್ಲಾ ಒಂದು ದಿನ ಇಬ್ಬರು ಅಗಲಿದರೆ ಯಾರಾದರೊಬ್ಬರ ಬದುಕು ನಾಶವಾಗುವುದು ಖಂಡಿತ. ಅದೆಷ್ಟೊಂದು ಹುಡುಗಿಯರು ತನ್ನ ಬದುಕಿನಲ್ಲಿ ಬಂದು ಆಟವಾಡಿ ಹೋಗಿಲ್ಲ? ಆದೆಲ್ಲ ಶಾಲಾ, ಕಾಲೇಜಿನ ದಿನಗಳು. ಏನೇ ಆದರೂ ಅದು ಶಾಲಾ, ಕಾಲೇಜ್ ಕ್ಯಾಂಪಸ್ ಒಳಗೆ ಮಾತ್ರ ಸುದ್ದಿ ಆಗುತ್ತಿದ್ದವು. ಆದರೆ, ಇದು ಸಮಾಜದ ಎದುರಿನಲ್ಲಿ ನಡೆಯುತ್ತಿರುವ ಪ್ರೀತಿ. ಇಲ್ಲಿ ಇಡುವ ಪ್ರತಿಯೊಂದು ಹೆಜ್ಜೆಯನ್ನೂ ಕೂಡ ಪ್ರತಿಯೊಬ್ಬರೂ ಕುತೂಹಲದಿಂದ ನೋಡುತ್ತಾರೆ. ಅವರದೇ ಭಾಷೆಯಲ್ಲಿ ಮಾತನಾಡಿಕೊಳ್ಳುತ್ತಾರೆ. ಒಂದ್ವೇಳೆ ಆಕೆಯನ್ನು ತಾನು ತೊರೆಯುವಂಥಹ ಪರಿಸ್ಥಿತಿ ನಿರ್ಮಾಣಗೊಂಡರೆ ತನ್ನೊಂದಿಗೆ ಸುತ್ತಾಡಿದ ಅಕ್ಷರಳನ್ನು ಯಾರು ತಾನೆ ಮದುವೆ ಯಾಗಲು ಮುಂದೆ ಬರುತ್ತಾರೆ? ತನಗೊಂದು ಒಳ್ಳೆಯ ಬದುಕು ಕಟ್ಟಿಕೊಟ್ಟವಳ ಬದುಕು ತನ್ನಿಂದ ನಾಶವಾದರೆ ಹೇಗೆ ಸಹಿಸಿಕೊಂಡು ಬದುಕು ನಡೆಸೋದಕ್ಕೆ ಸಾಧ್ಯ? ನಮ್ಮಿಬ್ಬರ ಪ್ರೀತಿಯ ವಿಚಾರ ಜನರ ಕಿವಿಗೆ ಬೀಳದ ಹಾಗೆ ನೋಡಿಕೊಳ್ಳಲು ದಿನನಿತ್ಯದ ಭೇಟಿಗೆ ಕಡಿವಾಣ ಹಾಕಬೇಕೆಂದು ನಿರ್ಧರಿಸಿ ತನ್ನ ಮನದ ಭಾವನೆಯನ್ನು ಆಕೆಯೊಂದಿಗೆ ಹಂಚಿಕೊಳ್ಳಲು ಮುಂದಾದ.

….. ಮುಂದುವರೆಯುವುದು
ಕಾದಂಬರಿ ಪುಟ ೨೧-೩೦

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೋಜ ನೋಡಿರಿ ಗಾಂಜಿಯಮಕಿನ
Next post ಕಲ್ಯಾಣನಗರದಲಿ ಎಲ್ಲಾ ಗಣಂಗಳು

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…