ಕಲಿಯಬಾರದು ಕಲಿತನವನು
ಕಲಿಯಬಾರದು ವಿವೇಕಸಹಜವನು
ಕಲಿಯಬಾರದು ದಾನಗುಣವನು
ಕಲಿಯಬಾರದು ಸತ್ಪಥವನು
ಸಕಳೇಶ್ವರದೇವಾ ನೀ ಕರುಣಿಸಿದಲ್ಲದೆ
[ಕಲಿಯಬಾರದು-ಕಲಿಯಲು ಬಾರದು, ಅಸಾಧ್ಯ]
ಸಕಲೇಶಮಾದರಸನ ವಚನ. ಈ ವಚನದ ಮೊದಲ ನಾಲ್ಕು ಸಾಲುಗಳಲ್ಲಿರುವ `ಕಲಿಯಬಾರದು’ ಎಂಬ ಮಾತನ್ನು ನಿಷೇಧದ ಅರ್ಥದಲ್ಲಿ ನೋಡಬಾರದು. ಕಲಿಯಲು-ಬಾರದು, ಕಲಿಯಲು ಸಾಧ್ಯವಿಲ್ಲ ಎನ್ನುವ ಅರ್ಥವಿದೆ ಅದಕ್ಕೆ ವಚನಗಳಲ್ಲಿ `ಬಾರದು’ ಎಂಬುದು ನಿಷೇಧದ ಅರ್ಥದಲ್ಲಿ ಅಲ್ಲ, ಅಸಾಧ್ಯ ಅನ್ನುವ ಅರ್ಥದಲ್ಲಿ ಬಳಕೆಯಾಗಿದೆ.
ಕಲಿತನ ಅಥವ ಶೌರ್ಯ, ವಿವೇಕ, ಸಹಜತೆ, ದಾನದ ಗುಣ, ಬದುಕಿನ ಒಳ್ಳೆಯ ದಾರಿ ಇವೆಲ್ಲ ಕಲಿಯಲು ಸಾಧ್ಯವಿಲ್ಲದ ಸಂಗತಿಗಳು. ಸ್ವಭಾವಸಹಜವಾಗಿ, ಸಹ-ಜ, ಹುಟ್ಟಿನಿಂದ ಬಂದ ಗುಣಗಳಾಗಿದ್ದರೆ ಇರುತ್ತವೆ, ಇಲ್ಲದಿದ್ದರೆ ಇಲ್ಲ.
ಹಾಗೆ ಸ್ವ-ಭಾವವನ್ನು ಮೀರಲಾಗದ್ದರಿಂದ ಸ್ವ-ಭಾವವೇ ವ್ಯಕ್ತಿಯ ವಿಧಿ. ಬದಲಾಗುವುದಿದ್ದರೆ ಅದು ಸಕಳೇಶ್ವರನ ಕರುಣೆಯಿಂದಷ್ಟೇ ಎನ್ನುತ್ತಾನೆ. ದೊಡ್ಡ ವಾಗ್ವಾದಕ್ಕೆ ಕಾರಣವಾಗಬಲ್ಲ ನಿಲುವು ಇದು.
*****