“ಸಾವು” ಪದವೇ ಭಯಂಕರ ಭೀಕರ
ಎದೆ ನಡುಗಿಸುವ ಎರಡಕ್ಷರ
ಹುಡುಕಿದರೂ ಸಿಕ್ಕದು ನೀನಿಲ್ಲದ ಜಾಗ
ನಿನ್ನ ನಿರ್ನಾಮಕ್ಕೆ ಮಾಡುತಿಹರು ಮಹಾಯಾಗ
ಸಾವಿಲ್ಲದ ಮನೆಯ ಸಾಸಿವೆ
ತರಲು ಹೇಳಿದ ಬುದ್ಧ
ಸಂಸಾರವೇ ತೊರೆದು ಎದ್ದ
ಬಯಸುವವರಾರು ನಿನಗೆ ಸ್ವಾಗತ
ಬೇಡವೆಂದರೂ ಬರುವ ಅಭ್ಯಾಗತ
ನಿನ್ನಲಿಲ್ಲ ಮೇಲುಕೀಳೆಂಬ ಪಕ್ಷಪಾತ
ವಿಶಾಲ ಮನೋಭಾವದ ಧೀಮಂತ
ನಿನ್ನಲ್ಲಿದೆಯೇ ಕಿಂಚಿತ್ತಾದರೂ ಕರುಣೆ
ಅರಿವಾದರೆ ತಾನೇ ಮಾನವನ ಬವಣೆ
ಬಡವ ಶ್ರೀಮಂತ ಮುದುಕ ಯುವಕ
ಹಾಲು ಹಸುಳೆಯ ಬಿಡದ ಕಿರಾತಕ
ನೀನೆಂದರೆ ನಿರ್ಭಯ ನಿರಾಕಾರ
ನಿರ್ಲಕ್ಷ್ಯ ನಿರ್ಲಜ್ಜತೆಯ ಸಾಕಾರ
ನೀನಿದ್ದೆಡೆ ಭಯ ಆತಂಕ ಸ್ವರೂಪ
ಅನುಕಂಪ ಆರ್ತನಾದದ ಮೂರ್ತರೂಪ.
*****