ಗಂಡು- ಹೆಣ್ಣು

“ಹೆಣ್ಣು ಹೊನ್ನು ಮಣ್ಣುಗಳ ಬಗ್ಗೆ ಬಹಳ ಎಚ್ಚರಿಕೆಯೆಂದು ಹಿರಿಯರು ಹೇಳಿದ್ದು ಕಂಡುಬರುತ್ತದೆ. ಆದರೆ ಆ ಮೂರರಲ್ಲಿ ಹೆಣ್ಣು ಮಾಯೆಯೆಂದು ಬಹುಶಃ ಗಂಡಿಗೆ ಹೇಳಿದಂತಿದೆ. ಆದರೆ  ಗಂಡಿನ ಬಗ್ಗೆ ಅಂಥ, ಎಚ್ಚರಿಕೆಯೇನೂ ಬೇಡವೆ? ಆದಕಾರಣ ಗಂಡು-ಹೆಣ್ಣುಗಳ ವಿಷಯದಲ್ಲಿ ಕೆಲವು ಸಂಬಂಧಸೂತ್ರಗಳನ್ನು ತಿಳಿಯಲು ಇಷ್ಟಪಡುತ್ತೇವೆ” ಎನ್ನುವ
ಬಿನ್ನಹವು ಸಂಗನುಶರಣನ   ಮುಂದೆ ಇಡಲಾಯಿತು.

ಸಂಗನುಶರಣನು   ತಾನು  ವಿವರಿಸಬೇಕಾದ ಸಂಗತಿಗಳನ್ನು ಯಾವ ವಿಧದಲ್ಲಿ ಪ್ರತಿಪಾದಿಸಿದನೆಂದರೆ-
” ಹೆಣ್ಣು ಗಂಡಿನ  ಮಾಯೆಯೆಂಬುದು ಸಹಜವಾಗಿ ಬುದ್ದಿ ಗೋಚರವಾಗುತ್ತದೆ. ಅದರಂತೆ ಗಂಡು ಹೆಣ್ಣಿನ ಕಣ್ಣಿಗೂ ಮಾಯೆಯಾಗಿದೆ ಯೆಂಬುದು ತುಸು ವಿಚಾರಿಸಿದಾಗ ತಿಳಿದುಬರುತ್ತದೆ.

ಪರಮಾತ್ಮ ವೃಕ್ಷಕ್ಕೆ ಸತ್ ಹಾಗೂ ಚಿತ್ ಎಂಬ ಸತ್ವಗಳಿಂದ ಎರಡು ಟಿಸಿಲು ಒಡೆದಿದ್ದು, ಆ ಟಸಿಲುಗಳಿಗೆ ಕೊಂಬೆ-ರೆಂಬೆಗಳೊಡೆಯುತ್ತ ಆ ವೃಕ್ಷದ ತುದಿಯಲ್ಲಿ ಅಸಂಖ್ಯ ಎಲೆಗಳು -ಕಾಣಿಸಿಕೊಳ್ಳುತ್ತವೆ  ಸತ್ ಸತ್ವ ದಿಂದ ಪುರುಷ ವಂಶಾವಳಿಯೂ, ಚಿತ್ ಸತ್ವದಿಂದ ಪ್ರಕೃತಿವಂಶಾವಳಿಯೂ ಆರಂಭವಾಗುತ್ತದೆ. ಪುರುಷವಂಶಾವಳಿಯ ತುಟ್ಟ- ತುದಿಯಲ್ಲಿ ಗಂಡು, ಪ್ರಕೃತಿಯ ವಂಶಾವಳಿಯ ತುಟ್ಟತುದಿಯಲ್ಲಿ ಹೆಣ್ಣು ಕಂಗೊಳಿಸುತ್ತದೆ.

ಹೆಣ್ಣಿನ ರೆಂಬೆಗುಂಟ ಇಳಿದು ಬಂದರೆ ಜಗಜ್ಜನನಿಯು, ಗಂಡಿನ ರೆಂಬೆ ಗುಂಟ ಇಳಿದು ಬಂದರೆ ಜಗದೀಶ್ವರನೂ ನೆಲೆಸಿದ್ದು ಕಂಡುಬರುತ್ತದೆ. ಆದ್ದರಿಂದ ಹೆಣ್ಣುಗಳೆಲ್ಲ ಜಗಜ್ಜನನಿಯ ಅಂಗಗಳೇ ಆಗಿವೆ. ಅದರಂತೆ ಗಂಡುಗಳೆಲ್ಲ ಜಗದೀಶ್ವರನ ಅಂಗಗಳೇ ಆಗಿವೆ ಹೆಣ್ಣು ಜಗದೀಶ್ವರಿಯ ಪ್ರತಿನಿಧಿಯೆಂದು ಹೇಳಲಾಗುವಂತೆ, ಗಂಡು ಜಗದೀಶ್ವರನ ಪ್ರತಿನಿಧಿಯೆಂದು ಹೇಳಲೇಬೇಕಾಗುತ್ತದೆ.

ಹೆಣ್ಣಿನಲ್ಲಿ ಮಾಯೆಯ ಅಂಶವು ಸ್ವಾಭಾವಿಕವಾಗಿಯೇ ಅಳವಟ್ಟಿರು ತ್ತದೆ. ಗಂಡಿನಲ್ಲಿ ಪುರುಷನ ಅಂಶವು ಸಹಜ- ವಾಗಿಯೇ ಅಶ್ರಯಿಸಿರುತ್ತದೆ.. ಗಂಡು ಹೆಣ್ಣುಗಳೆಲ್ಲ ಒಂದು ರೀತಿಯಲಿ ಅರ್ಥನಾರೀನಟೇಶ್ವರ ಸಂತಾನವೇ
ಆಗಿದೆ. ಗಂಡು ನೋಡುವಾಗ ಹೆಣ್ಣಿನಲ್ಲಿ ಮಾಯೆಯ ರೂಪವೇ ಕಾಣಿಸುವಂತೆ, ಹೆಣ್ಣು ನೋಡುವಾಗ ಗಂಡಿನಲ್ಲಿ ಮಾಯೆಯ ರೂಪವು ಅಷ್ಟೊಂದು ಕಾಣಿಸಲಿಕ್ಕಿಲ್ಲ. ಆದರೂ ಹೆಣ್ಣಿನ ಕಣ್ಣಿಗೆ ಗಂಡು, ಗಂಡಿನಕಣ್ಣಿಗೆ ಹೆಣ್ಣು, ಮಾಯೆಯೇ ಆಹುದು. ನಿಜವಾಗಿ ನೋಡಿದರೆ ಹೆಣ್ಣೂ ಮಾಯೆಯಲ್ಲ. ಗಂಡೂ ಮಾಯೆಯಲ್ಲ. ನೋಡುವ ಕಣ್ಣಿನಲ್ಲಿ ಮಾಯೆ -ಯಿರುತ್ತದೆ. ಕಣ್ಣಿನಿಂದ ನೋಡುವವರಿಗೆ ಮಾಯೆಯೇ ಕಾಣಿಸುವಳೆಂದೂ, ಕಣ್ಣಿನೊಳಗಿಂದ ನೋಡರವವರಿಗೆ ಮಾಯೆ  ಕಾಣೆಸದೆ  ಆಕೆಯ ಸೂತ್ರಧಾರನಾದ ಪರಮಾತ್ಮನೇ ಕಾಣಿಸುವ್ಡನೆಂದು ಬಲ್ಲವರು ಹೇಳುತ್ತಾರೆ.

ಹೊನ್ನು ಮಾಯೆಯೆಂಬರು, ಹೆಣ್ಣು ಮಾಯೆಯೆಂಬರು,
ಮಣ್ಣು ಮಾಯೆಯೆಂಬರು,
ಹೊನ್ನು ಮಾಯೆಯಲ್ಲ, ಹೆಣ್ಣು ಮಾಯೆಯಲ್ಲ.
ಮಣ್ಣು ಮಾಯೆಯಲ್ಲ.
ಮನದ ಮುಂದಣ ಆಶೆಯೇ ಮಾಯೆ ಕಾಣಾ
ಗುಹೇಶ್ವರಾ.

ಕಣ್ಣು ನೋಡಿದರೂ ಅದನ್ನು ನಿರ್ಣಯಿಸುವದು ಮನ. ಮನವು ಆಶೆಯನ್ನು ಮುಂದಿರಿಸಿಕೊಂಡರೆ ಕಣ್ಣಿಗೆ ಹೆಣ್ಣು ಮಾಯೆಯಾಗಿ ಕಾಣಿಸುತ್ತದೆ. ಮನವು ಆಶೆಯ ಕನ್ನಡಕವನ್ನು ತೆಗೆದು ಕಣ್ಣಿನಲ್ಲಿ ನೋಡಿದರೆ ಹೆಣ್ಣು ಮಾಯೆಯಾಗಿ  ಕಾಣಿಸಲಾರದು  ಹೆಣ್ಣಾಗಿಯೂ ಕಾಣಿಸಲಾರದು. ಹೆಣ್ಣಿನ ರೂಪುದೊಟ್ಟ ಇನ್ನಾವುದೋ ಕಾಣಿಸುವದು, ರೂಪುದೊಟ್ಟು ಹೆಣ್ಣಾಗಬಲ್ಲ ಗಂಡಾಗಬಲ್ಲ ಹೆಣ್ಣುಗಂಡಲ್ಲದ ದೇವನೇ ಕಾಣಿಸುವನು. ಹೆಣ್ಣು ಹೆಣ್ಣಾಗಿದ್ದರೆ ಶಿವನ ತಲೆಯನ್ನೇರ- ಬಲ್ಲದೇ? ಹೆಣ್ಣು ಹೆಣ್ಣಾಗಿದ್ದರೆ ಶಿವನ ತೊಡೆಯನ್ನೇರ ಬಲ್ಲದೇ? ಬ್ರಹ್ಮನ ನಾಲಗೆಯನ್ನೇರಿ ನಲಿವ, ನಾರಾಯಣನ ಎದೆಯನ್ನೇರಿ ನರ್ತಿಸುವ, ಹೆಣ್ಣು ಹೆಣ್ಣಾಗಿರಬಲ್ಲದೇ? ಅಲ್ಲ. ದೇವಾಧಿದೇವರನ್ನು ಲೆಕ್ಕಿಸದೆ ಎಲ್ಲಿ ಬೇಕೆಂದಲ್ಲಿಗೆ ಏರಿ ಹೋಗುನದಕ್ಕೆ ಅದೇನು ರಕ್ಕಸಿಯೇ? ಅಲ್ಲ. ಅದು ಹೆಣ್ಣೂ ಅಲ್ಲ,  ರಕ್ಕಸಿಯೂ ಅಲ್ಲ. ಹೆಣ್ಣಿಗೆಲ್ಲಿ ಆ ಧೈರ್ಯ? ರಕ್ಕಸಿಗೆಲ್ಲಿ ಅಂಥ ಸಾಹಸ? ಹೆಣ್ಣು ಪ್ರತ್ಯಕ್ಷ ಪರಮಾತ್ಮನೇ ಆಗಿರಬಲ್ಲದು.

ತಾ ಮಾಡಿದ ಹೆಣ್ಣು ತನ್ನ ತಲೆಯನ್ನೇರಿತ್ತು,
ತಾ ಮಾಡಿದ ಹೆಣ್ಣು ತನ್ನ ತೊಡೆಯನ್ನೇರಿತ್ತು,
ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಗೆಯನ್ನೇರಿತ್ತು,
ತಾ ಮಾಡಿದ ಹೆಣ್ಣು ನಾರಾಯಣನ ಎದೆಯನ್ನೇರಿತ್ತು,
ಅದು ಕಾರಣ ಹೆಣ್ಣು ಹೆಣ್ಣಲ್ಲ, ರಾಕ್ಷಸಿಯಲ,
ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧ ಮಲ್ಲಿಕಾರ್ಜುನ ನೋಡು.

ಹೆಣ್ಣು ಪ್ರತ್ಯಕ್ಷ   ಕಪಿಲಸಿದ್ಧ ಮಲ್ಲಿಕಾರ್ಜುನನಾದರೆ ಗಂಡೂ ಪ್ರತ್ಯಕ್ಷ   ಕಪಿಲಸಿದ್ಧ ಮಲ್ಲಿಕಾರ್ಜುನನಲ್ಲದೆ ಇನ್ನಾರು?  ಆದ್ಧರಿಂದ ಹೆಣ್ಣನ್ನು ಹೆಣ್ಣೆಂದು ನೋಡಿದರೆ, ಗಂಡು ಗಂಡೆಂದು ನೋಡಿದರೆ ದೇವದೇವನನ್ನೇ ನೋಡಿದಂತಾಗುವದು. ಹೆಣ್ಣು, ಗಂಡಿಗೆ ಕಾರ್ಯದಲ್ಲಿ ಮಂತ್ರಿ, ಕರುಣದಲ್ಲಿ ದಾಸಿ, ಊಟದಲ್ಲಿ ತಾಯಿ, ಕೂಟಲ್ಲಿದ ರಂಭೆ ಮೊದಲಾದ  ಆರು ರೂಪಗಳಲ್ಲಿ ಸಹ ಜೀವಿಯಾಗಿರುವಂತೆ, ಗಂಡು ಸಹ ಆಕೆಯ ಕಾರ್ಯದಲ್ಲಿ ಆರು ರೂಪಗಳಿಂದ ಸಹಜೀವನ ನಡೆಯಿಸಬೇಕೆನ್ನಿಸುವುದೂ ಸ್ಪಷ್ಟವಾಗುತ್ತದೆ. ಕೈಹಿಡಿದ ಸತಿಯೆನ್ನಿಸಿಕೊಳ್ಳುವವಳೇ ಆರರಲ್ಲೊಂದು ಭಾಗದಲ್ಲಿ ಮಾತ್ರ ರಂಭೆಯೆನ್ನಿಸಿ ಕೊಳ್ಳಲು ಅರ್ಹಳಾಗಿರುವಾಗ ಅನ್ಯಸತಿಯರೆಲ್ಲ ಇನ್ನೇನಾಗಬೇಕಾಗುವದೋ.

ತನ್ನದಲ್ಲದ ಹೆಣ್ಣು ನೋಡುವುದಕ್ಕೂ ಬೇಡ; ನುಡಿಸುವುದಕ್ಕೂ ಬೇಡ, ಆ ಹೆಣ್ಣಿನ ಆದಿದೇವತೆ ಜಗಜ್ಜನನಿಯಲ್ಲವೇ? ಹಾಗೆ ನೋಡುವುದಾಗಲಿ ನುಡಿಸುವುದಾಗಲಿ ಅದೆಂಥ ಅಪರಾಧನಾದೀತು? ಅಕ್ಷಮ್ಯ ಅಪರಾಥ! ಅಕ್ಷಮ್ಯ ಅಪರಾಧಕ್ಕೆ ಅದೆಂಥ ಶಿಕ್ಷೆಯಾದೀತು?

ನೋಡಲಾಗದು ನುಡಿಸಲಾಗದು.
ಪರಸ್ತ್ರೀಯರ ಬೇಟ ಬೇಡ ಕಾಣಿರೋ.
ತಗರ ಬೆನ್ನಿನಲ್ಲಿ ಹರಿವ ಸೊಣಗನಂತೆ
ಬೇಡ ಕಾಣಿರೋ.
ಒಂದಾಸೆಗೆ ಸಾಸಿರವರುಷ ನರಕದಲ್ಲಿಕ್ಕುವ
ಕೂಡಲಸಂಗನುದೇವಯ್ಯ.

ಆದರೆ ತದ್ಧಿರುದ್ದವಾಗಿ ಹೆಣ್ಣನ್ನು ಇನ್ನೊಂದು ದೃಷ್ಟಿಯಿಂದ ತಿಳಿಗಣ್ಣಿನಲ್ಲಿ ಕಂಡಿದ್ದಾದರೆ ಆ ಆದಿಮಾತೆಯು ಮೆಚ್ಚದಿರುವಳೇ? ಮೆಚ್ಚಿದ ತಾಯಿಯು ಅದೇನು ಕೊಡುವಳೋ. ಆದಿಮಾತೆ  ಮೆಚ್ಚಿದರೆ ದೊರೆಯುವ ಸೌಭಾಗ್ಯವು
ಅಂಥದಿಂಥದಲ್ಲ ದಿವ್ಯ ಲೋಕದ್ದು.

ಗಂಡನುಳ್ಳಮ್ಮನ ಗೌರಿಯೆಂದು ಕಂಡರೆ
ಭೂಮಂಡಲಕ್ಕೆ ಅರಸಾಗಿ ಪುಟ್ಟುವನಾತನು.
ಗಂಡನುಳ್ಳಮ್ಮನ ಕಂಡು ಒಡವೆರೆವಾತ
ನರಕದಲ್ಲಿ ದಿಂಡುಗೆಡೆದಿಪ್ಪನೈ ರಾಮನಾಥ.

ಆದ್ದರಿಂದ ಹರಿವ ಹಾವಿಗಂಜದ ಧೈರ್ಯಶಾಲಿಯಾಗಿದ್ದರೂ, ಉರಿಯ ನಾಲಗೆಗಂಜದ ಕೆಚ್ಚಿದೆಯವನಾಗಿದ್ದರೂ, ಸುರಗೆಯ ಮೊನೆಗಂಜದ ಗಂಡು ಗಾಡಿಯಾಗಿದ್ಧರೂ ಅವನನ್ನು ಅಂಜಿಸಿ, ಎದೆಗೆಡಿಸುನ ವಸ್ತುವೆಂದರೆ ಪರಸ್ತ್ರೀ.
ಪರಸ್ತ್ರೀಯರನ್ನು ಕಂಡಕೂಡಲೇ ಹತ್ತುತಲೆಯ ರಾವಣನ ಹಿಂದು ಮುಂದಿನ ಕಥೆಯಿಲ್ಲ ಕಣ್ಣು ಮುಂದೆ  ಜಾಣರು ಬುದ್ದಿಗಲಿಯುವದಕ್ಕೆ ಈ ಉದಾಹರಣೆಯೇ ಸಾಕು. ಅನುಭವವೇ ಬೇಕೆಂದಲ್ಲ. ಸಹೃದಯತೆಯಿಂದಾಗುವ ಪರಿಣಾಮವೂ ಅಷ್ಟಿಷ್ಟಲ್ಲ; ಅಂಥದಿಂಥದಲ್ಲ.

ನಿಷಯಸುಖದ ಸಲುವಾಗಿ ಹೇಸಿಗೆ ಹುಟ್ಟಬೇಕಾದರೆ, ತಿರಸ್ಕಾರ ತಲೆದೋರಬೇಕಾದರೆ ಇನ್ನಾವ ಉಪಾಯವೂ ಫಲಕಾರಿಯಾಗಲಾರದು. ವಿಷಯ ಸುಖವನ್ನು ಒದಗಿಸಿಕೊಟ್ಟ ತಾತ್ಪೂರ್ತಿಕವಾಗಿ ಶಾಂತಗೊಳಿಸುವ ಒಂದು
ಹಾದಿ ಪ್ರಪಂಚದ ಬಳಕೆಯಲ್ಲಿವೆ. ಆದರೆ ಅದು ಹೇಳಿಕೇಳಿ ತಾತ್ಪೂರ್ತಿಕವೇ. ವಿಷಯಸುಖದ ಆಶೆಯು ಮತ್ತೆ ಸಂಧಿ ಸಾಧಿಸಿ ತಲೆಯೆತ್ತಿ, ಹೆಡೆಯೆತ್ತಿ ನಿಲ್ಲುವದು. ಆಗಲೂ ಸಾಂತ್ವನಗೊಳಿಸಬೇಕೆಂದರೆ, ಮತ್ತೆಯೂ ವಿಷಯಸುಖವನ್ನು ಒದಗಿಸಿಕೊಡುವ ಏರ್ಪಾಡನ್ನೇ ನಡೆಯಿಸಬೇಕಾಗುತ್ತದೆ. ಆದರೆ ಬಹು ಪರಿಣಾಮಕಾರಿಯಾದ ಇನ್ನೊಂದು ದಾರಿ- ಯಿದೆ.ಭೋಗದಾಸೆಯಿಂದ ಮುಕ್ತನಾಗುವದಕ್ಕೆ ಮಹಾಭೋಗಿಯಾದ ಪರಮಾತ್ಮನನ್ನು ಪೂಜಿಸುವದು. ಸುಖದ
ಹನಿಯನ್ನು ಸಿಂಪಡಿಸುನ ವಿಷಯಸುಖಕ್ಕಾಗಿ ತೃಷಿತನಾದವನು ಸುಖದ ಸೆಲೆಯನ್ನೇ ಪುಟಿಸುವ ಪರಮಾತ್ಮನ ವೂಜೆಯಿಂದ ತೃಪ್ತಿ ಹೊಂದಲಾರನೇ? ಸುಖದ ಸೆಲೆಯ ಸವಿಗಂಡವನು ಆಶೆಯನ್ನು ತಾನಾಗಿಯೇ ಬಿಟ್ಟಕೊಟ್ಟರು- ವನು. ವಿಷಯಸುಖಕ್ಕೆ ಒಮ್ಮೆಲೆ ನೀರುಬಿಡಲಿಕ್ಕಿಲ್ಲವಾದರೂ ಕೊನೆಗೆ ಅದನ್ನು ತೆಗೆದೊಗೆಯುವದರಲ್ಲಿ ಏನೂ ಸಂಶಯವೇ ಇಲ್ಲ.

ಶಿವಪೂಜೆಯತ್ತ ವಿಷಯದ ಸವಿಯೆತ್ತ ?
ಆ ವಿಷಯದ ಸವಿ ತಲೆಗೇರಿ, ಶಿನಪೂಜೆಯಬಿಟ್ಟು,
ವೇಶಿಯರ ಎಂಜಲು ಹೇಸದೆ ತಿಂಬ
ದೋಷಿಗಳನೇನೆಂಬೆನೈ ರಾನುನಾಥ.

ವಿಷಯವನ್ನು ವ್ಯಕ್ತಿಯೇ ಹಿಡಿದಿದ್ದರೆ ಬಿಡಬಹುದಾಗಿತ್ತು. ಆದರೆ ವಿಷಯವನು ವ್ಯಕ್ತಿ, ವ್ಯಕ್ತಿಯನ್ನು ವಿಷಯ ಹಿಡಿದಾಗ ವ್ಯಕ್ತಿಬಿಟ್ಟರೂ ವಿಷಯ ಬಿಡುವದಿಲ್ಲ; ಹಿಡಿದಿರುತ್ತದೆ. ಆದರೂ ತುಸು ಜಗ್ಗಾಡಿದರೆ ವ್ಯಕ್ತಿ ವಿಷಯದಿಂದ ಬಿಡಿಸಿ- ಕೊಳ್ಳಬಹುದು. ಸುಸಾಧ್ಯವಲ್ಲವಾದರೂ ಅಸಾಧ್ಯವೂ ಅಲ್ಲ; ದುಸ್ಸಾಧ್ಯ ಮಾತ್ರ ಅಹುದು. ಆದರೆ ವಿಷಯವೇ ವ್ಯಕ್ತಿಯನ್ನು ಹಿಡಿದಿರುವ ಒಂದು ಅವಸ್ಥೆಯಿರುತ್ತದೆ. ಆಗ ಹಿಡಿದ ಕೈ ಸೋತವೆಂದು ವ್ಯಕ್ತಿ ಕೈಬಿಟ್ಟರೂ ವಿಷಯವು ಬಿಡಲಾರದ ನಂಟನಂತೆ ಗಟ್ಟಿಹಿಡಿದಿರುತ್ತದೆ. ಆಗ ಬಿಡಿಸಿಕೊಳ್ಳುವುದು ಬಿಗಿ. ಅವನು ಶಿವಪೂಜೆ ಮಾಡುವವನಿರಲಿ,
ಯೋಗಸಾಧಕನಿರಲಿ ಅಸಾಧ್ಯವೇ. ಯತಿಯೇನು, ಸನ್ಯಾಸಿಯೇನು? ಮಾಯೆಯ ಕೈಗೊಂಬೆಯೇ ಸರಿ.

ಬಿಟ್ಟೆನೆಂದರೆ ಬಿಡದೀ ಮಾಯೆ.
ಬಿಡದಿದ್ದರೆ ಬೆಂಬತ್ತಿತ್ತು ಮಾಯೆ.
ಯೋಗಿಗೆ ಯೋಗಿಣಿಯಾಗಿತ್ತು ಮಾಯೆ.
ಸವಣಂಗೆ ಸವಣಿಯಾಗಿತ್ತು ಮಾಯೆ.
ಯತಿಗೆ ಪರಾಕಿಯಾಗಿತ್ತು ಮಾಯೆ.
ನಿನ್ನ ಮಾಯೆಗೆ ನಾನಂಜುವವಳಲ್ಲ
ಚೆನ್ನಮಲ್ಲಕಾರ್ಜುನದೇನಾ ನಿಮ್ಮಾಣೆ.

ಮಾಯೆಯ ಹುಲಿಯುಗರಿಗಿಂತ ಅಂಜಿಕೆಯ ಕರಾಳ ದವಡೆಗಳ ಕಲ್ಪನೆಯಿಂದ ಕೈಕಾಲು.ಕಳಕೊಳ್ಳವವರೇ ಹೆಚ್ಚು. ಆದರೇನು? ಶಿವನು ಹೂಡಿದ ಆಟ. ವಿಷಯದ ನಂಜೇರಿದ್ದರಿಂದಲೇ ಜೀವರು ಸಿಕ್ಕುಬೀಳುವರು. ಇಲ್ಲದಿದ್ದರೆ ಮಾಯೆಯ ಮಕ್ಕಳಾದ ಜೀವರು ಅದಾರ ಕೈಗೆ ಸಿಗಬಲ್ಲರು? ಅವರನ್ನು ಹಿಡಿಯುವವರೇ ಯಾರೂ ಇಲ್ಲ. ಹುಲಿಯನ್ನು
ಹಿಡಿದ ಮಾನವನು. ಆನೆಯನ್ನು ಈಲುಮಾಡಿಕೊಂಡ ಮಾನವನು. ಅವನು ವಿಮಾನ ಕಟ್ಟಿ ಮುಗಿಲಿಗೇರಿದ್ದಾನೆ. ಹಡಗ ರಚಿಸಿ ಕಡೆಯಿಲ್ಲದ ಕಡಲಲ್ಲಿ ಚೆಲ್ಲಾಟವಾಡುತ್ತಿದ್ದಾನೆ ಶಿವನ  ಕೂಸು  ಶಿವನ ಕೈಗೆ ಸಿಗುವುದೂ ಕರಿಣವಾಗಿ- ರುವಾಗ, ಆತನೊಂದು ಯೋಗ್ಯವಾದ ವ್ಯಕ್ತಿಯನ್ನು ಕಂಡುಹಿಡಿದು ಪ್ರಯೋಗಿಸಿದ್ದಾನೆ. ಆ ವ್ಯಕ್ತಿಯೇ ಮಾಯೆ. ಹೊನ್ನು ಹೆಣ್ಣು ಮಣ್ಣಿನ ಮಾಯೆಯೇ ಮಾನವನನ್ನು ಸೊಕ್ಕಿಗೇರಿಸಿದೆ. ಅದೆಷ್ಟು ಸೊಕ್ಕಿದ್ದರೂ ಮಾನವನು ನೆಲದ ಹುಡಿಯಾಗಿ ಬಿದ್ದಿದ್ದಾನೆ. ಹುಡಿಯೊಳಗಿನ ಹುಳುವಾಗಿ ಉರುಳಿದ್ದಾನೆ. ಆಗಲೇ ಶಿವನು ಬಂದು ಹಿಡಿದಿದ್ದಾನೆ;  ಹಿಡಿದೆತ್ತಿದ್ದಾನೆ.

ಹೊನ್ನು ಹೆಣ್ಣು ಮಣ್ಣೆಂಬ ಸೊಕ್ಕನಿಕ್ಕಿಸಿ ಕೆಡಹಿದನಯ್ಯ
ಜೀವರ ಮುಕ್ಕಣ್ಣ ಶಿವನು.
ಕಾಲನಿಗೊಪ್ಪಿಸಿ ಜಗದ ಠಕ್ಕಿಸಿ ಮಿಕ್ಕು ಮೀರಿ
ಹೋದನಯ್ಯ ಶಿವನು.
ನಿಜಗುರು ಸ್ವತಂತ್ರಸಿದ್ದಲಿಂಗೇಶ್ವರಾ.

ಆ ಸೊಕ್ಕಿನಲ್ಲಿ ಜೀವನು ದಾಸಿಯರ ಅಡಿಯಾಳಾಗಿ ಬೀಳುವನು. ವೇಶಿಯರ ಮನೆಯಲ್ಲಿ ಎಂಜಲಿಗೆ ಕೈಯೊಡ್ಡುವನು. ಹೀಗೆ ಪರಸ್ತ್ರೀಯರ ಸಂಗದಲ್ಲಿ. ಪಂಚಮಹಾಪಾತಕಗಳನ್ನು  ಕಟ್ಟಿಕೊಂಡು ಕಾಲನ ಕೈಯೊಳಗಿನ ಕರಡಿಯಾಗಿ ಕುಣಿಯುವುದನ್ನು ಶಿವನು ನಿಂತು ನೋಡುವನು. ಆ ಕುಣಿತ ವನ್ನು ಕಂಡು ಶಿವನು ಅವನ ಪಾತ್ರತೆಯನ್ನು ಪರೀಕ್ಷಿಸುವನು.

ದಾಸಿಯರ ಸಂಗ ಕಸನೀರು ಹೊರಿಸಿತ್ತು.
ವೇಶಿಯರ ಸಂಗ ಎಂಜಲವ ತಿನಿಸಿತ್ತು.
ಪರಸ್ತ್ರೀಯರ ಸಂಗ ಪಂಚಮಹಾಪಾತಕವ ತಂದಿತ್ತು.
ಈ ತ್ರಿವಿಧವು ನಾಸ್ತಿಯಾದಲ್ಲದೆ ಭಕ್ತನಲ್ಲ.
ಭಕ್ತಿಯಿಲ್ಲವೆ ಮುಕ್ತಿಗೆ ಸಲ್ಲ ನಮ್ಮ ಕೂಡಲ ಚೆನ್ನಸಂಗಯ್ಯನಲ್ಲಿ.

ಹೀಗೆ ಸರಿದಾರಿಗೆ ಬಂದಾಗ ಜೀವವು ಪಾಡಿಗಿಳಿದಿರುತ್ತದೆ. ಕಸುಕಿನ ಬಿರುಸು ಮೃದುವಾಗಲೆಳಸುತ್ತದೆ. ಹುಳಿಯೊಗರು ಸಿಹಿಮಧುರವಾಗುವದಕ್ಕೆ ಮೈಗೊಡುತ್ತದೆ. ವಿಷಯದ ಬಿಸಿಲು ಅಳಿದು, ಭಕ್ತಿಯ ಬೆಳದಿಂಗಳು ಮೆಲ್ಲಮೆಲ್ಲನೆ ಕಾಣಿಸಿ- ಕೊಳುತ್ತದೆ. ಬಿಸಿಹಾಲಿಗೆ ಬಾಯಿ ಸುಟ್ಟುಕೊಂಡ ತೆನ್ನಾಲಿರಾಮಕೃಷ್ಣನ ಬೆಕ್ಕು ಮಜ್ಜಿಗೆ ಕಂಡಾಗಲೂ ಬಾಯಿ ಸುಟ್ಟೀತೆಂದು ಅಷ್ಟು ದೂರ ಓಡುವಂತೆ ವಿಷಯವೆಂದರೆ ಬೇಡವಾದ ವಿಷಯವೆಂದು ಕಿವಿಯ ಮೇಲೆ ಕೈಯಿಟ್ಟು- ಕೊಳ್ಳುವ  ಶಿವಬುದ್ದಿಯುಂಟಾಗುತ್ತದೆ. ಅವನು “ಸ್ತ್ರೀಯರ ಕಂಡು ಅಳುಕದಿರಾ ಮನವೇ ” ಎಂದು ಮನಕ್ಕೆ ಬುದ್ದಿ-
ಹೇಳುತ್ತಾ “ಉದ್ದಂಡತನದಲ್ಲಿ ನಡೆವ ಭಂಡರನು ಹುಳುಗೊಂಡದಲ್ಲಿಕ್ಕದೆ ಬಿಡುವನೇ ನಮ್ಮ ದೇವರಾಯ ?” ಎಂದು ಅಳಿಮನದವನಾಗುತ್ತಾನೆ. “ಎಲ್ಲ ನೋಡಿದಲ್ಲಿ ಮನವೆಳಿಸಿದರೆ ಆಣೆ, ನಿಮ್ಮಾಣೆ.ನಿಮ್ಮ ಪ್ರಮಥರಾಣೆ”ಯೆಂದು ಶಪಥಮಾಡುತ್ತಾನೆ.  “ಪರವಧುವನು ಮಹಾದೇವಿಯೆಂದು ಕಾಂಬೆನೆಂ”ಬ ಪ್ರತಿಜ್ಞೆ ಸ್ವೀಕರಿಸುತ್ತಾನೆ. “ಪರಸ್ತ್ರೀ ಪಾರ್ವತಿ”ಯಂತೆ ಕಾಣಿಸದಿದ್ಧರೂ ಹಾಗೆ ನೋಡುವದಕ್ಕೆ ಪ್ರಯತ್ನಪಡುತ್ತಾನೆ. “ಲಿಂಗ ಜಂಗಮ ಒಂದೇ ಎಂದು ನಂಬಿದ ಬಳಿಕ ಅವರಂಗನೆಯರು ಲಿಂಗದ ರಾಣಿ ವಾಸ”ದಂತೆ ಭಯಾವಹರಾಗಿ ತೋರ್ಪಡುವರು. ” ಮಾತೆಯೆಂಬ ಭಾವ ತಪ್ಪಿ ಅಪ್ಪಿದನರ ತಲೆಯ ಕೊಂಬ ಪರಮಾತ್ಮನು” ಎಂಬ ಕ್ರೂರಶಿಕ್ಷೆಯನ್ನು ನೆನೆದುಕೊಳ್ಳುವನು. ಯಾಕಂದರೆ- “ಅಲ್ಲಿಯೂ ಮೇಳ, ಇಲ್ಲಿಯೂ ಮೇಳ, ಚೌಡೇಶ್ವರಿಯಲ್ಲಿ ಮೇಳ” ಎನ್ನುವುದು ಆತನ ಮನದ ಭಿತ್ತಿಯ ಮೇಲೆ ಮಿಂಚಿನ ಬರಹನಾಗಿ ಮೂಡಿನಿಲ್ಲುತ್ತದೆ; ಕೆತ್ತಿ ತೆಗೆಯುತ್ತದೆ.

ಆತನ ವ್ರತಗಳ ರೀತಿಯೇ ಇನ್ನು ಬೇರೆ ಆಗುತ್ತದೆ. ನಿಯಮಗಳ ನಿಲುಮೆಯೇ ಇನ್ನು ಪ್ರತ್ಯೇಕವಾಗುತ್ತದೆ. ಹೇಗೆಂದರೆ-

ಪರಧನವೊಲ್ಲದಿಪ್ಪುದೇ ವ್ರತ ಪರಸ್ತ್ರೀಯ ಕೂಡದಿಪ್ಟುದೇ ಶೀಲ.
ಸರ್ವಜೀವವ ಕೊಲ್ಲದಿಪ್ಪುದೇ ನೇಮ.
ತಥ್ಯವ ಮಿಧ್ಯವ ತಿಳಿದಿಪ್ಪುದೇ ನಿತ್ಯನೇಮ.
ಇದು ಈಶಾನ್ಯಮೂರ್ತಿ ಮಲ್ಲಿಕಾರ್ಜುನ ಲಿಂಗಕ್ಕೆ
ಸಂದೇಹವಿಲ್ಲದ ವ್ರತ.
+   +   +   +   +   +
ಬಂದುದ ಕೈಕೊಳ್ಳಬಲ್ಲರೆ ನೇಮ.
ವಂಚನೆಯ ಮಾಡ ದಿಪ್ಪುದೇ ನೇಮ. ’
ನಡೆದು ತಪ್ಪ ದಿದ್ದರೆ ನೇಮ.
ನುಡಿದು ಹುಸಿಯಿದಿದ್ದರೆ ನೇಮ.
ಕೂಡಲಸಂಗನ ಶರಣರು ಬಂದರೆ, ಒಡೆಯರಿಗೆ
ಒಡವೆಯನೊಪ್ಪಿಸುವುದೇ ನೇಮ.

ಸಂಯಮಜೀವನವ ನಿಜವಾದ ಜೀವನವೆಂಬ ಅರಿವು, ನಿದ್ರೆಯೆಚ್ಚರಿಕೆ ಯನ್ನದೆ ಸದಾಕಾಲವೂ  ಳಗುತ್ತಿರುವದರಿಂದ ಅಲ್ಲಿ ಗಂಡಿಗೆ ಹೆಣ್ಣಿನರೂಪು ಹೆಣ್ಣಿಗೆ ಗಂಡಿನರೂಪು ಮಾತ್ರ ಕಾಣದೆ, ಲಿಂಗಪತಿಯ  ರೂಪವನ್ನೇ ನೋಡುವ ಸ್ಥಿತಿಯು ಪ್ರಾಪ್ತವಾಗುವದು. ಪಂಚೇಂದ್ರಿಯಗಳೆಲ್ಲ ಘೋರವಾದ ಬ್ರಹ್ಮಚರ್ಯವ್ರತತೊಟ್ಟು ಪಂಚತತ್ವಗಳ ಸತ್ವಕ್ಕಧೀನವಾಗಿ ನಿಲ್ಲವವು.

ಸತಿಭಕ್ತೆಯಾದರೆ ಹೊಲೆಗಂಜಲಾಗದು.
ಪತಿಭಕ್ತನಾದರೆ ಕುಲಕ್ಕಂಜಲಾಗದು.
ಸತಿಪತಿಯೆಂಬ ಅಂಗಸುಖಹಿಂಗಿ
ಲಿಂಗವೇ ಪತಿಯಾದ ಬಳಿಕ
ಸತಿಗೆ ಪತಿಯುಂಟೇ, ಪತಿಗೆ ಸತಿಯುಂಟೇ
ಪಾಲುಂಡು ಮೇಲುಂಬರೇ; ಗುಹೇಶ್ವರಾ? “

ಮಹಾಜಗಜ್ಜನನಿಯು ಸಂದೇಶವೊಂದನ್ನು ಪವಣಿಸಿ, ವಿಷಯ ಮುಗಿತಾಯಕ್ಕೆ ಮಹಾಶೋಭೆಯನ್ನುಂಟು ಮಾಡಿದ್ದು ಹೇಗೆಂದರೆ-
“ಗಂಡು ಗಂಡಲ್ಲ, ಹೆಣ್ಣ್ಣು ಹೆಣ್ಣಲ್ಲ. ಗಂಡು ಹೆಣ್ಣಿನ ತಂದೆ, ಹೆಣ್ಣು ಗಂಡಿನ ತಾಯಿ. ಹೆಡೆಯುವವರೊಬ್ಬರು, ಪಡೆಯುವವರೊಬ್ಬರು. ತಾಯಿತಿರೆಯಾಗಿ ನೆಲವನ್ನೆತ್ತಿ ಹಿಡಿದಿದ್ದಾಳೆ. ತಂದೆ ಮುಗಿಲಾಗಿ ಕೃಪೆಸುರಿದು
ನಿಂತಿದ್ದಾನೆ. ತಾಯಿಯೇ ತಂದೆ; ತಂದೆಯೇ ತಾಯಿ. ತಂದೆ-ತಾಯಿಗಳ ತಳಿಯೇ ಗಂಡು-ಹೆಣ್ಣು. ಗಂಡುಹೆಣ್ಣಿನ ಚಿಗುರಿಗೆ ನಾನೇ ಆದಿ !”

****

ಕೀಲಿಕರಣ : ಎಮ್.ಎನ್.ಎಸ್.ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಚ್ಚಾ
Next post ನಗೆ ಡಂಗುರ-೧೫೮

ಸಣ್ಣ ಕತೆ

 • ದೇವರು ಮತ್ತು ಅಪಘಾತ…

  -

  ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… ಮುಂದೆ ಓದಿ.. 

 • ಮುದುಕನ ಮದುವೆ…

  -

  ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… ಮುಂದೆ ಓದಿ.. 

 • ವಲಯ

  -

  ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… ಮುಂದೆ ಓದಿ.. 

 • ವಾಮನ ಮಾಸ್ತರರ ಏಳು ಬೀಳು…

  -

  "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… ಮುಂದೆ ಓದಿ.. 

 • ವಿರೇಚನೆ

  -

  ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… ಮುಂದೆ ಓದಿ..