ಕಚ್ಚಾ ಸ್ವಾಮೀ ಬಹಳ ಕಚ್ಚಾ
ಕಚ್ಚಾ ಬರೀ ಕಚ್ಚಾ

ತೆರೆದು ನೋಡಿದರೂ ಕಚ್ಚಾ
ಅರೆದು ನೋಡಿದರೂ ಕಚ್ಚಾ
ಕೊರೆದು ನೋಡಿದರೂ ಕಚ್ಚಾ
ಬರೆದು ನೋಡಿದರೂ ಕಚ್ಚಾ

ಆಕಾಶ್ದಾಗೆ ಚುಕ್ಕೀ ಎಣಿಸಾಕ
ಸೃಷ್ಟೀ ಚೆಂದಾ ಬಣ್ಣಿಸಿ ಗುಣಿಸಾಕ
ಬಾಗಿಲು ಬಾಗಿಲು ಬಡಿದು ಕರೆದರೆ
ಕೇಳ್ದೋರೆಲ್ಲಾ ಹುಚ್ಚಾ ಅಂದ್ರು

ಯಾರಿಗೆ ತಿಳಿಬೇಕ್ ನಿನ್ಮಾತು
ಬರ್ತಾವ್ ಹೊರಗೆ ಸೋತ್ ಸೋತು
ಅಲ್ಲೊಂದ್ ದೀಪಾ ಇಲ್ಲೊಂದೀಪಾ
ಮಿಣಕ್ ಮಿಣಕ್ ಅಂತಾವೆ ಪಾಪಾ
ಎಣ್ಣೀ ತೀರಿರ್ಬೇಕಂತಂದೂ
ನೋಡ್ಬೇಕಂತೀ ಉರಸೀ ಕಣ್ಣೀರಾದ್ರೂ ಸುರಸೀ
ತಿನಬೇಕಂತಾ ಬಾಯಾಗಿಟ್ಟೋರ್
ಬರೀ ಕಹೀ ಹುಳೀ ಅಂತಾ
ಒಗಿತಾರ್ದೂರಾ ಕಚ್ಚಾ
ಕಾಯಿ ಇನ್ಯೂ ಕಚ್ಚಾ
ಎಲ್ಲೋ ಮ್ಯಾಲೆ ಅಂತರದಾಗೆ
ನೇತಾಡ್ತಾವೆ ಹೂವಾ
ಕೈಗಳ್ ಹಿಡೀತಾವಾ
ನೆಲಾ ಬಿಟ್ಟೂ ಹೂವಾ ಹಿಡಿದ್ರೇ
ಉಳಿಸ್ತಾವೇನೋ ಸಾವಾ
ಇಳಿಸ್ತಾವೇನೋ ನೋವಾ

ಸಂತೆಯಾಗೆ ಬೆಲೆಯೇ ಇಲ್ಲ
ಚಿಂತೇ ಒಂದೇ ಕೊನೆಗೆ
ಕಚ್ಚಾ ಮಾಲು ಯಾತಕ್ತಂದ್ರಿ
ಕೊಡೋದಾದ್ರೆ ಉದ್ರಿ
ಕೊಟ್ಹೋಗ್ಬಿಡ್ರಿ ಮುಂದಿನವಾರ
ಕೊಡ್ತೀವಂತಾರ್ ರೊಕ್ಕಾ
ಒಯ್ದಾವ ತಿಕ್ಕಾ ಪುಕ್ಕಾ
***

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)