ರಾಜ್ಯ ಹಲವು ಆದರೇನು
ರಾಷ್ಟ್ರ ನಮಗೆ ಒಂದೇ;
ಜಾತಿ ಭಾಷೆ ಎಷ್ಟೆ ಇರಲಿ
ಭಾವಮೂಲ ಒಂದೇ.
ಬೇರು ಚಿಗುರು ಹೂವು ಕಾಯಿ
ಕೊಂಬೆ ಕಾಂಡಗಳಲಿ
ಹರಿವುದೊಂದೆ ಜೀವರಸ
ಇಡೀ ತರುವಿನಲ್ಲಿ
ಥಳ ಥಳ ಥಳ ಹೊಳೆವ ಹಲವು
ಬಿಡಿಮಣಿಗಳ ನಡುವೆ
ಹಾದು ಬಂದ ಸೂತ್ರವಾಯ್ತು
ಹೂಳೆವ ರತ್ನಮಾಲೆ
ಒಂದೇ ನಭದ ಹಿನ್ನೆಲೆ
ನೂರು ಮುಗಿಲ ಲೀಲೆ
ಸಾಲು ಹತ್ತು ಇದ್ದರೂ
ಬುಡಕೆ ಒಂದೆ ಹಾಳೆ!
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.