ಏಕಲವ್ಯನ ಗುರುದಕ್ಷಿಣೆ

-ಕುರುಸಾಮ್ರಾಜ್ಯದ ಅರಸುಮಕ್ಕಳಿಗೆ ಶಸ್ತ್ರವಿದ್ಯೆಗಳ ಬೋಧಿಸಲು ಕುರುಕುಲ ಪಿತಾಮಹ ಭೀಷ್ಮನಿಂದ ನೇಮಿಸಲ್ಪಟ್ಟ ದ್ರೋಣನು, ಸಕಲ ವಿದ್ಯೆಗಳನ್ನು ಅವರಿಗೆ ಕಲಿಸುತ್ತಿರಲು, ದ್ರೋಣನ ಮಗನಾದ ಅಶ್ವತ್ಥಾಮನೂ ಅವರೊಟ್ಟಿಗಿದ್ದು ತಾನೂ ವಿದ್ಯಾಪಾರಂಗತನಾದ. ಬಡತನದಲ್ಲಿ ಬೆಂದು ಬಳಲಿದ್ದ ತಂದೆ, ಮಕ್ಕಳಿಬ್ಬರೂ ಆಶ್ರಯ ನೀಡಿದ ಕುರುವಂಶಕ್ಕೆ ಋಣಪಟ್ಟಿದ್ದೇವೆಂದು ಬಹಳ ವಿಶ್ವಾಸದಿಂದಿದ್ದರು. ಅದೇ ವೇಳೆ ಅನೇಕರು ಪ್ರಸಿದ್ಧ ಶಿಕ್ಷಕನೆಂದು ಹೆಸರು ಗಳಿಸಿದ್ದ ದ್ರೋಣನಿಂದ ಧನುರ್ವಿದ್ಯೆ ಕಲಿಯಲು ಇಚ್ಚೆಪಡುತ್ತಿದ್ದರು. ಅಂಥವರಲ್ಲಿ ಕಾಡಿನಂಚಿನ ಬೇಡರಪಾಳ್ಯದ ಹಿರಣ್ಯಧನುವಿನ ಮಗನಾದ ಏಕಲವ್ಯನೆಂಬ ಬಾಲಕನೂ ಒಬ್ಬ-

ಕಾಡಿನ ಅಂಚಿನ ಬೇಡರಪಾಳ್ಯದ ಹಿರಣ್ಯಧನು ಎಂಬುವ ದೊರೆಯು
ಬೇಟೆಯನಾಡುವ ಕಲೆಯಲಿ ಪಳಗುತ ಪ್ರಚಂಡನೆನಿಸಿದ ಆ ಕಲಿಯು
ತನ್ನ ಕುಮಾರನು ಏಕಲವ್ಯನಿಗೆ ಧನುರ್ವಿದ್ಯೆಯನ್ನು ಕಲಿಸೆಂದು
ತಲೆಯನು ಬಾಗಿಸಿ ವಿನಯದಿ ಕೇಳಿದ ಸದ್ಗುರು ದ್ರೋಣನ ಬಳಿ ಬಂದು
ಏಕಲವ್ಯನೂ ಸಂಗಡವಿದ್ದನು ಆಸೆಯು ಇದ್ದಿತು ಕಣ್ತುಂಬ
ತಾನೂ ಪ್ರಚಂಡ ವೀರನಾಗಲೆಂಬಾಸೆಯು ಇದ್ದಿತು ಎದೆತುಂಬ
ರಾಜಕುಮಾರರು ವಿದ್ಯೆ ಕಲಿವುದನು ದೂರದಿಂದಲೇ ನೋಡಿದ್ದ
ತನಗೂ ಅಂತಹ ಭಾಗ್ಯವು ಸಿಕ್ಕರೆ ಕಲಿಯಬೇಕೆಂದು ಬಯಸಿದ್ದ
ತಂದೆಯ ಬಳಿಯಲಿ ತನ್ನ ಬಯಕೆಯನು ಹೇಳಿಕೊಂಡಿದ್ದ ವಿನಯದಲಿ
ಅಂತೆಯೇ ತಂದೆಯು ಮಗನಿಗೆ ಕಲಿಸಲು ಕೇಳಿಕೊಂಡಿದ್ದ ಗುರುವಿನಲಿ
ಏಕಲವ್ಯನೂ ಕಲಿಯುವಾಸೆಯಲಿ ಬಹಳ ಮುದದಿಂದ ಬಂದಿದ್ದ
ಗುರುಗಳು ವಿದ್ಯೆಯ ಕಲಿಸುವರೆನ್ನುವ ಭರವಸೆ ಮನದಲಿ ಹೊಂದಿದ್
ಗುರುವಿನ ರೂಪವ ಎದೆಯಲಿ ತುಂಬಿಸಿ ನೋಡುತಲಿದ್ದನು ಆಸೆಯಲಿ
‘ಶೂದ್ರರು ವಿದ್ಯೆಯ ಕಲಿಯಕೂಡದು’ ಎನ್ನಲು ನೊಂದ ನಿರಾಸೆಯಲಿ!

ಕುಲಕುಲಕುಲವೆಂದೇತಕೆ ಮಲೆವುದು ಗಾಳಿಗೆ ನೀರಿಗೆ ಯಾವ ಕುಲ?
ಕುಲಕುಲಕುಲವೆಂದೆನ್ನುತ ನುಡಿವರು ಪ್ರಕೃತಿಯ ಮಡಿಲಲಿ ಎಂಥ ಕುಲ?
ಕುಲದ ಅಹಮ್ಮಲಿ ಮೆರೆಯುವ ಜಗದಲಿ ಹಾರುವ ಹಕ್ಕಿಯದಾವ ಕುಲ?
ಕುಲದ ಹೆಸರಿನಲಿ ಮನುಕುಲ ಮೆರೆವುದು ಬೆಳಗುವ ದೀಪಕ್ಕೆಂಥ ಕುಲ?
ಜುಳುಜುಳು ಹರಿಯುವ ನದಿಗಿಲ್ಲದ ಕುಲ ಜಲದ ಜಲಚರಕ್ಕಿದೆಯೇನು?
ಫಳಫಳ ಹೊಳೆಯುವ ದಿನಕರನೆದೆಯಲಿ ಭೇದ ಭಾವವಿರುವುದು ಏನು?
ಕುಲಜರ ಒಡಲಲಿ ಹರಿಯುವ ನೆತ್ತರು ಕುಲಹೀನರ ನೆತ್ತರು ಒಂದೇ ಕುಲ
ಕುಲಕುಲವೆಂದಾಡುವ ಮನುಜನ ಮನವೇ ಮಲಿನವು ಬಿಡು ತಂದೆ!

ದ್ರೋಣನಿಗೇನೋ ಕಲಿಸುವ ಆಸೆ ಆದರೆ, ತಾನು ಪರಾಧೀನ
ಅರಮನೆ ಹಂಗಿನ ಜೋಳದಪಾಳಿಗೆ ಆಗಿದ್ದನು ಅವ ಸ್ವಾಧೀನ
ಅಲ್ಲದೆ ಶೂದ್ರರು ವಿದ್ಯೆಗನರ್ಹರು ಎನ್ನುತಲಿದ್ದಿತು ಮನುಧರ್ಮ
ಶೂದ್ರರ ಉದರದಿ ಜನಿಸುವುದೆಂದರೆ ಅವರ ಪೂರ್ವಜನ್ಮದ ಕರ್ಮ
ಎನ್ನುವ ವಾದವು ಎಲ್ಲೆಡೆಯಲ್ಲೂ ಪ್ರಚಲಿತವಿದ್ದಿತು ನಾಡಿನಲಿ
ಮೇಲ್ವರ್ಗದ ಈ ವಾದವ ಖಂಡಿಸಿ ನುಡಿವ ಧೈರ್ಯವಿರಲಿಲ್ಲಲ್ಲಿ
ಆದಿಯಿಂದಲೂ ಶೂದ್ರರ ಶೋಷಣೆ ನಡೆಯುತಲಿದ್ದಿತು ಎಡೆಬಿಡದೆ
ಅವರೂ ಅದಕ್ಕೆ ಒಗ್ಗಿಹೋಗುತ್ತ ದುಡಿಯುತಲಿದ್ದರು, ಎದೆಗೆಡದೆ
ಆದರೆ, ಶೂದ್ರರು ಮಾನವರಲ್ಲವೆ? ಅವರಿಗೆ ಕಲಿಯಲು ಬಲು ಆಸೆ
ಕಲಿಸುವರಿಲ್ಲದೆ ಕಲಿಯಲು ಆಗದೆ ಉಳಿಯುತಲಿದ್ದಿತು ಅವರಾಸೆ!
ಏಕಲವ್ಯನಿಗೆ ಧನುರ್ವಿದ್ಯೆಯನ್ನು ಕಲಿಯಲು ಅಪಾರ ಮನಸಿತ್ತು
ಮೇಲ್ವರ್ಗದ ಜನ ಕಲಿಯಗೊಡರೆಂಬ ಸತ್ಯವು ಅವನಿಗೆ ಗೊತ್ತಿತ್ತು
ಆದರೂ ಕಲಿವ ಛಲವು ಅವನಲ್ಲಿ, ಎದೆಯಲಿ ಕದಲದ ನಿಶ್ಚಯವು
ಹೇಗಾದರೂ ಸರಿ ಕಲಿಯಲೇಬೇಕು ಮನದಲಿ ತಾಳಿದ ದೃಢನಿಲುವು!
ದ್ರೋಣನ ಮೂರ್ತಿಯ ಮಣ್ಣಲಿ ಮಾಡುತ ಪೂಜೆಯ ಅರ್ಪಿಸಿ ಗುರುವೆಂದು
ಭಕ್ತಿಶ್ರದ್ಧೆಗಳ ನಿಷ್ಠೆಯ ಹೊಂದುತ ಏಕಾಗ್ರತೆ ಮನಸಿಗೆ ತಂದು
ಕಲಿತನು ಬಿಲ್ಲಿನ ವಿದ್ಯೆಗಳೆಲ್ಲವ ವಿನಯ ವಿಧೇಯತೆ ಗುಣ ಬೆಳೆಸಿ
ನುರಿತವನೇ ತಾನಾದ ಕಾಡಿನಲಿ ಕಲಿಕೆಯಲ್ಲಿ ತನುಮನವಿರಿಸಿ!

ಭಲಾ! ಭಲಾ! ಎಲೆ ಬೇಡರ ಹುಡುಗನೆ ಭಲೇ! ನಿನ್ನ ಛಲ ಮೆಚ್ಚಿಗೆಯು
ಭಲೇ! ಭಲೇ! ಏಕಾಗ್ರತೆಯೊಡೆಯನೆ ಭಲೇ! ನಿನ್ನ ಗುಣ ಒಪ್ಪಿಗೆಯು
ಕಲಿಯಲೇಬೇಕು ಎಂಬುವ ಛಲದಲಿ ಕಲಿತುಬಿಟ್ಟೆ ಬಿಲ್ವಿದ್ಯೆಯನು
ಕುಲಜರು ಕುಲಹೀನರು ಎಂಬವರಲಿ ಮಲೆತು ಕಲಿತೆ ಸದ್ವಿದ್ಯೆಯನು!

ಹೀಗಿರಲೊಂದಿನ ದ್ರೋಣನು ತನ್ನಯ ನೆಚ್ಚಿನ ಶಿಷ್ಯರ ಜೊತೆಯಲ್ಲಿ
ಶಿಷ್ಯರ ವಿದ್ಯೆ ಪರೀಕ್ಷಿಸಲೆನ್ನುತ ಬೇಟೆಗೆ ಬಂದನು ಕಾಡಿನಲಿ
ಕಾಡಿನ ಪ್ರಾಣಿಯ ಪತ್ತೆಯ ಮಾಡಲು ನಾಯಿಗಳಿದ್ದವು ಅವರಲ್ಲಿ
ಪ್ರಾಣಿಯನೆಬ್ಬಿಸಿ ದಿಟ್ಟಿಸಿ ಅಟ್ಟಿಸಿ ಬೊಗಳುತಲಿದ್ದವು ಜೋರಿನಲಿ
ಏಕಲವ್ಯನಿಗೆ ಏಕಾಗ್ರತೆಯಲಿ ಭಂಗವು ಬರಲವ ಕೋಪಿಸಿದ
ಬೊಗಳುತ ಬರುತಿಹ ನಾಯಿಯ ಬಾಯಿಗೆ ಬಾಣದ ಗೊಂಚಲು ತುಂಬಿಸಿದ
ನಾಯಿಯು ಬೊಗಳಲು ಆಗದೆ ಬಾಲವ ಮುದುಡಿಸಿ ಬಂದಿತು ಹಿಂದಕ್ಕೆ
ನಾಯಿಯ ಬಾಯಿಯ ಬಾಣವ ನೋಡಿದ ಅಚ್ಚರಿ ಬೇಟೆಯ ತಂಡಕ್ಕೆ!

ಅರ್ಜುನನಿದ್ದನು ಬಿಲ್ವಿದ್ಯೆಯಲ್ಲಿ ಶ್ರೇಷ್ಠನು ಎನ್ನುವ ಭ್ರಮೆಯಲ್ಲಿ
ಆದರೆ ಅವನಿಗೆ ಭ್ರಮನಿರಸನವುಂಟಾಯಿತು ಆಗಿನ ಕ್ಷಣದಲ್ಲಿ!
ನಾಯಿಯ ಜೊತೆಯಲಿ ನಡೆದರೆಲ್ಲರೂ ಏಕಲವ್ಯನ ಬಳಿಯಲ್ಲಿ
ನೋಡಿದರಲ್ಲಿಯೆ ದ್ರೋಣನ ಮೂರ್ತಿಯ ಬೇಡರ ಹುಡುಗನ ಎದುರಲ್ಲಿ
ಮಾನಸ ಗುರುವನು ಎದುರಲಿ ನೋಡಿದ ಏಕಲವ್ಯನಿಗೆ ಆನಂದ
ಗುರುಗಳ ಪಾದಕೆ ಪೂಜೆಯ ಮಾಡುತ ಸೇವೆಗೆ ನಿಂತನು ಮುದದಿಂದ
“ಗುರುಗಳೆ, ಹರಸಿರಿ ನಿಮ್ಮಯ ಶಿಷ್ಯನ ಕಲಿತೆನು ಎಲ್ಲವ ನಿಮ್ಮಿಂದ
ನಿಮ್ಮನು ಮನದಲಿ ನೆನೆಯುತ ತಿಳಿದೆನು ವಿದ್ಯೆಯ ಮೊದಲನೆ ದಿನದಿಂದ”
ದ್ರೋಣನಿಗಾಯಿತು ಮಹದಾನಂದವು ಹುಡುಗನ ಪ್ರತಿಭೆಯ ಕಂಡಲ್ಲಿ
ಪ್ರತಿಭೆಯ ಕಂಡರೆ ಖುಷಿಯನ್ನು ಹೊಂದದ ಗುರುವಿರುವನೆ ಈ ಜಗದಲ್ಲಿ?
ಎಂತಹ ಏಕಾಗ್ರತೆಯಿದೆಯೆನ್ನುವ ಅಚ್ಚರಿ ಅವನಿಗೆ ಒಂದು ಕಡೆ
ಇಂತಹ ಶಿಷ್ಯನು ತನಗಿರಬಾರದೆ? ಎನ್ನುವ ಕೊರಗಿನ್ನೊಂದು ಕಡೆ!

ಆದರೆ, ತಮಗಿಂತಲೂ ಈ ಹುಡುಗನು ಶ್ರೇಷ್ಠನು ಎನ್ನುವ ಮತ್ಸರವು
ರಾಜಕುಮಾರರ ಮನದಲಿ ಮೂಡಿತು ಹೊಟ್ಟೆಯ ಕಿಚ್ಚಿನ ಆ ಗುಣವು
ದ್ರೋಣನಿಗೆಂದರು- “ಏನಿದು ಗುರುಗಳೆ ಕಲಿಸಿದಿರೇನೀ ಬೇಡನಿಗೆ?
ದ್ರೋಹವನೆಸಗಿದಿರಲ್ಲವೆ ಕ್ಷತ್ರಿಯ ವಿದ್ಯೆಯ ನೀಡಿ ಅಪಾತ್ರನಿಗೆ
ವಿಷಯವ ತಾತನ ಗಮನಕೆ ತರುವೆವು ತಪ್ಪದೆ ಈ ದಿನ ನಾವುಗಳು
ಉತ್ತರ ಕೊಡುವಿರೆ ಭೀಷ್ಮನ ಎದುರಲಿ ರಾಜದ್ರೋಹಕೆ ನೀವುಗಳು?”
ಅರ್ಜುನನೆಂದನು- “ಗುರುಗಳೆ ಏಕೋ ಅರಿವಾಗುತ್ತಿದೆ ಕೈ ನಡುಕ
ಸಹಿಸಲು ಆಗದು ಬೇಡರ ಹುಡುಗನ ಬಿಲ್ವಿದ್ಯೆಯ ಈ ಕೈಚಳಕ
ಏನಾದರೂ ಪರಿಹಾರವ ಹುಡುಕಿರಿ ಈಗಲೆ ಇಲ್ಲೀ ಕ್ಷಣದಲ್ಲಿ
ಇಲ್ಲದೆಹೋದರೆ ಅಗ್ನಿಪ್ರವೇಶಕೆ ಅನುಮತಿ ನೀಡಿರಿ ಈಗಿಲ್ಲಿ!”

ಹೊಟ್ಟೆಯ ಕಿಚ್ಚಿನ ಮೊಟ್ಟೆಯ ಕೋಳಿಯು ರೆಕ್ಕೆಯ ಬಿಚ್ಚಿತು ಕ್ಷಣದಲ್ಲಿ
ಸಿಟ್ಟಿನ ಭರದಲಿ ಕುತ್ಸಿತ ಗುಣದಲಿ ಮತ್ಸರವಾಯಿತು ಮನದಲ್ಲಿ
ಶಕ್ತಿವಂತರಲಿ ಯುಕ್ತಿವಂತರಲಿ ಮುಕ್ತ ಮನವು ಬರುವುದು ಎಂದು?
ಚಿತ್ತಸ್ವಾಸ್ಥ್ಯವನ್ನು ಸಾಧಿಸಲಾಗದ ಮತ್ತಮನವು ಅದು ಏಕಿಂದು?

ದ್ರೋಣನು ಚಿಂತೆಯ ಮಡುವಲಿ ಮುಳುಗಿದ ಮಾಡುವುದೇನನು ತಾನೀಗ
ಏನೂ ಮಾಡದೆ ಇದ್ದದ್ದಾದರೆ ಇಲ್ಲ ಭವಿಷ್ಯವು ತನಗೀಗ
ಹಿಂದಿನ ಬಡತನ ನೆನಪಿಗೆ ಬಂದಿತು ಆಶ್ರಯವಿಲ್ಲದೆ ಬದುಕಿಲ್ಲ
ಆಳುವ ವರ್ಗವ ಎದುರಿಸಿ ನಿಲ್ಲುವ ಎದೆಗಾರಿಕೆಯೂ ತನಗಿಲ್
ಏಕಲವ್ಯ ಶ್ರೀಗುರುವಿನ ಮುಖವನು ದಿಟ್ಟಿಸಿ ನೋಡಿದ ಆಗಲ್ಲಿ
ಏಕೋ ಏನೋ ಚಿಂತೆಯ ಮೋಡವು ಮುಸುಕಿದೆ ಗುರುವಿನ ಮೊಗದಲ್ಲಿ!
ಕೇಳಿದ- “ಗುರುವೇ, ಚಿಂತೆಯು ಏನದು? ದುಗುಡವು ಏತಕೆ ಮೊಗದಲ್ಲಿ
ನಾನೇನಾದರೂ ದುಡುಕಿದೆನೇನು? ನುಡಿದೆನೆ ತಪ್ಪನು ನಾನಿಲ್ಲಿ?
ನಿನ್ನ ಮನದ ಬಯಕೆಯು ಏನಾದರೂ ಇದ್ದರೆ ತಿಳಿಸಿರು ನನಗೀಗ
ಗುರುದಕ್ಷಿಣೆಯೆನ್ನುತ ನೀಡುವೆನು ಋಣಮುಕ್ತನು ನಾನಾವಾಗ”
ದ್ರೋಣನು ಹೇಳಿದ “ಕಂದಾ, ನಿನ್ನದು ಕಲ್ಮಶವಿಲ್ಲದ ತಿಳಿಮನಸು
ನಿನ್ನ ಯಶಸ್ಸನು ಸಹಿಸದೆ ಕೊರಗಿದೆ ಇಲ್ಲಿನ ಕೆಲವರ ಕೊಳೆಮನಸು
ನಾ ನಿನಗೇನೂ ನೀಡದಿದ್ದರೂ ನನ್ನನು ನೀ ಗುರುವೆಂದಿರುವೆ
ಭಕ್ತಿ ಶ್ರದ್ಧೆಗಳ ಅಸ್ತ್ರಗಳಿಂದಲಿ ನೀನಿಂದೆನ್ನನು ಕೊಂದಿರುವೆ!
ಏಕಲವ್ಯನಿಗೆ ಅರಿವಾಗಿದ್ದಿತು ಗುರುಗಳ ಚಿಂತೆಯ ಕಾರಣವು
ಮೇಲ್ವರ್ಗದ ಜನ ಯೋಚಿಸುವಂತಹ ಹೊಲಸಿನ ರಾಜಕಾರಣವು
ನುಡಿದನು ಕೂಡಲೆ- “ಗುರುಗಳೆ, ಹೇಳಿರಿ ನೀಡಲೆ ನನ್ನೀ ಪ್ರಾಣವನು
ನಿಮಗೊಳಿತಾದರೆ ಸಂತಸದಿಂದಲಿ ಅರ್ಪಿಸುವೆನು ಈ ಜೀವವನು”
ದ್ರೋಣನು ಅಂಜುತ ಅಳುಕುತ ಕೇಳಿದ- “ಕಂದಾ, ಕೇಳಲಿ ಏನನ್ನು?
ಗುರುದಕ್ಷಿಣೆ ನೆಪದಲ್ಲಿ ಬಯಸುವೆನು ಬಲಗೈಯಿನ ಹೆಬ್ಬೆರಳನ್ನು
ಧಣಿಗಳ ತಣಿಸಲು ಮಾರ್ಗವದೊಂದೇ ಕೊಡುವುದು ಸಾಧ್ಯವೆ ನಿನ್ನಿಂದ?
ನೀಡಿದೆಯಾದರೆ ಕತ್ತಲಾಗುವುದು ನಿನ್ನ ಭವಿಷ್ಯವು ನನ್ನಿಂದ..”
ದ್ರೋಣನ ಮಾತದು ಮುಗಿಯುವ ಮೊದಲೇ ಯೋಚನೆ ಮಾಡದೆ ಏನನ್ನೂ
ಏಕಲವ್ಯ ತಾ ಕತ್ತರಿಸಿಟ್ಟನು ಬಲಗೈಯಿನ ಹೆಬ್ಬೆರಳನ್ನು!
ಗುರುದಕ್ಷಿಣೆಯನ್ನು ನೀಡಿದ ಧನ್ಯತೆ ವೀರಬಾಲಕನ ಮೊಗದಲ್ಲಿ
ಆಳುವ ವರ್ಗದ ದಾಹವ ತಣಿಸಲು ಹರಿಯಿತು ನೆತ್ತರು ನೆಲದಲ್ಲಿ
ದ್ರೋಣನ ಕಣ್ಣಲಿ ಹರಿಯಿತು ಕಂಬನಿ ಎದೆಯೊಳಗೇನೋ ಹಸಿನೋವು
“ಎಂತಹ ಪಾಪದ ಕೆಲಸವ ಮಾಡಿದೆ” ಎನ್ನುತ ನೊಂದಿತು ಗುರುಮನವು!

ದ್ರೋಣನು ನುಡಿದನು- “ಏಕಲವ್ಯನೇ, ನಿನ್ನಯ ತ್ಯಾಗಕೆ ಬದಲಾಗಿ
ನನ್ನೀ ಜೀವವು ಹೋಗಲಿ ಒಂದಿನ ಅಧರ್ಮ ಯುದ್ಧದಿ ಬಲಿಯಾಗಿ”
ದ್ರೋಣನು ಸರಸರ ಮುಂದಕೆ ನಡೆದನು ದುರ್ದಾನವ ತಾ ಪಡೆದಂತೆ
ರಾಜಕುಮಾರರು ಹಿಂದೆಯೆ ನಡೆದರು ಏನೋ ಸಾಧಿಸಿದವರಂತೆ!

ಅಯ್ಯೋ! ಬಾಲನ ಬಲಹೆಬ್ಬೆರಳನು ಬಲಿಯಾಗಿಸಿದರು ಬಲ್ಲವರು
ಅಯ್ಯೋ! ಬಾಳಿಗೆ ಉರುಳನು ಬಿಗಿಯುತ ಉಸಿರಡಗಿಸಿದರು ಉಳ್ಳವರು
ಅಯ್ಯೋ! ಗುರುವೇ ಶಿಷ್ಯನ ಕೊರಳನ್ನು ಕಡಿದೆಯ ಕಟುಕನ ತೆರದಲ್ಲಿ?
ಅಯ್ಯೋ! ನೀತಿ ನಿಜಾಯಿತಿ ತಿರುಳನು ಜಾತಿಯು ತಿಂದಿತೆ? ಮೆರೆದಿಲ್ಲಿ!

ಏಕಲವ್ಯನ ತಂದೆತಾಯಿಯರು ಓಡುತ ಬಂದರು ಮಗನ ಬಳಿ
ನೆತ್ತರ ಓಕುಳಿ ನೋಡಿದ ಅವರಿಗೆ ಕಂಡಿತು, ಕಂದನ ಬೆರಳ ಬಲಿ
‘ಅಯ್ಯೋ..’ ಎನ್ನುತ ಚೀರಿದ ತಾಯಿಯು ಪ್ರಜ್ಞೆಯ ತಪ್ಪುತ ಉರುಳಿದಳು
ಎಚ್ಚರಗೊಂಡವಳೆಲ್ಲವ ಅರಿತಳು ಉರಿಯುತ ಕೋಪದಿ ಕೆರಳಿದಳು
ನುಡಿದಳು ಮಾತೆಯು “ಪಡೆದವನಾರೋ ನನ್ನಯ ಕಂದನ ಹೆಬ್ಬೆರಳು
ಅರಿವೇ ಇಲ್ಲದೆ ವೈರಿಯ ಖಡ್ಗಕೆ ಬಲಿಯಾಗಲಿ ದುಷ್ಟನ ಕೊರಳು;
ತಾಯಿಯ ನೋವಿನ ಶಾಪವು ತಪ್ಪದು ನಂಬಿದ ದೈವದ ಮೇಲಾಣೆ
ಮುಂದಿನ ಕಾಲಕೆ ಕೆಳವರ್ಗವೆ ತಾ ಮೇಲಾಗಲಿ ಇದು ನನ್ನಾಣೆ”
ಏಕಲವ್ಯ ತಾಯಿಯ ಸಂತೈಸಿದ “ಅಮ್ಮಾ, ಗುರುವನು ಬೈಯ್ಯದಿರು
ಗುರುವಿನ ದೋಷವದೇನೂ ಇಲ್ಲ, ಅವನಿಗೆ ಶಾಪವ ನೀಡದಿರು
ಬಲಗೈ ಬೆರಳದು ಹೋದರೆ ಹೋಗಲಿ ಎಡಗೈಯಲಿ ಹೋರಾಡುವೆನು
ಮೇಲ್ವರ್ಗದ ಆ ಉಳ್ಳವರೊಂದಿಗೆ ಬರಿಗೈಯಲಿ ಕಾದಾಡುವೆನು
ದೀನ ದಲಿತರನು ಜಾಗೃತಗೊಳಿಸುವ ಮಹತ್ಕಾರ್ಯದಲಿ ತೊಡಗುವೆನು
ವಿದ್ಯೆಯ ಎಲ್ಲರ ಸ್ವತ್ತಾಗಿಸಲಿಕೆ ನಿತ್ಯ ನಿರಂತರ ದುಡಿಯುವೆನು”
ಎನ್ನುತ ತಾಯಿಯ ಮಮತೆಯ ಮಡಿಲಲಿ ನೆಮ್ಮದಿಯಿಂದಲಿ ಮಲಗಿದನು
ಎಲ್ಲವ ನೋಡುತ ಉರಿಯುವ ಸೂರ್ಯನು ಪಡುವಣ ಕಡಲಲಿ ಮುಳುಗಿದನು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅನಾವರ್ತ
Next post ವಚನ ವಿಚಾರ – ಕಲಿಯಬಾರದು

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…