ನಾಯಿಗಳಿವೆ
ಆದರೆ ಎಚ್ಚರಿಕೆ ಯಾಕೆ ?
ಯಾರಿಂದ ?
ಯಾರಿಗೆ ?

ನಾಯಿಗಳು ಇದನ್ನೋದಿ ಅಂಜಿ ಓಡಲಾರವು
ಅಥವಾ ಅಂಜಲು, ಓಡಲು ಇದನ್ನು ಓದಲಾರವು
ಹೆದರುವ ಕುಳಗಳಿಗೆ ಬೊಗಳುವ ನಾಯಿಯೇ ಸಾಕು
ಹಾಗಿರುವಾಗ ಈ ಬೋರ್ಡೇಕೆ ಬೇಕು ?

ಹಾಗೆಂದು ಈ ಗೇಟು ತೆರೆದು
ನಾನು ಒಳನುಗ್ಗಿದರೆ
ಒಳಗಿರುವವರ ಎಳೆದು
ಮುಖಕ್ಕೆ ಮಸಿ ಬಳಿದು
ಯದ್ವಾತದ್ವಾ ಹಿಗ್ಗಿದರೆ

ನನ್ನ ನಿದ್ರೆಯ ಗೇಟೊಡೆದು ಕನಸುಗಳಲ್ಲಿ
ಒಳ ನುಗ್ಗಿ ಬೊಗಳುತ್ತವೆ ಬೇಟೆ ನಾಯಿಗಳು

ಆದ್ದರಿಂದ
ನಿದ್ರೆಯಲ್ಲೂ ಎಚ್ಚೆತ್ತಿರುವ ನನ್ನ ಸಾಕ್ಷಿಯ ಬಗ್ಗೆ
ನನಗೆ ಎಚ್ಚಿರಿಕೆ ಬೇಕು
ಆದರೆ ಬೋರ್ಡು ಬೇಕಾಗಿಲ್ಲ
ಕೇವಲ ತಿಳಿವಳಿಕೆ ಸಾಕು
*****

Latest posts by ಚಿಂತಾಮಣಿ ಕೊಡ್ಲೆಕೆರೆ (see all)