ಜಾಣ ತನ್ನ ಚಾಣದಿಂದ
ಕಟೆಯುತಿದ್ದ ಕಲ್ಲ!
ಯಾರ ಮೂರ್ತಿ, ಅವರ ಕೀರ್ತಿ…
…………………
ಕಾಣದವನೇ ಕಲ್ಲ? ಕಂಡವನೆ ಬಲ್ಲ!
…………………
ಕನಸು ಮೋಸದ ಸಿಪ್ಪೆ–
ತಿರುಳು?
ಇರಬಹುದು ತಿಪ್ಪೆ!
ಒಟರುಗುಡುತಿದೆ ಕಪ್ಪೆ
‘ಮಳೆ ತಂದ ಮಂತ್ರವೋ ತನ್ನ ಮಾಟ’
ರಾಕ್ಷಸನ ಮಾಲಿಕನು
ಭಕ್ಷ-ಭೋಜ್ಯ.
ನಮಗೆ ಬೇಕಾಗಿಹುದು; ಅನ್ನಛತ್ರ.
ಇದು ಪ್ರಜಾರಾಜ್ಯ.
ಮೇಲೊಂದು ಹುಡುಗಾಟ
ಇಲ್ಲವೇ ಹುಚ್ಚಾಟ
ಅನ್ನದಮಲಿಗೆ ಮುಖ್ಯ ನಿದ್ದೆ ಬೇಕು
ಮ್ಯಾಗ್ಝಿಮಮ್ ಗೊರ್ಕೆಯೇ ನಮ್ಮ ಆದರ್ಶ.
ಕನಸಿನಂತಹ ಸತ್ಯ ನಾಟಕವೆ ಇಲ್ಲ
ಎಚ್ಚರವೇ ನಮ್ಮ ರೋಗ
ಇರಬಹುಹು ಔಷಧವು ಅದಕು ಎಲ್ಲೋ
ಬುರುಸುಗಟ್ಟಿದ ಯಾವ ಸೆಗಣಿಯಲ್ಲೋ
ಕ್ರಿಮಿಗೆ ಕ್ರಿಮಿಯೇ ವೈರಿ, ಕ್ರಿಮಿಯೆ ಮಿತ್ರ
ಇದು ಮುಖ್ಯ ಸೂತ್ರ
ಕೆಲಸವಾಯಿತೆ ಪೂರ್ತಿ-ಓ ಜಾಣ-ಮೂರ್ತಿ
ಕೊಳೆ ಇಲ್ಲ ಕಲ್ಲಿಗೆ
ಅದು ಮಣ್ಣ ಬಿರುಸು, ನೀರಿನಿಂದದನು ಒರೆಸು
ಆ ಮೇಲೆ ಕಣ್ಣು ಕೊರೆಸು.
*****

















