ಶತಮಾನಕೆ ನಮನ
ಸಹಸ್ರ ಮಾನಕೆ ನಮನ

ಹೊಸ ಶತಮಾನಕೆ ಹೊಸ ಆಲೋಚನೆ
ಹೊಸ ಚಿಂತನೆ ಬರಲಿ
ಶತಶತಮಾನದ ಅಂಧಶ್ರದ್ಧೆಗಳು
ಇಂದೇ ತೊಲಗಿ ಬಿಡಲಿ

ಮನುಜರ ನಡುವಣ ಅಡ್ಡಗೋಡೆಗಳು
ಕುಸಿದು ಬಿಡಲಿ ಇಂದೇ
ಜಾತಿ ಪಂಥ ಮತ ಧರ್ಮಗಳೆಲ್ಲವು
ಅನುಭಾವಿಗೆ ಒಂದೇ

ದೇಶ ದೇಶಗಳ ಗಡಿಗಳ ಯೋಧರು
ಬಂದೂಕನು ಬದಿಗಿಟ್ಟು
ಶಾಶ್ವತ ಸ್ನೇಹದಿ ಹಾಡುತ ಕುಣಿಯಲಿ
ಇಂದಾಗುತ ಒಟ್ಟು

ಅಣುಬಾಂಬನು ಸ್ಫೋಟಿಸುವ ಮನಗಳಲಿ
ಮೂಡಲಿ ಹೊಸ ಕವನ
ಮಾನವತೆಯು ಮೆರೆದಾಡಲಿ ಹಾಡಲಿ
ಶತಮಾನದ ಗಾನ

ಜನನ ಮರಣಗಳ ನಡುವಣ ಜೀವನ
ಸಾರ್ಥಕವಾಗಲೆ ಬೇಕು
ಧನವಂತರ ಹಣ ಕವಿಗಳ ಚಿಂತನ
ಲೋಕಕೆ ನೀಡಲಿ ಬೆಳಕು

೦೧-೦೧-೨೦೦೧
*****