ಕತೆಯಾ ಕೇಳಿರಣ್ಣ
ಕಲ್ಲು ಮನಸಿನ
ಮುಳ್ಳು ಜನಗಳು
ಹೂವು ಕೊಲ್ಲುವಂಥ ||

ಅಲ್ಪನ ಐಶ್ವರ್ಯ
ಮಾಡುವ ಆಶ್ಚರ್ಯ
ಎತ್ತ ನೋಡಿದರೂ
ಕೊಲ್ಲುವ ಕೊಲ್ಲುವ ||

ಬದುಕೆಲ್ಲ ಬಂಡೆಯು
ಹಸಿವು ರಕ್ಕಸಿಯು
ಎಣಿಸಿದ ದುಡ್ಡೆಲ್ಲ
ಬೆವರಿನ ಹನಿಯು ||

ಹಾಡು – ೨

ಜೀತದ ತೊಟ್ಟಿಲಲಿ
ಸಾವಿನ ಜೋಕಾಲಿ
ತೂಗು ನಿಲ್ಲಿಸುವ
ಧೀರರ್‍ಯಾರಿಹರೊ ||

ಹುಟ್ಟಿದ ದಿನ ಬಂತು
ಬದುಕುವುದೆಂಗಣ್ಣ
ಸಾಲದ ಈ ಬಾಧೆ
ಬಿಡಿಸುವುದೆಂಗಣ್ಣ ||

ಸುತ್ತಲು ಭರವಸೆ
ಭಾಷಣಗಳಲಿ
ಮುತ್ತಿದೆ ಬಂಧನ
ಸಾಲದ ಹೆಸರಲಿ ||

ಹಾಡು – ೩

ದೇಶೋದ್ಧಾರದ ಮಾತು
ನಮ್ಮನೆಲ್ಲಾ ಮರೆತು
ಧರ್ಮದ ಚರ್ಪು ಹಂಚಿ
ಕಾಲ ಸರಿಯಿತು ಮಿಂಚಿ ||

ನಿಮ್ಮ ಪಾಪದ ಬೆಳೆಯು
ನಮ್ಮನ್ನೀಗೆ ಸಾಕಿದೆ
ಮಿಗಿಲು ನಿಮಗೂ ಕೂಡ
ನಮ್ಮಂಥವರೆ ಬೇಕಿದೆ ||

ಎಲ್ಲಿ ಹೋಯಿತಣ್ಣ
ದಯೆಯಾ ನಿಮ್ಮ ಧರ್ಮ
ಎಲ್ಲಿ ಹೂತಿರಣ್ಣ
ಗಯೆಯಾ ನಿಮ್ಮ ಧಮ್ಮ ||

ಹಾಡು – ೪

ಅಟ್ಟಹಾಸವೊ ಅಣ್ಣ
ದುಡ್ಡುಳ್ಳೋರ ಬಣ್ಣ
ಯಡ್ಡರ ಮಾಡಿ ಬಡವರ
ಬಿದ್ದೆದ್ದು ನಗುತಾರಲ್ಲೊ ||

ಹಸಿವೀನ ನೋವಿಗೆ
ಅಪಹಾಸ್ಯ ಮಾಡುತಾರೊ
ತಿನ್ನೊ ಅನ್ನಕೆ ಬದಲು
ಮಾತು ಪೋಣಿಸುತಾರೊ ||

ದುಡ್ಡು ಗಂಟಿನ ಮಹಿಮೆ
ಕೆಟ್ಟದ್ದೊ ಬದುಕಿಗೆ
ಬಡವರ ಜೀವಾವ
ಸುಲಿತೈತೊ ತಣ್ಣಾಗೆ ||

ಹಾಡು – ೫

ದಡ್ಡರು ದುಡಿತಾರೆ
ಕೇಳಣ್ಣಾ ಕೇಳೊ
ಬುದ್ದಿವಂತರೆಲ್ಲಾ
ದುಡ್ಡು ಎಣಿಸುತ್ತಾರೆ ||

ನಿನ್ನ ಬೆವರು ರಕ್ತ ಬಸಿದು
ಮಹಲು ಕಟ್ಟಿ ಮೆರೆದು
ನಾಯಿ ಸಾಕ್ತಾರೆ ಮೋಜಿಗೆ
ಹಿಡಿ ಅನ್ನ ಕೊಡದ ನೀಚರು ||

ದುಡಿದುಡಿದು ಸತ್ತೆ ನೀನು
ನಿನ್ನ ಸಮಾಧಿ ಮೇಲೆ
ಗುಲಾಬಿಯನ್ನ ಬೆಳಿತಾರೆ
ಮತ್ತೆ ಮೂಸಿ ನೋಡುತಾರೆ ||

ಹಾಡು – ೬

ಒಂದೆಡೆ ಆದರೆ ಗಾಯ
ಮನಸಿಗೆಲ್ಲ ನೋವು
ಯೋಗ್ಯ ದುಡಿಮೆ ಇಲ್ಲದಿರೆ
ಬದುಕೆಲ್ಲ ಸಾವು ||

ಬಡತನದ ಬಸಿರಿಗೆ
ಕೋಟಿಗಟ್ಟಲೆ ತತ್ತಿಗಳು
ಒಂದಕೊಂದು ಬೆಳೆದು
ನೆಮ್ಮದಿಯ ಕೊಂದವು ||

ಕೊರೆವ ಚಳಿಯಲ್ಲಿ
ಚಿಂದಿ ಹೊದ್ದಂತೆ
ಬಡತನದ ದುಡಿಮೆ
ಏನಿದು ನಿನ್ನ ಮಹಿಮೆ ||

ಹಾಡು – ೭

ದುಡ್ಡುಳ್ಳ ಧಿಮಾಕು
ಮಾಡುತ್ತೆ ಶೋಕಿ
ಎಲ್ಲದನು ತಿನ್ನಬೇಕು
ಯಾವುದಿಲ್ಲ ಬಾಕಿ ||

ಹಣ್ಣೆಂದು ತಿಳಿದರೊ
ಹೆಣ್ಣುಗಳನೆಲ್ಲ
ಹೊನ್ನೆಂದು ತಿಳಿದರೊ
ಅಣ್ಣ ಮಣ್ಣನೆಲ್ಲ ||

ಅಪ್ಪನ ಪಾಪದ ಶಾಪ
ಮಗನ ತಲೆಗೆ
ಇಬ್ಬರೂ ನಿಂಥರಲ್ಲ
ಬದುಕಾ ಕೊಲೆಗೆ ||

ಹಾಡು – ೮

ಎಲ್ಲಿ ಕೊನೆಯಣ್ಣ
ಜೀತದ ಹಿಡಿತಕ್ಕೆ
ಎಲ್ಲಿ ನೆಲೆಯಣ್ಣ
ಬಂಧಿತ ಜೀವಕ್ಕೆ ||

ಹೊಡೆದೊಡೆದು ಬಳಲಿದರೂ
ಬಂಡೆ ಸವೆಯಲಿಲ್ಲ
ಯುಗಯುಗ ಕಳೆದರೂ
ಹೊಟ್ಟೆಯು ತುಂಬಲಿಲ್ಲ ||

ನರಕವಲ್ಲವೆ ಇದುವೆ
ನಿತ್ಯಾದ ಹಿಂಸೆ
ಜೀವನವೆ ಬೇಡೆಂದು
ಹಾರಿತು ಹಂಸೆ ||

ಮಂಗಳದ ಈ ಸುದಿನ
ಮದುರವಾಗಲಿ
ನಿಮ್ಮೊಲುಮೆ ಈ ಮನೆಗೆ
ನಂದಾ ದೀಪವಾಗಲಿ ||

ಹಾಡು – ೯

ಕಾಲಿಗೆ ಹಾಕಿ ಬೇಡಿಗಳಾ
ಕಲ್ಲು ಹೊಡಿಸೊ ಹನುಮಣ್ಣ
ಮಾಡಿದ ಸಾಲಕೆ ಜೀತದಲಿ
ದಿನವೂ ನರಳುವ ತಮ್ಮಣ್ಣ ||

ಕೊಟ್ಟ ದುಡ್ಡಿಗೆ ಬಡ್ಡಿ ಬೆಳೆದು
ಬಿಡುಗಡೆ ಆಸೆಯ ತೊರೆದು
ಹೊಡೆದೇ ಹೊಡೆಯುತಾರೊ
ಕಲ್ಲು ಕಲ್ಲಿಗೆ ಸುತ್ತಿಗೆಯಿಂದ ||

ಪುಡಿಯಾಗುತೈತಿ ಅಣ್ಣಾ ಬದುಕು
ಹಿಡಿಗಲ್ಲು ಬೇಬಿ ಜಲ್ಲಿಯಂತೆ
ಬೆವರ ಕುಡಿದು ನಲಿಯುತಾರೆ
ಮದದಿ ಮೋಜು ಮಾಡುತಾರೆ ||

ಹಾಡು – ೧೦

ಜೀತದ ತೊಟ್ಟಿಲಲಿ
ನರಕುರಿಗಳ ಬಲಿ
ಸುಖ ಜೋಕಾಲಿಯಲಿ
ನರಕ ಹಿಂಸಾ ಬಲೆ ||

*****