ರಾಮ ಬೇರೆಯಲ್ಲ
ಕೃಷ್ಣ ಬೇರೆಯಲ್ಲ
ಅಷ್ಟರಮಟ್ಟಿಗೆ ಗಾಢ
ಅವರಿಬ್ಬರ ಮೈತ್ರಿ
ರಾಮನಿಗಿಂತ ಕೃಷ್ಣನೇ
ಎಲ್ಲರಿಗೂ ಅಚ್ಚುಮೆಚ್ಚು.
ಎರಡು ದೇಹ ಒಂದೇ ಜೀವ
ಎಂಬಂತೆ ಬೆಳೆದು…
ಬೆಳೆದು ಬೆಳೆದು ದೊಡ್ಡವರಾದರು.
ಮದುವೆ, ಮಕ್ಕಳು ಎಲ್ಲಾ ಆಯಿತು.
ರಾಮನ ಮಕ್ಕಳನ್ನು ಮುದ್ದಿಸುತ್ತಾ
ಕೃಷ್ಣ ಹೇಳಿದ:
ರಾಮ, ನಾ ಬೇರೆ ಅಲ್ಲ, ನೀ ಬೇರೆ ಅಲ್ಲ
ನಿನ್ನ ತಂದೆ ತಾಯಿ ನನಗೂ
ಪ್ರೀತಿಯ, ಆತ್ಮೀಯ ಮಾತಾಪಿತರು.
ನಿನ್ನಣ್ಣ ತಮ್ಮಂದಿರು, ಅಕ್ಕ ತಂಗಿಯರು
ನನಗೂ ಅಷ್ಟೇ.
ನಿನ್ನ ಮಕ್ಕಳು ನೋಡು
ನನ್ನ ಎಷ್ಟು ಹಚ್ಚಿಕೊಂಡಿವೆ!
ನಿಜ ಹೇಳಬೇಕೆಂದರೆ,
ನಾನೇ ನೀನು, ನೀನೇ ನಾನು.
ನಿನ್ನ ತಾಯಿ ನನಗೂ ತಾಯಿ,
ನಿನ್ನ ತಂದೆ ನನಗೂ ತಂದೆ.
ನಿನ್ನ ಹೆಂಡತಿ….
ರಾಮ ಕೃಷ್ಣನ ಕೆನ್ನೆಗೆ ಬಾರಿಸಿದ!
ತಪ್ಪಲ್ಲವೇ?
*****
೧೪-೦೭-೧೯೯೦